ಶ್ರೀನಿಧಿ ಡಿ.ಎಸ್. ಕನ್ನಡ ಪ್ರಭಕ್ಕೆಂದು ಬರೆದ “ದಿ ಕಿಂಗ್ಸ್ ಸ್ಪೀಚ್” ಚಿತ್ರದ ಕುರಿತಾದ ಲೇಖನವನ್ನು ಎಲ್ಲರಿಗೂ ಸಿಗಲೆಂದು ಇಲ್ಲಿ ಪ್ರಕಟಿಸಲಾಗುತ್ತಿದೆ. ಈ ಸಂಪರ್ಕ ಕೊಂಡಿಯನ್ನು ಕಳಿಸಿ ಸಹಕರಿಸಿದವರು ಪ್ರಮೋದ್.

ಅಬ್ಬರದ ಅಂಶಗಳಿಲ್ಲದ , ಸರಳ ಮತ್ತು ನೇರ ಕಥೆ ಹೊಂದಿರುವ ಸಿನಿಮಾವೊಂದು ಹೇಗೆ ವೀಕ್ಷಕರ ಮನಸ್ಸನ್ನು ತಟ್ಟಬಹುದು ಎನ್ನುವುದಕ್ಕೆ, ಇತ್ತೀಚಿಗೆ ಬಿಡುಗಡೆಯಾಗಿರೋ, ದಿ ಕಿಂಗ್ಸ್ ಸ್ಪೀಚ್ ಉತ್ತಮ ಉದಾಹರಣೆ. 1930 ದಶಕದ ಇಂಗ್ಲೆಂಡ್ ನ ರಾಜ ಆರನೇ ಜಾರ್ಜ್ ಮತ್ತು ಆತನ ಉಗ್ಗಿನ ಸಮಸ್ಯೆ ಈ ಚಿತ್ರದ ಹಂದರ. ಇಂತಹ ವಸ್ತುವೊಂದನ್ನು ಇಟ್ಟುಕೊಂಡು ಚಿತ್ರವೊಂದನ್ನು ನಿರ್ಮಿಸಬಹುದು ಎನ್ನುವುದೇ ಮೊದಲ ಅಚ್ಚರಿ.

ಇಂಗ್ಲೆಂಡಿನ ಭವಿಷ್ಯ ಬರೆಯಬೇಕಿರುವ ಆರನೇ ಜಾರ್ಜ್ ಮತ್ತು ಆಸ್ಟ್ರೇಲಿಯನ್ ಮೂಲದ, ಮೊದಲ ನೋಟಕ್ಕೆ ಜೋಕರ್ ನಂತೆ ಕಾಣುವ ಸ್ಪೀಚ್ ಥೆರಪಿಸ್ಟ್ ಲೈನಲ್ ಲೋಗ್ ಮಧ್ಯದ ಸ್ನೇಹ ಈ ಚಿತ್ರದ ಮುಖ್ಯ ಎಳೆ.ಅಲ್ಬರ್ಟ್, ಇಂಗ್ಲೆಂಡ್ ನ ರಾಜ ಐದನೇ ಜಾರ್ಜ್ ನ ಎರಡನೇ ಮಗ. ಎಳವೆಯಿಂದಲೇ ಆತನ ವ್ಯಕ್ತಿತ್ವಕ್ಕೆ ಕೊಡಲಿ ಪೆಟ್ಟು ನೀಡಿರುವುದು, ಮಾತನಾಡುವಾಗ ಪದೇ ಪದೇ ಕಾಡುವ ಉಗ್ಗಿನ ಸಮಸ್ಯೆ. ಅದು ಆತನ ವೃದ್ಧ ಅಪ್ಪನಿಗೂ ಚಿಂತೆ. ಲೈನಲ್, ಜಾರ್ಜ್ ನ ಉಗ್ಗಿನ ಸಮಸ್ಯೆ ಪರಿಹರಿಸಲು ಆತನ ಹೆಂಡತಿ ( ಎಲ್ಲ ವಿಫಲ ಪ್ರಯತ್ನಗಳ ನಂತರ) ಹುಡುಕಿರೋ ಸ್ಪೀಚ್ ಥೆರಪಿಸ್ಟ್. ರಾಜ ಮನೆತನದ ವ್ಯಕ್ತಿಗೆ ತಾನು ಚಿಕಿತ್ಸೆ ನೀಡುತ್ತಿದ್ದೇನೆಂಬುದು ಗೊತ್ತಿದ್ದರೂ, ಆ ಬಗ್ಗೆ ಯಾವುದೇ ಹೆಮ್ಮೆಯಾಗಲೀ ಅಥವಾ ಅವರ ಬಗ್ಗೆ ವಿಶೇಷ ಗೌರವವನ್ನೂ ತೋರಿಸದ ವಿಚಿತ್ರ ಮನುಷ್ಯ. ಜಾರ್ಜ್ ಗೂ, ಲೈನಲ್ ತನ್ನ ಸಮಸ್ಯೆ ಪರಿಹರಿಸುವ ಬಗ್ಗೆ ಯಾವ್ ವಿಶ್ವಾಸವೂ ಇಲ್ಲ. ಸುಮ್ಮನೇ ಆತ ಮಾಡಿಸೋ ಅಸಂಬದ್ಧವೆನಿಸೋ ಮುಖದ ವ್ಯಾಯಾಮ ಮಾಡುತ್ತಿರುತ್ತಾನೆ, ಅಷ್ಟೆ.

ಹುಟ್ಟಿದಾಗಿನಿಂದ ರಾಜ ಮನೆತನದ ಸಿರಿಪಂಜರದೊಳಗೆ ಬೆಳೆದಿರುವ ಜಾರ್ಜ್ ಗೆ, ಜನಸಾಮಾನ್ಯರ ನಡುವೆ ಬೆರೆತು ಗೊತ್ತಿಲ್ಲ. ಲೈನಲ್ ಜೊತೆಗೆ ನಿಧಾನವಾಗಿ ಬೆಳವ ಸ್ನೇಹ, ಆತನಿಗೆ ಹೊಸ ಜಗತ್ತೊಂದನ್ನು ಪರಿಚಯಿಸುತ್ತದೆ. ಇಬ್ಬರ ನಡುವಿನ ಗೆಳೆತನದ ಬಂಧ ಗಟ್ಟಿಯಾಗುವ ಹೊತ್ತಿನಲ್ಲೇ ಸಂಭವಿಸೋ ಸಣ್ಣದೊಂದು ಜಗಳ ಇಬ್ಬರನ್ನೂ ಬೇರ್ಪಡಿಸುತ್ತದೆ.

ಉತ್ತಮ ನಾಯಕನಲ್ಲಿರಬೇಕಾದ ಹಲವು ಗುಣಗಳಿದ್ದರೂ, ಅಲ್ಬರ್ಟ್ ತಾನು ಎಂದೂ ರಾಜನಾಗುತ್ತೇನೆ ಅಂದುಕೊಂಡಿಲ್ಲ. ಆದರೆ ಒಂದು ವಿಚಿತ್ರ ಸನ್ನಿವೇಶದಲ್ಲಿ ರಾಜನ ಸ್ಥಾನಕ್ಕೆ ಏರಬೇಕಾಗಿ ಬರುವ ಅನಿವಾರ್ಯತೆ ಬಂದೊದಗುತ್ತದೆ. ಜೊತೆಗೆ ದೇಶದ ಎದುರು ಎರಡನೇ ಮಹಾಯುದ್ಧದ ರೂಪದಲ್ಲಿ ಹೊಸ ವಿಪತ್ತು ಬಂದೆರಗುತ್ತದೆ.

ಯುದ್ಧ ಇನ್ನೇನು ಆರಂಭವಾಗಲಿದೆ. ಅದಕ್ಕೂ ಮುನ್ನ ಕಿಂಗ್ ಜಾರ್ಜ್, ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಬೇಕಿದೆ, ಹಿಟ್ಲರ್ ನ ಹೆದರಿಕೆ ತುಂಬಿರೋ ಜನರಲ್ಲಿ ಆತ್ಮ ವಿಶ್ವಾಸ ತುಂಬಬೇಕಿದೆ. ಆದರೆ ಉಗ್ಗಿನ ತೊಂದರೆ ಅವನೊಳಗಿನ ವಿಶ್ವಾಸಕ್ಕೇ ಕುಂದು ತಂದಿದೆ. ಇನ್ನು ಜನರಲ್ಲಿ ಹೇಗೆ ಧೈರ್ಯ ತುಂಬಿಯಾನು? ಹಿಂದಿನ ಒಂದು ಕಹಿ ನೆನಪು, ಮನದಲ್ಲಿ ಹಾಗೇ ಇದೆ..
ಮುಂದೇನು ನಡೆಯುತ್ತದೆ ಅನ್ನೋದನ್ನ ನೀವು ಖುದ್ದು ವೀಕ್ಷಿಸಿದರೇ ಚೆನ್ನ.

ಒಂದು ತುಂಬ ಚಂದದ ಕಥೆಯನ್ನು, ಅಷ್ಟೇ ಸೊಗಸಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿರೋದು ನಿರ್ದೇಶಕ ಟಾಮ್ ಹೂಪರ್ ಹೆಗ್ಗಳಿಕೆ. ಗಡಿಬಿಡಿಯಿಲ್ಲದೇ ನಿಧಾನವಾಗಿ ಸಾಗುವ ಚಿತ್ರ , ಯಾವುದೇ ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲದಂತೆ ಕೊನೆಕೊನೆಗೆ ವೀಕ್ಷಕರನ್ನು ಉಸಿರು ಬಿಗಿಹಿಡಿದುಕೊಳ್ಳುವಂತೆ ಮಾಡುತ್ತದೆ.

20 ನೇ ಶತಮಾನದ ಮೊದಲಾರ್ಧದ ಇಂಗ್ಲೆಂಡ್, ಅಲ್ಲಿನ ವಾತಾವರಣ, ರಾಜ ಮನೆತನದ ಖಾಸಗೀ ವಲಯ, ಅಲ್ಲಿನ ರಾಜಕೀಯ ಗೋಜಲುಗಳು ಇತ್ಯಾದಿಗಳನ್ನು ದಿ ಕಿಂಗ್ಸ್ ಸ್ಪೀಚ್ ಸಮರ್ಥವಾಗಿ ಹಿಡಿದಿಟ್ಟಿದೆ. ಚಿತ್ರದ ಹಿನ್ನೆಲೆ ಸಂಗೀತ ಕೂಡ ಮನೋಜ್ಞವಾಗಿದ್ದು, ನೋಡುಗರ ಲಹರಿಯನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಮಕ್ಕಳಿಗೆ ಕಥೆ ಕೂಡ ಸರಿಯಾಗಿ ಹೇಳಲು ಬರದ ಗಂಭೀರ ಅಪ್ಪನಾಗಿ, ಬಿಬಿಸಿಯ ಮೈಕಿನೆದುರು ತೊದಲೋ ರಾಜನಾಗಿ, ನಟ ಕಾಲಿನ್ ಫರ್ತ್, ಆರನೇ ಜಾರ್ಜ್ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದಾರೆ. ಇನ್ನು ಸ್ಪೀಚ್ ಥೆರಪಿಸ್ಟ್ ಆಗಿ ನಟಿಸಿರೋ ಜೆಫ್ರಿ ರಶ್ ನಟನೆ ಶ್ಲಾಘನೀಯ. ಅಂದ ಹಾಗೆ, ಆಗ ತಾನೇ ಕಂಡು ಹಿಡಿಯಲಾಗಿದ್ದ ರೇಡಿಯೋ , ಚಿತ್ರದ ಮತ್ತೊಂದು ಪ್ರಮುಖ ಪಾತ್ರ!
ಈ ಸಲದ ಆಸ್ಕರ್ ನಲ್ಲಿ ಕಿಂಗ್ಸ್ ಸ್ಪೀಚ್ ಚಿತ್ರಕ್ಕೆ ಉತ್ತಮ ಚಿತ್ರ, ಉತ್ತಮ ಡೈರೆಕ್ಟರ್ , ಉತ್ತಮ ನಟ, ಉತ್ತಮ ಸ್ಕ್ರೀನ್ ಪ್ಲೇ – ಒಟ್ಟು ನಾಲ್ಕು ಪ್ರಶಸ್ತಿಗಳು ಗಳು ಲಭ್ಯವಾಗಿದೆ.
ಭಾಷೆ: ಇಂಗ್ಲೀಷ್
ನಿರ್ದೇಶನ: ಟಾಮ್ ಹೂಪರ್
ನಟರು: ಕಾಲಿನ್ ಫರ್ತ್, ಜೆಫ್ರಿ ರಶ್