ಕುಪ್ಪಳಿಯಲ್ಲಿ ಆ. 20 ಮತ್ತು 21 ರಂದು ನಡೆದ ಚಿತ್ರಶಿಬಿರ ಅತ್ಯುತ್ತಮವಾದ ರೀತಿಯಲ್ಲಿ ಸಮಾಪನಗೊಂಡಿತು.

60 ಕ್ಕೂ ಹೆಚ್ಚು ಮಂದಿ ಈ ಬಾರಿ ಪಾಲ್ಗೊಂಡಿದ್ದು ವಿಶೇಷ. ಜತೆಗೆ ಬಹುತೇಕ ಮಂದಿ ಚರ್ಚೆಯಲ್ಲಿ ಭಾಗವಹಿಸಿದ್ದೂ ಸಹ ಕಾರ್ಯಕ್ರಮ ಯಶಸ್ಸಿಗೆ ಕಾರಣವಾಯಿತು. ಖ್ಯಾತ ಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ನಮ್ಮೊಂದಿಗೆ ಎರಡೂ ದಿನ ಇದ್ದರು.

ಅಭಿಜಾತ ಪ್ರತಿಭೆ ಕಿಶೋರ್ ಕುಮಾರ್ ಕುರಿತ 10 ನಿಮಿಷದ ಸಾಕ್ಷ್ಯಚಿತ್ರವನ್ನು ವೀಕ್ಷಿಸುವ ಮೂಲಕ ಚಿತ್ರ ಶಿಬಿರ ಪ್ರಾರಂಭವಾಯಿತು. ನಂತರ ಇರಾನಿ ಚಿತ್ರ ಮಜಿದ್ ಮಜಿದಿಯ ‘ಸಾಂಗ್ ಆಫ್ ಸ್ಪ್ಯಾರೋ’ ಪ್ರದರ್ಶನವಾಯಿತು. ಅದರ ಕುರಿತ ಚರ್ಚೆ ಬಹಳ ಚೆನ್ನಾಗಿತ್ತು. ಬಹಳಷ್ಟು ಮಂದಿ ನಿರ್ದೇಶಕನ ದೃಶ್ಯಪ್ರಜ್ಞೆ (ವಿಶುಯಲ್ ಸೆನ್ಸ್)ಯನ್ನು ಮೆಚ್ಚಿದರು. ಚಿತ್ರದ ಕಥೆ ಕುರಿತು ಚರ್ಚೆ ನಡೆದದ್ದಕ್ಕಿಂತ ಅದು ತಮಗೆ ಕೊಟ್ಟ ಹೊಸ ಹೊಳಹನ್ನು ಎಲ್ಲರೂ ವಿವರಿಸಿದರು. ಸುಮಾರು ಒಂದು ಗಂಟೆ ಕಾಲ ನಡೆದ ಚರ್ಚೆಯಲ್ಲಿ ಲಿಂಗದೇವರು ಅವರು ನಿರ್ದೇಶನದ ಹಿನ್ನೆಲೆಯ ಸಾಧ್ಯತೆಯನ್ನು ವಿವರಿಸಿದರು.

ನಂತರ ಹಿಂದಿಯ ಖರಗೋಷ್ ಚಿತ್ರವನ್ನು ವೀಕ್ಷಿಸಲಾಯಿತು. ಅದರ ಕುರಿತ ಚರ್ಚೆಯೂ ಚೆನ್ನಾಗಿತ್ತು. ಸ್ವಲ್ಪ ತಾಂತ್ರಿಕ ಅಂಶಗಳ ಮೇಲೆಯೇ ಈ ಚಿತ್ರ ಹೆಚ್ಚು ಗಮನ ನೀಡಿದ್ದರಿಂದ ಅಲ್ಲಿ ಬಳಸಲಾದ ಬೆಳಕಿನ ಬಗೆ ಚರ್ಚೆ ನಡೆಯಿತು. ರಾತ್ರಿ ಝುಲು ಭಾಷೆಯ ಕ್ಯಾಚ್ ಎ ಫೈರ್ ಚಿತ್ರವನ್ನು ವೀಕ್ಷಿಸಲಾಯಿತು. ಇದರಲ್ಲಿ ಬಹಳ ಮುಖ್ಯವಾಗಿ ಆಫ್ರಿಕನ್ನರ ಸ್ವಾತಂತ್ರ್ಯ ಹೋರಾಟದ ಒಂದು ಎಳೆ ಹಿಡಿದುಕೊಂಡು ರೂಪಿಸಿದ ಚಿತ್ರ. ವಾಸ್ತವವಾಗಿ ಒಬ್ಬನ ಬಯೋಗ್ರಫಿ. ಆದರೆ, ಆ ಚಿತ್ರ ರೂಪಿಸಿದ ಮಾದರಿ ಹೇಗಿತ್ತೆಂದರೆ, ಚಿತ್ರದ ಕೊನೆಯಲ್ಲಿ ಆ ವ್ಯಕ್ತಿಯ ಬಗೆಗಿನ ಉಲ್ಲೇಖ ಬಂದಾಗಲೇ ಅದು ‘ಬಯೋಗ್ರಫಿ’ ಎನಿಸಿದ್ದು. ಅಷ್ಟು ಸೂಕ್ಷ್ಮವಾಗಿ ಸಿನಿಮಾವನ್ನಾಗಿಯೇ ರೂಪಿಸಿದ್ದಾರೆ. ಈ ಚಿತ್ರಕ್ಕೊಂದು ಚಾರಿತ್ರಿಕ ಹಿನ್ನೆಲೆ ಇದ್ದದ್ದರಿಂದ ಅದರ ಬಗ್ಗೆಯೂ ಮಾಹಿತಿ ನೀಡಲಾಯಿತು.

ಭಾನುವಾರ ಆರಂಭವಾಗಿದ್ದು ಲಿಂಗದೇವರು ಅವರ “ಮೌನಿ” ಚಿತ್ರದ ಪ್ರದರ್ಶನದ ಮೂಲಕ. ಇಡೀ ಚಿತ್ರ ಕಟ್ಟಿಕೊಟ್ಟ ಪರಿಕಲ್ಪನೆಯ ಬಗ್ಗೆ ಚರ್ಚೆ ನಡೆಯಿತು. ಲಿಂಗದೇವರು ಉಪಸ್ಥಿತರಿದ್ದು, ತಮ್ಮ ನೋಟಗಳನ್ನು ವಿವರಿಸಿದರು. ಚಿತ್ರ ಶಿಬಿರ ಕೊನೆಗೊಂಡಿದ್ದು “ಡಿಪಾರ್ಚರ್” ಸಿನಿಮಾ ಮೂಲಕ. ಈ ಮಧ್ಯೆ ಸಾಂಗತ್ಯದ “ನಮ್ಮ ಪ್ರತಿಭೆಗಳು” ಎಂಬ ಕಾರ್ಯಕ್ರಮದಡಿ ಶಿಬಿರಾರ್ಥಿಗಳೇ ರೂಪಿಸಿದ ವರುಣ್ ಆದಿತ್ಯ ಅವರ “ಫ್ರೇಮ್” ಕಿರುಚಿತ್ರ ಹಾಗೂ ಪೃಥ್ವಿ ವಿ. ನಿರ್ದೇಶಿಸಿದ ಸಾಕ್ಷ್ಯಚಿತ್ರ “ಧ್ವನಿ” ಪ್ರದರ್ಶಿಸಲಾಯಿತು. ಎಲ್ಲರೂ ಆ ಚಿತ್ರದ ಬಗ್ಗೆ ತಮ್ಮ ಮುಕ್ತವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮ ಈ ಬಾರಿಯಿಂದ ಪ್ರಾರಂಭಿಸಲಾಗಿದ್ದು, ನಮ್ಮ ಹೊಸ ಪ್ರತಿಭೆಗಳು ರೂಪಿಸಿದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಥತಿ ಅಧ್ಯಯನ ವಿಭಾಗದ ನಿರ್ದೇಶಕ ಶ್ರೀ ರಾಜಾರಾಮ ಹೆಗಡೆಯವರು, ಎಲ್ಲರಿಗೂ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ವೇದಿಕೆಯಲ್ಲಿ ತುಮಕೂರು ವಿವಿ ಯ ಸಹಾಯಕ ಪ್ರಾಧ್ಯಾಪಕ ಸಿಬಂತಿ ಪದ್ಮನಾಭ, ಕೊಪ್ಪದ ವಕೀಲರಾದ ಸುಧೀರ್ ಕೊಪ್ಪ ಮುರೊಳ್ಳಿ, ತೀರ್ಥಹಳ್ಳಿಯ ವಕೀಲರಾದ ಮಧು ಮಯ್ಯ ಉಪಸ್ಥಿತರಿದ್ದರು. ವಾದಿರಾಜ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಹೆಗಡೆ ಮತ್ತಿತರರು ಭಾಗವಹಿಸಿದ್ದರು. ಶಿಬಿರದ ಕೊನೆಯಲ್ಲಿ ಮಸಾಲೆದೋಸೆ, ಕಾಫಿ ಖುಷಿ ಕೊಟ್ಟರೆ, ಉಳಿದ ಎರಡು ದಿನ ತೀರ್ಥಹಳ್ಳಿಯ ಪ್ರಸನ್ನ ಮತ್ತು ತಂಡದವರು ಒದಗಿಸಿದ ಊಟೋಪಚಾರ ಬಹಳ ಚೆನ್ನಾಗಿತ್ತು.

ಈ ಬಾರಿಯ ಕೊರತೆಯೆಂದರೆ ಶಿಬಿರ ನಡೆಸಲು ಅವಕಾಶ ಕಲ್ಪಿಸಿದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಮತ್ತು ಸಾಂಗತ್ಯದ ವ್ಯವಸ್ಥಾಪಕ ಟ್ರಸ್ಟಿ ಪರಮೇಶ್ ಗುರುಸ್ವಾಮಿಯವರು ತಮ್ಮ ವೈಯಕ್ತಿಕ ಕಾರಣಗಳಿಂದ ಭಾಗವಹಿಸಿರಲಿಲ್ಲ. ಅವರಿಬ್ಬರ ಕೊರತೆ ಶಿಬಿರದುದ್ದಕ್ಕೂ ಬಾಧಿಸಿತು. ಗುರುಸ್ವಾಮಿ ಸಾರ್ ಇಲ್ಲದಿದ್ದುದು ಬಹಳ ಕಷ್ಟವೆನಿಸಿದ್ದು ನಿಜ. ಉಳಿದಂತೆ ಶಿಬಿರ ಯಶಸ್ವಿಯಾಯಿತು.