ಇದು ಹೊಸ ಅಂಕಣ. ಭಾರತೀಯ ಸಿನಿಮಾಗಳ ಅದ್ಭುತ ಸಾಧಕರ ಬಗ್ಗೆ ಸಂಗ್ರಾಹ್ಯಯೋಗ್ಯವೆನಿಸಬಹುದಾದ ಲೇಖನಗಳ ಅಂಕಣ “ಚಿತ್ರ ದಿಗ್ಗಜರು”. ಇದರಡಿ ಮೊದಲಿಗೆ ವಾರಪತ್ರಿಕೆಯ ಸಂಪಾದಕ ಎನ್. ಎಸ್. ಶ್ರೀಧರಮೂರ್ತಿಯವರ ಲೇಖನ ಪ್ರಕಟಿಸಿದ್ದೇವೆ. ನಮ್ಮ ಸಾಂಗತ್ಯ ಸಂಚಿಕೆಗೆ ಬರೆದ ಲೇಖನವಿದು. ಜಿ. ಕೆ. ವೆಂಕಟೇಶ್ ನಮ್ಮ ಕನ್ನಡ ಸಿನಿಮಾ ರಂಗದಲ್ಲಿನ ಅತ್ಯದ್ಭುತ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಅವರ ವಿಶಿಷ್ಟತೆ ಕುರಿತು ವಿವರಿಸುವ ಲೇಖನವನ್ನು ಓದಿ ಅಭಿಪ್ರಾಯ ತಿಳಿಸಿ.

ಗದ್ಯಾಲ್ ಕೃಷ್ಣದಾಸ್ ವೆಂಕಟೇಶ್?
ಕನ್ನಡದಲ್ಲಿ ಮಾತ್ರವಲ್ಲಭಾರತದಲ್ಲೇಸ್ವಂತಿಕೆಯುಳ್ಳ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಹೀಗೆ ಗುರುತಿಸಿದವರು ಮೇರು ಗಾಯಕಿ ಲತಾಮಂಗೇಶ್ಕರ್. ಸಂದರ್ಭ ಸ್ಕ್ರೀನ್? ಪತ್ರಿಕೆ ಭಾರತದಲ್ಲಿ ಇಂತಹ ಸ್ವಂತಿಕೆಯುಳ್ಳ ೨೫ ಸಂಗೀತ ನಿರ್ದೇಶಕರ ಪಟ್ಟಿ ತಯಾರಿಸಲು ಅವರನ್ನು ಕೇಳಿದಾಗ ಅದರಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗರು ವೆಂಕಟೇಶ್. ಅವರ ಸಾಧನೆ ಪಥ ನೋಡಿದರೆ ಶಾಸ್ತ್ರಿಯ, ಜಾನಪದ, ಕವಿಗೀತೆ ಎಲ್ಲದರಲ್ಲೂ ಸ್ವಂತಿಕೆ ಕಾಣುತ್ತದೆ, ಮಾತ್ರವಲ್ಲ ಬಾಂಡ್‌ಚಿತ್ರಗಳಿಗೂ ವೆಂಕಟೇಶ್ ವಿಶಿಷ್ಟ ಸಂಗೀತ ನೀಡಿದ್ದಾರೆ.

ವೆಂಕಟೇಶ್ ಜನಿಸಿದ್ದು 1927 ರ ಸೆಪ್ಟೆಂಬರ್ 21 ರಂದು ಹೈದರಾಬಾದ್‌ನಲ್ಲಿ. ತಂದೆ ಕೃಷ್ಣದಾಸ್ವೃತ್ತಿರಂಗ ಭೂಮಿ ಕಲಾವಿದರು. ಅಣ್ಣಸೀತಾಪತಿ ವೀಣಾವಾದಕರು ಬಾಲಕವೆಂಕಟೇಶ್‌ಗೆ ಅವರೇ ಮೊದಲ ಗುರುಗಳು, ಆರನೇ ವರ್ಷಕ್ಕೆ ಕಛೇರಿ ನೀಡಬಲ್ಲಷ್ಟು ಪರಿಣಿತಿಯನ್ನು ವೆಂಕಟೇಶ್‌ಗಳಿಸಿದ್ದರು. ಅವರ ಹನ್ನೊಂದನೆ ವಯಸ್ಸಿಗೆ ಕುಟುಂಬ ಜೀವನ ಪಥ ಅರಸುತ್ತಾ ಮದ್ರಾಸಿಗೆ ಬಂದಿತು. ಇದು ವೆಂಕಟೇಶ್ ಜೀವನದ ಗಮನಾರ್ಹ ತಿರುವು. ಬೊಬ್ಬುಲಿ ಖ್ಯಾತಿಯ ರಾಜಾ ಅವರ ಪ್ರೋತ್ಸಾಹದಿಂದ ವೆಂಕಟೇಶ್ ಆ ಕಾಲದ ದಿಗ್ಗಜರಾದ ವೆಂಕಟರಾಮನ್, ಸಿ.ಆರ್.ಸುಬ್ರಹ್ಮಣ್ಯಂ ಅವರಿಗೆ ಪಕ್ಕ ವಾದ್ಯ ನುಡಿಸಿದರು. ವೃತ್ತಿ ಅರಸುತ್ತಾ ಜ್ಯೂಪಿಟರ್ ಕಂಪನಿ ಸೇರಿದರು. ಇಲ್ಲಿ ಎಂ.ಎಸ್.ವಿಶ್ವನಾಥನ್ ಅವರ ಪರಿಚಯವಾಯಿತು. 1952 ರಲ್ಲಿ ಶಿವಾಜಿಗಣೇಶನ್ ಅವರ ಪಾನಂ ಚಿತ್ರಕ್ಕೆ ಎಂ.ಎಸ್ ಸಂಗೀತ ನೀಡಿದಾಗ ಅವರಿಗೆ ಸಹಾಯಕರಾಗಿದ್ದವರು ವೆಂಕಟೇಶ್. ವಿಶ್ವನಾಥನ್ ಅವರ ತಂಡದಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೂ ಕನ್ನಡದ ಕಂಪನ್ನು ತುಂಬುವ ಬಗ್ಗೆ ವೆಂಕಟೇಶ್ ಕನಸು ಕಾಣುತ್ತಿದ್ದರು.

ಬೆಂಗಳೂರು ಆಕಾಶವಾಣಿಯಲ್ಲಿ ಎಗ್ರೇಡ್ ಗಾಯಕರೆಂಬ ಅರ್ಹತೆ ಪಡೆದ ಮೇಲೆ ಅವರ ಕನಸುಗಳು ಇನ್ನಷ್ಟು ರೆಕ್ಕೆ ಬಿಚ್ಚಿದವು. ಆದರೆ ವೆಂಕಟೇಶ್ ಅವರಿಗೆ ಸಂಗೀತ ನಿರ್ದೇಶಕರಾಗುವ ಅವಕಾಶ ಸಿಕ್ಕಿದ್ದು ಮಲಯಾಳಿ ಚಿತ್ರರಂಗದಲ್ಲಿ ಬೇಬಿ, ಅವರ ಸಂಗೀತ ನೀಡಿದ ಮೊದಲ ಚಿತ್ರ. ಸೋದರಿ ಚಿತ್ರಕ್ಕೆ ಪದ್ಮನಾಭಶಾಸ್ತ್ರಿಗಳಿಗೆ ಸಹಾಯಕರಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅವರನ್ನು ಸ್ವತಂತ್ರ ಸಂಗೀತ ನಿರ್ದೇಶಕರನ್ನಾಗಿಸಿದ್ದು ಟಿ.ವಿ.ಸಿಂಗ್ ಠಾಕೂರ್, ಕನ್ನಡಿಗರ ಸ್ವಾಭಿಮಾನವನ್ನು ಹೆಚ್ಚಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ವಿಶ್ವಕಲಾ ಚಿತ್ರ? ಲಾಂಛನದ ಮೂಲಕ ನಿರ್ಮಿಸಿ ನಿರ್ದೆಶಿಸಿದ ಹರಿಭಕ್ತ ಮತ್ತು ಓಹಿಲೇಶ್ವರ ಚಿತ್ರಗಳಿಗೆ ವೆಂಕಟೇಶ್ ಅವರನ್ನು ಸಂಗೀತ ನಿರ್ದೇಶಕರನ್ನಾಗಿಸಿದರು.

ಈ ಚಿತ್ರದ ಗೀತೆಗಳೆಲ್ಲ ಜನಪ್ರಿಯವಾಗುವುದರೊಂದಿಗೆ ವೆಂಕಟೇಶ್ ಕನ್ನಡ ಚಿತ್ರರಂಗದಲ್ಲಿ ಹೊಸತನದ ತಿರುವನ್ನು ತಂದರು. 60 ರ ದಶಕದ ದಶಾವತಾರ ಮಹಿಷಾಸುರಮರ್ಧಿನಿ ಕನ್ಯಾರತ್ನ ಗೌರಿ ಕುಲವಧು ಎಲ್ಲದರಲ್ಲೂ ಹೊಸತನದ ಕುರುಹು ಇದ್ದೇ ಇತ್ತು, ಬಾಂಡ್ ಚಿತ್ರದಲ್ಲೂ ಸೈ ಅನ್ನಿಸಿಕೊಂಡ ಅವರು ಜೇಡರಬಲೆ ಚಿತ್ರಕ್ಕೆ ವಿಶಿಷ್ಟ ಸಂಗೀತ ನೀಡಿದರು. ಅದೇ ಸಂದsರ್ಭದಲ್ಲಿ ಮಗಲೆ ಉಸ್ ಸಾಮಂತು ನಾನುಮ್ ಮಿಂತನ್ ತಾನ್? ಮೊದಲಾದ ತಮಿಳು ಚಿತ್ರಗಳಿಗೆ ಸಂಗೀತ ನೀಡಿ ಅಲ್ಲಿಯೂ ಬೇಡಿಕೆಯ ಸಂಗೀತ ನಿರ್ದೇಶಕರಾದರು. ಎಪ್ಪತ್ತರ ದಶಕ, ಜಿ.ಕೆ.ವೆಂಕಟೇಶ್ ಕನ್ನಡ ಚಿತ್ರರಂಗಕ್ಕೆ ಗಮನಾರ್ಹ ತಿರುವು ನೀಡಿದ ದಶಕ. ಕಸ್ತೂರಿ ನಿವಾಸ, ತಂದೆ ಮಕ್ಕಳು ಬಂಗಾರದ ಮನುಷ್ಯ? ಭೂತಯ್ಯನ ಮಗ ಅಯ್ಯ್ಯ ಭಕ್ತ ಕುಂಬಾರ ಮಯೂರ, ಸೊಸೆ ತಂದ ಸೌಭಾಗ್ಯ ಎಲ್ಲವೂ ಇತಿಹಾಸ ನಿಮ್ಮಿಸಿದ ಚಿತ್ರಗಳೇ ಇದೆಲ್ಲದರಲ್ಲೂ ನೆಲದ ಸೊಗಡನ್ನು ವೆಂಕಟೇಶ್ ತಂದರು. ಸಂಗೀತದಲ್ಲಿ ಜೀವಂತಿಕೆ ಅರಳಿಸಿದರು, ತಮಿಳಿನಲ್ಲೂ ಸೆಬಂತಂ, ಪೊನ್ನಕ್ಕು ತಂಗ ಮನಸು, ಮುರುಗನ್ ಕಾತಿಯಾ ವಾಜಿ, ಮಲ್ಲೆಗೈ ಮೊಹಿನಿ ಎಲ್ಲವೂ ಮೇರು ಚಿತ್ರಗಳೇ.

ಎಂಬತ್ತರ ದಶಕದಲ್ಲೂ ಅಂತ,ಮರೆಯದಹಾಡು, ಕಲಿಯುಗ, ಹೊಸನೀರುಮುಂತಾದಚಿತ್ರಗಳಿಗೆಗಮನಾರ್ಹ ಸಂಗೀತನೀಡಿದ ಅವರು 1993ರ ನವಂಬರ್‌ನಲ್ಲಿ ನಮ್ಮನ್ನು ಅಗಲುವವರೆಗೂ ಕ್ರಿಯಾಶೀಲರಾದವರು. ಕನ್ನಡ ಮಾತ್ರವಲ್ಲದೆ ತೆಲಗು, ತಮಿಳು, ಮಲೆಯಾಳಂ, ಬಂಗಾಳಿ, ಒರಿಯಾ, ಅಸ್ಸಾಮಿ ಮತ್ತು ಹಿಂದಿ ಸೇರಿದಂತೆ 280 ಚಿತ್ರಗಳಿಗೆ ಸಂಗೀತ ನೀಡಿರುವ ವೆಂಕಟೇಶ್ ಉತ್ತಮಗಾಯಕರೂ ಕೂಡ ಅವರು ಹಾಡಿರುವ ಕನ್ನಡ ಮಕ್ಕಳೆಲ್ಲಾ ಒಂದಾಗಿ ಬನ್ನಿ (ಕಣ್ತೆರೆದು ನೋಡು) ವಿರಸವೆಂಬ ವಿಷಕೆ (ಭೂತಯ್ಯನ ಮಗ ಅಯ್ಯ) ನೆಂಟ ಕೇಳೋ ಕಿವಿಗೊಟ್ಟು (ಭೂದಾನ) ಎಲ್ಲವೂ ಜನಪ್ರಿಯವೇ. ಮಹಾಸಾಧಕ ವೆಂಕಟೇಶ್‌ಗೆ ದೊರಕಿದ್ದು ಮಾತ್ರ ಕರ್ನಾಟಕದಿಂದ ಎರಡೇ ರಾಜ್ಯ ಪ್ರಶಸ್ತಿಗಳು ಭಕ್ತ ಕುಂಬಾರ (1974-75) ಮತ್ತು ಹೊಸನೀರು (1985-86) ಚಿತ್ರಗಳಿಗೆ.

ವೆಂಕಟೇಶ್ ಸಂಗೀತದವೈಶಿಷ್ಟ್ಯ
ಜಿ.ಕೆ. ವೆಂಕಟೇಶ್ ಅವರನ್ನುತುಂಬಾವಿಶಿಷ್ಟವಾಗಿಸಿದ್ದು ಅವರಶಾಸ್ತ್ರೀಯಸಂಗೀತಜ್ಞಾನ ಮತ್ತುಪ್ರಯೋಗಶೀಲತೆ.ಮುಂಬೈನ ಹಿರಿಯಸಂಗೀತನಿರ್ದೇಶಕರೆಲ್ಲರನಿಕಟ ಸಂಪರ್ಕಪಡೆದಿದ್ದ ಅವರು ವಿಶ್ವನಾಥ್. ರಾಮಮೂರ್ತಿಯವರಿಂದ ಎಂತಹ ಸಂಧರ್ಭದಲ್ಲೂ ಮಾಧುರ್ಯವನ್ನೇ ನೀಡುವ ದೀಕ್ಷೆ ಪಡೆದಿದ್ದರು. ಸಾಹಿತ್ಯದ ಕುರಿತು ಅಪಾರ ಆಸಕ್ತಿ ಹೊಂದಿದ್ದ ಅವರಿಗೆ ಚಿತ್ರಗೀತೆ ನಿರ‍್ಮಾಣ ಒಂದು ಯಜ್ಞವೇ ಆಗಿತ್ತು. ಹೊಸತನ ಸಿಕ್ಕುವವರೆಗೂ ಪಟ್ಟು ಸಡಲಿಸುವವರೇ ಅಲ್ಲ ಎಂಬುದೇ ಅವರಿಗಿದ್ದ ಖ್ಯಾತಿ. ಭಕ್ತ ಕುಂಬಾರನ ಪ್ರಾದೇಶಿಕತೆ ಕುರಿತ ವಿವರ ಅತ್ಯಲ್ಪ ಸಂತ ತುಕಾರಾಂ ಮೊದಲಾದ ಸಂತರಿಗಿದ್ದ ಹಿನ್ನಲೆ ಅವನಿಗಿಲ್ಲ. ಈ ವಸ್ತುವಿನ ಚಿತ್ರ ಎಂದಾಗ ವೆಂಕಟೇಶ್ ವಿಠಲ್ ಪಂಥದ ಮಾದರಿ ಜೊತೆಗೆ ಕೀರ್ತನೆ ಸೊಬಗನ್ನು ಸೇರಿಸಿದರು.

ದಕ್ಷಿಣಾದಿಯ ಖಾಯಂ ವಾದ್ಯಗಳ ಜೊತೆಗೆ ಪಕಾವಾಜ್ ನಂತಹ ಹೊಸ ವಾದ್ಯ ಸೇರಿಸಿದರು. ಇವೆಲ್ಲವೂ ಸೇರಿ ಚಿತ್ರವನ್ನೂ ಸಂಗೀತಮಯವಾಗಿಸಿತು. ಬಂಗಾರದ ಮನುಷ್ಯ? ಚಿತ್ರದಲ್ಲೂ ಜಾನಪದ ಛಾಯೆ ಚಿತ್ರದಲ್ಲಿ ಇರುವಂತೆ ವಾದ್ಯ ಬಳಕೆ ಮಾಡಿದರು. ಕೆಲವೊಮ್ಮೆ ವಾದ್ಯದ ಆಯ್ಕೆಯೇ ಗೀತೆಯ ಶ್ರೀಮಂತಿಕೆಗೆ ಕಾರಣವಾಗಿ ಬಿಡುವಂತೆ ಮಾಡುವ ಶಕ್ತಿ ಅವರಿಗಿತ್ತು ಉಧಾಹರಣೆಗೆ ಕುಲವಧು ಚಿತ್ರದ ಒಲವಿನ ಪ್ರಿಯಲತೆ ಎಂಬ ಗೀತೆ, ಇಲ್ಲಿ ಅವರು ಬಳಸಿರುವ ಅಪರೂಪದ ವಾದ್ಯ ಹವಾಯ್ ಗಿಟಾರ್? ಅದರ ವಿಭಿನ್ನತೆಗೆ ಕಾರಣವಾಗಿದೆ. ಸಂಧ್ಯಾರಾಗ ಚಿತ್ರಕ್ಕೆ ಡಾ|| ಬಾಲಮುರಳಿ ಕೃಷ್ಣ ಅವರು ಸಂಗೀತ ನೀಡುವುದು ಎಂದು ನಿರ್ಧಾರವಾಗಿತ್ತು. ಸಂಗೀತದ ಹಿನ್ನಲೆಯ ಚಿತ್ರಕ್ಕೆ ಅದು ಅಗತ್ಯ ಎಂದು ನಿರ್ಧರಿಸಲಾಗಿತ್ತು ಆದರೆ ತಾವೇ ವಿಶಿಷ್ಟವಾಗಿ ರೂಪಿಸಿದ ಪೂರ್ವ ಕಲ್ಯಾಣಿ ರಾಗದಲ್ಲಿ ನಂಬಿದೆ ನಿನ್ನ ನಾದ ದೇವತೆಯೇ ಎಂಬ ಗೀತೆ ಸಂಯೋಜಿಸಿದ್ದಕ್ಕಿಂತ ಹೆಚ್ಚಿನದನ್ನು ಮಾಡಲು ಅವರಿಂದಲಾಗಲಿಲ್ಲ. ಆಗ ನೆರವಿಗೆ ಬಂದವರು.

ಜಿ.ಕೆ.ವೆಂಕಟೇಶ್ ಚಿತ್ರವನ್ನು ಸಂಗೀತವಾಗಿ ಶ್ರೀಮಂತಮಯವಾಗಿಸಿದ್ದಲ್ಲದೆ. ದೀನಾ ನಾ ಬಂದಿರುವೆ ಗೀತೆ ಯನ್ನು ಕೀರ್ತನೆ ಮತ್ತು ಭಾವಗೀತೆ ಎರಡಕ್ಕು ಒಪ್ಪು ಮಾದರಿಯಲ್ಲಿ ಪಾಶ್ಚಿಮಾತ್ಯ ವಾಯಲಿನ್ ಬಳಸಿ ಸಂಯೋಜಿಸಿದರು. ಕನಿಷ್ಟ ಐದು ರಾಗ ಸಂಚಾರದ ವಿಸ್ತಾರ ಪಡೆದ ಮುಗಿಲೆತ್ತ ಓಡುತಿದೆ (ತಂದೆ ಮಕ್ಕಳು) ಅವರ ವಿಶಿಷ್ಟ ಸಂಯೋಜನೆ. ಹಾಗೇ ಕುದುರೆ ಓಟದ ಗೀತೆ ಎನ್ನುವಾಗಲೆಲ್ಲ ಚತುಶ್ರವನ್ನು ಬಳಸುವುದು ಭಾರತೀಯ ಸಂಗೀತ ಲೋಕದಲ್ಲೇ ಸಾಮಾನ್ಯ ಸಂಗತಿ. ಆದರೆ ವೆಂಕಟೇಶ್ ಮಯೂರ ಚಿತ್ರದ ಈ ಮೌನವ ತಾಳೆನು ಗೀತೆಗೆ ತಿಶ್ರವನ್ನು ಬಳಸಿದರು. ಇದು ಗೀತೆ ಭಿನ್ನವಾಗಿ ಕೇಳುವಂತಾಯಿತು.
ದೂರದ ಬೆಟ್ಟ ಕಮ್ಮಾರ ಕಸುಬಿನ ಹಿನ್ನಲೆಯಲ್ಲಿ ರೂಪುಗೊಂಡ ಚಿತ್ರ ಇದಕ್ಕೆ ವೆಂಕಟೇಶ್ ಹೊಸ ಪ್ರಯೋಗ ಮಾಡಿದರು ತಿಶ್ರದ ನೆಡೆ ಬಳಸಿ ಮೂರನೇ ತಾಳ ಕೈ ಬಿಟ್ಟರು. ಈ ಚಿತ್ರದ ಪ್ರೀತಿನೇ ಆ ದ್ಯಾವ್ರ ತಂದ ಗೀತೆಯಲ್ಲಂತು ಇದು ಕುಲುಮೆಯ ಶಬ್ದವನ್ನು ಅರ್ಥತ್ ಹಿಡಿದಿಟ್ಟಿತು. ವೆಂಕಟೇಶ್ ಚಿತ್ರಗೀತೆ ಸಂಯೋಜನೆಯಲ್ಲಿ ಮಾತ್ರವಲ್ಲ ವಾದ್ಯಗೋಷ್ಟಿ ನಿರ್ವಹಣೆಯಲ್ಲೂ ಸಿದ್ದ ಹಸ್ತರು. ಅವರ ಈ ಶಕ್ತಿಯ ಫಲವಾಗಿಯೇ ರೀ-ರೆಕಾರ್ಡಿಂಗ್‌ನಲ್ಲಿ ಅವರು ತುಳಿದ ದಾರಿ ಇಂದಿಗೂ ವಿನೂತನವಾಗಿದೆ ಭೂತಯ್ಯನ ಮಗ ಅಯ್ಯ? ಚಿತ್ರದಲ್ಲಿ ವೀಣೆಯನ್ನು ಅವರು ಬಳಸಿರುವ ರೀತಿ ಇದಕ್ಕೆ ಸಾಕ್ಷಿ. ಹಾಗೆ ಮಯೂರ ಚಿತ್ರದಲ್ಲಿ ರಥಗಳನ್ನು ಬಳಸಿದ ಯುದ್ದದ ಹಿನ್ನಲೆ ಸಂಗೀತಕ್ಕೆ ತಾರ್ ಶೆಹಾನಾಯಿ ಯನ್ನು ಅಪಸ್ವರದಲ್ಲಿ ನುಡಿಸಿ ಜೀವಂತಿಕೆ ತಂದರು. ಅವರ ಸಂಗೀತ ಸಂಯೋಜನೆಯ ಮಹತ್ತರ ಸಾಧನೆಚಿiiಗಿ ಕಾಣಿಸುವ ಚಿತ್ರ ಕಸ್ತೂರಿ ನಿವಾಸ ಇಲ್ಲಿ ಸಂಗೀತ ಕೂಡ ಒಂದು ಪ್ರಮುಖ ಪಾತ್ರವಾಗಿದೆ ಎಂದರೆ ತಪ್ಪಾಗಲಾರದು. ಅಂತಹ ಇನ್ನೊಂದು ಉಧಾಹರಣೆ ಹುಲಿಯ ಹಾಲಿನ ಮೇವು ಇಲ್ಲಿ ಹದಿನೆಚಿಟು ವಾದ್ಯಗಳನ್ನು ಸುಸ್ವರ-ಅಪಸ್ವರಗಳ ಹೊಂದಾಣಿಕೆಯಲ್ಲಿ ನುಡಿಸಿ ಯುದ್ದ ರೀರೆಕಾರ್ಡಿಂಗ್ ಮಾಡಿದರು. ಇವತ್ತಿಗೂ ಈ ಚಿತ್ರದ ಯುದ್ದ ಸನ್ನಿವೇಶಗಳನ್ನು ನೋಡಿದರೆ ಸಾಕ್ಷತ್ ರಣರಂಗದಲ್ಲೇ ಇದ್ದ ಅನುಭವವಾಗುತ್ತದೆ.

ವೆಂಕಟೇಶ್ ಅವರ ಅಪರಿಮಿತಶೋಧ
ಇಡೀ ಕರ್ನಾಟಕವೇಅಣ್ಣ ಎಂದು ಕರೆಯುವ ರಾಜ್ ಕುಮಾರ್ ಅವರನ್ನು ತಮ್ಮ? ಎಂದು ಕರೆಯುತ್ತಿದ್ದ ಬಹುಷಃ ಏಕೈಕ ವ್ಯಕ್ತಿ ಜಿ.ಕೆ.ವೆಂಕಟೇಶ್. ಅವರೊಳಗಿನ ಗಾಯಕನನ್ನು ಎಬ್ಬಿಸಿದವರು ಅವರೇ, ಮಹಿಷಸುರ ಮರ್ಧಿನಿ ಚಿತ್ರದಲ್ಲಿ ತುಂಬಿತು ಮನವ ಎಂಬ ಯುಗಳ ಗೀತೆಯನ್ನು ಓಹಿಲೇಶ್ವರ ಚಿತ್ರದಲ್ಲಿ ಕೆಲವು ಶ್ಲೋಕಗಳನ್ನು ಹೇಳಿಸಿದ್ದ ಅವರು ಸಂಪತ್ತಿಗೆ ಸವಾಲ್? ಚಿತ್ರದ ಯಾರೇ ಕೂಗಾಡಲಿ ಗೀತೆ ಮೂಲಕ ಪೂರ್ಣ ಗಾಯಕರಾಗಲು ಕಾರಣರಾದರು. ಮುಂದೆ ಕೂಡ ರಾಜ್ ಅವರ ಸ್ವರದ ಹಲವು ಮೊಗ್ಗಲಿನ ಸೊಬಗನ್ನು ಹಿಡಿಯಬಲ್ಲ ಗೀತೆಗಳನ್ನು ರೂಪಿಸಿದರು.
ಎರಡು ನಕ್ಷತ್ರಗಳು ಚಿತ್ರದ ಗಜಲ್ ಮಾದರಿಯ ಗೀತೆ ಗೆಳತಿ ಬಾರದು ಇಂಥಾ ಸಮಯ ಅದಕ್ಕೆ ಒಳ್ಳೆಯ ಉದಾಹರಣೆ. ಹಾಗೇ ಪಿ.ಬಿ.ಶ್ರೀನಿವಾಸ್ ಅವರ ಸ್ವರದ ಸಮೃದ್ದಿಯನ್ನು ಕನ್ನಡ ಮಾತ್ರವಲ್ಲ ತಮಿಳು, ತೆಲಗು ಚಿತ್ರಗಳಲ್ಲೂ ವೆಂಕಟೇಶ್ ಪರಿಣಾಮಕಾರಿಯಾಗಿ ಬಳಸಿ ಕೊಂಡಿದ್ದಾರೆ. ಕಣ್ಣಂಚಿನ ಈ ಮಾತಲಿ ಗೀತೆಯಲ್ಲಿ ಸಂಗೀತದ ಎರಡು ಹೆಚ್ಚಿನ ಆವರ್ತದ ನಡುವೆ ಧ್ವನಿ ನಿಲ್ಲಿಸಿರುವ ಕ್ರಮವೇ ಅದಕ್ಕೆ ಸಾಕ್ಷಿ. ಹಾಗೇ ಬೆಂಗಳೂರು ಲತಾ, ಬಿ.ಕೆ.ಸುಮಿತ್ರಾ, ಸಿ.ಅಶ್ವತ್, ಸುಲೋಚನಾ ಇವರನ್ನೆಲ್ಲಾ ಗಾಯಕರಾಗಿ ಪರಿಚಯಿಸಿದವರು ವೆಂಕಟೇಶ್. ಅವರ ಸಹಾಯಕರಾಗಿ ದುಡಿದವರೆಲ್ಲ ದಿಗ್ಗಜರೇ, ಇಳಿಯರಾಜಾ ಮತ್ತು ಎಲ್. ವೈದ್ಯನಾಥನ್ ಅವರಂತಹವರೇ ಬಹುಕಾಲ ಅವರ ಗರಡಿಯಲ್ಲಿ ಪಳಗಿದರು. ಮೈಸೂರು ಅನಂತಸ್ವಾಮಿ ಕೂಡ ಅವರಿಗೆ ಸಹಾಯಕರಾಗಿದ್ದರು. ಗೌರಿ ಮತ್ತು ಕುಲವಧು ಚಿತ್ರದಲ್ಲಿ ವೆಂಕಟೇಶ್ ಕವಿಗೀತೆಗಳನ್ನು ಅಳವಡಿಸುವಾಗ ಅವರಿಗೆ ಬೆಂಬಲವಾಗಿದ್ದು, ಅವರ ಪ್ರಭಾವದಿಂದಲೇ ಭಾವಗೀತೆಯ ಪ್ರಪಂಚಕ್ಕೆ ಬಂದರು. ಶಂಕರ್ ಗಣೇಶ್, ಗಂಗೈ ಅಮರನ್ ಹೀಗೆ ವೆಂಕಟೇಶ್ ಸೃಷ್ಟಿಸಿದ ಶಿಷ್ಯರ ಸಂಖ್ಯೆ ಅಪಾರ. ಇಳಿಯರಾಜ್ ತಮ್ಮ ಉತ್ತುಂಗ ಕಾಲದಲ್ಲಿ ಸಂಗೀತ ಸಂಯೋಜನೆ ಸಂದರ್ಭದಲ್ಲಿ ವೆಂಕಟೇಶ್ ಇರಬೇಕು ಎಂದು ಬಯಸಿದ್ದರು. ಏಕೆ ಎಂದು ಕೇಳಿದ್ದಕ್ಕೆ ಅವರಿದ್ದರೆ.. ಹೊಸತನ ತಂತಾನೇ ಬರುತ್ತದೆ… ಅವರೇನು ಮಾಡಬೇಕಾಗಿಲ್ಲ? ಎಂದು ಉತ್ತರಿಸಿದ್ದರು.
ಚಾಪೆ ಮೇಲೆಮಲಗುವ ಅಭ್ಯಾಸ

ವೆಂಕಟೇಶ್ ಕುರಿತು ಅನೇಕ ದಂತಕತೆಗಳಿವೆ. ಅದರಲ್ಲಿ ಅವರು ಸಂಗೀತಸಂಯೋಜಿಸುವ ಸಂದರ್ಭದಲ್ಲಿ ಇದ್ದಕಿದ್ದ ಹಾಗೆ ಚಾಪೆ ಹಾಸಿಕೊಂಡು ಮಲಗಿ ಬಿಡುತ್ತಿದ್ದರು, ಯಾರಾದರೂ ಎಬ್ಬಿಸಿದರೆ ಅಯ್ಯೋ ಒಳ್ಳೆ ಟ್ಯೂನ್ ಬರುತ್ತಿತ್ತು. ತಪ್ಪಿಹೋಯಿತು ಎಂದು ಪೇಚಾಡುತ್ತಿದ್ದರು ಎನ್ನುವುದೂ ಒಂದು. ಅವರಿಗೆ ನಿಜಕ್ಕೂ ಹಾಗೆ ಚಾಪೆ ಮೇಲೆ ಮಲಗಿದಾಗ ಟ್ಯೂನ್? ಸಿಕ್ಕುತ್ತಿತ್ತೇ?.. ಹೌದು ಎನ್ನುವುದಕ್ಕೊಂದೆರಡು ಕತೆಗಳು, ಜೇಡರ ಬಲೆ ಸಂಗೀತ ಸಂಯೋಜಿನೆ ಸಂದರ್ಭ, ಹಾಡುಗಳನ್ನೆಲ್ಲಾ ಮುಗಿಸಿ ವೆಂಕಟೇಶ್ ಚಾಪೆ ಮೇಲೆ ಮಲಗಿ ನಿದ್ದೆ ಹೋದರು, ಧಡಕ್ಕನೆ ಎದ್ದವರೇ ಜಯಗೋಪಾಲ್ ಅವರಿಗೆ ಒಂದು ಟ್ಯೂನ್ ಸಿಕ್ಕಿದೆ, ಹಾಡು ಬರೆದು ಕೊಡು ಎಂದರು, ಜಯಗೋಪಾಲ್ ಅಲ್ಲಯ್ಯ ಹಾಡುಗಳೆಲ್ಲ ಮುಗಿದೇ ಹೋಗಿದೆ, ಇನ್ನೆಲ್ಲಿ ಬಳಸ್ತಿಯಾ ಎಂದಿದ್ದಕ್ಕೆ ನನಗೆ ಟ್ಯೂನ್ ಹೊಳೆದಿದೆ, ನಾನು ಸಿನಿಮಾದಲ್ಲಾದ್ರು ಬಳಸ್ತೀನಿ ನಾಟಕದಲ್ಲಾದ್ರು ಬಳಸ್ತೀನಿ ಹಾಡು ಬರೆದುಕೊಡು ಅಷ್ಟೇ.. ಎಂದು ಹಠ ಹಿಡಿದರು.
ಜಯಗೋಪಾಲ್ ಹಾಡು ಬರೆದುಕೊಟ್ಟರು. ನಿರೀಕ್ಷೆಯಂತೆ ಅದು ಆ ಚಿತ್ರದಲ್ಲಿ ಬಳಕೆಯಾಗಲಿಲ್ಲ. ಮೂರು ವರ್ಷದ ನಂತರ ದೊರೈ-ಭಗವಾನ್, ಜಯಗೋಪಾಲ್, ವೆಂಕಟೇಶ್ ಕಸ್ತೂರಿ ನಿವಾಸ ಕ್ಕೆ ಸೇರಿದಾಗ ಆ ಹಾಡು ಬಳಕೆಯಾಯಿತು. ಅದೇ ಓ ಗೆಳೆಯಾ ಈ ದಾರಿ ಮರೆತೆಯಾ…. ಇನ್ನೊಂದು ಅನುಭವ ಚಿ.ಉದಯಶಂಕರ್ ಅರದ್ದು ಸಂಧರ್ಭ ಹಾವಿನ ಹೆಡೆ ಚಿತ್ರದ ಗೀತ ಸಂಯೋಜನೆಯದ್ದು. ಹೀಗೆ ಹಾಡುಗಳು ಸೃಷ್ಟಿಯಾಗುತ್ತಿದ್ದಂತೆ, ವೆಂಕಟೇಶ್ ಚಾಪೆ ಮೇಲೆ ಮಲಗಿ ನಿದ್ದೆ, ಹೋದರು, ಎದ್ದವರೇ ಶಂಕರ್, ಒಂದು ವಿಶೇಷ ಟ್ಯೂನ್ ಸಿಕ್ಕಿದೆ. ಲಿರಿಕ್ ಕೊಡು ಎಂದರು.
ಉದಯಶಂಕರ್ ಬರೆದುಕೊಟ್ಟರು.. ನನಗೆ ಸಿಕ್ಕಿರುವ ಟ್ಯೂನ್ ವಿಶಿಷ್ಟವಾದದ್ದು ಇನ್ನೊಂದು ಲಿರಿಕ್ ಇರಲಿ ಎಂದರು ಹೀಗೇ ನಾಲ್ಕು ಲಿರಿಕ್ ಸಿದ್ದವಾದಾಗ ಸುಸ್ತಾದ ಉದಯಶಂಕರ್ ನಿನಗೆ ಕನಸಲ್ಲಿ ಸಿಕ್ಕಿದ ಟ್ಯೂನ್‌ಗೆ , ನಾನು ಕನಸಲ್ಲೇ ಲಿರಿಕ್ ಬರೆಯಬೇಕೆನೂ ಎಂದು ಉದ್ಗಾರವೆತ್ತಿದರು. ವೆಂಕಟೇಶ್ ಈ ನಾಲ್ಕೂ ಲಿರಿಕ್ ಬಳಸಿ ಒಂದು ಅಪೂರ್ವ ಗೀತೆ ಸೃಷ್ಟಿಸಿದರು. ಅದೆಂದರೆ ಬೇರೆ ಏನು ಬೇಡವೆಂದಿಗೂ ನೀನು ನನ್ನವಳಾಗು ಎಂಬ ಯುಗಳ ಗೀತೆ.

ಸ್ನೇಹ ಜೀವಿ- ಹಾಸ್ಯಸ್ವಭಾವ
ಜಿ.ಕೆ.ವೆಂಕಟೇಶ್ ಚಿತ್ರರಂಗದಅಜಾತಶತೃ, ಅವರಿಗೆಎಲ್ಲರ ಕುರಿತವಿಶ್ವಾಸ, ಪ್ರತಿಯೊಬ್ಬರಲ್ಲೂ ಒಂದು ವಿಶಿಷ್ಟಪ್ರತಿಭೆಇದ್ದೇಇದೆ.ನಂಬಿದ ಅವರು, ಪ್ರೋತ್ಸಾಹನೀಡುತ್ತಿದ್ದರು. ಗಾಯಕರ ಹಾಡಿನ ಶೈಲಿ ರೂಪಿಸುವಲ್ಲಂತು ಅವರದು ಪೂರ್ಣ ಸಹಕಾರ. ಎಷ್ಟೇ ತಪ್ಪಿದ್ದರು ತಿದ್ದಿ, ಅವರ ಸ್ವಂತಿಕೆ ಗುರುತಿಸಿ ಅದನ್ನು ಬೆಳೆಸುವ ಶಕ್ತಿ ಅವರಿಗೆ ಕರಗತವಾಗಿತ್ತು.
ಹಾಗೇ ಅವರದು ಸಹಜ ಹಾಸ್ಯ ಸ್ವಭಾವ ಒಬ್ಬ ಅಭಿನಯಿಸಲು ಅವಕಾಶ ಕೇಳಿ ಬಂದ, ಏನೆಲ್ಲ ಬರುತ್ತದೆ ಎಂದು ವಿಚಾರಿಸಿದರು ವೆಂಕಟೇಶ್, ಆತ ಈಜು ಬರುತ್ತದೆ ಎಂದ, ಎಲ್ಲಿ ತೋರಿಸು ಎಂದಾಗ ಕಕ್ಕಾಬಿಕ್ಕಿಯಾದ ಆತ. ಈಜು ಕೊಳ ಎಲ್ಲಿ ಎಂದ. ಏನಯ್ಯ ಈಜು ಕೊಳವಿದ್ದರೆ ಯಾರು ಬೇಕಾದರೂ ಈಜುತ್ತಾರೆ. ನೀನು ಇಲ್ಲೇ ಈಜು ತೋರಿಸು ಎಂದರು ವೆಂಕಟೇಶ್, ಪಾಪ ಆತ ಹೌದೆಂದೇ ನಂಬಿ ಕಾಂಕ್ರಿಟ್ ನೆಲದ ಮೇಲೆ ಈಜಲು ಹೋಗಿ ಮೈ-ಕೈ ತರಚಿಕೊಂಡಾಗ ನೆರೆದಿದ್ದವರಿಗೆಲ್ಲಾ ನಗು. ಬರಹಗಾರರ ಕುರಿತು ಅಪಾರ ಗೌರವ ಹೊಂದಿದ್ದ ಅವರು ಕವಿ ಗೀತೆಗಳನ್ನು ಬೆಳ್ಳಿತೆರೆಗೆ ತಂದರು. ತಾವೇ ಸ್ವತಃ ನಿರ‍್ಮಿಸಿದ ತುಂಬಿದ ಕೊಡ ಚಿತ್ರದಲ್ಲಿ ಅತಿಂಥ ಹೆಣ್ಣು ನೀನಲ್ಲ? ಎಂಬ ನರಸಿಂಹ ಸ್ವಾಮಿ ಗೀತೆ ಅಳವಡಿಸಿದ್ದಲ್ಲದೆ. ಅದನ್ನು ತೆರೆಯ ಮೇಲೆ ಕಾಳಿಂಗರಾಯರೇ ಹಾಡುವಂತೆ ಚಿತ್ರಿಸಿದರು.
ಆ ಚಿತ್ರದಶೀರ್ಷಿಕೆಯಂತೇ ಅವರುನಿಜಕ್ಕೂ ತುಂಬಿದ ಕೊಡ ಸಾವಿನಲ್ಲೂ ನೇತ್ರದಾನ ಮಾಡುವ ಮೂಲಕ ಅಮರರಾದ ವ್ಯಕ್ತಿತ್ವ ಅವರದು.

ಹತ್ತು ವಿಶಿಷ್ಟ ಸಂಯೋಜನೆಗಳು
1. ವೈದೇಹಿ ಏನಾದಳೋ…
ಚಿತ್ರ: ದಶಾವತಾರ (1960)ರಚನೆ: ಜಿ.ವಿ.ಅಯ್ಯ್ಯರ್
ಗಾಯಕರು: ಡಾ.ಪಿ.ಬಿ.ಶ್ರೀನಿವಾಸ್

ಇದುಬಹಳ ವಿಶಿಷ್ಟವಾದಶ್ರೀರಾಮವಿಲಾಪ. ಸಾಮಾನ್ಯವಾಗಿ ಶೋಕ ಸಂದರ್ಭದಲ್ಲಿ ಬಳಕೆಯಾಗಿರುವ ತೋಡಿ ಅಥವಾ ಶುಭ ಪಂತುವರಾಳಿ ರಾಗದ ಮೇಲೆ ಇಡೀ ಗೀತೆ ರೂಪುಗೊಂಡಿದ್ದರು. ಅದರ ಅವರೋಹಣದಲ್ಲಿ ವೆಂಕಟೇಶ್ ಒಂದು ಸ್ವರಚ್ಯುತಿ ಸಾಧಿಸಿದ್ದಾರೆ. ಇದರಿಂದ ಸಂಗೀತದಲ್ಲೇ ಶೋಕದ ತೀವ್ರತೆ ಅಂತರ್ಗತವಾಗಿದೆ. ಮಸಣ ಮೌನದಿ ಸುಳಿವ ಎಂಬ ಸಾಲಿಗೆ ಬರುವ ಗದ್ಯದ ಗುಣವನ್ನು ಬೆರೆಸಿದ್ದಾರೆ. ಇದರಿಂದ ಒಂದು ಅನಿರೀಕ್ಷಿತ ಆರೋಹಣ ಸಾಧ್ಯವಾಗಿದೆ. ಇಡೀ ಗೀತೆ ಶೋಕದ ವಾತಾವರಣವನ್ನು ನಿರ್ಮಿಸಿದೆ.

2. ಯಾವ ಜನ್ಮದಮೈತ್ರಿ
ಚಿತ್ರ: ಗೌರಿ(1963)ರಚನೆ: ಕುವೆಂಪು
ಗಾಯಕರು: ಎಸ್.ಜಾನಕಿ

ಬೆಳ್ಳಿ ತೆರೆಯಲ್ಲಿ ಕವಿಗೀತೆಬಳಕೆಗೆನಾಂದಿಹಾಡಿದ ಗೀತೆ ಇದು. ಮೋಹದ ಕಲ್ಯಾಣಿ ರಾಗದ ನೆಲೆಯಲ್ಲಿ ಬೆಳೆಯುವ ಈ ಗೀತೆಯಲ್ಲಿ ವೀಣೆ ಮತ್ತು ಕೊಳಲು ಹಿತವಾದ ಹಿನ್ನಲೆ ನೀಡಿದೆ. ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು ಎನ್ನುವಲ್ಲಿ ಹೊಮ್ಮಿರುವ ಸಮುದ್ರದ ಭೊರ್ಗರೆತದ ಸದ್ದು ಕೂಡ ಗೀತೆಯ ಲಹರಿಗೆ ಭಂಗ ತಂದಿಲ್ಲ. ಇದರ ಧ್ವನಿ ಮುದ್ರಣದ ಹೊಣೆ ಹೊತ್ತವರು ಮೈಸೂರು ಅನಂತಸ್ವಾಮಿ..ಅವರು ಈ ಗೀತೆಯಿಂದ ಪ್ರಭಾವಿತರಾಗಿ ಭಾವಗೀತೆ ಕ್ಷೇತ್ರಕ್ಕೆ ಬಂದರು. ಮಾತ್ರವಲ್ಲ ಇವತ್ತಿಗೂ ಕನ್ನಡದ ಅನೇಕ ಭಾವಗೀತೆಗಳಿಗೆ ಮೂಲ ಸ್ಪಂದನವಾಗಿ ಕೇಳಿ ಬರುವುದು ಈ ಗೀತೆಯೇ

3. ಆಡಿಸಿ ನೋಡುಬೀಳಿಸಿನೋಡು
ಚಿತ್ರ: ಕಸ್ತೂರಿ ನಿವಾಸ(1971) ರಚನೆ: ಚಿ.ಉದಯಶಂಕರ್
ಗಾಯಕರು: ಡಾ.ಪಿ.ಬಿ.ಶ್ರೀನಿವಾಸ್.

ಇದು ಆತ್ಮವಲೋಕನ, ಉಪದೇಶ, ವಿಷಾದಎಲ್ಲವನ್ನು ತುಂಬಿಕೊಂಡ ಗೀತೆಚಿತ್ರದಜೀವಗೀತೆಎನ್ನಬಹುದಾದದ್ದು. ವೆಂಕಟೇಶ್ ಇದನ್ನುರೂಪಿಸುವಾಗಸಾಹಿತ್ಯ ಭಾಗಕ್ಕೆ ಹಿನ್ನಲೆ ಎನ್ನಬಲ್ಲ ಸಂಗೀತದ ಆವರ್ತ ಇಬ್ಬರು. ಇದು ರೂಪುಗೊಂಡಿದ್ದು ಸೆಲ್ಲೂ ಎಂಬ ವಿಶಿಷ್ಟ ವಾದನದಿಂದ, ಇದನ್ನು ನುಡಿಸಿದವರು ಇನ್ನೊಬ್ಬ ಹಿರಿಯ ಸಂಗೀತ ನಿರ್ದೇಶಕ ಟಿ.ಜಿ.ಲಿಂಗಪ್ಪನವರ ಸಹೋದರ ಗಿರಿಯಪ್ಪ. ಈ ಆವರ್ತವೇ ಗೀತೆಯನ್ನು ವಿಶಿಷ್ಟವಾಗಿಸಿದೆ. ಇದನ್ನೇ ಶೋಕ ಗೀತೆಯಾಗಿಸುವಾಗ ವೆಂಕಟೇಶ್ ಪಲ್ಲವಿಯ ಬದಲು ಚರಣದಲ್ಲಿ ವಿಳಂಭಗತಿ ತಂದರು. ಈ ಪ್ರಯೋಗವೇ ವಿಶಿಷ್ಟ ಪರಿಣಾಮ ಸಾಧಿಸಿತು.

4. ಬಾಳ ಬಂಗಾರನೀನು
ಚಿತ್ರ: ಬಂಗಾರದ ಮನುಷ್ಯ(1972) ರಚನೆ: ಹುಣಸೂರು ಕೃಷ್ಣಮೂರ್ತಿ
ಗಾಯಕರು: ಪಿ.ಸುಶೀಲಾ

ಜಾನಪದ ಗೀತೆರೂಪಿಸುವುದುಬೇರೆ, ಜಾನಪದ ಛಾಯೆ ಕೊಡುವುದು ಬೇರೆ. ಅಂತಹ ವಿಶಿಷ್ಟ ಪ್ರಯೋಗ ಇದು. ಇದರಲ್ಲಿ ಏಕನಾದ ಬಳಸುವ ಮೂಲಕ ಅಂತಹ ಪರಿಣಾಮ ತಂದಂತೆ. ತಾನೋ ತಂದಾನ ಎಂಬ ಹಮ್ಮಿಂಗ್ಸ್ ಇಡುವ ಮೂಲಕವೂ ಸಾಧಿಸಲಾಗಿದೆ. ಹರಿಕಾಂಭೋಜಿ ರಾಗದ ಸಂಚಾರ ಕೂಡ ಈ ಗೀತೆಯಲ್ಲಿರುವ್ಯದರಿಂದ ಅದಕ್ಕೆ ಭಾವಗೀತೆ ಅಯಾಯವೂ ಇದೆ. ಸುಶೀಲ ಅವರ ಕಂಡ ಶ್ರೀಮಂತಿಕೆಯ ಸಮರ್ಥ ಬಳಕೆಯಾದ ಈ ಗೀತೆ ಸೃಷ್ಟಿಸುವ ಲಹರಿ ವಿಶಿಷ್ಟವಾದದ್ದು.

5. ಹರಿನಾಮವೇ ಚಂದ
ಚಿತ್ರ: ಭಕ್ತ ಕುಂಬಾರ(1974)ರಚನೆ: ಹುಣಸೂರು ಕೃಷ್ಣಮೂರ್ತಿ
ಗಾಯಕರು: ಡಾ.ಪಿ.ಬಿ.ಶ್ರೀನಿವಾಸ್

ಕೀರ್ತನೆಗಳ ಮಾದರಿಯೊಂದಿಗೆ, ಅಭಂಗಗಳ ಮಾದರಿ ಹೀಗೆ ಭಕ್ತಿಗೀತೆಯಲ್ಲಿ ಇಂತಹ ಹಲವು ಮಾದರಿಗಳಿವೆ ಭಕ್ತ ಕುಂಬಾರ ಯಾವ ಪಂಥದವನು ಎಂಬುದು ನಿರ್ದಿಷ್ಟವಾಗದಿರವಾಗ, ವೆಂಕಟೇಶ್ ವಿಠಲ್ ಪಂಥದ ಹಿನ್ನಲೆ ಜೊತೆಗೆ ಕೀರ್ತನೆಯನ್ನು ಬೆರೆಸಿದ್ದಾರೆ. ಈ ಚಿತ್ರದ ಎಲ್ಲಾ ಗೀತೆಗಳಿಗೂ ಈ ವೈಶಿಷ್ಟ ಇದೆ. ಈ ಗೀತೆಯಲ್ಲಿ ಬಳಕೆಯಾಗಿರುವ ಪಕಾವಾಜ್? ಎಂಬ ವಿಶಿಷ್ಟ ವಾದ್ಯ ವಿಭಿನ್ನತೆ ರೂಪಿಸಿದೆ, ಇಡೀ ಗೀತೆಯಲ್ಲಿ ಪ್ರವಹಿಸುವ ಭಕ್ತಿರಸಕ್ಕೆ ಮೋಹನ ಕಲ್ಯಾಣಿ ಸೊಗಸಾದ ಸೇತುವೆ ನಿರ್ಮಿಸಿದೆ.

6. ವಿರಸವೆಂಬ ವಿಷಕೆ
ಚಿತ್ರ: ಭೂತಯ್ಯನಮಗಅಯ್ಯ್ಯ(1974) ರಚನೆ: ಚಿ.ಉದಯಶಂಕರ್
ಗಾಯಕರು: ಜಿ.ಕೆ.ವೆಂಕಟೇಶ್

ವೆಂಕಟೇಶ್ ಹಾಡಿರುವ ಗೀತೆಗಳಲ್ಲಿ ಇದು ತುಂಬಾ ಭಿನ್ನವಾದದ್ದು. ಇದನ್ನುಬೇರೆ ಯಾವನುರಿತ ಗಾಯಕ ಹಾಡಿದ್ದರು. ಈ ಭಿನ್ನತೆ ದಕ್ಕುತಿತ್ತೋ ಇಲ್ಲವೋ ಹೇಳುವುದು ಕಷ್ಟ. ವೆಂಕಟೇಶ್ ಅವರ ಧ್ವನಿಯಲ್ಲಿನ ರೂಕ್ಷತೆ ಇದರ ವೈಶಿಷ್ಟತೆಗೆ ಕಾರಣವಾಗಿದೆ. ಹಿನ್ನಲೆ ಗೀತೆಯಾಗಿ ಬರುವ ಇದು ಚಿತ್ರದ ಕನಿಷ್ಟ ೮-೧೦ ದೃಶ್ಯಗಳನ್ನು ತುಂಬಿಕೊಡಬಲ್ಲ ತಂತ್ರಗಾರಿಕೆಯದು. ಈ ದೃಶ್ಯಗಳಗಿಂತ ಹೆಚ್ಚಿನ ಪರಿಣಾಮ ಈ ಗೀತೆ ಮೂಡಿಸಿದೆ. ಒಂದು ರೀತಿ ಅಂತರಾತ್ಮವನ್ನು ಜಾಗೃತಗೊಳಿಸುವ ಭಾವ ಇದರಲ್ಲಿದೆ.

7. ತನವು…ಮನವು..
ಚಿತ್ರ: ರಾಜ ನನ್ನರಾಜ(1976) ರಚನೆ: ಚಿ.ಉದಯಶಂಕರ್
ಗಾಯಕರು: ಡಾ.ರಾಜ್ಕುಮಾರ್ಮತ್ತುಎಸ್.ಜಾನಕಿ

ಒಂದು ಸಂಕ್ರಮಣಕಾಲದಗೀತೆಇದು, ಪಾಶ್ಚಿಮಾತ್ಯ ಸಂಗೀತದಗಾಳಿಬೀಸಲು ಆರಂಭವಾಗಿತ್ತು. ಅದನ್ನು ಭಾರತೀಯ ಗೊಳಿಸುವ ಪ್ರಯತ್ನಗಳೂ ನೆಡೆಯುತ್ತಿದ್ದವು. ಈ ಗೀತೆ ಅಂತಹ ಪ್ರಯತ್ನ. ಇದರಲ್ಲಿ ಎರಡೂ ಮಾದರಿಯ ಸಂಲಗ್ನತ್ವ ಸ್ವರ ಪ್ರಸ್ತಾರದಲ್ಲಿ ಮಾತ್ರವಲ್ಲ ಹಾಡಿನ ನಡುವಿನ ಲಹರಿಯಲ್ಲು ಇದೆ. ಮಳೆಯ ಲಾಲಿತ್ವವನ್ನು ಅಂತರ್ಗತವಾಗಿಸಿದ ಈ ಗೀತೆಗೆ ಸಹಾಯಕರಾಗಿದ್ದವರು ಇಳಿಯರಾಜ. ತಮ್ಮ ಮೇಲೆ ಅಪಾರ ಪ್ರಭಾವ ಬೀರಿದ ಗೀತೆ ಎಂದು ಅವರೇ ಗುರುತಿಸಿದ್ದಾರೆ. ಅವರ ಹಲವಾರು ಗೀತೆಗಳಲ್ಲಿ ಈ ಸಂಯೋಜನೆಯ ಪ್ರಭಾವ ಕಾಣಬಹುದು. ರಾಜ್ ಕುಮಾರ್ ಮತ್ತು ಜಾನಕಿಯವರ ಧ್ವನಿಯ ಮಾದಕತೆಯನ್ನು ವೆಂಕಟೇಶ್ ಇದಕ್ಕೆ ಪಡೆದುಕೊಂಡಿದ್ದಾರೆ.

8. ರವಿವರ್ಮನ ಕುಂಚದ
ಚಿತ್ರ: ಸೊಸೆ ತಂದಸೌಭಾಗ್ಯ (1977)ರಚನೆ: ಆರ್.ಎನ್.ಜಯಗೋಪಾಲ್
ಗಾಯಕರು: ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ.

ಈ ಗೀತೆ ಸಾಹಿತ್ಯನೋಡಿದಾಗಪಲ್ಲವಿಜೊತೆಗೆ ಎರಡುಪೂರ್ಣಸಾಲುಮತ್ತೆಹಮ್ಮಿಂಗ್ಸ್ ಜೊತೆ ಸೇರುವ ಪದ ಪುಂಜಗಳ ಎರಡು ಚರಣ ಮಾತ್ರ ಇದೆ. ಇದು ಇಂತಹ ವಿಶಿಷ್ಟತೆಗೆ ಹೇಗೆ ಕಾರಣವಾಯಿತು ಎಂದು ಯೋಚಿಸುವಾಗ ಗೀತೆ ಸಂಯೋಜನೆಯ ಅನನ್ಯತೆ ಕಾಣುತ್ತದೆ. ಸಾಹಿತ್ಯ ಭಾಗ ಒಂದು ನೆಲೆಯಲ್ಲಿದ್ದಾರೆ.

ಕೀಬೋರ್ಡ್ ಹಾರ್ಪೊವ್ ಎಂಬ ವಿಭಿನ್ನ ವಾದ್ಯ ಹೊಮ್ಮಿಸಿದ ನಾದ ಲಹರಿ ಒಂದು ಕಡೆ ಇದೆ. ಇವೆರಡಕ್ಕೆ ಪೂರಕವಾಗಿ ಜಾನಕಿಯವರ ಕಂಠಸಿರಿ ಲಹರಿಯಂತೆ ಹರಿದಿದೆ. ಈ ಮೂರು ಒಟ್ಟಾಗುವುದು ಒಂದು ವಿಶಾಲ ನಾದ ಸಮುಚ್ಚಯದಲ್ಲಿ , ಅದೇ ಈ ಸಂಯೋಜನೆ ವಿಶಿಷ್ಟತೆ. ವೆಂಕಟೇಶ್ ಅವರ ಇಬ್ಬರು ಅಣ್ಣಂದಿರು ಒಂದೇ ವಾರದಲ್ಲಿ ತೀರಿಕೊಂಡಿದ್ದರು. ಪಿ.ಬಿ.ಶ್ರೀನಿವಾಸ್ ತಾಯಿ ತೀರಿಕೊಂಡ ಮರುದಿನ ಈ ಗೀತೆ ಹಾಡಿದರು ಇವೆಲ್ಲ ಇದು ಜನಪ್ರಿಯವಾದ ಮೇಲೆ ಕೇಳಿ ಬಂದ ಕತೆಗಳು. ಆ ಸೂತಕದ ಕತೆಗಳ ಅಗತ್ಯವಿಲ್ಲದ ಶ್ರೀಮಂತಿಕೆ ಇದರ ಸ್ವರ ಸಂಯೋಜನೆಗೆ ಇದೆ.

9. ಕರೆದರೂ ಕೇಳದೆ
ಚಿತ್ರ: ಸನಾದಿ ಅಪ್ಪಣ್ಣ(1977) ರಚನೆ: ಚಿ.ಉದಯಶಂಕರ್
ಗಾಯಕರು: ಎಸ್.ಜಾನಕಿ

ಷಹನಾಯ್ ವಾದನಕ್ಕೆ ಹೊಂದುವ ಗೀತೆ ಎಂದರೆಸಹವರ್ತಿ ಗೀತೆಯಾಗಿ ಬಿಡುವುದೇ ಹೆಚ್ಚು. ಅದರಲ್ಲೂ ಬಿಸ್ಮಿಲ್ಲಾಖಾನ್‌ರಂತಹ ದಿಗ್ಗಜರ ಷಹನಾಯ್‌ಗೆ, ಆದರೆ ವೆಂಕಟೇಶ್. ಬೆಹಾಗ್ ರಾಗದ ಒಂದು ವಿಶಾಲ ನಾದ ಸಮುಚ್ಚಯ ರೂಪಿಸಿ ಅದರಲ್ಲಿ ಚಿನ್ನದ ಗೆರೆಯಂತೆ ಬಿಸ್ಮಿಲ್ಲಾ ಖಾನ್‌ರ ಷೆಹಾನಾಯ್ ಹರಿಯುವಂತೆ ಸಂಯೋಜನೆ ಮಾಡಿದ್ದಾರೆ. ಅದಕ್ಕೆ ಅಷ್ಟೇ ಪೂರಕವಾಗಿ ಜಾನಕಿಯವರ ಕಂಠ ಸಿರಿ ಹಿಡಿದಿದೆ. ಈ ಸಂಯೋಜನೆಯ ಅನನ್ಯತೆಗೆ ಸ್ವತಃ ಬಿಸ್ಮಿಲ್ಲಾ ಖಾನ್‌ರೇ ಬೆರಗಾಗಿ ಧನ್ಯತೆ ಭಾವ ತಂದಿದೆ ಎಂದು ಉದ್ಗರಿಸಿದ್ದರಂತೆ

10. ಸುಖದಾ ಸ್ವಪ್ನಗಾನ
ಚಿತ್ರ: ಮರೆಯದ ಹಾಡು(1981) ರಚನೆ: ಆರ್.ಎನ್.ಜಯಗೋಪಾಲ್
ಗಾಯಕರು: ಎಸ್.ಜಾನಕಿ

ಈ ಚಿತ್ರದ ನಿರ್ದೆಶಕರೂ ಆದಗೀತರಚನೆಕಾರಆರ್.ಎನ್.ಜಯಗೋಪಾಲ್ ಅವರಮನಸ್ಸಿನಲ್ಲಿ ಈ ಹಾಡು ಶಬ್ದತೀತ ನೆಲೆ ತಲುಪಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ರೂಪಿಸಿದ ಪ್ರಯೋಗಶೀಲ ಗೀತೆ ಇದು. ಪಲ್ಲವಿ ನಂತರ ಪ್ರತೀ ಚರಣದಲ್ಲೂ ನಾದ ಸಮುಚ್ಚಯದ ವ್ಯಾಪ್ತಿ ಹಿಗ್ಗುತ್ತ ಹೋಗುತ್ತದೆ. ಕೊನೆಯಲ್ಲಿ ಗೀತೆ ಮುಗಿದ ನಂತರವೂ ಇನ್ನೊಂದು ವಿಸ್ತಾರ ಕೇಳುಗನ ಮನದಲ್ಲಿ ರೂಪ ತಾಳುತ್ತದೆ. ಅದೇ ಸುಖದ ಸ್ವಪ್ನಗಾನ ಎಂದು ಜಯಗೋಪಾಲ್ ಬಯಸಿದ್ದರು. ಅವರ ಅಭಿಲಾಷೆಯನ್ನು ಅಕ್ಷರಶಃ ಸಾಕ್ಷಾತ್ಕರಿಸಿದ ಸಂಯೋಜನೆ ಇದು ಕೀರವಾಣಿಯ ವಿಶಿಷ್ಟ ಸ್ವರ ಪ್ರಸ್ತಾರವೂ ಇದಕ್ಕೆ ಪೂರಕವಾಗಿದೆ ಜಾನಕಿಯವರ ಕಂಠಸಿರಿ ಅದನ್ನು ವಾಸ್ತವಗೊಳಿಸಿದೆ.
(ಈ ಲೇಖನ ರಚಿಸಲು ಪ್ರೇರಣೆ ನೀಡಿದ ಆರ್.ಎನ್. ಜಯಗೋಪಾಲ್ ಹಲವು ಸಲಹೆ ನೀಡಿದ ಗೀತಪ್ರಿಯ, ಎಸ್.ಕೆ.ಭಗವಾನ್, ಎಸ್.ಜಾನಕಿ, ಎಸ್.ಆರ್.ರಾಮಕೃಷ್ಣ, ಬಾಲಿ, ಮಾಲತಿಶರ್ಮ ಅವರಿಗೆ ಕೃತಜ್ಞತೆಗಳು)