ಸೂರ್ಯ ಕಿರಣ್ ಜೋಯಿಸ್ ಅವರು ಧೋಬಿ ಘಾಟ್ ಕುರಿತು ಬರೆದ ಬರಹವಿದು. ಓದಿ, ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಮಾನವೀಯ ಕೊಂಡಿಗಳ ಹುಡುಕಾಟವನ್ನೇ ಕಥೆಯ ಜೀವಾಳವಾಗಿಸಿಕೊಂಡಿರುವ “ಧೋಬಿ ಘಾಟ್” ಚಿತ್ರ ಭಾರತೀಯ ಚಲನಚಿತ್ರದ ಸಂದರ್ಭದಲ್ಲಿ ಗಮನಾರ್ಹ ಪ್ರಯತ್ನ. ಸ್ಪಷ್ಟ ಪ್ರಾರಂಭ ಯಾ ಅಂತ್ಯ ಎರಡೂ ಇಲ್ಲದ ಈ ಚಿತ್ರ, ಎಡಬಿಡದ ದುಡಿಮೆಯಲ್ಲೇ ಬದುಕು ಕಟ್ಟಿಕೊಳ್ಳುವ ಮುಂಬೈ ಎಂಬ ವಿರಾಟ್ ನಗರದ ಜನರ ಜೀವನದ ಪರಿಚ್ಛೇದವೊಂದನ್ನು ಕಾಣಿಸುತ್ತದೆ. ನಾಲ್ಕು ವಿಭಿನ್ನ ಹಿನ್ನೆಲೆಯುಳ್ಳ ವಿಭಿನ್ನ ವರ್ಗಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಈ ಚಿತ್ರದ ಪ್ರಮುಖ ಪಾತ್ರಗಳು. ಸಂಬಂಧವೇ ಇರದ ನಾಲ್ಕು ವ್ಯಕ್ತಿಗಳು ಪರಸ್ಪರರ ಬದುಕುಗಳನ್ನು ಪ್ರಭಾವಿಸುವ ಸೂಕ್ಷ್ಮ ದರ್ಶನ ಚಿತ್ರಕಥೆಯಲ್ಲಿ ಉದ್ಬೋಧಗೊಳ್ಳುತ್ತದೆ. ನಾಟಕೀಯತೆ, ಅತಿ ಅನಿಸಿಬಿಡುವ ಭಾವುಕತೆ ಹಾಗೂ ಸಿನೆಮಾದ ಸಿದ್ಧ ವ್ಯಾಕರಣದ ಕಟ್ಟಳೆಗಳನ್ನು ಬದಿಗಿಟ್ಟು ದೃಶ್ಯಕಥನದಲ್ಲಿ ಒಂದು ವಿಶಿಷ್ಟ ಪ್ರಯೋಗವಾಗಿ ಧೋಬಿ ಘಾಟ್ ಹೊರಹೊಮ್ಮಿದೆ.
ನಾಲ್ಕು ಪಾತ್ರಗಳಲ್ಲಿ ಯಾಸ್ಮಿನ್(ಕೃತಿ ಮಲ್ಹೋತ್ರ) ಪಾತ್ರದ ನೇರ ಪರಿಚಯವೇ ಇಲ್ಲ. ಸ್ವತಃ ಯಾಸ್ಮಿನ್ ಳೇ ದಾಖಲಿಸಿಟ್ಟ ದೃಶ್ಯಮುದ್ರಿಕೆಗಳಿಂದ (Video Cassettes) ಆಕೆಯ ಮತ್ತು ಆಕೆಯ ಬದುಕಿನ ಪರಿಚಯವಾಗುತ್ತದೆ. ಪ್ರಾಯಶಃ ಇನ್ನುಳಿದ ಪಾತ್ರಗಳಿಂದ ಯಾಸ್ಮಿನ್ ಳನ್ನು ಬೇರ್ಪಡಿಸಿ ನೋಡುವ ಉದ್ದೇಶ ಇರಬಹುದು. ಅವಳ ಬದುಕಿನ ವಿವರಗಳನ್ನು ನಿರೂಪಿಸಲು ಯಕಃಶ್ಚಿತ್ ಅವಳ ವೀಡಿಯೋ ಕ್ಯಾಮೆರಾದ ದೃಶ್ಯತುಣುಕುಗಳನ್ನೇ ತೋರಿಸಲಾಗಿದೆ. ಸಣ್ಣದೊಂದು ಊರಿನಿಂದ ಮುಂಬೈಗೆ ತನ್ನ ಪತಿಯ ಜೊತೆ ಕಾಲಿಡುವ ಯಾಸ್ಮಿನ್, ಆ ಮಹಾನಗರದ ಜೊತೆಗಿನ ಆಪ್ತ ಅನುಭವಗಳನ್ನೆಲ್ಲಾ ತನ್ನ ಅಣ್ಣನಿಗೆ ವಿವರಿಸಲು ಪುಟ್ಟ ಪುಟ್ಟ ದೃಶ್ಯಮುದ್ರಿಕೆಗಳಲ್ಲಿ ಚಿತ್ರಿಸಿಟ್ಟಿರುತ್ತಾಳೆ. ತನಗಾದ ಸಂಭ್ರಮಗಳು, ದುಗುಡಗಳು, ನಗರದ ಬೀದಿಯಲ್ಲಿ ನೋಡಿದ ಗಣಪತಿ ವಿಸರ್ಜನೆಯ ಮೆರವಣಿಗೆ, ಸಂಜೆ ವಿಹಾರಕ್ಕೆಂದು ಸಾಗರದ ಕಿನಾರೆಯಲ್ಲಿ ಅಡ್ಡಾಡುವ ಜನರು, ಸದಾ ಮೌನವಹಿಸಿರುವ ಪಕ್ಕದ ಮನೆಯ ಅಜ್ಜಿ, ಎದುರುಗಡೆ ಅಪಾರ್ಟ್ಮೆಂಟ್ ನಲ್ಲಿ ಮನೆಗೆಲಸಕ್ಕೆ ಬರುವ ಹೆಂಗಸು, ಆಕೆಯ ಮಗಳು, ಅವರ ನೋವು-ನಲಿವು, ಹೀಗೆ ನಗರದ ನಾನಾ ವಿಲಕ್ಷಣ ಮಿಡಿತಗಳಿಗೆ ಯಾಸ್ಮಿನ್ ಳ ಸ್ಪಂದನಗಳು ಅವಳದೆ ಮಾತುಗಳ ಜೊತೆಯಲ್ಲಿ ಆ ಮುದ್ರಿಕೆಗಳಲ್ಲಿ ಅಡಗಿರುತ್ತವೆ.
ಅರುಣ್ ಎಂಬ ಚಿತ್ರಕಲಾವಿದ (ಆಮೀರ್ ಖಾನ್) ಯಾಸ್ಮಿನ್ ಇದ್ದ ಮನೆಯನ್ನು ಬಾಡಿಗೆಗೆಂದು ಕೊಂಡಾಗ ಅಚಾನಕ್ಕಾಗಿ ಈ ದೃಶ್ಯಮುದ್ರಿಕೆಗಳು ಅವನಿಗೆ ಸಿಗುತ್ತವೆ. ತಾನು ಇಷ್ಟು ಕಾಲ ವಾಸ ಮಾಡಿದ ಮುಂಬೈ ನಗರವನ್ನು ಅರುಣ್, ಯಾಸ್ಮಿನ್ ಳ ಕಣ್ಣುಗಳಿಂದ ಅನುಭವಿಸತೊಡಗುತ್ತಾನೆ. ಹಾಗೆಯೆ ನಿಧಾನವಾಗಿ ಅವಳ ಅನುಭವಗಳನ್ನೆಲ್ಲಾ ಒಂದೊಂದಾಗಿ ತನ್ನದಾಗಿಸಿಕೊಳ್ಳುತ್ತಾ ಚಿತ್ರಕಲಾಕೃತಿಯೊಂದರ ಸೃಷ್ಟಿಪ್ರಕ್ರಿಯೆಯಲ್ಲಿ ತೊಡಗುತ್ತಾನೆ.
ಹಿಂದೊಮ್ಮೆ ಅರುಣ್ ನ ಕಲಾಕೃತಿಗಳ ಪ್ರದರ್ಶನವೊಂದರಲ್ಲಿ ಅವನು ಪರಿಚಯವಾಗಿದ್ದ ನ್ಯೂಯಾರ್ಕ್ ನ ಶಾಯ್ ಎಂಬ ಇನ್ವೆಸ್ಟ್ಮೆಂಟ್ ಬ್ಯಾಂಕರ್ (ಮೋನಿಕಾ ಡೋಗ್ರಾ) ವ್ಯಾಸಂಗದ ಸೂಟಿಯ ಮೇಲೆ ಮುಂಬೈಗೆ ಬಂದ ಹುಡುಗಿ. ಹವ್ಯಾಸಿ ಛಾಯಾಗ್ರಾಹಕಿ. ಮುಂಬೈ ನಗರವಾಸಿಗಳ ದುಡಿಮೆಯ ದಾರಿಗಳು, ಅವುಗಳ ವಿವಿಧ ರೂಪಗಳನ್ನು ಕ್ಯಾಮೆರಾದ ಕಣ್ಣಿನಿಂದ ಹಿಡಿದಿಟ್ಟುಕೊಳ್ಳುವ ಕುತೂಹಲ, ಹಂಬಲ ಅವಳದ್ದು. ಪರಿಚಯದಿಂದ ಆಕಸ್ಮಿಕವಾಗಿ ಶಾಯ್ ನೊಡನೆ ಉಂಟಾಗುವ ದೈಹಿಕ ಸಂಬಂಧದಿಂದ ಎಲ್ಲಿ ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವುದೋ ಎಂದು ದಿಗಿಲುಗೊಳ್ಳುವ ಅರುಣ್, ಅದನ್ನು ಅವಳಿಗೆ ತಿಳಿಯಪಡಿಸಿದಾಗ ಅವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿದರೂ ಶಾಯ್ ಗೆ ಅರುಣ್ ನ ಕುರಿತಾಗಿ ಕುತೂಹಲಭರಿತ ಆಕರ್ಷಣೆ ಇದ್ದೇ ಇರುತ್ತದೆ. ನಗರ ಜೀವನದ ಎಲ್ಲಾ ಜೀವಂತಿಕೆಯನ್ನು ದೂರದಿಂದ ತನ್ನ ಕ್ಯಾಮೆರಾದಲ್ಲಿ ನೋಡುತ್ತಾ ಸೆರೆ ಹಿಡಿದಿಡುವ ಪ್ರವೃತ್ತಿಯ ಶಾಯ್, ದೂರವಾದ ಅರುಣ್ ನ ವಿವರಗಳನ್ನು ಧೋಬಿಯ ಹುಡುಗ ಮುನ್ನಾನಿಂದ (ಪ್ರತೀಕ್ ಬಬ್ಬರ್) ಪಡೆಯಲಾರಂಭಿಸುತ್ತಾಳೆ. ಆದರೂ ಅರುಣ್ ನ ಎದುರು ಸುಳಿದಾಡುವುದಕ್ಕೆ ಹಿಂಜರಿಯುತ್ತಾಳೆ.
ಸಿನೆಮಾದಲ್ಲಿ ನಟನಾಗುವ ದೊಡ್ಡ ಕನಸಿಟ್ಟುಕೊಂಡಿರುವ ಮುನ್ನಾ ಧೋಬಿಯಲ್ಲಿ ಕೆಲಸ ಮಾಡುವ ಹುಡುಗ. ಪ್ರತಿ ಮನೆಯಿಂದ ಬಟ್ಟೆಗಳನ್ನು ಸಂಗ್ರಹಿಸಿ, ಒಗೆದು, ಇಸ್ತ್ರಿ ಮಾಡಿ ಪುನಃ ಆ ಮನೆಗಳಿಗೆ ಬಟ್ಟೆಗಳನ್ನು ತಲುಪಿಸುವುದು ಅವನ ಕಾಯಕ. ರಾತ್ರಿ ಪಾಳಿಯಲ್ಲಿ ಅವನದು ಇನ್ನೊಂದು ಬಗೆಯ ಕಸುಬು. ಮನೆಯೊಳಗೆ ಸೇರಿ ಹಾವಳಿಯಿಡುವ ಬೀದಿಯ ಇಲಿ, ಹೆಗ್ಗಣಗಳನ್ನು ಹೊಡೆದು ಸಾಯಿಸಿವುದು. ಅರುಣ್ ಗೆ ಬಹುದಿನಗಳಿಂದ ಪರಿಚಿತನಾದ ಈತ ಶಾಯ್ ಗೆ ಅರುಣ್ ನ ಬದಲಾದ ಮನೆಯ ವಿಳಾಸ ನೀಡುತ್ತಾನೆ. ಶಾಯ್ ಛಾಯಾಗ್ರಾಹಕಿ ಎಂದು ತಿಳಿದೊಡನೆ ತನ್ನ ಬೇರೆ ಬೇರೆ ಭಾವ-ಭಂಗಿಗಳ ಛಾಯಾಚಿತ್ರಗಳ ಸಂಪುಟ (Acting portfolio) ಮಾಡಿಕೊಡಲು ಅವಳನ್ನು ಕೇಳಿಕೊಳ್ಳುತ್ತಾನೆ. ಇದಕ್ಕೆ ಪ್ರತಿಯಾಗಿ ಶಾಯ್, ಅವಳಿಗೆ ಧೋಬಿ ಘಾಟ್ ಹಾಗೂ ಮಾರುಕಟ್ಟೆಗಳಲ್ಲಿ ದುಡಿಯುವ ಜನರ ಚಿತ್ರಗಳನ್ನು ಸೆರ ಹಿಡಿಯಲು ಅವನ ಸಹಾಯ ಬೇಕೆನ್ನುತ್ತಾಳೆ. ಮಾತ್ರವಲ್ಲದೆ ಅರುಣ್ ಬಗ್ಗೆಯೂ ಮುನ್ನಾನಿಂದ ತಿಳಿದುಕೊಳ್ಳುತ್ತಾಳೆ. ಇಬ್ಬರ ನಡುವೆ ಸ್ನೇಹ ಏರ್ಪಡುತ್ತದೆ.
ಮುನ್ನಾ ತನ್ನನ್ನು ಇಷ್ಟಪಡುತ್ತಿರಬಹುದೆಂಬ ಸುಳಿವುಗಳಿದ್ದರೂ ಅವಳ ಆಸಕ್ತಿಯೆಲ್ಲಾ ಅರುಣ್ ನನ್ನು ದೂರದಿಂದ ಗಮನಿಸುವುದರಲ್ಲಿ ಮತ್ತು ಛಾಯಾಗ್ರಹಣದಲ್ಲೇ ಇರುತ್ತದೆ.
ಯಾಸ್ಮಿನ್ ಳ ಬದುಕಿನ ಎಳೆಗಳನ್ನು ಹಿಡಿದ ಅರುಣ್ ಒಂದು ರೀತಿಯ ತಿಳಿಭ್ರಾಂತಿಗೆ ಶರಣಾಗಿರುತ್ತಾನೆ. ಇವನ ಸೆಳೆತದಲ್ಲಿ ಶಾಯ್, ಅವಳ ಗುಂಗಿನಲ್ಲಿ ಮುನ್ನಾ. ಹೀಗೆ ವಿಭಿನ್ನ ಹಿನ್ನೆಲೆಯುಳ್ಳ ಜನರ ಮಧ್ಯೆ ತಾನಾಗೆಯೇ ರೂಪುಗೊಳ್ಳುವ ಅಗೋಚರ ನವಿರು ಸಂಪರ್ಕಗಳನ್ನು ನೇರ ಹಾಗೂ ಪ್ರಾಮಾಣಿಕ ನಿರೂಪಣೆಯೊಂದಿಗೆ ನಗರ ಜೀವನದ ಕ್ಯಾನ್ವಾಸಿನಲ್ಲಿ ಚಿತ್ರಿಸಿದ್ದಾರೆ ಚಿತ್ರದ ನಿರ್ದೇಶಕಿ ಕಿರಣ್ ರಾವ್. ಮಹಾನಗರದ ದಿಕ್ಕೆಟ್ಟ ಓಟದಲ್ಲಿ ಮಾನವೀಯ ಕೊಂಡಿಗಳು ಒಂದಕ್ಕೊಂದು ಕೂಡಿಕೊಂಡು ಅದರಿಂದ ಹುಟ್ಟುವ ಸಂಬಂಧಗಳ ನಿರಂತರ ಹುಡುಕಾಟ ಧೋಬಿ ಘಾಟ್ ನಲ್ಲಿ ಕಥಿತವಾಗುತ್ತದೆ. ಚಿತ್ರಿಕೆಗಳ ಜೀವದ್ರವದಂತೆ ಚಿತ್ರದ ಹಿನ್ನೆಲೆ ಸಂಗೀತವಿದೆ. ಅದರಲ್ಲೂ ಯಾಸ್ಮಿನ್ ಳ ಬದುಕಿನ ಒಳಗಿಳಿಯುವ ಅರುಣ್ ನ ಅಂತರ್ಮುಖಿ ಧ್ಯಾನದ ಸನ್ನಿವೇಶಗಳನ್ನು ಪರದೆಯ ಮೇಲೆ ಕಟ್ಟಿಕೊಡುವಲ್ಲಿ ಗುಸ್ತಾವೋ ಸಂತಾವೋಲಲ್ಲರ ಸಂಗೀತ ಪ್ರಮುಖ ಪಾತ್ರ ವಹಿಸಿದೆ. ವಿಭಿನ್ನ ಕೋನ, ಬೆಳಕು ಹಾಗೂ ಬಣ್ಣಗಳ ವಿನ್ಯಾಸದಲ್ಲಿ ನಗರದ ಆತ್ಮವನ್ನೇ ಬಿಂಬಿಸುವಂಥ ಮುಂಬೈನ ಚಿತ್ರಗಳು ತುಷಾರ್ ಕಾಂತಿ ರೇ ಅವರ ಛಾಯಾಗ್ರಹಣದ ಹೆಗ್ಗಳಿಕೆ. ಮಾತ್ರವಲ್ಲ, ಇಡೀ ಚಿತ್ರದ ಕಲಾಮೌಲ್ಯ ವರ್ಧಿಸಲು ಪೂರಕವಾಗಿದೆ.
ಪ್ರೇಕ್ಷಕನ ಭಾವಾವರಣದಲ್ಲಿ ಅರಳುವ ಕಥೆ, ನಾಲ್ಕು ಪಾತ್ರಗಳ ಬದುಕಿನಲ್ಲಿ ಒದಗಿ ಬರುವ ಹಠಾತ್ ತಿರುವುಗಳೊಂದಿಗೆ ಸ್ತಬ್ಧವಾಗುತ್ತದೆ. ಇದರೊಂದಿಗೆ ಚಿತ್ರ ಅಂತ್ಯಗೊಂಡರೂ ಪಾತ್ರಗಳ ಸಂಬಂಧದ ತೊಳಲಾಟಗಳು ಪ್ರೇಕ್ಷಕನ ಆಳಕ್ಕಿಳಿದು ಬೆಳೆಯಲಾರಂಭಿಸುತ್ತವೆ. ಯಾಸ್ಮಿನ್ ಳ ಕಣ್ಣುಗಳ ಮುಂಬೈ, ಅರುಣ್ ನ ದಿಗ್ಭ್ರಮೆ, ಅರುಣ್ ನ ಹಿಂಬಾಲಿಸುವ ಶಾಯ್ ಮತ್ತವಳ ಕ್ಯಾಮೆರಾದಲ್ಲಿ ನಿಶ್ಚಲವಾಗುವ ಮುಂಬೈ ಬದುಕು, ಮುನ್ನಾನ ಭ್ರಮನಿರಸನ, ಒಬ್ಬರ ಜಾಡಿನಲ್ಲಿ ಮತ್ತೊಬ್ಬರ ಓಟ, ಒಬ್ಬರ ಇರುವು ಬಯಸಿ ಮತ್ತೊಬ್ಬರ ಹುಡುಕಾಟ, ಉಪ್ಪರಿಗೆಯಿಂದುಪ್ಪರಿಗೆಗೆ ಜಿಗಿದು ಕೈತಪ್ಪಿ ಹೋಗುವ ಕನಸುಗಳು, ಇವೆಲ್ಲವನ್ನೂ ಒಳಸೆಳೆದಿಟ್ಟುಕೊಂಡು ದಣಿವಿನ ಹೆಸರೇ ಇಲ್ಲದ ಚಲಿಸುತ್ತಲೇ ಇರುವ ಶಹರದೊಂದಿಗೆ ಕಥೆ ಪ್ರೇಕ್ಷಕನ ಮನಸಿನಲ್ಲಿ ಬೆಳೆಯುತ್ತಲೇ ಹೋಗುತ್ತದೆ.
good one.
ಚಿತ್ರ ಅಷ್ಟೊ೦ದು ಹಿಡಿಸಲಿಲ್ಲ. ಮುನ್ನ ಹಾಗೂ ಶಾಯ್ ನಡುವಿನ ಸ೦ಬ೦ಧ ಬಲವ೦ತವಾಗಿ ಮೂಡಿ ಬ೦ದಿದೆ ಅನಿಸುತ್ತದೆ. ಮುನ್ನ ಸ್ವಲ್ಪ ಜಾಸ್ತೀಯೇ ಪೋಶ್ ಆಗಿದ್ದಾನೆ. ನಟನಾಗಬೇಕೆ೦ಬ ಕನಸಿಗೂ ಅವನು ಲೆಸ್ಸ್ ಕಾ೦ಫಿಡೆನ್ಸ್ ಗೂ ಸ೦ಬ೦ಧ ಕಲ್ಪಿಸಲು ಕಷ್ಟವಾಗುತ್ತದೆ