ವಿ. ಎನ್. ಲಕ್ಷ್ಮೀನಾರಾಯಣರು ಕೃಪಾಕರ ಸೇನಾನಿಯವರ “ದಿ ಪ್ಯಾಕ್” ಮತ್ತು ಅದಕ್ಕೆ ಗ್ರೀನ್ ಆಸ್ಕರ್ ಪ್ರಶಸ್ತಿ ಸಂದ ನೆಲೆಯಲ್ಲಿ ಬರೆದಿರುವ ಲೇಖನವಿದು. ಎಲ್ಲದರ ಬಗ್ಗೆಯೂ ಸಮಗ್ರ ಮಾಹಿತಿ ಒದಗಿಸುವ ಈ ಲೇಖನವನ್ನು ಓದಿ ಅಭಿಪ್ರಾಯಿಸಿ. ಅವರಿಗೂ ಮಿಂಚಂಚೆ ಕಳುಹಿಸಬಹುದು virupasamudra@gmail.com.

ಕೃಪಾಕರ-ಸೇನಾನಿ ನಿರ್ಮಿಸಿರುವ ದಿ ಪ್ಯಾಕ್ ಚಿತ್ರಪ್ರದರ್ಶನ ಮೈಸೂರು ಫಿಲ್ಮ್ ಸೊಸೈಟಿಯ ಸಹಯೋಗದೊಂದಿಗೆ ಮೈಸೂರಿನಲ್ಲಿ ನವಂಬರ್ 21 ರಂದು ಏರ್ಪಾಡಾಗಿತ್ತು. ಜೂನ್ 13ರಿಂದ ಜುಲೈ 17 ರ ವರೆಗೆ 5 ಭಾನುವಾರಗಳಂದು 5 ಎಪಿಸೋಡ್ ಗಳ ಈ ಚಿತ್ರವನ್ನು ಅನಿಮಲ್ ಪ್ಲಾನೆಟ್ ಡಿಸ್ಕವರಿಚಾನಲ್ ನಲ್ಲಿ ಪ್ರಸಾರಮಾಡಿತ್ತು. ಕಲಾಮಂದಿರದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ಮತ್ತೆ ಮತೆ ಮಾಡುತ್ತಿದ್ದ ದೀರ್ಘಕರತಾಡನದಲ್ಲಿ ಚಿತ್ರದ ಬಗೆಗಿನ ಸಂತೋಷ, ಕನ್ನಡಿಗ ವನ್ಯಜೀವಿ ಚಿತ್ರನಿರ್ಮಾಪಕದ್ವಯರ ಬಗೆಗಿನ ಮೆಚ್ಚುಗೆ, ಅಭಿಮಾನಗಳು ವ್ಯಕ್ತವಾಗುತ್ತಿದ್ದವು.

ನಾಡಿಗಿಂತ ಕಾಡಿನಲ್ಲಿ ಹೆಚ್ಚು ಕಾಲಕಳೆಯುವ ಈ ಬಿಂಬಗ್ರಾಹಕ ಜೋಡಿ ಕರ್ನಾಟಕ ಮತ್ತು ತಮಿಳುನಾಡಿನ ಕಾಡುಗಳಲ್ಲಿ ತಮ್ಮ ಸಹಾಯಕರೊಂದಿಗೆ ವರ್ಷಾನುಗಟ್ಟಲೆ ಸಂಚರಿಸಿ, ಕಾದು-ಕುಳಿತು ಕಲೆಹಾಕಿರುವ ವನ್ಯಜೀವಿ ಕುರಿತ ವೈವಿಧ್ಯಮಯ, ಅಪರೂಪದ ಚಿತ್ರಸಾಮಗ್ರಿ ದಿ ಪ್ಯಾಕ್ ಚಿತ್ರಕ್ಕೆ ಆಧಾರ. ಈ ಚಿತ್ರನಿರ್ಮಾಣ ಯೋಜನೆಗೆ ಜಾಗತಿಕ ವನ್ಯಜೀವಿ-ಮನರಂಜನಾ ಸಂಸ್ಥೆಗಳು ಹಣ ಒದಗಿಸಿವೆ. ಹೀಗೆ ವಿವಿಧ ಬಗೆಯ ವನ್ಯ-ನಗರ ಸಂಪನ್ಮೂಲಗಳನ್ನು ಬಳಸಿಕೊಂಡು ಕಾಡುನಾಯಿಗಳ ಜೀವನಶೈಲಿಯನ್ನು ಕೇಂದ್ರ ದಲ್ಲಿರಿಸಿ ನಿರ್ಮಿಸಿದ ಕಥಾಸಾಕ್ಷ್ಯ್ರಚಿತ್ರ ದಿ ಪ್ಯಾಕ್. ಇದು ಕೃಪಾಕರ-ಸೇನಾನಿ ಕಾಡುನಾಯಿಗಳ ಜೀವನಶೈಲಿಯ ಬಗೆಗೆ ನಿರ್ಮಿಸಿರುವ ಎರಡನೆಯ ಚಿತ್ರ. ಮೊದಲನೆಯದು ವೈಲ್ಡ್ ಡಾಗ್ ಡೈರೀಸ್ ಈ ಮೊದಲು ಮೈಸೂರಿನಲ್ಲಿ ಪ್ರದರ್ಶಿತವಾದ ಕಥಾ ಸಾಕ್ಷ್ಯಚಿತ್ರ. ನಾವು ನೋಡಿದ ಎರಡೂ ಚಿತ್ರಗಳ ಆವೃತ್ತಿಗಳು ಜಾಗತಿಕ ಪ್ರದರ್ಶನಕ್ಕೆಂದು ಸಂಕಲಿಸಿದ ಆವೃತ್ತಿಗಳಿಗಿಂತ ತಾಂತ್ರಿಕ ಕಾರಣಗಳಿಂದಾಗಿ ಭಿನ್ನವಾಗಿರಬಹುದು.

ಮೈಸೂರಿನಲ್ಲಿ ಪ್ರದರ್ಶಿತವಾದ ದಿ ಪ್ಯಾಕ್ ನ ಆವೃತ್ತಿ ಒಟ್ಟು ಸುಮಾರು 2 ಗಂಟೆ ಅವಧಿಯ ಐದು ಎಪಿಸೋಡ್ ಗಳ ಸರಮಾಲೆ. ಇದರ ಪ್ರದರ್ಶನದ ಸಂದರ್ಭದಲ್ಲಿ ಈ ಚಿತ್ರಕ್ಕೆ ಗ್ರೀನ್ ಆಸ್ಕರ್ ಪ್ರಶಸ್ತಿ ಪಡೆದ, ಮೊದಲ ಭಾರತೀಯರು, ಮೊದಲ ಕನ್ನಡಿಗರು ನಿರ್ಮಿಸಿದ ಮೊದಲ ಏಷ್ಯನ್ ಚಿತ್ರ ಎಂಬ ಹೆಗ್ಗಳಿಕೆ ಇದೆ ಎಂಬ ಸಂತೋಷವನ್ನು-ಅಭಿಮಾನವನ್ನು ಉದ್ದೀಪಿಸುವ ವಿವರಣೆ ದೊರೆಯಿತು. ಇದಕ್ಕೆ ಸಹಜವಾಗಿಯೇ ಸಭಿಕರಿಂದ ಪ್ರಚಂಡ ಕರತಾಡನದ ಸ್ವಾಗತ-ಮೆಚ್ಚುಗೆ ದೊರೆಯಿತು. ಜಾಗತಿಕ ಮಟ್ಟದಲ್ಲಿ ಗ್ರೀನ್ ಹೆಸರಿನಲ್ಲಿ ಜನಪ್ರಿಯವಾಗಿರುವ ಮೂರು ಧನಸಹಾಯ-ಪ್ರಶಸ್ತಿ ಗಳು ಅಸ್ತಿತ್ವದಲ್ಲಿವೆ. ಅವು:
1.ವನ್ಯಜೀವಿ ಸಂರಕ್ಷಣೆಗೆಂದು ವೈಟ್‌ಲೆ ಫಂಡ್ ಫಾರ್ ನೇಚರ್ ( ಡಬ್ಲ್ಯು ಎಫ್ ಎನ್ ) ಎಂಬ ಸಂಸ್ಥೆ ಕೊಡುವ ವೈಟ್‌ಲೆ ಸ್ವರ್ಣಪ್ರಶಸ್ತಿ. ಇದು ಗ್ರೀನ್ ಆಸ್ಕರ್ ಎಂದೇ ಪ್ರಸಿದ್ಧಿಯಾಗಿದೆ.
2. ಪರಿಸರ ಮತ್ತು ನೈಸರ್ಗಿಕ ಶಕ್ತಿಸಂಪನ್ಮೂಲ ಸಂರಕ್ಷಣೆಗೆ (ಗ್ರೀನ್ ಎನರ್ಜಿ) ಆಷ್ಡೆನ್ ಟ್ರಸ್ಟ್ ಎಂಬ ಸಂಸ್ಥೆ ಕೊಡುವ ಆಷ್ಡೆನ್ ಪ್ರಶಸ್ತಿ.
3. ಪರಿಸರ-ವನ್ಯಜೀವಿ-ಮನರಂಜನೆಯ ಚಿತ್ರಗಳ ಜಾಗತಿಕ ಚಿತ್ರೋತ್ಸವ ವೈಲ್ಡ್ ಸ್ಕ್ರೀನ್ ಫೆಸ್ಟಿವಲ್ ನ 21 ವಿಭಾಗಗಳಲ್ಲಿ ಪ್ರತಿ ವಿಭಾಗದಲ್ಲೂ ಅತ್ಯುತ್ತಮವೆಂದು ಪರಿಗಣಿಸಲಾಗುವ ಚಿತ್ರಕೆ ವೈಲ್ಡ್ ಸ್ಕ್ರೀನ್ ಫೆಸ್ಟಿವಲ್ ನಲ್ಲಿ ಕೊಡುವ ಪಾಂಡ ಪ್ರಶಸಿಗಳು ಮತ್ತು ಗೋಲ್ಡನ್ ಪಾಂಡ ಎಂಬ ಅತ್ಯುನ್ನತ ಪ್ರಶಸ್ತಿ. ಇವೂ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಸಮನಾದ, ಗ್ರೀನ್ ಆಸ್ಕರ್ ಎಂದು ಜನಪ್ರಿಯವಾಗಿರುವ ಪ್ರಶಸ್ತಿಗಳು.

ಬ್ರಿಟಿಷ್ ಮೂಲದ ಈ ಸಂಸ್ಥೆಗಳಲ್ಲಿ ಮೊದಲನೆಯದಕ್ಕೆ ಬ್ರಿಟನ್ ಅರಸೊತ್ತಿಗೆಯ ಸಹಾಯವಿದ್ದು ರಾಯಲ್ ಜಿಯಗ್ರಾಫಿಕಲ್ ಸೊಸೈಟಿಯಲ್ಲಿ ಜರುಗುವ ವಾರ್ಷಿಕ ಸಮಾರಂಭದಲ್ಲಿ ವನ್ಯಜೀವಿ ಸಂರಕ್ಷಣೆಗೆ ಅಸಾಧಾರಣ ಸೇವೆ ಸಲ್ಲಿಸುವವರಿಗೆ ವೈಟ್ ಲೆ ಸವರ್ಣಪ್ರಶಸ್ತಿ ದೊರೆಯುತ್ತದೆ. ಈ ಹದಿನೇಳು ವರ್ಷಗಳಲ್ಲಿ ಇಲ್ಲಿಯವರೆಗೆ (ಮೈಸೂರು ದೊರೆಸ್ವಾಮಿ ಮಧುಸೂದನರವರೂ) ಸೇರಿದಂತೆ ಒಟ್ಟು ಹತ್ತು ಜನ ಭಾರತೀಯರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ. ಬ್ರಿಟಿಷ್ ಸರ್ಕಾರದ ಸಹಯೋಗಪಡೆದ ಆಷ್ಡೆನ್ ಟ್ರಸ್ಟ್ ಸ್ಥಿರ ಶಕ್ತಿಸಂಪನ್ಮೂಲ (ಗ್ರೀನ್ ಎನರ್ಜಿ) ಗಳ ಸಂವರ್ಧನೆಗೆ ಸಹಾಯಕವಾಗುವ ಕೆಲಸಮಾಡಿದವರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಗ್ರೀನ್ ಎನರ್ಜಿ ಪ್ರಶಸ್ತಿ ಪಡೆದವರಲ್ಲೂ ಭಾರತೀಯರು ಇದ್ದಾರೆ. ಭಾರತೀಯರು ತೊಡಗಿಸಿಕೊಂಡಿರುವ ವಿದೇಶೀ ಸಂಸ್ಥೆಗಳಿವೆ.

ವೈಲ್ಡ್ ಸ್ಕ್ರೀನ್ ಫೆಸ್ಟಿವಲ್ ಹೆಸರೇ ಹೇಳುವಂತೆ ಜಾಗತಿಕ ಮಟ್ಟದ ಪರಿಸರ ಮತ್ತು ವನ್ಯಜೀವಿ-ಮನರಂಜನಾ ಚಿತ್ರಗಳ ಸ್ಪರ್ಧಾತ್ಮಕ ಉತ್ಸವ. 2 ವರ್ಷಕ್ಕೊಮ್ಮೆ ಬ್ರಿಸ್ಟಲ್ ನಲ್ಲಿ ಜರುಗುವ ಈ ಉತ್ಸವದಲ್ಲಿ ಅಮೆರಿಕಾ ಮತ್ತು ಬ್ರಿಟನ್ ಮೂಲದ ವನ್ಯಜೀವಿ-ಮನರಂಜನಾ ದೈತ್ಯ ಸಂಸ್ಥೆಗಳದ್ದೇ ಮೇಲುಗೈ. ಇವು ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ವನ್ಯಜೀವಿ ಬಿಂಬಕಲಾವಿದರ ಪ್ರತಿಭೆ-ಪರಿಶ್ರಮಗಳೊಂದಿಗೆ ತಮ್ಮ ಹಣ ಕೂಡಿಸಿ ಚಿತ್ರಗಳನ್ನು ತಯಾರಿಸಿಕೊಂಡು ಈ ಚಿತ್ರೋತ್ಸವದಲ್ಲಿ ಭಾಗಿಯಾಗುತ್ತವೆ. ಇವುಗಳಲ್ಲಿ ನ್ಯಾಶನಲ್ ಜಿಯಗ್ರಾಫಿಕ್ ಟೆಲಿವಷನ್, ಬಿಬಿಸಿ, ಅನಿಮಲ್ ಪ್ಲಾನೆಟ್ ಇಂಟರ್‌ನ್ಯಾಶನಲ್ ಮುಖ್ಯವಾದವು. ಇವು ಸ್ವತಂತ್ರವಾಗಿ ಮತ್ತು ಪರಸ್ಪರ ಸಹಯೋಗದಲ್ಲಿ ತಯಾರಿಸಿದ ಚಿತ್ರಗಳನ್ನು ಸ್ಪರ್ಧೆಗೆ ಕಳಿಸುತ್ತವೆ. ಪ್ರತಿ ವರ್ಷ ಪಡೆಯುವ ಪ್ರಶಸ್ತಿಗಳಲ್ಲೂ ಇವುಗಳದ್ದೇ ಸಿಂಹಪಾಲು.

ಪಾಂಡ ಪ್ರಶಸ್ತಿಗಳು ಈ ಹಿಂದೆ ಭಾರತೀಯರಿಗೆ ಬೇರೆ ಬೇರೆ ವಿಭಾಗಳಲ್ಲಿ ದೊರೆತಿವೆ. ತಾವೇ ಹಣಹೊಂದಿಸಿಕೊಂಡು ಚಿತ್ರಮಾಡುವ ಹಿರಿಯ ಬೇಡಿ ಸಹೋದರರಿಗೆ, ಅತ್ಯುತ್ತಮ ವನ್ಯಜೀವಿ ಬಿಂಬಗ್ರಾಹಕ ವಿಭಾಗದಲ್ಲಿ(1984), ಅಭಿವೃದ್ಧಿಶೀಲ ದೇಶಗಳ ಪ್ರೋತ್ಸಾಹಕ ವಿಭಾಗದಲ್ಲಿ(2006) ಮತ್ತು ಕಿರಿಯ ಬೇಡಿ ಸಹೋದರರಿಗೆ ನವಬಿಂಬಗ್ರಾಹಕರ ವಿಭಾಗದಲ್ಲಿ (2004) ವೈಲ್ಡ್ ಸ್ಕ್ರೀನ್ ಚಿತ್ರೋತ್ಸವದ ಈ ಗ್ರೀನ್ ಆಸ್ಕರ್ ಪ್ರಶಸ್ತಿಗಳು ಸಂದಿವೆ. ಕೀನ್ಯಾ ಸಂಜಾತ, ಭಾರತೀಯ ವನ್ಯಜೀವಿ ಚಿತ್ರನಿರ್ಮಾಪಕ ಮೈಕ್ ಪಾಂಡೆ ನಿರ್ಮಿಸಿದ ಆನೆಗಳಕುರಿತಾದ ದಿ ಲಾಸ್ಟ್ ಮೈಗ್ರೇಶನ್ (1994) ಷಾರ್ಕ್‌ಮೀನುಗಳ ಕುರಿತಾದ ಶೋರ‍್ಸ್ ಆಫ್ ಸೈಲೆನ್ಸ್ (2000) ಮತ್ತು ವ್ಯಾನಿಷಿಂಗ್ ಜಯಂಟ್ಸ್ (2004) ಚಿತ್ರಗಳಿಗೆ ಆಯಾವರ್ಷಗಳಲ್ಲಿ ನಡೆದ ವೈಲ್ಡ್ ಸ್ಕ್ರೀನ್ ಚಿತ್ರೋತ್ಸವಗಳ ಬೇರೆ ಬೇರೆ ವಿಭಾಗಗಳಲ್ಲಿ ಪಾಂಡ ಪ್ರಶಸ್ತಿಗಳು ಸಿಕ್ಕಿವೆ.

2010ರ ಚಿತ್ರೋತ್ಸವದಲ್ಲಿ 6 ದೇಶಗಳ ಚಿತ್ರ ತಯಾರಕರು ಸ್ಪರ್ಧಿಸಿದ 446 ಕಥಾಸಾಕ್ಷ್ಯಚಿತ್ರಗಳನ್ನು 13 ಜನ ತೀರ್ಪುಗಾರರು ಒಂದು ವಾರಕಾಲ ವೀಕ್ಷಿಸಿ ಪ್ರತಿ ವಿಭಾಗದಲ್ಲೂ ಮೂರು ಚಿತ್ರಗಳನ್ನು ಆರಿಸಿ, ಅಂತಿಮವಾಗಿ 21 ಚಿತ್ರಗಳನ್ನು ಪಾಂಡ ಪ್ರಶಸ್ತಿಗಳಿಗಾಗಿ ಆಯ್ಕೆಮಾಡಿದರು. ತೀರ್ಪುಗಾರರ ಅಭಿಪ್ರಾಯದಂತೆ ಚಿತ್ರಗಳನ್ನು ಪ್ರಸ್ತುತಿಪಡಿಸಿದವರಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚು. ಸಮುದ್ರಜೀವಿ ಮತ್ತು ಜಲಚರಜೀವಿಗಳ ಜೀವನವನ್ನು ಕುರಿತಾದ ಚಿತ್ರಗಳ ಸಂಖ್ಯೆ ಬಹಳ. ಪ್ರಾಚೀನ ದೈತ್ಯಪರಾಣಿಗಳ ಕುರಿತಾದ ಚಿತ್ರಗಳು ಅತ್ಯಧಿಕ. ಪ್ರಾಣಿವರ್ತನೆ ಕುರಿತಾದ ಚಿತ್ರಗಳ ಸಂಖ್ಯೆ 66. ಇವುಗಳಲ್ಲಿ ಅಂತಿಮ ಸ್ಪರ್ಧೆಯಲ್ಲಿ ಉಳಿದ 3 ಚಿತ್ರಗಳು ನೆದರ್‌ಲ್ಯಾಂಡ್ಸ್ ನ ಕ್ರಾಕ್ಸ್ ಆಫ್ ಕತೂಮ ಅಮೆರಿಕಾದ ಕ್ಲ್ಯಾಷ್: ಎನ್ ಕೌಂಟರ‍್ಸ್ ಆಫ್ ಬೇರ‍್ಸ್ ಅಂಡ್ ಉಲ್‌ವ್ಸ್ ಮತ್ತು (ತಾಂತ್ರಿಕವಾಗಿ) ಅಮೆರಿಕಾದ ದಿ ಪ್ಯಾಕ್ ಅಂತಿಮ ಸುತ್ತಿನಲ್ಲಿ ಕೃಪಾಕರ-ಸೇನಾನಿ ಹೆಗಡೆ ಫೀಚರ‍್ಸ್ ಚಿತ್ರಸಂಸ್ಥೆ, ಅಮೆರಿಕಾದ ಅನಿಮಲ್ ಪ್ಲಾನೆಟ್ ಇಂಟರ್ ನ್ಯಾಶನಲ್ ಸಂಸ್ಥೆಗಾಗಿ ತಯಾರಿಸಿದ ದಿ ಪ್ಯಾಕ್, ಎಪಿಸೋಡ್ ಫೈವ್ ಎಂಬ 30 ನಿಮಿಷದ ಚಿತ್ರಕ್ಕೆ , ಪ್ರಾಣಿ ವರ್ತನೆ (ಅನಿಮಲ್ ಬಿಹೇವಿಯರ್) ವಿಭಾಗದಲ್ಲಿ ಈ ಮೊದಲು ಕಂಡರಿಯದ ಅಪರೂಪದ ಪ್ರಾಣಿವರ್ತನೆಯನ್ನು ಚಿತ್ರೀಕರಿಸಿದ ವಿಶೇಷತೆಗಾಗಿ ಪ್ರತಿಷ್ಠಿತ ಪಾಂಡ ಪ್ರಶಸ್ತಿ ದೊರೆತಿದೆ ಎಂಬುದು ಭಾರತೀಯರಿಗೆ, ಕನ್ನಡಿಗರಿಗೆ ಹೆಗ್ಗಳಿಕೆಯ ಸಂಗತಿ.

ಈ ಮೊದಲೇ ಹೇಳಿದಂತೆ ವೈಲ್ಡ್ ಸ್ಕ್ರೀನ್ ಚಿತ್ರೋತ್ಸವದ ಪಾಂಡ ಪ್ರಶಸಿಯಲ್ಲಿ 21 ಸ್ಪರ್ಧಾವಿಭಾಗ ಗಳಿವೆ. ಮೊದಲನೆಯದು ಪ್ರಾಣಿವರ್ತನೆಯನ್ನು ಅತ್ಯುತ್ತಮವಾಗಿ ಬಿಂಬಿಸುವ ಚಿತ್ರಕ್ಕೆ ಕೊಡುವ ಪ್ರಶಸ್ತಿ. ಕೊನೆಯದು ಡಬ್ಲ್ಯುಡಬ್ಲ್ಯುಎಫ್ ಗೋಲ್ಡನ್‌ಪಾಂಡ ಪ್ರಶಸ್ತಿ. ಈ ಮಧ್ಯೆ ಅತ್ಯತ್ತಮ ಪ್ರಚಾರ ಚಿತ್ರ, ಸ್ವತಃ ಮಕ್ಕಳ ನೋಡಿ ನಿರ್ಧರಿಸುವ ಮಕ್ಕಳ ಆಯ್ಕೆಯ ಅತ್ಯುತ್ತಮಚಿತ್ರ, ಸಂಕಲನ, ಸಂಗೀತ, ಶಬ್ದಗ್ರಹಣ, ಚಲನಬಿಂಬಗ್ರಹಣ, ಭೂವೈಜ್ಞಾನಿಕ ಚಿತ್ರ, ಜನಪ್ರಿಯ ಚಿತ್ರ, ಹೊಸತನದ ಮನರಂಜನೆಯ ಆವಿಷ್ಕಾರ, ಪ್ರಾರಂಭಿಕರ ಅತ್ಯುತ್ತಮಚಿತ್ರ, ತೃತೀಯಜಗತ್ತಿನಿಂದ ಬಂದ ಚಿತ್ರ, ತೀರ್ಪುಗಾರರ ವಿಶೇಷ ಆಯ್ಕೆಯ ಚಿತ್ರ, ಪ್ರಾಣಿ-ಜನ ಕುರಿತ ಚಿತ್ರ, ಅತ್ಯತ್ತಮ ನಿರೂಪಣೆಯ ಚಿತ್ರ, ಸರಣಿ ಶ್ರೇಷ್ಠತೆ, ಅತ್ಯತ್ತಮ ಚಿತ್ರಕತೆ, ಅತ್ಯುತ್ತಮ ಸಮೂಹಮಾಧ್ಯಮ ಚಿತ್ರ, ಕಿರುಚಿತ್ರ, ನಾಟಕೀಯ ಚಿತ್ರ, ಸರ್ವೋತ್ಕೃಷ್ಟ ಸಾಧನೆ, ಹೀಗೆ ವನ್ಯಜೀವಿ ಸಂಬಂಧಿ ಚಿತ್ರತಯಾರಿಕೆಯ ಎಲ್ಲಾ ಮಗ್ಗಲುಗಳನ್ನೂ ಗುರುತಿಸುವ 21 ಪ್ರಶಸ್ತಿಗಳು ಇಲ್ಲಿವೆ.

ಮೊದಲು ಪ್ರತಿ ವಿಭಾಗದಲ್ಲೂ ಮೂರುಚಿತ್ರಗಳನ್ನು ಆರಿಸಿ, ಅವುಗಳಲ್ಲಿ ಅತ್ಯುತ್ತಮವೆನಿಸಿದ ಒಂದನ್ನು ಹೆಕ್ಕಿ ಪ್ರಶಸ್ತಿ ಕೊಡುವ ಈ ಸ್ಪಧೆಯಲ್ಲಿ ಪಾಲ್ಗೊಳ್ಳುವುದೇ ಗೌರವದ ಸಂಗತಿಯೆನಿಸಿದೆ. ಮೂರರಲ್ಲೊಂದಾಗಿ ಆಯ್ಕೆಗೊಳ್ಳುವುದು ಚಿತ್ರಮಾಡಿದವರಿಗೆ, ಮಾಡಿಸಿದವರಿಗೆ ಕೋಡುಮೂಡಿದಂತೆ. ಯಾವುದೇ ವಿಭಾಗದಲ್ಲಿ ಗಳಿಸಿದ ಪ್ರಶಸ್ತಿ ಕಿರೀಟಪ್ರಾಯವೇ ಸರಿ. ಜೊತೆಗೆ ತೃತೀಯಜಗತ್ತಿನ ಪ್ರೋತ್ಸಾಹಕ ಚಿತ್ರವಿಭಾಗದಲ್ಲಿ ಭಾರತೀಯ ಚಿತ್ರ ತಯಾರಕರಾದ ರೀಟಾ ಬ್ಯಾನರ್ಜಿ ಮತ್ತು ಶಿಲ್ಪಿ ಶರ್ಮ ಡಸ್ಟೀ ಫುಟ್ ಪ್ರೊಡಕ್ಷನ್ಸ್ ಹೆಸರಿನಲ್ಲಿ ತಯಾರಿಸಿದ ದಿ ವೈಲ್ಡ್ ಮೀಟ್ ಟ್ರೈಲ್ ಚಿತ್ರಕ್ಕೆ ಪಾಂಡ ಪ್ರಶಸ್ತಿ ಈ ವರ್ಷದ ಚಿತ್ರೋತ್ಸವದಲ್ಲೇ ದೊರೆತಿರುವುದು ಭಾರತೀಯರ ಪಾಲಿಗೆ ಮತ್ತೊಂದು ಹೆಗ್ಗಳಿಕೆ.

ವನ್ಯಜೀವಿ ಚಿತ್ರಗಳಲ್ಲಿ ದೊಡ್ಡ ಪ್ರಾಣಿಗಳಾದ ಹುಲಿ-ಸಿಂಹ, ಚಿರತೆ, ಆನೆಗಳನ್ನು ಕುರಿತಾದ ಚಿತ್ರಗಳು ಹೇರಳವಾಗಿವೆ. ತೋಳಗಳನ್ನು ಕುರಿತಾದ ಕಿರುಚಿತ್ರಗಳು ಸಾಕಷ್ಟಿವೆ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಕಾಡುನಾಯಿ ಎಂದು ಕರೆಯುವ ವಿವಿಧ ಪ್ರಬೇಧಗಳ ಜೀವನಕ್ರಮ ಕುರಿತಾದ ಪೂರ್ಣಾವಧಿಯ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಇವೆ. ಆದರೆ ದಕ್ಷಿಣಏಷ್ಯಾದಲ್ಲಿ ಧೋಲ್ ಅಥವಾ ಧೋಲೆ ಎಂದು ಕರೆಯುವ ಭಾರತದ ಕಾಡುನಾಯಿಗಳನ್ನು ಕುರಿತಾದ ಇಂಥ ಚಿತ್ರಗಳು ಬೆರಳೆಣಿಕೆಯವು. ಖ್ಯಾತ ವನ್ಯಜೀವಿ ಬಿಂಬಗ್ರಾಹಕರಾದ ಬೇಡಿ ಸಹೋದರರು 1991-92 ರಲ್ಲಿ ಟಿಬೆಟಿಯನ್ ವೈಲ್ಡ್ ಡಾಗ್ಸ್ ಮತ್ತು 1993 ರಲ್ಲಿ ನ್ಯಾಚುರಲ್ ಹಿಸ್ಟರಿ ಆಫ್ ದ ಧೋಲ್ಸ್ ಎಂಬ ಕಾಡುನಾಯಿಗಳ ಕುರಿತಾದ ಎರಡು ಚಿತ್ರಗಳನ್ನು ತಯಾರಿಸಿದ್ದಾರೆ. ಮನುಷ್ಯರಿಂದ ಸದಾ ದೂರವಿರುವ, ಸನಿಹಕ್ಕೆ ಸುಳಿದರೆ, ಕಂಡರೆ ಓಡಿ ಮರೆಯಾಗುವ ಕಾಡುನಾಯಿಗಳು ಬ್ರಿಟಿಷರ ಕಾಲದಿಂದಲೂ ರಕ್ತಪಿಪಾಸುಗಳು, ವನ್ಯಮೃಗಗಳ ವೃದ್ಧಿಗೆ ಮಾರಕವಾದವುಗಳು ಎಂಬ ತಪ್ಪುಗ್ರಹಿಕೆಯಿಂದಾಗಿ ಇತ್ತೀಚಿನ ವರೆವಿಗೂ ಬೇಟೆಗಾರರ ಕ್ರೌರ‍್ಯಕ್ಕೆ, ಅಧ್ಯಯನಕಾರರ ಉಪೇಕ್ಷೆಗೆ, ಗುರಿಯಾಗಿ ವಿನಾಶದ ಅಂಚನ್ನು ತಲುಪಿದ ಜೀವಿಗಳು.

ಒಂದು ಬೇಟೆನಾಯಿಯನ್ನು ಕೊಂದು ತಂದರೆ 20 ರಿಂದ 25 ರೂ ಬ್ರಿಟಿಷರಿಂದ ದೊರೆಯುತ್ತಿದ್ದುದರಿಂದ ಇವುಗಳ ಸಂಖ್ಯೆ ಕ್ಷೀಣಿಸಿತ್ತು. 10-15 ಸಂಖ್ಯೆಯ ಕುಲಗುಂಪಾಗಿ, 5-6ರ ತಂಡವಾಗಿ ಚಿರತೆ-ಹುಲಿಗಳೊಟ್ಟಿಗೆ ಬದುಕುವ ಕಾಡುನಾಯಿಗಳು ಸಾಮಾಜಿಕ ಸ್ವಭಾವದವು. ಒಮ್ಮೆಗೇ ವೇಗವಾಗಿ ಓಡುವುದಕ್ಕಿಂತ ಬಲಿಯನ್ನು ಹೆಚ್ಚುಕಾಲ ಓಡಿಸಿ ದಣಿಸಿ ಕೊಂದು ತಿನ್ನುವ ಸ್ಥೈರ್ಯ ಪಡೆದ ಪ್ರಾಣಿಗಳು. ತೋಳಗಳಂತೆ ಯಜಮಾನಿಕೆಗಾಗಿ ಹೋರಾಡುವ ಸ್ವಭಾವದವಲ್ಲ. ಯಜಮಾನೆಂಬ ಗತ್ತಿಲ್ಲ. ಉಳಿದ ಪ್ರಾಣಿಗಳು ತಗ್ಗಿನಡೆಯುವುದರಿಂದ ಯಜಮಾನನ ಲಕ್ಷಣ ಗೋಚರಿಸಬಹುದು. ಒಂದು ಗುಂಪಿನಿಂದ ಹೊರಬಿದ್ದು ಮತ್ತೊಂದು ಗುಂಪಿಗೆ ಸೇರಲು ವಿರೋಧವಿಲ್ಲ. ಮನುಷ್ಯನನ್ನು ಕಂಡರೆ ಭಯವಿದ್ದರೂ ಸಮಯಬಂದಾಗ ಕಾಡುಹಂದಿ, ಹುಲಿಗಳೊಂದಿಗೂ ಸೆಣಸಬಲ್ಲ ಧೈರ್ಯಶಾಲಿ. ಈಗ ಐಯುಸಿಎನ್ ನಿಂದ ವಿನಾಶದ ಅಂಚಿನಜೀವಿ ಎಂದು ಗುರುತಿಸಲ್ಪಟ್ಟ ಇವುಗಳ ವರ್ತನೆ-ಜೀವನ ಅಧ್ಯಯನದ ಚಿತ್ರೀಕರಣ ವಿಶದವಾಗಿ ನಡೆದೇ ಇರಲಿಲ್ಲ. ವೈಲ್ಡ್ ಡಾಗ್ ಡೈರೀಸ್ ಮತ್ತು ದಿ ಪ್ಯಾಕ್ ಈ ಕೊರತೆಯನ್ನು ನೀಗಿಸುತ್ತವೆ.

ಸಾಕ್ಷ್ಯಚಿತ್ರಗಳನ್ನು ಮಾಡಲು ಸಂಗ್ರಹಿಸುವ ಮೂಲ ಬಿಂಬಸಾಮಗ್ರಿ ಫುಟೇಜ್. ಇದನ್ನು ಸಂಗ್ರಹಿಸುವಾಗ ಎದುರಾಗುವ ಅಪಾಯ, ಕಷ್ಟ, ನಷ್ಟ, ವಿನೋದ ಮತ್ತು ಅನೂಹ್ಯ ಸಂದರ್ಭಗಳು ಫುಟೇಜ್ ನ ಭಾಗವೇ ಆಗಿರುತ್ತವೆ. ಸಾಕ್ಷ್ಯಚಿತ್ರದ ಚಿತ್ರಕತೆಯ ಹಂದರವನ್ನು ಸಿದ್ಧಪಡಿಸಿಕೊಂಡು ಅದಕ್ಕೆ ಬೇಕಾದ ಫುಟೇಜ್ ಅನ್ನು ಸಂಗ್ರಹಿಸುವುದು ಒಂದು ಕ್ರಮವಾದರೆ, ಸಂದರ್ಭಗಳು ಒದಗಿಸುವ ಎಲ್ಲಾ ಅನುಕೂಲ-ಪ್ರತಿಕೂಲಗಳನ್ನೂ ಬಳಸಿಕೊಂಡು ಚಿತ್ರೀಕರಿಸಿದಮೇಲೆ ಲಭ್ಯವಾಗುವ ಫುಟೇಜ್ ನ ಸೃಜನಾತ್ಮಕ ಅಧ್ಯಯನದಿಂದ ಚಿತ್ರಕತೆಯನ್ನು ರೂಪಿಸಿಕೊಳ್ಳುವ ಸಾಕ್ಷ್ಯಚಿತ್ರಗಳು ಇನ್ನೊಂದು ಬಗೆ. ಇಂಥ ಚಿತ್ರಕತೆಯನ್ನು ಅನುಸರಿಸಿ ಅದಕ್ಕೆ ಲಗತ್ತಾದ ವಿವರಣೆ, ಹಿನ್ನೆಲೆ ಸಂಗೀತ, ಶಬ್ದಗಳನ್ನು ಸೇರಿಸಿ ಕಥಾಸಾಕ್ಷ್ಯಚಿತ ಗಳನ್ನು ತಯಾರಿಸುವುದು ಮತ್ತೊಂದು ಬಗೆ. ಹೇಗೇ ಆದರೂ ಬಿಂಬಕಲಾವಿದನ ಪ್ರತಿಭೆ-ಪರಿಶ್ರಮದೊಂದಿಗೆ ಸಂಕಲನಕಾರನ ಪ್ರತಿಭೆ-ಪರಿಣತೆಯನ್ನು ಬೆಸೆದು ಸಂಕಲನ ಮಾಡಿದಾಗಲೇ ಪೂರ್ಣಚಿತ್ರ ತಯಾರಾಗುವುದು. ಬಿಂಬಲೈಬ್ರರಿಯಿಂದ ಬೇಕಾದ ಫುಟೇಜ್ ಅನ್ನು ಪಡೆದು ಅಥವಾ ತನ್ನದೇ ಸಂಗ್ರಹದಿಂದ ಆಯ್ದ ಫುಟೇಜನ್ನು ಸೇರಿಸಿ ಸಾಕ್ಷ್ಯಚಿತ್ರದ ಅಥವಾ ಸಾಕ್ಷ್ಯಕಥಾನಕದ ಶ್ರೀಮಂತಿಕೆಯನ್ನು ಹೆಚ್ಚಿಸಲು ಸಾಧ್ಯ. ಹಿನ್ನೆಲೆ ಸಂಗೀತ ಮತ್ತು ವನ್ಯಜೀವ ಸಂಬಂಧಿ ಧ್ವನಿಗಳನ್ನು ಸೇರಿಸಿ ಸಂಕಲಿಸಿದ ಸಾಕ್ಷ್ಯಕಥಾನಕಕ್ಕೆ ರಂಜಕತೆ ವಿಶೇಷಗುಣವಾಗಿ ಸೇರ್ಪಡೆಯಾಗುತ್ತದೆ. ವರ್ಷಾನುಗಟ್ಟಲೆ ಕಾಡಿನೊಳಗಿದ್ದು ಬೇರೆ ಬೇರೆ ಯೋಜನೆಗಳಿಗಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಚಿತ್ರೀಕರಣ ನಡೆಸಿರುವ ಕೃಪಾಕರ-ಸೇನಾನಿ ಅವರಿಗೆ ವೈಲ್ಡ್ ಡಾಗ್ ಡೈರೀಸ್ ಮತ್ತು ದಿ ಪ್ಯಾಕ್ ಚಿತ್ರವನ್ನು ಸಂಕಲಿಸುವಾಗ ಸಹಜವಾಗೇ ಈ ಎಲ್ಲಾ ಸೌಲಭ್ಯಗಳೂ ದೊರೆತಿವೆ.

ಬಿಬಿಸಿ ತಯಾರಿಸಿರುವ ವನ್ಯಜೀವಿ ಚಿತ್ರಗಳ ಚೌಕಟ್ಟುಗಳು, ಡೇವಿಡ್ ಅಟಿನ್ ಬರೋ ನಿರ್ಮಿಸಿರುವ ವನ್ಯಜೀವಿ ಚಿತ್ರಗಳ ನಿರೂಪಣಾ ವಿಧಾನ, ನಾಟಕೀಯತೆಗಳ ಶೈಲಿ, ತೋಳ, ನರಿ, ಮತ್ತು ವಿಶ್ವದ ಇತರಭಾಗಗಳ ಕಾಡುನಾಯಿ-ವನ್ಯಜೀವಿ ಚಿತ್ರಗಳ ವ್ಯಾಕರಣ-ವಿನ್ಯಾಸಗಳ ಹಿನ್ನೆಲೆ ದಿ ಪ್ಯಾಕ್ ಚಿತ್ರಕ್ಕೆ ಇವೆ. ಕಾಡುನಾಯಿಗಳ ತಾಣದ ಅನ್ವೇಷಣೆ ಹದ್ದಿನ ಹಾರಾಟದ ಪ್ರತಿಮೆ, ಅಪಾಯದ ಮುನ್ಸೂಚನೆ-ಸಂಕೇತಕ್ಕೆ, ಕೋತಿಗಳ ಕಿರುಚಾಟ ಮತ್ತು ಮೈನವಿರೇಳಿಸುವ ಹುಲಿಯ ದರ್ಶನದ ಚಿತ್ರಿಕೆಗಳು, ಅಪಾಯದಿಂದ ಪಾರಾಗುವ ಸಂದರ್ಭಗಳನ್ನು ಸೃಷ್ಟಿಸಲು, ಭಕ್ತರಿಗೆ ಭಗವಂತನಂತೆ ಕಾಣಿಸಿಕೊಳ್ಳುವ ಹಾಗೆ ಆನೆಹಿಂಡಿನ ಪ್ರವೇಶಗಳು ಈ ಚಿತ್ರದಲ್ಲಿ ಬಳಕೆಯಾಗುತ್ತವೆ. ಮಾಮೂಲಿನಂತೆ ಹಗಲು-ಇರುಳಿನ ಪ್ರಾರಂಭ-ಮುಗಿತಾಯಕ್ಕೆ ಸೂರ್ಯ-ಚಂದ್ರರ ಕೆಂಪು-ಬಿಳಿ ತಟ್ಟೆಗಳು; ಋತುಗಳ ಬದಲಾವಣೆಯನ್ನು ಸೂಚಿಸಲು ಮರಗಿಡಗಳಿಗೆ ಹೊದಿಕೆಯಾಗುವ ಬೆಳಕು, ಮಂಜು, ಕಾವಳಗಳ ಚಿತ್ರಗಳು ಮತ್ತು ಮಳೆಗಾಲದ ಆಗಮನವನ್ನು ಸೂಚಿಸಲು (ಮಿಂಚು-ಸಿಡಿಲುಗಳಿಲ್ಲದ) ಗುಡುಗಿನ ಶಬ್ದ ಮತ್ತು ನೀರಿನ ಧಾರೆಗಳ ಚಿತ್ರಗಳು ಬಳಕೆಯಾಗಿವೆ. ಕುತೂಹಲವನ್ನು ಕಾಯ್ದುಕೊಳ್ಳುವಂತೆ ನಾಯಿಗಳ ಕಣ್ಮರೆ, ಎಳೆಮರಿಗಳ ಪ್ರದೇಶವನ್ನು ಕಾಳ್ಗಿಚ್ಚು ಆವರಿಸಿದಾಗ ಹುಟ್ಟುವ ಆತಂಕಗಳನ್ನು ನಾಟಕೀಯ ವಾಗಿ ಬಳಸಿಕೊಳ್ಳಲಾಗಿದೆ. ಚಿತ್ರದುದ್ದಕ್ಕೂ ಅವ್ಯಾಹತವಾಗಿ ಕೇಳಿಬರು ವಂತೆ ನೆಯ್ದು ಜೋಡಿಸಿರುವ ಹಕ್ಕಿಗಳ ಕಲರವ, ಶಿಳ್ಳೆ, ಪ್ರಾಣಿಗಳ ಉಲುಹು-ಕೂಗುಗಳು ಅಲ್ಲಲ್ಲಿ ಕೃತಕವೆನಿಸಿದರೂ ಕಾಡಿನ ವಾತಾವರಣವನ್ನು ದಟ್ಟವಾಗಿ ನಿರ್ಮಿಸುವಲ್ಲಿ ತುಂಬಾ ಸಹಾಯಕವಾಗಿವೆ. ವಿವಿಧ ಚರ್ಮವಾದ್ಯ ಗಳನ್ನು ಬಳಸಿ ಸೃಷ್ಟಿಸಿರುವ ಸಂಗೀತದ ಭಾವೋತ್ಕರ್ಷ ಮತ್ತು ಲಯಗಾರಿಕೆ ಗಳೂ ಚಿತ್ರಕ್ಕೆ ನಾಟಕೀಯತೆಯ ಆಯಾಮವನ್ನು ಒದಗಿಸಿದೆ. ಹೀಗೆ ದಿ ಪ್ಯಾಕ್ ಅಪರೂಪದ ಪ್ರಾಣಿವರ್ತನೆಯ ದಾಖಲೆಯಲ್ಲದೆ ಕಥಾಸಾಕ್ಷ್ಯಚಿತ್ರವಾಗಿ ಉತ್ತಮ ಮನರಂಜನಾ ಚಿತ್ರವೂ ಆಗಿದೆ.

ಕಾಡುನಾಯಿಗಳ ಎರಡು ಕುಟುಂಬಗಳನ್ನು ಗುರುತಿಸಿ ಅವುಗಳ ಹಿಂಡಿನ ಯಜಮಾನಿ-ಯಜಮಾನ, ಅವಲಂಬಿತರು, ಮತ್ತು ಮಕ್ಕಳನ್ನು ಕೆನ್ನಾಯಿ, ಬಾಸ್, ಮಚ್ಚ, ಬಿದ್ದ, ಚುಕ್ಕಿ ಎಂದೆಲ್ಲಾ ಗುರುತಿಟ್ಟು ಕೊಂಡು ಅವು ಹೋದಲ್ಲಿಗೆ ಹಿಂಬಾಲಿಸುತ್ತಾ ಕಾಡುನಾಯಿಗಳ ಜೀವನದ ಏಳು-ಬೀಳುಗಳನ್ನು ಗಮನಿಸುವುದು ಇಲ್ಲಿರುವ ಅಧ್ಯಯನಾ ವಿಧಾನ. ಗಡಿಯನ್ನು ಗುರುತಿಸಿಕೊಂಡು, ಅದರೊಳಗೇ ಜೀವಿಸುವುದು, ಅಗತ್ಯಬಿದ್ದಾಗ ಗಡಿಯನ್ನು ವಿಸ್ತರಿಸಲು ಯತ್ನಿಸುವುದು, ಆ ಯತ್ನದಲ್ಲಿ ಪ್ರಾಣ ಕಳೆದು ಕೊಳ್ಳುವುದು, ಅಥವಾ ಇರುವ ಹಿಂಡನ್ನು ತೊರೆದು ಮತ್ತೊಂದು ಹಿಂಡನ್ನು ಸಂಘಟಿಸುವುದು, ಹೊಸ ನಾಯಿಗಳು ಬಂದು ಹಿಂಡನ್ನು ಸೇರಿಕೊಳ್ಖುವುದು, ಆಹಾರ ಸಂಪಾದಿಸ ಬೇಕಾದಾಗ ಸುಸಂಘಟಿತ ಸಹಕಾರದೊಂದಿಗೆ ಸುದೀರ್ಘ ಓಟದಲ್ಲಿ ಬೆನ್ನಟ್ಟಿ ಬೇಟೆಯಾಡುವುದು ಮುಂತಾದ ಸಂದರ್ಭಗಳನ್ನು ಕಾಡುನಾಯಿಗಳಿಗಿರುವ ಸಹಜ ಬುದ್ಧಿಮತ್ತೆಯನ್ನು ವಿಶದೀಕರಿಸಲು ಬಳಸಲಾಗಿದೆ. ಮೂರು ತಲೆಮಾರಿನ ಕಾಡು ನಾಯಿಗಳ ವರ್ತನಾವಿನ್ಯಾಸಗಳನ್ನು ಕಾಡಿನ ಇತರ ಪ್ರಾಣಿಗಳ ಸಂಬಂಧದ ಹಿನ್ನೆಲೆಯಲ್ಲಿ ಗುರುತಿಸುವಂತೆ ಜೋಡಿಸಲಾಗಿದೆ. ಜೊತೆಗೆ ಈ ಸಾಹಸಮಯ ಅಧ್ಯಯನದ ಕಥಾನಕದ ಬೆನ್ನೆಲುಬಾಗಿ, ಚಿತ್ರದ ಸಂಕಲನಕಾರರು ಅದ್ಭುತವಾಗಿ ಕೆಲಸಮಾಡಿದ್ದಾರೆ.

ಪ್ರಾಣಿಗಳ ಜಾಡುಹಿಡಿದು ಕ್ಯಾಮರಾ ಹೊತ್ತು ತಿರುಗುವ, ಜೀಪಿನಲ್ಲಿ ಕುಳಿತು ಮೃಗಗಳನ್ನು ಗಮನಿಸುವ ನಿರೂಪಕ ಚಿತ್ರಗ್ರಾಹಕನೂ ಹೌದು. ಕಾಡಿನ ನಾಟಕದಲ್ಲಿ ವಿವಿಧ ಸನ್ನಿವೇಶಗಳನ್ನು ಬೆಸೆಯುವ ಸೂತ್ರಧಾರನೂ ಹೌದು. ಕಾಡುನಾಯಿಗಳ ಕುಟುಂಬದ ಯಜಮಾನಿಕೆ, ಪ್ರಾಯಕ್ಕೆ ಬಂದ ಯುವನಾಯಿಗಳ ಗಡಿವಿಸ್ತರಣಾ ಅನಿವಾರ್ಯತೆ, ನಿಗೂಢವಾಗಿ ಸಾವನ್ನಪ್ಪುವ ಯಜಮಾನ ನಾಯಿಯ ದುರಂತ, ಮಕ್ಕಳೊಂದಿಗೆ ಕೂಡಿ ವಂಶಾಭಿವೃದ್ಧಿಮಾಡಬೇಕಾದ ತಾಯಿನಾಯಿಯ ನಿಸರ್ಗಪ್ರೇರಿತ ಸಹಜ ಜವಾಬ್ದಾರಿ, ಮನುಷ್ಯರಿಂದ ದೂರವಿದ್ದು, ಹುಲಿ, ಚಿರತೆಗಳಿಗೆ ಬಲಿಯಾಗದಂಥ ಬಿಲಗಳನ್ನು ಆಯುವ ತಾಯಿಯ ತಂತಿಯ ನಡಿಗೆ, ಸಾಹಸ ಯಾತ್ರೆಯಲ್ಲಿ ಬಂಧುಗಳನ್ನು ಅಗಲಿ ಕಣ್ಮರೆಯಾಗಿ ಮತ್ತೆ ಹಿಂಡಿನೊಟ್ಟಿಗೆ ಕಾಣಿಸಿಕೊಂಡು ನಿರೂಪಕನ ಪಾಲಿಗೆ ರೋಮಾಂಚನವೆಬ್ಬಿಸುವ ನಾಯಿದ್ವಯರು, ಅನ್ಯಹಿಂಡಿನ ಎರಡು ನಾಯಿಗಳು ಉಳಿದ ನಾಯಿಗಳೊಂದಿಗೆ ಸಾಧಿಸುವ ಬಂಧುತ್ವ, ಚಿರತೆ ಸಂಪಾದಿಸಿದ ಆಹಾರವನ್ನು ಕಾಡುನಾಯಿಗಳು ಕದ್ದು ಪಾಲು ಪಡೆಯುವ ಕಾಡಿನ ಆಪದ್ಧರ್ಮ ಮತ್ತು ತಾಯಿ, ಮತ್ತು ಮಗಳು ಒಟ್ಟಿಗೆ ಹನ್ನೆರಡು ಮರಿಗಳಿಗೆ ಜನ್ಮನೀಡಿ, ಪರಸ್ಪರ ಸೆಣಸದೆ ವಂಶಾಭಿವೃದ್ಧಿ ಯಲ್ಲಿ ಸಹಕರಿಸುವುದು ದಿ ಪ್ಯಾಕ್ ಚಿತ್ರದ ಕಥಾಹಂದರ.

ಕೆನಡಾದ ವನ್ಯಜೀವಿ ಚಲನಬಿಂಬಗ್ರಾಹಕ ಬಿಲ್ ಮೇಸನ್ ತೋಳಗಳ ಕುರಿತಾಗಿ ಡೆತ್ ಆಫ್ ಎ ಲೆಜೆಂಡ್(1971) ಮತ್ತು ಕ್ರೈಸ್ ಆಫ್ ದ ವೈಲ್ಡ್ (1973) ಎಂಬ 2 ಪೂರ್ಣಾವಧಿ ಸಾಕ್ಷ್ಯಚಿತ್ರ ಗಳನ್ನು ನಿರ್ಮಿಸಿದ್ದಾರೆ. ವುಲ್ಫ್ ಪ್ಯಾಕ್ (1974) ಎಂಬ 20 ನಿಮಿಷದ ಕಿರುಚಿತ್ರವನ್ನು ಮಾಡಿದ್ದಾರೆ. ಇವಗಳಲ್ಲಿ ತೋಳಗಳ ಊಳಿಡುವ ಶಬ್ದವನ್ನು ಗಮನಿಸಿದಮೇಲೆ ದಿ ಪ್ಯಾಕ್ ನ ಧ್ವನಿಧಾರೆಯಲ್ಲಿ ಕಾಡುನಾಯಿಗಳ ಬೊಗುಳುವಿಕೆ ಯಾಗಲಿ, ಊಳಿಡುವ ಚಿತ್ರಗಳಾಗಲಿ ಕೇಳಿದ, ನೋಡಿದ ನೆನಪು ಬರುವುದಿಲ್ಲ. ಕಿರುಚಿತ್ರದಲ್ಲಿ ತೋಳವು ಮರಿಹಾಕುವ ಚಿತ್ರವನ್ನೇ ದೂರಗ್ರಾಹಕ ಲೆನ್ಸ್ ಬಳಸಿ ಸೆರೆ ಹಿಡಿಯಲಾಗಿದೆ. ಕೃಪಾಕರ-ಸೇನಾನಿಯವರಿಗೆ ನಿರ್ದಿಷ್ಟ ಧ್ವನಿಗ್ರಹಣದ ಮಿತಿಯಿದ್ದಿರಬಹುದು.

ಸಾಮಾಜಿಕರಾದ ನಮಗೆ ಪ್ರಸ್ತುತವಾಗಬಲ್ಲ ಅಂಶವೊಂದು ಕಾಡುನಾಯಿಗಳ ಸಾಮಾಜಿಕತೆಯಲ್ಲಿದೆ. ನಿಯಮರಾಹಿತ್ಯದ ಕಾಡಿನ ನಿಯಮದಲ್ಲಿ ಸ್ಪರ್ಧೆಯಿದ್ದರೂ ಕುಲಕಂಟಕತೆ ಎಂಬುದಿಲ್ಲ. (ತಮ್ಮ ಉಳಿವಿಗಾಗಿ ಮಾತ್ರ) ಪ್ರಾಣಾಂತಿಕ ಸ್ಪರ್ಧೆಯಲ್ಲಿ ಪರಸ್ಪರ ಕಾದುವ ಪ್ರಾಣಿಗಳ ಸಹಜ ವರ್ತನೆ, (ಉಳಿವಿಗಲ್ಲದೆ) ಕೇವಲ ಸಂಪತ್ತಿನ ಮೇಲಾಟಕ್ಕಾಗಿ ಪರಸ್ಪರ ರೂಕ್ಷವಾಗಿ, ಬುದ್ಧಿಪೂರ್ವಕವಾಗಿ ಕಾದುವ ಜಾಗತಿಕ ಬಂಡವಳಿಗರ ಆದರ್ಶವಾಗಿದೆ. ಆದರೆ ಅದೇ ತಮ್ಮ ಆಹಾರವಾದ ಜಿಂಕೆಗಳ ಬೇಟೆಗೆ ಕಾಡುನಾಯಿ ಗಳು ಬಳಸುವ ಶಿಸ್ತುಬದ್ಧ ಸ್ವಸಹಕಾರತತ್ವ ಜಾಗತಿಕ ಬಂಡವಳಿಗರ ಆದರ್ಶವಾಗಿಲ್ಲ. ಅವರು ಪಠಿಸುವ ಬದುಕಿ, ಬದುಕಲು ಬಿಡಿ ಎನ್ನುವುದು ನಿಸರ್ಗಸಹಜ ವನ್ಯಜೀವಿ ಸೂತ್ರ. ಇದು ಗುಪ್ತ ನರಭಕ್ಷಕ ಅಭೀಪ್ಸೆಯ ಜಾಗತಿಕ ಬಂಡವಳಿಗರಲ್ಲಿ ತೋರಿಕೆಯ ತಂತ್ರ ಮಾತ್ರ. ಪರಿಸರ-ವನ್ಯಜೀವಿ ಆಧಾರಿತ ಮನರಂಜನೆಯ ಚಿತ್ರಗಳ ಜಾಗತಿಕ ದೈತ್ಯ ಸಂಸ್ಥೆಗಳು (ಬಹುಶಃ ಸಹವಾಸ ದೋಷ/ಗುಣದಿಂದಾಗಿ) ಪರಸ್ಪರ ಸಹಕಾರದ ಸಹಯೋಗದಲ್ಲಿ ಚಿತ್ರಮಾಡುವ ಮಟ್ಟಿಗಾದರೂ ಕಾಡುನಾಯಿಗಳಂಥ ವನ್ಯಜೀವಿಗಳ ಸಹಕಾರತತ್ವ ದಿಂದ ಪ್ರೇರಿತವಾಗಿವೆ ಎಂಬುದು ಸಮಾಧಾನದ ಅಂಶ. ವೈಲ್ಡ್ ಸ್ಕ್ರೀನ್ ಚಿತ್ರೋತ್ಸವದಲ್ಲಿ ಈ ಸಂಸ್ಥೆಗಳು, ಸ್ವತಂತ್ರವಾಗಿಯಲ್ಲದೆ ಪರಸ್ಪರರ ಸಹಯೋಗ ದಲ್ಲಿಯೂ ಚಿತ್ರಮಾಡುತ್ತವೆ-ಮಾಡಿಸುತ್ತವೆ. ಪ್ರಶಸ್ತಿ-ಚಿತ್ರೋತ್ಸವಕ್ಕೂ ಪ್ರಾಯೋಜಕತೆಯನ್ನು ಚಾಚುತ್ತವೆ.

ಯಾವುದೇ ಬಗೆಯ ನಿರೂಪಣೆಯಲ್ಲಿ ಕಥೆಯ ಅಂಶ ಅನಿವಾರ್ಯ, ಅಪೇಕ್ಷಣೀಯ. ಆದ್ದರಿಂದ ಎಲ್ಲಾ ನಿರೂಪಣೆಗಳೂ ಕಥಾನಕಗಳೆ. ಆದರೆ ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲಿ ಪ್ರಾಮಾಣಿಕ ಪ್ರಸ್ತುತಿಯ ನಿರೂಪಣೆಗೆ ಮೊದಲ ಪ್ರಾಶಸ್ತ್ಯ. ಹಾಗೆಂದು ರಂಜಕತೆ ನಿರೂಪಣೆಯ ಉದ್ದೇಶಿತ ಅಂಶವಲ್ಲದಿದ್ದರೂ ಗೌಣವೇನಲ್ಲ. ವರ್ಜ್ಯವಂತೂ ಅಲ್ಲವೇ ಅಲ್ಲ. ಚಿತ್ರಮಾಡುವವರ ದೃಷ್ಟಿಕೋನ, ಗ್ರಹಿಕೆ, ಜೀವನದೃಷ್ಟಿಗಳು ನಿರೂಪಿಸುವ ಶೈಲಿಯಲ್ಲಿ, ವಿವರಣೆಯಲ್ಲಿ ಬಿಂಬಿತವಾಗುತ್ತವೆ. ನೋಡುವವರ ಆಸಕ್ತಿ, ಮಾಧ್ಯಮದ ಮೀಮಾಂಸೆಯ ಬಗೆಗಿನ ತಿಳುವಳಿಕೆ ಮತ್ತು ಸಾಮಾಜಿಕ ದೃಷ್ಟಿಕೋನಗಳು ಚಿತ್ರಕೃತಿಯ ಆಸ್ವಾದನೆ-ಮೌಲ್ಯನಿಷ್ಕರ್ಷೆಗೆ ಸಹಾಯಮಾಡುತ್ತವೆ. ವನ್ಯಜೀವಿ ಕುರಿತಾದ ಚಿತ್ರಗಳಲ್ಲಿ ಅವುಗಳ ವಸ್ತು ವಿಶೇಷತೆ, ದರ್ಲಭತೆ, ರಮ್ಯತೆ ಮತ್ತು ಕ್ಷೇಮಕರವಾದ ಅಪಾಯವನ್ನು ಆನಂದಿಸುವಂತೆ ಎದುರಾಗಿಸುವ ಅವಕಾಶಗಳಿಂದಾಗಿ ರಂಜಕತೆಯ ಅಂಶ ಪ್ರಧಾನವಾಗುತ್ತದೆ. ಪಂಜರದ ಹುಲಿ-ಸಿಂಹಗಳು ನೋಡು ವವರ ಭಯ-ಕುತೂಹಲಗಳನ್ನು ಮನರಂಜನೆಯಾಗಿ ಪರಿವರ್ತಿಸಿಕೊಳ್ಳಲು ಸಹಾಯಕ. ಕಥಾಸಾಕ್ಷ್ಯ ಚಿತ್ರದಲ್ಲಿನ ಹುಲಿ-ಸಿಂಹಗಳು ಇಂಥ ಅವಕಾಶವನ್ನು ಅನೇಕ ಪಟ್ಟು ಹೆಚ್ಚಿಸುವುದರಿಂದ ಇದರ ಲಾಭವನ್ನು ಪಡೆದುಕೊಳ್ಳ ಬಯಸುವ ಮನರಂಜನಾ ಉದ್ಯಮ, ವನ್ಯಜೀವಿಪ್ರೇಮಿ ಸಾಹಸಪ್ರಿಯರು ತೊಡಗಿಕೊಳ್ಳುವ ವನ್ಯಜೀವಿ ಚಿತ್ರಗಳ ನಿರ್ಮಾಣಕ್ಕೆ ಹಣ ಒದಗಿಸುತ್ತವೆ. ಪರೋಕ್ಷವಾಗಿ ಇಂಥ ಚಿತ್ರಗಳ ಗುಣಮಟ್ಟದ ಮೇಲೆ ನಿರ್ಮಾಣದಿಂದ ಹಿಡಿದು ಆಯ್ಕೆಯವರೆಗೂ ಇದರ ಪ್ರಭಾವ ಕೆಲಸ ಮಾಡುತ್ತದೆ. ಕ್ರೂರಪ್ರಾಣಿಗಳು ತಮ್ಮ ಬಲಿಯನ್ನು ಅಟ್ಟಾಡಿಸಿಕೊಂಡು ಬೇಟೆಯಾಡಿ ಕೊಲ್ಲುವುದು ಎಲ್ಲಾ ವನ್ಯಜೀವಿ ಮನೋರಂಜನಾ ಚಿತ್ರಗಳಲ್ಲಿನ ಪ್ರಧಾನ ರೋಚಕ ಅಂಶ. ದಿ ಪ್ಯಾಕ್ ಚಿತ್ರದ ೫ನೆಯ ಎಪಿಸೋಡ್ ನಲ್ಲಿ ಕಾಡುನಾಯಿಗಳು ಸಂಘಟಿತವಾಗಿ ನಿಯತ ವೇಗದಲ್ಲಿ ಕಡವೆಯ ಬೆನ್ನುಹತ್ತುವ ದೃಶ್ಯ ಅದಕ್ಕೆ ಜೋಡಿಸಿದ ಸಂಗೀತದ ಹಿನ್ನೆಲೆಯಲ್ಲಿ ರೋಮಾಂಚಕಾರಿಯಾಗಿದೆ.

ಮೈಸೂರಿನ ಚಿತ್ರಪ್ರದರ್ಶನದಲ್ಲಿ ನನ್ನ ಗಮನ ಸೆಳೆದ ಮತ್ತೊಂದು ಅಂಶವನ್ನು ಇಲ್ಲಿ ಕಾಣಿಸುವುದು ಅಪ್ರಸ್ತುತವಲ್ಲ. ದಿ ಪ್ಯಾಕ್ ನಲ್ಲಿ ಕಾಡುನಾಯಿಗಳು ತಮ್ಮಷ್ಟಕ್ಕೆ ತುಂಬಾ ಸಂಕೋಚ ಸ್ವಭಾವದ, ಮನುಷ್ಯರ ಸನಿಹದಿಂದ ದೂರ ಹೋಗುವ ಪ್ರಾಣಿಗಳೆಂದು ಬಿಂಬಿತವಾಗಿವೆ. ಚಿತ್ರದ ಕೊನೆಯ ದೃಶ್ಯದಲ್ಲಿ ಕಾಳ್ಗಿಚ್ಚು ಉಂಟುಮಾಡಿದ ಆತಂಕವನ್ನು ಮರೆಸಿ ಪುಟಪುಟನೆ ಓಡುವ ಎಳೆಕುನ್ನಿಗಳ ತುಂಬು ಸಂಸಾರದ ಕಾಡುನಾಯಿಗಳ ತಂಡದ ಚಿತ್ರಣವಿದೆ. ಈ ದೃಶ್ಯ ನೋಡುವವರಲ್ಲಿ ಸಾರ್ಥಕತೆ ಯ ಭಾವವನ್ನು ತುಂಬುತ್ತದೆ. ಮರುಕ್ಷಣದಲ್ಲೇ ಈ ಸಾರ್ಥಕತೆಯ ಭಾವವನ್ನು ವಿಜೃಂಭಿಸಿ ತೋರಿಸಲೋ ಎಂಬಂತೆ ನಾಡಂಚಿಗೆ ಬಂದ ಕಾಡುನಾಯಿಗಳ ತಾಣದ ಸಮೀಪವೇ (ಅಥವಾ ಹಾಗೆಂದು ನಂಬುವಂತೆ) ಕೈಯಲ್ಲಿನ ಟ್ರಾನ್ಸಿಸ್ಟರಿನಿಂದ ಹರಿದುಬರುತ್ತಿರುವಂತೆ ಸೂಚಿಸುವ ನಮ್ಮ ಸಂಸಾರ ಆನಂದ ಸಾಗರ ಪ್ರೀತಿಯೆಂಬ ದೈವವೇ ನಮಗಾಧಾರ ಎಂಬ ಸಾಲಿನ ಸಿನಿಮಾಹಾಡನ್ನು ಗಟ್ಟಿಯಾಗಿ ಕೇಳಿಸುತ್ತಾ ಸಾಲುಗಟ್ಟಿ ಸಾಗುವ ಹಳ್ಳಿಗರ ದೃಶ್ಯ್ರವಿದೆ. ಇದನ್ನು ಕಂಡಾಗ ಸಹಜವಾಗೇ ರೋಮಾಂಚನಗೊಂಡ ನೋಡುಗರಿಂದ ಕರತಾಡನ ಬಂತು. ಭಾವೋದ್ರೇಕದ ಮೂಲಕ ಚಪ್ಪಾಳೆ ಗಿಟ್ಟಿಸುವ ನಾಟಕೀಯ ಸನ್ನಿವೇಶದ ಸಂಕಲಿತ ಸೇರ್ಪಡೆ ಈ ದಶ್ಯ. ಇದನ್ನು ಸಹಜ ಸಾಂದರ್ಭಿಕ ಫುಟೇಜ್ ಎಂದು ಒಪ್ಪುವುದು ಕಷ್ಟ. ಈ ದೃಶ್ಯತುಣುಕಿನ ಸೇರ್ಪಡೆಯ ಚಪಲವನ್ನು ತಡೆದುಕೊಳ್ಳ ಬಹುದಿತ್ತಲ್ಲವೇ ಎಂದು ಕೃಪಾಕರ ಅವರನ್ನು ಖಾಸಗಿಯಾಗಿ ಕೇಳಿದೆ. ಕನ್ನಡದ ಹಾಡು ವಿಶ್ವದ ಜನರ ಕಿವಿಗೆ ಬೀಳಲಿ ಎಂದು ಹಾಗೆ ಮಾಡಿದ್ದೇವೆ ಎಂದರು. ಜೊತೆಗೆ ಈ ದೃಶ್ಯ ಆಯೋಜಿಸಿದ್ದಲ್ಲ ಸಹಜ ಎಂದರು. ಎಲ್ಲಕ್ಕಿಂತ ಹೆಚ್ಚಾಗಿ ವೈಲ್ಡ್ ಸ್ಕ್ರೀನ್ ಚಿತ್ರೋತ್ಸವದಲ್ಲಿ ಅದಕ್ಕೆ ನೋಡುಗರ ವಿಶೇಷ ಮೆಚ್ಚುಗೆ ದೊರೆಯಿತು ಎಂದೂ ಕೃಪಾಕರ ಹೇಳಿದರು.

ವನ್ಯಜೀವಿ ಚಿತ್ರ ತಯಾರಿಕೆಯಲ್ಲೂ ಮನುಷ್ಯರಲ್ಲಿರುವಂತೆ ವರ್ಗಭೇದ, ಮೇಲು-ಕೀಳು ಮುಂತಾದ ತರತಮಗಳಿವೆ. ಸಿಂಹ ಹುಲಿ ಚಿರತೆ, ಆನೆ ಮುಂತಾದ ದೊಡ್ಡ-ಅಪಾಯಕಾರಿ ಪ್ರಾಣಿಗಳನ್ನು ಚಿತ್ರೀಕರಿಸುವುದಕ್ಕೆ ಚಿತ್ರತಯಾರಿಕರಿಗೆ ಕಾಡಿನ ಪ್ರೀತಿಯೊಂದಿಗೆ ಲಗತ್ತಾದ ವಿಶೇಷ ಉಪಕರಣ-ಸಾಧನಗಳು, ಸಾಹಸಪ್ರಿಯತೆ, ಹೆಸರು-ಹಣಮೂಲದ ಬಲ, ಅಧಿಕಾರಸ್ಥರು-ಅರಣ್ಯಾಧಿಕಾರಿ ಗಳೊಂದಿಗೆ ಸ್ನೇಹಸಂಬಂಧ, ಮಹತ್ವಾಕಾಂಕ್ಷೆ ಗಳು ಬೇಕು. ಕೋತಿ, ಹಕ್ಕಿ, ಮೀನು, ಹಾವು, ಚೇಳುಗಳ ಜೀವನ ಕುರಿತು ಚಿತ್ರಮಾಡಲು ಇವೆಲ್ಲದರ ಜೊತೆಗೆ ಅಸಾಧಾರಣ ಪರಿಶ್ರಮ, ವಿಶೇಷವಾಗಿ ಈ ಜೀವಿಗಳ ಕುರಿತಾದ ಸಹನೆ-ಪ್ರೀತಿಗಳು ಬೇಕು. ಹೂವು, ದುಂಬಿ, ಹುಳ-ಕೀಟಗಳನ್ನು ಚಿತ್ರೀಕರಿಸುವುದಕ್ಕೆ ವೈಜ್ಷಾನಿಕ ಪರಿಣತಿ ಯೊಂದಿಗೆ ಮತ್ತೂ ವಿಶೇಷ ಉಪಕರಣಗಳು ಅಗತ್ಯ. ಆದರೆ ಮನುಷ್ಯರನ್ನು ಕಂಡರೆ ಸಾಕು ಓಡಿ ಮರೆಯಾಗುವ ತೋಳ, ನರಿ, ಕತ್ತೆಕಿರುಬ, ಕಾಡುನಾಯಿಗಳನ್ನು ಚಿತ್ರೀಕರಿಸಲು ಪ್ರಧಾನವಾಗಿ ವ್ಯವಧಾನ ಬೇಕು. ಇವು ಕಾಡಿನ ವರ್ಗನೆಲೆಯ ಶ್ರೇಣಿಯಲ್ಲಿ ಪರಿಧಿಯಂಚಿನ ಜೀವಿಗಳು. ಇವುಗಳ ವರ್ತನೆ, ಜೀವನಕ್ರಮಗಳ ಅಧ್ಯಯನ, ಚಿತ್ರತಯಾರಿಕೆಗೆ ಬೇರೆಯದೇ ಆದ ದೃಷ್ಟಿಕೋನವುಳ್ಳ ಬಿಂಬಗ್ರಹಣ ಅಗತ್ಯ. ತೇಜಸ್ವಿಯವರ ಸಾಮಾಜಿಕಪ್ರಜ್ಞೆ, ಕಾಡಿನಪ್ರೇಮ, ಪಕ್ಷಿವೀಕ್ಷಣೆ, ಬಿಂಬಗ್ರಹಣಪರಿಣತಿ ಮತ್ತು ಸಾಹಿತ್ಯಕ ಸೃಜನಶೀಲತೆಗಳ ಬೆನ್ನಿಗೆ ಕುತೂಹಲ, ಅಧ್ಯಯನಶೀಲತೆ, ಚಿಂತನಸಾಮರ್ಥ್ಯ ಹಾಗೂ ಅವನ್ನು ನಗದೀಕರಿಸಿಕೊಳ್ಳುವ ಆರ್ಥಿಕ ಹಿತಾಸಕ್ತಿಗಳು ಇವೆ. ಇವನ್ನು ಒಟ್ಟಿಗೆ ಒಂದು ಕಥಾನಕವಾಗಿ ಬೆಸೆಯುವ ಕರ್ವಾಲೊ-ಮಂದಣ್ಣರಿದ್ದಾರೆ. ವನ್ಯಮೃಗಗಳ ವರ್ಗಶ್ರೇಣಿಯಲ್ಲಿ ಪರಿಧಿಯಂಚಿಗೆ ಸಲ್ಲುವ ಕಾಡುನಾಯಿಗಳ ಜೀವನಕ್ರಮದ ವಿಶೇಷ ಅಧ್ಯಯನ ಕುರಿತಾದ ದಿ ಪ್ಯಾಕ್ ಎಪಿಸೋಡ್‌ಗಳ ಹಿಂದೆ ಇಂಥ ದೃಷ್ಟಿಕೋನ ಇದೆ.