ರಾಮಚಂದ್ರ ಪಿ.ಎನ್. ಅವರ ರಾಷ್ಟ್ರಪ್ರಶಸ್ತಿ ಪುರಸ್ಕೃತ “ಪುಟಾಣಿ ಪಾರ್ಟಿ” ಚಿತ್ರ ಕುರಿತು ಉಷಾ ಕಟ್ಟೇಮನೆ ಬರೆದಿದ್ದಾರೆ. ಮಕ್ಕಳ ದಿನಾಚರಣೆಯಂದು ಎಂಥೆಂಥದೋ ಚಿತ್ರಗಳನ್ನು ಪ್ರದರ್ಶಿಸುವ ನಾವು, ನಮ್ಮ ವಾಹಿನಿಗಳು ಧನಾತ್ಮಕ ನೆಲೆಯಲ್ಲಿರುವ ಇಂಥ ಚಿತ್ರಗಳನ್ನು ಏಕೆ ಪ್ರದರ್ಶಿಸುವುದಿಲ್ಲ ಎಂಬುದು ಅವರ ಪ್ರಶ್ನೆ ಸಹ.


ಇಂದು ಮಕ್ಕಳ ದಿನಾಚರಣೆ. ನಾನೊಂದು ಮಕ್ಕಳ ಮಕ್ಕಳ ಸಿನಿಮಾ ನೋಡಿದೆ; ಅದು ಪಿ.ಎನ್.ರಾಮಚಂದ್ರ ಅವರ ’ಪುಟಾಣಿ ಪಾರ್ಟಿ’. ಮಕ್ಕಳ ಸಿನಿಮಾ ಅಂದರೆ ಹೀಗೆಯೇ ಇರಬೇಕು ಎಂಬ ಸಿದ್ಧ ಸಿದ್ಧಾಂತಗಳನ್ನೆಲ್ಲಾ ಪಕ್ಕಕ್ಕೆ ತಳ್ಳಿ ತನ್ನದೇ ದಾರಿಯನ್ನು ಕಂಡುಕೊಂಡ ಚಿತ್ರ ಇದು.

ಮಕ್ಕಳ ಚಿತ್ರ ಅಂದ ಕೂಡಲೇ ನಮ್ಮ ನೆನಪಿಗೆ ಬರುವುದು; ಪುಟಾಣಿ ಏಜಂಟ್ ೧.೨.೩, ಸಿಂಹದ ಮರಿ ಸೈನ್ಯ, ಸೂಪರ್ ನೋವಾ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಬಂದ ಬೆಟ್ಟದ ಹೂವು, ಚಿನ್ನಾರಿ ಮುತ್ತ ಇತ್ಯಾದಿ… ಆದರೆ ಇವೆಲ್ಲ ಸ್ವಲ್ಪ ಮಟ್ಟಿಗೆ ದೊಡ್ಡವರ ದೃಷ್ಟಿಕೋನದಿಂದ ನೋಡಿದ ಮಕ್ಕಳ ಚಿತ್ರಗಳು.ಆದರೆ ಪುಟಾಣಿ ಪಾರ್ಟಿ ಹಾಗಿಲ್ಲ.

ಗ್ರಾಮ ಸ್ವರಾಜ್ಯದ ಕನಸು ಕಂಡವರು ಗಾಂಧೀಜಿ. ಅದೇ ಕಲ್ಪನೆಯಲ್ಲಿ ಮೂಡಿದ್ದು ಪಂಚಾಯ್ತು ರಾಜ್ ಮಸೂದೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ಅದನ್ನು ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟದಲ್ಲಿ ಜಾರಿಗೆ ತಂದಿದ್ದರು. ಪುಟಾಣಿ ಪಾರ್ಟಿಯಲ್ಲಿ ಇದೇ ಅಧಿಕಾರ ವಿಕೇಂದ್ರಿಕರಣ ತತ್ವದ ಎಳೆಯಿದೆ. ಗ್ರಾಮ ಪಂಚಾಯ್ತಿಯಂಥ ಸ್ಥಳಿಯ ಆಡಳಿತದಲ್ಲಿ ಮಕ್ಕಳ ಸಮಿತಿಯೊಂದು- ’ಪುಟಾಣಿ ಪಾರ್ಟಿ’-ಮಹತ್ವದ ಪಾತ್ರ ವಹಿಸುತ್ತದೆ. ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಯಾಗುತ್ತದೆ. ಸಾಮಾಜಿಕ ಕಳಕಳಿಯುಳ್ಳ ಉಪಾಧ್ಯಾಯಿನಿಯೊಬ್ಬರು ಮಕ್ಕಳ ಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿ ನಿಲ್ಲುತ್ತಾರೆ.

ಸಿನಿಮಾದಲ್ಲಿ ನಾಟಕೀಯತೆ ಇಲ್ಲ. ಸ್ಸೇಟ್ ಮೆಂಟ್ ಗಳಿಲ್ಲ. ಸಿನಿಮಾದ ಆಶಯ ಸಿನಿಮಾದ ಭಾಗವಾಗಿ ಬರುತ್ತದೆ. ಸಂಯಮದ ನಿರೂಪಣೆಯಿದೆ. ಧಾರವಾಡದ ಆಡುಮಾತಿನ ಸೊಗಡಿದೆ. ಅಲ್ಲಿನ ಸ್ಥಳೀಯ ಮಕ್ಕಳ ಸಹಜಾಭಿನಯವಿದೆ. ಎಲ್ಲಕ್ಕಿಂತಲೂ ಮುಖ್ಯವಾಗುವುದು ಇಡೀ ವ್ಯವಸ್ಥೆಯೇ ಭ್ರಷ್ಟಗೊಂಡಾಗ ಮಕ್ಕಳ ಮೂಲಕ ಆಶಾವಾದವನ್ನು ಬಿತ್ತುವುದಿದೆಯಲ್ಲಾ ಅದು ನಿಜಕ್ಕೂ ಗ್ರೇಟ್.

ಕನ್ನಡದ ಪ್ರತಿಭೆಯೊಂದು ಹೊಸ ಪ್ರಯತ್ನಗಳಿಗೆ ಮುಂದಾದಾಗ ಅದಕ್ಕೆ ನಾವು ಪ್ರೋತ್ಸಾಹ ನೀಡಬೇಕು. ಅದರಲ್ಲೂ ತಾಯ್ನಾಡಿನಿಂದ ದೂರವಾಗಿ ಬದುಕುತ್ತಾ ಕನ್ನಡದ ಕೈಂಕರ್ಯದಲ್ಲಿ ತೊಡಗಿಕೊಂಡಿರುವವರ ಬಗ್ಗೆ ನಮಗೆ ಪ್ರೀತಿ, ಗೌರವಗಳಿರಬೇಕು.

ಪುಟಾಣಿ ಪಾರ್ಟಿ ನಿರ್ದೇಶಕರಾದ ಪಿ.ಎನ್.ರಾಮಚಂದ್ರ ಅವರು ಉಡುಪಿಯವರಾದರೂ ಬದುಕು ಕಟ್ಟಿಕೊಂಡಿರುವುದು ದೂರದ ಮುಂಬಯಿಯಲ್ಲಿ. ಪುಣೆಯ ಪಿಲಂ ಇನ್ ಸ್ಟಿಟ್ಯೂಟ್ ಪದವಿಧರರು. ಇವರ ತುಳು ಚಲನಚಿತ್ರ ’ಸುದ್ದೋ’ ೨೦೦೭ರಲ್ಲಿ ನವದೆಹಲಿಯಲ್ಲಿ ನಡೆದ ಒಷಿಯನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ’ಸುದ್ದೋ’ ಎಂದರೆ ಶುದ್ಧಿಕಾರ್ಯ; ಪಾವಿತ್ರ್ಯತೆಯನ್ನು ಪುನರ್ ಸ್ಥಾಪಿಸುವುದು.ಇದು ತುಳುನಾಡಿನಲ್ಲಿ ಆಚರಿಸುವ ಒಂದು ಧಾರ್ಮಿಕ ವಿಧಿ.

ಪುಟಾಣಿ ಪಾರ್ಟಿ ರಾಮಚಂದ್ರರ ಎರಡನೆ ಚಿತ್ರ. ಕಡಿಮೆ ವೆಚ್ಚದಲ್ಲಿ ತಯಾರಾದ ಈಚಿತ್ರ ಉತ್ತಮ ಮಕ್ಕಳ ಚಿತ್ರವೆಂದು ರಾಷ್ಟ್ರ ಪ್ರಶಸ್ತಿ ಪಡೆಯಿತು. ಕೈರೋದಲ್ಲಿ ನಡೆದ ೨೦ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಇಂಥ ಚಿತ್ರವನ್ನು ಮಕ್ಕಳದಿನಾಚರಣೆಯಂದು ತಮ್ಮ ತಾಯ್ನಾಡಿನ ಬಂಧುಗಳು ನೋಡಿ ಆನಂಧಿಸಲಿ; ಪ್ರೋತ್ಸಾಹಿಸಲಿ ಎಂಬ ಉದ್ದೇಶದಿಂದ ಅವರು ಕನ್ನಡದ ಟಿವಿ ಚಾನಲ್ ಗಳನ್ನು ಸಂಪರ್ಕಿಸಿದ್ದರು. ಮಾಧ್ಯಮದ ಗೆಳೆಯರ ನೆರವನ್ನು ಕೋರಿದ್ದರು ಯಾವುದೂ ಫಲ ನೀಡಲಿಲ್ಲ.

ರಾಮಚಂದ್ರರಿಗೆ ಗೊತ್ತಿಲ್ಲದಿರಬಹುದು ಸುದ್ದಿ ಚಾನಲ್ ಗಳು ರಾಜಕಾರಣಿಗಳ ಮಂಗಾಟವನ್ನು ಕವರ್ ಮಾಡುವುದರಲ್ಲಿ ಬಿಜಿ. ಮನೋರಂಜನಾ ಚಾನಲ್ ಗಳು ಟಿಅರ್ ಪಿ ಮೇಲಾಟದಲ್ಲಿ ರಿಯಾಲಿಟಿ ಶೋಗಳ ಹಿಂದೆ ಬಿದ್ದಿವೆ. ಸಂಬಂಧಪಟ್ಟವರು ಮನಸ್ಸು ಮಾಡಿದ್ದರೆ ಒಂದೂಕಾಲು ಘಂಟೆಯ ಈ ಚಿತ್ರವನ್ನು ಯಾರು ಬೇಕಾದರೂ ಪ್ರಸಾರ ಮಾಡಬಹುದಿತ್ತು. ಥಿಯೇಟರ್ ಗಳಂತೂ ಪ್ರಯೋಗಾತ್ಮ ಚಿತ್ರಗಳಿಂದ ಮಾರು ದೂರ.

ಇಂದು ಪುಟಾಣಿ ಪಾರ್ಟಿ ಲೋಕಸಭಾ ಚಾನಲ್ ನಲ್ಲಿ ಪ್ರಸಾರದ ಭಾಗ್ಯ ಕಂಡಿತು.ಈ ಹಿಂದೆ ಸಾಂಗತ್ಯದ ಗೆಳೆಯರ ಪ್ರಯತ್ನದಿಂದ ಕೆಲವು ಜನ ಪುಟಾಣಿ ಪಾರ್ಟಿಯನ್ನು ನೋಡಿದ್ದರು. ಎಲ್ಲಾ ಬಾಗಿಲುಗಳು ಮುಚ್ಚಿದಾಗಲೂ ಯಾವುದೋ ಒಂದು ಬಾಗಿಲು ನಮಗಾಗಿ ತೆರೆದಿರುತ್ತದೆ.ಅದು ಪುಟಾಣಿ ಪಾರ್ಟಿಯ ಆಶಯವೂ ಹೌದು.

Advertisements