ಸುರೇಶ್ ಕೆ. ಅವರು `ಮತ್ತೆ ಮುಂಗಾರು’ ಕುರಿತಂತೆ ವಿಕಾಸ್ ಹೆಗಡೆ ಬರೆದ ಲೇಖನಕ್ಕೊಂದು ಪ್ರತಿಕ್ರಿಯೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ. ಈ ಚಿತ್ರ ನೋಡಿದವರು ಚರ್ಚೆಯನ್ನು ಮುಂದುವರಿಸಬಹುದು.

`ಮತ್ತೆ ಮುಂಗಾರು’ ಕನ್ನಡದಲ್ಲೊಂದು ಹೊಸ ರೀತಿಯ ಚಿತ್ರ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ, ವಾಸ್ತವದಲ್ಲಿ ಆ ಚಿತ್ರ ನನಗೆ ಇಷ್ಟವಾಗಲಿಲ್ಲ! ಅದಕ್ಕೆ ಕಾರಣ, ಏನು ಹೇಳಬೇಕಾಗಿತ್ತೋ ಅದನ್ನು ಹೇಳದೆ, ಬೇಡದ್ದನ್ನೆಲ್ಲ ಚಿತ್ರಕತೆಯೊಳಗೆ ತಂದ ನಿರ್ದೇಶಕರ ಅಜ್ಞಾನ. ಹಾಗಂತ, ಭಾರತೀಯ ಯುವಕನೊಬ್ಬ ಪಾಕಿಸ್ತಾನದ ಜೈಲುಗಳಲ್ಲಿ ಚಿತ್ರಹಿಂಸೆ ಅನುಭವಿಸಿದ್ದನ್ನು ಚಿತ್ರಕತೆಯೊಳಗೆ ತರಬಾರದಿತ್ತು ಅಂತ ನಾನು ಹೇಳುತ್ತಿಲ್ಲ. ಆದರೆ, ಅದೇ ಚಿತ್ರಕತೆಯಾಗುವ ಅಗತ್ಯವಿರಲಿಲ್ಲ ಎಂಬುದಷ್ಟೇ ನನ್ನ ಭಾವನೆ.

ಜೈಲುಗಳಲ್ಲಿ ಕೊಡುವ ಚಿತ್ರಹಿಂಸೆ ಎಂಥದ್ದು ಎಂಬುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ, ಓದುತ್ತಿರುತ್ತೇವೆ. ವೈಭವೀಕರಿಸಿದ ರೂಪದಲ್ಲಿ ಸಿನೆಮಾಗಳಲ್ಲೂ ನೋಡಿದ್ದೇವೆ. ಅಂದರೆ, ಜೈಲುವಾಸ ಅನುಭವಿಸದವರೂ ಕೂಡ ಅದರ ಬಗ್ಗೆ ತಕ್ಕಮಟ್ಟಿಗೆ ತಿಳಿದುಕೊಂಡಿದ್ದಾರೆ. ನಾರಾಯಣ ಮಂಡಗದ್ದೆ ಪಾಕಿಸ್ತಾನದ ಜೈಲುಗಳಲ್ಲಿ ನರಕಯಾತನೆ ಅನುಭವಿಸಿದ್ದು ನಿಜ. ಆದರೆ, ಅವರ ಜೈಲುವಾಸದ ಅನುಭವಗಳನ್ನು ಯಥಾವತ್ತಾಗಿ ದೃಶ್ಯಮಾಧ್ಯಮದಲ್ಲಿ ಕಟ್ಟಿಕೊಟ್ಟಾಗ ಅದು ಡಾಕ್ಯುಮೆಂಟರಿ ಎನಿಸಿಕೊಳ್ಳುತ್ತದೆಯೇ ವಿನಃ ಮನರಂಜನಾ ಮಾಧ್ಯಮ ಸಿನೆಮಾ ಆಗುವುದಿಲ್ಲ. ವಸ್ತುಸ್ಥಿತಿ ಏನೆಂದರೆ, `ಮತ್ತೆ ಮುಂಗಾರು’ ಅತ್ತ ಸಿನೆಮಾವೂ ಆಗಿಲ್ಲ, ಡಾಕ್ಯುಮೆಂಟರಿಯೂ ಆಗಿಲ್ಲ! ಈ ಚಿತ್ರದಲ್ಲಿ ಹೆಸರಿಗೊಂದು ಕತೆಯಿದೆ, ಕೆಲವು ದೃಶ್ಯಗಳಿಗಷ್ಟೇ ಸೀಮಿತವಾದ ಪ್ರೇಮಕತೆಯಿದೆ. ಉಳಿದಂತೆ ಎಲ್ಲವೂ ಕತ್ತಲೆ ಕೋಣೆಯೊಳಗೆ ಕಳೆದುಹೋಗಿದೆ!

ನನ್ನ ಪ್ರಶ್ನೆ ಇಷ್ಟೆ: ಖೈದಿಗಳು ಚಿತ್ರಹಿಂಸೆ ಅನುಭವಿಸುವ ಸನ್ನಿವೇಶಗಳನ್ನು ಒಂದೂವರೆ ಗಂಟೆಗಳ ಕಾಲ ಎಳೆದಾಡಿ ಪ್ರೇಕ್ಷಕನನ್ನೂ ಹಿಂಸಿಸುವ ಅವಶ್ಯಕತೆಯಿತ್ತೇ? ಅವರು ಏನೆಲ್ಲಾ ಸಂಕಷ್ಟಗಳನ್ನು ಅನುಭವಿಸಬೇಕಾಯಿತು ಎಂಬುದನ್ನು ಕೆಲವೇ ನಿಮಿಷಗಳಲ್ಲಿ ಹೇಳಿ ಮುಗಿಸಬಹುದಿತ್ತಲ್ಲವೇ? ಅಷ್ಟೇ ಅಲ್ಲದೆ, ಜೈಲಿನೊಳಗೆ ನಡೆಯುವ ಸನ್ನಿವೇಶಗಳು, ಮಾತುಗಳೆಲ್ಲ ತುಂಬಾ ನಾಟಕೀಯವಾಗಿವೆ. ಮಾತುಗಳನ್ನು ಕಮ್ಮಿಗೊಳಿಸಿ, ಚುರುಕು ಸಂಕಲನದ ಮೂಲಕ ಐದಾರು ನಿಮಿಷಗಳಲ್ಲಿ ಈ ಎಲ್ಲ ವಿದ್ಯಮಾನಗಳನ್ನು ಪ್ರೇಕ್ಷಕರೆದುರು ಇಟ್ಟು ನಿಜವಾದ ಕತೆಗೆ ಮರಳಬಹುದಿತ್ತಲ್ಲವೇ?

ಹಾಗಾದರೆ ನಿಜವಾದ ಕತೆಯೇನು? ವಿಕಾ್ ಹೆಗಡೆ ಹೇಳುವ ಪ್ರಕಾರ, ನಾಯಕ ಮತ್ತು ಆತನ ಗೆಳೆಯರು ಮೀನುಗಾರಿಕೆಗೆಂದು ಬೋಟ್ನಲ್ಲಿ ತೆರಳಿದ ನಂತರ ನಿಜವಾದ ಕತೆ ಆರಂಭವಾಗುತ್ತದೆ. ಆದರೆ, `ಮತ್ತೆ ಮುಂಗಾರು’ ಚಿತ್ರದಲ್ಲಿ ನಿಜವಾದ ಕತೆ ಅವರು (ಮೀನುಗಾರರು) ಜೈಲುವಾಸ ಅನುಭವಿಸಿ ಭಾರತಕ್ಕೆ ಮರಳಿದ ನಂತರ ಆರಂಭವಾಗಬೇಕಿತ್ತು ಎಂಬುದು ನನ್ನ ಭಾವನೆ. ಇಪ್ಪತ್ನಾಲ್ಕು ವರ್ಷಗಳ ನಂತರ ಅವರೆಲ್ಲ ತಾಯ್ನಾಡಿಗೆ ಮರಳಿದಾಗ ಉಂಟಾಗುವ ಸ್ಥಿತ್ಯಂತರಗಳು, ಅವರ ಸಂಕಟಗಳು, ತವಕ ತಲ್ಲಣಗಳು ಇಲ್ಲಿ ಕತೆಯಾಗಬೇಕಿತ್ತು. ಆಗ ಸಿನೆಮಾ ಮತ್ತಷ್ಟು ಆಪ್ತವಾಗಬಹುದಿತ್ತೇನೋ. ನನಗೆ ಹೀಗನ್ನಿಸಿದ್ದಕ್ಕೆ ಕಾರಣ, ಚಿತ್ರದ ನಾಯಕ ಜೈಲುವಾಸ ಮುಗಿಸಿ ಬಂದ ನಂತರ ಎದುರಿಸುವ ಎರಡು ಸನ್ನಿವೇಶಗಳು. ಒಂದರಲ್ಲಿ, ನಾಯಕನನ್ನು `ಬಯ್ಯಾ’ ಎಂದು ಬಾಯ್ತುಂಬ ಕರೆಯುತ್ತಿದ್ದ ಹುಡುಗಿಯೇ ಹಾಸಿಗೆಗೆ ಆಹ್ವಾನಿಸುತ್ತಾಳೆ. ಮತ್ತೊಂದು ಸನ್ನಿವೇಶದಲ್ಲಿ ಗುರುತೇ ಸಿಗದಂತಾಗಿದ್ದ ಮಗನನ್ನು ತಾಯಿಕರುಳು ಪತ್ತೆ ಮಾಡುತ್ತದೆ. ಇಂಥದ್ದೇ ಮತ್ತಷ್ಟು ಆಪ್ತ ಸನ್ನಿವೇಶಗಳು ಚಿತ್ರಕ್ಕೆ ಬೇಕಾಗಿತ್ತು. ನಾರಾಯಣ ಮಂಡಗದ್ದೆಯವರ ಜೀವನಗಾಥೆಯನ್ನು ಹೇಳುವ ಬದಲು, ಅವರ ನೈಜ ಕತೆಯನ್ನು ಸೂರ್ತಿಯಾಗಿಟ್ಟುಕೊಂಡು ಹೊಸತಾದ ಒಂದು ಚಿತ್ರಕತೆಯನ್ನು ಹೆಣೆಯಬಹುದಿತ್ತಲ್ಲವೇ? ನಾನೆಲ್ಲೋ ಓದಿದ ಪ್ರಕಾರ, ವಿಧವೆಯೊಬ್ಬಳಿಗೆ ಬಾಳು ಕೊಡಲು ನಾರಾಯಣ ಮಂಡಗದ್ದೆ ಯೋಚಿಸುತ್ತಿದ್ದಾರಂತೆ. ಈ ಒಂದು ಎಳೆ ಕೂಡ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಬಹುದಿತ್ತು ಎಂಬುದನ್ನು ನಿರ್ದೇಶಕರು ಯಾಕೆ ಯೋಚಿಸಲಿಲ್ಲ?

ತಾಂತ್ರಿಕವಾಗಿ ಚಿತ್ರ ಶ್ರೀಮಂತವಾಗಿದೆ. ಬಹಳ ಅಪರೂಪವೆನಿಸುವ ನೆರಳು-ಬೆಳಕಿನ ಸಂಯೋಜನೆ, ಅದ್ಭುತವೆನಿಸುವ ಕೆಲವು ಬ್ಲಾಕ್ಸ್ ಚಿತ್ರದ ಅಂದ ಹೆಚ್ಚಿಸಿವೆ. ಅದಕ್ಕೆ ತಕ್ಕಂಥ ಚಿತ್ರಕತೆ ಮತ್ತು ನಿರೂಪಣೆ ಒದಗಿಸುವಲ್ಲಿ ನಿರ್ದೇಶಕರು ಸೋತಿದ್ದಾರೆ. ಅದಕ್ಕಾಗೇ ಇರಬೇಕು, `ಮತ್ತೆ ಮುಂಗಾರು’ ಮತ್ತೊಂದು `ಮುಂಗಾರು’ (ಮಳೆ) ಆಗಿಲ್ಲ!