ಬರಗೂರು ರಾಮಚಂದ್ರಪ್ಪನವರ “ಏಕಲವ್ಯ” ಚಿತ್ರದ ಕುರಿತು ಚಿತ್ರ ವಿಮರ್ಶಕ ವಿ.ಎನ್. ಲಕ್ಷ್ಮೀನಾರಾಯಣರು ಕೆಲವು ಟಿಪ್ಪಣಿ ಬರೆದಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನೂ ತಿಳಿಸಿ.
ಬರಗೂರು ರಾಮಚಂದ್ರಪ್ಪನವರ ಏಕಲವ್ಯ ಸಿನಿಮಾ ವಾಸ್ತವಶೈಲಿಯ ಸಿನಿಮಾ ಅಲ್ಲ. ಅದರ ಪಾತ್ರಗಳು, ಅವರ ವೇಷ-ಭೂಷಣ, ನಡೆ-ನುಡಿ, ವಾಸಸ್ಥಳ ಮತ್ತು ಹಿನ್ನೆಲೆ ಸಂಗೀತ ಎಲ್ಲವೂ ಪ್ರಾತಿನಿಧಿಕ ಮತ್ತು ಸಾಂಕೇತಿಕ. ಈ ಸಿನಿಮಾ, ಪ್ರತೀಕಗಳ ಮೂಲಕ ಪೌರಾಣಿಕ ನೆಲೆಯ ದಲಿತರ/ಬಡವರ ಅನುಭವವೊಂದನ್ನು ಭಿತ್ತಿಯನ್ನಾಗಿಸಿ, ಆಧುನಿಕ ಸಮಾಜದ ರಾಜಕೀಯದಲ್ಲಿನ ಅಂತರ್ಗತ ಅನ್ಯಾಯವನ್ನು, ಅದರಿಂದ ಪಾರಾಗುವ ಹಾದಿಯ ಆಯ್ಕೆ-ಕಾರ್ಯತಂತ್ರಗಳನ್ನು ಬಿಂಬಿಸಲು ಮಾಡಿದ ಸಿನಿಮೀಯ ಪ್ರಯತ್ನವಾದ್ದರಿಂದ ಇದನ್ನು ಶೈಲೀಕೃತ ವಿನ್ಯಾಸದ ಆಶಯ ಸಿನಿಮಾ ಎಂದು ಗ್ರಹಿಸಿಬಹುದೆಂದು ನನಗೆ ತೋರುತ್ತದೆ. ಹಾಗಿಲ್ಲದಿದ್ದರೆ ತಪ್ಪುಕಾರಣಗಳಿಗಾಗಿ ಈ ಚಿತ್ರವನ್ನು ಹೊಗಳುವ ಇಲ್ಲವೆ ತೆಗಳುವ ಬಿಂಬಾಸ್ವಾದನೆಯಾಗುತ್ತದೆ. ರಂಗಾಭಿನಯ, ರಂಗಸಜ್ಜಿಕೆ ಮತ್ತು ರಂಗಾಕೃತಿಗೆ ಒಗ್ಗುವ ದೃಶ್ಯಸಂಯೋಜನೆಯನ್ನು ಕ್ಯಾಮರಾ ಕೋನನಿರ್ಮಿತ ಪರಿಧಿಯೋಳಕ್ಕೆ ಒಗ್ಗಿಸಿ ಮಾಡಿದ ಚಿತ್ರ ಇದು. ಈ ಅರ್ಥದಲ್ಲಿ ಸಿನಿಮಾ ಮತ್ತು ರಂಗಭೂಮಿಯ ಸಂಯೋಜಿತ ವಿಸ್ತರಣೆಯಾಗಿ ಏಕಲವ್ಯದ ಕಾಲ-ದೇಶಗಳು ನಿರ್ಮಾಣವಾಗಿದೆ. ಉಳ್ಳವರು-ಇಲ್ಲದವರೆಂಬ ವಿಶಾಲ ತಾತ್ವಿಕ ಭಿತ್ತಿಯಲ್ಲಿ, ಶಿಷ್ಟರು-ಪ್ರಶಿಷ್ಟರು, ಊರು-ಕೇರಿ, ಅಕ್ಷರತೆ-ನಿರಕ್ಷರತೆ, ಅಧಿಕಾರಬಲರು-ನಿರ್ಬಲರು, ಪುರಾಣ-ಆಧುನಿಕತೆ, ಭೂತ-ವರ್ತಮಾನ, ಮತ್ತು ವಾಸ್ತವ-ಆಶಯಗಳ ದ್ವಂದ್ವಾತ್ಮಕ ಸತ್ಯಗಳು ಬಿಂಬಿತವಾಗಿವೆ.
ಮಹಾಭಾರತದ ಏಕಲವ್ಯ
ಶಿಷ್ಯರು ಅರಣ್ಯದಲ್ಲಿ ವಾಸಿಸುವ ಗುರುವಿದ್ದಲ್ಲಿಗೆ ಹೋಗಿ ಶಾಸ್ತ್ರಾಭ್ಯಾಸ ಮಾಡುತ್ತಿದ್ದ ಶಿಕ್ಷಣ ಪದ್ಧತಿಯಿಂದ, ಊರಲ್ಲಿ ವಾಸಿಸುವ ಶಿಷ್ಯರಿದ್ದಲ್ಲಿಗೇ ಗುರು ಬಂದು ವಿದ್ಯೆ ಕಲಿಸುವ ಪದ್ಧತಿಯ ಪ್ರಾರಂಭ  ದ್ರೋಣನಿಂದಲೇ ಆಯಿತೆಂದು ತೋರುತ್ತದೆ. ಅರಣ್ಯದ ಗುರುಕುಲದ ಪರಿಧಿಯಲ್ಲಿ ಇಲ್ಲದ ಕುಲಭೇದ, ಊರಿನ ರಾಜಾಶ್ರಯದಲ್ಲಿ ನಡೆವ ಗುರುಕುಲದಲ್ಲಿ ಕುಲಶ್ರೇಷ್ಠರು ಮತ್ತು ಕುಲಹೀನರ  ನಡುವೆ ತೀಕ್ಷ್ಣವಾದ ಗೋಡೆಗಳನ್ನು ಎಬ್ಬಿಸುತ್ತದೆ. ಇದು ಏಕಲವ್ಯನಂಥ ಅರಣ್ಯಾಸಿಗೆ ಮಾತ್ರವಲ್ಲ ಸಂದಿಗ್ಧ ಕುಲಗುರುತಿನ ಕರ್ಣನಿಗೂ ಅಡ್ಡಿಯಾಯಿತೆನ್ನುವದನ್ನು ಗಮನಿಸಬೇಕು. Pತ್ರಿಯರಿಗೆ  ಮಾತ್ರ ಸಿಗಬಹುದಾದ ಶಸ್ತ್ರಾಭ್ಯಾಸ, ಅದರಲ್ಲೂ ದೂರದಿಂದ ಅದೃಶ್ಯ ಗುರಿಯನ್ನೂ ಬೇಧಿಸಬಹುದಾದ ಬಿಲ್ಲುವಿದ್ಯೆ ಎಲ್ಲರಿಗೂ ಅಲ್ಲ ಎಂಬ ನಿಷೇಧ, ವೇದವಿದ್ಯೆ ಎಲ್ಲರಿಗೂ ಅಲ್ಲ, ಅಕ್ಷರ ಎಲ್ಲರಿಗೂ  ಅಲ್ಲ ಎಂಬಂಥ ಆಳುವವರ ನಿಯಂತ್ರಕ ನಿಷೇಧಕ್ಕೆ ಸಂವಾದಿಯಾದುದು. ರಾಮಾಯಣ ಮತ್ತು ಮಹಾಭಾರತಗಳ ಕಾಲಘಟ್ಟಗಳ ಕೊಂಡಿಯಾದ ಪರಶುರಾಮ ತನ್ನದೇ ಕಾರಣಕ್ಕಾಗಿ  ಬ್ರಾಹ್ಮಣರಲ್ಲದವರಿಗೆ ಬಿಲ್ಲುವಿದ್ಯೆಯನ್ನು ಹೇಳಿಕೊಡುತ್ತಿರಲಿಲ್ಲ. ಸಂಸ್ಕಾರದಿಂದ ಸೂತನಾಗಿದ್ದ ಕರ್ಣ, ಬ್ರಾಹ್ಮಣನೆಂದು ಸುಳ್ಳುಹೇಳಿ, ಸಿಕ್ಕಿಹಾಕಿಕೊಂಡು, ಪರಶುರಾಮನ ಸಿಟ್ಟಿಗೆ ತುತ್ತಾಗಿ  ಕಲಿತದ್ದನ್ನು ಅಗತ್ಯಬಿದ್ದಾಗ ಬಳಸಲಾರದ ಶಾಪಕ್ಕೆ ತುತ್ತಾದ Pತ್ರಿಯ. ಸುಳ್ಳು ಹೇಳದಿದ್ದರೂ ಕುಲಶ್ರೇಷ್ಠತೆಯ ಕೊರತೆಯ ನೆಪದಿಂದ ಅಧಿಕೃತ ಶಿಷ್ಯನೆಂದು ಗುರುವಿನಿಂದ ಸ್ವೀಕೃತನಾಗದ  ಅರಣ್ಯವಾಸಿ ಏಕಲವ್ಯ ತಾನೇ ಕಲ್ಪಿಸಿಕೊಂಡ ’ಗುರುಕೃಪೆ’ಯಿಂದ ಶ್ರೇಷ್ಠ ಬಿಲ್ಲುಗಾರ ನಾದರೂ ಕಲಿತ ವಿದ್ಯೆಯನ್ನು ನಿಷ್ಫಲಗೊಳಿಸುವಂಥ ಗುರುದಕ್ಷಿಣೆಯನ್ನು ದಣಿಯ ವರ್ಗಹಿತಾಸಕ್ತಿಯನ್ನು  ಒಪ್ಪಕೊಂಡು ಅನ್ಯಾಯವೆಸಗುವ ಗುರುವಲ್ಲದ ಗುರುವಿಗೆ ತೆರಬೇಕಾದ ದುರಂತಕ್ಕೆ ಒಳಗಾಗುತ್ತಾನೆ. ಆಳುವ ಧಣಿಗಳ ಹಿತಾಸಕ್ತಿಗೆ, ಉಳ್ಳವರ ಹಂಗಿಗೆ ಸಿಕ್ಕ ಬಡ ಗುರುವಿನ ಸಜ್ಜನಿಕೆ,  ಅರಣ್ಯವಾಸಿ ಶಿಷ್ಯನ ವಿದ್ಯಾಶ್ರೇಷ್ಠತೆ ಒಟ್ಟಿಗೆ ಬಲಿಯಾಗುತ್ತವೆ. ಬಡವನಾದ ಕರ್ಣನಿಗೆ ದುರ್ಯೋಧನ ಕೊಡುವ ಸಂಪತ್ತು ಮತ್ತು ಪದವಿಗಳು ಅವನ ಕುಲಹೀನತೆಯನ್ನು ನಿವಾರಿಸುತ್ತವೆ. ಆದರೆ  ಅರಣ್ಯಸಂಪತ್ತಿನ ಬಲದ ಪದವಿಯಿದ್ದರೂ ಕುಲಶ್ರೇಷ್ಠನಲ್ಲದ ಏಕಲವ್ಯ, ನಾಡಿನ ಅಧಿಕಾರ, ಕಾಡಿನ ಅಧಿಕಾರಕ್ಕಿಂತ ಶ್ರೇಷ್ಠ ಎಂಬ ಮೌಲ್ಯನಿಷ್ಕರ್ಷೆಯಲ್ಲಿ ತುಳಿತಕ್ಕೊಳಗಾಗುತ್ತಾನೆ. 
ನವಭಾರತದ ಏಕಲವ್ಯ

ಸಿನಿಮಾ ಪ್ರಾರಂಭವಾಗುವುದು ನವಭಾರತದ ಏಕಲವ್ಯ ಸರ್ಕಾರ ಕೊಡಮಾಡುವ ದ್ರೋಣ ಪ್ರಶಸ್ತಿಗೆ ಪಾತ್ರನಾಗುವ ಸಂದರ್ಭದಿಂದ. ತಮ್ಮನ ಸಾಧನೆಯನ್ನು, ಅವನು ನಡೆದುಬಂದ ದುರ್ಗಮ ಹಾದಿಯನ್ನು, ಪುನರಾವಲೋಕಿಸುವ ತ್ಯಾಗಮಯಿ-ವಾತ್ಸಲ್ಯಮಯಿ ಅಕ್ಕನ ನೆನಪುಗಳ ಮೂಲಕ ಮರುಸೃಷ್ಟಿಸಿ ಬಿಂಬಿಸುವ ವಿಧಾನದಲ್ಲಿ ನಿರೂಪಿಸಲಾಗಿದೆ. ಓದಿಗಿಂತ ಕ್ರೀಡೆಯಲ್ಲಿ ಆಸಕ್ತನಾದ ಹುಡುಗ ಏಕಲವ್ಯ, ಗುರುವಿನ ಮುಖೇನ ಶಿಕ್ಷಣ ಪಡೆಯಲಾಗದ ಬಡವ-ದಲಿತ.

ಬೇಡರ ದಣಿಯಂತಿರುವ ಶಾಸಕನ ಮಗನಿಗೆ ಓದಿನಲ್ಲಿ ಹೆಗ್ಗಳಿಕೆಯನ್ನು ಸಾಧಿಸುವ ಆಸೆ. ಆದರೆ ಅಧಿಕಾರಬಲದ ಶಾಸಕನಿಗೆ ಮಗ ಕ್ರೀಡೆಯಲ್ಲಿ ಮೇಲೆ ಬರಲೆಂಬ ಆಸೆ. ಅದಕ್ಕಾಗಿ ತರಬೇತಿ ಕೊಡಲು ಕ್ರೀಡಾಗುರುವನ್ನು ಮನೆಗೇ ಕರೆಸುತ್ತಾನೆ. ತಂದೆಯ ಕನಸನ್ನು ನನಸಾಗಿಸಲು ಮಗ ಕ್ರೀಡೆಯ ವಿದ್ಯೆಯಲ್ಲಿ ಪರಿಣತನಾಗಲು ಹೆಣಗುತ್ತಾನೆ. ಕ್ರೀಡಾ ಗುರು ಕಾವೇರಪ್ಪ ಶಿಷ್ಯವತ್ಸಲನೂ, ಧಣಿನಿಷ್ಠನೂ ಆದ ನಿಸ್ಪೃಹ. ಆದ್ದರಿಂದ ಅಕ್ಕನ ಆರೈಕೆ-ಪ್ರೀತಿಗಳ ಬಲದಿಂದ ಮುನ್ನೆಡೆಯುವ ದಲಿತ/ಬಡ ಹುಡುಗನ ಆಸೆ-ಪ್ರತಿಭೆಗಳನ್ನು ಗುರುತಿಸಿದರೂ ಅವನಿಗೆ ಗುರುವಾಗಲಾರದೆ, ಕೇವಲ ಗುರುವಾತ್ಸಲ್ಯವನ್ನು ಮಾತ್ರ ಕರುಣಿಸುತ್ತಾನೆ. ನೇರ ಶಿಕ್ಷಣದ ಬದಲು ಪರ್ಯಾಯ ವಿಧಾನದಿಂದ ನವಭಾರತದ ಏಕಲವ್ಯ ಆಟೋಟದಲ್ಲಿ ಪರಿಣತಿ ಪಡೆಯುತ್ತಾನೆ. ಸ್ಥಳೀಯ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಶಾಸಕನ ಕಣ್ಣು ಕೆಂಪಾಗಿಸುತ್ತಾನೆ. ಮೇಲಿನ ಹಂತದಲ್ಲಿ ಗೆಲ್ಲುವ ಪ್ರತಿಭೆ/ಯೋಗ್ಯತೆ ಇದ್ದೂ ಶಾಸಕನ ಕುಟಿಲತೆಗೆ ಸಿಕ್ಕಿ ಬಂಧನಕ್ಕೆ ಒಳಗಾಗುತ್ತಾನೆ. ಸ್ಕೂಲ್ ಹುಡುಗರ ಸಕಾಲಿಕ/ಆಕಸ್ಮಿಕ ಸಹಾಯ ಪಡೆದು ಸಕಾಲಕ್ಕೆ ಕ್ರೀಡಾಂಗಣ ತಲುಪಿ ಸ್ಪರ್ಧೆಯಲ್ಲಿ ವಿಜೇತನಾಗುತ್ತಾನೆ.

ಇದರೊಟ್ಟಿಗೆ ಹೆಣೆದುಕೊಂಡಿರುವ ನವಭಾರತದ ಏಕಲವ್ಯನ ವಾತ್ಸಲ್ಯಮಯಿ ಅಕ್ಕ, ಕುಲದ ಕಟ್ಟು-ಕಟ್ಟಳೆಗಳನ್ನು ಮೀರಿ ಬೆಳೆಯಲೆತ್ನಿಸುವ ಬಂಡಾಯಗಾರ್ತಿ. ಅಕ್ಷರ ಅಭಿಯಾನದ ಯೋಜನೆಯಡಿಯಲ್ಲಿ ಗುರುವಾಗಿ ಬರುವ ಅಕ್ಷರ ಎಂಬ ಯುವಶಿಕ್ಷಕನ ಶಿಕ್ಷಣ-ಸ್ನೇಹಗಳಿಂದಾಗಿ ಅರಿವು-ಪ್ರೀತಿಗಳ ಜಾಗೃತಿಯನ್ನು ಪಡೆಯುತ್ತಾಳೆ. ಸಾಕ್ಷರತೆ-ಅರಿವು-ಹೋರಾಟದ ಮಹತ್ವವನ್ನು ದಲಿತರಿಗೆ ಪ್ರತ್ಯಕ್ಷವಾಗಿ ತೋರಿಸುವ ಪ್ರಯತ್ನದಲ್ಲಿ ಶಾಸಕನ ಸಿಟ್ಟಿಗೆ ಬಲಿಯಾಗುವ ಅಕ್ಷರನ ದಾರುಣ ಸಾವು ಆಕೆಯನ್ನು ಅಧೀರಳನ್ನಾಗಿ ಮಾಡಿದರೂ ಅವನ ನೆನಪು-ಸ್ಫೂರ್ತಿಯ ಬಲದಿಂದ ತನ್ನ ಸಮುದಾಯಕ್ಕೆ ಅಕ್ಷರತೆ-ಅರಿವನ್ನು ಮೂಡಿಸುವ ತ್ಯಾಗಮಯಿ ಗುರುವಾಗುತ್ತಾಳೆ. ಬಲಿಷ್ಠ ಶಾಸಕನ ದೌರ್ಜನ್ಯದಿಂದ ಜುಗುಪ್ಸೆಗೊಂಡು, ಸ್ವತಹ ಅವನ ಹೆಂಡತಿ ಮತ್ತು ಹಿಂಬಾಲಕರೇ ನವಭಾರತದ ಏಕಲವ್ಯನ ಕುಲವನ್ನು ಬೆಂಬಲಿಸುತ್ತಾರೆ. ಕೊನೆಗೆ ದೌರ್ಜನ್ಯವೆಸಗಿದ ಶಾಸಕನೂ ಪಶ್ಚಾತ್ತಾಪದಿಂದ ಮನಃಪರಿವರ್ತನೆ ಯಾಗಿ ಎಲ್ಲರ ಒಳಿತಿಗೆ ದುಡಿಯುವ ಸಜ್ಜನನಾಗುತ್ತಾನೆ. ಗುರುದಕ್ಷಿಣೆಯಾಗಿ ಹೆಬ್ಬೆರಳು ಬೇಡಿ ಮಹಾಭಾರತದ ಏಕಲವ್ಯನನ್ನು ಆಳುವವರ ಅಡಿಯಾಳನ್ನಾಗಿ ಮಾಡಿದ ದ್ರೋಣನ ಹೆಸರಿನ ಪ್ರಶಸ್ತಿಯನ್ನು ಗುರುಸ್ಥಾನಕ್ಕೇರಿದ ನವಭಾರತದ ಏಕಲವ್ಯ ಸ್ವೀಕರಿಸಬೇಕೋ ಬೇಡವೋ ಎಂಬ ಪ್ರಶ್ನೆಗೆ ಬೇಡ ಎನ್ನುವ ಅಕ್ಕನ ಉತ್ತರ, ಏಕಲವ್ಯ ಶಿಷ್ಯನಾಗಿ ಗೆದ್ದ ಪಾರಿತೋಷಕವನ್ನು ಮೇಲೆತ್ತಿ ತೋರಿಸುವ, ಅಕ್ಷರ ತೋರಿಸಿದ ಅರಿವಿನ ಹಾದಿಯಲ್ಲಿ ನಡೆಯುವ ತೀರ್ಮಾನ, ಚಿತ್ರದ ರಾಜಕೀಯ ಆಶಯವನ್ನು ಬಿಂಬಿಸುತ್ತದೆ.

ಬೇಡರಕುಲದ ಹಿರಿಯರು ತಮ್ಮ ಕುಲದೇವತೆಯನ್ನು ಮೈಮೇಲೆ ಆಹ್ವಾನಿಸಿಕೊಂಡು ವಿಧಿ-ನಿಏಧಗಳ ಆದೇಶಕೊಡುವ ಪೂಜಾರಿಯ ಆಜ್ಞಾನುವರ್ತಿಗಳು. ಆದರೆ ಪೂಜಾರಿ ಕುಲಜನರ ಭಕ್ತಿ-ವಿಧೇಯತೆಗಳನ್ನು ಬಲಿಷ್ಠ ಶಾಸಕನ ಹಿತಾಸಕ್ತಿಯನ್ನು ಕಾಪಾಡಲು ಬಳಸಿಕೊಳ್ಳುತ್ತಾನೆ. ದೇವರಭಯ-ಭಕ್ತಿ ಇವೆಲ್ಲಾ ಅಧಿಕಾರಸ್ಥರ ಜನನಿಯಂತ್ರಕ ಸಾಧನಗಳು ಎಂಬುದು ಒರಟು ವಿವರಗಳಲ್ಲಿ ಈ ಸಿನಿಮಾದಲ್ಲಿ ಸೂಚಿತವಾಗಿದೆ. ಪೂಜಾರಿಯ ಮಗಳು ತಂದೆಯ ದಲ್ಲಾಳಿತನವನ್ನು ಒಪ್ಪದೆ ಅವನನ್ನು ಮತ್ತೆ ಮತ್ತೆ ವಿರೋಧಿಸುವ ಮೂಲಕ, ನ್ಯಾಯಪರತೆ, ವರ್ಗಹಿತ ರಕ್ತಸಂಬಂಧವನ್ನೂ ಮೀರಿದ್ದು, ಎಂದು ಗ್ರಾಮ್ಯ ಹಾಸ್ಯದ ಧಾಟಿಯಲ್ಲಿ ನಿರೂಪಿಸುತ್ತಾಳೆ.

’ಏಕಲವ್ಯ’ ವಾಸ್ತವಶೈಲಿಯ ಬಿಂಬಕೃತಿಯೆಂದು ನೋಡಲು ಯತ್ನಿಸುವವರಿಗೆ ಬುಟ್ಟಿಹೆಣೆಯುವ ಬಡಜನರ ಗುಡಿಸಲುಗಳು ನೆನ್ನೆ-ಮೊನ್ನೆ ತಂದು ಸೀಳಿದ ಹಸಿರು ಬೊಂಬುಗಳಿಂದ ಕಟ್ಟಿರುವಂತೆ, ಕಣ್ಣಿಗೆ ಢಾಳಾಗಿ ಕಾಣಿಸುತ್ತವೆ. ಕಲ್ಲು ಬಂಡೆಗಳ ಹಿನ್ನೆಲೆಗೆ ರಚಿಸಿ ಜೋಡಿಸಿದ ಕಟೌಟ್‌ಗಳಂತೆ ಗೋಚರಿಸುತ್ತವೆ. ಪಾತ್ರಧಾರಿಗಳ ಮುತ್ತಿನಂತೆ ಹೊಳೆಯುವ ದಂತಪಂಕ್ತಿ, ತೋಳುಗಳ ಮೇಲೆ ಸದಾ ಹೊಸದಾಗಿರುವ ಹಚ್ಚೆ ಮುದ್ರೆಗಳು, ಕಲ್ಲು-ಹುಲ್ಲಿನಮೇಲೆ ಸಲೀಸಾಗಿ ನಡೆಯಲು ಸಂಕೋಚಪಡುವಂತೆ ತೋರುವ, ಆಗತಾನೆ ಪಾದರಕ್ಷೆ ಕಳಚಿದ ಪಾದಗಳು, ನಡೆದೇ ಗೊತ್ತಿಲ್ಲದ ಕಾಲಿನ ಮೃದು ಬಿಳಿ ಮೀನಖಂಡಗಳು ನಮ್ಮ ರಂಗಭೂಮಿಯ ನಟರ ನಗರತೆಯನ್ನು ನೆನಪಿಸುತ್ತವೆ. ಕನ್ನಡ ಚಿತ್ರಗಳಲ್ಲಿ ಗ್ರಾಮೀಣ ಪರಿಸರದ ಪಾತ್ರಗಳು ಬಡವರೇ ಆದರೂ, ಪಾತ್ರಧಾರಿಗಳು ಮಾತ್ರ ಡಿಟರ್ಜಂಟ್ ಹೊಳಪಿನ ಹರಿದ ಗರಿಗರಿ ಬನೀನು, ಅಂಗಿ-ಚಡ್ಡಿ, ಸೀರೆ-ರವಿಕೆ ತೊಟ್ಟು, ಶ್ಯಾಂಪೂವಿನಿಂದ ತೊಳೆದ ಮೃದುಕೂದಲನ್ನು ಹಾರಾಡಿಸುತ್ತಾ, ಭಾಷೆಯ ಬಳಕೆಯಲ್ಲಿ ಮಾತ್ರ ಕೃತಕ ಗ್ರಾಮ್ಯತನವನ್ನು ಉಳಿಸಿಕೊಳ್ಳುವುದು ಸಾಮಾನ್ಯ ಅಂಶ. ಅಕ್ಷರ ಕರೆದಾಗ ಏಕಲವ್ಯನ ಅಕ್ಕ ಮೋಟರ್ ಬೈಕ್ ಏರಿ ಕುಳಿತುಕೊಳ್ಳುವ ನಾಗರಿಕ ಶೈಲಿ ನಮ್ಮ ಗಮನಕ್ಕೆ ಬಾರದೆ ಹೋಗುವುದಿಲ್ಲ. ಪಾತ್ರಗಳ ಒಟ್ಟು ಸೌಷ್ಠವಕ್ಕೆ ಹೊಂದಿಕೆ ಯಾಗುವಂತೆ ನಡೆ ನುಡಿಗಳ ಮತ್ತು ವೇಷಭೂಷಣಗಳ ನವಿರನ್ನು ತಾರದಿದ್ದರೆ ಬಿಂಬಾನುಭದ ಆಸ್ವಾದನೆಗೆ ತೊಂದರೆಯಾಗುತ್ತದೆ. ಏಕಲವ್ಯ ಚಿತ್ರದಲ್ಲೂ ಹೀಗಾಗಬೇಕೆ?

ರಂಗಕೃತಿ ಮತ್ತು ಬಿಂಬಕೃತಿಗಳು ವಾಸ್ತವವಲ್ಲದ, ಆದರೆ ವಾಸ್ತವವೆಂದು ನಂಬುವಂತೆ ಮಾಡಬಲ್ಲ ಅಥವಾ ಸೂಚಿಸಬಲ್ಲ ಕಲಾವಾಸ್ತವತೆಯನ್ನು ಆಧರಿಸಿ ರೂಪಪಡೆಯುತ್ತವೆ. ಬಿಂಬಸಹೃದಯರ ಅಲಿಖಿತ-ಅಪ್ರಕಟಿತ ಸಮ್ಮತಿಯೊಂದಿಗೆ ಇವು ಏರ್ಪಟ್ಟಾಗ ಗಮನ ಅತ್ತ ಹರಿಯುವುದಿಲ್ಲ. ಇಲ್ಲದಿದ್ದರೆ ವಾಸ್ತುಶಿಲ್ಪದ ಬದಲು ಜೋಡಿಸಿದ ಇಟ್ಟಿಗೆ ಕಲ್ಲುಗಳು ಕಣ್ಣಿಗೆ ಬೀಳುತ್ತವೆ. ಕಟ್ಟಡದ ಆಯಾಮ, ಭವ್ಯತೆ, ಸೌಲಭ್ಯಗಳು ಮತ್ತು ಕಟ್ಟಿದವರ ಉದ್ದೇಶಗಳನ್ನು ಮುಕ್ಕು ಮಾಡುತ್ತವೆ. ಉನ್ನತ ಉದ್ದೇಶವನ್ನಿಟ್ಟುಕೊಂಡು ರೂಪುಗೊಳ್ಳಲು ಯತ್ನಿಸಿದ್ದರೂ ಬಿಂಬಕಲಾಕೃತಿಯಾಗಿ ’ಏಕಲವ್ಯ’ದ ಬಿಂಬಸೌಷ್ಠವ ಕೃಶವಾಗಿದೆ. ಶೀಟಿ ಊದಿದ ತಕ್ಷಣ ಓಡಲು ಕಾತರರಾಗಿರುವ ಕ್ರೀಡಾಪಟುಗಳಂತೆ, ಕ್ಯಾಮರಾ ಚಾಲೂ ಆಗುವುದನ್ನೇ ಕಾದುಕುಳಿತವರಂತೆ ತೋರುವ ಪಾತ್ರಧಾರಿಗಳು ಶಿಸ್ತಿನಿಂದ ಚಲಿಸುವುದು, ನಿರ್ಗಮಿಸುವುದು ನೋಡುವವರ ಗಮನಕ್ಕೆ ಬರಬೇಕೇಕೆ? ಸಂಕಲನದಲ್ಲಿ ಇವನ್ನು ಸರಿದೂಗಿಸಲು ಸಾಧ್ಯವಿಲ್ಲವೆ?

’ಏಕಲವ್ಯ’ ಚಿತ್ರವನ್ನು ಪಾತ್ರಗಳ ಬದಲು ಪ್ರತೀಕಗಳನ್ನು ಬಳಸಿ ರೂಪುಗೊಂಡ ಬಿಂಬನಾಟಕವೆಂದು ನೋಡಿದರೂ ನೆರಳು-ಬೆಳಕಿನ ಛಾಯೆಗಳಾದ ಬಣ್ಣದ ವಿನ್ಯಾಸಗಳ ನಿರ್ಮಾಣಕ್ಕೆ, ಧೋರಣೆ-ಭಾವನೆಗಳ ಚಿತ್ರಣಕ್ಕೆ ಸರಿಹೊಂದುವ ದೃಷ್ಟಿ-ಕೋನಗಳ ಬಗ್ಗೆ ಗಮನಹರಿಸಿದಂತೆ ತೋರುವುದಿಲ್ಲ. ಹಸಿರು. ಕಲ್ಲುಬಂಡೆಗಳು ಮತ್ತು ಪಾತ್ರಧಾರಿಗಳ ಮುಖೋದ್ದೀಪನಕ್ಕೆ ಬೇಕಾದಷ್ಟು ಬೆಳಕನ್ನು ಹೊಂದಿಸಿ ಬಳಸಿರುವುದರಿಂದ ಇಡೀ ಚಿತ್ರಕ್ಕೆ ದೊರೆಯಬಹುದಾಗಿದ್ದ ಕಲಾ ಆಯಾಮಗಳು ತಪ್ಪಿಹೋಗಿವೆ. ಏಕಲವ್ಯ ಬಂದಿಯಾಗುಳಿಯುವ ಕಟ್ಟಡಕ್ಕೆ ಮಾತ್ರ ಪ್ರಜ್ಞಾಪೂರ್ವಕವಾಗಿ ಬೆಳಕಿನ ವಿನ್ಯಾಸ ಮಾಡಿದಂತೆ ಅನ್ನಿಸುತ್ತದೆ. ಸಾಹಿತ್ಯಕ ಭಾಷೆಯ ನುಡಿಗಟ್ಟು, ಸಂಕೇತ, ಪ್ರತಿಮೆಗಳ ಕುರಿತು ವಿಶೇಷ ಪರಿಣತಿ ಪಡೆದಿರುವ ಬರಗೂರರು, ಬಿಂಬಭಾಷೆಯಲ್ಲಿ ಕೃತಿನಿರ್ಮಿಸುವಾಗ ಅವುಗಳ ಬಳಕೆಯ ಬಗೆಗೆ ಯೋಚಿಸಿದಂತೆ ತೋರುವುದಿಲ್ಲ. ನವಭಾರತದ ಏಕಲವ್ಯನ ಹಿರಿಯರ ವಾಸಸ್ಥಾನಕ್ಕೆ ಹಿನ್ನೆಲೆಯಾಗಿ ಕಲ್ಲುಬಂಡೆ-ಹಸಿರಿನ ಕಷ್ಟ-ರಮ್ಯತೆಯ ಬದುಕು, ಶಾಸಕನ ಸಾಮಾಜಿಕ-ರಾಜಕೀಯ ಧೋರಣೆಗೆ ಸಂವಾದಿಯಾಗಿ ಕೋಟೆ-ಬಾಗಿಲಿನ ಪಾಳೆಗಾರಿಕೆಯ ರಾಜಕೀಯ, ಆಧುನಿಕ ಪ್ರಜ್ಞೆ-ಎಚ್ಚರಗಳ ಪ್ರವೇಶವನ್ನು ಸಾರುವ ಅಕ್ಷರ ಏರಿದ ಮೋಟರ್ ಬೈಕು, ಸ್ಕೂಲ್ ಹುಡುಗರ ಸೈಕಲ್ಲಿನ ಹಿನ್ನೆಲೆ, ಬಿಂಬ ಭಾಷೆಯಲ್ಲಿ ವ್ಯಕ್ತವಾಗುವಂತೆ ಇತರ ಭಾಷಿಕ ಸಂಕೇತ, ಪ್ರತಿಮೆಗಳು ಬಿಂಬಾತ್ಮಕವಾಗಿ ಮೂಡುವುದಿಲ್ಲ. ವೈಚಾರಿಕವಾಗಿ ಸ್ಪಷ್ಟತೆ, ನಿಖರತೆ ಮತ್ತು ತರ್ಕಬದ್ಧತೆಯನ್ನು ಪ್ರದರ್ಶಿಸುವ ಬರಗೂರರು ಕಲಾಕೃತಿಗಳನ್ನು ನಿರ್ಮಿಸುವಾಗ ಮನುಷ್ಯಸಂಬಂಧ, ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ಶಿಥಿಲ ಬಂಧಗಳಲ್ಲಿ, ಒರಟು ವಿಧಾನಗಳಲ್ಲಿ, ಹೇಳಿಕೆಗಳಾಗಿ ಮಂಡಿಸುತ್ತಾರೆ. ಬಹುಶಃ ಇದು ಏಕಲವ್ಯ ಚಿತ್ರದ ಬಹುದೊಡ್ಡ ಕೊರತೆ. ಸಿನಿಮಾ ಇತರ ಕಲಾಪ್ರಕಾರಗಳಂತೆ ಕಲಾತ್ಮಕ ಯೋಚನಾಕ್ರಮವೆಂದು ಗ್ರಹಿಸಿದರೆ ಸಿನಿಮಾ ಕೇವಲ ಸಾಹಿತ್ಯಕ ನಿರೂಪಣೆಯನ್ನು ದೃಶ್ಯರೂಪದಲ್ಲಿ ಚಿತ್ರೀಕರಿಸುವ ತಾಂತ್ರಿಕತೆಯಲ್ಲ ಎಂಬ ಅಂಶ ಗಮನಕ್ಕೆ ಬರುತ್ತದೆ. ಬಿಂಬಭಾಷೆಯ ಸಾಧ್ಯತೆಗಳ ಪರಿಣತಿ ಬಿಂಬಕೃತಿಯನ್ನು ಸಾಹಿತ್ಯಕೃತಿದಿಂದ ಬೇರೆ ಮಾಡಿ ನೋಡಲು ಕಲಾಕಾರನನ್ನು ಪ್ರೇರೇಪಿಸುತ್ತದೆ.

ಸಿನಿಮಾದ ಮತ್ತೊಂದು ಪ್ರಮುಖ ಆಯಾಮವಾದ ಧ್ವನಿ, ಶಬ್ದ ಮತ್ತು ಸಂಗೀತಗಳ ಬಳಕೆಯಿಲ್ಲದೆ ಬಿಂಬಕಲಾಕೃತಿ ಪೂರ್ಣವಾಗುವುದಿಲ್ಲ. ’ಏಕಲವ್ಯ’ದಲ್ಲಿ ಬರಗೂರರು ಬಡವರ ಸರಳ ಸಂತೋಷ, ಮತ್ತು ಆಚರಣೆಗಳಿಗೆ ಜಾನಪದ ವಾದ್ಯಗಳು, ದುಃಖ, ಸಂಕಟ, ದಾರುಣತೆಗಳಿಗೆ ಶಿಷ್ಟ ಸಂಗೀತದ ಸಾರಂಗಿ ಮತ್ತು ಬದುಕಿನ ಸಾಮಾನ್ಯತನ, ರಮ್ಯತೆ, ಭಾವನೆಗಳ ಒಕ್ಕಣೆಗೆ ತಾವೇ ರಚಿಸಿದ ಹಾಡುಗಳನ್ನು ಬಳಸಿದ್ದಾರೆ. ಕೇವಲ ಶಬ್ದದ ವಿಶೇಷ ಬಳಕೆ ಚಿತ್ರದಲ್ಲಿ ಇಲ್ಲವೆಂದೆನಿಸುತ್ತದೆ. ಉಳ್ಳವರು-ಇಲ್ಲದವರ ಭೇದವನ್ನು ಸಂಗೀತದಲ್ಲಿ ಪ್ರತ್ಯೇಕಿಸಿ ತೋರಿಸುವ ಬರಗೂರರು, ಕೂಡಿಬಾಳುವ ವರ್ಗಸಾಮರಸ್ಯದಲ್ಲಿ ಜಾನಪದ ಮತ್ತು ಶಿಷ್ಟಸಂಗೀತಗಳನ್ನು ಬೆರೆಸಿ ಸಂಯೋಜಿಸಿದ್ದಾರೆ.