ಬೇಳೂರು ಸುದರ್ಶನರು ಬರೆದ ಮತ್ತೊಂದು ಚಿತ್ರದ ಬರಹವಿದು. ಚಿತ್ರದ ಹೆಸರು “ಕಟಿನ್”. ನಾನಾ ಕಾರಣಗಳಿಗೆ ಈ ಚಿತ್ರವನ್ನು ನೋಡಬೇಕೆನ್ನುವುದು ಅವರ ಸಲಹೆ.

ಎರಡನೇ ಮಹಾಯುದ್ಧ ಯಾರಿಗೆ ಗೊತ್ತಿಲ್ಲ? ಹಿಟ್ಲರ್‌ನ ಶತ್ರು – ಮಿತ್ರ ದೇಶಗಳ ನಡುವೆ ಆರೇಳು ವರ್ಷ ನಡೆದ ಈ ಯುದ್ಧದಲ್ಲಿ ಸತ್ತವರೆಷ್ಟು ಎಂಬುದೆಲ್ಲ ಈಗ ಇತಿಹಾಸ. ಜರ್ಮನಿಯ ನಾಝಿಗಳು ಸ್ಥಾಪಿಸಿದ್ದ ಯಾತನಾಶಿಬಿರಗಳನ್ನು ಯಾರು ತಾನೇ ಮರೆಯಲು ಸಾಧ್ಯ? 1993ರಲ್ಲಿ ಬಂದ ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶನದ ಶಿಂಡ್ಲರ್ಸ್ ಲಿಸ್ಟ್ ಸಿನೆಮಾದಿಂದ ಹಿಡಿದು, ಕಳೆದ ವರ್ಷ ಬಂದ ದಿ ಇನ್‌ಗ್ಲೋರಿಯಸ್ ಬಾಸ್ಟರ್ಡ್ಸ್ ವರೆಗೆ ಹೊಸ ಸಿನೆಮಾಗಳೇ ಸಾಕಷ್ಟು ಬಂದಿವೆ. ವಾರ್ ಮೂವೀ ಅನ್ನೋದು ಹಾಲಿವುಡ್ ಜಗತ್ತಿನ ಒಂದು ಅತ್ಯಾಕರ್ಷಕ ಕಲ್ಟ್. ಯುದ್ಧದಲ್ಲಿ ಏನು ನಡೆಯಿತು, ಅದರಿಂದ ಮನುಕುಲ ಕಲಿಯಬೇಕಾದ ಪಾಠವೇನು… ಹೀಗೆ ನೂರಾರು ಸಿನೆಮಾಗಳು ಬಂದಿವೆ. ಸಾಮಾನ್ಯವಾಗಿ ಜರ್ಮನಿ, ಅಮೆರಿಕಾ, ಯೂರೋಪ್ ದೇಶಗಳು, ಇಂಗ್ಲೆಂಡ್ – ಇವುಗಳೇ ಈ ಸಿನೆಮಾಗಳ ಕಥೆಗಳಲ್ಲಿ ಬಂದಿವೆ.
2007ರಲ್ಲಿ ಬಂದ ‘ಕಟಿನ್’ ಸಿನೆಮಾ ಮಾತ್ರ ಇವೆಲ್ಲ ಸಿನೆಮಾಗಳಿಗಿಂತ ವಿಭಿನ್ನವಾಗೋದು ಹಲವು ಕಾರಣಗಳಿಗೆ: ಒಂದು: ಈ  ಸಿನೆಮಾದ ಕಥೆ ಪೊಲ್ಯಾಂಡ್‌ನ ನತದೃಷ್ಟ ಸೇನಾಧಿಕಾರಿಗಳ ಬಗ್ಗೆ ಇರೋದು. ಎರಡು: ಈ ಕಟಿನ್ ಸಿನೆಮಾದ ಆಧಾರವಾಗಿರೋ  ಕಥೆಯು ಅಧಿಕೃತ ಅಂತ ಜಗತ್ತಿಗೆ ತಿಳಿದಿದ್ದೇ 1989 ರಲ್ಲಿ, ಘಟನೆ ನಡೆದ 48 ವರ್ಷಗಳ ನಂತರ! ಮೂರು: ಈ ಸಿನೆಮಾವನ್ನು  ನಿರ್ದೇಶಿಸಿರೋ ಆಂದ್ರೀಜ್ ವಾಜ್ದಾ ಕೂಡಾ ಪೊಲ್ಯಾಂಡ್‌ಗೆ ಸೇರಿದ ವ್ಯಕ್ತಿ. ನಾಲ್ಕು: ಈ ದುರಂತಮಯ ಇತಿಹಾಸದಲ್ಲಿ ಮಣ್ಣಾಗಿ  ಹೋದ ಪೊಲ್ಯಾಂಡ್ ಸೇನಾಧಿಕಾರಿಗಳಲ್ಲಿ ಆಂದ್ರೀಜ್‌ನ ತಂದೆಯೂ ಒಬ್ಬರು. ಐದು: ಆಂದ್ರೀಜ್ ವಾಜ್ದಾಗೆ ವಿಶೇಷ ಆಸ್ಕರ್  ಕೊಡಬೇಕು ಎಂದು ಆಸ್ಕರ್ ಸಮಿತಿಗೆ ಪತ್ರ ಬರೆದು ಶಿಫಾರಸು ಮಾಡಿದಾತ ಸ್ವತಃ ಸ್ಟೀವನ್ ಸ್ಪೀಲ್‌ಬರ್ಗ್. ಆರು: ಈ  ದುರಂತವನ್ನು ಸ್ಮರಿಸಲು ಕಟಿನ್‌ಗೆ ಹೋಗುತ್ತಿದ್ದ ಪೊಲ್ಯಾಂಡ್‌ನ ಅಧ್ಯಕ್ಷ ಲೆಕ್ ಕಜಿನ್‌ಸ್ಕಿ ಸಹಿತ 96 ಅಧಿಕಾರಿಗಳು ವಿಮಾನದಲ್ಲೇ  ಸುಟ್ಟುಹೋಗಿದ್ದು ಇದೇ ವರ್ಷ ಏಪ್ರಿಲ್ ೧೦ರಂದು.
ದುರಂತ ಘಟಿಸಿದ ಎಷ್ಟೋ ದಶಕಗಳ ನಂತರ, ದುರಂತದಲ್ಲಿ ಜೀವ ತೆತ್ತವನ ಮಗ ಸಿನೆಮಾ ಮಾಡುವುದು, ಅದೇ ದುರಂತದ  ಸ್ಮರಣೆಗೆ ಹೋಗುತ್ತಿದ್ದ (ಕಟಿನ್ ಸಿನೆಮಾ ನಿರ್ಮಾಣಕ್ಕೆ ತನ್ನೆಲ್ಲ ಬೆಂಬಲವನ್ನೂ ನೀಡಿದ) ದೇಶದ ಅಧ್ಯಕ್ಷನೇ ವಿಮಾನದಲ್ಲಿ  ಕರಕಲಾಗುವುದು, ಎಲ್ಲವೂ ಏನೋ ಹೇಳುತ್ತಿದೆಯಲ್ಲವೆ? ಹೌದು. ಇತಿಹಾಸ ಕ್ಷಣಕ್ಷಣಕ್ಕೂ ಘಟಿಸುತ್ತಲೇ ಇದೆ. ಕಾಲದ ಗಡಿಯಾರ  `ಟಿಕ್, ಟಿಕ್’ ಎನ್ನುತ್ತಲೇ ಇದೆ.

ಹಾಗಾದರೆ ಕಥೆಯಾದರೂ ಏನು? ಕಟಿನ್ ದುರಂತ ಎಂದೇ ಕುಪ್ರಸಿದ್ಧವಾದ ಈ ಘಟನೆಯಲ್ಲಿ ಆಗಿನ ಸೋವಿಯೆತ್ ದೇಶದ ಗೂಡಚರ ಪೊಲೀಸ್ ಪಡೆ (ಎನ್ ಕೆ ವಿ ಡಿ)ಯು 1940ರ ಏಪ್ರಿಲ್ – ಮೇ ತಿಂಗಳುಗಳಲ್ಲಿ 21, 768 ವಿವಿಧ ಸ್ತರಗಳ ಪೊಲಿಶ್ ಸೇನಾ ಅಧಿಕಾರಿಗಳನ್ನು ತಲೆಗೆ ಗುಂಡಿಕ್ಕಿ ಸಾಯಿಸಿ ಹೂತುಬಿಡುತ್ತದೆ. ಅದು ಸ್ಟಾಲಿನ್ ಕಾಲದ `ನ್ಯಾಯ’. ಸ್ಮಾಲೆನ್‌ಸ್ಕ್ ಎಂಬಲ್ಲಿದ್ದ ವಧಾಸ್ಥಾನದಲ್ಲಿ ಈ ಅಧಿಕಾರಿಗಳನ್ನು ಒಬ್ಬೊಬ್ಬರನ್ನೇ ಎಳೆದು ತಂದು ತಣ್ಣಗೆ ಹಿಂಬದಿಯಿಂದ ಗುಂಡಿಕ್ಕಿ ಸಾಯಿಸುವ ಸನ್ನಿವೇಶಗಳನ್ನು ನೀವು ನೋಡುತ್ತಿದ್ದರೆ ಎದೆ ತಲ್ಲಣಿಸುತ್ತದೆ. ಆಮೇಲೆ ಅದೆಲ್ಲ ತಡವಾಯಿತೆಂದು ಅಲ್ಲಲ್ಲೇ ಈ ಪೊಲಿಶ್ ಅಧಿಕಾರಿಗಳನ್ನು ಚಕಚಕನೆ ಮುಗಿಸಿಬಿಡುವ, ಬಗೆದಿಟ್ಟ ಕಾಲುವೆಯ ಪಕ್ಕದಲ್ಲೇ ಗುಂಡಿಕ್ಕಿ ತಳ್ಳುವ, ಹೆಣದ ರಾಶಿಯನ್ನು ನೋಡಿದನೆಂದು ಒಬ್ಬ ಬಂಧಿತನಿಗೆ ಮುಸುಕುಹಾಕಿ ಮುಗಿಸಿಬಿಡುವ…. ಒಂದೆ ಎರಡೆ……. ಈ ಸಾಯಿಸುವ ಕಾರ್ಖಾನೆಯ ದೃಶ್ಯಗಳನ್ನು ನೀವು ನಿಮ್ಮ ಭಾವುಕ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಾದರೂ ನೋಡಲೇಬೇಕು….. ಮುಂದೆ ತನ್ನ ದೇಶವಾಸಿಗಳನ್ನೇ ಐದಾರು ಲಕ್ಷ ಸಂಖ್ಯೆಯಲ್ಲಿ ಕೊಂದ ಸ್ಟಾಲಿನ್‌ಗೆ ಬಹುಶಃ ಇದೇ ಕಟಿನ್ ಸ್ಫೂರ್ತಿಯಾಗಿರಬೇಕು….

ಆದರೆ ಈ ದೃಶ್ಯಗಳೆಲ್ಲ ನಿಮ್ಮ ಹೃದಯವನ್ನು ಸೀಳುವ ಮುನ್ನ ಸಿನೆಮಾದಲ್ಲಿ ಆಂದ್ರೀಜ್ ಎಂಬ ಸೇನಾಧಿಕಾರಿಯ ಕಥೆ ನಡೆಯುತ್ತದೆ. ಒಬ್ಬ ಅಪ್ಪ, ಅವನೊಗೊಬ್ಬ ಮುದ್ದಾದ ಮಗಳು, ಅವನೇ ಸರ್ವಸ್ವ ಎಂದು ಸೈಕಲ್ಲಿನಲ್ಲೇ ಅರ್ಧ ಪೊಲ್ಯಾಂಡ್ ಸುತ್ತಿ ಅವನ ಸೆರೆವಾಸದ ಸ್ಥಳಕ್ಕೆ ಬಂದ ಅವನ ಹೆಂಡತಿ, ತನ್ನ ಮಗ ಎಂಥ ಧೀರ ಎಂದು ಮನೆಯಲ್ಲಿ ಮಗನ ಫೋಟೋ ನೋಡಿ ಖುಷಿಪಡುವ ಅವನ ಅಪ್ಪ, ಅಮ್ಮ…… ಅಲ್ಲಿಂದ ಶುರುವಾಗುವ ಈ ಕಥೆಯಲ್ಲಿ ಆ ಅಪ್ಪ ಅಷ್ಟೇ ಅಲ್ಲ, ಅಂಥ ಎಷ್ಟೋ ಜೀವಿಗಳ ಕಥೆಗಳು ನಮಗರಿವಿಲ್ಲದೆ ಬಂದು ಹೋಗುತ್ತವೆ. ಯೂನಿವರ್ಸಿಟಿಗೆ ಹೋದ ಆಂದ್ರೀಜ್‌ನ ಅಪ್ಪ ಅಲ್ಲಿಂದ ಸೀದಾ ಯಾತನಾಶಿಬಿರಕ್ಕೆ ರವಾನೆಯಾಗಿ ಸಾಯುತ್ತಾನೆ.

ಇತಿಹಾಸದ ಪ್ರಕಾರವೇ ಈ ನರಮೇಧವನ್ನು ಮೊದಲು ಪತ್ತೆ ಮಾಡಿದ್ದು ನಾಝಿಗಳೇ! ಅಷ್ಟು ಹೊತ್ತಿಗೆ ರಶಿಯಾ ಮತ್ತು ಜರ್ಮನಿಯ ಸ್ನೇಹ ಹಳಸಿರುತ್ತದೆ. ನಾಪತ್ತೆಯಾದ ಪೊಲಿಶ್ ಅಧಿಕಾರಿಗಳೆಲ್ಲ ಕಟಿನ್‌ನಲ್ಲಿ ಹೂತುಹೋಗಿದ್ದಾರೆ ಎಂದು ಹಿಟ್ಲರ್‌ನ ಪ್ರಚಾರ ಅಧಿಕಾರಿ ಗೋಬೆಲ್ಸ್ ದೇಶ ದೇಶಗಳಲ್ಲಿ ಪ್ರಚಾರ ಮಾಡುತ್ತಾನೆ. ಅದಕ್ಕೆ ರಶಿಯಾವೇ ಕಾರಣ ಎಂದು ಬೊಬ್ಬಿಡುತ್ತಾನೆ. ಆದರೆ ರಶಿಯಾ ಸುಮ್ಮನಿರಬೇಕಲ್ಲ……. ಮಿತ್ರದೇಶಗಳ ಜೊತೆ ಸೇರಿದ್ದೂ, ಅದು ಈ ನರಮೇಧಕ್ಕೆ ಜರ್ಮನಿಯೇ ಕಾರಣ ಎಂದು ವಾದಿಸುತ್ತದೆ.

ಯುದ್ಧ ಮುಗಿದ ಮೇಲೆ ಪೊಲ್ಯಾಂಡ್ ಸಹಾ ಕಮ್ಯುನಿಸ್ಟ್ ದೇಶವಾಗುತ್ತದೆ. ಅಲ್ಲಿ ಈ ನರಮೇಧಕ್ಕೆ ಬಲಿಯಾದ ಕುಟುಂಬಗಳ ಸದಸ್ಯರಿಗೆ ನರಮೇಧವನ್ನು ನೆನಪಿಸುವುದಕ್ಕೂ ಪೊಲ್ಯಾಂಡ್ ಸರ್ಕಾರ ಬಿಡುವುದಿಲ್ಲ. 1989ರವರೆಗೂ ಇದೇ ಸ್ಥಿತಿ ಇತ್ತು ಎಂದರೆ ಯೋಚಿಸಿ…. 1990ರಲ್ಲಿ ಆಗ ಗೊರ್ಬಚೆವ್ ನಾಯಕತ್ವದಲ್ಲಿದ್ದ ರಶಿಯಾ ದೇಶವು ಈ ನರಮೇಧದ ಬಗ್ಗೆ ತೀವ್ರ ವಿಷಾದವನ್ನು ವ್ಯಕ್ತಪಡಿಸಿದ ಮೇಲೆಯೇ ಈ ನರಮೇಧ ನಡೆದಿದೆ ಎಂದು ಹೇಳುವುದಕ್ಕೆ ಪೊಲ್ಯಾಂಡ್ ಪ್ರಜೆಗಳಿಗೆ

ಅವಕಾಶ ಸಿಕ್ಕಿತು. 1991ರಲ್ಲಿ ಈ ನರಮೇಧದ ಕಉರಿತ ದಾಖಲೆಗಳನ್ನು ರಶಿಯಾದ ಅಧ್ಯಕ್ಷ ಬೋರಿಸ್ ಯೆಲ್ಸಿನ್ ಬಿಡುಗಡೆ ಮಾಡಿದರು.
ಇದೇ ಕಟಿನ್‌ನಲ್ಲಿ ಕೊನೆಗೂ ಸ್ಥಾಪನೆಯಾದ ಸ್ಮಾರಕಕ್ಕೆ ತೆರಳುತ್ತಿದ್ದ ಪೊಲ್ಯಾಂಡ್ ಅಧ್ಯಕ್ಷ ಲೆಕ್ ಕಜಿನ್‌ಸ್ಕಿ ಸಹಿತ 87 ಹಿರಿಯ ಆಧಿಕಾರಿಗಳು ವಿಮಾನ ದುರಂತಕ್ಕೆ ಬಲಿಯಾದರು. ಇದೂ ಒಂದು ಸಂಚಿರಬಹುದೆ ಎಂಬ ಚರ್ಚೆ ಈಗ ಅಲ್ಲಲ್ಲಿ ನಡೆಯುತ್ತಿದೆ. ಕಟಿನ್ ದುರಂತದಲ್ಲಿ ಮಡಿದ ಅಪ್ಪನ ನೆನಪಿನಲ್ಲೇ ಬೆಳೆದ ಆಂದ್ರೀಜ್ ವಾಜ್ದಾಗೆ ಈಗ 85ರ ಹರೆಯ. ಅವರು ಪೊಲ್ಯಾಂಡ್‌ನಿಂದ ಮೂಡಿ ಬಂದ ವಿಶ್ವಖ್ಯಾತ ನಿರ್ದೇಶಕರಲ್ಲಿ ಒಬ್ಬರು ಎಂದು ನನಗೆ ಈ ಸಿನೆಮಾ ನೋಡಿದಾಗಲೇ ಗೊತ್ತಾಯಿತು. ಅವರ ಬಗ್ಗೆ ಹೆಚ್ಚು ತಿಳಿಯಲು ನೀವು ವಿಕಿಪೀಡಿಯಾ ಮತ್ತು ಅವರ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಚಿಕ್ಕಪ್ಪನ ಆಸರೆಯಲ್ಲಿ ಬೆಳೆದ ಆಂದ್ರೀಜ್ ಈಗಲೂ ಸಿನೆಮಾ ನಿರ್ದೇಶನದಲ್ಲಿ ನಿರತರು.

ಒಂದು ಪುಟ್ಟ ದೇಶದ 22 ಸಾವಿರ ಜನ ಅಧಿಕಾರಿಗಳೆಲ್ಲರೂ ತಿಂಗಳೊಪ್ಪತ್ತರಲ್ಲಿ ಪಾಯಿಂಟ್ ಬ್ಲಾಂಕ್ ಗುಂಡಿಗೆ ತುತ್ತಾಗಿ ನೆಲಕ್ಕೆ ಕುಸಿದರು ಎಂಬ ಮಾಹಿತಿಯೇ ಮನ ಕಲಕುತ್ತದೆ. ಯುದ್ಧದಲ್ಲಿ ಒಂದು ಗುಂಡನ್ನೂ ಹಾರಿಸದ ಈ ಅಧಿಕಾರಿಗಳು ಹಂತಕರ ಗುಂಡಿಗೆ ತಲೆಯೊಡ್ಡಿದ ಕ್ಷಣ ಹೇಗಿದ್ದೀತು ಎಂದು ಊಹಿಸಲೇ ಕಷ್ಟ. ಸಿನೆಮಾದಲ್ಲಿಯಾದರೋ ನಟನೆ. ಆದರೆ ನಿಜ ಜೀವನದಲ್ಲಿ ಈ ಕ್ಷಣ ಹೇಗೆ ಬಂದು ಹೋಯಿತು?
ಇಂದಿನ ಜಗತ್ತಿನಲ್ಲಿ ವಾಸ್ತವವು ಕಲ್ಪನೆಗಿಂತ ಭೀಕರವಾಗಿರುತ್ತದೆ ಎಂದು ನಾನು ಕೆಲವೊಮ್ಮೆ ಹೇಳುತ್ತಿರುತ್ತೇನೆ. ಕಟಿನ್ ನೋಡಿದ ಮೇಲೆ  `ಭೀಕರ’ ಪದವೂ ಎಷ್ಟು ಕ್ಷುಲ್ಲಕವಾಯಿತಲ್ಲ ಅನ್ನಿಸುತ್ತಿದೆ.
ಕಟಿನ್ ನರಮೇಧದ ಬಗ್ಗೆ ಬಿಬಿಸಿಯೂ ಸಾಕ್ಷ್ಯ ಚಿತ್ರ ಮಾಡಿದೆ. ಇತ್ತೀಚೆಗಷ್ಟೇ (2007) ಕಟಿನ್ ನರಮೇಧ ಕುರಿತಂತೆ ‘ಕಟಿನ್: ಎ ಕ್ರೈಮ್  ವಿತೌಟ್ ಪನಿಶ್‌ಮೆಂಟ್’ ಎಂಬ 600 ಪುಟಗಳ ದಾಖಲೆಯುಕ್ತ ಪುಸ್ತಕ ಪ್ರಕಟವಾಗಿದೆ.
ಪೊಲಿಶ್ ಭಾಷೆಯಲ್ಲಿರುವ ಕಟಿನ್ ಸಿನೆಮಾವನ್ನು ಇಂಗ್ಲೀಶ್ ಸಬ್‌ಟೈಟಲ್ ಹಾಕಿಕೊಂಡು ನೋಡಬೇಕು.

ಸಿನೆಮಾ ಕುರಿತ ಒಂದು ಒಳ್ಳೆಯ ವರದಿಗೆ ಈ ಕೊಂಡಿಯನ್ನು ಅನುಸರಿಸಿ.