ಸಾಂಗತ್ಯ ಮ್ಯಾಗಜೈನ್ ನ ಮೊದಲ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಮತ್ತೊಂದು ಲೇಖನ ವಿನಯ್ ರದ್ದು. ಒಂದು ಸಿನಿಮಾ ನಮ್ಮನ್ನು ತಟ್ಟಿ ಬಿಡುತ್ತದೆ ಎನ್ನುತ್ತೀವಲ್ಲ ಅದೇ ಧಾಟಿಯಲ್ಲಿ ಅವರಿಗೆ ತಟ್ಟಿದ ಸಿನಿಮಾದ ಬಗ್ಗೆ ಬರೆದಿದ್ದಾರೆ. ಓದಿ ನೋಡಿ.

ಆಗ ನಾನು ‘ಪ್ರಜಾವಾಣಿ’ಯಲ್ಲಿದ್ದೆ. ಆ ದಿನ ನಿಖರವಾಗಿ ನೆನಪಿದೆ. 2005ರ ಜನವರಿ 20; ಶುಕ್ರವಾರ. ಅವತ್ತು ವಾರದ ರಜೆ. ಸಂಜೆ ಸ್ನೇಹಿತರೆಲ್ಲ ಕೇರಂ ಆಡಲು ಸ್ನೇಹಿತನ ಮನೆಯಲ್ಲಿ ಸೇರಿದ್ದೆವು. ಸ್ಟ್ರೈಕರ್ ಮತ್ತು ಪಾನ್‌ಗಳ ನಡುವೆ ಡಿಶುಂ ಡಿಶುಂ ನಡೆಯುವ ವೇಳೆಗೆ- ನಮ್ಮ ನಡುವೆಯೂ ಸಣ್ಣದಾಗಿ ಮಾತಿನ ಚಕಮಕಿ ಆರಂಭಗೊಂಡಿತ್ತು. ‘ಕೇರಂ ಮುಗಿಸಿ ಕನ್ನಡ ಚಿತ್ರ ನೋಡಬೇಕೋ? ಹಿಂದಿ ಸಿನಿಮಾಗೆ ಹೋಗಬೇಕೋ?’ ಎಂಬ ವಿಚಾರವಾಗಿ ಆರಂಭಗೊಂಡ ಚರ್ಚೆ, ಎಲ್ಲೆಲ್ಲೋ ಹೊರಳಿ, ಯಾವ್ಯಾವುದೋ ವಿಷಯಕ್ಕೆ ತಿರುಗಿ- ಹೊಡೆದಾಟದ ಮಟ್ಟಕ್ಕೆ ಹೋಯಿತು. ಅಲ್ಲಿಂದ ಏಕಾಂಗಿಯಾಗಿ ಹೊರಬಿದ್ದ ನನ್ನಲ್ಲಿ- ಸರಿ ಯಾರದು? ತಪ್ಪು ಯಾರದು?’ ಎಂಬ ವಿಶ್ಲೇಷಣೆಗಿಂತ ‘ಸ್ನೇಹ ಎಂದರೆ ಇಷ್ಟೇನಾ?’ ಎಂಬ ಪ್ರಶ್ನೆ ಒಂದು ಕಡೆ, ‘ಜೀವಕ್ಕೆ ಜೀವ ಕೊಡುತ್ತಾರೆ ಎಂದು ನಂಬಿದ್ದ ಸ್ನೇಹಿತರೊಂದಿಗೆ ಹೀಗೆಲ್ಲ ಆಯಿತಲ್ಲ?’ ಎಂಬ ಸಂಕಟ ಮತ್ತೊಂದು ಕಡೆ ಕೊರೆಯುತ್ತಿತ್ತು. ಮನೆಗೆ ಹೋಗಲು ಮನಸ್ಸಾಗಲಿಲ್ಲ. ದಾರಿ ಮಧ್ಯೆ, ‘ಆಟೋಗ್ರಾಫ್. ತಮಿಳು/ಕಲರ್. ಚೌಡೇಶ್ವರಿ ದಿನ ೪ ಆಟ’ ಎಂಬ ಪೋಸ್ಟರ್ ಕಣ್ಣಿಗೆ ಬಿತ್ತು. ಈ ವೇಳೆಗೆ ‘ಗ್ರಾಫ್’ ಬಿಡುಗಡೆಯಾಗಿ ಏಳೆಂಟು ತಿಂಗಳು ಕಳೆದಿತ್ತು.

‘ಒಳ್ಳೆಯ ಚಿತ್ರ’ ಎಂದು ಅವರಿವರು ಹೇಳಿದ್ದು ಬಿಟ್ಟರೆ ನೋಡಲೇಬೇಕಾದ ಚಿತ್ರ ಎಂದು ನನಗೆ ಅನ್ನಿಸಿರಲಿಲ್ಲ. ಅತ್ಲಾಗೆ ಟೆಂಟೂ ಅಲ್ಲದ, ಇತ್ಲಾಗಿ ಚಿತ್ರಮಂದಿರವೂ ಅಲ್ಲದ ಕತ್ರಿಗುಪ್ಪೆ ಸಮೀಪದ ಚೌಡೇಶ್ವರಿ ಚಿತ್ರಮಂದಿರದಲ್ಲಿ ಸ್ನೇಹಿತರ ಮಾತುಗಳನ್ನು ಮರೆಯಲು- ‘ಆಟೋಗ್ರಾಫ್’ ನೋಡಲು ಹೋದೆ.

ಆದರೆ ಆಗಿದ್ದೇ ಬೇರೆ. ಇದ್ದ ಸ್ನೇಹಿತರನ್ನು ಮರೆಯಲು ಹೋಗಿದ್ದ ನನಗೆ, ಅಸ್ಪಷ್ಟವಾಗಿ ನೆನಪಿಗೆ ಬರುತ್ತಿದ್ದ, ನೆನಪೇ ಆರಿ ಹೋಗಿದ್ದ ಸ್ನೇಹಿತರನ್ನೂ ನೆನಪಿಗೆ ತಂದುಕೊಳ್ಳವಂತೆ ಮಾಡಿತು. ಇನ್ನೂ ದೊಡ್ಡ ತಮಾಷೆ ಎಂದರೆ, ಸಿನಿಮಾ ನೋಡುವಾಗ ನಾನು ಬಿಕ್ಕಿಬಿಕ್ಕಿ ಅತ್ತದ್ದು ನೆನಪಿಲ್ಲ. ಆದರೆ, ನನಗೆ ಆರೋ, ಏಳೋ ವರ್ಷ ಇದ್ದಾಗ- ‘ಮೃಗಾಲಯ’ ಸಿನಿಮಾದಲ್ಲಿ ಪ್ರಾಣಿಗಳಿಗೆ ವಿಷವುಣಿಸಿ, ಅವು ನರಳಾಡುವ ದೃಶ್ಯ ನೋಡಿ ಮುಂದಿನ ಎರಡು ಗಂಟೆ ನಾನು ಅತ್ತದ್ದನ್ನು ನನ್ನಮ್ಮ- ಅಂಬರೀಶ್ ಮುಖ ಕಂಡಾಗಲೆಲ್ಲ ನೆನೆಯುತ್ತಾರೆ. ಆದರೆ, ಆಟೋಗ್ರಾಫ್ ಚಿತ್ರ ನೋಡುವಾಗ- ಅಳು ನಿಯಂತ್ರಣಕ್ಕೆ ಬರಲೇ ಇಲ್ಲ. ಏಕೆಂದರೆ, ನನಗೂ ನನ್ನ ಬಾಲ್ಯದ ಗೆಳೆಯರಾದ ಚಂದು, ಸೀನ, ಪ್ರೀತಂ, ಪರೀಕ್ಷಿತ್, ಆಸಿಫ್, ವಿಶ್ವನ ಮುಖಗಳು ತೀವ್ರವಾಗಿ ಕಣ್ಣಮುಂದೆ ನಿಂತುಬಿಟ್ಟರು. ಪೋನಿಟೈಲ್ ಹಾಕಿಕೊಂಡು, ಮುಂದಿನ ಎರಡು ಹಲ್ಲು ಬೀಳಿಸಿಕೊಂಡು, ಉಳಿದ ನಾಲ್ಕು ದಂತಕ್ಕೆ ಹುಳುಕು ಹತ್ತಿಸಿಕೊಂಡಿದ್ದ ಸ್ಮಿತಾಳನ್ನು ಆ ಕ್ಷಣವೇ ನೋಡುವ ಆತುರ ಹೆಚ್ಚಾಯಿತು. ಅವಳತ್ತ ‘ಐ ಲವ್ ಯು’ ಎಂದು ಚೀಟಿಯಲ್ಲಿ ಉಂಡೆ ಕಟ್ಟಿ ಬಿಸಾಡಿದ್ದು, ಪ್ರಕರಣ ಲಿಂಡಾ ಮಿಸ್‌ಗೆ ಗೊತ್ತಾಗಿ, ಇಡೀ ದಿನ ಕ್ಲಾಸ್ ರೂಂ ಎದುರು ‘ಐ ಲವ್ ಯು’ ಚೀಟಿಯನ್ನು ಸ್ಲೇಟ್ ಬೋರ್ಡ್‌ನಂತೆ ಹಿಡಿದು ನಿಂತದ್ದು, ಸ್ಮಿತಾ ಹೋಗ್ತಾ ಬರ್ತಾ ನನ್ನನ್ನೂ, ಚೀಟಿಯನ್ನೂ ನೋಡಿ ಶಬ್ದಸಹಿತ ನಗುತ್ತಿದ್ದ ದೃಶ್ಯ ನೆನೆದು ಇನ್ನಷ್ಟು ಕಣ್ಣೀರು ಉಕ್ಕಿ ಬಂತು.

ತೆರೆಯ ಮೇಲೆ ನಾಯಕನ ಬಾಲ್ಯ ಮುಗಿದು, ಕಾಲೇಜು ಫ್ಲ್ಯಾಷ್‌ಬ್ಯಾಕ್ ಆರಂಭವಾಗುತ್ತಿದ್ದಂತೆ-ಪ್ರದೀಪ, ಸಂದೀಪ, ರಾಜೀವ, ಕಾರ್ತಿಕ್, ಚಂದನ್, ಬಿಂದುಸಾರ, ಪ್ರಶಾಂತ್, ಜಿಜೇಶ್, ವಿಷ್ಣು, ಕಾವ್ಯ, ವೃಂದಾ, ಪ್ರತಿಮಾ, ಚಂದ್ರಕಲಾ, ಸ್ವಾತಿ ಹೀಗೆ ಒಬ್ಬರ ಮೇಲೊಬ್ಬರ ಭಾವಚಿತ್ರಗಳು ಫ್ರೇಮ್‌ನಂತೆ ಹಾದುಹೋದವು. ಕಾಲೇಜು ದಿನಗಳ ತರ‍್ಲೆ, ಕಿತಾಪತಿ ಪ್ರಸಂಗಗಳು ನೆನಪಾದವು. ಇವುಗಳನ್ನು ನೆನೆಯುತ್ತಲೇ, ನಗುತ್ತಲೇ, ಅಳುತ್ತಲೇ, ಚಿತ್ರವನ್ನೂ ನೋಡುವಾಗ- ನಾಯಕನಿಗೆ ನಾಯಕಿ ಮೇಲೆ ಪ್ರೀತಿ ಶುರು ಆಗುತ್ತದೆ. ಆಗ ನನ್ನ ಹೃದಯದಲ್ಲೂ ಚಿಟ್ಟೆಯ ಕಲರವ. ಮಾಧವಿಯ ನೆನಪು. ಅವಳನ್ನು ನಗಿಸಲೇಬೇಕು ಎಂದು ನಾಲ್ಕಾರು ಜೋಕಿನ ಬುಕ್‌ಗಳನ್ನು ಕೊಂಡು, ಅವಳಿಗೆ ಹೇಳುತ್ತಿದ್ದ, ಮನೆಯಲ್ಲಿ ಕಾಸು ಕದ್ದು ಅವಳಿಗೆ ನಿತ್ಯ ಗ್ರಿಲ್ ಸ್ಯಾಂಡ್‌ವಿಚ್ ತಿನ್ನಿಸುತ್ತಿದ್ದ, ಬೇಕಂತಲೇ ಅವಳೆದುರು ಚೆಸ್‌ನಲ್ಲಿ ಸೋಲುತ್ತಿದ್ದ, ಅವಳಿಗೆ ಇಷ್ಟದ ಅಷ್ಟೂ ಗಾಯಕ- ಗಾಯಕಿಯರ ಕ್ಯಾಸೆಟ್‌ಗಳನ್ನು ಸಾಲ ಮಾಡಿ ಪ್ರೆಸೆಂಟ್ ಮಾಡುತ್ತಿದ್ದ, ಬೈಕ್‌ನಲ್ಲಿ ಕೂರಿಸಿಕೊಳ್ಳಲು ಮತ್ತು ಸಿನಿಮಾಗೆ ಕರೆದೊಯ್ಯಲು ಮಾಡಬಾರದ ಉಪಾಯಗಳನ್ನೆಲ್ಲ ಮಾಡುತ್ತಿದ್ದ, ಅವಳನ್ನು ಪ್ರೀತಿಯ ಬಲೆಗೆ ಹೇಗೆ ಕೆಡವಿಕೊಳ್ಳುಬೇಕು? ಮದುವೆಗೆ ಹೇಗೆ ಒಪ್ಪಿಸುವುದು? ಹನಿಮೂನಿಗೆ ಎಲ್ಲಿಗೆ ಹೋಗೋದು? ಹೆಣ್ಣು ಮಗುವಾದರೆ ಏನಪ್ಪಾ ಹೆಸರಿಡೋದು ಎಂದು ಇಂಟರ್‌ನೆಟ್‌ನಲ್ಲಿ ಹುಡುಕುತ್ತಿದ್ದುದು-ಹುಡುಗುಬುದ್ಧಿಯ ನೆನಪುಗಳು ಒತ್ತರಿಸಿಕೊಂಡು ಬಂದವು. ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎನ್ನುವ ಹಾಗೆ ಸೆಕೆಂಡ್ ಶೋ ಚಿತ್ರ ಮುಗಿದು ಮನೆಗೆ ಬಂದ ಮೇಲೂ ಗೆಳೆಯ- ಗೆಳತಿಯೆ ನೆನಪು ಸವಾರಿ ಮಾಡುತ್ತಲೇ ಇತ್ತು. ತಕ್ಷಣ ಅದೇಕೋ ನನ್ನ ಶಾಲೆ ಮತ್ತು ಕಾಲೇಜು ದಿನಗಳ ಆಟೊಗ್ರಾಫ್ ಪುಸ್ತಕ ವನ್ನು ನೋಡಬೇಕೆಂಬ ತಪನೆ ಶುರುವಾಯಿತು.

ಬೇಡದ ವಸ್ತುಗಳೆಂದು ನಿರ್ಧರಿಸಿ, ಆದರೆ, ಅದೇಕೋ ಬಿಸಾಕಲು ಮನಸು ಬಾರದೆ ರಟ್ಟಿನ ಬಾಕ್ಸಿನಲ್ಲಿ ತುಂಬಿದ್ದ ವಸ್ತುಗಳನ್ನು ಅಟ್ಟದ ಮೇಲಿಂದ ಇಳಿಸಿ, ಧೂಳು ಕೊಡವಿದೆ. ಮಾಧವಿ ಯಿಂದ ಕದ್ದಿದ್ದ ಇಂಕು ಮುಗಿದ ರೆನಾಡ್ಸ್ ಪೆನ್ನು- ಇನ್ನೊಮ್ಮೆ ನನ್ನ ಕಣ್ಣಾಲಿ ಗಳನ್ನು ತೇವಗೊಳಿಸಿತು. ಶಾಲೆ ಬಿಡುವ/ಕಾಲೇಜಿ ನಿಂದ ದೂರಾಗುವ ಸಂದರ್ಭದಲ್ಲಿ ಸ್ನೇಹಿತರಿಂದ ಶುಭ ಕಾಮನೆಗಳನ್ನು ಬರೆಸಿಕೊಂಡಿದ್ದ ಆಟೋಗ್ರಾಫ್ ಪುಸ್ತಕ ಸಿಕ್ಕೇಬಿಟ್ಟಿತು. ಈ ನೆನಪುಗಳ ಗಣಿಯೊಳಗೆ ಇಳಿದಾಗ ಕಣ್ಣಲ್ಲಿ ಅಕ್ಷರಶಃ ಚಕ್ರತೀರ್ಥ!

ಸಿನಿಮಾ ನೋಡಿದಾಗ ನೆನಪಿಗೆ ಬಂದದ್ದಕ್ಕಿಂತ ಮೂರು ಪಟ್ಟು ಮಂದಿ ಆಟೋಗ್ರಾಫ್ ಮೂಲಕ ನನ್ನ ಜತೆಯಾದರು. ಪ್ರತಿ ಪುಟ ತೆರೆದಾಗಲೂ ಅವರೊಂದಿಗೆ ಒಡನಾಡಿದ ಕ್ಷಣಗಳು ನೆನಪಿಗೆ ಬಂದವು. ಪುಸ್ತಕದ ಕೊನೆ ಹಾಳೆಯನ್ನು ತಿರುವು ಹಾಕುವ ಮುನ್ನವೇ ನಿರ್ಧರಿಸಿದ್ದೆ- ಇವರನ್ನೆಲ್ಲ ಮತ್ತೆ ನಾನು ನೋಡಬೇಕು, ಮಾತನಾಡಬೇಕು. ಇಷ್ಟು ದಿನ ಯಾಕೆ, ಯಾರೂ ನನ್ನನ್ನು ಹುಡುಕುವ ಪ್ರಯತ್ನ ಮಾಡಲಿಲ್ಲ ಎಂದು ಹುಸಿ ಮುನಿಸಿನಿಂದ ಪ್ರಶ್ನೆ ಕೇಳಬೇಕು ಅಂತ. ಇಡೀ ರಾತ್ರಿ ಪಿಶಾಚಿಗಳಂತೆ ಈ ಸ್ನೇಹಿತರೆಲ್ಲ ಕಾಡಿಬಿಟ್ಟರು!

ಬೆಳಗ್ಗೆ ಎದ್ದು ಕಣ್ಣುಬಿಟ್ಟರೂ ಸ್ನೇಹಿತರು ಜತೆಯಲ್ಲೇ ಇದ್ದರು. ‘ಇನ್ನು ಆಗಲ್ಲ’ ಎಂದು ತೀರ್ಮಾನಿಸಿ, ಸತ್ಯಕ್ಕೆ ಸ್ವಲ್ಪವೂ ಸಂಬಂಧವಿಲ್ಲದ ಸುಳ್ಳನ್ನು ಬಾಸ್‌ಗೆ ಬೂಸಿಬಿಟ್ಟು ಆಫೀಸಿಗೆ ಎರಡು ದಿನ ರಜೆ ಹಾಕಿದೆ. ಆಟೋಗ್ರಾಫ್ ಪುಸ್ತಕ ಕೈಗೆತ್ತಿಕೊಂಡೆ. ಆದರೆ, ಶಾಲಾ ದಿನದ ಆಟೋಗ್ರಾಫ್ ಪುಸ್ತಕದಲ್ಲಿ ಫೋನ್ ಇದ್ದ ಸ್ನೇಹಿತರು ಸಿಕ್ಕಿದ್ದು ಇಬ್ಬರೇ. ಆಗ ಫೋನ್ ನಂಬರಿನ ಸಂಖ್ಯೆ ಇದ್ದದ್ದೇ ೬. ಆದರೆ, ಆ ವೇಳೆಗಾಗಲೇ ಬೆಂಗಳೂರಿನಲ್ಲಿ ಲ್ಯಾಂಡ್‌ಲೈನ್ ಫೋನ್ ನಂಬರುಗಳ ಸಂಖ್ಯೆ ಏಳಾಗಿತ್ತು. ಸರಿ, ಇದ್ದ ನಂಬರಿನ ಹಿಂದೆ ೨ಅನ್ನು ಸೇರಿಸಿ ಅಭಿನಂದನ್‌ಗೆ ಫೋನು ಮಾಡಿದೆ. ‘ಈ ದೂರವಾಣಿ ಸಂಖ್ಯೆ ಚಾಲ್ತಿಯಲ್ಲಿಲ್ಲ’ ಎಂಬ ಉತ್ತರ ಬಂತು. ವಿಶ್ವನಿಗೆ ಫೋನು ಮಾಡಿ, ‘ವಿಶ್ವ ಇದ್ದಾನಾ?’ ಅಂದೆ. ‘ನಾನೇ ವಿಶ್ವ’ ಅತ್ತಲಿಂದ ದನಿ ಬಂತು. ‘ನಾನು ಕಣೋ…’ ಎಂದೆ. ‘ಗೊತ್ತಾಗಲಿಲ್ಲ’ ಅಂದ. ಶಾಲೆಯ ನೆನಪು ಮಾಡಿಕೊಟ್ಟೆ. ‘ಓ… ಹೋ ಉಂಡೇ…’ (ಉಂಡೆ ಕಟ್ಟಿ ಲವ್ ಲೆಟರ್ ಎಸೆದಿದ್ದ ಕಾರಣ!) ಎಂದ ಸಂಭ್ರಮದಿಂದ. ನಿನ್ನನ್ನ ನೋಡಬೇಕು. ಎಲ್ಲಿದ್ದೀಯಾ? ಕೇಳಿದೆ. ‘ಸ್ಕೂಲ್ ಹತ್ತಿರ ಇದ್ದ ಅದೇ ಮನೆ. ಬಾ’ ಎಂದ. ನನಗಂತೂ ಹೆಚ್ಚು ಹೊತ್ತು ಫೋನಿನಲ್ಲಿ ಮಾತನಾಡುವ ಆಸಕ್ತಿ ಉಳಿದಿರಲಿಲ್ಲ. ಆಟೋಗ್ರಾಫ್ ಪುಸ್ತಕ ಸಮೇತ ವಿಶ್ವನ ಮನೆಗೆ ಹೋದೆ. ಅವನನ್ನು ಬಿಗಿದಪ್ಪಿಕೊಂಡೆ. ಎಲ್ಲಿ ಕೆಲ್ಸಾ ಮಾಡ್ತಾ ಇದ್ದೀಯಾ? ಮನೇಲೆಲ್ಲ ಹೇಗಿದಾರೆ? ಏನೋ ಇಷ್ಟು ದಪ್ಪ ಆಗಿದೀಯಾ?… ಹೀಗೆ ಮೊದಲ ಸುತ್ತಿನ ಸಂಭಾಷಣೆ ಮುಗಿದ ಬಳಿಕ, ‘ಮದುವೆನೇನೂ? ಕಾರ್ಡ್ ಕೊಡಕ್ಕೆ ಬಂದ್ಯಾ? ಈಗ ಮಾತ್ರ ತಾನೆ ನಾವು ನೆನಪಾಗೋದು?’ ಎಂದ. ಹಿಂದಿನ ರಾತ್ರಿ ನೋಡಿದ್ದ ಆಟೋಗ್ರಾಫ್ ಸಿನಿಮಾ ಮತ್ತು ಅದರ ಪ್ರಭಾವ ವಿವರಿಸಿದೆ. ‘ಹೌದಾ…ಅಮೇಜಿಂಗ್’ ಅಂದ. ಆಟೋಗ್ರಾಫ್ ಪುಸ್ತಕ ಹಿಡಿದು ಅವರೆಲ್ಲಿ? ಇವರೆಲ್ಲಿ ಅಂತ ಕೇಳಿದೆ? ‘ನನಗೆ ಶಾಶ್ವತವಾಗಿ ಉಂಡೆ ಉಳಿಸಿ ಹೋದ ಸ್ಮಿತಾ ಮನೆಗೆ ಹೋಗೋಣ. ಅಡ್ರೆಸ್ ಇದೆ’ ಎಂದೆ. ವಿಶ್ವನೂ ‘ನಡೀ’ ಎಂದ. ಜೆ.ಪಿ.ನಗರದ ಅಡ್ರೆಸ್ ಹುಡುಕಿ ಹೋದರೆ- ಈಗ ಅವರು ಮಲ್ಲೇಶ್ವರದಲ್ಲಿ ಇದ್ದಾರೆ. ಈ ಮನೆ ಬಿಟ್ಟು ೭ ವರ್ಷ ಆಯ್ತು’ ಎಂಬ ಉತ್ತರ ಬಂತು. ಜತೆಗೆ, ‘ನಿಮ್ಮ ಕ್ಲಾಸ್‌ಮೆಟ್ ಸ್ಮಿತಾಗೆ ೨ ವರ್ಷದ ಹಿಂದೆ ಮದುವೆ ಆಯ್ತು. ಈಗ ಅವಳು ಇಂಗ್ಲೆಂಡೋ, ಅಮೆರಿಕದಲ್ಲೋ ಇರಬೇಕು. ಯಾಕೆ ನಿಮ್ಮನ್ನು ಮದುವೆಗೆ ಕರೀಲಿಲ್ಲಾ? ಕೇಳಿದರು. ವಿಶ್ವ- ‘ಇಲ್ಲ. ಇವನನ್ನು ಕರೆದಿದ್ಲು. ಇವನೇ ಹೋಗಲಿಲ್ಲ’ ಎಂದು ಗೇಲಿ ಮಾಡಿ ನಕ್ಕ. ನನಗೂ ನಗು ಬಂತು. ಬೆನ್ನಲ್ಲೇ, ‘ಕಡೆಗೂ ನಿನಗೆ ಉಂಡೆ ನಾಮ ಹಾಕಿದ್ಲಲ್ಲೋ’ ಅಂತ ಮತ್ತೊಮ್ಮೆ ನಕ್ಕ. ನಾನು ಅವನಿಗಿಂತ ಜೋರಾಗಿ ನಕ್ಕೆ. ಅಲ್ಲಿಗೆ ಸ್ಮಿತಾ ಮತ್ತೆ ನೆನಪಾಗಿಯೇ ಉಳಿದಳು.
ಅಲ್ಲಿಂದ ಚಂದು, ಆಸಿಫ್, ಪರಿಕ್ಷಿತ್ ಮನೆಗೂ ಹೋದೆವು. ಆದರೆ, ಸಿಕ್ಕದ್ದು ಆಸಿಫ್ ಮಾತ್ರ. ಉಳಿದಂತೆ, ಚಂದು ಪುಣೆಯಲ್ಲಿದ್ದ ಮತ್ತು ಪರೀಕ್ಷಿತ್ ವಾಸವಿದ್ದ ಮನೆ ಕಾಂಪ್ಲೆಕ್ಸ್ ಆಗಿತ್ತು. ಅಂದಹಾಗೆ, ಆಸಿಫ್ ಮನೆಯಲ್ಲೂ ಹೆಚ್ಚು ಚರ್ಚೆ ಆಗಿದ್ದು ಸ್ಮಿತಾ ಮತ್ತು ಆಟೋಗ್ರಾಫ್ ಮಾತ್ರ ! ಇ-ಮೇಲ್ ಮತ್ತು ಫೋನ್ ನಂಬರುಗಳ ವಿನಿಮಯ ಆಯಿತು. ವಿಶ್ವನನ್ನು ಮನೆಗೆ ಬಿಟ್ಟು ಬರುವಾಗ- ಮನಸ್ಸಿಗೆ ಎಂಥದ್ದೋ ಸಮಾಧಾನ. ಏನೋ ಸಂಭ್ರಮ. ಉಳಿದಂತೆ ಮರುದಿನ ನನ್ನ ಕಾಲೇಜು ಸ್ನೇಹಿತರನ್ನು ಹುಡುಕಿಕೊಂಡು ಹೊರಟೆ. ಕೆಲವರು ಸಿಕ್ಕರು. ಹಳೆಯ ನೆನಪುಗಳು ಅದಲು ಬದಲಾದವು. ಬಹಳಷ್ಟು ಮಂದಿ ಸಿಗಲಿಲ್ಲ. ಸಿಕ್ಕವರಿಗೆಲ್ಲ ಆಟೋಗ್ರಾಫ್ ನೋಡಲು ಹೇಳಿದೆ. ಆದರೆ, ಮತ್ತೆ ಮತ್ತೆ ಮಾಧವಿ ಕಾಡಿದಳು. ಸಣ್ಣ ಮನಸ್ತಾಪದಿಂದ ‘ಅವಳೇ soಡಿಡಿಥಿ ಕೇಳಲಿ’ ಎಂದು ನಾನು. ‘ಅವನೇ ಬಂದು ಮಾತನಾಡಿಸಲಿ’ ಎಂದು ಅವಳು-ಹೀಗೆ ಪ್ರತಿಷ್ಠೆಗೆ ಬಿದ್ದು ಇಬ್ಬರೂ ದೂರವಾಗಿದ್ದೆವು. ಕಾಲೇಜು ಮುಗಿದ ನಂತರವಂತೂ ಅಪರಿಚಿತರೇ ಆಗಿದ್ದೆವು. ಪ್ರದೀಪನ ಜತೆಯಾಗಿ ಮಾಧವಿಯ ಮನೆ ಹತ್ತಿರ ಹೋದೆ. ಅವಳು ಅದೇ ಮನೆಯಲ್ಲೇ ಇದ್ದಾಳಾ? ಮದುವೆ ಆಗಿದೆಯಾ? ಯಾವ ಮಾಹಿತಿಯೂ ಇರಲಿಲ್ಲ. ಮಾಧವಿಯನ್ನು ನೋಡುವ ಆಸೆ ಇತ್ತಾದರೂ, ನಾನೇ ಮತ್ತೆ ಅವಳ ಮನೆಗೆ ಹೋಗಿ ಮಾತನಾಡಿಸಲು ಸ್ವಾಭಿಮಾನ ಅಡ್ಡ ಬಂತು. ‘ಪ್ರದೀಪನಂತೂ ಯಾಕೆ ರಿಸ್ಕು?’ ಎಂಬಂತೆ ರಸ್ತೆ ತುದಿಗೆ ಹೋಗಿ ಗಾಡಿ ನಿಲ್ಲಿಸಿಕೊಂಡ. ಅದೇಕೋ ಗೊತ್ತಿಲ್ಲ. ಆ ಕ್ಷಣಕ್ಕೆ ಮನಸ್ಸಿನಲ್ಲಿ ಉಳಿದಿರುವ ಮಾಧವಿಯೇ ಸಾಕು ಎನಿಸಿತು. ಗಟ್ಟಿ ಮನಸು ಮಾಡಿ ಅಲ್ಲಿಂದ ಹೊರಟು ಬಂದೆ. ಅದೇಕೋ ಪ್ರದೀಪ- ಸಾಂತ್ವನ ಹೇಳುವಂತೆ ಹೆಗಲ ಮೇಲೆ ಕೈಹಾಕಿದ. ನಿಲ್ಲಲಾಗದೆ ರಸ್ತೆ ಬದಿಯ ಫುಟ್‌ಪಾತ್ ಮೇಲೆ ಕುಳಿತು ಸಮಾಧಾನ ಆಗುವ ತನಕ ಅತ್ತುಬಿಟ್ಟೆ…
ಚಲನಚಿತ್ರಕ್ಕೆ ಇಷ್ಟೆಲ್ಲ ಶಕ್ತಿ ಇದೆಯಾ? ಭಾವನೆಗಳನ್ನು ಇಷ್ಟು ತೀವ್ರವಾಗಿ ಕಲುಕುವ ತಾಕತ್ತು ಇರುತ್ತದಾ? ಎಂಬುದನ್ನು ನನಗೆ ಮನವರಿಕೆ ಮಾಡಿಕೊಟ್ಟ ಮತ್ತು ಸ್ನೇಹಿತರನ್ನು ಹುಡುಕಿಕೊಂಡು ಹೋಗುವಂತೆ ಮಾಡಿದ ಕೇರಂ ಸ್ನೇಹಿತರಿಗೆ ಮತ್ತು ಅವತ್ತಿನ ಆ ಜಗಳಕ್ಕೆ ನಾನು ಸದಾ ಋಣಿ! ಈ ಋಣಭಾರ ಕಳೆದುಕೊಳ್ಳಲು ನಾನೇ ಕೇರಂ ಸ್ನೇಹಿತರಲ್ಲಿ ಕ್ಷಮೆ ಕೇಳಿ, ಅವರಿಗೂ ಆಟೋಗ್ರಾಫ್ ತೋರಿಸಿ ಕಣ್ಣೀರು ಹಾಕಿಸಿದೆ!
ಈ ಚಿತ್ರ ಕುರಿತು ಎರಡು ಮಾತು ಹೇಳುವುದಿದೆ.

ಎಂಥ ಆಟೋಗ್ರಾಫ್ ಇದು?
1994ರಲ್ಲಿ ತೆರೆಕಂಡ ಚಿತ್ರ ‘ಆಟೋಗ್ರಾಫ್’. ಚೇರನ್ ಎಂಬ ವಿಲಕ್ಷಣ ಹೆಸರಿನ ಅನಾಮಧೇಯ- ತೆರೆಗೆ ತಂದ ಅತ್ಯದ್ಭುತ ಚಿತ್ರವಿದು. ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ, ನಾಯಕನಾಗಿಯೂ ಕಾಣಿಸಿಕೊಂಡ ಚೇರನ್-ಹೀಗೂ ಕಮರ್ಷಿಯಲ್ ಚಿತ್ರವನ್ನು ತಯಾರಿಸಬಹುದು ಎಂಬುದನ್ನು ತೋರಿಸಿಕೊಟ್ಟರು. ‘ನಾ ಆಟೋಗ್ರಾಫ್’ ಹೆಸರಿನಲ್ಲಿ ತೆಲುಗಿಗೆ ಹೋದ ಮತ್ತು ‘ಮೈ ಆಟೋಗ್ರಾಫ್’ ಆಗಿ ಕನ್ನಡದಲ್ಲಿ ರಿಮೇಕ್ ಆದ ಈ ಚಿತ್ರಕ್ಕೆ ೨೦೦೫ರಲ್ಲಿ ೪ ರಾಷ್ಟ್ರಪ್ರಶಸ್ತಿಗಳು ಹುಡುಕಿ ಬಂದವು. ಮಾತ್ರವಲ್ಲ, ಕೆನಡಾ ಮತ್ತು ಫ್ರಾನ್ಸ್ ಚಿತ್ರೋತ್ಸವಗಳಲ್ಲೂ ಪ್ರದರ್ಶನಗೊಳ್ಳುವ ಶ್ರೇಯ ಸಂಪಾದಿಸಿತು. ಅಂದಾಜು ೮೦ ಲಕ್ಷ ಬಜೆಟ್‌ನಲ್ಲಿ ಸುತ್ತಿ ಕುಳಿತಿದ್ದ ಈ ಚಿತ್ರ- ಈ ಹಣದ ೨೦ ಪಟ್ಟನ್ನು ಚೇರನ್ ಅಕೌಂಟಿಗೆ ಜಮೆ ಮಾಡಿತು; ಹಣಕ್ಕೂ ಮೀರಿದ ಖ್ಯಾತಿಯನ್ನು ತಂದುಕೊಟ್ಟಿತು. ಚಿತ್ರದ ಒಟ್ಟಾರೆ ಯಶಸ್ಸಿನಿಂದ ಉಬ್ಬಿಹೋದ ಚೇರನ್- ‘ಸದ್ಯದಲ್ಲೇ, ‘ಆಟೋಗ್ರಾಫ್-೨’ನ್ನು ನಿರೀಕ್ಷಿಸಿ’ ಎಂದು ಜಾಹೀರಾತು ನೀಡಿದ್ದರು. ಜನ ಇನ್ನೂ ಈ ನಿರೀಕ್ಷೆಯಲ್ಲೇ ಇದ್ದಾರೆ. ಚೇರನ್ ಮಾತ್ರ ಒಂದರ ಮೇಲೊಂದರಂತೆ ಬೇರೆ ಬೇರೆ ಚಿತ್ರಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಏನಿದೆ ಈ ಆಟೋಗ್ರಾಫ್‌ನಲ್ಲಿ?
ಸೆಂಥಿಲ್ (ಚೇರನ್) ಈ ಚಿತ್ರದ ಕಥಾನಾಯಕ. ಈತನಿಗೆ ಮದುವೆ ನಿಶ್ಚಯ ಆಗುತ್ತದೆ. ತನ್ನ ಬಾಲ್ಯದ ಸ್ನೇಹಿತರಿಗೆ, ಶಾಲೆಯಲ್ಲಿ ಕಲಿತ ಸಹಪಾಠಿಗಳಿಗೆ, ಮೇಷ್ಟ್ರಿಗೆ, ‘ಪ್ರೇಯಸಿಗೆ’, ಕಾಲೇಜಿನ ಮನದನ್ನೆಗೆ… ಹೀಗೆ ಎಲ್ಲರೂ ತನ್ನ ‘ಕಲ್ಯಾಣ’ವನ್ನು ಕಾಣಬೇಕು ಅಂತಲೋ ಅಥವಾ ಅವರೆಲ್ಲ ಹೇಗಿದ್ದಾರೆ ಎನ್ನುವ ಕಾಣುವ ಕುತೂಹಲದಿಂದಲೋ ಸೆಂಥಿಲ್ ಮದುವೆ ಕಾರ್ಡು ಹಂಚಲು ತಾನಿದ್ದ ಸ್ಥಳಗಳಿಗೆ, ತನ್ನವರನ್ನು ಹುಡುಕಿಕೊಂಡು ಬರುತ್ತಾನೆ. ಇದರಲ್ಲಿ ಬಾಲ್ಯದ ತುಂಟಾಟ, ಶಾಲಾ ದಿನಗಳ ಚೇಷ್ಟೆ, ಪಡೆದ ಮೊದಲ ಮುತ್ತು, ಅಪ್ಪನಿಂದ ಏಟು ತಿಂದ ಪ್ರಸಂಗ, ಕಾಲೇಜು ದಿನಗಳ ಉತ್ಕಟ ಪ್ರೀತಿ- ಕಾಮ… ಹೀಗೆ ಆಟೋಗ್ರಾಫ್ ಒಂದು ಸುಂದರ ನೆನಪಿನ ಪಯಣ. ಒಟ್ಟಿನಲ್ಲಿ ಸೆಂಥಲ್ ಬದುಕಿನಲ್ಲಿ ಬಂದು ಹೋಗುವ ಮೂವರು ಯುವತಿಯರ ಸುತ್ತ ಚಿತ್ರ ಗಿರಕಿ ಹೊಡೆಯುತ್ತದೆ. ಉತ್ತಮ ಹಾಡು, ಸಂಗೀತ, ಛಾಯಾಗ್ರಹಣ ಹೀಗೆ ಯಾವ ವಿಭಾಗದಲ್ಲೂ ‘ಗ್ರಾಫ್’ ಇಳಿದಿಲ್ಲ ಎನ್ನುವುದು ಚಿತ್ರದ ಅಗ್ಗಳಿಕೆ. ಒಟ್ಟಿನಲ್ಲಿ ಈ ಚಿತ್ರ ನೋಡುವಾಗ ಒಂದಲ್ಲ ಒಂದು ಹಂತದಲ್ಲಿ ಎಲ್ಲರೂ ಸೆಂಥಿಲ್ ಪಾತ್ರದ ಜತೆ ಗುರುತಿಸಿಕೊಳ್ಳುವಷ್ಟು ಚಿತ್ರ- ಭಾವನೆಗಳ ಮೇಲಾಟದಿಂದ ನಿಮ್ಮ ಕಣ್ಣಾಲಿಗಳನ್ನು ತೇವಗೊಳಿಸದೆ ಇರದು.

Advertisements