ಸಾಂಗತ್ಯ ಮ್ಯಾಗಜೈನ್ ನ ಮೊದಲ ಸಂಚಿಕೆ ಬಿಡುಗಡೆಯಾಗಿ, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಎರಡನೇ ಸಂಚಿಕೆಯ ಸಿದ್ಧತೆ ಅಂತಿಮ ಹಂತದಲ್ಲಿದೆ. ಬಹಳಷ್ಟು ಮಂದಿಗೆ-ಅದರಲ್ಲೂ ರಾಜ್ಯದಿಂದ ಹೊರಗಿರುವವರಿಗೆ ನಮ್ಮ ಮ್ಯಾಗಜೈನ್ ಮುಟ್ಟಿಲ್ಲ. ಸಹಜವಾಗಿಯೇ ಇದರೊಳಗೆ ಎಂಥ ಲೇಖನಗಳಿರಬಹುದು ? ಸಾಂಗತ್ಯ ಮ್ಯಾಗಜೈನ್ ಹೇಗಿರಬಹುದು? ಎಂಬಿತ್ಯಾದಿ ಪ್ರಶ್ನೆಗಳಿವೆ. ಅವರಿಗೆ ನಮ್ಮ ಮ್ಯಾಗಜೈನ್ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಬರಲೆಂದು ಮೊದಲ ಸಂಚಿಕೆಯ ಕೆಲವು ಲೇಖನಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಈ ಸರಣಿಯಡಿ ಮೊದಲ ಲೇಖನ ಮುರಳೀಧರ ಖಜಾನೆಯವರದ್ದು.

ತ್ತೀಚೆಗಷ್ಟೇ ಭಾರತದ ಪುರುಷರ ಹಾಕಿ ತಂಡ ಸ್ಪೇನ್ ತಂಡದೆದುರು ಹೀನಾಯ ಸೋಲು ಅನುಭವಿಸಿರುವ ಹಾಗೆಯೇ ಭಾರತದ ಮಹಿಳಾ ಕ್ರಿಕೆಟ್ ತಂಡ-ಈ ಆಟ ಜನ್ಮತಳೆದ ಇಂಗ್ಲೆಂಡ್ ತಂಡದೆದುರು ದೇಶದ ಪುರುಷರ ತಂಡಕ್ಕಿಂತ ಯಾವುದೇ ರೀತಿಯಲ್ಲೂ ಕಡಿಮೆಯಲ್ಲ ಎಂದು ಋಜುವಾತುಪಡಿಸಿರುವ ಈ ಸಂದರ್ಭ ನನ್ನನ್ನು ಮತ್ತೊಮ್ಮೆ ‘ಚಕ್ ದೇ ಇಂಡಿಯಾ’ ಚಿತ್ರ ಕುರಿತು ಚಿಂತಿಸುವಂತೆ ಪ್ರೇರೇಪಿಸಿದೆ.
* * *

ಕೆಲವೊಮ್ಮೆ ಚಲನಚಿತ್ರಗಳನ್ನು ನೋಡುವಾಗ ನಾನು ಭಾವುಕನಾಗುತ್ತೇನೆ. ಅದನ್ನು ಸೆಲ್ಯೂಲಾಯಿಡ್‌ನ ಶಕ್ತಿ ಎಂದೋ ಅಥವಾ ನನ್ನ ದೌರ್ಬಲ್ಯ ಎಂದೋ-ಹೇಗಾದರೂ ಭಾವಿಸಬಹುದು. ನಮ್ಮ ಕೈಲಾಗದದ್ದನ್ನು ತೆರೆಯ ಮೇಲೆ ಇತರರು ಸಾಧಿಸುತ್ತಿರುವಾಗ ನನ್ನ ವಿವೇಚನಾ ಶಕ್ತಿ ಸ್ವಲ್ಪವಾದರೂ ಮಂಕಾಗುವುದನ್ನು ಬೇರೆ ರೀತಿಯಲ್ಲಿ ಅರ್ಥೈಸಲು ನನ್ನಿಂದ ಸಾಧ್ಯವಿಲ್ಲ. ಆದರೆ ಇದೇ ಚಿತ್ರವನ್ನು ಎರಡನೇ ಬಾರಿಗೆ ಅಥವಾ ಮೂರನೇ ಬಾರಿಗೆ ನೋಡಿದಾಗ ಮಾತ್ರ ಅದರ ಮಿತಿ-ಶಕ್ತಿಗಳನ್ನು ನಿರ್ಭಾವುಕವಾಗಿ ನೋಡಲು ಸಾಧ್ಯವಾಗುತ್ತದೆ ಎಂಬುದು ನನ್ನ ಅನಿಸಿಕೆ.

ನಾನು ಈ ರೀತಿ ಸ್ವಲ್ಪ ಭಾವುಕನಾದದ್ದು ಬೆಂಗಳೂರಿನ ‘ಅಭಿನಯ್’ ಚಿತ್ರಮಂದಿರದಲ್ಲಿ ನನ್ನ ಆತ್ಮೀಯ ಗೆಳೆಯರಿಬ್ಬರೊಂದಿಗೆ ಅಶುತೋಷ್ ಗೋವಾರಿಕರ್‌ನ ‘ಲಗಾನ್’ ಚಿತ್ರ ನೋಡಿದಾಗ. ಈ ಚಿತ್ರದಲ್ಲಿ ಹಳ್ಳಿಗಾಡಿನ ಜನರ ತಂಡವೊಂದು, ಅಸಾಧ್ಯವೆಂದು ನಾವು ಭಾವಿಸುವುದನ್ನು ಅದಕ್ಕಿರುವ ಎಲ್ಲ ಅಡೆ ತಡೆಗಳನ್ನು ಮೀರಿ, (ಅದು ಸೆಲ್ಯೂಲಾಯಿಡ್‌ನ ಮೇಲೆ ಸಾಧ್ಯವೆಂದು ತಿಳಿದೂ) ಶಕ್ತ ಆಂಗ್ಲರ ತಂಡವೊಂದನ್ನು ಕ್ರಿಕೆಟ್‌ನಲ್ಲಿ ಮಣಿಸಿದಾಗ, ಆ ಗೆಲುವು ನನ್ನನ್ನು ಕ್ಷಣಕಾಲ ಭಾವುಕನನ್ನಾಗಿಸಿದ್ದು ನಿಜ. ಆ ರೋಮಾಂಚನ ಇನ್ನೂ ನನ್ನಲ್ಲಿ ಹಸಿರಾಗಿದೆ. ‘ಅಂಥ’ ಗೆಲುವು ಅದು ಯಾಕೆಂದರೆ ಸಾಮ್ರಾಜ್ಯಷಾಹಿಯ ವಿರುದ್ಧದ ಸಾಧನೆ..
ನಾಗೇಶ್ ಕುಕುನೂರ್ ನಿರ್ದೇಶನದ ‘ಇಕ್ಬಾಲ್’ ನೋಡಿದಾಗಲೂ ಇದೇ ಭಾವ. ಆಂಧ್ರಪ್ರದೇಶದ ಮೂಲೆಯ ಗ್ರಾಮವೊಂದರ, ಭಾರತ ತಂಡವನ್ನು ಪ್ರತಿನಿಧಿಸುವ ಕನಸು ಹೊತ್ತ ಮಾತನಾಡಲಾರದ, ಮಾತನ್ನು ಕೇಳಿಸಿಕೊಳ್ಳಲಾಗದ ಹುಡುಗನೊಬ್ಬ (ಶ್ರೇಯಸ್ ತಲ್ಪಡೆ) ಹೃದಯವಂತ-ಕುಡುಕ ಕೋಚ್ (ನಾಸಿರುದ್ದೀನ್ ಷಾ) ನೆರವಿನಿಂದ ಕ್ರಿಕೆಟ್‌ರಂಗದ ಎಲ್ಲ ಕೊಳಕುತನ ಪಕ್ಷಪಾತವನ್ನು ಮೀರಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನಗಿಟ್ಟಿಸುವ ಕಥೆಯ ಹಂದರದ ಈ ಚಿತ್ರ ಆಗ ನನ್ನನ್ನು ಕಲಕಿತ್ತು,ರೋಮಾಂಚನಗೊಳಿಸಿತ್ತು.

ನಾನು ಮತ್ತೆ ಅದೇ ರೀತಿಯ ರೋಮಾಂಚನ ಅನುಭವಿಸಿದ್ದು, ಭಾವುಕನಾದದ್ದು ಶಮಿತ್ ಅಮೀನ್‌ರ ‘ಚಕ್‌ದೇ ಇಂಡಿಯಾ’ ಚಿತ್ರವನ್ನು ಮೈಸೂರಿನ ಸ್ಟರ್ಲಿಂಗ್ ಚಿತ್ರಮಂದಿರದಲ್ಲಿ ನೋಡಿದಾಗ. ಚಿತ್ರ ನೋಡಿ ಹೊರ ಬಂದಾಗ ಅದು ನನ್ನ ಮಟ್ಟಿಗೆ ಭಾರತದ ಮಹಿಳಾ ಹಾಕಿತಂಡದ ಗೆಲುವಷ್ಟೇ ಆಗಿರಲಿಲ್ಲ. ಅದು ಕೋಟ್ಯಂತರ ಮಂದಿ ಅವಕಾಶಹೀನರ ಗೆಲುವು ಅನ್ನಿಸಿತು. ಮನಸೆಲ್ಲ ಖಾಲಿಖಾಲಿಯಾಗಿತ್ತು. ಆದರೆ ಕಳೆದುಹೋದ ಆತ್ಮವಿಶ್ವಾಸವನ್ನು ಮತ್ತೆ ಗಳಿಸಿಕೊಂಡಂತಾಗಿತ್ತು.

ಕ್ರೀಡೆಯನ್ನೇ ಆಧರಿಸಿದ ಚಿತ್ರಗಳು ಅಪಾರ ಯಶಸ್ಸು ಗಳಿಸಿರುವ ನಿದರ್ಶನ ಹಾಲಿವುಡ್‌ನಲ್ಲಿ ಸಾಕಷ್ಟಿದೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ‘ಚಾರಿಯಟ್ಸ್ ಆಫ್ ಫೈರ್’ ಹಾಗೂ ಫುಟ್‌ಬಾಲ್ ಕ್ರೀಡೆಯ ‘ಎಸ್ಕೇಪ್ ಟು ವಿಕ್ಟರಿ’ ಇದಕ್ಕೆ ಸ್ಪಷ್ಟ ನಿದರ್ಶನ. ಆದರೆ ಬಾಲಿವುಡ್‌ನಲ್ಲಿ ಕ್ರೀಡೆಯನ್ನೇ ಮೂಲ ವಸ್ತುವನ್ನಾಗಿಸಿಕೊಂಡೂ ಯಶಸ್ವಿಯಾದ ಚಿತ್ರಗಳು ತೀರಾ ಕಡಿಮೆ. ಬಹುಶಃ ಆ ಮಟ್ಟದ ಯಶಸ್ಸು ಸಾಧಿಸಿದ್ದು ‘ಲಗಾನ್’ವೊಂದೇ ಇರಬೇಕು. ಆನಂತರ ಈಗ ‘ಚೆಕ್ ದೇ ಇಂಡಿಯಾ’ ಅದೇ ಹಾದಿಯಲ್ಲಿ ಸಾಗಿತು. ‘ಲಗಾನ್’ ಚಿತ್ರದಲ್ಲಿ ಗೆಲುವು ಹಳ್ಳಿಗಾಡಿನ ಸಮುದಾಯವೊಂದು ತಾನು ಕಂಡು ಕೇಳರಿಯದ ‘ವಸಾಹತುಶಾಹಿ’ ಕ್ರೀಡೆಯೊಂದರಲ್ಲಿ ಸಾಧಿಸಿದ ಗೆಲುವು. ಅವರ ಆಟದಲ್ಲಿ ಅವರನ್ನೇ ಸೋಲಿಸಿದ ಗೆಲುವಿಗಿಂತ ಹೆಚ್ಚಾಗಿ ವಸಾಹತುಶಾಹಿಶಕ್ತಿಯ ವಿರುದ್ಧ ‘ಗುಲಾಮರು’ ಗಳಿಸಿದ ಗೆಲುವು. ಈ ಗೆಲುವಿನ ಹೊರತಾಗಿ ಚಿತ್ರ ವಿಶೇಷ ಅರ್ಥಗಳನ್ನೇನೂ ಧ್ವನಿಸುವುದಿಲ್ಲ. ಈ ಚಿತ್ರ ಅದರ ಯಶಸ್ವಿಗೆ ಅಗತ್ಯವಾದ ಎಲ್ಲ ವ್ಯಾಪಾರಿ ಸರಕುಗಳ ಪರಿಪಾಕ. ಇದರಲ್ಲಿ ಬಾಲಿವುಡ್‌ನ ಸಾಂಪ್ರದಾಯಿಕ ಸೂತ್ರಗಳು ಯಶಸ್ವಿಯಾಗಿ ಕೆಲಸ ಮಾಡಿದೆ. (ನಾಯಕ-ನಾಯಕಿಯರ ಪ್ರೀತಿ, ಗಳಿಸಲಾಗದ ಪ್ರೀತಿ, ಮೋಸ, ದ್ವೇಷ, ವಂಚನೆ, ಹಾಡು, ಸೆಂಟಿಮೆಂಟು ಏನುಂಟು ಏನಿಲ್ಲ) ಸಾಂಪ್ರದಾಯಿಕ ಫಾರ್ಮುಲಾದ ಪರಿಪಕ್ವಪಾಕ ‘ಲಗಾನ್’! ಈ ಚಿತ್ರದಲ್ಲಿ ಸಿದ್ಧಸೂತ್ರಗಳನ್ನ್ನು ಮುರಿಯುವ ನಿರ್ದೇಶಕನ ಯಾವುದೇ ಪ್ರಜ್ಞಾಪೂರ್ವಕ ಪ್ರಯತ್ನ ಕಾಣುವುದಿಲ್ಲ.

ಚಿತ್ರವೊಂದರ ಕಮರ್ಷಿಯಲ್ ಯಶಸ್ಸಿನತ್ತಲೂ ಕಣ್ಣಿಟ್ಟವರಿಂದ ಇದರ ನಿರೀಕ್ಷೆಯೂ ಅಸಾಧ್ಯ. ಆದರೆ ‘ಚಕ್‌ದೇ’ ಹಾಗಲ್ಲ. ಕಮರ್ಷಿಯಲ್ ಯಶಸ್ಸಿನ ಮೇಲೆ ಕಣ್ಣಿಟ್ಟೂ ಚಿತ್ರರಂಗದ ರೂಢಿಗತ ಸಿದ್ಧ ಸೂತ್ರಗಳನ್ನೂ ಇಚ್ಛಾಪೂರ್ವಕ- ಮುರಿಯುವ ಒಂದು ಪ್ರಯತ್ನದಂತೆ ಕಾಣುತ್ತದೆ.
‘ಜೋ ನಹಿ ಹೋ ಸಕ್ತಾ ಹೈ ವಹೀತೋ ಕರ‍್ನಾ ಹೈ !’

ಅರ್ಜೆಂಟಿನಾ ವಿರುದ್ಧ ನಡೆಯುವ ಪಂದ್ಯದ ಹಾಫ್‌ಟೈಮ್‌ನಲ್ಲಿ ಮಹಿಳಾ ಹಾಕಿ ತಂಡದ ಕೋಚ್ ಕಬೀರ್‌ಖಾನ್(ಶಾರೂಖ್ ಖಾನ್), ತನ್ನ ಟೀಂ ಇಂಡಿಯಾಕ್ಕೆ ಗೆಲುವು ಸಾಧಿಸಲು ಎಲ್ಲ ನಿಯಮಗಳನ್ನು ಮುರಿಯುವುದೂ ಸೇರಿದಂತೆ, ಏನೆಲ್ಲ ಮಾಡಬಹುದೋ ಎಲ್ಲವನ್ನೂ ಮಾಡುವಂತೆ ಉತ್ತೇಜಿಸುತ್ತಾನೆ. ತಂಡದ ಆಟಗಾರ್ತಿಯರು ತಮ್ಮ ಕೋಚ್ ಆದೇಶವನ್ನು ಅಕ್ಷರಶಃ ಪಾಲಿಸಿ ಗೆಲುವು ಸಾಧಿಸುತ್ತಾರೆ.

ಇದೇ ಧೋರಣೆಯನ್ನು ಹೊತ್ತೇ ‘ಚಕ್‌ದೇ ಇಂಡಿಯಾ’ ಇಂದು ಭಾರತದಾದ್ಯಂತ ಎಲ್ಲ ವರ್ಗದ ಪ್ರೇಕ್ಷಕರ ಮನಸ್ಸನ್ನೂ ಗೆದ್ದಿದೆ. ಇದಕ್ಕೆ ಸಾಕ್ಷಿ ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ನಡುವಿನ ಟ್ವೆಂಟಿ-೨೦ ವಿಶ್ವಕಪ್ ಕ್ರಿಕೆಟ್ ಪಂದ್ಯ. ಜೋಹಾನ್ಸ್‌ಬರ್ಗ್‌ನ ‘ವಾಂಡರರ್ಸ್’ ಕ್ರೀಡಾಂಗಣದಲ್ಲಿ ರಾರಾಜಿಸಿದ್ದು ‘ಚಕ್‌ದೇ ಇಂಡಿಯಾ’ ಎಂಬ ಫ್ಲಕಾರ್ಡ್. ಧೋನಿ ತಂಡ ಕಣಕ್ಕಿಳಿದಾಗ ಪ್ರೇಕ್ಷಕರಿಂದ ‘ಚಕ್‌ದೇ ಇಂಡಿಯಾ’ ಎಂಬ ಘೋಷವಾಕ್ಯ. ಚಿತ್ರ ಸಾಧಿಸಿರುವ ಯಶಸ್ಸಿಗೆ ಇದೊಂದು ಸಾಕ್ಷಿ.

ತನ್ನ ಹೆಸರಿಗೆ ಅಂಟಿದ್ದ ಕಳಂಕ ತೊಳೆದುಕೊಳ್ಳಲು ಏಳುವರ್ಷಗಳ ನಂತರ ವಿಶ್ವಕಪ್‌ಗಾಗಿ ಪ್ರತಿನಿಧಿಸುವ ಭಾರತದ ಮಹಿಳಾ ತಂಡದ ಕೋಚ್ ಆಗಿ ಬರುವ ಕಬೀರ್‌ಖಾನ್, ನಾಯಕಿಯರೊಂದಿಗೆ ಮರ ಸುತ್ತುವುದಿಲ್ಲ. ಹಾಡುತ್ತಾ ಆಸ್ಟ್ರೇಲಿಯಾದ ಸ್ಮಾರಕಗಳ ಸುತ್ತ ಭಾವುಕನಾಗಿ ತಿರುಗುವುದಿಲ್ಲ. ಭಾವುಕನಾಗಿ ಕಣ್ಣೀರು ಸುರಿಸುವುದಿಲ್ಲ. ನುಣ್ಣಗೆ ಶೇವ್ ಮಾಡಿ ಚಾಕ್‌ಲೇಟ್ ಹೀರೋ ಥರ ಕಾಣಿಸುವುದಿಲ್ಲ. ವಿಲನ್‌ನನ್ನೂ ಬಡಿದು ಹಾಕುವುದಿಲ್ಲ. ಬದಲಿಗೆ ಹಾಕಿ ಮೈದಾನದ ಅಂಚಿನಲ್ಲಿ ನಿಂತು ತನ್ನ ತಂಡದ ಹುಡುಗಿಯರೇ ಎಲ್ಲರ ಕೇಂದ್ರ ಬಿಂದುವಾಗುವಂತೆ ಮಾಡುತ್ತಾನೆ.

ಅಷ್ಟೇ ಅಲ್ಲ. ಎಲ್ಲ ಹೊಸ ಮುಖಗಳೇ ಇರುವ ಕಲಾವಿದರ ತಂಡವೊಂದು ‘ಮಹಿಳಾಪರ’ ಸಂದೇಶ ಹೊತ್ತು ಚಿತ್ರದಲ್ಲಿ ಹಾಕಿ ಆಟಗಾರ್ತಿಯರಾಗಿ ಕಾಣಿಸಿಕೊಳ್ಳುತ್ತಾರೆ. ಶಾರೂಖ್‌ಖಾನ್ ಹೊರತಾಗಿ ಒಂದೇ ಒಂದು ಪರಿಚಿತ ಮುಖವೂ ಚಿತ್ರದಲ್ಲಿಲ್ಲ ಎನ್ನುವುದೇ ‘ಚಕ್‌ದೇ’ ಹೆಗ್ಗಳಿಕೆ.

ಈ ಚಿತ್ರದಲ್ಲಿ ಚಿತ್ರಕಥೆ ರಚಿಸಲು ಚಿತ್ರಕಥಾ ಲೇಖಕ ಜಯದೀಪ್ ಸಾಹ್ನಿಗೆ ಪ್ರೇರಣೆ ಕೊಟ್ಟಿದ್ದು ವೃತ್ತ ಪತ್ರಿಕೆಯೊಂದರ ಕ್ರೀಡಾಪುಟದಲ್ಲಿ ಪ್ರಕಟವಾದ ಒಂದು ಪುಟ್ಟ ವರದಿ. ‘ಮಹಿಳಾ ಹಾಕಿ ತಂಡವೊಂದು ಟೂರ್ನಿಯಲ್ಲಿ ಗೆಲುವು ಸಾಧಿಸಿತು’ ಎನ್ನುವುದು ಆ ಇಡೀ ವರದಿಯ ಸಾರಾಂಶ. ಇದನ್ನು ಆಧರಿಸಿಯೇ ಚಿತ್ರಕಥೆ ರಚಿತವಾದದ್ದು. ಈ ಹಿನ್ನೆಲೆಯಲ್ಲಿ ನೋಡಿದರೆ ಚಿತ್ರದಲ್ಲಿ ಕಲಾವಿದರ ಸಾಧನೆ, ನಿರ್ದೇಶಕನ ಪ್ರಯತ್ನಕ್ಕೆ ನೀಡುವ ಕ್ರೆಡಿಟ್ಟನ್ನು ಕಥೆ, ಚಿತ್ರಕಥೆ, ತಾರಾಗಣವನ್ನೂ ಆಯ್ಕೆ ಮಾಡಿದ ಕ್ಯಾಸ್ಟಿಂಗ್ ನಿರ್ದೇಶಕನಿಗೂ ಹಂಚಬೇಕಾಗುತ್ತದೆ.

ಚಿತ್ರವನ್ನು ಹಾಕಿ ಆಟದ ಗಂಧ-ಗಾಳಿ ತಿಳಿಯದವರೂ ಕೂಡ ಅನುಭವಿಸಿ, ಆನಂದಿಸಬಹುದು. ಏಕೆಂದರೆ ಇದರಲ್ಲಿ ಆಟಕ್ಕಿಂತ ಮುಖ್ಯವಾಗುವುದು ದೇಶಪ್ರೇಮ, ಆತ್ಮಾಭಿಮಾನದ ರಕ್ಷಣೆ. ಆ ಸಂದರ್ಭ ಅಂಥಾದ್ದು. ಆ ಸಂದರ್ಭವನ್ನೇ ಆಟಗಾರ್ತಿಯರ ಶಕ್ತಿಯಾಗಿ ಮಾರ್ಪಡಿಸುವ ಕೋಚ್ ಶಾರೂಕ್‌ನ ಜಾಣ್ಮೆ ಗಮನ ಸೆಳೆಯುತ್ತದೆ. ಆಟಗಾರ್ತಿಯರ ಹೋರಾಟವನ್ನು ದೂರದಿಂದ ಮೌನವಾಗಿ ನಿರುಕಿಸುತ್ತಾ ತಾನು ಅದರಲ್ಲಿ ಪಾಲ್ಗೊಳ್ಳದೆ, ಒಂದು ಹಂತದಲ್ಲಿ ಹುಡುಗನೊಬ್ಬ ಆಟಗಾರ್ತಿಯೊಬ್ಬಳ ಮೇಲೆ ಹಿಂದಿನಿಂದ ಅಟ್ಯಾಕ್ ಮಾಡಲು ಪ್ರಯತ್ನಿಸಿದಾಗ ‘ಗಂಡ್ಸಾದರೆ ಎದುರಿನಿಂದ ಎದುರಿಸು’ ಎನ್ನುವ ಸಣ್ಣ ಝಲಕ್. ಸಿಡುಕುಮೋರೆಯ ಮಣಿಪುರಿ ಬಾಲೆ ಪೆನಾಲ್ಟಿ ಕಾರ್ನರ್ ಸ್ಪೆಶಲಿಸ್ಟ್ ಆಗಿ ರೂಪುಗೊಳ್ಳುವುದು. ಅತ್ಯಾಧುನಿಕ ಹಾಕಿ ಕಿಟ್ ದೊರೆತಾಗ ಆಟಗಾರ್ತಿಯರ ಮುಖದಲ್ಲಿ ಅರಳುವ ಪರಿ, ಚಿತ್ರದ ಆರಂಭದಲ್ಲಿ ಆಟಗಾರ್ತಿಯರ ಮೂಲಕ ನಮ್ಮಲ್ಲಿ ಬೇರು ಬಿಟ್ಟಿರುವ ಸಾಮಾಜಿಕ, ಆರ್ಥಿಕ, ಪ್ರಾದೇಶಿಕ ಭಿನ್ನತೆಗಳು, ಮೇಲು ಕೀಳನ್ನು ತೆರೆದಿಡುವ ರೀತಿ, ಸೊಫೆಸ್ಟಿಕೇಟೆಡ್ ಜಗತ್ತು, ನಾಗರಿಕತೆಯಿಂದ ದೂರವಿರುವವರನ್ನು ನೋಡುವ ನೋಟ… ಹೀಗೆ ಹತ್ತು ಹಲವು ಸಂಗತಿಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು.

ಹಾಗೆ ನೋಡಿದರೆ ಚಿತ್ರ-ಭಾರತೀಯ ಮಹಿಳಾ ಹಾಕಿಗೆ ಸಂಬಂಧಿಸಿದ ಕೆಲವರನ್ನು ನೇರವಾಗಿ ಟೀಕೆ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಅದರಲ್ಲೂ ಹೆಣ್ಣೆಂದರೆ ಮಕ್ಕಳನ್ನು ಹೆರುವ ಯಂತ್ರ ಎಂಬಂತೆ ಮಾತನಾಡು ವವರನ್ನು ಮೌನವಾಗಿಸುವ ರೀತಿ ಇಲ್ಲಿ ಗಮನಾರ್ಹ. ಕ್ರಿಕೆಟ್‌ವೊಂದೇ ತನ್ನ ಸಾಧನೆ ಎನ್ನುವ ಕ್ರಿಕೆಟಿಗ ಫಿಯಾನ್ಸಿಗೆ ತನ್ನ ಆಟದ ಮೂಲಕ ಉತ್ತರಿಸಿ. ಅವನನ್ನು ತಿರಸ್ಕರಿಸುವ ಪ್ರೀತಿ ಸಭರ್‌ವಾಲ್, ಮನೆಯವರ ಮದುವೆ ಪ್ರಸ್ತಾಪಕ್ಕಿಂತಲೂ ಬೇರೇನನ್ನಾದರೂ ಸಾಧಿಸಬೇಕೆಂಬ ವಿದ್ಯಾಶರ್ಮಳ ಛಲ… ಹೀಗೆ ಹೆಣ್ಣು ಹೆಣ್ಣೆಂದು ಹೀಗಳೆಯುವವರಿಗೆ ಇಲ್ಲಿ ಉತ್ತರಗಳ ಸರಮಾಲೆಯೇ ಇದೆ.

‘ಚಕ್‌ದೇ’ ಇಂದಿನ ಸಂದರ್ಭದಲ್ಲಿ ಹೇಳಲೇಬೇಕಿರುವ ಕಥೆ. ಮಹಿಳೆ ತನ್ನ ಅಸ್ತಿತ್ವದ ಉಳಿಕೆಗಾಗಿ ನಡೆಸುತ್ತಿರುವ ಹೋರಾಟ ಕಾಲದ ಅವಶ್ಯಕತೆ. ದೇಶ ತನ್ನ ೬೧ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲೂ ಆಸಿಡ್ ದಾಳಿಗೆ ತುತ್ತಾಗುತ್ತಿರುವ ವರದಕ್ಷಿಣೆಗಾಗಿ ಸಾವನ್ನಪ್ಪುತ್ತಿರುವ, ಮದುವೆಯಾಗಿಯೂ ಗಂಡನಿಂದ ಶೋಷಣೆಗೊಳಗಾಗುತ್ತಿರುವ, ರಾಕ್ಷಸ ವ್ಯಕ್ತಿತ್ವದವರ ಲೈಂಗಿಕ ದಾಹಕ್ಕೆ ತುತ್ತಾಗುತ್ತಿರುವ ಕೆಲಸ ಮಾಡುವ ಸ್ಥಳಗಳಲ್ಲಿ ಗಂಡಸರ ಲೈಂಗಿಕ ಕಿರುಕುಳ ಸಹಿಸಿಕೊಳ್ಳುತ್ತಿರುವ ಪುರುಷ ಪ್ರಾಧಾನ್ಯದ ವ್ಯವಸ್ಥೆಯಲ್ಲಿ ಶೇ. ೩೩ % ಪ್ರಾತಿನಿಧ್ಯಕ್ಕೆ ಸೆಣಸಾಡುತ್ತಿರುವ ಮಹಿಳೆಯರಿಗಾಗಿ ಈ ಕಥೆ. ಏಕೆಂದರೆ ಕ್ರೀಡಾಕ್ಷೇತ್ರದ ಮಹಿಳೆಯರ ಬಗ್ಗೆ ಗಂಡಸರಿಗಿರುವ ಪೂರ್ವಾಗ್ರಹ ಅಲ್ಪಸಂಖ್ಯಾತರ ಬಗ್ಗೆ ಬಹುಸಂಖ್ಯಾತರಿಗಿರುವ ಅಸಹನೆ… ಎಲ್ಲವನ್ನೂ ಈ ಚಿತ್ರ ಈರುಳ್ಳಿಯ ಸಿಪ್ಪೆ ಸುಲಿದಂತೆ ನಮ್ಮ ಮುಂದೆ ಬಿಚ್ಚಿಡುತ್ತದೆ. ಒಂದು ಸ್ತರದಲ್ಲಿ ಅಲ್ಪಸಂಖ್ಯಾತರ ದೇಶಪ್ರೇಮದ ‘ಅಗ್ನಿದಿವ್ಯ’ದಂತೆ ಕಾಣಿಸುತ್ತದೆ.

ಚಿತ್ರದ ಒಂದು ಹಂತದಲ್ಲಿ ಆಟಗಾರ್ತಿಯರಲ್ಲಿನ ಭಿನ್ನಾಭಿಪ್ರಾಯ. ಭೇದಭಾವ, ಮೇಲುಕೀಳು ಭಾವನೆಗಳನ್ನು ತರಬೇತಿಯ ಸಂದರ್ಭದಲ್ಲಿ ಕೋಚ್ ಕಬೀರ್‌ಖಾನ್ ತನ್ನ ಕಠಿಣ ನಿಲುವಿನಿಂದ ಸರಿಪಡಿಸಲು ಯತ್ನಿಸಿದಾಗ ಅವನ ಸಹಾಯಕಿ ‘ಪರಿಸ್ಥಿತಿ ಈಗ ಹತೋಟಿಗೆ ಬಂದಿದೆ’ ಎನ್ನುತ್ತಾಳೆ. ಆಗ ಅವಳಿಗೆ ಉತ್ತರವಾಗಿ ಕೋಚ್ ಶಾರೂಖ್ ತನ್ನ ಮುಖದಲ್ಲಿ ಯಾವುದೇ ಬದಲಾವಣೆ ತೋರದೆ ತಂಡದ ಹಾದಿಯನ್ನು ಕಂಡವನಂತೆ ‘ಪರಿಸ್ಥಿತಿ ಶೀಘ್ರದಲ್ಲಿಯೇ ಕೈ ಮೀರಲಿದೆ’ ಎನ್ನುತ್ತಾನೆ. ನನಗನಿಸುವಂತೆ ಇದು ಚಿತ್ರದ ಘೋಷವಾಕ್ಯ.

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನ ಕೆಲವು ಮಂದಿ ಈ ರೀತಿಯ ಸೀಮೋಲ್ಲಂಘನೆ ಹಾಗೂ ರಚಿತ ಸೂತ್ರಗಳ ಉಲ್ಲಂಘನೆಯಲ್ಲಿ ಸತತವಾಗಿ ನಿರತರಾಗಿರುವಂತೆ ಕಾಣಿಸುತ್ತದೆ. ‘ರಂಗ್‌ದೇ ಬಸಂತಿ’, ‘ಲಗೇ ರಹೋ ಮುನ್ನಾಭಾಯಿ’, ‘ಖೋಸ್ಲಾ ಕಾ ಘೋಸ್ಲಾ’, ‘ಭೇಜಾಫ್ರೈ’, ‘ಮೈ ನೇಮ್ ಈಸ್ ಖಾನ್’, ‘ತಾರೇ ಜಮೀನ್‌ಪರ್’, ‘ಎ ವೆಡ್‌ನೆಸ್‌ಡೇ’, ‘ತ್ರಿ ಇಡಿಯಟ್ಸ್’ ಸೀಮೋಲ್ಲಂಘನದ ನಿದರ್ಶನಗಳು.

‘ಚಕ್‌ದೇ’ ಹದಿಹರೆಯದ ಬಾಲೆಯರಲ್ಲಿ ಬಲಿಯುವ ಛಲ, ಈ ಛಲ ಬಲಿಯಲು ಅಗತ್ಯವಾದ ಸಿದ್ಧತೆ ಚಿತ್ರಕಥೆಯಲ್ಲಿ ಢಾಳಾಗಿ ಕಾಣಿಸುತ್ತದೆ. ನ್ಯಾಷನಲ್ ಕೋಚಿಂಗ್ ಕ್ಯಾಂಪಿಗೆ ಭಾರತದ ಬೇರೆ ಬೇರೆ ಭಾಗಗಳಿಂದ ಬರುವ ಆಟಗಾರ್ತಿಯರಲ್ಲಿ ‘ಅಖಂಡ’ ಭಾರತದ ಕಲ್ಪನೆ ಮೂಡಿಸಲು ಶಾರೂಖ್ ನಡೆಸುವ ಯಂತ್ರ ತಂತ್ರಗಳು ಗಮನಾರ್ಹ. ಕ್ಯಾಂಪ್‌ಗೆ ಬಂದಾಗ ಎಲ್ಲ ಆಟಗಾರ್ತಿಯರು ತಾವು ಪ್ರತಿನಿಧಿಸುವ ಪ್ರದೇಶಗಳ ಹೆಸರನ್ನು ಹೇಳಿದಾಗ ಶಾರೂಖ್ ಅವರನ್ನು ಅನರ್ಹಗೊಳಿಸುತ್ತಾನೆ. ಆದರೆ ವಿದ್ಯಾ ಶರ್ಮ. ತಾನು ಪ್ರತಿನಿಧಿಸುವುದು ‘ಇಂಡಿಯಾ’ ಎಂದಾಗ ಆಕೆ ಮಾತ್ರ ಅರ್ಹತೆ ಗಳಿಸುತ್ತಾಳೆ. ಈ ರೀತಿ ನಿರ್ದೇಶಕ ಶಮಿತ್ ಅಮೀನ್. ‘ಮುಝೆ ಸಿರ್ಫ್ ಏಕ್ ಮುಲ್ಕ್ ಕಾ ನಾಮ್ ಸುನಾಯಿ ದೇತಾ ಹೈ; ಇಂಡಿಯಾ’ ಎಂದು ಶಾರೂಖ್ ಕೈಯಲ್ಲಿ ಹೇಳಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾನೆ.

ಈ ಚಿತ್ರ ಕುರಿತು ಮಾತನಾಡುವಾಗ ನನ್ನ ಗೆಳೆಯನೊಬ್ಬ ಕೇಳಿದ. ‘ಅಂತಿಮವಾಗಿ ಭಾರತ ತಂಡ ಗೆದ್ದೇ ಗೆಲ್ಲುತ್ತದೆ ಎಂದು ಗೊತ್ತಿರುವಾಗ ಅದರಲ್ಲಿ ಥ್ರಿಲ್ ಏನಿರುತ್ತೆ?’.

ನಿಜ. ‘ಲಗಾನ್’ ಚಿತ್ರದಲ್ಲಿ ಹಳ್ಳಿಯ ತಂಡವೊಂದು ಪ್ರಬಲ ಆಂಗ್ಲ ತಂಡದೆದುರು ಗೆಲುವು ಸಾಧಿಸುತ್ತದೆ ಎಂಬುದು ನಮಗೆ ಚಿತ್ರದ ಆರಂಭದಲ್ಲೇ ಗೊತ್ತಿರುತ್ತದೆ. ‘ಇಕ್ಬಾಲ್’ನಲ್ಲಿ ಇಕ್ಬಾಲ್ ಭಾರತ ತಂಡಕ್ಕೆ ಆಯ್ಕೆಯಾಗಿಯೇ ಆಗುತ್ತಾನೆ ಎಂಬ ಅಗತ್ಯದ ಸತ್ಯಕೂಡ ನಮಗೆ ಗೊತ್ತಿರುತ್ತದೆ. (ನೂರಕ್ಕೆ ತೊಂಬತ್ತೊಂಬತ್ತರಷ್ಟು ಚಿತ್ರದಲ್ಲಿ ನಾಯಕನಿಗೆ ಗೆಲುವು ಶತಃಸಿದ್ಧ ಎಂಬುದು ಗೊತ್ತಿರುವಂತೆ) ಆದರೆ ಗೆಲುವಿನ ದಾರಿಯಲ್ಲಿ ಹೊಳೆಯಿಸುವ ಸತ್ಯಗಳು, ಹುಟ್ಟಿಸುವ ಹೊಸ ಆಲೋಚನೆಗಳು ಕೂಡ ಅಷ್ಟೇ ಮುಖ್ಯ. ಸಾಮಾನ್ಯವಾಗಿ ಕಮರ್ಷಿಯಲ್ ನೆಲೆಯಾಧಾರಿತ ಚಿತ್ರವೊಂದು ಪ್ರತ್ಯೇಕವಾಗಿ ನಿಂತುಕೊಳ್ಳುವುದು ಈ ರೀತಿಯ ಕಥೆ ಹೇಳುವಿಕೆಯಲ್ಲಿ ಎಂಬುದು ನನ್ನ ನಂಬಿಕೆ.

ಅಪರಿಚಿತ ಮುಖಗಳನ್ನು ಪರಿಚಯಿಸುವ ಮೂಲಕ ‘ಚಕ್‌ದೇ…’ ನಮ್ಮೆದುರು ಹೊಸ ಆಯಾಮವೊಂದನ್ನು ತೆರೆದಿಡುತ್ತದೆ ಎಂದು ಈ ಮೊದಲೇ ಪ್ರಸ್ತಾಪಿಸಿದ್ದೇನೆ. ಅಪರಿಚಿತ ಮುಖಗಳು ಪರಿಚಿತ ಮುಖಗಳಂತೆ ನಿರೀಕ್ಷೆಗಳನ್ನೂ ಹುಟ್ಟಿಸುವುದಿಲ್ಲ.

ಆದರೆ ಚಿತ್ರ ಬಿಚ್ಚಿಕೊಳ್ಳುತ್ತಾ ಹೋದಂತೆ ಈ ಅಪರಿಚಿತ ಮುಖಗಳು ನಮಗೆ ಬಹುಕಾಲದಿಂದ ಪರಿಚಿತವೇನೋ ಎಂಬ ಭಾವನೆಯನ್ನು ಹುಟ್ಟಿಸಿ, ಅವು ತಮ್ಮ ಮನುಷ್ಯ ಸಹಜ ವರ್ತನೆಯಿಂದ ನಮಗೆ ಆತ್ಮೀಯವಾಗಿ ಬಿಡುತ್ತವೆ. ಎಷ್ಟೋ ವರ್ಷಗಳಿಂದ ನಮಗೆ ಪರಿಚಿತವೇನೋ ಎನ್ನಿಸಿಬಿಡುತ್ತದೆ. ಒಂದು ಹಂತದಲ್ಲಿ ತನಗೆ ನಾಯಕಿ ಸ್ಥಾನ ದೊರೆಯಲಿಲ್ಲವೆಂಬ ಈರ್ಷ್ಯೆಯಿಂದ ಶಾರೂಖ್ ಬಳಿಗೆ ಬರುವ ಮುಂಬೈ ತಂಡದ ಎಲ್ಲ ಸೊಫೆಸ್ಟಿಕೇಷನ್‌ನ ಪ್ರತಿನಿಧಿಯಂತಿರುವ ಬಿಂದಿಯಾ ನಾಯಕ್ ‘ನನ್ನಲ್ಲಿ ಇಲ್ಲದಿರುವ ಅಂಥದ್ದು ಅವಳಲ್ಲಿ ಏನಿದೆ? ಅವಳು ಕೊಡ ಬಹುದಾದದ್ದನ್ನು ನಾನು ಕೊಡಬಲ್ಲೆ’ ಎಂದು ಬ್ಲೇಸರ್ ಕಳಚುವ ಸಂದರ್ಭದಲ್ಲಿ ಶಾರೂಖ್ ಮನಸ್ಸಿನಲ್ಲಿ ಹುಟ್ಟುವ ಅಸಹ್ಯದ ಭಾವನೆಯನ್ನು, ನಿರ್ದೇಶಕ ಅಮೀನ್ ಬ್ಲೇಸರ್‌ನ ಜಿಪ್ ಮೇಲೆಳೆಯುವುದರ ಮೂಲಕ ಮನೋಜ್ಞವಾಗಿ ತಲುಪಿಸುತ್ತಾ, ಈರ್ಷ್ಯೆ ತಲುಪಬಹುದಾದ ಎತ್ತರದ ಪರಿಚಯ ಮಾಡಿಸುತ್ತಾನೆ. ಶಾರೂಖ್‌ಖಾನ್ ಕೂಡ ತನ್ನ ಶಕ್ತಿಯಿಂದ ಪಾತ್ರಕ್ಕೆ ನ್ಯಾಯ ದೊರಕಿಸಿದ್ದಾರೆ. ಆ ಪಾತ್ರ ಆತನಿಗಾಗಿಯೇ ಸೃಷ್ಟಿಸಿದ್ದೇನೋ ಎನ್ನುವಂತಿದೆ. ನಿಜ, ಶಾರೂಖ್‌ಖಾನ್ ಪ್ರೇಕ್ಷಕರ ಮೆಚ್ಚಿನ ನಟ. ಆದರೆ ಚಿತ್ರದಲ್ಲಿ ಪ್ರೇಕ್ಷಕರಿಗೆ ಅವರಿಗೆ ಬೇಕಾದ ಶಾರೂಖ್ ದೊರೆಯುವುದಿಲ್ಲ. ಅಲ್ಲಿ ನಮಗೆ ಕಾಣಿಸುವುದು ‘ಸ್ವದೇಶ್’ ಚಿತ್ರದ ಮೋಹನ್ ಭಾರ್ಗವ್. ಇಲ್ಲೇ ಗೆಲುವು ಕೂಡ ಇದೆ.

‘ಚಕ್‌ದೇ…’ ಚಿತ್ರದಲ್ಲಿ ಪ್ರೇಕ್ಷಕರನ್ನು ತಟ್ಟುವ ಹಾಗೂ ಚಿಂತಿಸುವಂತೆ ಮಾಡುವ ಹಲವು ಸಂಗತಿಗಳಿವೆ. ಪಂಜಾಬಿ ಹುಡುಗಿ ಬಲಬೀರ್‌ಳ ಒರಟುತನ, ಬಂಗಾರದಂಥ ಮನಸ್ಸಿನ ಈ ಹುಡುಗಿ ತಮ್ಮನ್ನು ಕೆಣಕಿದ ಹುಡುಗರ ಗುಂಪಿನ ಮೇಲೆ ತಾನು ಹೆಣ್ಣೆಂಬುದನ್ನು ಮರೆತು ಎರಗುವ ಸಿದ್ಧಸೂತ್ರಗಳನ್ನು ಮುರಿದಿರುವುದರ ಸ್ಪಷ್ಟ ನಿದರ್ಶನ. ಚಕ್‌ದೇ ಹಿನ್ನೆಲೆಯಲ್ಲಿ ಈಗ ಬಾಲಿವುಡ್‌ನ ಸಾಂಪ್ರದಾಯಿಕ ನಿಯಮಾವಳಿಗಳನ್ನು ಪುನರ್‌ರಚಿಸುವ ಕಾಲ ಸನ್ನಿಹಿತವಾಗಿರುವಂತೆ ತೋರುತ್ತದೆ.