ಎಸ್. ಕುಮಾರ್ ಕನ್ನಡೀಕರಿಸಿದ ಗುಲ್ಜಾರ್ ರ ಕೆಲವು ಸಾಲುಗಳಿವು. ಓದಿ, ಹೊಸ ಬೆಳಗನ್ನು ತೆರೆಯಬಹುದು.

ಕಪ್ಪು ಬಿಳುಪಿನ ಮನೆಗಳಲ್ಲೇ
ಚದುರಂಗದಾಟ
ಮೂರನೆ ಬಣ್ಣವಿಲ್ಲ ಇಲ್ಲಿ.
ಯಾರೇ ಇರಲಿ,
ಮುಖಾಮುಖಿಯೇ
ಕಣ್ತಪ್ಪಿಸಿ ಬದುಕಬಹುದು.
ಆದರೆ ಎಷ್ಟು ಹೊತ್ತು?
ಆಕ್ರಮಿಸು,
ಇಲ್ಲ ಆಕ್ರಮಿಸುತ್ತಾರೆ.
ಕೈಗೆ ಸಿಕ್ಕರೊ ಹೊಡೆ,
ಕೈಯಲ್ಲಿದ್ದರೆ ಹೊಡೆದುರುಳಿಸಿ
ನಿನ್ನ ಜಾಗ ಮಾಡಿಕೊ.
ಸಂಚು ಹೂಡು
ಮುಂದಕ್ಕೆ ಕಾಯಿ ಇಡು..(ರೈಸ್ ಅಂಡ್ ಫಾಲ್)
***
ಇವು ಗುಲ್ಜಾರ್ ಸಾಲುಗಳು. ಇತ್ತೀಚೆಗೆ ಬಂದ ದಸ್ ಕಹಾನಿಯಾ ಚಿತ್ರಕ್ಕೆ ಇಂಥ ಇನ್ನೂ ಎಂಟು ಕವಿತೆಗಳನ್ನು ಅವರು ಬರೆದುಕೊಟ್ಟಿದ್ದಾರೆ. ಸಣ್ಣ ಕತೆಗಳ ಈ ಚಿತ್ರಕ್ಕೆ ಮತ್ತಷ್ಟು ತೀವ್ರವಾದ ಭಾವಸ್ಪಂದನೆ ಮೂಡಿಸುವಂಥ ಕವಿತೆಯ ಸಾಲುಗಳಿವು. ಮನುಷ್ಯನ ಅಸಹಾಯಕತೆ, ಬಯಕೆ, ನಶ್ವರ ಜೀವನ, ಕಳೆದುಕೊಂಡು ಪ್ರೀತಿ, ಹೀಗೆ ಮನುಷ್ಯನ ಕೆಲ ಮುಖಗಳನ್ನು ಇಲ್ಲಿನ ಸಾಲುಗಳಲ್ಲಿ ಬಿಚ್ಚಿಡುತ್ತಾರೆ ಗುಲ್ಜಾರ್.
ಮೇಲಿನ ಸಾಲುಗಳನ್ನೆ ತೆಗೆದುಕೊಳ್ಳಿ, ‘ರೈಸ್ ಅಂಡ್ ಫಾಲ್’ ಅನ್ನುವ ಕಥೆಗೆ ಬರೆದಿರುವ ಈ ಸಾಲುಗಳಲ್ಲಿ ಕಥೆಯನ್ನಷ್ಟೇ ಅಲ್ಲ, ಅಂಥದ್ದೇ ನೂರು ಬದುಕಿನ ಕಥೆಗಳನ್ನು ಹೇಳಿಬಿಡುತ್ತವೆ. ಕಥೆಯಲ್ಲಿ ಮುಂಬೈ ಅಂಡರ್‌ವರ್ಲ್ಡ್ ಜಗತ್ತಿಗೆ ಕಾಲಿಡುವ ಜನ ಹೇಗೆ ತಮ್ಮ ನೆಲೆ ಕಂಡುಕೊಳ್ಳುತ್ತಾರೆ. ಅದಕ್ಕಾಗಿ ಎಷ್ಟೆಲ್ಲಾ ಸಂಚು, ಪ್ರತಿ ಸಂಚುಗಳನ್ನು ಹೂಡುತ್ತಾರೆ. ಅಂಥದ್ದೇ ಸಂಚುಗಳಿಗೆ ಅವರು ಹೇಗೆ ಬಲಿಯಾಗುತ್ತಾರೆ ಅನ್ನೋದನ್ನು ಹೇಳುತ್ತದೆ. ಗುಲ್ಜಾರ್ ಅದನ್ನು ಕಪ್ಪು ಬಿಳಿ ಚದುರಂಗದಾಟದ ಕಾದಾಟ ಅಂತಾರೆ. ಸರಿ ತಪ್ಪುಗಳ ಲೆಕ್ಕವಿಲ್ಲ.
ಹೆಂಡ್ತಿಯನ್ನು ಕಳೆದುಕೊಂಡವನೊಬ್ಬ ಆಕೆಯ ನೆನಪಿನಲ್ಲಿ ಹೇಗೆ ಕಾಲ ದೂಡುತ್ತಾನೆ ಕೇಳಿ,

ನೀನು ಬಿಟ್ಟು ಹೋದ ದಿನ
ಹಾಗೆ ಇದೇ ಲಾನ್‌ನಲ್ಲಿ ನೇತಾಡುತ್ತಾ
ಅದು ಹಳೆಯದಾಗಿಲ್ಲ,
ಅದರ ಬಣ್ಣ ಮಾಸಿಲ್ಲ,
ಎಲ್ಲಿಯೂ ಒಂದು ಹೊಲಿಗೆ ಬಿಟ್ಟಿಲ್ಲ
ಏಲಕ್ಕಿ ಗಿಡದ ಪಕ್ಕದ ಕಲ್ಲಿನ ಮೇಲೆ
ನೆರಳು ಸರಿದಾಡುತ್ತಿರುತ್ತದೆ.
ಅಂಗಳದ ಪೊದೆ ಮತ್ತಷ್ಟು ದೊಡ್ಡದಾಗಿದೆ (ಗುಬ್ಬಾರೆ)
ಅಂತಾ ಪ್ರತಿಯೊಂದು ವಿವರವನ್ನು ಕೊಡುತ್ತಾ ಹೋಗುತ್ತಾನೆ.
ನಮ್ಮ ಸಣ್ಣತನವನ್ನು ಅಳೆಯುವ ಸಾಲುಗಳು..
ಭೂಮಿಯ ವಯಸ್ಸು
೮ ಮಿಲಿಯನ್ ವರ್ಷಗಳಿರಬಹುದು
ವಿಜ್ಞಾನಿಗಳ ಅಂದಾಜು ಇದೇ.
6 ಬಿಲಿಯನ್ ವರ್ಷಗಳು
ಕಳೆದೇ ಹೋಗಿವೆ.
ಎಷ್ಟು ತಡ ಮಾಡಿದೆ ಬರಲು?
ಬಂದ ಮೇಲೂ
ಇದೇನು ನಿನ್ನ ದುನಿಯಾದಾರಿ?
ಏನು ಯೋಚನೆ ಮಾಡುತ್ತಿದ್ದೀಯಾ?
ಯಾವ ಜಾತಿ, ಮತ, ನೆಲದ
ಚಿಂತೆ ನಿನಗೆ?
3 ಬಿಲಿಯನ್ ವರ್ಷಗಳು ಉಳಿದಿವೆ..(ಅನ್ನದ ತಟ್ಟೆ)
ಅಂತಾರೆ ಗುಲ್ಜಾರ್.
ಹೀಗನ್ನುವವರು ಸೀದಾ ಬಡವನ ಮನೆಗೆ ಬರುತ್ತಾರೆ.

***
ಹಿಟ್ಟಿನ ಬೆಲೆ ಹೆಚ್ಚುತ್ತಲೇ ಇರುತ್ತದೆ
ಆದರೆ, ಹಸಿವು ಮಿತಿ ಮೀರುವುದಿಲ್ಲ,
ಹೊಟ್ಟೆಪಾಡಿನ ಜನರದ್ದು ಇದೇ ಕಥೆ
ತುಂಬಿದರೆ ಸಾಕು, ಹಾಸಿಗೆ ಬಿಚ್ಚಿಕೊಳ್ಳುತ್ತದೆ
***

ಕಾನೂನಿನ ಮೊಹರುಗಳಿಂದ
ಯಾವಾಗ ಕಡಿಯುತ್ತವೆ,
ಕೂಡುತ್ತವೆ ಸಂಬಂಧಗಳು?
ಸಂಬಂಧ ರೇಷನ್ ಕಾರ್ಡಲ್ಲ.

(ತಲಾಕ್) ಗುಲ್ಜಾರ್ ಬರೆದ ಈ ಸಾಲುಗಳನ್ನು ನಾನಾಪಾಟೇಕರ್, ಮನೋಜ್ ಬಾಜ್‌ಪಾಯ್, ನೇಹಾ ಧೂಪಿಯಾ, ನಾಸಿರುದ್ದೀನ್ ಶಾ, ಅಮೃತಾ ಸಿಂಗ್, ದಿಯಾ ಮಿರ್ಜಾ, ಸಂಜಯ್ ದತ್, ಸುಧಾಂಶು ಪಾಂಡೆ ಓದಿದ್ದಾರೆ.

ಕೆಲ ವರ್ಷಗಳ ಹಿಂದೆ ಅಮೂಲ್ ಪಾಲೇಕರ್ ‘ಥೋಡಿ ಸೀ ರೂಮಾನಿ ಹೋಜಾಯೆ ’ಅನ್ನೋ ಚಿತ್ರದಲ್ಲಿ ಹೀಗೆ ಪದ್ಯದಂಥ ಸಾಲುಗಳನ್ನು ಇಡೀ ಚಿತ್ರದುದ್ದಕ್ಕೂ ಬಳಸಿದ್ದರು. ಅಂಥದ್ದೇ ಮತ್ತೊಂದು ಪ್ರಯೋಗ ಸಂಜಯ್ ಗುಪ್ತ ಮತ್ತು ಸ್ನೇಹಿತರು ಗುಲ್ಜಾರ್ ಪದ್ಯ ಬಳಸಿ ಮಾಡಿದ್ದಾರೆ.