ಇದು ವಿಕಾಸ ನೇಗಿಲೋಣಿ ಬರಹ. ವಾರಕ್ಕೊಂದು ಕನ್ನಡ ಸಿನಿಮಾ ನೋಡಿ ಆಗುವ ಸುಸ್ತಿನ ನಡುವೆ ಮೆಚ್ಚಿನ ಸಿನಿಮಾವೊಂದನ್ನು ಅವರು ಇಲ್ಲಿ ನೆನಪು ಮಾಡಿಕೊಂಡಿದ್ದಾರೆ. 1988ರಲ್ಲಿ ಬಿಡುಗಡೆಯಾದ ಸಿನಿಮಾ ಪ್ಯಾರಾಡಿಸೋ ಕುರಿತು ಅವರ ಸವಿಸವಿ ನೆನಪುಗಳು ಇಲ್ಲಿವೆ. ಓದಿ.

ಅಮ್ಮ ಕಾಣದ ಕೂಸಿಗೊಂದು ಕುಲಾವಿ ಹೊಲೆಯುತ್ತಾ ಕುಳಿತಿದ್ದಾಳೆ. ಅಷ್ಟರಲ್ಲಿ ಮನೆಯ ಕಾಲಿಂಗ್‌ ಬೆಲ್‌ ಸದ್ದಾಗುತ್ತದೆ. ಅಮ್ಮ ದಾರದ ಉಂಡೆಯನ್ನು ಅಲ್ಲಿಯೇ ಬಿಟ್ಟು ಕುಲಾವಿಯೊಂದಿಗೆ ಮೇಲೇಳುತ್ತಾಳೆ. ಕುಲಾವಿಗೆ ಸಿಕ್ಕಿಕೊಂಡಿರುವ ದಾರ ಸುರುಳಿಸುರುಳಿಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮುಂದೆ ಆಕೆ ಮುಂಬಾಗಿಲವರೆಗೆ ಹೋದುದ್ದನ್ನು ಕ್ಯಾಮರಾ ತೋರಿಸುವುದೇ ಇಲ್ಲ. ದಾರ ಹೇಗೆ ಹೇಗೆ ಬಿಚ್ಚಿಕೊಂಡು ಎಲ್ಲಿವರೆಗೆ ಹೋಯಿತು ಎಂಬುದರ ಕಡೆಗೇ ಕ್ಯಾಮರಾದ ಲಕ್ಷ. ಅದರ ಹಿನ್ನೆಲೆಯಾಗಿ ಬಾಗಿಲು ತೆರೆದ ಸದ್ದು ಕೇಳುತ್ತದೆ. ಅದರ ನಂತರ ಅಮ್ಮನ ಕ್ಷೀಣ ದನಿ: ಅರೆ ಮಗನೇ ಬಂದೆಯಾ, ನೀನು ಬರುತ್ತಿಯಾ ಅಂತ ಗೊತ್ತಿತ್ತು. ನಿನ್ನ ಫ್ರೆಂಡ್‌ ಆಲ್‌ಫ್ರೆಡ್‌ ತೀರಿಕೊಂಡರು. ಅದಕ್ಕೂ ಮೊದಲು ಬಂದವನ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತದೆ, ದಾರದ ಸುರುಳಿಯಂತೆ.

ಬಂದವ ಸಾಲ್ವಟೋರೆ. ಈಗವ ದೊಡ್ಡ ನಿರ್ದೇಶಕ. ಒಂದು ಕಾಲಕ್ಕೆ ಆತ ಸಣ್ಣ ಹಳ್ಳಿಯೊಂದರಲ್ಲಿ ತಂಗಿದ್ದ. ಅಪ್ಪನಿಲ್ಲದ ಮಗ, ಅಮ್ಮನೇ ಆತನ ಏಕೈಕ ಆಧಾರ. ಪುಟಾಣಿ ಸಾಲ್ವಟೋರೆಗೆ ಸಿನಿಮಾ ಹುಚ್ಚು. ಊರಲ್ಲಿನ ಸಣ್ಣ ಥಿಯೇಟರ್‌ `ಸಿನಿಮಾ ಪ್ಯಾರಡಿಸೋ’ ಎಂದರೆ ಆ ಹುಡುಗನಿಗೆ ಪಂಚಪ್ರಾಣ. ಶಾಲೆಗೆ ಕಳಿಸಿದರೆ ಶಾಲೆಗೆ ಹೋಗದೇ, ಹಾಲು ಹಾಕಿ ಬಾ ಎಂದು ಕಳಿಸಿದರೆ ಹಾಲು ಹಾಕದೇ ಥಿಯೇಟರ್‌ ಒಳಗೆ ನುಗ್ಗುವ ಪೋರ. ಅಲ್ಲೂ ಸಿನಿಮಾ ನೋಡುವುದಿಲ್ಲ, ಓಡುತ್ತಾನೆ ನೇರ ಸಿನಿಮಾ ಪ್ರೊಜೆಕ್ಷನ್‌ ರೂಂಗೆ. ಯಾಕೆಂದರೆ ಅಲ್ಲೊಬ್ಬ ಪ್ರಾಣ ಸ್ನೇಹಿತ, ಆಲ್‌ಫ್ರೆಡೋ. ಅಲ್‌ಫ್ರೆಡೋಗೂ ಈ ಹುಡುಗನಿಗೂ ಸುಮಾರು ಐವತ್ತು ವರ್ಷಗಳ ಅಂತರ. ಇವನನ್ನು ಆ ಅಜ್ಜ ಎತ್ತಿ ಕಟ್ಟೆ ಮೇಲೆ ಕೂರಿಸುತ್ತಾನೆ. ಪ್ರೊಜೆಕ್ಷನ್‌ ಬೀಳುವ ಕಿಂಡಿಯಲ್ಲಿ ಹುಡುಗ ಅರಳುಗಣ್ಣಿಂದ ಸಿನಿಮಾ ನೋಡುತ್ತಾನೆ. ಊರಿನ ಪಾದ್ರಿ ಸೆನ್ಸಾರ್‌ ಮಾಡಿದ ಕಿಸ್ಸಿಂಗ್‌ ಸೀನ್‌ ಅನ್ನು ತಾನೊಬ್ಬನೇ ನೋಡಿದವನು ಎಂದು ಹೆಮ್ಮೆಪಡುತ್ತಾನೆ ಬಾಲಕ ಸಾಲ್ವಟೋರೆ!

`ಸಿನಿಮಾ ಪ್ಯಾರಡಿಸೋ’ ಎಂಬ ಈ ಇಟಾಲಿಯನ್‌ ಸಿನಿಮಾ, ಸಿನಿಮಾ ಹುಚ್ಚನೊಬ್ಬನ ಕತೆ. ಸಿನಿಮಾದ ಜತೆ ತನ್ನ ಬದುಕಿನ ಸಾಕ್ಷಾತ್ಕಾರ ಕಂಡುಕೊಂಡವನ ಕತೆ. ಇನ್ನೂ ನೋಡಿದರೆ ಯುದ್ಧಕ್ಕೆ ಹೋದ ಗಂಡ ಬಂದಾನೇ ಬಾರನೇ ಎಂದು ಕಾಯುತ್ತಾ ಕುಳಿತ ಸಾಲ್ವಟೋರೆಯ ಅಮ್ಮನ ಕತೆಯೂ ಹೌದು. ಅಷ್ಟೇ ಅಲ್ಲ, ಒಬ್ಬಳನ್ನು ಪ್ರೀತಿಸಿ ಆಕೆ ಸಿಗದೇ ಜೀವನ ಪರ್ಯಂತ ಒಂಟಿಯಾದ ಸಾಲ್ವಟೋರೆಯ ಕತೆಯೂ ಹೌದು. ಇದಕ್ಕೆ ಹಿನ್ನೆಲೆಯಾಗಿ ಯಾವ ರಕ್ತಸಂಬಂಧವೂ ಇಲ್ಲದೇ ಎರಡು ಅಜಗಜಾಂತರ ವಾರಗೆಯ ಆಲ್‌ಫ್ರೆಡ್‌ ಮತ್ತು ಸಾಲ್ವಟೋರೆ ಎಂಥ ಸ್ನೇಹದಲ್ಲಿ ಸೋತುಹೋದರು ಎಂಬ ಸಾರಾಂಶವೂ ಇಲ್ಲಿದೆ.

1988ರಲ್ಲಿ ಬಿಡುಗಡೆಯಾಗಿ, ಪ್ರಪಂಚದಾದ್ಯಂತ ಅಪಾರ ಮನ್ನಣೆ ಪಡೆದ `ಪ್ಯಾರಡಿಸೋ’, ನಮ್ಮನ್ನೆಲ್ಲಾ ತಟ್ಟುವುದು ಒಂದು ಮಾನವೀಯ ನೆಲೆಯಿಂದ. ಯುದ್ಧಕ್ಕೆ ಹೋದ ಗಂಡನನ್ನು ಕಾಯುತ್ತಾ ಆಯುಷ್ಯ ಕಳೆಯುವ ಸಾಲ್ವಟೋರೆಯ ಅಮ್ಮ, ತಾನು ಪ್ರೀತಿಸಿದ ಕಾಜಿಗಣ್ಗಳ ಚಲುವೆ ಎಲಿನಾ ಸಿಗುತ್ತಾಳೆಂದು ಜೀವನ ಪೂರ್ತಿ ಕಾಯುವ ಸಾಲ್ವಟೋರೆ, ತಾನು ಮದುವೆಯಾದರೂ ಎಂದಾದರೂ ಮರಳಲಿರುವ ಸಾಲ್ವಟೋರೆಗಾಗಿ ಹಂಬಲಿಸುವ ಎಲಿನಾ- ನಮ್ಮೊಳಗಿನ ಕಾಯುವ ಗುಣಗಳ ಪ್ರತೀಕ. ಆತ ಮನೆಗೆ ಮರಳಬಾರದು, ಮತ್ತೆ ಬರೇ `ಪ್ಯಾರಾಡಿಸೋ’ದ ಪ್ರೊಜೆಕ್ಟರ್‌ ಆಗಿ ಉಳಿಯಬಾರದು, ಆತ ದೊಡ್ಡ ವ್ಯಕ್ತಿಯಾಗಬೇಕು, ತುಂಬ ಓದಬೇಕು ಎಂದು ಹಂಬಲಿಸುವ ಹಣ್ಣುಹಣ್ಣು ಮುದುಕ ಆಲ್‌ಫ್ರೆಡ್‌ ಇವರನ್ನೆಲ್ಲಾ ಮೀರಿ ನಿಲ್ಲುವ ದೊಡ್ಡ ಮಾನವೀಯ ಲಾಂದ್ರ.

ಅಲ್ಲಿ ಕಾಣಿಸಿಕೊಳ್ಳುವ ಹಾದಿ ಬೀದಿಗಳಿಂದಾಗಲೀ, ಬೇರೆ ಬೇರೆ ವಯಸ್ಸಿನಲ್ಲಿ ತೋರಿಬರುವ ಸಾಲ್ವಟೋರೆಯ ವ್ಯಕ್ತಿತ್ವದಿಂದಾಗಲೀ `ಪ್ಯಾರಡಿಸೋ’ ಬರೇ ಇಟಲಿಯ ಕತೆಯಾಗಿ ಉಳಿಯುವುದಿಲ್ಲ. ಅಲ್ಲಿ ಸಿನಿಮಾ ಎಂಬ ಜನಪ್ರಿಯ ಮಾಧ್ಯಮ ಮೂಕಿಯಿಂದ ಟಾಕಿಯಾಗಿ, ಕಪ್ಪುಬಿಳುಪಿಂದ ಕಲರ್‌ ಆಗಿ, ಸೆನ್ಸಾರ್‌ನಿಂದ ಅನ್‌ಸೆನ್ಸಾರ್ಡ್‌ ಆಗಿ ಬೆಳೆದುಬಂದದ್ದರ ಡಾಕ್ಯುಮೆಂಟ್‌ ಕೂಡ ಆಗುತ್ತದೆ. ಇಡೀ ಊರಿಗೆ ಒಂದೇ ಒಂದು ಥಿಯೇಟರ್‌ ಇದ್ದಾಗಿನ ಸಾಮಾಜಿಕ ಪರಿಸ್ಥಿತಿಯ ಕನ್ನಡಿಯಾಗಿ ಈ ಸಿನಿಮಾವನ್ನು ಇಟ್ಟುಕೊಂಡು ನೋಡಿದರೆ ಇಟಲಿಗೂ ಭಾರತಕ್ಕೂ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ನಮ್ಮ ಸ್ವಾತಂತ್ರ್ಯಪೂರ್ವ ದಿನಗಳು, ಇಟಲಿಯ ವರ್ಲ್ಡ್‌ವಾರ್‌ ಹೊತ್ತಿನ ದಿನಗಳು ಎರಡೂ ಇಲ್ಲಿ ಒಂದಾದಂತೆ ಕಂಡುಬರುವುದು ಅಪೂರ್ವ.

ಈ ಚಿತ್ರ ಸಮಕಾಲೀನವಾಗಿ ಕಾಣುವುದು ಇನ್ನೊಂದು ಪ್ರಮುಖವಾದ ಅಂಶಗದಿಂದ. ನಮ್ಮಲ್ಲಿ ಹಳೆಯ ಥಿಯೇಟರ್‌ಗಳು ನಿಧಾನವಾಗಿ ಕಾಣೆಯಾಗುತ್ತಿವೆ. ಬೆಂಗಳೂರಿನಲ್ಲಿ `ಗೆಲಾಕ್ಸಿ’, `ಲಿಡೋ’ ಸೇರಿದಂತೆ ಹಲವಾರು ಥಿಯೇಟರ್‌ಗಳು ನಿಧಾನವಾಗಿ ಮುಚ್ಚಿಕೊಂಡು ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣವಾಗಿ ರೂಪ ಪಡೆದುಕೊಳ್ಳುತ್ತಿದೆ. `ಸಿನಿಮಾ ಪ್ಯಾರಡಿಸೋ’ದಲ್ಲಿ ಇದನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಆತ ಆಲ್‌ಫ್ರೆಡ್‌ನ ಅಂತ್ಯಸಂಸ್ಕಾರಕ್ಕೆ ಬಂದ ದಿನ ಅವನ `ಸಿನಿಮಾ ಪ್ಯಾರಡಿಸೋ’ ಥಿಯೇಟರ್‌ ನೆಲಸಮವಾಗಲಿರುತ್ತದೆ. ಆತ ಆ ಥಿಯೇಟರ್‌ ಒಳಗೆ ಕಾಲಿಡುತ್ತಾನೆ. ತಾನು ಚಿಕ್ಕವನಿದ್ದಾಗ ಪ್ರೊಜೆಕ್ಷನ್‌ ರೂಂನಿಂದ ಸಿನಿಮಾ ನೋಡುತ್ತಿದ್ದ ಕಿಂಡಿ, ಪ್ರೊಜೆಕ್ಷನ್‌ ನಿಂತುಹೋಗಿ, ಕೆಳಗೆ ಕುಳಿತ ಜನ ಬೊಬ್ಬೆ ಹೊಡೆಯುತ್ತಿದ್ದರೂ ತಾನು ಎಲಿನಾಳ ದೀರ್ಘ ಮುತ್ತಿನಲ್ಲಿ ಮತ್ತನಾಗಿದ್ದ ಪ್ರೊಜೆಕ್ಷನ್‌ ಕೋಣೆ ಎಲ್ಲವೂ ನಾಸ್ಟಾಲ್ಜಿಯಾದಂತೆ ಆತನನ್ನು ಕಾಡುತ್ತದೆ. ಅವನ ಜನಾಂಗದ ಸಿನಿಮಾದ ಮೂಲಕ ಈ ಜಗತ್ತನ್ನು ತೋರಿಸಿದ ಆ ಥಿಯೇಟರ್‌ ಮುರಿದುಬೀಳುವುದು ಎಲ್ಲಾ ದೇಶಗಳ ಮುರಿದುಬೀಳುತ್ತಿರುವ ಥಿಯೇಟರ್‌ಗಳಿಗೆ ರೂಪಕವಾಗಿ ತೋರುತ್ತದೆ.