ವಿಮರ್ಶಕ ವಿ.ಎನ್. ಲಕ್ಷ್ಮೀನಾರಾಯಣ ಅವರು, ಮೈಸೂರು ಫಿಲಂ ಸೊಸೈಟಿ ಮೇ 21 ರಿಂದ ಮೂರು ದಿನಗಳ ಏರ್ಪಡಿಸಿದ್ದ “ಅರಿವಿನ ಹಾದಿ” ಚಿತ್ರೋತ್ಸವದ ಮೊದಲ ದಿನದ ವರದಿಯನ್ನು ಕಳುಹಿಸಿದ್ದಾರೆ. ಓದಿ ತಿಳಿಸಿ.
ವೈಲ್ಡ್ ಡಾಗ್ ಡೈರೀಸ್ (ಸೇನಾನಿ ಹೆಗ್ಡೆ/ಇಂಡಿಯ/2006\47ನಿಮಿಷ)

ಮೈಸೂರು ಫಿಲ್ಮ್ ಸೊಸೈಟಿ 2010 ರ ಮೇ 21 ರಂದು ಆಯೋಜಿಸಿದ್ದ ಚಿತ್ರೋತ್ಸವದ ಮೊದಲ ದಿನದ ಪ್ರದರ್ಶನ ಈ ಸಾಕ್ಷ್ಯಚಿತ್ರ. ಕೃಪಾಕರ-ಸೇನಾನಿ ಜೋಡಿ ಆದಿವಾಸಿ ಬೊಮ್ಮನನ್ನು ಮುಂದಿಟ್ಟುಕೊಂಡು ಕಾಡುನಾಯಿಗಳ ಜೀವನಗತಿಯನ್ನು ಈ ಚಿತ್ರದಲ್ಲಿ ಬಿಂಬಿಸಿದ್ದಾರೆ. ಚಲಿಸುವ ಹೊಗೆಯಂತೆ ಚಿತ್ರಿಸಿದ ಶುಭ್ರಬಿಳಿ ಮತ್ತು ಮಳೆಮೋಡಗಳು, ಮನಮೋಹಕ ಹಸಿರು ಭಿತ್ತಿಯಲ್ಲಿ ಮೂಡಿಸಿದ ಬೇಟೆಯಾಡುವಚಿರತೆ, ಗಂಭೀರ ನಡಿಗೆಯ ಆನೆಗಳು, ಹಸಿರಿನ ಮರೆಯಲ್ಲಿ ಬೆಂಕಿಯಂತೆ ಮಿನುಗುವ ಹುಲಿ, ಕಿರುಚುವ ಮಂಗಗಳು, ನರ್ತಿಸುವ ನವಿಲು, ಜಿಂಕೆಗಳ ಬೆನ್ನಟ್ಟಿ ತಕತಕನೆ ಓಡುವ ಕಾಡುನಾಯಿಗಳ ಬಳಗ, ಇವೆಲ್ಲಕ್ಕೂ ಹಿನ್ನೆಲೆ ಯಾಗಿ ಜೋಡಿಸಿದ ಸಂಗೀತ ನೋಡುಗ ರನ್ನು ಸೆರೆಹಿಡಿಯುತ್ತವೆ. ಕಾಡಿನ ಮಧ್ಯದ ಕೊಳಗಳ ನೀರತೆರೆಗಳು, ಪ್ರಾಣಿಗಳ ಜಾಡನ್ನು ಮೂಡಿಸುವ ಇಬ್ಬನಿ, ಬೊಮ್ಮ ಸೃಜಿಸುವ ಎಲೆಕೊಡೆಯಮೇಲೆ ಬೀಳುವ ತುಂತುರುಮಳೆ, ಬೆಳಗಿನ ಓರೆಬೆಳಕಿನ ಚೆಲ್ಲಾಟದಲ್ಲಿ ತಮ್ಮದೇ ಆದ ಚಿತ್ತಾರಗಳನ್ನು ನಿರ್ಮಿಸುವಂತೆ ಲೆನ್ಸ್ ಕೆಲಸಮಾಡಿದೆ. ಜೀಪು, ಕತ್ತಿ, ಕ್ಯಾಮರಾ, ಸ್ಟ್ಯಾಂಡುಗಳೂ ಈ ಚಿತ್ರದ ಪ್ರಾಪ್. ನೋಡುವಷ್ಟುಕಾಲವೂ ಮುದಕೊಡುವ ವೈಲ್ಡ್ ಡಾಗ್ ಡೈರೀಸ್ ನ ಒತ್ತು ಪರಿಸರ-ಪ್ರಾಣಿಜೀವನದ ಅಭ್ಯಾಸಕ್ಕಿಂತ ಹಸಿರು ದ್ರವ್ಯಮೂಲದ ಮನೋರಂಜನೆ ಇರಬಹುದೆಂದು ನಂಬುವಷ್ಟು ಢಾಳಾಗಿದೆ. ಇಂಗ್ಲಿಷ್ ವಿವರಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೀಕ್ಷಕರಿಗೆ ಅನುಕೂಲಕರವಾಗಿದೆ.

ಚಿತ್ರಪ್ರದರ್ಶನವಾದಮೇಲೆ ಕೃಪಾಕರ-ಸೇನಾನಿ ಜೋಡಿಯೊಂದಿಗೆ ನಡೆಸಿದ ಸಂವಾದ ಚಿತ್ರದ ಹಿನ್ನೆಲೆ-ಮುನ್ನೆಲೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿತ್ತು. ಹಕ್ಕಿಛಾಯಾಚಿತ್ರಗ್ರಾಹಕರಾಗಿ, ಕಾಡುಗಳಲ್ಲಿ ಸುತ್ತುವ ಈ ಜೋಡಿ, ಕಾಡುನಾಯಿಗಳ ಕುರಿತಾಗಿ ಹತ್ತುವರ್ಷ ಅಭ್ಯಾಸ ನಡೆಸಿ, ಸದಾ ಮಲಗುವ, ಕಂಡರೆ ಮುದುಡಿ ಮರೆಯಾಗುವ ಕಾಡುನಾಯಿಗಳ ಜಾಡುಹಿಡಿದು ಸತತವಾಗಿ ಒಂದು ವರ್ಷ ಚಿತ್ರೀಕರಿಸಿ, ೧೫೦ ಗಂಟೆಗಳಿಗೂ ಹೆಚ್ಚುಕಾಲದ ಫುಟೇಜನ್ನು ಕಲೆಹಾಕಿ ೪೭ ನಿಮಿಷಗಳಿಗಿಳಿಸಿ ಟಿವಿ ಮಾಧ್ಯಮಕ್ಕೆಂದು ತಯಾರಿಸಿದ ಸಾಕ್ಷ್ಯ ಚಿತ್ರ ವೈಲ್ಡ್ ಡಾಗ್ ಡೈರೀಸ್. ವ್ಯಕ್ತಿಗಳು ಪಾತ್ರಗಳಾಗಿ, ಅಳಿವಿನಚಿಚಿನಲ್ಲಿರುವ ಕಾಡಿನ ಜೀವಿಗಳ ಜೀವನಗತಿಯನ್ನು ಜಾಗತಿಕ ಉಪಭೋಗಕ್ಕೆ ಆಕರ್ಷಕವಾಗುವ ರೀತಿಯಲ್ಲಿ ಸಂಯೋಜಿಸಿದ ಚಿತ್ರ ಇದು.

ಚಿತ್ರಕ್ಕೆ ನವಿಲಿನ ನರ್ತನದ ಹಿನ್ನೆಲೆಯಲ್ಲಿ ಬಳಸಿಕೊಂಡಿರುವ ಮೇಘ ಮಲ್ಹಾರ, ಚಿತ್ರದ ಚೌಕಟ್ಟಿನಿಂದ ಆಚೆ ಉಳಿದುಬಿಡುವಷ್ಟು ಮನಮೋಹಕವಾಗಿದೆ. ಅಲ್ಲದೆ ಕಾಡಿನ ಹಿನ್ನೆಲೆಯ ಬುಡಕಟ್ಟು-ಜಾನಪದ ವಾದ್ಯ, ಸಂಗೀತಗಳನ್ನು ಬಳಸಿಕೊಳ್ಳುವ ಬದಲು ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತವನ್ನು ಬಳಸಿ ಕೊಂಡಿರುವುದೇಕೆ? ಎಂಬ ಪ್ರಶ್ನೆಗೆ, ಚಿತ್ರ ಪ್ರಾದೇಶಿಕವಾಗುಳಿಯುವ ಬದಲು, ಕರ್ನಾಟಕ-ಭಾರತ ಮಟ್ಟದ ಪ್ರಾತಿನಿಧಿಕತೆ, ಮತ್ತು ಚಿತ್ರದ ಮನಮೋಹಕತೆಯನ್ನು ಸಾಧಿಸಲು ಅಗತ್ಯವಾಗಿತ್ತು ಎಂಬರ್ಥದ ಸಮಾಧಾನ ಸೇನಾನಿಹೆಗ್ಡೆಯವರಿಂದ ದೊರೆಯಿತು.

ಜಾಗತೀಕರಣದಿಂದಾಗಿ ಲೋಕಲ್ ಎನ್ನುವುದು ಗ್ಲೋಕಲ್ ಆಗಿದೆ ಎಂದು ಅಮೆರಿಕದ ಹೇಜಲ್ ಹೆಂಡರ್ ಸನ್ ಎಂಬ ಆರ್ಥಿಕಚಿಂತಕಿ ಹೇಳುತ್ತಾರೆ. ಕೇವಲ ಮಿಕ್ಕಿ ಮೌಸ್ ಮಾತ್ರವಲ್ಲ, ಪ್ರಾಣಿ-ಪರಿಸರ ಕೇಂದ್ರಿತ ಎಲ್ಲಾ ಜನಪ್ರಿಯ ಟಿವಿ ಚಿತ್ರಗಳೂ ಆಕ್ರಮಣಕ-ಆಕ್ರಮಪೀಡಿತ, ಬೇಟೆಗಾರ-ಮಿಕ ಚೌಕಟ್ಟುಗಳನ್ನು ಹೊಂದಿದ್ದು, ಅವುಗಳಲ್ಲಿ ಆಕ್ರಮಣಶೀಲತೆಯ ದೃಷ್ಟಿ ಯಾವಾಗಲೂ ಮೇಲುಗೈ ಪಡೆಯುತ್ತದೆ. ಸಮಾಜವಾದೀ ರಾಜಕೀಯ, ಚಿಂತನಾಕಲ್ಪನೆ ಮತ್ತು ತಾತ್ವಿಕ ಹಿನ್ನೆಲೆಯ ಕೃಪಾಕರ-ಸೇನಾನಿ ನಿರ್ಮಿಸಿರುವ ವೈಲ್ಡ್ ಡಾಗ್ ಡೈರೀಸ್ ಚಿತ್ರದಲ್ಲೂ ಇದೇ ಬಗೆಯ ಚೌಕಟ್ಟು ಮತ್ತು ದೃಷ್ಟಿ ಕಾಣಿಸುತ್ತದೆ. ಇದು ಆಕಸ್ಮಿಕವೆ? ಅಥವಾ ಕೃಪಾಕರ-ಸೇನಾನಿ, ಜಾಗತೀಕರಣದ ತಾತ್ವಿಕತೆಯ ಬಲಿಪಶುಗಳೋ-ಫಲಾನುಭವಿಗಳೋ ಆಗಿದ್ದಾರೆಯೆ? ಜಾಗತಿಕ ಮಾರುಕಟ್ಟೆಯ ಆರ್ಥಿಕತೆಯಲ್ಲಿ ಆಳುವವರು-ಮಾರುವವರು ಆಕ್ರಮಣಕಾರರಾಗಿ, ಜನಸಮುದಾಯ ಮತ್ತು ಬಳಕೆದಾರರು ಅವರು ಬೆನ್ನಟ್ಟುವ ಮಿಕಗಳಾಗಿ, ಬಂಧಿತ ಗಿರಾಕಿಗಳಾಗಿ ನಿಯಂತ್ರಣಕ್ಕೊಳಪಟ್ಟಿದ್ದಾರೆ. ಕಾಡಿನ ನ್ಯಾಯದಲ್ಲಿ ಜಿಂಕೆಯನ್ನು ಕಾಡುನಾಯಿಗಳು, ನಾಯಿಗಳನ್ನು ಹುಲಿಗಳು, ಬೇಟೆಯಾಡುವುದು ಸಹಜವೆಂಬಂತೆ ಕಾಣಿಸುತ್ತದೆ.

ಜಾಗತೀಕರಣ ಮುನ್ನೊತ್ತುತ್ತಿರುವ ಇಂದಿನ ಕಾರ್ಪೋರೇಟ್ ನಿಯಂತ್ರಣದ ನ್ಯಾಯ-ಪ್ರಗತಿ-ಸಹಜತೆಯ ಪರಿಕಲ್ಪನೆ ಇದಕ್ಕಿಂತ ಭಿನ್ನವಾಗಿದೆಯೆ ಎಂಬ ಪ್ರಶ್ನೆಯನ್ನು ಈ ಚಿತ್ರದ ಸಂದರ್ಭದಲ್ಲಿ ಕೇಳಿಕೊಳ್ಳಬಹುದು.