ಶಿಕಾರಿಪುರದ ಕವಿಸ್ವರ ಅವರ ಅಭಿಪ್ರಾಯಕ್ಕೆ “ನಾನೂ ನನ್ನ ಕನಸು” ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಚಿತ್ರ ನಿರ್ದೇಶಕ ಬಿ. ಸುರೇಶ ನೀಡಿರುವ ಪ್ರತಿಕ್ರಿಯೆಯಿದು.

ಶಿಕಾರಿಪುರದ ಕವಿಸ್ವರ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ.

ನಾನು ಮೂಲತಃ ಪುನರವತರಣಿಕೆಯನ್ನು ಇಷ್ಟಪಡುವುದಿಲ್ಲ. ಅದು ಸೃಜನಶೀಲತೆಯ ಸೋಲು ಎಂದು ನಂಬುವವರಲ್ಲಿ ನಾನೂ ಒಬ್ಬ. ಆದರೂ ‘ನಾನು ನನ್ನ ಕನಸು’ ಚಿತ್ರವನ್ನು ‘ಅಭಿಯುಂ ನಾನುಂ’ ಚಿತ್ರದ ಪುನರವತರಣಿಕೆಯಾಗಿ ಮಾಡಿದ್ದೇನೆ.

ನೀವು ಸಿನಿಮಾ ನೋಡಿದರೆ ನಾನು ಈ ತೀರ್ಮಾನಕ್ಕೆ ಬರಲು ಕಾರಣ ತಿಳಿಯುತ್ತದೆ. ಇದು ಅಪ್ಪ-ಮಗಳ ಬದುಕನ್ನು ಬಿಚ್ಚಿಡುವ ಸಿನಿಮಾ. ಇಲ್ಲಿ ಕತೆ ಇಲ್ಲ. ಅನುಭವಗಳ ಸರಣಿ ಇದೆ. ಜನರನ್ನು ಮೆಚ್ಚಿಸಲೆಂದು ಸೂತ್ರೀಕರಿಸಿದ ವಿವರಗಳಿಲ್ಲ. ನೋಡುಗನಿಗೆ ಅವನ ತಂದೆ-ತಾಯಿ-ಸಂಸಾರ-ಬದುಕನ್ನು ನೆನಪಿಸುವ ಗುಚ್ಛಗಳಿದೆ.

ನನಗೆ ಒಬ್ಬ ಮಗಳಿದ್ದಾಳೆ. ಅವಳೀಗ ಎಂಟನೇ ತರಗತಿಗೆ ತಲುಪಿದ್ದಾಳೆ. ಈ ವರೆಗೆ ಅವಳೊಂದಿಗೆ ನಾನಿದ್ದ ಸ್ಥಿತಿಗೂ ಪ್ರೌಢಾವಸ್ಥೆಗೆ ಬಂದ ಮಗಳ ಜೊತೆಗೆ ಅಪ್ಪನಿಗೆ ಸಿಗುವ ಪ್ರೀತಿ ಹಂಚಿಕೊಳ್ಳುವ ಅವಕಾಶಕ್ಕೂ ವ್ಯತ್ಯಾಸ ಇದೆ. ಬದಲಾದ ನನ್ನ ಜೀವನದ ಪರಿಸ್ಥಿತಿಯೇ ನಾನು ಈ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಲು ಕಾರಣ.

ಅಪರೂಪದ ಸಂದರ್ಭಗಳಲ್ಲಿ ನಾವು ನಮ್ಮ ನಿಲುವುಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಹಾಗೇ ನನ್ನ ಎದುರಿಗೆ ನನಗೆ ಅಪರೂಪ ಎನಿಸುವ ಸ್ಥಿತಿಯಲ್ಲಿ ನನ್ನ ಮಗಳಿದ್ದಳು. ಈ ಉತ್ತರ ನಿಮಗೆ ತೃಪ್ತಿ ತಂದೀತು ಎಂದುಕೊಳ್ಳುತ್ತೇನೆ ಕವಿಸ್ವರ ಅವರೇ.

ನಮನಗಳು ಮತ್ತು ಪ್ರತಿಕ್ರಿಯೆ ನೀಡಲು ಅನುವು ಮಾಡಿಕೊಟ್ಟ ಪ್ರಶ್ನೆಗೆ ಧನ್ಯವಾದಗಳು- ಬಿ. ಸುರೇಶ