ಮುರಳೀಧರ ಖಜಾನೆಯವರು ಈ ಹಿಂದೆ “ಮೈ ನೇಮ್ ಈಸ್ ಖಾನ್” ಕುರಿತು ಲೇಖನ ಬರೆದಿದ್ದರು. ಅದಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಖಜಾನೆಯವರು ಬರೆದಿರುವ ಉತ್ತರವಿದು.

‘ಮೈ ನೇಮ್ ಈಸ್ ಖಾನ್’ -ಬಾಲಿವುಡ್‌ನ ಭಿನ್ನಯಾತ್ರೆ ಕುರಿತ ನನ್ನ ಬರಹಕ್ಕೆ ಮೂರು ಪ್ರತಿಕ್ರಿಯೆಗಳು ಬಂದಿವೆ. ಈ ಪ್ರತಿಕ್ರಿಯೆಗಳಿಗೆ ಒಟ್ಟಾಗಿ ಉತ್ತರಿಸುತ್ತಿದ್ದೇನೆ.

ಲೇಖನಕ್ಕೆ ಪ್ರತಿಕ್ರಿಯಿಸಿರುವ ವಿಜಯ್, ‘ಒಂದು ಚಿತ್ರವಾಗಿ ಹಾಗೂ ಸಂದೇಶ ನೀಡುವ ಕ್ರಮದಲ್ಲಿ ಅಪಾರ ಸುಳ್ಳುಗಳನ್ನು ಬಳಸಿಕೊಂಡು ಒಂದು ಸತ್ಯವನ್ನು ಹೇಳಬಹುದೇ? ಹೀಗೆ ಮಾಡಿದ ಚಿತ್ರಗಳು ಸೋಲುವುದಿಲ್ಲವೇ ? ‘ಮೈ ನೇಮ್ ಈಸ್ ಖಾನ್’ ಈ ನಿಟ್ಟಿನಲ್ಲಿ ಹೀನಾಯವಾಗಿ ಸೋತಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

ಚಿತ್ರದಲ್ಲಿ ನುಸುಳಿರುವ ’ಅಪಾರ ಸುಳ್ಳುಗಳು’- ಯಾವ್ಯಾವುದು? ನನಗೆ ಅರ್ಥವಾಗುತ್ತಿಲ್ಲ. 9/11 ರ ನಂತರ ಇಡೀ ಮುಸ್ಲಿಂ ಸಮುದಾಯವನ್ನು ‘ಸಾಮಾನ್ಯ’ ಅಮೆರಿಕನ್ನರು ಹೇಗೆ ನೋಡುತ್ತಿದ್ದಾರೆಂಬುದನ್ನು ವಿಜಯ್ ಅವರೇ ಸೂಚಿಸಿರುವ ‘ನ್ಯೂಯಾರ್ಕ್’, ‘ಕುರ್ಬಾನ್’ ಚಿತ್ರಗಳಲ್ಲಿ ಅತ್ಯಂತ ಸೂಕ್ಷ್ಮವಾಗಿ ಹೇಳಲಾಗಿದೆ. ಮುಸ್ಲಿಂ ಸಮುದಾಯವನ್ನು ಹಾಗೆ ನಡೆಸಿಕೊಳ್ಳುತ್ತಿರುವ ರೀತಿಗೆ ಪ್ರತಿಕ್ರಿಯೆಯಾಗಿ ಸಾಕಷ್ಟು ಬಾಲಿವುಡ್ ಚಿತ್ರಗಳು ಬರುತ್ತಿವೆ. ಆದರೆ ‘ನಾನೂ ಮುಸ್ಲಿಂ. ನಾನು ಭಯೋತ್ಪಾದಕನಲ್ಲ ಎಂದು ಹೇಳುವ ದಾರ್ಷ್ಟ್ಯ ಪ್ರಾಮಾಣಿಕತೆ ನನಗೆ, ಈ ಕ್ಷಣದಲ್ಲಿ ಕಂಡಿದ್ದು ‘ ಮೈ ನೇಮ್ ಈಸ್ ಖಾನ್’ ನಲ್ಲಿ ಮಾತ್ರ.

‘ಸೋಲು’ – ಒಂದು ಚಿತ್ರದ ಗುಣಮಟ್ಟದ ಮಾನದಂಡವಲ್ಲ. ಹಾಗೆ ನೋಡಿದರೆ ಅಪೂರ್ವ ಕಲಾಕೃತಿ ಎನ್ನಿಸಿಕೊಂಡ -ಗುರುದತ್ ಮಹತ್ವಾಕಾಂಕ್ಷಿಯ , ‘ಕಾಗಜ್ ಕಾ ಪೂಲ್’ ನಂಥ ಹಲವು ಚಿತ್ರಗಳು ಪ್ರೇಕ್ಷಕ ಮಹಾಪ್ರಭು ತಿರಸ್ಕರಿಸಿದ್ದಾನೆ. ಹಾಗೆಂದು ಅವು ಕಳಪೆ ಚಿತ್ರಗಳು ಎನ್ನಲು ಸಾಧ್ಯವೇ ?

‘ಅಮೆರಿಕದಲ್ಲಿನ ಆಫ್ರಿಕನ್ನರ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಳಿಸಂ’ ಟ್ರ್ಯಾಕ್‌ನ್ನು ಕಿರಣ್ ತಂದಿದ್ದಾರೆ, ಎಂಬುದು ವಿಜಯ್ ಆರೋಪ. ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಸ್ಯೆಯೊಂದರ ಅಗಾಧತೆಯನ್ನು ಹೇಳುವುದು ತಪ್ಪೇನಲ್ಲ. ಚಿತ್ರ ಕಮರ್ಷಿಯಲ್ ಅಂಶಗಳನ್ನೊಳಗೊಂಡಾಗ ಅದಕ್ಕೆ ದಕ್ಕುವ ಪ್ರೇಕ್ಷಕ ಸಮೂಹ ಬಹಳ ದೊಡ್ಡದು. ಪ್ರಯೋಗಾತ್ಮಕ ಚಿತ್ರಗಳ ಮಹತ್ವದ ಸಂಗತಿಗಳನ್ನೇ ಹೇಳಿದ್ದರೂ ಅದರ-‘ತಲುಪುವಿಕೆ’-(reach) ಕಡಿಮೆ. ಚಿತ್ರ ಮಂದಿರದಲ್ಲಿ ಬಿಡುಗಡೆಯಾಗದ ಚಿತ್ರಗಳಲ್ಲಿ ಎಷ್ಟು ವಿಚಾರ ಸಂಕಿರಣ ನಡೆಸಿ, ಎಷ್ಟು ಚರ್ಚಿಸಿದರೆ ತಾನೇ ಏನು ಪ್ರಯೋಜನ ಅದು ಒಂದಿಷ್ಟು ಸಿನಿಮಾಸಕ್ತರ ಬೌದ್ಧಿಕ ಕಸರತ್ತಿಗೆ ವೇದಿಕೆ ಮಾತ್ರ.
ಆದರೆ ಜಗತ್ತಿನಾದ್ಯಂತ ಬಿಡುಗಡೆಯಾದ ಮತ್ತು ಸಮಕಾಲೀನ ಜ್ವಲಂತ ಸಮಸ್ಯೆಯೊಂದನ್ನು ಎತ್ತಿಕೊಂಡಿರುವ ‘ಮೈ ನೇಮ್ ಈಸ್ ಖಾನ್’ ತಲುಪುವಿಕೆ ಬಹಳ ದೊಡ್ಡದು. ಹಾಗಾಗಿ ಪರಿಣಾಮ ಕೂಡ ದೊಡ್ಡದು ಎಂದು ನನ್ನ ಅನಿಸಿಕೆ.

-ಇನ್ನೂ ವಿಜಯ್ ಅವರು ಗುರುತಿಸುವ ‘ಕುರ್ಬಾನ್’ ಮತ್ತು ‘ನ್ಯೂಯಾರ್ಕ್’ ಚಿತ್ರಗಳ ಅತಾರ್ಕಿಕತೆ ಕುರಿತು ಮತ್ತೊಂದು ಲೇಖನವನ್ನೇ ಬರೆಯಬಹುದು.

ಶಿವಾನಂದ್ ಅವರು, ‘ಆಟಿಸಂ’ ನಂಥ ಪಾತ್ರವೊಂದನ್ನು ತೆಗೆದುಕೊಂಡು ಅದರ ಮೂಲಕ ಮುಸ್ಲಿಂರೆಲ್ಲಾ ಉಗ್ರಲ್ಲ ಎಂದು ಹೇಳಲು ಹೊರಟಿರುವುದು ಚಿತ್ರದ ನೆಗೆಟಿವ್ ಅಂಶ ಎನ್ನುತ್ತಾರೆ.

ಚಿತ್ರದ ದೌರ್ಬಲ್ಯ ಅದರ ಅತಾರ್ಕಿಕತೆ ಬಗ್ಗೆ ನಾನು ನನ್ನ ಲೇಖನದಲ್ಲಿ ದೀರ್ಘವಾಗಿಯೇ ಬರೆದಿದ್ದೇನೆ. ಆದರೆ
‘ಅಟಿಸಂ’ ಕಾಯಿಲೆಯನ್ನು ಬಳಸಿಕೊಳ್ಳುವ ಮೂಲಕ ರಿಜ್ವಾನ್‌ಖಾನ್ ಪಾತ್ರದ ಬಗ್ಗೆ ಅನುಕಂಪ ಮತ್ತು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಲು ಪ್ರಯತ್ನಿಸಿದ್ದಾರೆ ಎಂಬುದು ನನ್ನ ಅನಿಸಿಕೆ. ಅದು ನಿರ್ದೇಶಕರ ಅನಿವಾರ್ಯ ವಿಮಾನ ನಿಲ್ದಾಣದ ಸಿಬ್ಬಂದಿಗೆ. ರಿಜ್ವಾನ್-‘ಅಟಿಸಂ’ ರೋಗಿ ಎಂದು ಅರ್ಥವಾಗುವುದು ಶಾರೂಖ್ ಅದನ್ನು ಬಹಿರಂಗಗೊಳಿಸಿದಾಗಲೇ. ಇವರ ಮಾರುಕಟ್ಟೆ ದೃಷ್ಟಿಕೋನದ ಕುರಿತಾದ ಅನಿಸಿಕೆ, ಈ ಮೊದಲೇ ಉತ್ತರಿಸಿದ್ದೇವೆ.

‘ಮೈ ನೇಮ್ ಈಸ್ ಖಾನ್’ ಚಿತ್ರ ಬಿಡುಗಡೆಯಾದಾಗ ವಿರೋಧಿಸಿದ್ದು ‘ಶಿವಸೇನೆ’ ಎಂದು ಶಿವಾನಂದ್ ಸರಿಪಡಿಸಿದ್ದಾರೆ. ಅವರು ಹೇಳಿರುವುದು ಸರಿ.

ಆದರೆ ಶಿವಸೇನೆ ತನ್ನ ಧೋರಣೆ, ಮುಸ್ಲಿಂ ವಿರೋಧಿ ನೀತಿ, ಪ್ರಜಾಸತ್ತೆ ಮೌಲ್ಯಗಳ ತಿರಸ್ಕಾರದಲ್ಲಿ ಸಂಘಪರಿವಾರದ ಮೌಲ್ಯಗಳನ್ನೇ ಮೈಗೂಡಿಸಿಕೊಂಡು, ಅದಕ್ಕಿಂತ ಒಂದು ಕೈ ಮೇಲೆ ಎನ್ನುವಂತೆ ವ್ಯವಹರಿಸುತ್ತಿರುವ ಸಂಘಟನೆ ಎಂಬುದು ನನ್ನ ನಂಬಿಕೆ.

Advertisements