ಪಿ.ಕೆ. ಸುದರ್ಶನ್ ಅವರು “ನಾನೂ…ನನ್ನ ಕನಸು” ಚಿತ್ರದ ಕುರಿತು ಬಹಳ ಭಿನ್ನವಾಗಿ ಬರೆದಿದ್ದಾರೆ. ಒಂದು ಚಿತ್ರವನ್ನು ಹೊರಗಿನಿಂದಲೇ ನೋಡುತ್ತಲೇ, ಅದರ ಒಳ ನೆಲೆಯಲ್ಲಿ ಹಾಗೂ ಸಾಮಾಜಿಕ ಸೆಲೆಯಲ್ಲಿ ಉಂಟು ಮಾಡಿರಬಹುದಾದ, ಮಾಡಬಹುದಾದ ಪರಿಣಾಮ ಕುರಿತು ವ್ಯಾಖ್ಯಾನಿಸಿದ್ದಾರೆ. ಆ ಮೂಲಕ “ನಾನೂ..ನನ್ನ ಕನಸು” ಕುರಿತಾದ ಚರ್ಚೆಯನ್ನು ಬೆಳೆಸಿದ್ದಾರೆ. ನೀವೂ ಬೆಳೆಸಬಹುದು.

ಸದ್ಯ ಚರ್ಚೆಯಲ್ಲಿರುವ ‘ಜಾಗತೀಕರಣ’ಕ್ಕೆ ಹೋಲಿಸಿದರೆ ಬಹುಶಃ ‘ಭಾರತೀಕರಣ’ ಎಂಬುದೊಂದು ಅತ್ಯಂತ ವಿಶಾಲವಾದ, ಪುರಾತನವಾದ, ಆಳವಾದ ಸಂಕೀರ್ಣ ಪ್ರಕ್ರಿಯೆ. ಸ್ಥೂಲವಾಗಿ ಭಾರತದ ಒಳಗೇ ಇರುವ ಹಲವು ಸಂಸ್ಕೃತಿಗಳ ಸಂವಾದ, ಸಂಘರ್ಷ, ಸಮನ್ವಯವನ್ನು ‘ಭಾರತೀಕರಣ’ ಎಂದು ಕರೆಯಬಹುದಾದರೆ, ಇದರ ಮೂಲವಂತೂ ನಮ್ಮ ಊಹೆಗೆ ನಿಲುಕದ್ದು. ಅದು ಒಂದೇ ಪುರಾಣ, ಕಥನ, ಮಹಾಕಾವ್ಯವೊಂದು ವಿವಿಧ ಭಾಷೆ, ಸಮುದಾಯಗಳ ನಡುವೆಯೇ ಜೀವಂತವಾಗಿ ಆ ಭಾಷೆ-ಸಮುದಾಯಕ್ಕೆ ತಕ್ಕಂತೆ ಮಾರ್ಪಟ್ಟು ಹಲವು ಆವೃತ್ತಿಗಳಲ್ಲಿರುವ ಸೋಜಿಗಕ್ಕೆ ಸಂಬಂಧಪಟ್ಟದ್ದು. ಆದರೆ ಮುಖ್ಯವಾಗಿ ಇಲ್ಲಿ ನನ್ನ ಮನಸ್ಸಿನಲ್ಲಿರುವುದು ಸ್ವಾತಂತ್ರ್ಯಾನಂತರದ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದ ಭಾರತೀಕರಣ ಎಂಬ ಆಧುನಿಕ ಪ್ರಕ್ರಿಯೆಯಲ್ಲಿ. ಆಧುನಿಕ ಭಾರತದಲ್ಲಿ ಈ ಪ್ರಕ್ರಿಯೆ ತನ್ನದೇ ಆದ ವೇಗ, ಸ್ವರೂಪವೊಂದನ್ನು ಪಡೆದುಕೊಂಡಿದೆ. ಹೀಗೆ ಅದು ವೇಗ ಪಡೆದುಕೊಂಡಿದ್ದು 80-90 ರ ದಶಕದ ನಂತರ.

‘ಬುನಿಯಾದ್’, ‘ಯೆ ಜೋ ಹೈ ಜಿಂದಗಿ’ಗಳು ಡ್ರಾಯಿಂಗ್ ರೂಮ್ ಮೂಲಕ ನಮ್ಮ ಹೃದಯಕ್ಕೆ ಲಗ್ಗೆ ಇಟ್ಟು ನಮ್ಮ ಮಾತುಗಳಲ್ಲಿ ‘ಆನಾ ಹೈ’, ‘ಜಾನಾ ಹೈ’ಗಳು ಸುಲಭವಾಗಿ ನುಸುಳುವ ಮೂಲಕ. ತೆಲುಗು, ತಮಿಳು ಸಿನಿಮಾಗಳು ಹುಬ್ಬಳ್ಳಿಯಲ್ಲಿ ಹೈದರಾಬಾದಿನಲ್ಲಿ ಬಿಡುಗಡೆಯಾದ ದಿನವೇ ಬಿಡುಗಡೆಯಾಗುವ ಮೂಲಕ. ಮಣಿರತ್ನಂ, ಸುಭಾಷ್ ಘಾಯ್, ರಾಜೇಂದ್ರ ಸಿಂಗ್ ಬಾಬುರ ಚಿತ್ರಗಳನ್ನು ಒಟ್ಟಿಗೆ ನೋಡುವ ಮೂಲಕ. ಹೀಗೆ ಶುರುವಾದದ್ದು, ಇವೊತ್ತು ನಮ್ಮ ಹಿಂದಿ ಭಾಷಿಕ ಹುಡುಗ ‘ನಾ ಪೊಯ್ ಸೊಲ್ಲ ಮಾಟ’ ಎಂದು ಜಾಹೀರಾತಿನಲ್ಲಿ ಹೂಂಕರಿಸುವ ವೈಚಿತ್ರ್ಯದಲ್ಲಿ ವ್ಯಕ್ತವಾಗಿದೆ. ರಾಬಿನ್ ಉತ್ತಪ್ಪ ಮುಂಬೈ ಟೀಂ-ಗಾಗಿ ಐಪಿಎಲ್ ಆಡಿದ್ದಾರೆ, ಮೈಸೂರಿನ ವಿಜಯ್ ಪ್ರಕಾಶ್ ಏಕಕಾಲದಲ್ಲಿ ತಮಿಳು, ಹಿಂದಿಯಲ್ಲಿ ಹಾಡುತ್ತಿದ್ದಾರೆ.

ನಿಮಗೊಬ್ಬ ಬಿಹಾರದಲ್ಲಿ ಹುಟ್ಟಿ ಪುಣೆಯಲ್ಲಿ ಬೆಳೆದ ಹಿಂದಿ/ಮರಾಠಿ/ತೆಲುಗು ಭಾಷಿಕ ನಾಯ್ಡು ಎಂಬ ಸ್ನೇಹಿತನಿದ್ದರೆ ನಾನಂತೂ ಅಚ್ಚರಿ ಪಡುವುದಿಲ್ಲ. ಈ ಭಾರತೀಕರಣದಿಂದಾಗಿ ಮಧ್ಯಮ-ವರ್ಗಗಳ ಮಟ್ಟಿಗಂತೂ ಅನ್ಯ ಭಾಷೆ, ಸಂಸ್ಕೃತಿಗಳ ಜ್ಞಾನ, ಒಡನಾಟ ಬಹುತೇಕ ಹೆಚ್ಚಾಗಿದೆ. ಕೇಬಲ್ ತಂತ್ರಜ್ಞಾನದಿಂದಾಗಿ ಭಾರತದ ಎಲ್ಲಾ ಭಾಷೆಗಳ ಚಾನೆಲ್-ಗಳನ್ನು ನೋಡುವ ಭಾಗ್ಯ ಹೊಂದಿದ್ದೇವೆ. ಅನ್ಯ ಭಾಷೆಯ ಸಾಹಿತ್ಯ (ಅನುವಾದದಲ್ಲಿ ಅಥವಾ ಪ್ರತ್ಯಕ್ಷವಾಗಿ) ಓದುತ್ತೇವೆ, ಸಿನಿಮಾ ನೋಡುತ್ತೇವೆ, ಹಾಡು ಗುನುಗುನಿಸುತ್ತೇವೆ. ನಗರಗಳ ಅಪಾರ್ಟ್ಮೆಂಟ್ ಸಂಸ್ಕೃತಿಯಿಂದಾಗಿ ಅಥವಾ ನಮ್ಮ ನಮ್ಮ ವೃತ್ತಿಯ ಕಾನ್ಫರೆನ್ಸು, ಸೆಮಿನಾರುಗಳಿಂದಾಗಿ ಅನ್ಯ ಭಾಷಿಕರೊಡನೆ ಸಾಮಾಜಿಕವಾಗಿಯೂ ಬೆರೆಯುತ್ತಿದ್ದೇವೆ.

ಬಹುಶಃ ಜಾಗತೀಕರಣ ಭಾರತೀಕರಣದ ಮೇಲೆ ಒತ್ತಡ ಸೃಷ್ಟಿಸಿ ಈ ವೇಗವನ್ನು ಹೆಚ್ಚಿಸಿದೆ. ಆದರೆ ಈ ವಾಸ್ತವ ನಮ್ಮ ಕನ್ನಡ ಸಿನಿಮಾಗಳಲ್ಲಿ ಎಷ್ಟರ ಮಟ್ಟಿಗೆ ವ್ಯಕ್ತವಾಗಿದೆಎಂಬ ಪ್ರಶ್ನೆ ಕೇಳಿಕೊಂಡರೆ ಉತ್ತರ ನಿರಾಸೆಯದ್ದು. ಕನ್ನಡ ಸಿನಿಮಾದಲ್ಲಿ ಬೇರೆ ಭಾಷೆಯ ಸಂಸ್ಕೃತಿಯ ಪಾತ್ರಗಳನ್ನು ಕಥನದಲ್ಲಿ ಸಂವೇದನಾ ಶೀಲವಾಗಿ ಗೌರವಯುತವಾಗಿ ಬಳಸಿಕೊಂಡ ನಿದರ್ಶನಗಳು ಅತ್ಯಲ್ಪ. ಮಚ್ಚು-ಲಾಂಗು, ಅಣ್ಣ-ತಂಗಿಯರ ಮೆಲೋಡ್ರಾಮಾಗಳ ಭರಾಟೆಯಲ್ಲಿ ಕನ್ನಡ ಸಿನಿಮಾದಲ್ಲಿ ನಾವು ಕಾಣುವ ‘ದೇಶ’ ಅತ್ಯಂತ ಸಂಕುಚಿತವಾದದ್ದು.

‘ಮಾಸ್’ಚಿತ್ರಗಳನ್ನು ಬಿಡಿ, ಸೋ ಕಾಲ್ಡ್ ಕ್ಲಾಸ್- ಚಿತ್ರಗಳೂ ಅಂಥಾ ವಿಶೇಷ ಪ್ರಯತ್ನವನ್ನೇನೂ ಮಾಡಿಲ್ಲ. ಅಮರಿಕೆಯಲ್ಲಿರುವ ಕನ್ನಡಿಗನ ಪಡಿಪಾಟಲು ತೋರಿಸುವಾಗ ಅನ್ಯ ಭಾರತೀಯರನ್ನು ತೋರಿಸಲು ಇದ್ದ ಅವಕಾಶಗಳನ್ನು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಚಿತ್ರಗಳಲ್ಲಿ ಬಳಸಿಕೊಂಡಿಲ್ಲ. ಹಾಗೆ ನೋಡಿದರೆ ಹಳೆ-ಮೈಸೂರಿನ ಹೊರತಾದ ಸಂಸ್ಕೃತಿಗೆ ಕನ್ನಡ ಸಿನಿಮಾದಲ್ಲಿ ಗೌರವ ಬರುತ್ತಿರುವುದು ಕೂಡಾ ತೀರಾ ಇತ್ತೀಚೆಗಷ್ಟೆ. ಮತ್ತು ಹಾಗಾಗುತ್ತಿರುವುದಕ್ಕೆ ಕೂಡಾ ಭಾರತೀಕರಣ ಮತ್ತು ಜಾಗತೀಕರಣದ ಒತ್ತಡಗಳು ಕಾರಣ.

ಆದರೆ ಹಿಂದಿ ಸಿನಿಮಾ ಪ್ರಾದೇಶಿಕ ಭಾಷೆಗಳಿಗೆ ಹೋಲಿಸಿದರೆ ಸಹಜವಾಗಿ ಈ ವಿಷಯದಲ್ಲಿ ಸ್ವಲ್ಪ ಮುಂದಿದೆ. ಏಕೆಂದರೆ ಅನ್ಯದೊಡನೆ ಬೆರೆಯುವ ತುರ್ತು (ಮಾರುಕಟ್ಟೆ, ರಾಷ್ಟ್ರೀಯತೆ ಕುರಿತ ರಾಜಕೀಯ ನೀತಿ ಇತ್ಯಾದಿ ಕಾರಣಗಳಿಂದಾಗಿ) ಹಿಂದಿಗೆ ಹೆಚ್ಚಿದೆ. ಹೀಗಾಗಿ ‘ಏಕ್ ದುಜೆ ಕೇ ಲಿಯೆ’, ‘ಪಡೋಸನ್’ನಂಥ ಚಿತ್ರಗಳು ಬಹಳ ಹಿಂದೆಯೇ ಬಂದಿವೆ (ಅಲ್ಲಿಯೂ ‘ಅನ್ಯ’ ಬಹುತೇಕ ಹಾಸ್ಯಾಸ್ಪದವೇ; ಆ ಮಾತು ಬೇರೆ). ಹಾಗೆ ನೋಡಿದರೆ ಬಾಲಿವುಡ್-ಗೆ ತಾನು ಯಾವುದೇ ವಿಶಿಷ್ಟ ಪ್ರಾದೇಶಿಕ ಸಂಸ್ಕೃತಿಯನ್ನು ತೋರಿಸುತ್ತೇನೆ ಎಂಬ ‘ಅಹಂ’ನ್ನೇನೂ ಇಟ್ಟುಕೊಂಡಿಲ್ಲ. ಅಲ್ಲಿನ ಬಹುತೇಕ ಪಾತ್ರಗಳು ಎಲ್ಲಿಯೂ ಸಲ್ಲಬಹುದಾದ ಪ್ಯಾನ್-ಇಂಡಿಯನ್ ಗುಣಗಳನ್ನು ಹೊಂದಿರುತ್ತವೆ. ದಕ್ಷಿಣದ ನಟಿಯರು ಅಲ್ಲಿ ಸ್ಟಾರ್ ಆಗಿದ್ದಾರೆ. ರಾಷ್ಟ್ರೀಯ ಮಟ್ಟದ ಮನ್ನಣೆಗೆ ಪ್ರಾದೇಶಿಕರು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಹೊಂದಿದ್ದಾರೆ. ಹೀಗಾಗಿ ಹಿಂದಿ ಚಿತ್ರ ಪ್ಯಾನ್-ಇಂಡಿಯನ್ ಎಂಬ ಅಮೂರ್ತ-ಭಾರತೀಯನ ಕನ್ನಡಿಯಾಗಿದೆ.

ಕನ್ನಡದ ಸಂದರ್ಭದಲ್ಲಿ ಎಲ್ಲಾ ವರ್ಗಗಳ ಮನಸ್ಸನ್ನು ಗೆಲ್ಲಬಲ್ಲ ನಾಯಕರ ಕೊರತೆ, ಡಿವಿಡಿ-ಕೇಬಲ್‌ಗಳ ಹಾವಳಿ, ಹೊಸತನದ ಕೊರತೆ ಇತ್ಯಾದಿ ಕಾರಣಗಳಿಂದಾಗಿ ಆರ್ಥಿಕವಾಗಿಯೂ ಸಿನಿಮಾ-ರಂಗ ಹೀನ ಸ್ಥಿತಿಯಲ್ಲಿದೆ. ಹೀಗಿರುವಾಗ ಕನ್ನಡ ಸಿನಿಮಾಕ್ಕೊಂದು ಸುಹಾನಾ ತಾಜ್‌ಗಿಯನ್ನು ಕೊಡುವ ಚಿತ್ರ ‘ನಾನು ನನ್ನ ಕನಸು’ ಎಂದರೆ ತಪ್ಪಾಗಲಾರದು. ‘ಸಾಫಿಸ್ಟಿಕೇಟೆಡ್’ ಎನ್ನಬಹುದಾದ ನಿರೂಪಣೆ ಹೊಂದಿರುವ ಈ ಸಿನಿಮಾದ ಕಥೆಯ ಅತ್ಯಂತ ಮುಖ್ಯ ಮತ್ತು ಗಹನವಾದ ಎಳೆ -ನಾರ್ಸಿಸಿಸ್ಟ್ ತಂದೆಯೊಬ್ಬ ಮಗಳ ಮೂಲಕ ಹೊರ ಪ್ರಪಂಚವನ್ನು ನೋಡುವ ಬಗೆಯನ್ನು ಕಂಡುಕೊಂಡು ಬೆಳೆಯುವ ಕುರಿತದ್ದಾದರೂ-ನನ್ನ ಸದ್ಯದ ಆಸಕ್ತಿ ಪಂಜಾಬೀ ಸಂಸ್ಕೃತಿಯನ್ನು ಸಹೃದಯತೆಯಿಂದ ನಿರ್ದೇಶಕ ಪ್ರಕಾಶ್ ರೈ ಕಾಣುವ, ಕಾಣಿಸುವ ಕುರಿತಾದದ್ದು. ಆ ಮಟ್ಟಿಗೆ ಈ ಅನ್ಯ-ಸಂಸ್ಕೃತಿಯೊಂದಿಗಿನ ಸಂವಹನ ಸಿನಿಮಾದಲ್ಲಿ ಕೊಂಚ ಹೆಚ್ಚು ಪ್ರಯತ್ನಪೂರ್ವಕವಾಗಿ, ಅಬ್ರಪ್ಟ್ ಎನ್ನಿಸುವಂತೆ ಬಂದಿದ್ದರೂ, ಇಂಥಾ ಒಂದು ಪ್ರಯತ್ನದ ಅವಶ್ಯಕತೆ ತುರ್ತಾಗಿದ್ದ ಕಾರಣವಾಗಿ ಪ್ರಕಾಶ್ ಕ್ಷಮಾರ್ಹರು.

ದಿಲ್ಲಿಗೆ ಓದಲು ಹೋಗುವ ಮಗಳು ‘ಕನಸು’ ಜೋಗಿಂದರ್-ನನ್ನು ಪ್ರೀತಿಸಿ ಮದುವೆಯಾಗಲು ಹೊರಡುವ ಹಾದಿಯಲ್ಲಿ, ಮಡಿಕೇರಿಯ ಕಾವೇರಿ ನದಿ ಸತ್ಲಜ್ ಆಗುತ್ತದೆ, ಬಳ್ಳಾರಿಯ ಭಿಕ್ಷುಕ ಬ್ರಿಜೇಶ್ ಪಟೇಲ್ ಜಸಬೀರ್-ಳ ‘ಬೀರ್’-ಗೆ ಮಾರುಹೋಗುವಂತಾಗುತ್ತದೆ, ‘ಹಂಸಲೇಖಾ’ರ ಸಂಗೀತದಲ್ಲಿ ಪಂಜಾಬಿ, ಬಂಗಾಲಿ ನಾದಗಳು ವಿಜೃಂಭಿಸುತ್ತವೆ, ಕೊಡಗಿನ ತನ್ನ ಕಿರುಪ್ರಪಂಚದಲ್ಲಿ ನೆಮ್ಮದಿಯಾಗಿದ್ದ ಉತ್ತಪ್ಪನಿಗೆ ದೂರವಾಣಿಯಲ್ಲಿ ಪ್ರಧಾನಿಗಳ ‘ಹಲೋ’ ಧ್ವನಿ ಕೇಳಿಬಂದು ಹೌಹಾರುವಂತಾಗುತ್ತದೆ. ಭಯೋತ್ಪಾದನೆ, ಸಿಖ್-ಗಲಭೆ, ಮುಂಬೈ ಹತ್ಯಾಕಾಂಡದ ನೊಂದವರ ಬದುಕಿನ ‘ದರ್ಶನ’ವಾಗುತ್ತದೆ. ಅವರಿಗೆ ನಗೆ, ಸಂತೋಷ ಕೊಡುತ್ತಿರುವ ಜೋಗಿಂದರ್-ನ ‘ಎತ್ತರ’ ಉತ್ತಪ್ಪನಿಗೂ, ಪ್ರೇಕ್ಷಕನಿಗೂ ಅರಿವಿಗೆ ಬರುತ್ತದೆ.

ಸರ್ದಾರ್ಜಿಗಳು ಜೋಕಿನ ಸರಕು ಎಂಬ ಸ್ಟೀರಿಯೊ ಟೈಪನ್ನು ಒಡೆದು ಹಾಕುವ ಎಲ್ಲಾ ಪ್ರಯತ್ನಗಳನ್ನು ಪ್ರಕಾಶ್ ಇಲ್ಲಿ ಮಾಡಿದ್ದಾರೆ. ತಕ್ಕಮಟ್ಟಿಗೆ ಯಶಸ್ವಿಯೂ ಆಗುತ್ತಾರೆ. ಇದೊಂದು ಫೀಲ್ ಗುಡ್ ಸಿನಿಮಾ. ಉತ್ತಪ್ಪನಿಗೆ ಮಗಳು ಪಂಜಾಬಿಯನ್ನು ಮದುವೆಯಾಗುತ್ತಿರುವ ಆಕ್ಷೇಪ ತೋರುಗಾಣಿಕೆಯದು; ಆತನ ಸಂಕಟವಿರುವುದು ಮಗಳ ಜೊತೆ ಇರುವ ವಿಶೇಷ ಸಂಬಂಧದಲ್ಲಿ ಅನ್ಯನೊಬ್ಬನು ಬೇಡುತ್ತಿರುವ ಪಾಲನ್ನು ಕುರಿತದ್ದು. ಹೀಗಾಗಿ ಇಲ್ಲಿ ಅನ್ಯ ಸಂಸ್ಕೃತಿಯ ಜೊತೆಗಿನ ಸಂಘರ್ಷಕ್ಕೆ ಇರುವ ಅವಕಾಶ ಕಡಿಮೆ. ಇದು ಸಿನಿಮಾದ ಮಿತಿ ಎನ್ನಬಹುದು. ಆದರೆ ಇಲ್ಲಿ ಸಾಮಾನ್ಯ ಕನ್ನಡಿಗನಿಗಾಗಿ ಇಂಗ್ಲೀಷ್, ಹಿಂದಿ ಮತ್ತು ಪಂಜಾಬಿ ಸಂಭಾಷಣೆಗಳು ಇರುವ ಕಡೆ ಕನ್ನಡ ಸಬ್-ಟೈಟಲ್-ಗಳನ್ನು ಬಳಸಲು ನಿರ್ದೇಶಕರು ಮರೆತಿದ್ದಾರೆ. ಭಾರತೀಕರಣದಿಂದಾಗಿ ಅವೆಲ್ಲವನ್ನೂ ಎಲ್ಲ ವರ್ಗದವರೂ ಅರ್ಥ ಮಾಡಿಕೊಳ್ಳಬಲ್ಲರು ಎಂಬ ವಿಶ್ವಾಸಯುತ ಭಾವನೆ ಅವರಿಗಿದ್ದಂತಿದೆ.

ಸ್ವತಃ ಪ್ರಕಾಶ್ ರೈ ಅವರ ಮಟ್ಟಿಗೆ ಹೇಳುವುದಾದರೆ ಕನ್ನಡದಲ್ಲಿ ನಟನಾಗಿ ಬೆಳಕು (‘ನಾಗಮಂಡಲ’ದ ಸಿನೆಮಾಟೋಗ್ರಾಫರ್ ಭಾಸ್ಕರ್ ಮತ್ತಿತರಿಂದ)ಕಂಡು, ತಮಿಳಿಗೆ ತೆರಳಿ ಸ್ಟಾರ್ ಆಗಿ, ನಿರ್ದೇಶಕನಾಗಿ ಕನ್ನಡ ಸಿನಿಮಾಕ್ಕೆ ಮರಳಿದ್ದು ಒಂದು ರೀತಿಯಲ್ಲಿ ‘ಭಾರತೀಕರಣ’ವೇ. ನಟರಾಗಿ ಅವರ ಪ್ರತಿಭೆ, ಸಾಮರ್ಥ್ಯವನ್ನು ಯಾರೂ ಅನುಮಾನಿಸುವಂತಿಲ್ಲ. ಆದರೆ ನಿರ್ದೇಶಕರಾಗಿ ಪ್ರಸ್ತುತ ಸಿನಿಮಾಕ್ಕೆ ಅವರ ಕೊಡುಗೆಯೆಷ್ಟು, ತಮಿಳು ಆವೃತ್ತಿಯಾದ ‘ಅಭಿಯುಂ ನಾನುಮ್’ನ ನಿರ್ದೇಶಕ ರಾಧಾ ಮೋಹನ್-ರ ಕೊಡುಗೆ ಎಷ್ಟು ಎಂಬುದು ಚರ್ಚೆಯಾಗಬೇಕಿರುವ ಸಂಗತಿ.

ಪ್ರಕಾಶ್ ಕೆಲವು ದೃಶ್ಯಗಳನ್ನು ಕನ್ನಡ ಆವೃತ್ತಿಯಲ್ಲಿ ಉತ್ತಮಗೊಳಿಸುವ ಪ್ರಯತ್ನವನ್ನಂತೂ ಮಾಡಿದ್ದಾರೆ (ಉದಾಹರಣೆಗೆ:ಜೋಗಿಂದರ್ ಪಾತ್ರದ ಪ್ರವೇಶ). ಸ್ವತಃ ಪ್ರಕಾಶ್ ಅವರೇ ನಟಿಸಿದ ‘ಇರುವರ್’ ಸಿನಿಮಾದಲ್ಲಿ ಅದ್ಭುತ ದೃಶ್ಯವೊಂದಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ನಟ ‘ಆನಂದ್’ನ ಇತ್ತೀಚಿನ ಸಿನಿಮಾ ಹಿಟ್ ಆಗಿದೆ. ಕತೆ ಬರೆಯುವ ಅವನ ಗೆಳೆಯ ತಮಿಳ್-ಸೆಲ್ವ ಊಟಕ್ಕೆ ಕುಳಿತ ಆತನನ್ನು ಬಲವಂತದಿಂದ ಎಬ್ಬಿಸಿ ತಾರಸಿಗೆ ಕರೆದೊಯ್ದು ತಮ್ಮ ‘ನಾಯಕ’ನನ್ನು ನೋಡಲು ಬಂದ ಜನಸ್ತೋಮವನ್ನು ತೋರಿಸುತ್ತಾನೆ, ಕೈ ಬೀಸುವಂತೆ ಹೇಳುತ್ತಾನೆ. ಜನ-ಸಮುದಾಯ ಹುಚ್ಚೇಳುತ್ತದೆ.

ಮೊನ್ನೆ (ಶನಿವಾರದಂದು ಸಿನಿಮಾ ಪ್ರಚಾರಕ್ಕೆ ಬಂದಾಗ)ಮೈಸೂರಿನ ‘ಲಿಡೋ’ ಚಿತ್ರಮಂದಿರದ ಎದುರು ಅದೇ ದೃಶ್ಯ ಪುನರಾವರ್ತನೆಯಾದಂತಿತ್ತು. ಸಹಸ್ರಾರು ಅಲ್ಲದಿದ್ದರೂ ನೂರಾರು ಅಭಿಮಾನಿಗಳು ಪುಳಕಿತರಾಗಿ ‘ಪ್ರಕಾಶ್ ರೈಗೆ ಜೈ’ ಎಂದರು, ಪ್ರಕಾಶ್ ಕೈಯೆತ್ತಿ ಬೀಸಿದರು. ಪ್ರಕಾಶ್ ಬೆಳೆದಿದ್ದಾರೆ ಎನ್ನಿಸಿವಂತಿತ್ತು ಆ ದೃಶ್ಯ. ಕನ್ನಡ ಪ್ರೇಕ್ಷಕನೆಂಬ ಅವರ ತಂದೆ, ‘ನಾನು ನನ್ನ ಕನಸು’ ಎಂಬ ಅವರ ಮಗಳು ಇಬ್ಬರೂ ಅವರನ್ನು ಬೆಳೆಸಿದ್ದಾರೆ ಎಂದು ಆ ಕ್ಷಣದಲ್ಲಿ ತೋರುತ್ತಿತ್ತು.

ಆದರೂ ಈ ಅನಿಶ್ಚಿತ ಮನಸ್ಸಿನ ಸಾಮಾನ್ಯ ಕನ್ನಡ ಪ್ರೇಕ್ಷಕನನ್ನು ಪ್ರಕಾಶ್ ನಿಜಕ್ಕೂ ಗೆದ್ದಿದ್ದಾರೆಯೆ? ಭಾರತೀಕರಣ, ಕ್ಲಾಸ್ ಜೊತೆಗೆ ಮಾಸ್‌ನ್ನೂ ನಿಜಕ್ಕೂ ತಲುಪುತ್ತಿದೆಯೆ? ಎಂಬುದನ್ನು ತಿಳಿಯಲು ಕಾದು ನೋಡಬೇಕು. ಹಾಗೆಯೇ ಕನ್ನಡ-ತಮಿಳು ಸಂಸ್ಕೃತಿಗಳ ಸಂವಹನೆಯನ್ನು, ಸಂಘರ್ಷವನ್ನು ಸಹೃದಯತೆಯಿಂದ, ಸಂವೇದನಾಶೀಲವಾಗಿ ಕಾಣಿಸಬಲ್ಲ ಸ್ಥಾನದಲ್ಲಿರುವ ಪ್ರಕಾಶ್ ರೈ ಅಂಥ ಪ್ರಯತ್ನವೊಂದನ್ನೂ ಸಹ ಮಾಡಬೇಕು. ‘ಭಾರತೀಕರಣ’ದ ಪ್ರಗತಿಯ ಚಕ್ರದ ಕೀಲಿಗೆ ಮತ್ತಷ್ಟು ‘ಗ್ರೀಸ್’ ಸವರಬೇಕು.

Advertisements