ಅಭಯಸಿಂಹರ ಚಿತ್ರಭಾಷೆ ಕುರಿತಾದ ಲೇಖನದ ಮೂರು ಮತ್ತು ನಾಲ್ಕನೇ ಕಂತಿದ್ದು. ಇದನ್ನು ಓದಿ ಅಭಿಪ್ರಾಯಿಸಿ.

ಈ ಭಾಗದಲ್ಲಿ ಸಿಂಕ್-ಸೌನ್ಡ್ ಅಥವಾ ಚಿತ್ರೀಕರಣ ಸ್ಥಳದಲ್ಲಿಯೇ ಧ್ವನಿ ಮುದ್ರಿಸಿಕೊಳ್ಳುವ ವಿಧಾನದ ಕುರಿತು ಎರಡು ಮಾತು. ಭಾರತದಲ್ಲಿ ಹೆಚ್ಚಿನ ಚಿತ್ರಗಳು ಇಂದಿಗೂ ಡಬ್ಬಿಂಗ್ ಪ್ರಕ್ರಿಯೆಯ ಮೂಲಕವೇ ಮಾತುಗಳನ್ನು ಹೊಂದುತ್ತವೆ. ಆದರೆ ಹೊರದೇಶಗಳಲ್ಲಿ ಇಂದು ಹೆಚ್ಚಿನ ಚಿತ್ರಗಳು ಚಿತ್ರೀಕರಣ ಸಂದರ್ಭದಲ್ಲೇ ಮುದ್ರಿಸಿಕೊಂಡ ಧ್ವನಿಯನ್ನೇ ಅಂತಿಮ ತೆರೆಯಲ್ಲೂ ಬಳಸಿಕೊಳ್ಳುತ್ತಾರೆ. ಇದರ ಸಾಧ್ಯತೆ, ಭಾದ್ಯತೆ ಹಾಗೂ ನಮ್ಮಲ್ಲಿನ ವಿಧಾನಕ್ಕೂ ಇತರೆಡೆಯಲ್ಲಿನ ವಿಧಾನಗಳಿಗೂ ಇರುವ ವ್ಯತ್ಯಾಸ ನೋಡೋಣ.

ಚಿತ್ರೀಕರಣ ಸ್ಥಳದಲ್ಲಿ ಮುದ್ರಿಸಿಕೊಂಡ ಧ್ವನಿಯ ಗುಣಗಳೇನು? ಅಲ್ಲಿ ನಟ ತಾನು ಬಳಸಿರುವ ಧ್ವನಿ ಏರಿಳಿತಗಳನ್ನು ಒಂದು ಸ್ಟುಡಿಯೋದಲ್ಲಿ ಮತ್ತೆ ಅಭಿನಯಿಸುವುದಕ್ಕೂ ಸ್ಥಳದಲ್ಲೇ ಅಭಿನಯಿಸಿದ ಧ್ವನಿಗಳಿಗೂ ವ್ಯತ್ಯಾಸ ಬಂದೇ ಬರುತ್ತದೆ. ಸ್ಥಳದಲ್ಲಿ, ನಟನು ಅಲ್ಲಿನ ಪರಿಸ್ಥಿತಿಗಳಿಂದ ಪ್ರೇರಿತನಾಗಿ ನೀಡಿರುವ ಧ್ವನಿಯ ಏರಿಳಿತಗಳು, ನಿಂತ್ರಿತ ಸ್ಟುಡಿಯೋದ ಒಳಗೆ ನೀಡುವುದು ಸ್ವಲ್ಪ ಕಷ್ಟ. ಆದರೆ ಇದನ್ನು ಒಂದು ಗುಣವಾಗಿಯೂ ನಾವು ನೋಡಬಹುದು. ಚಿತ್ರೀಕರಣ ಸ್ಥಳದಲ್ಲಿ ಇದ್ದಿರಬಹುದಾದ ಪರಿಸ್ಥಿತಿಗಳಿಂದಾಗಿ ನಟನ ಧ್ವನಿಯಲ್ಲಿ ಆಗಿರಬಹುದಾದ ತೊಂದರೆಗಳನ್ನು ಸರಿಪಡಿಸಿಕೊಳ್ಳಲು ಸ್ಟುಡಿಯೋದಲ್ಲಿ ಮಾತುಜೋಡಣೆಯ ಸಂದರ್ಭ ಒಂದು ಅವಕಾಶ ಎಂದೂ ನಾವು ಅಂದುಕೊಳ್ಳಬಹುದು.

ಆದರೆ ಚಿತ್ರೀಕರಣ ಸ್ಥಳದಲ್ಲಿ ಮುದ್ರಿಸಿದ ಧ್ವನಿಯ ಮತ್ತೊಂದು ಗುಣವೆಂದರೆ, ಅಲ್ಲಿ ನಟರ ಧ್ವನಿಯೊಡನೆ ಮಿಶ್ರವಾಗಿ ಬರುವ ಇತರ ಧ್ವನಿಗಳು. ನಿಜ ಜೀವನದಲ್ಲಿ ಯಾವುದೇ ಧ್ವನಿಯನ್ನು ನಾವು ಕೇಳುವಾಗ, ಇತರ ಧ್ವನಿಗಳು ಕೇಳದಂತೆ ಮೆದುಳು ಸೋಸಿಕೊಳ್ಳುತ್ತದೆ. ಆದರೆ ತಾಂತ್ರಿಕವಾಗಿ ಧ್ವನಿಯನ್ನು ಮುದ್ರಿಸಿಕೊಳ್ಳುವಾಗ ದಡ್ಡ ತಂತ್ರಜ್ಞಾನಕ್ಕೆ ಈ ಗುಣವಿಲ್ಲವೇ… ಹಾಗಾಗಿ ಇತರ ಧ್ವನಿಗಳನ್ನು ಅಗತ್ಯ ಪ್ರಮಾಣಕ್ಕನುಗುಣವಾಗಿ ಜೋಡಿಸಿಕೊಳ್ಳಬೇಕಾಗುತ್ತದೆ. ಅದು ಹಿಂದೆ ಎಲ್ಲೋ ಹರಿಯುತ್ತಿರುವ ನೀರು ಇರಬಹುದು ಅಥವಾ ಮಹಡಿ ಮನೆಯಲ್ಲಿ ಮನೆಗೆಲಸ ಮಾಡದ ಸಣ್ಣ ಹುಡುಗನಿಗೆ ಅವನ ಅಮ್ಮ ಬಯ್ಯುತ್ತಿರುವ ಶಬ್ದವೇ ಇರಬಹುದು. ಸ್ಟುಡಿಯೋದಲ್ಲಿ ಮಾತು ಜೋಡಣೆ ಮಾಡಿದರೆ ಇಂಥಾ ಎಲ್ಲಾ ಶಬ್ದಗಳನ್ನು ಧ್ವನಿ ಸಂಯೋಜಕ ಬುದ್ದಿ ಪೂರ್ವಕವಾಗಿ ಆಯ್ದು ಹಾಕಿ ಅದನ್ನು ಹದವಾಗಿ ಮಿಶ್ರಮಾಡಬೇಕಾಗುತ್ತದೆ. ಇದು ಖಂಡಿತಾ ಒಂದು ಸೃಜನಾತ್ಮಕ ಪ್ರಕ್ರಿಯೆ. ಆದರೆ ನಿಸರ್ಗವನ್ನು ಮೀರಿಸಿಯಾನೇ ಈ ಹುಲು ಮಾನವ? ಹಾಗಾಗಿ ನಿಸರ್ಗದಲ್ಲಿ ಸಿಗುವಂಥಾ, ಧ್ವನಿ ಸಂಯೋಜನೆಯನ್ನು ಸೆರೆಹಿಡಿಯಲು ಚಿತ್ರೀಕರಣ ಸ್ಥಳದಲ್ಲಿ ಮುದ್ರಿಸಿಕೊಂಡ ಧ್ವನಿಯಿಂದ ಮಾತ್ರ ಸಾಧ್ಯವಾಗುತ್ತದೆ. ಇಲ್ಲಿ ಧ್ವನಿ ಮುದ್ರಿಸಿಕೊಳ್ಳುವಾಗ ಮುದ್ರಣದಲ್ಲಿ ಧ್ವನಿ ಪ್ರಾಮುಖ್ಯತೆಯನ್ನು ನೋಡಿಕೊಂಡರೆ ಕೆಲಸ ಆದಂತೆಯೇ ಸರಿ.

ಹಾಗಾದರೆ ನಮ್ಮಲ್ಲಿ ಈ ವಿಧಾನ ಯಾಕೆ ಹೆಚ್ಚು ಬಳಕೆಯಲ್ಲಿ ಇಲ್ಲ ಎಂದು ನೀವು ಕೇಳಬಹುದು. ಅದಕ್ಕೆ ಹಲವಾರು ಕಾರಣಗಳಿವೆ. ಭಾರತದಲ್ಲಿನ ಧ್ವನಿ ಪ್ರಮಾಣ ಇದರಲ್ಲಿ ಪ್ರಮುಖವಾದ ಕಾರಣ. ಬೆಂಗಳೂರಿನ ಯಾವುದೇ ಒಂದು ಸುಮಾರಾಗಿ ಅಥವಾ ಕಡಿಮೆ ಸಂಚಾರ ಇರುವ ದಾರಿಗೇ ನೀವು ಇಳಿಯಿರಿ. ಒಂದು ಐದು ನಿಮಿಷ ನಿಮಗೆ ಕೇಳಿಸುವ ಶಬ್ದಗಳನ್ನೇ ಬರೆಯುತ್ತಾ ಹೋಗಿ. ಮತ್ತೆ ಯೂರೋಪಿನ ಯಾವುದೇ ದೇಶಕ್ಕೆ ಹೋಗಿ ಅಲ್ಲಿ ಇಂಥದ್ದೇ ಒಂದು ದಾರಿ ಹಿಡಿದು, ಅಲ್ಲಿನ ಶಬ್ದಗಳ ಪಟ್ಟಿ ಮಾಡಿ. ಆಗ ಗೊತ್ತಾಗುತ್ತೆ ನಾನು ಧ್ವನಿ ಪ್ರಮಾಣ ಎಂದಂದದ್ದು ಏನು ಅಂತ. ಅಯ್ಯೋ ನಿನ್ನ ಪ್ರಯೋಗ ಮಾಡಲಿಕ್ಕೆ ನಾವು ಯೋರೋಪ್ ಪ್ರಯಾಣ ಮಾಡಬೇಕಾ? ಎಂದು ಕೇಳ್ತೀರಾ? ಬಿಡಿ ಇದನ್ನು ಮುಂದಿನ ವಿಭಾಗದಲ್ಲಿ ವಿವರಿಸಿ ಹೇಳುತ್ತೇನೆ.

ಧ್ವನಿಯನ್ನು ಮೆದುಳು ಗ್ರಹಿಸುವ ರೀತಿ ಹೇಗಿದೆಯೆಂದರೆ, ಕಿವಿಯ ಮೂಲಕ ಹಾದು ಬರುವ ಶಬ್ದ ರಾಶಿಯಲ್ಲಿ ಮೆದುಳು ಅದಕ್ಕೆ ಬೇಕಾದದ್ದನ್ನು ಮಾತ್ರ ಆಯ್ದು ಅರ್ಥೈಸಿಕೊಳ್ಳುತ್ತದೆ. ಅನೇಕ ಬಾರಿ ಕಿವಿಗೆ ಸರಿಯಾಗಿ ಕೇಳಿಸದೇ ಇರುವಂಥದ್ದು, ಸಂದರ್ಭದ, ಸನ್ನಿವೇಶ ಆಧರಿಸಿ, ಅಥವಾ ಹಿಂದೆ ಕೇಳಿರುವ ಪ್ರಯೋಗವನ್ನು ಆಧರಿಸಿ ಮೆದುಳು ಅರ್ಥೈಸಿಕೊಳ್ಳುತ್ತದೆ. ಇದೆಲ್ಲವೂ ನಮ್ಮ ಅರಿವಿಗೆ ಬರದೇ ನಡೆಯುವ ಕೆಲಸಗಳು. (ಇದನ್ನು psycho acoustics ಎಂದೂ ಕರೆಯುತ್ತಾರೆ) ಆದರೆ ಮತ್ತೆ ದಡ್ಡ ತಂತ್ರಜ್ಞಾನಕ್ಕೆ ಬಂದರೆ, ಅದಕ್ಕೆ ಪರಿಚಯ ಇರುವ ಧ್ವನಿಗಳೆಲ್ಲವೂ ಬೇರೆಬೇರೆ ಪ್ರಮಾಣದ ಕಂಪನಗಳು ಮಾತ್ರ (frequency) ಹಾಗಾಗಿ ಅದು ತನ್ನ ಮೇಲೆ ಬಿದ್ದ ಎಲ್ಲಾ ಕಂಪನಗಳನ್ನು ನಿಷ್ಟೆಯಿಂದ ದಾಖಲೀಕರಿಸಿಕೊಳ್ಳುತ್ತದೆ. ಮತ್ತೆ ನಾವು ಬೇಕೆಂದಾಗ ಮರಳಿ ಕೇಳಿಸುತ್ತದೆ. ಹಾಗಾದರೆ ಒಂದು ಸ್ಥಳದಲ್ಲಿ ನಿಂತಾಗ ಕೇಳಿ ಬರುವ ಶಬ್ದರಾಶಿಯಲ್ಲಿ ನಮಗೆ ಬೇಕಾಗಿರುವ ಶಬ್ದವನ್ನು ಮಾತ್ರ ದಾಖಲೀಕರಿಸಿಕೊಳ್ಳುವುದು ಅದರಿಂದ ಸಾಧ್ಯವಿಲ್ಲದ ಮಾತು. ಹಾಗಾಗಿ ಭಾರತದಲ್ಲಿನ ಅಗಾಧ ಜನ ಸಾಂದ್ರತೆಯಿಂದಾಗಿ, ವಾಹನ ದಟ್ಟಣೆಯಿಂದಾಗಿ ಹೆಚ್ಚಿನ ಸಂದರ್ಭಗಳಲ್ಲಿ ಸ್ಥಳದಲ್ಲಿ ಧ್ವನಿ ಮುದ್ರಿಸಿಕೊಳ್ಳುವುದು ಕಷ್ಟದ ಕೆಲಸವಾಗಿರುತ್ತದೆ. ಇಲ್ಲಿ ಒಂದು ಶಬ್ದದ ಕಂಪನಾಂಕಕ್ಕೂ ಇನ್ನೊಂದು ಶಬ್ದದ ಕಂಪನಾಂಕಕ್ಕೂ ವ್ಯತ್ಯಾಸ ತೀರಾ ಕಡಿಮೆ ಇರುತ್ತದೆ. ಇದರಿಂದ ದಾಖಲಾದ ಶಬ್ದ ತೀರಾ ಗೊಂದಲ ಹುಟ್ಟುಸಿವಂತಿರುತ್ತದೆ. ಹೊರದೇಶಗಳಲ್ಲಿ ಈ ಪರಿಸ್ಥಿತಿ ಇಲ್ಲದ ಕಾರಣ ಹೆಚ್ಚಿನ ಕಡೆಗಳಲ್ಲಿ ಸ್ಪಷ್ಟ ಧ್ವನಿಯನ್ನು ದಾಖಲಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮೇಲೆ ವಿವರಿಸಿದ ವಿಷಯಗಳಿಂದ, ಧ್ವನಿ ಸಂಯೋಜನೆ ಎಂದರೆ ಸ್ಪಷ್ಟವಾದ ಧ್ವನಿಯನ್ನು ದಾಖಲಿಸಿಕೊಳ್ಳುವುದೆಂದು ಮಾತ್ರ ಅರ್ಥವಲ್ಲ. ಕೆಲವೊಮ್ಮೆ ಅದು ಅಸ್ಪಷ್ಟ ಧ್ವನಿಯನ್ನು ದಾಖಲಿಸಿಕೊಳ್ಳುವುದೂ ಆಗಿರಬಹುದು. ಅಥವಾ ಸ್ಪಷ್ಟ ಧ್ವನಿಗೆ ಇನ್ನೇನೋ ಮಿಶ್ರಮಾಡುವುದಾಗಿರಬಹುದು. ಹೀಗೆ ಧ್ವನಿಯ ಎಲ್ಲಾ ಸಾಧ್ಯತೆ-ಅಸಾಧ್ಯತೆ, ಕೇಳಿಸುವ ಧ್ವನಿಗೂ ಮೆದುಳು ಅದಕ್ಕೆ ಪ್ರತಿಕ್ರಿಯೆ ಕೊಡುವ ವಿಧಾನಕ್ಕೂ ಇರುವ ಸಂಬಂಧ ಇವೆಲ್ಲವನ್ನೂ ಬಳಸಿಕೊಂಡು ಕೊಡುವ ಅನುಭವವನ್ನು ಧ್ವನಿ ಸಂಯೋಜನೆ ಎನ್ನಬಹುದಾಗಿದೆ.

ಇಂದು ಕೃತ್-ಶಬ್ದಗಳು (ಇದನ್ನು ಇಂಗ್ಲೀಷಿನಲ್ಲಿ Folly ಎಂದು ಕರೆಯುತ್ತಾರೆ. ಕನ್ನಡದ ಪದವನ್ನು ನಾನೇ ಸೃಷ್ಟಿಸಿಕೊಂಡಿದ್ದೇನೆ. ಇದಕ್ಕೆ ಚಾಲ್ತಿಯಲ್ಲಿ ಬೇರೆ ಕನ್ನಡ ಶಬ್ದವಿದ್ದರೆ ಯಾರಾದರೂ ತಿಳಿಸಬೇಕು) ಎನ್ನುವ ವಿಷಯದ ಬಗ್ಗೆ ಒಂದಿಷ್ಟು ಮಾತುಗಳು. ಧ್ವನಿ ಸಂಯೋಜನೆಯ ಒಂದು ಮಹತ್ತರ ಅಂಗ ಈ ಕೃತ್-ಶಬ್ದಗಳು. ಚಿತ್ರದಲ್ಲಿ ಕಾಣಿಸುವ ಯಾವುದೇ ಶಬ್ದಗಳನ್ನು ಕೃತಕವಾಗಿ ಸೃಷ್ಟಿಸುವ ಪ್ರಕ್ರಿಯೆಯೇ ಇದು. ಉದಾಹರಣೆಗೆ ಚಿತ್ರವೊಂದರಲ್ಲಿ ಪಾರಿವಾಳ ಹಾರುತ್ತಿದೆ ಎಂದುಕೊಳ್ಳಿ. ಇದರ ಶಬ್ದವನ್ನು ಸ್ಥಳದಲ್ಲಿ ದಾಖಲಿಸಿಕೊಳ್ಳದಿದ್ದರೆ, ಮತ್ತೆ ಹೇಗೆ ಸೃಷ್ಟಿಸುವುದು? ಇದಕ್ಕೆ ಎರಡು ವಿಧಾನ ಇದೆ. ಒಂದನೆಯದಾಗಿ ಸಾವಿರಗಟ್ಟಲೆ ಇಂಥಾ ಶಬ್ದಗಳನ್ನೊಳಗೊಂಡ ಸಿ.ಡಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. (ರಸೂಲ್ ಎಂಬ ಧ್ವನಿ ಸಂಯೋಜಕ ದಾಖಲಿಸಿದ ಶಬ್ದ ಭಂಡಾರ ಭಾರತದಲ್ಲಿ ಅತ್ಯಂತ ಹೆಚ್ಚು ಚಾಲ್ತಿಯಲ್ಲಿರುವುದು. ಇದಲ್ಲದೆ ೬೦೦೦ ಸೀರೀಸ್ ಎಂಬ ಹೆಸರಿನ ಅಮೇರಿಕನ್ ಶಬ್ದ ಭಂಡಾರವೂ ಚಾಲ್ತಿಯಲ್ಲಿದೆ) ಇದರಲ್ಲಿ ಹಕ್ಕಿ ಹಾರುವುದು, ಟ್ರಾಫಿಕ್, ಕಾಲ್ನಡಿಗೆಯ ಶಬ್ದ, ವಾಹನಗಳ ಶಬ್ದ ಇತ್ಯಾದಿ ಅಕಾರಾದಿ ಪಟ್ಟಿಮಾಡಿ ಶಬ್ದಗಳನ್ನು ಸಂಗ್ರಹಿಸಿಟ್ಟಿರುತ್ತಾರೆ. ಇದರಿಂದ ಸೂಕ್ತವಾದ ಶಬ್ದವನ್ನು ಹೆಕ್ಕಿ, ಅದಕ್ಕೆ ಬೇಕಾದಂಥಾ ಚಿಕಿತ್ಸೆ ಕೊಟ್ಟು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು. ಎರಡನೆಯ ವಿಧಾನವೆಂದರೆ, ಕೃತಕವಾಗಿ ಸ್ಟುಡಿಯೋದಲ್ಲಿ ಈ ಶಬ್ದಗಳನ್ನು ಸೃಷ್ಟಿಸುವುದು. ಪಾರಿವಾಳ ಹಾರುವುದನ್ನು ಮೈಕಿನ ಮುಂದೆ ಹಳೆಯ ಹವಾಯಿ ಚಪ್ಪಲ್ಲುಗಳನ್ನು ಪರಸ್ಪರ ಹೊಡೆಯುವುದರ ಮೂಲಕವೋ, ದಪ್ಪದ ಬಟ್ಟೆಯನ್ನು ಮೈಕ್ ಮುಂದೆ ಝಾಡಿಸುವುದರ ಮೂಲಕವೋ ಸೃಷ್ಟಿಸುತ್ತಾರೆ. ಈ ಪ್ರಕ್ರಿಯೆಯನ್ನು ನೋಡಿದರೆ ನಗುಬರುವಷ್ಟು ತಮಾಷೆಯಾಗಿರುತ್ತದೆ. ಆದರೆ ಅಲ್ಲಿ ಸೃಷ್ಟಿಯಾಗುವ ಧ್ವನಿಗಳನ್ನು ಪರದೆಯ ಮೇಲೆ ಚಿತ್ರದೊಂದಿಗೆ ನೋಡಿದಾಗ ನಂಬಲಾರದಷ್ಟು ನೈಜವಾಗಿ ಅವು ಮೂಡಿ ಬಂದಿರುತ್ತದೆ. ಇಂಥಾ ಕೃತಕ ಶಬ್ದಗಳನ್ನು ರೂಪಿಸುವ ಅನೇಕ ತಂತ್ರಜ್ಞರು ಪ್ರತಿಯೊಂದು ಚಿತ್ರೋದ್ಯಮದಲ್ಲೂ ಇದ್ದಾರೆ. ಸುಮಾರು ಎರಡು ಗಂಟೆ ಚಿತ್ರದಲ್ಲಿ ಇಂಥ ಸುಮಾರು ೩೦೦ ಶಬ್ದಗಳಿರುತ್ತವೆ. ಪ್ರತಿಯೊಂದನ್ನೂ ಈ ತಂತ್ರಜ್ಞರು ಸೃಷ್ಟಿಸಿ, ಅದನ್ನು ಸಂದರ್ಭಕ್ಕೆ ತಕ್ಕಂತೆ ಹದಬರಿಸಿ ನಮ್ಮ ಅನುಭವವನ್ನು ಕಟ್ಟಿಕೊಡುವಲ್ಲಿ ತಮ್ಮ ಕೊಡುಗೆ ನೀಡುತ್ತಾರೆ.

ಇಲ್ಲಿ ಇನ್ನೊಂದು ವಿಷಯ ಇದೆ. ಚಿತ್ರದಲ್ಲಿ ಕಣ್ಣಿಗೆ ಕಂಡ ಎಲ್ಲಾ ಶಬ್ದಗಳನ್ನು ಸೃಷ್ಟಿ ಮಾಡಬೇಕೇ? ಮತ್ತೆ ಅವೆಲ್ಲವೂ ನಮಗೆ ಕೇಳಿಸಲೇ ಬೇಕೇ? ನಿಜ ಜೀವನದಲ್ಲಿ ಹೀಗೆ ಆಗುವುದಿಲ್ಲವಲ್ಲಾ? ಹೌದು. ನಿಮ್ಮ ಅನಿಸಿಕೆ ಸರಿ. ನಿಜ ಜೀವನದಲ್ಲಿ ಹೀಗೆ ಆಗುವುದಿಲ್ಲ. ಇದೇ ಸೂತ್ರವನ್ನು ಕೃತ್-ಶಬ್ದ ತಂತ್ರಜ್ಞ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಮತ್ತೆ ಸಮಯ- ಸಂದರ್ಭಗಳಿಗೆ ಅನುಸಾರವಾಗಿ ಧ್ವನಿ ಸೃಷ್ಟಿ ಮಾಡಬೇಕಾಗುತ್ತದೆ. ಚಿತ್ರದಲ್ಲಿ ಕೆಲವೊಮ್ಮೆ ತುಂಬಾ ಚಟುವಟಿಕೆಗಳಿದ್ದರೂ, ನಾಯಕನ ಮನೋಸ್ಥಿತಿ ಬೇಸರದಿಂದಿದ್ದರೆ, ಅಥವಾ ಆತ ಒಂಟಿಯಾಗಿದ್ದರೆ, ಅಂತರ್ಮುಖಿಯಾಗಿದ್ದರೆ, ಇಂಥಾ ಸಂದರ್ಭಗಳಲ್ಲಿ ಇತರ ಧ್ವನಿಗಳೆಲ್ಲವೂ ಮಾಯವಾಗಿ ಆತನಿಗೆ ಮತ್ತು ಪ್ರೇಕ್ಷಕರಿಗೆ ಕೇಳಲೇ ಬೇಕಾದ ಒಂದೇ ಧ್ವನಿ ಮಾತ್ರ ಕೇಳಿಸಿಬರಬಹುದು. ಅಥವಾ ಆ ಒಂದು ಧ್ವನಿ ಇತರ ಧ್ವನಿಗಳನ್ನು ಎಳೆದು ಮುಂದೆ ತರಬಹುದು. ಅಥವಾ ಯಾವುದೋ ಶಬ್ದವು ನಮ್ಮನ್ನು ಇತರ ಧ್ವನಿಗಳಿಂದ ದೂರ ಕೊಂಡೊಯ್ಯಬಹುದು. ಈ ಎಲ್ಲಾ ಕಾರಣಗಳಿಂದಾಗಿ ಮತ್ತೆ ಈ ಕೃತ್-ಧ್ವನಿ ಎನ್ನುವುದೂ ಒಂದು ಸೃಜನಾತ್ಮಕ ಪ್ರಕ್ರಿಯೆಯಾಗಿದೆ.
– ಮುಂದುವರೆಯಲಿದೆ.

Advertisements