ಮೇರುನಟ ಡಾ. ರಾಜ್ ಕುಮಾರ್ ಬಗೆಗಿನ ನಾಲ್ಕುಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ ಪರಮೇಶ್ ಗುರುಸ್ವಾಮಿ ತಮ್ಮ ಅಂಕಣದಲ್ಲಿ.

ಡಾ.ರಾಜ್‌ಕುಮಾರ್ ಕುರಿತ ನಾಲ್ಕು ಪ್ರಸಂಗಗಳಿವು. ಒಂದೊಂದೂ ಅವರ ಹಿರಿಮೆಯನ್ನು ಹೇಳುವಂಥದ್ದೇ.
ಮೊದಲಿನದು ಅವರ ಕಲಾ ತಾದಾತ್ಮ್ಯದ ಬಗ್ಗೆ. ಚಾಮರಾಜನಗರದಲ್ಲಿ ಎಚ್ಚೆಮ್ಮ ನಾಯಕ ನಾಟಕ ನಡೆಯುತ್ತಿದ್ದ ಸಂದರ್ಭ. ಅದರಲ್ಲಿ ರಾಜ್‌ಕುಮಾರ್ ಎಚ್ಚೆಮ್ಮನಾಯಕ ಪಾತ್ರ ವಹಿಸಿದ್ದರು. ಆ ಪಾತ್ರವೇ “ರೌದ್ರರಸ’ ದ್ದು. ರಾತ್ರಿ ಇಡೀ ನಡೆಯುವ ನಾಟಕದಲ್ಲಿ ಆ ಪಾತ್ರ ರಂಗ ಪ್ರವೇಶಿಸುವುದೇ ಮಧ್ಯರಾತ್ರಿ 1 ರಿಂದ 1.30 ಯ ಹೊತ್ತಿನಲ್ಲಿ.
ಎಚ್ಚೆಮ್ಮ ನಾಯಕ ನಾಟಕದ ಕೆಲವು ಸನ್ನಿವೇಶಗಳು ಬಹಳ ಜನಪ್ರಿಯವಾಗಿದ್ದವು. ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ಏಕಪಾತ್ರಾಭಿನಯ ಪ್ರದರ್ಶಿಸುತ್ತಿದ್ದರು. ರಾಜ್‌ಕುಮಾರ್ ಅವರಿಗೆ  ಆಗ ಮೇಕಪ್ ಮಾಡುತ್ತಿದ್ದುದು ಸುಬ್ಬಣ್ಣನವರೇ. ಅವರೇ ರಾಜ್‌ಕುಮಾರ್ ಅವರ ಪರ್ಸನಲ್ ಮೇಕಪ್ ಮ್ಯಾನ್. ಅಂದು ನಾಟಕಕ್ಕೆ ಮೇಕಪ್ ಮಾಡಲು ಕೇಶವ(ಸುಬ್ಬಣ್ಣನವರ ಮಗ)  ಬಂದಿದ್ದರು.

ಎಲ್ಲರೂ ತಮ್ಮ ಪಾತ್ರಗಳಿಗೆ ತಕ್ಕಂತೆ ಮೇಕಪ್ ಮಾಡಿಕೊಂಡು ವೇದಿಕೆಯತ್ತ ಕಿವಿಯಿರಿಸಿ ಗ್ರೀನ್‌ರೂಂ ನ ಒಂದು ಕಡೆ ಕುಳಿತಿದ್ದರು. ಇದು ಅವರಿಗೆ ನಿತ್ಯದ ಅಭ್ಯಾಸ. ರಾಜ್‌ಕುಮಾರ್  ಸಹ ಸಿದ್ಧರಾಗಿದ್ದರು. ಫೈನಲ್ ಟಚ್ ಎಂದರೆ ಮೀಸೆ ಅಂಟಿಸಿಕೊಳ್ಳುವುದು.

ಸಾಮಾನ್ಯವಾಗಿ ಮೀಸೆ ಅಂಟಿಸಿಕೊಂಡು ನೇರವಾಗಿ ವೇದಿಕೆಗೆ ಹೋಗಿ ಪಾತ್ರ ಮುಗಿಸಿ ಬರುತ್ತಿದ್ದರು. ಆಗ ಮೀಸೆಗೆ ಗೋಂದು (ಅಂಟು) ಅಂಟಿಸಿ ಕೊಟ್ಟು ಕನ್ನಡಿ ಹಿಡಿದರೆ ಅವರು ಸರಿಪಡಿಸಿಕೊಂಡು ಹೊರಡುತ್ತಿದ್ದರು. ಮೇಕಪ್ ಜಯರಾಮು ತಮ್ಮ ಗೆಳೆಯನೊಂದಿಗೆ ಎಲ್ಲರಿಗೂ ಮೇಕಪ್ ಮುಗಿಸಿ ಅಲ್ಲೇ ನಿಂತಿದ್ದರು.

ಯಾವಾಗಲೂ ಮೀಸೆ ಅಂಟಿಸಿಕೊಟ್ಟು, ಕನ್ನಡಿ ಹಿಡಿಯವುದು ಪಾರ್ವತಮ್ಮನವರ ಕೆಲಸ. ಆದರೆ ಅಂದು, ಕೇಶವ ತಾನು ಆ ಕೆಲಸ ನಿರ್ವಹಿಸುವುದಾಗಿ ಹೇಳಿದರು. ಮೊದಲಿಗೆ ಪಾರ್ವತಮ್ಮ ಒಪ್ಪಲಿಲ್ಲ. ಆದರೆ ಕೇಶವ ಬಿಡಲಿಲ್ಲ. “ಇದೊಂದು ಸಾರಿ ಅಕ್ಕಾ, ನಾನು ಮೀಸೆ ಕೊಡ್ತೀನಿ’ ಅಂದರು. ಪಟ್ಟು ಬಿಡದ ಇವರನ್ನು ಕಂಡ ಪಾರ್ವತಮ್ಮ, “ಹೋಗು, ನಿನ್ನ ಹಣೆಬರಹ’ ಎಂದು ಬದಿಗೆ ಸರಿದರು. ಜಯರಾಮುವಿಗೂ ಈ ಡೈಲಾಗ್ ಕೇಳಿ ಅಚ್ಚರಿಯಾಯಿತು.

ಕೇಶವ, ಆ ಕ್ಷಣಕ್ಕಾಗಿ ಕಾಯುತ್ತಿದ್ದರು. ಅದೂ ಬಂದಿತು. ಇವರು ಮೀಸೆ ಅಂಟಿಸಿ ಕೊಟ್ಟು ಕನ್ನಡಿ ಹಿಡಿದರು. ರಾಜ್‌ಕುಮಾರ್ ಮೀಸೆ ತೆಗೆದುಕೊಂಡು ಅಂಟಿಸಿ ಕೊಳ್ಳುತ್ತಿದ್ದುದನ್ನು ಕನ್ನಡಿಯಲ್ಲೇ ಕಂಡವರು ಹೌಹಾರಿದರು, ಕೈ ನಡುಗಲಾರಂಭಿಸಿತು. ಇದಾವುದೂ ರಾಜ್‌ಕುಮಾರ್ ಪರಿವೆಗೆ ಬರಲೇ ಇಲ್ಲ. ಅವರು ವೇದಿಕೆಗೆ ಹೋದರೆ, ಇತ್ತ ಕೇಶವರ ಕೈಯಿಂದ ಕನ್ನಡಿ ಜಾರಿ ಕೆಳಗೆ ಬಿತ್ತು. ಗರಬಡಿದವರಂತಿದ್ದರು. ತಕ್ಷಣವೇ ಗ್ರೀನ್‌ರೂಂಗೆ ಬಂದ ಜಯರಾಮು ಮತ್ತಿತರರು, “ಏಯ್ ಕೇಶವ, ಯಾಕೋ?’ಎಂದು ಕೇಳಿದರೆ ಮೊದಲಿಗೆ ಮಾತೇ ಬರಲಿಲ್ಲ. ನಂತರ ನಿಧಾನವಾಗಿ, “ಇನ್ನೆಂದೂ ನಾನು ಕನ್ನಡಿ ಹಿಡಿದು ಮೀಸೆ ಕೊಡುವುದಿಲ್ಲ ಅವರಿಗೆ’ ಎಂದು ಬಡಬಡಿಸತೊಡಗಿದರಂತೆ.

ರಾಜ್‌ಕುಮಾರ್ ರೌದ್ರರಸವನ್ನು ಆವಾಹಿಸಿಕೊಂಡ ಬಗೆಯದು. ಅವರು ತಮ್ಮ ಪಾತ್ರವನ್ನು ಆವಾಹಿಸಿಕೊಳ್ಳುತ್ತಿದ್ದರು. ಹಾಗೆಯೇ ಅವರೊಳಗೆ ಎಚ್ಚೆಮ್ಮನಾಯಕ ಬಂದುಬಿಟ್ಟಿದ್ದ. ಪಾತ್ರದಲ್ಲಿನ ತಲ್ಲೀನತೆಗೆ ಇದೊಂದು ಸ್ಪಷ್ಟ ಉದಾಹರಣೆ. ಜಯರಾಮು ಅವರಿಗೂ, ಪಾರ್ವತಮ್ಮ ನಿನ್ನ ಹಣೆಬರಹ ಅಂದು ಹೋದದ್ದರ ಅರ್ಥ ಆಗ ಆಗಿತ್ತು.
***

ರಾಜ್‌ಕುಮಾರ್‌ಗೆ ಮೊದಲಿನಿಂದಲೂ ಊಟ, ತಿಂಡಿ ಎಂದರೆ ಬಹಳ ಆಸೆ. ಅವರ ಮನೆಯ ಬಳಿ ಮೇಖ್ರಿ ಸರ್ಕಲ್‌ನಲ್ಲಿ ಒಬ್ಬ ಟೀ ಅಂಗಡಿ ಇಟ್ಟುಕೊಂಡಿದ್ದನಂತೆ. ಅವನು ಬಹಳ ಚೆನ್ನಾಗಿ ಟೀ ಮಾಡುತ್ತಿದ್ದನಂತೆ. ಒಮ್ಮೆ ಇವರಿಗೆ ಟೀ ಕುಡಿಯಬೇಕೆನ್ನಿಸಿತು.

ಅವರ ಕಾರು ಅವನ ಅಂಗಡಿ ಎದುರು ನಿಂತಿತು. ರಾಜ್‌ಕುಮಾರ್‌ರವರದ್ದೇ ಸ್ಪೆಷಲ್ ಬ್ರ್ಯಾಂಡ್ ಟೀ. ಡ್ರೈವರ್ ಹೋಗಿ ಆ ಬ್ರ್ಯಾಂಡ್ ನ್ನು ಹೇಳಿದ. ಟೀ ಅಂಗಡಿಯವನಿಗೆ ರಾಜ್‌ಕುಮಾರ್ ಬಂದಿರುವುದು ಅದರಿಂದಲೇ ತಿಳಿಯಿತು. ತಕ್ಷಣವೇ ಚೆನ್ನಾದ ಟೀ ಮಾಡಿಕೊಂಡು ಕೊಟ್ಟು ಬಂದನಂತೆ. ಕಾರೊಳಗೆ ಕುಳಿತ ರಾಜ್‌ಕುಮಾರ್ ಟೀ ಸವಿದರು. ಡ್ರೈವರ್ ಟೀ ಕಪ್ ನೊಂದಿಗೆ ಅಂಗಡಿಯವನಿಗೆ ದುಡ್ಡು ಕೊಡಲು ಹೋದಾಗ ತೆಗೆದುಕೊಳ್ಳಲು ಒಪ್ಪಲೇ ಇಲ್ಲ. ಏಕೆಂದರೆ, ಆತ ಹೇಳಿದ ಮಾತಂತೆ…”ಅವರ ಅಂಗಡೀಲೇ ಅವರು ಟೀ ಕುಡಿದವ್ರೆ, ದುಡ್ಡು ಯಾಕ್ ಕೊಡ್ಬೇಕು?’. ಒಗಟಾಯಿತು ಡ್ರೈವರ್ ಗೆ.

ಅದರ ಹಿಂದಿನ ಕಥೆಯೆಂದರೆ, ಕೆಲವು ವರ್ಷದ ಹಿಂದೆ ಆತ ಗಾಡೀಲಿ ಟೀ ಮಾರ‍್ತಿದ್ದನಂತೆ ಅಲ್ಲಿ. ರಾಜ್‌ಕುಮಾರ್ ಅವರೇ, ಹತ್ತು ಸಾವಿರ ರೂ. ಕೊಟ್ಟು ಅಂಗಡಿ ಹಾಕ್ಕೋ ಅಂದ್ರಂತೆ. ಅದರಂತೆ ಅಂಗಡಿ ಈಗ ಟೀ ಸೇವೆಗೆ ಸಿದ್ಧ !
***

ಒಮ್ಮೆ ತಮ್ಮ ಸಂಬಂಧಿಕರ ಮನೆ ಕಟ್ಟಿಸುತ್ತಿದ್ದ ಬ್ಯುಸಿಯಲ್ಲಿ ಸೈಟ್‌ಗೆ ಹೋಗಿದ್ದರಂತೆ ರಾಜ್‌ಕುಮಾರ್. ಅದನ್ನೆಲ್ಲಾ ಕಾಯುತ್ತಿದ್ದ ಕೂಲಿಯಾಳಿನ ಸಂಸಾರ ಅಲ್ಲೇ ಚಿಕ್ಕದೊಂದು ಗುಡಿಸಲು ಹಾಕಿಕೊಂಡಿತ್ತು. ಅಂದು ಎಂದಿನಂತೆ ಸೈಟ್‌ಗೆ ಹೋದಾಗ ಕೋಳಿ ಸಾರಿನ ವಾಸನೆ ಇವರ ಮೂಗಿಗೆ ಬಡಿಯಿತಂತೆ. ತಕ್ಷಣವೇ ಗುಡಿಸಲನ್ನು ಹೊಕ್ಕ ರಾಜ್‌ಕುಮಾರ್, “ಏನಮ್ಮಾ, ನನಗೂ ಊಟ ಹಾಕ್ತೀಯಾ?’ ಎಂದು ಕೇಳಿದರಂತೆ. ಮನೆಯವರಿಗೆ ದಿಗಿಲು ಮತ್ತು ಸಂತಸ. ನಾಡಿನ ಮೇರುನಟನೇ ನಮ್ಮ ಮನೆಯಲ್ಲಿ ಊಟ ಮಾಡಲಿಕ್ಕೆ ಬಂದ್ರು ಅಂದರೆ ಹೇಗಿರಬಹುದು ?

ಮನೆಯವರು ತಟ್ಟೆ ಇಟ್ಟು ಅನ್ನ-ಸಾರು ಬಡಿಸಿದರು. ಇವರು ಊಟ ಮುಗಿಸಿದರು. ಎಲ್ಲ ಮುಗಿದ ಮೇಲೆ ಇವರು ಎದ್ದು ಕೈ ತೊಳೆದು ಹೊರಟರಂತೆ. ಇಲ್ಲಿ ಮಾಡಿದ ಸಾರೆಲ್ಲವೂ ಮುಗಿದಿತ್ತು. ಅಷ್ಟು ದೂರ ಹೊರಟಾಗಲೇ ಇವರಿಗೆ ಮಾಡಿದ್ದೆಲ್ಲವೂ ನಾನು ಊಟ ಮಾಡಿದೆನೆ ಎನಿಸಿದ್ದು. ಅಲ್ಲಿಯವರೆಗೆ ಅವರು ಭೋಜನದ ಸವಿಯಲ್ಲೇ ಮುಳುಗಿದ್ದರು.

ತಕ್ಷಣವೇ ಡ್ರೈವರ್‌ಗೆ ಹೇಳಿ ನಾಟಿ ಕೋಳಿ ತರಿಸಿಕೊಟ್ಟು, ಮಸಾಲೆಗೂ ಒಂದಿಷ್ಟು ಹಣ ಕೊಟ್ಟು “ಮತ್ತೊಮ್ಮೆ ಮಾಡಿಕೊಳ್ಳಮ್ಮಾ’ ಎಂದು ಹೇಳಿ ಹೊರಟರಂತೆ. ದುಡ್ಡು ಬೇಡವೆಂದರೂ ಇವರು ಬಿಡಲಿಲ್ಲ.
***

(ಇದು ಮತ್ತೊಬ್ಬರಿಂದ ಕೇಳಿದ್ದು). ಕವಿ ನಿಸಾರ್ ಅಹಮದ್ ಅವರ ಮನೆಗೆ ಹೋದ ಕ್ಷಣವಂತೆ. ಕವಿಯ ಮನೆಯಲ್ಲಿ ಊಟವೆಲ್ಲಾ ಮುಗಿಯಿತು. ಕೈ ತೊಳೆಯಲೆಂದು ವಾಶ್ ಬೇಸಿನ ಬಳಿ ಹೋದರು. ಆಗ ನಿಸಾರರ ಪತ್ನಿ ಒಮ್ಮೆ “ಅಲ್ಲೇ ಸೋಪಿದೆ, ಹಚ್ಚಿಕೊಂಡು ಕೈ ತೊಳೆದುಕೊಳ್ಳಿ’ ಎಂದರಂತೆ. ಅದನ್ನು ಕೇಳಿಸಿಯೂ ಕೇಳಿಸದಂತೆ ಕೈ ತೊಳೆದುಕೊಂಡರು ರಾಜ್‌ಕುಮಾರ್.

ಆಗ, ಪತ್ನಿ ತಮ್ಮ ಪತಿಗೆ ಸನ್ನೆ ಮೂಲಕ ಅದನ್ನೇ ಸೂಚಿಸಿದರಂತೆ. ಆಗ ಕವಿಯೂ ಮತೊಮ್ಮೆ ಸಲಹೆ ಕೊಟ್ಟರು. ಆದರೂ ಹಾಗೆಯೇ ಕೈ ತೊಳೆದುಕೊಂಡ ಬಂದ ರಾಜ್‌ಕುಮಾರ್, “ಕವಿಗಳೇ, ಒಳ್ಳೆ ಊಟ ಮಾಡಿದ್ದೇನೆ. ಈ ಸಾರಿನ ಪರಿಮಳವನ್ನು ಸಂಜೆವರೆಗೂ ಆಸ್ವಾದಿಸುತ್ತೇನೆ. ಒಂದುವೇಳೆ ಸೋಪು ಹಚ್ಚಿಕೊಂಡು ಕೈ ತೊಳೆದರೆ ವೇಸ್ಟ್ ಆಗಲ್ವೇ ಸ್ವಾದ’ ಎಂದರಂತೆ !