ಟೀನಾ ಶಶಿಕಾಂತ್ ಅವರು ಬರೆದ ಈ ಬರಹ ಇಂಗ್ಲಿಷ್ ಚಿತ್ರ `ಇನ್ ವಿಕ್ಟಸ್’ ನದ್ದು. ಇದು ಒಂದು ಸಾಹಸಮಯ ನೆಲೆಯದ್ದು. ಒಂದು ರಾಷ್ಟ್ರವನ್ನು ಕಟ್ಟಬಹುದಾದ ಕೆಲಸದ್ದು. ಈ ಬರಹ ಓದಿ ಅಭಿಪ್ರಾಯಿಸಿ.
ಆ ದೇಶಕ್ಕೆ ನೋವಿನಿಂದ, ಹಿಂಸೆಯಿಂದ ತುಂಬಿದ ಒಂದು ಇತಿಹಾಸವಿತ್ತು. ಆ ದೇಶದ ಜನರು ಯಾವಾಗಲೂ ಒಟ್ಟಿಗೆ ಬಾಳುವೆ ಮಾಡಲಿಕ್ಕೆ ಸಾಧ್ಯವೇ ಇಲ್ಲ ಎಂದು ಇಡೀ ಪ್ರಪಂಚವೇ ಎಣಿಕೆಹಾಕಿತ್ತು. ಆದರೂ.. 1994. ಸೌತ್ ಆಫ್ರಿಕಾದ ಸಂಕ್ರಮಣಕಾಲ.

ನೆಲ್ಸನ್ ಮಂಡೇಲಾ ದೇಶದ ಚುಕ್ಕಾಣಿ ಹಿಡಿದ ಸಂಭ್ರಮ ಎಲ್ಲೆಲ್ಲೂ. ವರ್ಷಾನುಗಟ್ಟಲೆ ತುಳಿತಕ್ಕೆ ಒಗ್ಗಿದ್ದ ಕಪ್ಪುಚರ್ಮದ ಜನರ ಕಂಗಳು ‘ಇನ್ನು ಮುಂದೆ ನಮ್ಮ ಕಾಲ!’ ಎಂದು ಹರ್ಷ ಜಿನುಗಿಸಿದವು. ತುಳಿವ ಜೀವನಕ್ಕೆ ಒಗ್ಗಿಹೋಗಿದ್ದ ಬಿಳಿಯರ ಕಂಗಳು ‘ಇನ್ನು ಮುಂದೇನು?’ ಎಂದು ಭೀತಿಯಲ್ಲಿ ಕಂಪಿಸಿದವು. ನೆಲ್ಸನ್ ಮಂಡೇಲಾರ ಮುಂದೆ ಇದ್ದ ದೊಡ್ಡ ಸವಾಲು ಕೂಡ ಇದೇ. ‘ಕಪ್ಪು ಹೆಬ್ಬಯಕೆಗಳನ್ನು ಬಿಳಿಯ ಭೀತಿಗಳೊಂದಿಗೆ ಸಮತೋಲನ ಮಾಡುವುದು.’ ಆಗ ಮಂಡೇಲಾರಿಗೆ ಕಂಡದ್ದು ಸೌತ್ ಆಫ್ರಿಕಾದ ರಗ್ಬಿ ತಂಡವಾಗಿದ್ದ ‘ಸ್ಪ್ರಿಂಗ್‌ಬಾಕ್ಸ್’.

1995ರಲ್ಲಿ ತಮ್ಮ ದೇಶ ವಿಶ್ವ ರಗ್ಬೀ ಕಪ್ ಅನ್ನು ನಡೆಸಬೇಕಾಗಿದೆಯೆಂದು ತಿಳಿದ ತಕ್ಷಣ ಮಂಡೇಲಾ ಈ ಅವಕಾಶವನ್ನು ತನ್ನ ದೇಶದ ಏಕೀಕರಣಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸುತ್ತಾರೆ. ಆದರೆ ಇಲ್ಲಿ ಒಂದು ಟ್ವಿಸ್ಟ್. ಸೌತ್ ಆಫ್ರಿಕಾದ ಕಪ್ಪು ಜನರು ತಮ್ಮ ಟೀಮಿನ ವಿರುದ್ಧವಾಗಿದ್ದವರಿಗೆ ಬೆಂಬಲ ನೀಡುತ್ತಿದ್ದರು!! ಕಾರಣ, ಬಿಳಿಯರೇ ತುಂಬಿದ್ದ ಸ್ಪ್ರಿಂಗ್ ಬಾಕ್ಸ್ ತಂಡವು ಅವರಿಗೆ ತಮ್ಮ ಮೇಲಿನ ದೌರ್ಜನ್ಯದ ನೆನಪು ತರುತ್ತಿತ್ತು. ಮಂಡೇಲಾ ವಿಶ್ವಕಪ್‌ನಲ್ಲಿ ಅದೇ ತಂಡವನ್ನು ಆಡಿಸುವ ನಿರ್ಧಾರ ತೆಗೆದುಕೊಂಡಾಗ ಎಲ್ಲೆಡೆ ವಿರೋಧ ವ್ಯಕ್ತವಾಯಿತು. ಆದರೂ ಅವರ ಅಚಲ ವಿಶ್ವಾಸವಿದ್ದುದು ತನ್ನಂಥವನೇ ಆದ ಇನ್ನೊಬ್ಬ ನಾಯಕನ ಮೇಲೆ.

ಆ ನಾಯಕ ಸ್ಪ್ರಿಂಗ್‌ಬಾಕ್ಸ್ ತಂಡದ ಕ್ಯಾಪ್ಟನ್ ಫ್ರಾನ್‌ಸ್ವಾ ಪೀನಾರ್. ಆತನನ್ನು ಭೇಟಿಯಾಗುವ ಮಂಡೇಲಾ ತನ್ನ ಮೆಚ್ಚಿನ ಕವಿತೆಯಾದ ವಿಲಿಯಮ್ ಅರ್ನ್‌ಸ್ಟ್ ಹೆನ್ಲಿಯ ಕವಿತೆ ‘ಇನ್‌ವಿಕ್ಟಸ್’ನ ಸಾಲುಗಳನ್ನು ಹೇಳಿ ಈ ಸಾಲುಗಳು ತನ್ನನ್ನು ‘ಮಲಗಿಕೊಳ್ಳಬೇಕೆನ್ನುವುದನ್ನು ಬಿಟ್ಟು ಬೇರೇನೂ ಬೇಕಾಗಿಲ್ಲ ಎನ್ನಿಸಿದಂತಹ ಸಂದರ್ಭಗಳಲ್ಲಿ ಹಿಡಿದೆತ್ತಿ ನಿಲ್ಲಿಸಿದವು’ ಎಂದೆನ್ನುತ್ತಾರೆ. ಭೇಟಿಯುದ್ದಕ್ಕೂ ಅವರು ತನ್ನ ಆಕಾಂಕ್ಷೆಯನ್ನು ನೇರವಾಗಿ ಹೇಳದಿದ್ದರೂ ಫ್ರಾನ್‌ಸ್ವಾನಿಗೆ ಅದು ಅರ್ಥವಾಗುತ್ತದೆ. ಆ ಐತಿಹಾಸಿಕ ಭೇಟಿಯ ನಂತರ ಆತನೆದುರೂ ಎರಡು ಗಾಢವಾದ ಸವಾಲುಗಳು ಏಳುತ್ತವೆ. ಸಾಧಾರಣವಾದ ತನ್ನ ತಂಡ ವಿಶ್ವಕಪ್ ಗೆಲ್ಲುವಂತೆ ಮಾಡುವುದು ಮತ್ತು ಇದಕ್ಕಾಗಿ ತಮ್ಮ ತಂಡಕ್ಕೆ ಕಪ್ಪುಜನರ ಬೆಂಬಲವನ್ನು ಪಡೆಯುವುದು.

ಎರಡೂ ದುಸ್ಸಾಧ್ಯವೆನಿಸಿದರೂ ಇಬ್ಬರು ನಾಯಕರೂ ಎದೆಗೆಡುವಂತಹವರಲ್ಲ. ರಗ್ಬೀ ತಂಡ ಕಷ್ಟಪಟ್ಟು ಅಭ್ಯಾಸ ಮಾಡತೊಡಗುತ್ತದೆ. ಆದರೆ ತಮ್ಮ ಆಟವನ್ನು ಜನಪ್ರಿಯಗೊಳಿಸಲು ಜನರ ನಡುವೆ ಹೋಗಿ ಸಾಧಾರಣ ಮಕ್ಕಳು ಹಾಗೂ ಯುವಜನರೊಡನೆ ಆಡಬೇಕೆಂಬ ಪ್ರಸ್ತಾವನೆ ಬಂದಾಗ ಎಲ್ಲ ಅಟಗಾರರಿಂದಲೂ ವಿರೋಧ ವ್ಯಕ್ತವಾಗುತ್ತದೆ. ಆದರೆ ಹೀಗೆ ಕೆಲಸ ಮಾಡಲು ಒಲ್ಲದ ಮನಸ್ಸಿನಿಂದ ಹೋದರೂ ಮೊದಲನೇ ದಿನವೇ ಯುವಜನರಿಂದ ದೊರೆತ ಪ್ರೀತಿ, ಬೆಂಬಲಗಳಿಂದ ಆಟಗಾರರು ದಂಗುಬಡೆದುಹೋಗುತ್ತಾರೆ. ಅವರ ಮನಸ್ಸು ವಿಶಾಲವಾಗತೊಡಗುತ್ತದೆ. ಜತೆಗೇ ತಂಡಕ್ಕೆ ಕಪ್ಪುಜನರ ಬೆಂಬಲ ಕೂಡ ಹೆಚ್ಚತೊಡಗುತ್ತದೆ. ಆದರೆ ಟೂರ್ನಮೆಂಟಿನ ದಿನಾಂಕ ಹತ್ತಿರ ಬರುತ್ತಿದ್ದಂತೆ ಮಂಡೇಲಾ ದೈಹಿಕ, ಮಾನಸಿಕ ಆಯಾಸವನ್ನು ತಾಳಲಾರದೆ ಕುಸಿದುಬಿದ್ದುಹೋಗುತ್ತಾರೆ. ರಗ್ಬೀ ತಂಡದ ಏಕೈಕ ಕಪ್ಪು ಆಟಗಾರ ಚೆಸ್ಟರ್ ವಿಲಿಯಮ್ಸ್ ದೈಹಿಕ ತೊಂದರೆಯಿಂದಾಗಿ ಆಟದಿಂದ ಹಿಂದುಳಿಯಬೇಕಾಗುತ್ತದೆ. ಇಡೀ ತಂಡ ಇಬ್ಬದಿಗೆ ಸಿಲುಕುತ್ತದೆ.
ಆದರೆ, ತಮ್ಮ ದೇಶದ ಜನರ ಅದ್ಭುತ  ಬೆಂಬಲದಿಂದಾಗಿ ಕ್ವಾರ್ಟರ್‌ಫೈನಲ್ಲನ್ನೂ  ದಾಟುವುದೆಂಬ ಭರವಸೆಯಿಲ್ಲದ ಸೌತ್  ಆಫ್ರಿಕಾ ತಂಡವು ಫೈನಲ್ ತಲುಪುತ್ತದೆ!  ಅಲ್ಲಿರುವವರು ಆಟದಲ್ಲಿ  ಅಗ್ರಜರೆನ್ನಿಸಿಕೊಂಡಿರುವ  ನ್ಯೂಜಿಲ್ಯಾಂಡ್‌ನ ತಂಡ. ಫ್ರಾನ್‌ಸ್ವಾ  ತನ್ನ ತಂಡಕ್ಕೆ ತಮ್ಮ ಸಂಶಯಗಳನ್ನೆಲ್ಲ  ಗಾಳಿಗೆ ತೂರಿ, ತಮ್ಮ ದೇಹಗಳಿಗೆ  ವಿಧಿಸಿಕೊಂಡಿರುವ ಮಿತಿಯನ್ನು ದಾಟಲು  ಹೇಳಿ ಹುರಿದುಂಬಿಸುತ್ತಾನೆ..  ಕಪ್ಪುಬಿಳಿಯರೆನ್ನದೆ ಇಡೀ ಸೌತ್ ಆಫ್ರಿಕಾ ಒಂದಾಗಿ ಉಸಿರು ಬಿಗಿಹಿಡಿದು ಆಟ ನೋಡುತ್ತಿದೆ..
ಮುಂದೇನಾಗುವುದೆಂದು ತಿಳಿದುಕೊಳ್ಳಲು ನೀವು ‘ಇನ್‌ವಿಕ್ಟಸ್’ ನೋಡಬೇಕು.

ಖ್ಯಾತ ನಟ ಹಾಗೂ ನಿರ್ದೇಶಕ ಕ್ಲಿಂಟ್ ಈಸ್ಟ್‌ವುಡ್ ನಿರ್ದೇಶಿಸಿರುವ ಈ ಚಲನಚಿತ್ರದಲ್ಲಿ ನಟದಿಗ್ಗಜ ಮೋರ್ಗನ್ ಫ್ರೀಮನ್ ಮಂಡೇಲಾ ಪಾತ್ರವಹಿಸಿದ್ದಾರೆ. ಅವರ ನಟನೆಯ ನೈಜತೆ ಅಲ್ಲಿ ಮಂಡೇಲಾರೇ ಖುದ್ದಾಗಿ ಪಾತ್ರವಹಿಸಿರಬೇಕೆಂಬ ಸಂಶಯ ಉಂಟುಮಾಡುವ ಹಾಗಿದೆ. ಮೋರ್ಗನರ ಹೆಸರನ್ನು ಖುದ್ದು ಮಂಡೇಲಾರವರೇ ಶಿಫಾರಸು ಮಾಡಿದರೆನ್ನಲಾಗುತ್ತದೆ. ಫ್ರಾನ್‌ಸ್ವಾ ಪಾತ್ರದಲ್ಲಿ ನಟಿಸಿರುವ ಮ್ಯಾಟ್ ಡೇಮನ್ ಫ್ರೀಮನ್‌ರಿಗೆ ಸರಿಸಾಟಿಯಾಗಿದ್ದಾರೆ. ದೇಶವೊಂದರ ವೈರುಧ್ಯಗಳನ್ನು ಮರೆಸಿ ಅದನ್ನು ಒಂದುಗೂಡಿಸಿದ ನೈಜ ಚಮತ್ಕಾರವೊಂದನ್ನು ಆಧರಿಸಿದ ಈ ಚಲನಚಿತ್ರ ನೋಡುಗರಲ್ಲಿ ಪುಳಕವನ್ನುಂಟುಮಾಡುವುದಂತೂ ನಿಜವೇ.

ಚಲನಚಿತ್ರದಲ್ಲಿ ಪ್ರಮುಖಪಾತ್ರ ವಹಿಸಿರುವುದೆಂದು ಭಾಸವಾಗುವ ಹೆನ್ಲಿಯ ‘ಇನ್‌ವಿಕ್ಟಸ್’ನ ಕವಿತೆಯ ಕೊನೆಯ ಸಾಲುಗಳು ನಮ್ಮನ್ನು ಕಾಡುತ್ತವೆ: ಈ ದ್ವಾರ ಎಷ್ಟು ಕಡಿದಾಗಿದ್ದರೂ ಸರಿಯೆ,
ಈ ಓಲೆಯಲಿ ನನಗಾಗಿ ಶಿಕ್ಷೆಗಳು ತುಂಬಿದ್ದರು ಸರಿಯೆ,
ನನ್ನ ವಿಧಿಯ ಒಡೆಯನು ನಾನೇ:
ನನ್ನ ನೌಕೆಯ ನಾಯಕನು ನಾನೇ.