ಮುರಳೀಧರ ಖಜಾನೆಯವರು “ರಣ್” ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಬಹಳ ಸೂಕ್ಷ್ಮವಾಗಿ ವಿಶ್ಲೇಷಿಸಿರುವ ಬರಹವಿದು, ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ರಾಮ್‌ಗೋಪಾಲ್ ವರ್ಮಾ ನಿರ್ದೇಶನದ ‘ರಣ್’ ಚಿತ್ರ ನೋಡಿದಾಗ ನನಗನ್ನಿಸಿದ್ದು ಇಷ್ಟು. ಅಮಿತಾಬ್ ಬಚ್ಚನ್ ಅಭಿನಯದೊಂದಿಗೆ ಕನ್ನಡಿಗ ಸುದೀಪ್‌ನ ಅಭಿನಯವೂ ಸೇರಿ ಸಾಕಷ್ಟು ಪ್ರಚಾರ ಗಿಟ್ಟಿಸಿತ್ತು. ಅದಕ್ಕಿಂತಲೂ ಮುಖ್ಯವಾಗಿ ನಮ್ಮಲ್ಲಿ ಸುದೀಪ್‌ನ ಅಭಿನಯವೇ ಒಂದಷ್ಟು ಜನರ ಆಸಕ್ತಿಗೆ ಕಾರಣವಾಗಿತ್ತು. ಹೀಗೆಲ್ಲಾ ಇದ್ದಾಗ್ಯೂ ಚಿತ್ರ ನೋಡಿದಾಗ ನಿರಾಶೆಯಾದದ್ದು ಖಚಿತ.

ಇಡೀ ಕಥೆಯನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಲ್ಲ. ಆದರೆ, ಕಥೆಯ ಹಿನ್ನೆಲೆಯಷ್ಟೇ. ಎರಡು ನ್ಯೂಸ್ ಚಾನೆಲ್‌ಗಳು ಪರಸ್ಪರ ನಂ.1 ಸ್ಥಾನ ಗಿಟ್ಟಿಸಿಕೊಳ್ಳಲು, ಆರ್ ಟಿಪಿ ಉಳಿಸಿಕೊಳ್ಳಲು ನಡೆಸುವ ಕುತಂತ್ರ, ಸುದ್ದಿಮನೆ (ನ್ಯೂಸ್‌ರೂಂ)ಯೊಳಗಿನ ಮತ್ತೊಂದು ಅಂತರಂಗವನ್ನು ತೆರೆದಿಡುವುದು ನಿರ್ದೇಶಕನ ಪ್ರಯತ್ನ.
ಕಥಾವಸ್ತು ಅಪ್ಪಟ ಸಮಕಾಲೀನದ್ದು.  ಅತ್ಯಂತ ಪ್ರಸ್ತುತವಾದದ್ದು. ಇದನ್ನು  ನಿರ್ವಹಿಸುವುದು ತುಸು ಕಷ್ಟವೇ. ಆ  ಸಂದರ್ಭದಲ್ಲಿ ಅತ್ಯಂತ ಜಾಗರೂಕತೆಯಿಂದ  ಹಾಗೂ ಪರಿಶ್ರಮದಿಂದ ಸ್ಕ್ರಿಪ್ಟ್  ತಯಾರಿಸಬೇಕಿತ್ತು. ಆದರೆ ಇಡೀ ಚಿತ್ರಕ್ಕೆ  ಅತ್ಯುತ್ತಮ ಸ್ಕ್ರಿಪ್ಟ್ ಇಲ್ಲದ್ದೇ ದೊಡ್ಡ ಕೊರತೆ.  ಸಮಕಾಲೀನ ಸಂಗತಿಯ ಸತ್ಯವನ್ನು  ಅತ್ಯಂತ ಸರಳೀಕರಿಸಲಾಗಿದೆ.  ಹಾಗಾಗಿಯೇ ಚಿತ್ರ ನಮ್ಮನ್ನು  ಹಿಡಿದಿಟ್ಟುಕೊಳ್ಳುವುದಿಲ್ಲ. ನಿರ್ದೇಶಕರು ಮತ್ತೊಂದಿಷ್ಟು ತಾಳ್ಮೆ ವಹಿಸಿದ್ದರೆ ಚೆನ್ನಾಗಿರುತ್ತಿತ್ತು.

ನಿರ್ದೇಶಕರಿಗೆ ನ್ಯೂಸ್‌ರೂಂನೊಳಗೆ ನಡೆಯುವ ಘಟನೆಗಳ ಬಗ್ಗೆ ಅರಿವಿರುವುದಿರಲಿ, ನ್ಯೂಸ್ ರೂಂ ಬಗ್ಗೆಯೇ ಸ್ಪಷ್ಟ ಕಲ್ಪನೆ ಇಲ್ಲ. ಇದು ಹಲವು ದೃಶ್ಯಗಳಲ್ಲಿ ಸಾಬೀತಾಗುತ್ತದೆ. ಚಿತ್ರದ ಕಥೆಯಲ್ಲಿ ಬರುವಂತೆ ಪರಸ್ಪರ ಎರಡು ವಾಹಿನಿಗಳ ಮಧ್ಯೆ ನಡುವೆ ನಡೆಯುವ ತಂತ್ರ-ಕುತಂತ್ರಗಳು ಅಷ್ಟೊಂದು ಸರಳವಾಗಿ, ನೇರವಾಗಿರುವುದಿಲ್ಲ. ಇದೇ ಅವರ ನ್ಯೂಸ್ ರೂಂ ಬಗೆಗಿನ ಅಜ್ಞಾನದ ಬಗ್ಗೆ ಸ್ಪಷ್ಟವಾಗಿ ತಿಳಿಸಬಲ್ಲದು.

ಅಭಿನಯನದ ಬಗ್ಗೆ ಹೇಳುವುದಾದರೆ, ಅಮಿತಾಬ್ ಬಚ್ಚನ್, ಪರೇಶ್ ರಾವಲ್ ತನ್ನ ಎಂದಿನ ಮಟ್ಟವನ್ನು ಕಾಯ್ದುಕೊಂಡಿದ್ದಾರೆ. ಅವರಿಗೆ ಎದುರಾಗಿ ನಟಿಸಿದ ಸುದೀಪ್ ಅಭಿನಯ ಚೆನ್ನಾಗಿಲ್ಲ ಎಂದಲ್ಲ. ಆದರೆ ಆ ಪಾತ್ರಕ್ಕೆ ದಕ್ಕಬೇಕಾದ ಪ್ರಬುದ್ಧತೆ, ಗಂಭೀರತೆ ಕಾಣಿಸುವುದಿಲ್ಲ. ಆದ ಕಾರಣ ಸುದೀಪ್‌ರ ನಟನೆ ನಮ್ಮನ್ನು ಅಷ್ಟಾಗಿ ಹಿಡಿದಿಡದು. ಪ್ರತಿ ಫ್ರೇಮ್‌ನಿಂದಲೂ ಮತ್ತೊಂದು ಫ್ರೇಮ್‌ಗೆ ಒಂದು ಬಗೆಯ ಶೂನ್ಯವೇ ನಮ್ಮನ್ನು ಕರೆದೊಯ್ಯುತ್ತದೆ. ಸ್ಕ್ರಿಪ್ಟ್‌ನಲ್ಲಿ ಬಿಗಿಯಾದ ಬಂಧವಿರದಿರುವುದು ಇದಕ್ಕೆ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಸುದೀಪ್ ತನ್ನ ಚಾನೆಲ್ ನ ಯಶಸ್ಸಿಗಾಗಿ ಏನನ್ನೂ ಬೇಕಾದರೂ ಮಾಡಬಲ್ಲ ಸ್ಥಿತಿಯಲ್ಲಿದ್ದವನು. ಆದರೆ ಅಂಥವನು ಅನುಸರಿಸುವ ಮಾರ್ಗ ಅತ್ಯಂತ ಸರಳೀಕೃತವಾದದ್ದು. ವಾಸ್ತವವಾಗಿ ಹಾಗಿರುವುದಿಲ್ಲ. ಒಬ್ಬ ಪ್ರಧಾನಮಂತ್ರಿಯನ್ನು ಅಧಿಕಾರದಿಂದ ಇಳಿಸೋಕೆ ಕುಟುಕು ಕಾರ್ಯಾಚರಣೆ ನಡೆಸುವುದು ಹಾಸ್ಯಾಸ್ಪದ. ಇದು ಸಿನಿಮಾದ ವ್ಯಾಪ್ತಿಗೆ ನಿಲುಕದ್ದು, ತೀರಾ ಸಿನಿಮೀಯ ಎನಿಸುತ್ತದೆ.

ಒಂದರ ಒಳ್ಳೆಯದು ಮತ್ತೊಂದರೊಂದಿಗೆ ತುಲನೆ ಮಾಡಿದಾಗ ಸ್ಪಷ್ಟವಾದೀತು. ಶ್ಯಾಂಬೆನಗಲ್ 1981 ರಲ್ಲಿ ನಿರ್ದೇಶಿಸಿದ ‘ಕಲ್ಯುಗ್‘ ಚಿತ್ರಕ್ಕೂ ಇದಕ್ಕೂ ಬಹಳಷ್ಟು ವಿಷಯದಲ್ಲಿ ಹೋಲಿಕೆಯಾಗುತ್ತದೆ. ‘ರಣ್’ ಎರಡು ಸುದ್ದಿ ವಾಹಿನಿಗಳ ಮಧ್ಯೆ ನಡೆಯುವ ಸಂಘರ್ಷವಾದರೆ, ‘ಕಲ್ಯುಗ್‘ ಎರಡು ಉದ್ಯಮಿಗಳ ಮನೆಗಳ ಮಧ್ಯೆ ನಡೆಯುವ ಸಂಘರ್ಷದ್ದು. ಅದರಲ್ಲಿ ಅನಂತನಾಗ್ ಆಧುನಿಕ ಮಹಾಭಾರತದ ಅರ್ಜುನನಂತೆ ಅಭಿನಯಿಸಿದ್ದಾರೆ. ಅಲ್ಲಿ ತೋರಿದ ಸಂಯಮದ ಅಭಿನಯ ಅದ್ಭುತವಾದುದು. ಆ ನಿಟ್ಟಿನಲ್ಲಿ ಹೋಲಿಸಿದರೆ ಸುದೀಪರ ಅಭಿನಯ ಮತ್ತು ಪಾತ್ರದ ಸಾಮರ್ಥ್ಯ ಎರಡೂ ಸಮರ್ಥವಾಗಿಲ್ಲ. ಇಲ್ಲಿ ಸುದೀಪರನ್ನು ನಿರ್ದೇಶಕರು ಸಮರ್ಥವಾಗಿ ಬಳಸಿಕೊಂಡಿಲ್ಲವೋ ಅಥವಾ ನಿರ್ದೇಶಕನ ಒಳತೋಟಿಯನ್ನು ಸುದೀಪರು ಅರ್ಥ ಮಾಡಿಕೊಂಡಿಲ್ಲವೋ ಗೊತ್ತಿಲ್ಲ.

ಸಮಕಾಲೀನ ವಸ್ತುವನ್ನು ಇಟ್ಟುಕೊಂಡ ಚಿತ್ರಕ್ಕೆ ಬಹಳ ಸಿನಿಮೀಯವಾದ (ಸಿನಿಮ್ಯಾಟಿಕ್)ದೃಶ್ಯಗಳನ್ನು ಸೃಷ್ಟಿಸಿದರೆ ಸೂಕ್ತವಿರದು. ಉದಾಹರಣೆಗೆ ವಿಜಯ್ ಹರ್ಷವರ್ಧನ್ ಮಲಿಕ್ (ಅಮಿತಾಬ್ ಬಚ್ಚನ್)ಗೆ ಯಾರೋ ಬಂದು ಒಂದು ಸಿಡಿ ಕೊಟ್ಟ ಕೂಡಲೇ, ಅದರ ಪೂರ್ವಾಪರವನ್ನೇನೂ ಅರಿಯದೇ ಪ್ರಸಾರ ಮಾಡಲು ಒಪ್ಪಿಬಿಡುತ್ತಾನೆ. ಇದು ಸಹಜವಾಗಿ ಒಂದು ಮಾಧ್ಯಮಗಳಲ್ಲಿ ನಡೆಯುವುದಿಲ್ಲ. ಅದರಲ್ಲೂ ಹಲವು ವರ್ಷಗಳಿಂದ ಅದೇ ರಂಗದಲ್ಲಿರುವವ ಹಾಗೂ ಅನುಭವಿ ಹೀಗೇ ಇಷ್ಟೊಂದು ಸರಳವಾಗಿ ಒಪ್ಪಿಕೊಳ್ಳುವುದೇ ಇಡೀ ದೃಶ್ಯವನ್ನೇ ಪೇಲವಗೊಳಿಸುತ್ತದೆ. ಆ ದೃಶ್ಯಕ್ಕೆ ಒಂದಿಷ್ಟು ಗಟ್ಟಿತನ ಬೇಕಿತ್ತು. ಅವನನ್ನು ನಂಬಿಸುವ ದೃಶ್ಯಗಳಿದ್ದರೆ, ಅಮಿತಾಬ್ ಬಚ್ಚನ್‌ನ ಕ್ಯಾರಕ್ಟರ್ ಸಹ ಅಲ್ಲಿ ಇನ್ನಷ್ಟು ಪ್ರಬುದ್ಧತೆ ಪಡೆಯುತ್ತಿತ್ತು. ಅದ್ಯಾವುದೂ ಇಲ್ಲ.

ಒಂದಂತೂ ಸ್ಪಷ್ಟ. ಇದು ಎನ್‌ಡಿಟಿವಿ ಹಾಗೂ ಸಿಎನ್‌ಎನ್ ಐಬಿಎನ್ ವಾಹಿನಿಗಳ ಕುರಿತೆ ಮಾಡಿದ್ದು ಎಂಬುದು ಸ್ಪಷ್ಟ. ಅದರಲ್ಲಿನ ಎರಡು ಪ್ರಮುಖ ಪಾತ್ರಗಳೂ ಆ ಎರಡು ವಾಹಿನಿಯ ಮುಖ್ಯಸ್ಥರ ಚಹರೆಯನ್ನೇ ಸ್ಪಷ್ಟವಾಗಿ ಹೇಳುತ್ತವೆ. ಅದಕ್ಕಿಂತಲೂ ಇಬ್ಬರನ್ನೂ ಅಲ್ಲಿ ಪಾತ್ರಗಳನ್ನಾಗಿಸಿದ್ದಾರೆ, ಅದಕ್ಕೆ ಜೀವ ತುಂಬಿದ ನಟರೂ ಅದನ್ನು ಸಮರ್ಥವಾಗಿಸಿದ್ದಾರೆ.

ಒಟ್ಟೂ ಚಿತ್ರದಲ್ಲಿ ಓದುವಂಥದ್ದೇನೂ ಇಲ್ಲ, ಅಂದರೆ ಬರೀ ವಾಚ್ಯವೆನಿಸುವಷ್ಟು ಬೇಸರ ತರುತ್ತದೆ. ಸಬ್‌ಟೆಕ್ಟ್ಸ್ (ಸನ್ನಿವೇಶದ ಸುತ್ತಮುತ್ತಲಿರಬಹುದಾದ ಅಂಶಗಳು-ಉಪಪಠ್ಯ) ಎನ್ನೋದನ್ನು ಕೇಳುವಂತೆಯೇ ಇಲ್ಲ. ಸಂಭಾಷಣೆಯಲ್ಲೂ ಶಕ್ತಿಯಿಲ್ಲ ; ತೀರಾ ಪೇಲವವಾಗಿ, ಅವರ ಪಾತ್ರಗಳೇ ನಿಸ್ಸಾರವೆನಿಸುವಂತಿದೆ.

ಮಧುರ್ ಭಂಡಾರ್ಕರ್ ಸಹ ಸಮಕಾಲೀನ ವಸ್ತುಗಳನ್ನೇ ತೆಗೆದುಕೊಳ್ಳುತ್ತಾರೆ. ಅವರ ಪೇಜ್ 3 ಸಿನಿಮಾ ಸಹ ಮಾಧ್ಯಮ ಜಗತ್ತಿನ ಕುರಿತಾದದ್ದೇ. ಆದರೆ ಪ್ರತಿ ಫ್ರೇಂನಲ್ಲೂ ಕಾಯ್ದುಕೊಂಡಿದ್ದ ಬಂಧ, ತರ್ಕವೆಲ್ಲವೂ ಇಡೀ ಸಿನಿಮಾಕ್ಕೆ ಸೊಗಸು ತಂದುಕೊಟ್ಟಿತು. ಅದಕ್ಕೆ ಕಾರಣವೆಂದರೆ ಅತ್ಯುತ್ತಮವಾದ ಸ್ಕ್ರಿಪ್ಟ್ ಮತ್ತು ಆ ಕ್ಷೇತ್ರದ ಅಧ್ಯಯನದಿಂದ ರೂಢಿಸಿಕೊಂಡ ಪೂರ್ವತಯಾರಿ. ಅದ್ಯಾವುದೂ ಈ ಚಿತ್ರದಲ್ಲಿ ತೋರುವುದಿಲ್ಲ. ಇದೇ ಒಬ್ಬ ರಾಂಗೋಪಾಲ್ ವರ್ಮ ಮತ್ತು ಮಧುರ್ ಭಂಡಾರ್ಕರ್ ಮಧ್ಯೆ ಇರುವ ವ್ಯತ್ಯಾಸ. ಪೇಜ್೩ ನಲ್ಲಿದ್ದ ಹೇಳಲೇಬೇಕಾದ ಸಂಗತಿಯಂಥ ಕೇಂದ್ರಬಿಂದು, ಈ ಇಡೀ ಚಿತ್ರದಲ್ಲಿ ಇಲ್ಲವೇ ಇಲ್ಲ. ಇಂಥದ್ದು ಎಂಬುದು ನಿಗದಿಯಿಲ್ಲದೇ ಸುತ್ತುವುದು ಕಷ್ಟ.

ಸಿನಿಮಾಕ್ಕೆ ಪೂರಕವಾಗುವ ಎಷ್ಟೋ ಅಂಶಗಳ ಬಗ್ಗೆ ತಲೆಕೆಡಿಸಿಕೊಳ್ಳದ ನಿರ್ದೇಶಕ, ಬೇರೆ ಏನೇನೋ ಅಂಶಗಳನ್ನು ಸೇರಿಸುತ್ತಾ ಹೋಗುತ್ತಾನೆ. ಅನಾವಶ್ಯಕವಾಗಿ ಅಲ್ಲಿ ಬೇಡವಾದ ಧರ್ಮ, ಜಾತಿ ಎಲ್ಲವನ್ನೂ ತರುತ್ತಾನೆ. ಅಮಿತಾಬ್ ಬಚ್ಚನ್‌ನ್ನು ಸೆಕ್ಯುಲರ್ ಮಾಡೆಲ್ ಎಂದು ತೋರಿಸಲು ಪ್ರಯತ್ನಿಸುತ್ತಾನೆ. ಇವೆಲ್ಲವೂ ಕಥೆಗೆ ಪೂರಕವಾದುದೇ ಇಲ್ಲ. ಸುಚಿತ್ರಾ ಕೃಷ್ಣಮೂರ್ತಿ ಹಾಗೂ ರಜ್ ಪಾಲ್ ಯಾದವ್ ರ ಪಾತ್ರದ ಮೂಲಕ ಸಿನಿಮಾಕ್ಕೆ ಇನ್ನಷ್ಟು ಒಳನೋಟಗಳನ್ನು ಕೊಡಬಹುದಿತ್ತು. ಆದರೆ ಒಂದು ವಾಹಿನಿಯ ಪ್ರಮುಖ ಹುದ್ದೆಯಲ್ಲಿರುವ ರಜ್ ಪಾಲ್ ಯಾದವ್ ಪಾತ್ರವನ್ನು ಕಾರ್ಟೂನ್ ರೀತಿಯಲ್ಲಿ ಚಿತ್ರಿಸುವ ಮೂಲಕ ಪ್ರಹಸನಗೊಳಿಸಿಬಿಡುತ್ತಾನೆ. ಆರಂಭದಲ್ಲಿ ಭರವಸೆ ಹುಟ್ಟಿಸಿದರೂ, ಅದೇ ಹಿಡಿತ ಕೊನೆವರೆಗೂ ಸಾಗುವುದಿಲ್ಲ. ಚಿತ್ರವನ್ನು ಕೇಂದ್ರೀಕರಿಸುವಂತೆ ಮಾಡುವ ಪೂರಬ್ ಪಾತ್ರ ಎಲ್ಲೂ ಸ್ಪಷ್ಟವಾಗಿ ತಟ್ಟುವುದಿಲ್ಲ.

ಹೀಗೆ ಇಂಥ ಹಲವು ಸಂಗತಿಗಳಿಂದ ಒಂದು ಸಮಕಾಲೀನ ವಸ್ತುವನ್ನು ಆಧರಿಸಿ ಒಂದು ಸ್ಟೇಟ್‌ಮೆಂಟ್ (ತೀರ್ಮಾನ) ಕೊಡಬಹುದಾದಷ್ಟು ಗಂಭೀರವಾಗಬೇಕಿದ್ದ ಈ ಪ್ರಯತ್ನ ಹಲವು ಕಾರಣಗಳಿಂದ ಮಹತ್ವವನ್ನು ಕಳೆದುಕೊಳ್ಳುತ್ತದೆ. ತೀರಾ ಬಾಲಿವುಡ್ಡಿಷ್ ಆದ ಸಿನಿಮಾವಾಗಿ ಕೊನೆಗೊಳ್ಳುತ್ತದೆ, ಅದೇ ಅದರ ವಿಪರ್ಯಾಸ ಸಹ.

Advertisements