ಚರ್ಚೆಯನ್ನು ಈಗ ಮುಂದುವರಿಸಿರುವರು ರಘುಪತಿಯವರು. ಇವರು ಖಾಸಗಿ ಕಂಪನಿಯ ಉದ್ಯೋಗಿ. ಸಿನಿಮಾ ಬಗೆಗಿನ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದನ್ನು ನೀವೂ ಬೆಳೆಸಿ, ನಮ್ಮ ಇಮೇಲ್ ಗೆ ನಿಮ್ಮ ಲೇಖನ ಕಳಿಸಿ.

ಪಿ. ಶೇಷಾದ್ರಿಯವರು ಹುಟ್ಟು ಹಾಕಿರುವ ಚರ್ಚೆ ಚೆನ್ನಾಗಿದೆ. ಅದಕ್ಕೆ ಬಿ. ಸುರೇಶರು ನೀಡಿರುವ ಅಭಿಪ್ರಾಯವೂ ಸೂಕ್ತವಾಗಿದೆ.

ನಾನೂ ಹಲವು ಸಂದರ್ಭಗಳಲ್ಲಿ ಯೋಚಿಸಿರುವಂತೆ ಸಿನಿಮಾ ಎಂಬುದು ಸಂಸ್ಕೃತಿಯ ಆಯಾಮದಿಂದ ಹೊರತಾಗಿರಬೇಕೆಂಬ ಕಲ್ಪನೆಯೇ ಸರಿಯಾದುದಲ್ಲ. ಒಂದು ಜನಾಂಗದ ನಡವಳಿಕೆಯನ್ನು ರೂಪಿಸುವ, ಸಂಸ್ಕೃತಿಯನ್ನು ಬೆಳೆಸುವ, ಪ್ರಭಾವಿಸುವ ಮಾಧ್ಯಮಗಳಲ್ಲಿ ಸಿನಿಮಾವೂ ಒಂದು. ಅದರಲ್ಲೂ ಅತ್ಯಂತ ಪ್ರಭಾವಿಶಾಲಿ ಮಾಧ್ಯಮವಿದು.

ಸಾಮೂಹಿಕವಾಗಿ ತಲುಪಬಲ್ಲಂಥ ಪರಿಣಾಮಕಾರಿ ಮಾಧ್ಯಮವನ್ನು ಒಂದು ಜಿಲ್ಲೆಯ ಸಂಸ್ಕೃತಿ ಉತ್ಸವದ ಸಂದರ್ಭದಲ್ಲಿ ಕೈ ಬಿಡುವುದು ಮೂರ್ಖತನದ ಪರಮಾವಧಿ. ಜತೆಗೆ ಆ ಕಲೆಯ ಕಡೆಗಣಿಸುವಿಕೆ ಎಂದೇ ಅರ್ಥ ಕಲ್ಪಿಸಬೇಕು.

ಸಿನಿಮಾ ಎಂದರೆ ಕೆಟ್ಟದ್ದು ಎನ್ನುವ ಕಲ್ಪನೆ ಇಂದಿನದಲ್ಲ, ಹಳೆ ಕಾಲದಿಂದಲೂ ಇದೆ. ಆದರೆ ಇಂಥದೊಂದು ಮಿಥ್ಯ ಬರಿದೇ ಸಿನಿಮಾ ಬಗೆಗಲ್ಲ, ರಂಗಭೂಮಿ ಬಗೆಗೂ ಇತ್ತು. ಆದರೆ ಇವತ್ತು ಸಂಸ್ಕೃತಿ ಇಲಾಖೆಯಿಂದ ಹಿಡಿದು ಎಲ್ಲರೂ ರಂಗಭೂಮಿ ಬಗೆಗಿನ ನಿಲುವನ್ನು ಸರಿಪಡಿಸಿಕೊಂಡಿದೆ. ಅದನ್ನು ಒಪ್ಪಿಕೊಳ್ಳಲಾಗಿದೆ. ಸಮಾಜವೂ ರಂಗಭೂಮಿ ಬಗೆಗಿನ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ಆದರೆ ಸಿನಿಮಾ ಬಗ್ಗೆ ಅಂಥದೊಂದು ಅಸೃಶೃತೆ ಯಾಕೋ ತಿಳಿಯುವುದಿಲ್ಲ.

ನಾನೇನು ಸಿನಿಮಾ ನಿರ್ದೇಶಕನೂ ಅಲ್ಲ, ಸಿನಿಮಾ ರಂಗದಲ್ಲಿ ಕೆಲಸ ಮಾಡುವವನೂ ಅಲ್ಲ. ನಾನೊಬ್ಬ ಸಿನಿಮಾ ಪ್ರೇಕ್ಷಕ. ಆದರೆ ನನಗೆ ಎಷ್ಟೋ ಬಾರಿ ಒಂದು ಸಾಹಿತ್ಯ ಕೃತಿ ಅರ್ಥ ಮಾಡಿಸಲಾಗದ್ದನ್ನು ಸಿನಿಮಾ ಮಾಡಿಸಿದೆ. ಒಂದು ಉಪದೇಶ ಮಾಡಿದ್ದಕ್ಕಿಂತ ದೊಡ್ಡ ಪ್ರಭಾವ ನನ್ನ ಮೇಲಾಗಿದೆ. ಇದು ಕೇವಲ ತುಟಿಯ ಮೇಲಿನ ಮಾತಲ್ಲ.

ಒಂದು ಸಿನಿಮಾ ಎಂದಕೂಡಲೆ ಇಂತದ್ದೇ ಎಂದು ನಿರ್ಧಾರಕ್ಕೆ ಬರಬೇಕಿಲ್ಲ. ಒಳ್ಳೆ ಸಿನಿಮಾಗಳನ್ನು ತೋರಿಸಿ ಅರ್ಥ ಮಾಡಿಸುವಂಥ ಕೆಲಸಗಳು, ಇಂಥ ಸಿನಿಮಾಗಳನ್ನು ನೋಡುವ ಅವಕಾಶಗಳನ್ನು ಜಿಲ್ಲಾ ಉತ್ಸವಗಳು, ಸಂಸ್ಕೃತಿ ಉತ್ಸವಗಳು ಕಲ್ಪಿಸಬೇಕು. ಸಂಗೀತ, ನಾಟಕ, ಸಾಹಿತ್ಯವಷ್ಟನ್ನೇ ತೋರಿಸಿ, ಪ್ರೋತ್ಸಾಹಿಸಿದರೆ ಸಂಸ್ಕೃತಿಯ ಪೂರ್ಣ ಗ್ರಹಿಕೆಯಾಗದು. ಆ ಮೂಲಕ ನಾವು ಅಂಗವೈಕಲ್ಯವುಳ್ಳ ಸಂಸ್ಕೃತಿಯನ್ನೇ ಪರಿಚಯಿಸುತ್ತಿದ್ದೇವೆ ಎಂದರ್ಥ. ಸಿನಿಮಾ ತೋರಿಸದಿದ್ದರೆ ಸಂಸ್ಕೃತಿಯ ವ್ಯಾಖ್ಯಾನವೇ ಊನವಾದಂತೆ. ಹಾಗಾಗಿ ಸರಕಾರಗಳು, ಚಲನಚಿತ್ರ ಅಕಾಡೆಮಿಯಂಥವು ಈ ನಿಟ್ಟಿನಲ್ಲಿ ಪ್ರಯೋಗಶೀಲವಾಗುವುದು ಅತ್ಯಂತ ಸೂಕ್ತ.