ಹೆಸರಾಂತ ಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೊಸ ಬಗೆಯ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ತುಮಕೂರು ಜಿಲ್ಲಾ ಸಂಸ್ಕೃತಿ ಸಂಭ್ರಮಕ್ಕೆ ಸಂಬಂಧಿಸಿದಂತೆ ಬಂದ ಜಿಲ್ಲಾಧಿಕಾರಿಗಳ ಆಹ್ವಾನಕ್ಕೆ ಸ್ಪಂದಿಸುವುದರೊಂದಿಗೆ ನಿಜವಾಗಲೂ ಇಂದಿನ ಸಂದರ್ಭದಲ್ಲಿ ಚರ್ಚಿಸಬೇಕಾದ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ಅವರ ಮೂಲಭೂತ ಪ್ರಶ್ನೆಯೆಂದರೆ, ಸಂಸ್ಕೃತಿ ಸಂಭ್ರಮ ಎನ್ನುವ ಲೆಕ್ಕಾಚಾರದಲ್ಲಿ ಬರಿದೇ ಸಂಗೀತ, ಸಾಹಿತ್ಯ, ಕಲೆ ಇತ್ಯಾದಿಗಳಷ್ಟೇ ಏಕೆ ಸೇರಬೇಕು ? ಸಿನಿಮಾವನ್ನು ಸಂಸ್ಕತಿಯ ಅಂಗವಾಗಿ ಯಾಕೆ ಸೇರಿಸುವುದಿಲ್ಲ ? ಇಂಥದೊಂದು ಅಸ್ಪೃಶ್ಯತೆ ಏಕೆ ? ಎಂದೆಲ್ಲಾ ಪ್ರಶ್ನಿಸಿದ್ದಾರೆ. ಬಹಳ ಉಪಯುಕ್ತವಾದ ಪ್ರಶ್ನೆ. ಈ ಕುರಿತು ಚರ್ಚೆಯನ್ನು ಆರಂಭಿಸುತ್ತಿದ್ದೇವೆ. ನಿಮ್ಮ ಅಭಿಪ್ರಾಯಗಳನ್ನು  ನಮ್ಮ ಇಮೇಲ್ ಗೆ ಕಳುಹಿಸಿ saangatya@gmail.com. ಚರ್ಚೆಗೆ  ಒಂದು ಸ್ಪಷ್ಟತೆ ನೀಡಲು ಪಿ. ಶೇಷಾದ್ರಿಯವರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಇದು ಅತ್ಯಂತ ಆರೋಗ್ಯಕರ ಹಾಗೂ ಚಿತ್ರ ಜಗತ್ತಿನ ಕುರಿತಾದ ಚರ್ಚೆಗೆಂದಷ್ಟೇ ಕೈಗೆತ್ತಿಕೊಳ್ಳಲಾಗಿದೆ, ಯಾವುದೇ ವೈಯಕ್ತಿಕ ನೆಲೆಗಲ್ಲ.

ಫೆಬ್ರವರಿ ೨೩, ೨೦೧೦
ಇವರಿಗೆ,
ಡಾ.ಸಿ.ಸೋಮಶೇಖರ್,
ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು,
ಜಿಲ್ಲಾ ಕನ್ನಡ ಸಂಸ್ಕೃತಿ ಸಂಭ್ರಮ ಉತ್ಸವ-೨೦೧೦,
ತುಮಕೂರು
ಮಾನ್ಯರೆ,
ನಮಸ್ಕಾರ, ತಾವು ವಿಶ್ವಾಸದಿಂದ ಕಳುಹಿಸಿರುವ ಆಮಂತ್ರಣ ನನ್ನ ಕೈ ಸೇರಿದೆ.  ನನ್ನ ತುಮಕೂರು ಜಿಲ್ಲೆಯಲ್ಲಿ ‘ಜಿಲ್ಲಾ ಸಂಸ್ಕೃತಿ ಸಂಭ್ರಮ’ ಆಯೋಜಿಸಿರುವ ತಮಗೆ ಅಭಿನಂದನೆಗಳು.

ಇದೇ ಕಾರ್ಯಕ್ರಮದಲ್ಲಿ, ಫೆಬ್ರವರಿ ೨೬ ರಂದು, ಬೆಳಗ್ಗೆ ಹನ್ನೊಂದು ಗಂಟೆಗೆ, ‘ಸಾಧಕರ ಸ್ಮರಣೆ’ ಕಾರ್ಯಕ್ರಮದಲ್ಲಿ ನನ್ನನ್ನು ಅಭಿನಂದಿಸಲಿರುವ ವಿಚಾರ ನನಗೆ ಆಹ್ವಾನ ಪತ್ರಿಕೆಯ ಮೂಲಕ ತಿಳಿಯಿತು! ಇದು ನನಗೆ ಏಕಕಾಲಕ್ಕೆ ಅಚ್ಚರಿಯನ್ನೂ,  ಮುಜಗರವನ್ನೂ ಉಂಟು ಮಾಡಿತು…  ಚಿತ್ರರಂಗದಲ್ಲಿ ಸಾಧನೆ ಮೆರೆದು ಮರೆಯಾದವರ ಸ್ಮರಣೆಯಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಿರುವುದು ನನಗೆ ವೈಯಕ್ತಿಕವಾಗಿ ಸಮಂಜಸ ಎನ್ನಿಸಲಿಲ್ಲ.  ನಾಲ್ಕು ದಿನದ ಕಾರ್ಯಕ್ರಮದಲ್ಲಿ ಪ್ರತ್ಯೇಕವಾಗಿ, ‘ಸನ್ಮಾನ ಸಮಾರಂಭವೇ’ ಇದ್ದು (ಉಮಾಶ್ರೀ ಕಾರ್ಯಕ್ರಮ) ಅಲ್ಲಿ ಇದನ್ನು ಏಕೆ ಸೇರಿಸಲಾಗಲಿಲ್ಲವೋ ತಿಳಿಯದು… ಇರಲಿ,
ಇದಕ್ಕಿಂತ ಮುಖ್ಯವಾದ ಇನ್ನೊಂದು ವಿಚಾರವನ್ನು ತಮ್ಮ ಗಮನಕ್ಕೆ ತರಲು ಈ ಪತ್ರ ಬರೆಯುತ್ತಿದ್ದೇನೆ.
ನಮ್ಮ ನಾಡಿನ ಸಂಸ್ಕೃತಿಯಲ್ಲಿ, ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳಂತೆ ಚಲನಚಿತ್ರವೂ ಒಂದು ಭಾಗ ಎಂಬುದು ಅನುಭವಿಗಳಾದ ತಮಗೆ ತಿಳಿದೇ ಇದೆ.  ಇಂಥ ‘ಸಂಸ್ಕೃತಿಯ  ಸಂಭ್ರಮ’ ಕಾರ್ಯಕ್ರಮಗಳಲ್ಲಿ ಚಲನಚಿತ್ರಕ್ಕೂ ಒಂದು ಸ್ಥಾನಮಾನ ದೊರೆಯಬೇಕು ಎಂಬುದು ನನ್ನ ಅಭಿಪ್ರಾಯ.  ತಾರಾಮೇಳ ಹಾಗೂ ಅಭಿನಂದನೆಗಳಂತೆಯೇ ಸದಭಿರುಚಿಯ ಚಿತ್ರಗಳನ್ನು ಜನರಿಗೆ ಮುಟ್ಟಿಸುವುದೂ ಕೂಡ ಬಹು ಮುಖ್ಯವಾದದ್ದು.
ಕರ್ನಾಟಕ ಸರ್ಕಾರ ಕನ್ನಡದ ಗುಣಾತ್ಮಕ ಚಿತ್ರಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕಾಲದಿಂದಲೂ ಹತ್ತು ಹಲವು ಸವಲತ್ತುಗಳನ್ನು ಕನ್ನಡ ಚಿತ್ರಗಳಿಗೆ ನಿರಂತರವಾಗಿ ಒದಗಿಸುತ್ತಾ ಬಂದಿದೆ.  ಅದಕ್ಕಾಗಿ ಕನ್ನಡಚಿತ್ರರಂಗ ಸರ್ಕಾರಕ್ಕೆ ಆಭಾರಿಯಾಗಿದೆ.  ಆದರೆ ಇಂಥ ಸದಭಿರುಚಿಯ  ಚಿತ್ರಗಳ ಪ್ರದರ್ಶನಗಳನ್ನು ಏರ್ಪಡಿಸುವ ದೃಷ್ಟಿಯಲ್ಲಿ ಸರ್ಕಾರದ ಕಡೆಯಿಂದ ಅಂಥ ಪ್ರಯತ್ನಗಳು ಆಗುತ್ತಿಲ್ಲ ಎಂಬುದನ್ನು ವಿಷಾದದಿಂದಲೇ ಹೇಳಬೇಕಾಗುತ್ತದೆ.
ಸರ್ಕಾರ ಪ್ರತಿವರ್ಷ ವಿವಿಧ ಜಿಲ್ಲೆಗಳಲ್ಲಿ ‘ಸಂಸ್ಕೃತಿ ಸಂಭ್ರಮ’ ಅಥವಾ ‘ಜಿಲ್ಲಾ ಉತ್ಸವ’ಗಳನ್ನು ಏರ್ಪಡಿಸುತ್ತಾ ಬಂದಿದೆ.  ಕನಿಷ್ಠ ಆ ದಿನಗಳಲ್ಲಾದರೂ ಪ್ರಶಸ್ತಿ ಪಡೆದ ಚಲನಚಿತ್ರಗಳನ್ನು ಕಾರ್ಯಕ್ರಮದ ಅಂಗವಾಗಿ ಆಯಾ ಊರಿನ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ಮೂಲಕ ಈ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಬೇಕಾಗುತ್ತದೆ.  ಈ ಹಿಂದೆ ದಾವಣೆಗೆರೆ ಹಾಗೂ ಶಿವಮೊಗ್ಗಗಳಲ್ಲಿ ಈ ಪ್ರಯತ್ನ ಆಗಿದೆ.  ಆಗೆಲ್ಲಾ ನನ್ನ ಚಿತ್ರಗಳನ್ನು ಅಲ್ಲಿಯ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿ ಪ್ರೋತ್ಸಾಹಿಸಿದ್ದಾರೆ. ಆ ಅಭಿಮಾನ ನನಗೆ ಆ ಜಿಲ್ಲೆಗಳ ಮೇಲೆ ಇದೆ.
ಆದರೆ ಈಗ ಇಲ್ಲಿ ನಡೆದಿರುವುದನ್ನು ನೋಡಿ!
ತುಮಕೂರು ಜಿಲ್ಲೆ ನಾನು ಹುಟ್ಟಿ ಬೆಳೆದ ಜಿಲ್ಲೆ.  ನನ್ನಂತೆಯೇ ಈ ಜಿಲ್ಲೆಯಿಂದ ಬಂದ ಹಲವಾರು ನಿರ್ದೇಶಕರು (ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಯ್ಯ, ‘ಮಾಡಿಮಡಿದವರು’ ಶಂಕರಪ್ಪ, ಬಿ.ಎಸ್.ಲಿಂಗದೇವರು ಇತ್ಯಾದಿ) ಕನ್ನಡ ಚಿತ್ರರಂಗದಲ್ಲಿದ್ದಾರೆ.  ಅವರ ಹಲವು ಚಿತ್ರಗಳು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗೌರವ ಪಡೆಯುವ ಮೂಲಕ, ತುಮಕೂರು ಜಿಲ್ಲೆಯ ಹಿರಿಮೆಯನ್ನು ಸಾಂಸ್ಕೃತಿಕ ಭೂಪಟದಲ್ಲಿ ದಾಖಲಿಸಿವೆ. ದುರಾದೃಷ್ಟ ಎಂದರೆ ನಮ್ಮ ಚಿತ್ರಗಳು ನಮ್ಮ ಜಿಲ್ಲೆಯಲ್ಲೇ ಪ್ರದರ್ಶನ ಭಾಗ್ಯವನ್ನು  ಕಾಣದೇ ಇರುವುದು!

ನಾನು ನಿರ್ದೇಶಿಸಿದ ಐದೂ ಚಿತ್ರಗಳು ರಾಷ್ಟ್ರಪ್ರಶಸ್ತಿಯ ಮನ್ನಣೆ ಪಡೆದಿವೆ.  ಇಲ್ಲಿಯವರೆಗೆ ನನ್ನ ‘ಮುನ್ನುಡಿ’ ಚಿತ್ರವೊಂದನ್ನು ಬಿಟ್ಟು ಉಳಿದ ಯಾವ ಚಿತ್ರವನ್ನೂ ನನ್ನದೇ ಜಿಲ್ಲೆಯಾದ ತುಮಕೂರಿನಲ್ಲಿ ಬಿಡುಗಡೆ ಮಾಡಲು ನನಗೆ ಸಾಧ್ಯವಾಗಿಲ್ಲ.  ಈ ನಿಟ್ಟಿನಲ್ಲಿ ಹಲವಾರು ಬಾರಿ ಪ್ರಯತ್ನಿಸಿ ಸೋತಿದ್ದೇನೆ.  ‘ಬೇರು’ ಚಿತ್ರ ಸಂಪೂರ್ಣ ತುಮಕೂರಿನಲ್ಲೇ, ಅಲ್ಲಿನ ಕಲಾವಿದರನ್ನೇ ಬಳಸಿ ಚಿತ್ರೀಕರಿಸಲಾದ ಚಿತ್ರ.  ಇದೂ ಕೂಡ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸಿ ಪಡೆದು, ಹಲವಾರು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಯಿತು.  ಆದರೆ ಇಂದಿಗೂ ಈ ಚಿತ್ರ ತುಮಕೂರಿನಲ್ಲಿ ತನ್ನ ಪ್ರದರ್ಶನ ಭಾಗ್ಯ ಕಂಡಿಲ್ಲ!
ಈಗ ಜಿಲ್ಲೆಗೆ ಜಿಲ್ಲೆಯೇ ಸಂಭ್ರಮಿಸುವ ಹಬ್ಬ ಬಂದಿದೆ.  ಈ ಸಂದರ್ಭದಲ್ಲಾದರೂ ಪ್ರಶಸ್ತಿ ವಿಜೇತ ಚಿತ್ರಗಳಿಗೆ ಒಂದು ವೇದಿಕೆ ದೊರೆಯಬಹುದು ಎಂಬ ನನ್ನ ಬಹುದಿನದ ನಿರೀಕ್ಷೆ ಹುಸಿಯಾಗಿದೆ.
ನಮ್ಮ ಜಿಲ್ಲೆಯಲ್ಲೇ, ನಮ್ಮ ಚಿತ್ರಗಳಿಗೇ, ನಮ್ಮ ತಂತ್ರಜ್ಞರಿಗೇ ಏಕೆ ಈ ತಾರತಮ್ಯ?

ಬೇರೆ ಭಾಷೆಯ ಕಲಾವಿದರು, ಗಾಯಕ-ಗಾಯಕಿಯರಿಗೆ ಹಣ ನೀಡಿ ಮಣೆಯನ್ನೂ ಹಾಕಿರುವ ಜಿಲ್ಲಾಡಿಳಿತದ ಈ ಪ್ರವೃತ್ತಿ ನನಗೆ ನೋವುಂಟು ಮಾಡಿದೆ.
ನಿಜಕ್ಕೂ ಹೇಳುತ್ತೇನೆ, ನಮಗೆ ಈ ಹಾರ-ತುರಾಯಿ ಯಾವುದೂ ಬೇಡ, ನಮ್ಮ ಚಿತ್ರಗಳಿಗೆ ಒಂದು ಪ್ರದರ್ಶನದ ಅವಕಾಶ ಮಾಡಿಕೊಡಿ, ಪ್ಲೀಸ್.  ಸಂಸ್ಕೃತಿಯ ಚಿಂತಕರಾದ, ಸ್ವತಃ ಸಾಹಿತಿಗಳಾದ ನಿಮಗೆ ನಮ್ಮ ಈ ಕಳಕಳಿಯ ಬೇಡಿಕೆ ಅರ್ಥವಾಗುತ್ತದೆ ಎಂದು ಭಾವಿಸಿ, ತಮಗೆ ಈ ಪತ್ರ ಬರೆಯುತ್ತಿದ್ದೇನೆ.   ಮುಂದಿನದು ನಿಮಗೇ ಬಿಟ್ಟದ್ದು…
ವಿಷಾದದಿಂದ,
(ಪಿ.ಶೇಷಾದ್ರಿ)