ನಮ್ಮ ಚಲನಚಿತ್ರೋತ್ಸವದ ಮತ್ತೊಂದು ಚಿತ್ರದ ಬಗೆಗಿನ ಬರಹ. ಟೀನಾ ಶಶಿಕಾಂತ್ ಅವರು ಬರೆದಿರುವ ಬರಹ. ಬಹುನೆಲೆಯಲ್ಲಿ ಚರ್ಚಿತವಾದ ಮೆಕ್ಸಿಕನ್ ಚಿತ್ರವಿದು.

ಈ ಸಾರೆಯ ಸಾಂಗತ್ಯ ಚಲನಚಿತ್ರೋತ್ಸವವನ್ನ ಮಿಸ್ ಮಾಡಿಕೊಂಡವರು ಬಹಳಷ್ಟನ್ನ ಮಿಸ್ ಮಾಡಿಕೊಂಡರು. ಸುಮ್ಮನೇ ಹೊಟ್ಟೆ ಉರಿಸೋಕೆ ಹೇಳ್ತಾ ಇಲ್ಲ. ನಿಜವಾಗ್ಲೂನೂ. ಅದ್ಭುತ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಮಿನಿ ಚಿತ್ರಗಳು, ಚೆಂದಾದ ಮಾತುಕತೆ, ಪರಮೇಶ್ವರ್ ಗುರುಸ್ವಾಮಿಯವರು ಮತ್ತು ಕೇಸರಿ ಹರವೂರವರ ಅನುಭವದ ಹರಹುಗಳು, ನಮ್ಮ ಮನೆಯಲ್ಲಿ ಬಡಿಸುತ್ತ ಇದ್ದಾರೇನೋ ಅನ್ನಿಸುವ ಹಾಗಿದ್ದ ರುಚಿಕಟ್ಟಾದ ಊಟ (ಖರ್ಜೂರದ ಹೋಳಿಗೆ..ವಾವ್!!) ಮತ್ತೆ ಇದಕ್ಕೆಲ್ಲ ಕಿರೀಟವಿಟ್ಟ ಹಾಗೆ ಕುಪ್ಪಳಿಯ ಅಲೌಕಿಕ ವಾತಾವರಣ. ಎಲ್ಲಕಿಂತ ಹೆಚ್ಚಾಗಿ ಈ ಸಾರೆಯ ಉತ್ಸವದಲ್ಲಿ ಭಾಗವಹಿಸಿದವರ ಸಿನೆಮಾಪ್ರೇಮ ಯಾರನ್ನೂ ಬೆರಗಾಗಿಸುವಂತಿತ್ತು.

ಓರ್ವರಂತೂ ತಾನು ಸಿನೆಮಾ ಹುಚ್ಚನೆಂದು ಡಿಕ್ಲೇರ್ ಮಾಡಿದರೆಂದರೆ..!! ಅದರ ಜತೆಗೇ ಆಂಟನ್ ಚೆಕಾಫನ ನಾಟಕಗಳಿಂದ ಅವತರಿಸಿ ಬಂದಂತೆ ಕಾಣುತ್ತಿದ್ದ ಹುಡುಗ ಶೈಲೇಶನ ಅದ್ಬುತ ಕಂಠದಿಂದ ನಾ ಮುದುಕಿಯಾದರೇನಾತ.. ಈ ಸಾರೆ ನಾವೆಲ್ಲರೂ ನಕ್ಕುನಲಿಯುವಂತೆ ಮಾಡಿದ್ದನ್ನ ಮರೆಯಲು ಸಾಧ್ಯವೆ? ವಾಪಾಸು ಬರಬೇಕು ಎಂದು ಮರೆತುಹೋಗುವ ಹಾಗಿತ್ತು. ವಾಪಾಸು ಬಂದಮೇಲೆ ಬೆಂಗಳೂರಿನ ಅತಿ ಸ್ವಚ್ಛ ಹವೆಗೆ ಆಘಾತಗೊಂಡು ಒಂದು ರೌಂಡ್ ಖಾಯಿಲೆಬಿದ್ದು ಎದ್ದಮೇಲೆ, ಇಲ್ಲಿ ನೋಡಿದ ಚಲನಚಿತ್ರಗಳಲ್ಲಿ ನನಗೆ ಮೆಚ್ಚುಗೆಯಾದ ಯಾವ ಚಲನಚಿತ್ರದ ಬಗ್ಗೆ ಬರೆಯಲಿ ಎಂದು ಯೋಚನೆ ಮಾಡುತ್ತಾ ಇರುವಷ್ಟರಲ್ಲೇ, ಅರೆ, ಚೇತನಾ, ದೀಪಾ, ಮಹೇಶ ಎಲ್ಲರೂನೂ ಆಗಲೇ ಬರೆದುಬಿಟ್ಟಿದ್ದಾರಲ್ಲಪ್ಪ!! ಸರೀ, ಇನ್ನು ನನ್ನ ಪಾಲಿಗುಳಿದಿರೋದು ವಯೋಲಿನ್ನು ಅಂತ ಅದನ್ನೇ ಬಾರಿಸೋಕೆ ಹೊರಟೆ. ಹಾಗಂತ ಹೇಳಿ ಈ ಮೂವೀ ಸಾಮಾನ್ಯದ್ದು ಅಂದುಕೊಳ್ಳಬೇಡಿ. ಇದರ ಅಪರೂಪಗಳ ಪಟ್ಟಿ ಬಿಚ್ಚಿದರೆ ಸುಸ್ತಾಗುವಷ್ಟಿದೆ.

ಒಬ್ಬ ಸಂಗೀತಗಾರನ ಚಲನಚಿತ್ರದಲ್ಲಿ ಒಬ್ಬ ನೈಜ ಸಂಗೀತಗಾರನೇ ನಾಯಕನಾಗಿರುವುದು ಅಪರೂಪವೇ ಸರಿ. ಆದರೆ ಆ ನಾಯಕ ೮೦ ವಸಂತಗಳನ್ನು ದಾಟಿರುವ ಹಿರಿಯನಾಗಿರುವುದು ಇನ್ನೂ ಅಪರೂಪದ ವಿಷಯ. ಫ್ರಾನ್ಸಿಸ್ಕೋ ವಾರ್ಗಾಸ್ ನಿರ್ದೇಶನದ ಚಲನಚಿತ್ರ ಎಲ್ ವಯೊಲೀನ್ನ ವೈಶಿಷ್ಟ್ಯಗಳ ಪಟ್ಟಿ ಇಲ್ಲಿಗೇ ಸಮಾಪ್ತಿಯಾಗುವುದಿಲ್ಲ. ೨೦೦೭ರಲ್ಲಿ ಬಿಡುಗಡೆಯಾದಾಗಿಂದ ಇಲ್ಲಿಯವರೆಗೆ ಈ ಚಲನಚಿತ್ರ ಒಟ್ಟು ೪೬ ಅಂತರ್ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ತಮಾಷೆಯ ಮಾತೆಂದರೆ, ಇದು ಈ ನಿರ್ದೇಶಕನ ಪ್ರಪ್ರಥಮ ಚಲನಚಿತ್ರ!! ಇಷ್ಟೆಲ್ಲ ವಿಶೇಷಗಳಿರುವ ಈ ಚಲನಚಿತ್ರವನ್ನು ಕಪ್ಪು-ಬಿಳುಪಿನಲ್ಲಿ ಚಿತ್ರೀಕರಿಸಲಾಗಿದೆ ಎನ್ನುವುದು ಈಗಿನ ಅಲ್ಟ್ರಾ-ಸ್ಪೆಶಲ್ ಎಫೆಕ್ಟ್‌ಗಳಿಗೆ (ಹಾ! ಅವತಾರ್!) ಒಗ್ಗಿಹೋಗಿರುವ ಪ್ರೇಕ್ಷಕರಿಗೆ ವಿಚಿತ್ರ ಅನ್ನಿಸಬಹುದಾದರೂ ಚಲನಚಿತ್ರ ಮುಗಿದ ನಂತರ ಇದು ಒಂದು ಕೊರತೆ ಅನ್ನಿಸುವುದೇ ಇಲ್ಲ ಎನ್ನುವುದು ಮತ್ತೂ ಒಂದು ವಿಶೇಷ.

ಚಲನಚಿತ್ರದ ಕಥೆ 1970ರ ದಶಕದ ಮೆಕ್ಸಿಕನ್ ಹಳ್ಳಿಗಳ ಜೀವನ ಮತ್ತು ಸೇನೆಯ ದಬ್ಬಾಳಿಕೆಯ ಸುತ್ತ ಕೇಂದ್ರೀಕೃತವಾಗಿದೆ. ಮೊಂಡುಗೈಯ ಡಾನ್ ಪ್ಲುಟಾರ್ಕೋ, ಆತನ ಮಗ ಜೆನೇರೋ ಮತ್ತು ಮೊಮ್ಮಗ ಲೂಶಿಯೋ ಮೇಲ್ನೋಟಕ್ಕೆ ಬಡ ಸಂಗೀತಗಾರರು, ನಗರಕ್ಕೆ ದಿನವೂ ಪ್ರಯಾಣ ಮಾಡಿ ಅಲ್ಲಿ ವಯೊಲಿನ್ ನುಡಿಸಿ, ಜನಪದ ಗೀತೆಗಳನ್ನು ಹಾಡಿ ಅಷ್ಟಿಷ್ಟು ಕಾಸು ಸಂಪಾದನೆ ಮಾಡಿ ಹೊಟ್ಟೆಹೊರೆದುಕೊಳ್ಳುವವರು. ಆದರೆ ಒಳಗಿಂದ ಇವರು ತಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಸೇನೆಯ ವಿರುದ್ಧದ ಕ್ಯಾಂಪೆಸೀನಾ ರೈತ ಚಳುವಳಿಯಲ್ಲಿ ಸಕ್ರಿಯರಾಗಿರುತ್ತಾರೆ ಮತ್ತು ಇದಕ್ಕಾಗಿ ಶಸ್ತ್ರಸಜ್ಜಿತ ಯುದ್ಧಗಳನ್ನೂ ಮಾಡುತ್ತಿರುತ್ತಾರೆ. ಇದರ ಸುಳಿವು ಸಿಕ್ಕಿದ ಸೇನೆ ಒಮ್ಮೆ ಇವರು ನಗರಕ್ಕೆ ಹೋಗಿದ್ದಾಗ ಹಳ್ಳಿಯ ಮೇಲೆ ದಾಳಿ ಮಾಡುತ್ತದೆ. ದಾಳಿಯಲ್ಲಿ ಜೆನೇರೋನ ಹೆಂಡತಿ ಮಡಿಯುತ್ತಾಳೆ. ಹಳ್ಳಿಯಲ್ಲಿದ್ದವರೆಲ್ಲರೂ ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಸಮಯ ಸಿಗದೆ ಹತ್ತಿರದ ಸಿಯೆರಾ ಬೆಟ್ಟಗಳಲ್ಲಿ ಬಚ್ಚಿಟ್ಟುಕೊಳ್ಳಬೇಕಾಗಿ ಬರುತ್ತದೆ.

ಪ್ಲುಟಾರ್ಕೋನ ಹಳ್ಳಿಯಲ್ಲಿ ಸೇನೆ ಬೀಡುಬಿಡುತ್ತದೆ. ಈ ದಾಳಿಗೆ ಪ್ರತಿದಾಳಿ ನಡೆಸುವ ಸಲುವಾಗಿ ಜೆನೇರೋ ಚಳುವಳಿಕಾರರೊಂದಿಗೆ ಹೋಗಬೇಕಾಗಿ ಬರುತ್ತದೆ. ಅವರಿಗೆ ಮದ್ದುಗುಂಡುಗಳ ಕೊರತೆ. ಎಲ್ಲವನ್ನೂ ಈಗ ಸೇನೆಯ ವಶವಾಗಿರುವ ಪ್ಲುಟಾರ್ಕೋನ ಕಬ್ಬಿನ ಗದ್ದೆಗಳಲ್ಲಿ ಹೂಳಲಾಗಿದೆ. ಮಗನನ್ನು ನಿರುದ್ವಿಗ್ನನಾಗಿ ಗೆರಿಲ್ಲಾ ಚಳುವಳಿಗೆ ಕಳುಹಿಸಿಕೊಡುವ ಡಾನ್ ಪ್ಲುಟಾರ್ಕೋ ಮೊಮ್ಮಗನನ್ನು ಇತರೆ ಸಂತ್ರಸ್ತರ ಜತೆ ಕ್ಯಾಂಪಿನಲ್ಲಿ ಬಿಟ್ಟು ತನ್ನ ವಯೊಲಿನಿನೊಡನೆ ಕತ್ತೆಯನ್ನೇರಿ ಹಳ್ಳಿಗೆ ವಾಪಾಸು ಮರಳುತ್ತಾನೆ. (ಈ ಹೊತ್ತಿಗೆ ನನಗೆ ಈ ಮನುಷ್ಯನ ತಲೆ ಸರಿ ಇದೆಯೆ ಅನ್ನಿಸತೊಡಗಿತು.) ಸೈನಿಕರಿಗೆ ಈ ಸರಳ ಸ್ವಭಾವದ ಸಂಗೀತ ನುಡಿಸುವ ಮುದುಕ ಇಷ್ಟವಾಗತೊಡಗುತ್ತಾನೆ. ಒಮ್ಮೆ ಈತನ ಸಂಗೀತ ಕೇಳಿದ ಸೇನೆಯ ಕ್ಯಾಪ್ಟನ್ ಮಂತ್ರಮುಗ್ಧನಾಗಿ ಈತನಿಗೆ ಪ್ರತಿದಿನವೂ ಮತ್ತೆ ಬರಲು ತಿಳಿಸುತ್ತಾನೆ. ತನ್ನ ಸಂಗೀತದ ಮೂಲಕ ಕ್ಯಾಪ್ಟನ್‌ನ ವಿಶ್ವಾಸ ಗಳಿಸುವ ಪ್ಲುಟಾರ್ಕೋ ತನ್ನ ಗದ್ದೆಗಳಿಗೆ ಹೋಗಲು ಅನುಮತಿ ಪಡೆದುಕೊಂಡು ಅಲ್ಲಿ ಹೂತಿಟ್ಟ ಮದ್ದುಗುಂಡುಗಳನ್ನು ಹೊರಗೆ ಸಾಗಿಸತೊಡಗುತ್ತಾನೆ. ಸೇನೆಯಲ್ಲಿಯೂ ಗೆರಿಲ್ಲಾಗಳ ಪರವಾಗಿರುವವರಿರುವುದು ಆತನಿಗೆ ತಿಳಿಯುತ್ತದೆ. ಆದರೆ ಕ್ಯಾಪ್ಟನ್ ದಂಗೆಕೋರರ ವಿಷಯದಲ್ಲಿ ನಿರ್ದಯಿ. ಪ್ಲುಟಾರ್ಕೋನ ಈ ಕಣ್ಣುಮುಚ್ಚಾಲೆ ಆಟ ಎಷ್ಟುದಿನ ನಡೆದೀತು? ತಾನು ಬೆಂಕಿಯೊಡನೆ ಆಟವಾಡುತ್ತಿರುವುದು ಅವನಿಗೂ ತಿಳಿದಿದೆ.

ಪ್ಲುಟಾರ್ಕೋನ ಪಾತ್ರ ವಹಿಸಿರುವ ಮೆಕ್ಸಿಕನ್ ವಯೋಲಿನಿಸ್ಟ್ ಡಾನ್ ಏಂಜೆಲೋ ತವಿರಾ ಮೊದಲ ಸಾರಿ ನಟಿಸುತ್ತಿರುವರೆಂಬ ವಿಷಯವನ್ನು ನಂಬಲೇ ಸಾಧ್ಯವಾಗದು. ಜೀವನದಲ್ಲಿ ನಿರಂತರವಾಗಿ ತೊಂದರೆಗಳನ್ನು ಎದುರಿಸುತ್ತ ಬಂದಿದ್ದರೂ ಬಗ್ಗದೆ ದೃಢವಾಗಿ ನಿಲ್ಲುವ ಈ ವಯೋವೃದ್ಧನ ಪಾತ್ರ ಪ್ರೀತಿಯುಕ್ಕಿಸಿಬಿಡುತ್ತದೆ. ಚಲನಚಿತ್ರದ ಹೆಚ್ಚಿನ ನಟನಟಿಯರು ವೃತ್ತಿಪರರಲ್ಲ. ಚಲನಚಿತ್ರದಲ್ಲಿ ಬಡ ಮೆಕ್ಸಿಕನ್ ರೈತರ ಕಷ್ಟನಷ್ಟಗಳನ್ನು ನಿರ್ದಾಕ್ಷಿಣ್ಯವಾಗಿ, ನೈಜ ರೀತಿಯಲ್ಲಿ ಬಿಂಬಿಸಲಾಗಿದೆ. ಅವರಿಗೆ ತಮ್ಮ ನೆಲ ತಮ್ಮ ಜೀವಕ್ಕಿಂತ ಪ್ರಿಯವಾದ್ದು. ಒಂದು ಪಾತ್ರ ಹೇಳುವಂತೆ ಹೋರಾಟ ನಮ್ಮ ಹಣೆಬರಹ. ಏಕೆಂದರೆ ಈ ನೆಲ ನಮ್ಮದು.

ಚಲನಚಿತ್ರದಲ್ಲಿ ಮೆಚ್ಚುಗೆಯಾಗುವ ಇನ್ನೊಂದು ಪಾತ್ರವೆಂದರೆ ಪ್ಲುಟಾರ್ಕೋನ ಮೊಮ್ಮಗ ಲೂಶಿಯೋನದು. ಪ್ಲುಟಾರ್ಕೋ ಮತ್ತು ಜೆನೇರೋರ ಹೋರಾಟಗಳಿಗೆ ಸಾಕ್ಷಿಯಾಗಿರುವ ಈ ಎಳೆಯನಿಗೆ ಎಲ್ಲದರ ಬಗೆಗೂ ಅಪಾರ ಕುತೂಹಲ. ಆತನ ಎಳೆಯ ಕಂಗಳಲ್ಲಿ ಸಾವಿರಾರು ಪ್ರಶ್ನೆಗಳು. ತನ್ನ ಪೀಳಿಗೆಯ ಅನಿಶ್ಚಿತ ಭವಿಷ್ಯವನ್ನು ಹೆಗಲ ಮೇಲೆ ಹೊತ್ತಂತೆ ಕಾಣುವ ಲೂಶಿಯೋನಲ್ಲಿ ವಯಸ್ಸಿಗೆ ಮೀರಿದ ಹಿರಿತನ, ಜವಾಬ್ದಾರಿ ಹೊರುವ ಸಾಮರ್ಥ್ಯಗಳಿವೆ. ಒಂದು ಲೆಕ್ಕದಲ್ಲಿ ಪುಟ್ಟ ಲೂಶಿಯೋ ಪ್ಲುಟಾರ್ಕೋ ಮತ್ತು ಜೆನೇರೋರ ಮುಂದುವರಿದ ಭಾಗದ ತರಹ ಕಾಣುತ್ತಾನೆ.

ಸಂಗೀತ ಮತ್ತು ಹಿಂಸೆ. ಒಂದಕ್ಕೊಂದಕ್ಕೆ ಸಂಪೂರ್ಣ ವಿರುದ್ಧವಾದವು. ಆದರೆ ಈ ಚಲನಚಿತ್ರದಲ್ಲಿ ಈ ವೈರುಧ್ಯಗಳು ಒಂದಕ್ಕೊಂದು ಬಿಡಲಾರದಂತೆ ತಳುಕುಹಾಕಿಕೊಂಡಿವೆ. ಒಟ್ಟಿನಲ್ಲಿ ರಾಜಕೀಯ ಮತ್ತು ಸಂಗೀತದ ಅಪರೂಪದ ಮೇಳೈಸುವಿಕೆಯನ್ನು ಇಲ್ಲಿ ಕಾಣಬಹುದು. ಜತೆಗೇ ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ಮೌಲ್ಯಗಳು, ಜನಪದ ರೂಪದ ಐತಿಹ್ಯಗಳು, ಸಾಂಸ್ಕೃತಿಕ ಸೂಕ್ಷ್ಮಗಳು ಸಾಗಿಸಲ್ಪಡುವುದು, ಆ ಮೂಲಕ ಅವುಗಳು ಉಳಿದುಕೊಂಡು ಹೋಗುವುದನ್ನು ನಾಜೂಕಾಗಿ ಬಿಂಬಿಸಿರುವುದು ಮನಸ್ಸನ್ನು ಆರ್ದ್ರಗೊಳಿಸುತ್ತದೆ. ಇತ್ತೀಚಿನ ಬಹುಚರ್ಚಿತ ಚಲನಚಿತ್ರಗಳಲ್ಲಿ ಎಲ್ ವಯೊಲೀನ್ ಮುಂಚೂಣಿಯಲ್ಲಿದೆ ಎನ್ನುವುದಂತೂ ನಿಜ. ನೀವು ನೋಡಲೇಬೇಕಾದ ಚಲನಚಿತ್ರವಿದು ಅಂತ ನಾನು ಹೇಳಲೇಬೇಕೆ?

Advertisements