ಇದು ಚಿತ್ರೋತ್ಸವಗಳ ಚಿತ್ರಗಳ ಮುಂದಿನ ಸರಣಿ. ನೋಡಲೇಬೇಕಾದ ಚಿತ್ರವೊಂದರ ಬಗ್ಗೆ ಬರೆದಿರುವ ಬರಹ. ಓದಿ ಹೇಳಿ.

ಇತ್ತೀಚಿನ ಸಿನೆಮಾಗಳ ’ಚಮತ್ಕಾರ’ ಹಾಗೂ ’ಬಲತ್ಕಾರ’ಗಳನ್ನು ನೋಡುತ್ತ, ಜಸ್ಟ್ ಮಾತ ಮಾತಲ್ಲಿ ಅವರಿವರ ಜೊತೆ ಹರಟುತ್ತ, ಮೂರಲ್ಲ ಮೂವತ್ತು ಈಡಿಯಟ್ಗಳಿರಬೇಕಿತ್ತು ಎಂದು ಹಾರಿಸುತ್ತ, ಇಲ್ಲೂ ಒಬ್ಬ ’ಚತುರ’ನಂತವನಿದ್ದಾನೆ ಎಂದು ಜೋಕುತ್ತ, ಒಬ್ಬ ಅಮೀರನನ್ನು-ಇನ್ನೊಬ್ಬ ಗರೀಬನನ್ನೂ ಹೊಗಳುತ್ತ, ಔರೊ ಪಾತ್ರಕ್ಕೆ ಬಚ್ಚನ್ನೇ ಯಾಕಾಗಬೇಕಿತ್ತು ಅಂದವರನ್ನು ಒಪ್ಪುತ್ತ, ರಾಂಚೋಡದಾಸ್ ಶ್ಯಾಮಲ್ದಾಸ್ ಚಂಚಡ್ ಇಂಡಿಯಾದಲ್ಲಿ (ಭಾರತ ಅಂದ್ರೆ ಸರಿಯಾಗಲ್ಲ ಬಿಡಿ) ಲಕ್ಷಕ್ಕೊಬ್ಬನೂ ಸಿಗಲಿಕ್ಕಿಲ್ಲ ಎಂದು ತಲೆ ತಿನ್ನುತ್ತ… ಇತ್ತೀಚಿಗೆ ನೋಡಿದ ಚ ಲ ನ ಚಿ ತ್ರ ಗಳ ಕುರಿತು ನಾಕಕ್ಷರ ಬರೆದುಬಿಡಬೇಕೆಂಬ ಹುಕಿ ಬೆಳೆದುಬಿಟ್ಟಿತು.

ಬರೆಯದೆ ಬಹಳ ದಿನವಾದ ಕಾರಣಕ್ಕೋ ಅಥವಾ ಶಿವರಾತ್ರಿಯ ಜಾಗರಣೆಗೆ ಪೂರ್ವ ತಯಾರಿಯೋ ಎಂಬಂತೆ ನಡು ಮಧ್ಯಾನ್ಹದ ಹೊತ್ತಿನಲ್ಲಿ ಬಹಳ ದಿನಗಳ ನಂತರ ಸಿಕ್ಕ ಖಾಲಿ ಸಮಯವನ್ನು ಬರೆದು ಬಿಸಾಕುವ ಅಭೂತಪೂರ್ವ ಕೆಲಸಕ್ಕೆ ಮೀಸಲಿಡಬೇಕು ಅಂದುಕೊಂಡಾಗ ಎದುರಿಗಿದ್ದುದು, ’ಹಾದರಗಿತ್ತಿ ಅವ್ಳು, ಹೋದ್ರೆ ಬರುದೇ ಇಲ್ಲ ನೋಡು. ಯಾರೋ ಕ್ಯಾಬರೆ ಮಾಡು ಹುಡ್ಗಿ ತಂದು ನಂಗೆ ಕಟ್ಟಬಿಟ್ಟರೆ…’ ಎಂದು ಕಂಟ ಭರ್ತಿ ಕುಡಿದು, ಊರಿಂದ ಫೋನಿಸಿ ದೂರು ಕೊಟ್ಟ ’ರಾಮ’ ಅನ್ನುವ ಆಸಾಮಿಯ ಪ್ರವರಗಳು, ’ಕಂಪೆರಿಟಿವ್ ಅನಲಿಸಿಸ್ ಹಾಗೂ ಕುದುರೆ ಲದ್ದಿ’ ಎಂಬ ಹೊಚ್ಚ ಹೊಸ ಥಿಯರಿ, ಹಾಗೂ ಇತ್ತೀಚಿಗೆ ನೋಡಿದ ಸಿನೆಮಾಗಳು. ಸಿನೆಮಾ ಆಯ್ದುಕೊಳ್ಳುವ ಸಾಹಸ ಮಾಡಿ ಮುಂದುವರೆಯುತ್ತಿದ್ದೇನೆ. ಒಪ್ಪಿಸಿಕೊಳ್ಳಿ:

ಇತ್ತೀಚಿನ ಹೆಚ್ಚಿನ ಸಿನೆಮಾಗಳನ್ನೂ, ಅವುಗಳ ಕುರಿತ ಬರಹಗಳನ್ನೂ ಓದಿ, ನೋಡಿದ ಎಲ್ಲ ಸಿನೆಮಾಗಳ ’ಮಿಸಳ್ಭಾಜಿ’ ನೆನಪನ್ನು ಎದುರಿಗಿಟ್ಟುಕೊಂಡರೆ ಬಾಕಿ ಎಲ್ಲಾ ಚತುರರರಿಗಿಂತ ಇಲಿ ಹಿಡಿಯುವ ಪ್ರಸಂಗದ ’ಎಲಿಪತ್ತಾಯಂ’ ಎಂಬ ಅಡೂರ್ ಗೋಪಾಲಕೃಷ್ಣರ ಚಿತ್ರ ಎದುರು ಬಂತು. ಅದೇ ನನ್ನ ವಸ್ತು ಎಂದುಕೊಂಡರೆ, ಅದನ್ನೂ ಮೀರಿ ಇನ್ನೊಂದು ಮೂವತ್ನಾಲ್ಕು ನಿಮಿಷದ ಚಿತ್ರ ತಲೆಗೆ ಬಂತು. ಆದಕಾರಣ, ಎಲಿಪತ್ತಾಯಂ ಹಾಗೂ, RAT TRAP ಎಂಬ ಅದರ ಮತ್ತೊಂದು ರೂಪವನ್ನೂ ಮತ್ತೆಂದಾದರೂ ತಡಕಿಕೊಳ್ಳೋಣ ಎಂಬ ವಿಚಾರದೊಂದಿಗೆ ವಿಷಯಕ್ಕೆ ಬರುತ್ತೇನೆ. ನೋಡಿಲ್ಲವಾದರೆ ಈ ಚಿತ್ರವನ್ನೊಮ್ಮೆ ನೋಡಿ ನೀವು. ಅದರ ಕುರಿತು ಬರೆದ ನಂತರವಷ್ಟೇ ನೋಡಬೆಕೆಂದೇನೂ ಇಲ್ಲವಲ್ಲ? ಅಷ್ಟಕ್ಕೂ, ನೀವು ನೋಡಿರದ ಸಿನೆಮಾವೇನೂ ಆಗಿರಲಿಕ್ಕಿಲ್ಲ ಅದು…

ನಾನೀಗ ಹೇಳಬೇಕಿರುವುದು ಮೂವತ್ನಾಲ್ಕು ನಿಮಿಷಗಳ ಫ್ರೆಂಚ್ ಸಿನೆಮಾ ಕುರಿತು. ‘Albert Lamorisse’ ಎಂಬ ನಿರ್ದೇಶಕ ತಾನೇ ಚಿತ್ರಕಥೆ ಬರೆದು, ತನ್ನಿಬ್ಬರು ಚಿಕ್ಕ ಮಕ್ಕಳನ್ನೇ ಹಾಕಿಕೊಂಡು ತಯಾರಿಸಿದ ಮಕ್ಕಳಲ್ಲದವರೂ ನೋಡಲೇಬೇಕಾದ ಮಕ್ಕಳ ಸಿನೆಮಾ ಅದು. Oscar, cannes ಪ್ರಶಸ್ತಿಗಳನ್ನು ಪಡೆದ ೧೯೫೬ರ ಸಣ್ಣ ಚಿತ್ರ ಅದು. ಸಂಗೀತವಿದೆ ಅಲ್ಲಿ. ಮಾತಿಗೆ ಹೆಚ್ಚು ಅವಕಾಶವಿಲ್ಲ. ಮಕ್ಕಳಿದ್ದಾರೆ, ದೊಡ್ಡವರಿದ್ದಾರೆ ಆದರೆ ಅವರೆಲ್ಲರನ್ನೂ ಮೀರಿದ ’ಕೆಂಪು ಬಲೂನ್’ ಇದೆ. ಅದಕ್ಕೊಬ್ಬ ಜೊತೆಗಾರ ಹುಡುಗನಿದ್ದಾನೆ – ಪಾಸ್ಕಲ್ ಅವನ ಹೆಸರು. ತಾನು ಶಾಲೆಗೆ ಹೊರಟ ಸಮಯದಲ್ಲಿ ಸಿಕ್ಕ ಈ ಹೊಸ ಮಿತ್ರ, ತನ್ನಂತೇ ಯೋಚಿಸುತ್ತಾನೆ, ಆತನಿಗೂ (ಅದಕ್ಕೂ?) ಬುದ್ಧಿಯಿದೆ ಎಂದು ತಿಳಿದುಕೊಳ್ಳುತ್ತಾನೆ. ಅಲ್ಲಿಂದ ಹುಡುಗನದು ಹಾಗೂ ಬಲೂನಿನದು ಆಟ. ಮನೆ, ಶಾಲೆ, ರಸ್ತೆ, ಮಕ್ಕಳು, ಅವರು-ಇವರು ಎಲ್ಲ ಬರುತ್ತಾರೆ ನಡುವೆ. ಕೆಂಪು ಬಲೂನಿನಂತೆ ಬುದ್ಧಿಯಿರುವ ’ನೀಲಿ ಬಲೂನೊಂದು’ ಬಂದು ಹೋಗುತ್ತದೆ.

ತನ್ನದೇ ಆದ ವೇಗ ಪಡೆದುಕೊಳ್ಳುವ ಚಿತ್ರ ಕೆಲವೇ ಸಮಯದಲ್ಲಿ ಒಂದಿಷ್ಟು ’ಹೊಡೆದಾಟ’ವನ್ನೂ ಕಾಣಿಸುತ್ತದೆ ತನ್ನದೇ ಆದ ನೆಲೆಯಲ್ಲಿ. ಪಾಸ್ಕಲ್ ಹಾಗೂ ಆತನ ಬಲೂನಿನ ವೈರಿ ಹುಡುಗರಿಂದಾಗಿ ’ಕೆಂಪು ಬಲೂನು’ ತನ್ನ ಜೀವ ಕಳೆದುಕೊಳ್ಳುವ ಪ್ರಸಂಗ ಬಂದೊದಗುತ್ತದೆ. ನಿರ್ದೇಶಕನ ಸಾಮರ್ಥ್ಯವಿರುವುದೇ ಅಲ್ಲಿ – ಬಲೂನು ಜೀವ ಕಳೆದುಕೊಳ್ಳುವ ಸನ್ನಿವೇಶ ಬರುವಷ್ಟರಲ್ಲಿ, ಅದು ಹೀಲಿಯಂ ತುಂಬಿದ ಕೇವಲ ಕೆಂಪು ಬಲೂನು ಎಂಬುದನ್ನೂ ಮರೆತು ನೀವು ಒಳಗೊಳಗೇ ಚಿತ್ರದೊಳಗೆ ಸೇರಿಬಿಟ್ಟಿರುತ್ತೀರಿ, ಖಂಡಿತ.

ಪ್ಯಾರಿಸಿನಲ್ಲಿ ನಡೆದ ಚಿತ್ರೀಕರಣದ ಕೊನೆಯಲ್ಲಿ ಕೆಂಪು ಬಲೂನು ಜೀವ ಕಳೆದುಕೊಂಡರೂ ಸುತ್ತಲಿನ ಹಲವಾರು ಬಣ್ಣ ಬಣ್ಣದ ಬಲೂನುಗಳು ಒಟ್ಟೊಟ್ಟಿಗೆ ಬಂದು ಆತನನ್ನು ಪ್ಯಾರಿಸ್ ಅಂಗಳದಿಂದ ಮೇಲಕ್ಕೆ ಒಯ್ಯುತ್ತವೆ ಗಾಳಿಯಲ್ಲಿ. ಮೊವತ್ನಾಲ್ಕಿ ನಿಮಿಷ ಮೂರು ನಿಮಿಷದಂತೆ ಭಾಸವಾಗುತ್ತದೆ ಅಷ್ಟರಲ್ಲಿ. ಇನ್ನೂ ನೋಡಿಲ್ಲವಾದರೆ ಆದಷ್ಟು ಬೇಗ ನೋಡಿ – ’ದಿ ರೆಡ್ ಬಲೂನ್’ ಎಂಬ ಫ್ರೆಂಚ್ ಸಿನೆಮಾವನ್ನು. ಅದು ಕೇವಲ ಮಕ್ಕಳ ಸಿನೆಮಾವಷ್ಟೇ ಅಲ್ಲ, ಶಾಂತವಾಗಿ ಸಗುವ ಅಂದೆಂದೊ ಹುಟ್ಟಿಕೊಂಡ ’capitalism’ ಕುರಿತಾದ ಸುಂದರ ರೂಪಕ.

ಮಕ್ಕಳ ಜೊತೆ ಕುಳಿತು ದೊಡ್ದವರು ನೊಡಲೆಬೇಕಾದ ಸುಂದರ ಚಿತ್ರ – ’ದಿ ರೆಡ್ ಬಲೂನ್’

Advertisements