ಸರ್ವಮಂಗಳಾ ಚಿತ್ರ ಬಹಳ ವಿಶಿಷ್ಟವಾದುದು. ಚದುರಂಗರ ಕಾದಂಬರಿ ಆಧರಿಸಿದ ಚಿತ್ರ. ಆಗ ಕಾದಂಬರಿ, ಕಥೆಗಳನ್ನು ಆಧರಿಸಿ ಚಿತ್ರ ತೆಗೆಯುವ ಪರಂಪರೆ ಶುರುವಾಗಿತ್ತು. ಕನ್ನಡದ ಹೊಸ ಅಲೆಯ ಚಿತ್ರ ಅಥವಾ ಪ್ರಾಯೋಗಿಕ ನೆಲೆಯ ಚಿತ್ರ (ಟ್ರೆಂಡ್ ಸೆಟ್ಟರ್) ಬೆಳ್ಳಿಮೋಡ ಅದೇ ವರ್ಷದಲ್ಲೇ ಬಿಡುಗಡೆಯಾಗಿತ್ತು.

ಅದೇ ವರ್ಷದಲ್ಲಿ ಬಿಡುಗಡೆಯಾದ ಸರ್ವಮಂಗಳಾಕ್ಕೂ ಪ್ರಶಸ್ತಿ ಬಂದಿತು. ಅಂದರೆ ಚದುರಂಗರು ಅತ್ಯುತ್ತಮ ಚಿತ್ರಕಥೆಯ ಪ್ರಶಸ್ತಿಗೆ ಭಾಜನರಾಗಿದ್ದರು. ಚದುರಂಗರು ಒಳ್ಳೆಯ ಕಾದಂಬರಿಕಾರರು, ಕನ್ನಡ ಸಾಹಿತ್ಯದ ಪ್ರಧಾನ ಲೇಖಕರು. ಆದರೆ ಸಿನಿಮಾದ ತಂತ್ರಗಳು ಅವರಿಗೆ ತಿಳಿದಿರಲಿಲ್ಲ, ಸಿನಿಮಾ ಮಾಡಬೇಕೆಂಬ ಹುಮ್ಮಸ್ಸಿತ್ತು. ಹಾಗಾಗಿ ಸಿನಿಮಾದ ತಂತ್ರಗಳನ್ನು ಅರಿಯುವ ಗೋಜಿಗೆ ಹೋಗದೇ ಪ್ರಯತ್ನ ಆರಂಭಿಸಿ ಮುಗಿಸಿಬಿಟ್ಟರು. ಹಾಗಾಗಿ ತಾಂತ್ರಿಕವಾಗಿ ಗಮನಿಸಿದರೆ ಆ ಸಿನಿಮಾದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಸಿನಿಮಾ ನೆಲೆಯಲ್ಲಿ ನೋಡುವುದು ಕಷ್ಟ, ಅದರರ್ಥ (ಸಿನೆಮಿಟಾಕಲಿ)ಸೂಕ್ತವಾಗಿಲ್ಲ. ಒಟ್ಟೂ ಅದಕ್ಕೂ ಪ್ರಶಸ್ತಿ ಬಂದಿತು. ಈ ವಾಕ್ಯದ ಅರ್ಥ ಬಹುಶಃ ಆಗಿನ ಸಂದರ್ಭದಲ್ಲಿ ಎಲ್ಲರೂ ಗಮನಿಸುತ್ತಿದ್ದುದು ಕಥಾವಸ್ತುವನ್ನೇ ಹೊರತು ಸಿನಿಮಾ ತಾಂತ್ರಿಕ ಅಂಶಗಳನ್ನಲ್ಲ ಎಂಬುದು ಸ್ಪಷ್ಟವಾಗುತ್ತದೆ.

ದೊರೆಸ್ವಾಮಿಯವರನ್ನು ಇಲ್ಲಿ ನೆನೆಯಲೇಬೇಕು. ಚಿತ್ರರಂಗಕ್ಕೇ ಬಹಳ ಹಿರಿಯರು. ದೂರದ ಚೆನ್ನೈನಲ್ಲಿದ್ದು (ಆಗ ಚಿತ್ರರಂಗ ಇದ್ದದ್ದೆ ಅಲ್ಲಿ) ಉಪವಾಸ, ವನವಾಸ ಮಾಡಿ ಕನ್ನಡ ಚಿತ್ರರಂಗಕ್ಕೆ ದುಡಿದವರು. ಬಹಳ ಒಳ್ಳೆಯ ತಾಂತ್ರಿಕ ಕುಶಲಗಾರ. ಕನ್ನಡದ ಮೇರುನಟ ಡಾ. ರಾಜ್‌ಕುಮಾರ್, ನಟಿ ಕಲ್ಪನಾ, ಹಿರಿಯ ನಟ ಕೆ.ಎಸ್. ಅಶ್ವತ್ಥ್ ಅವರೆಲ್ಲಾ ದೊರೆಸ್ವಾಮಿಯವರನ್ನು ಸಂಭೋಧಿಸುತ್ತಿದ್ದುದೇ ಏನಪ್ಪಾ॒ ಎಂದು. ಅಷ್ಟೊಂದು ಗೌರವ ಅವರ ಮೇಲೆ. ಬಹಳಷ್ಟು ಸಂದರ್ಭಗಳಲ್ಲಿ ರಾಜ್‌ಕುಮಾರ್ ಅವರು ಹೆಚ್ಚು ಸಲಹೆ ಪಡೆಯುತ್ತಿದ್ದುದು ದೊರೆಸ್ವಾಮಿಯವರ ಬಳಿಯೇ.

ಸುಂದರಕೃಷ್ಣ ಅರಸ್, ಸುಂದರರಾಜು, ಜಯರಾಮು ಅವರಿಗೆ ಸಿನಿಮಾ ರಂಗಕ್ಕೆ ಪರಿಚಯಿಸಿದ ಕೀರ್ತಿ ದೊರೆಸ್ವಾಮಿಯವರಿಗೆ ಸಲ್ಲಬೇಕು. ಅದೂ ಸರ್ವಮಂಗಳಾ ಚಿತ್ರದ ಮೂಲಕ. ಆ ರೀತಿ ತಯಾರಿ ಮಾಡಿದ ದೊರೆಸ್ವಾಮಿ ಸಹ ನಿರ‍್ದೇಶಕರಾಗಿಯೂ ಕೆಲಸ ಮಾಡಿದರು.

ಕೆ.ಎಸ್. ನರಸಿಂಹಸ್ವಾಮಿಯವರ ನನ್ನವಳು ನನ್ನದೆಯ ಹೊನ್ನನಾಡುವಳು.॒, ಉಂಡಾಡಬಹುದುಓ॒ಡಿ ಬಾರೋ(ಮಗುವಿಗೆ ಕಲ್ಪನಾ ಹೇಳುವಂಥದ್ದು) ಈ ಹಾಡುಗಳೆಲ್ಲಾ ಅದರಲ್ಲಿ ಬಳಕೆಯಾದವು. ಆ ಮಗುವಿನ ಕಂಠದಾನಿಯಾಗಿದ್ದವರು ಕಲಾವಿದೆ ಸರ್ವಮಂಗಳಾ. ಆಪ್ತ ವಲಯದಲ್ಲಿ ಅವರು ಸರ್ವಿ. ನಂತರ ಕನ್ನಡ ಚಿತ್ರರಂಗದಲ್ಲಿ ಮಹತ್ವದ ಕಂಠದಾನ ಕಲಾವಿದರಾಗಿ ದುಡಿದರು.

ಕಲ್ಪನಾಗೆ ಗೂಳಿ ಅಟ್ಟಿಸಿಕೊಂಡು ಬರುವ ಸನ್ನಿವೇಶವಿದೆ. ಏನು ಮಾಡಿದರೂ ಗೂಳಿ ಅಟ್ಟಿಸಿಕೊಂಡು ಹೋಗ್ತಿರಲಿಲ್ಲ. ಆ ಸನ್ನಿವೇಶವನ್ನು ಚಿತ್ರೀಕರಿಸಲೇಬೇಕಿತ್ತು. ಸರಿ, ಒಂದು ನಿರ್ಧಾರಕ್ಕೆ ಬಂದರು. ಕೊನೆಗೆ, ಆ ಹಳ್ಳಿಯವರೇ (ಚಿತ್ರೀಕರಣದ ಸ್ಥಳದಲ್ಲಿ) ಸಲಹೆ ಕೊಟ್ಟರಂತೆ. ಒಂದು ಹಸುವನ್ನು ಗೂಳಿ ಮುಂದೆ ಅಟ್ಟಿಸಿಕೊಂಡು ಹೋಗಿ ಎಂದರಂತೆ. ಅದರಂತೆಯೇ ಮಾಡಿದಾಗ ಕಾರ‍್ಯ ಸಿದ್ಧಿಸಿತು. ಹಸುವನ್ನು ಅಟ್ಟಿಸಿಕೊಂಡು ಬರುವ ಗೂಳಿಯನ್ನು ಕಲ್ಪನಾಳನ್ನು ಓಡಿಸಿಕೊಂಡು ಬರುವಂತೆ ಚಿತ್ರೀಕರಿಸಿದರು. ಅಂದರೆ ಹಸುವನ್ನು ಬಿಟ್ಟು ಶೂಟ್ ಮಾಡಿ ಅದನ್ನು ಕಲ್ಪನಾಗೆ ಸೇರಿಸಿ ಸಂಕಲಿಸಿದ್ದು (ಎಡಿಟ್) ಅಂದಿನ ಕಾಲದಲ್ಲಿ ವಿಶೇಷವೇ.

ಅಶ್ವತ್ಥ್ ಬಹಳ ಹಿರಿಯ, ಹಾಗೂ ವಿಶೇಷ ಪಾತ್ರದ ಮಾಡಿದ್ದಾರೆ. ಉಬ್ಬುಹಲ್ಲಿನ ವ್ಯಕ್ತಿ. ವಿಶಿಷ್ಟವಾಗಿ ಮೇಕಪ್ ಮಾಡಲಾಗಿದೆ. ಆ ಪಾತ್ರಕ್ಕೆ ಹೇಳಿ ಮಾಡಿಸಿದ್ದಂತಿತ್ತು. ಬಹಳ ವಿಶಿಷ್ಟವಾಗಿದ್ದ ಆ ಪಾತ್ರದಿಂದ ಅಶ್ವತ್ಥ್ ಜನಪ್ರಿಯರಾದರು.

ಒಂದು ಮಾತು ಇಲ್ಲಿ ಹೇಳಲೇಬೇಕು. ಆಗಲೇ ಅಶ್ವತ್ಥ್ ಬಹಳ ಕಟ್ಟುನಿಟ್ಟಿನವರು. ಸೆಟ್‌ನವರಿಂದ ಒಂದು ಕಾಸನ್ನೂ ಬೇರೆ ತರಹ ತಮಗಾಗಿ ಬಳಸುತ್ತಿರಲಿಲ್ಲ. ಸೆಟ್ ಗೆ ಅವರ ಸ್ನೇಹಿತರ‍್ಯಾದರೂ ಬಂದರೆ ಕಾಫಿ, ಊಟ, ತಿಂಡಿಯ ಖರ್ಚು ಯೂನಿಟ್ ಮೇಲೆ ಹಾಕುತ್ತಿರಲಿಲ್ಲ. ಅವರೇ ಕಟ್ಟುತ್ತಿದ್ದರಂತೆ. ನೈತಿಕತೆಯಿಂದ ಬಾಳುತ್ತಿದ್ದವರು, ಇತರರಿಗೆ ಮಾದರಿಯಾಗಿದ್ದರು.

Advertisements