ಕನ್ನಡದ ನೆಲಕ್ಕೆ ಈ ವರ್ಷ ಖುಷಿ ತಂದದ್ದು ಬಹಳಷ್ಟಿದೆ. ಖ್ಯಾತ ಸಿನೆಛಾಯಾಗ್ರಾಹಕ ವಿ. ಕೆ. ಮೂರ್ತಿಯವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರುವಾಗಲೇ, ಅವರ ಸಹಪಾಠಿ, ಒಂದೇ ಕಾಲೇಜಿನಲ್ಲಿ ಓದಿದ ಮತ್ತೊಬ್ಬ ಅದ್ವಿತೀಯ ಸಾಧಕ ಎಂ.ವಿ. ಕೃಷ್ಣಸ್ವಾಮಿ ಅವರಿಗೆ ಜೀವಮಾನ ಸಾಧನೆಗೆ ನೀಡುವ “ವಿ. ಶಾಂತಾರಾಂ ” ಪ್ರಶಸ್ತಿ ಬಂದಿದೆ. ಎಂ.ವಿ. ಕೃಷ್ಣಸ್ವಾಮಿಯವರು ಸಾಕ್ಷ್ಯಚಿತ್ರದ ಬ್ರಹ್ಮ. ಜತೆಗೆ ಫಿಲಂ ಸೊಸೈಟಿ ಚಳವಳಿಗೆ ಕಾರಣರು. ಇಂಥವರ ಬಗ್ಗೆ ಮಲ್ಲಿಗೆ ಪತ್ರಿಕೆ ಸಂಪಾದಕ ಎನ್. ಎಸ್. ಶ್ರೀಧರಮೂರ್ತಿಯವರು ಬರೆದ ಲೇಖನವಿದು, ಓದಿ ಹೇಳಿ.

ಕನ್ನಡದಲ್ಲಿ ಚಿತ್ರ ಸಮಾಜದ ಪರಿಕಲ್ಪನೆಯನ್ನು ಪರಿಚಯಿಸಿ ಹೊಸ ಅಲೆಯ ಹುಟ್ಟಿಗೆ ಮತ್ತು ಚಿತ್ರ ಮಾಧ್ಯಮದ ಕುರಿತ ಚರ್ಚೆಗೆ ಕಾರಣರಾದವರು ಎಂ. ವಿ. ಕೆ. ಕೃಷ್ಣಸ್ವಾಮಿ. ಚಿತ್ರರಂಗವೆಂದರೆ ಬುದ್ಧಿ ಜೀವಿಗಳು ಮೂಗು ಮುರಿಯುತ್ತಿದ್ದ ಕಾಲದಲ್ಲೇ ಭಾರತಿ (1949) ಚಿತ್ರದಲ್ಲಿ ಅಭಿನಯಿಸುವ ಮೂಲಕ ಅವರು ಬೆಳ್ಳಿತೆರೆಯ ನಂಟಿಗೆ ಬಂದವರು. ಇವರ ಆಸಕ್ತಿ ಬರಿ ಅಭಿನಯಕ್ಕೆ ಮಾತ್ರ ಸೀಮಿತಗೊಳ್ಳಲಿಲ್ಲ. ನಿರ್ಮಾಣ ಕಲೆಗೂ ವಿಸ್ತರಿಸಿತು.

ಸುಚಿತ್ರಾ ಫಿಲಂ ಸೊಸೈಟಿಯವರ ಪರವಾಗಿ ಗಿರೀಶ್ ಕಾಸರವಳ್ಳಿಯವರು ಎಂ.ವಿ. ಕೃಷ್ಣಸ್ವಾಮಿಯವರನ್ನು ಸನ್ಮಾನಿಸಿದ ಸಂದರ್ಭದ ಚಿತ್ರ

ಪ್ಯಾರಿಸ್‌ನಲ್ಲಿ ಚಿತ್ರ ಮಾಧ್ಯಮದ ತಾಂತ್ರಿಕತೆ ಕುರಿತು ವಿಶೇಷ ತರಬೇತಿ ಪಡೆದು ಬಂದ ಕೃಷ್ಣಸ್ವಾಮಿಯವರು ಚಲನಚಿತ್ರ ಕಲೆ ಮತ್ತು ತಾಂತ್ರಿಕತೆ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲವರಾದರು. ಮುಂದೆ ದೇಶದ ಹಲವು ಚಿತ್ರೋತ್ಸವಗಳಲ್ಲಿ ಭಾಗಿಯಾಗಿ ಚಿತ್ರರಂಗದ ಚರಿತ್ರಯನ್ನು ವಿಚಾರಗೋಷ್ಟಿಗಳಲ್ಲಿ ಸಮರ್ಥವಾಗಿ ಮಂಡಿಸಿದರು. ರಾಬರ್ಟ್ ರೋಸೆಲಿನಿಯವರಂತಹ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ನಿರ್ದೇಶಕರೊಂದಿಗೆ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇವರದು.

ಬೆಂಗಳೂರಿನಲ್ಲಿ ಚಲನಚಿತ್ರ ಕಲೆಯ ಕುರಿತು ಚರ್ಚೆ ನಡೆಯಬೇಕೆಂಬ ಉದ್ದೇಶದಿಂದ ‘ಫಿಲಂ ಸೊಸೈಟಿ ಆಫ್ ಬೆಂಗಳೂರು ಸ್ಥಾಪಿಸಿದರು. ಈ ಸಂಘಟನೆ ತನ್ನ ಮೊದಲ ವರ್ಷದಲ್ಲೇ ಅನೇಕ ಮಹತ್ತರ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಲ್ಲದೆ ಇಮೇಜ್ ಆಫ್ ಇಂಡಿಯನ್ ಸಿನಿಮಾ ಎಂಬ ಶೀರ್ಷಿಕೆಯ ಸ್ಥಿರಚಿತ್ರ ಪ್ರದರ್ಶನವನ್ನು ಏರ್ಪಡಿಸಿತ್ತು. ಭಾರತೀಯ ಚಿತ್ರರಂಗದ ಇತಿಹಾಸದ ಮೈಲುಗಲ್ಲುಗಳು ಈ ಉತ್ಸವದಲ್ಲಿ ಪ್ರದರ್ಶನವಾಗಿದ್ದವು. ಹೆಸರಾಂತ ವಿಮರ್ಶಕ ಬಿ.ಡಿ. ಗಾರ್ಗ್ ಇದರ ನಿರ್ವಹಣೆ ನಡೆಸಿದ್ದರು.

ಈ ಸಂದರ್ಭದಲ್ಲಿ ಹೊರ ಬಂದ ಸ್ಮರಣ ಸಂಚಿಕೆ ಸತ್ಯಜಿತ್ ರೇ ಅಂಥವರ ಲೇಖನಗಳನ್ನು ಒಳಗೊಳ್ಳುವುದರೊಂದಿಗೆ ಇಂದಿಗೂ ಐತಿಹಾಸಿಕ ಮಹತ್ವ ಪಡೆದಿದೆ.ಈ ಸ್ಮರಣ ಸಂಚಿಕೆಯಲ್ಲಿ ಜಗತ್ತಿನ ಕ್ಲಾಸಿಕ್ಸ್ ಪ್ರಯೋಗಾತ್ಮಕ ಮತ್ತು ಸಮಕಾಲೀನ ಜಗತ್ತಿನ ಉತ್ತಮ ಚಿತ್ರಗಳು ಸದಸ್ಯರಿಗೆ ನೋಡಲು ಲಭ್ಯವಾಗಬೇಕು ಮತ್ತು ಆ ಮೂಲಕ ಸಿನಿಮಾ ಒಂದು ಕಲೆ ಬೆಳೆದು ಸದಭಿರುಚಿ ನಿರ್ಮಾಣವಾಗಬೇಕು ಎಂದು ಹೇಳಲಾಗಿತ್ತು ಈ ಆಶಯದ ಜೋತೆ ಚಿತ್ರ ವೀಕ್ಷಣೆ ಒಂದು ಚಳುವಳಿಯಾಗಿ ಬೆಳೆಯಬೇಕು ಎಂಬ ಉನ್ನತ ಅಭಿಲಾಷೆಯನ್ನಿಟ್ಟುಕೊಂಡ ಫಿಲಂ ಸೊಸೈಟಿ ಆಫ್ ಬೆಂಗಳೂರು ಕೆಲವೇ ವರ್ಷದಲ್ಲಿ ಸ್ಥಗಿತಗೊಂಡರೂ ಬೆಂಗಳೂರಿನಲ್ಲಿ ಹಲವು ಚಿತ್ರ ಸಮಾಜಗಳ ಹುಟ್ಟಿಗೆ ಪ್ರೇರಕವಾಯಿತು.

ಹೊಸ ಚರ್ಚೆಗಳಿಗೆ ನಾಂದಿ ಹಾಡಿದ ಹರಿಕಾರರಾಗಿಯೂ ಕೃಷ್ಣಸ್ವಾಮಿ ಪಾತ್ರ ಮುಖ್ಯವಾದದ್ದು. ಮುಂದೆ ಇವರು ವಿಶ್ವಾದ್ಯಂತ ಚಲನ ಚಿತ್ರೋತ್ಸವಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಅಂತಾರಾಷ್ಟ್ರೀಯ ಗೋಷ್ಠಿಗಳಲ್ಲಿ ಭಾರತೀಯ ಚಿತ್ರರಂಗದ ವೈಶಿಷ್ಟ್ಯವನ್ನು ಪ್ರತಿಪಾದಿಸಿದರು. ಕೇಂದ್ರ ಚಲನ ಚಿತ್ರೋತ್ಸವ ಮಂಡಳಿಯ ನಿರ್ದೇಶಕರಾಗಿ ಫಿಲಂ ಡಿವಿಜನ್‌ನ ಮುಖ್ಯಸ್ಥರಾಗಿ ಕೂಡ ಸೇವೆ ಸಲ್ಲಿಸಿದರು. ಭಾರತ ಚಿತ್ರರಂಗದ ದಿಗಂತದಲ್ಲೂ ಕನ್ನಡ ಬಾವುಟ ಹಾರಿಸಿದರು.

ಕೃಷ್ಣಸ್ವಾಮಿ ಕೇವಲ ಸಿನಿಮಾ ಕುರಿತ ಚರ್ಚೆಗಷ್ಟೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಚಿತ್ರ ನಿರ್ದೇಶನದಲ್ಲೂ ತೊಡಗಿಸಿಕೊಂಡರು. ಪ್ರೊ. ಎ.ಎನ್. ಮೂರ್ತಿರಾಯರ ಆಷಾಡಭೂತಿ ನಾಟಕವನ್ನು ಸುಬ್ಬಾಶಾಸ್ತ್ರಿ ಎಂಬ ಹೆಸರಿನಲ್ಲಿ 1966ರಲ್ಲಿ ನಿರ್ದೇಶಿಸಿದರು. ಖ್ಯಾತ ವೈಣಿಕ ದೊರೆಸ್ವಾಮಿ ಅಯ್ಯಂಗಾರ್ ಸಂಗೀತ ನಿರ್ದೇಶನವಿದ್ದ ಈ ಚಿತ್ರದಲ್ಲಿ ಬಾಲಮುರಳಿಕೃಷ್ಣ ಶ್ರೀರಂಗಂ, ಗೋಪಾಲ ಕೃಷ್ಣ ರತ್ನದಂತಹ ಗಾಯಕರಿಂದ ಗೀತೆಗಳನ್ನು ಹಾಡಿಸಿದರು. ನಂತರ 1971ರಲ್ಲಿ ವಿ. ಸೀಯವರ ಶ್ರೀಶೈಲ ಮಹಾತ್ಮೆ ಎಂಬ ನಾಟಕವನ್ನು ಆಧರಿಸಿದ ಪಾಪಪುಣ್ಯ ಚಿತ್ರ ನಿರ್ದೇಶಿಸಿದರು.

ನೃತ್ಯಪಟುಗಳಾದ ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿಯವರ ನೃತ್ಯ ನಿರ್ದೇಶನವಿದ್ದ ಚಿತ್ರದಲ್ಲಿ ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದ ಪದ್ಮಚರಣ್ ಸಂಗೀತ ನೀಡಿದ್ದರು. ಗೀಗೀ ಪದವೊಂದನ್ನು ಅಳವಡಿಸಿಕೊಂಡಿದ್ದು ಈ ಚಿತ್ರದ ಮಹತ್ವದ ಸಾಧನೆ ಎನ್ನಬಹುದು. ರಾಜ್ಯ ಸರ್ಕಾರ ಮತ್ತು ವಿವಿಧ ಸಂಘಗಳಿಗೆ ಉತ್ತಮ ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡಿರುವ ಕೃಷ್ಣಸ್ವಾಮಿ ಆ ನಿಟ್ಟಿನಲ್ಲೂ ಪರಂಪರೆಯನ್ನು ರೂಪಿಸಿದರು. ಚಿತ್ರರಂಗದ ಕುರಿತು ಸದಾ ಮಾಹಿತಿ ಮಾರ್ಗದರ್ಶನ ನೀಡುತ್ತಲೇ ಬರುತ್ತಿರುವ ಕೃಷ್ಣಸ್ವಾಮಿ ನಮ್ಮ ನಡುವಿನ ನಡೆದಾಡುವ ವಿಶ್ವಕೋಶ.