ಪರಮೇಶ್ ಗುಂಡ್ಕಲ್ ತಮ್ಮ ಬ್ಲಾಗಿನಲ್ಲಿ ಯಾವಾಗಲೋ ಬರೆದ ಬರಹವಿದು. ಆದರೆ ಈ ಬರಹ ಓದಿ ಚಿತ್ರವನ್ನು ನೋಡಿದ ಮೇಲೆ ಎಲ್ಲರೂ ನೋಡಬೇಕಾದ ಚಿತ್ರವೆನಿಸಿತು. ಹಾಗಾಗಿ ಅದಕ್ಕೆ ಅವಕಾಶವಾಗಲಿ ಎಂದು ಈ ಬರಹವನ್ನು ಇಲ್ಲಿ ಹಾಕಲಾಗಿದೆ.

ಆ ದಿನ ಸಂಜೆ ನಾನೊಂದು ವಿಚಿತ್ರ ಸ್ಥಿತಿಯಲ್ಲಿದ್ದೆ. ಚಿತ್ರೋತ್ಸವ ವರದಿ ಮಾಡಲು ಬೆಂಗಳೂರಿನಿಂದ ಗೋವಾಕ್ಕೆ ಬಂದ ಗೆಳೆಯರೆಲ್ಲ ಹೊರಟು ಹೋಗಿದ್ದರು. ಕಲಾ ಅಕಾಡೆಮಿಯ ಎದುರಿನ ರಸ್ತೆಯಲ್ಲಿ, ಮಾಂಡೋವಿ ನದಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಈಗಲೇ ಬೆಂಗಳೂರಿಗೆ ವಾಪಸ್‌ ಹೊರಟುಬಿಡೋಣ ಅನಿಸುತ್ತಿತ್ತು. ಇಂಥ ಸ್ಥಿತಿಯಲ್ಲಿ ಐನಾಕ್ಸ್‌ಗೆ ಹೋಗಿ `ದಿ ಓಲ್ಡ್‌ ಬಾರ್ಬರ್‌’ ಚಿತ್ರ ನೋಡಿದೆ. ಚಿತ್ರ ಮುಗಿದಾಗ ರಾತ್ರಿ ಹನ್ನೊಂದೂವರೆ ಗಂಟೆ. ಐನಾಕ್ಸ್‌ನಿಂದ ಕಂಪಾಲ್‌ ತನಕ ರಾತ್ರಿಯ ಚಳಿಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದರೆ ತಲೆಯಲ್ಲಿ ಓಲ್ಡ್‌ ಬಾರ್ಬರ್‌ ಚಿತ್ರದ ಮರುಪ್ರದರ್ಶನ ನಡೆಯತೊಡಗಿತು. ಅದಾದ ನಂತರ ಈ ಚಿತ್ರದ ಮರುಪ್ರದರ್ಶನಗಳು ನನ್ನ ಮನಸ್ಸಿನಲ್ಲಿ ನಡೆಯುತ್ತಲೇ ಇವೆ. ಅಷ್ಟು ಖುಷಿಕೊಟ್ಟ ಚಿತ್ರ ಇದು.

105 ನಿಮಿಷಗಳ ಈ ಚಿತ್ರವನ್ನು ಕ್ಷೌರಿಕನೊಬ್ಬನ ಸ್ವಗತ ಎನ್ನಬಹುದು. 93 ವರ್ಷದ ಹುಡುಗನೊಬ್ಬ ಈ ಚಿತ್ರದ ಹೀರೋ! `93 ವರ್ಷ ವಯಸ್ಸಿನ ಹುಡುಗ’ ಎಂಬ ಪ್ರಯೋಗ ಇಲ್ಲಿ ಉದ್ದೇಶಪೂರ್ವಕ. ಏಕೆಂದರೆ ಸಿನಿಮಾ ಮುಗಿಯುವ ಹೊತ್ತಿಗೆ ನೀವು `ದಿ ಯಂಗ್‌ ಬಾರ್ಬರ್‌’ ಎಂದು ಉದ್ಗರಿಸಿರುತ್ತೀರಿ. ಈ ಪಾತ್ರ ಅಷ್ಟು ಜೀವನ್ಮುಖಿ.

ಈ ಸಿನಿಮಾದಲ್ಲಿ ಭಾವನೆಗಳ ಏರಿಳಿತಗಳು ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ವಯಸ್ಸಾದ, ಆದರೆ ತುಂಬಾ ಜೀವನ್ಮುಖಿಯಾದ ಕ್ಷೌರಿಕನೊಬ್ಬ ತನಗೆ ತಾನೇ ಹೇಳಿಕೊಳ್ಳುವ ಸಂಗತಿಗಳನ್ನು ಪೋಣಿಸಿಟ್ಟಂತೆ ಕಾಣಿಸುವ ಕತೆ ಬದುಕಿನ ಸರಳ ಫಿಲಸಫಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳುತ್ತದೆ.

ಈ ಕ್ಷೌರಿಕ ಬದುಕುತ್ತಿರುವುದು ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ. ಇಲ್ಲಿ ಬದಲಾಗುತ್ತಿರುವ ಬದುಕಿನ ಕ್ರಮದಲ್ಲಿ, ಆಧುನಿಕವಾಗಿರುವ ಜಗತ್ತಿನಲ್ಲಿ ಈ ಕ್ಷೌರಿಕ ಪರಕೀಯನಂತೆ ಕಾಣಿಸುತ್ತಾನೆ. ಥಳಕು ಬಳುಕಿನ ಬೀದಿಗಳ ಆಚೆ ಇರುವ ಹಳೆಯ ಮನೆಯಲ್ಲಿ ಏಕಾಂಗಿಯಾಗಿರುವ ಈತ ಮಾತಾಡುವುದು ಕಡಿಮೆ. ಈತನ ಸ್ನೇಹಿತರೂ ವಯಸ್ಸಾದವರೇ. ಆತನ ಗಿರಾಕಿಗಳೂ ವಯಸ್ಸಾದವರೇ!

ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ಕಟ್ಟಿಂಗ್‌ ಸೆಲೂನ್‌ಗಳ ನಡುವೆ ಈ ಕ್ಷೌರಿಕನ ಶೈಲಿ ಮತ್ತು ಜೀವನಕ್ರಮ ಅಪ್ರಸ್ತುತವಾಗಿಬಿಟ್ಟಿದೆ. ಹೀಗಿದ್ದರೂ ಈತ ಕೂದಲು ಕತ್ತರಿಸುವುದು ನಿಲ್ಲಿಸಿಲ್ಲ. ಈತನ ಜೀವನ ಪ್ರೀತಿ ನಿಂತಿಲ್ಲ. ಈತ ಈ ಬದಲಾವಣೆಯಿಂದ ಆಗುತ್ತಿರುವ ತೊಂದರೆಗಾಗಿ ಯಾರನ್ನೂ ದೂರುವುದಿಲ್ಲ. ಈತನಿಗೆ ಬೇಜಾರಾಗುವುದಿಲ್ಲ. ಪ್ರಾಮಾಣಿಕತೆಯಿಂದ ಒಂಚೂರೂ ಆಚೆ ಸರಿಯುವುದಿಲ್ಲ. ಯಾರಾದರೂ ಪ್ರೀತಿಯಿಂದ ಹೆಚ್ಚು ದುಡ್ಡು ಕೊಟ್ಟರೂ ಆತನಿಗೆ ಬೇಡ.

ಆತ ಒಂಟಿಯಾಗಿ ಬದುಕುವ ಮನೆಯಲ್ಲಿ ಆತನದೇ ಆದ ಒಂದು ಹಳೆಯ ಗಡಿಯಾರವಿದೆ. ಈ ಗಡಿಯಾರ ಹೊಸದಾದ ಡಿಜಿಟಲ್‌ ಗಡಿಯಾರಗಳ ಜೊತೆ ಸ್ಪರ್ಧಿಸಲಾರದೇ ದಿನಕ್ಕೆ ಐದು ನಿಮಿಷ ಹಿಂದುಳಿಯುತ್ತದೆ. ಇದನ್ನು ಸರಿಪಡಿಸಲು ಆತ ಗಡಿಯಾರವನ್ನು ಅಂಗಡಿಗೆ ತರುತ್ತಾನೆ. ಅಲ್ಲಿನ ಮಾಲೀಕ ಅದನ್ನು ಸರಿಪಡಿಸಲು ಒಪ್ಪುವುದಿಲ್ಲ. ಬದಲಿಗೆ ಒಂದು ಡಿಜಿಟಲ್‌ ಗಡಿಯಾರ ಕೊಳ್ಳುವಂತೆ ಸಲಹೆ ಕೊಡುತ್ತಾನೆ. ಕ್ಷೌರಿಕ ಒಪ್ಪುವುದಿಲ್ಲ. ದಿನವೂ ಐದು ನಿಮಿಷ ಹಿಂದುಳಿಯುವ ಗಡಿಯಾರವನ್ನು ಪ್ರತಿ ದಿನ ಕೈಯಾರೆ ಐದು ನಿಮಿಷ ಮುಂದಕ್ಕೆ ಹಾಕುತ್ತ ಅದನ್ನೇ ಉಳಿಸಿಕೊಳ್ಳುತ್ತಾನೆ ಈ ವೃದ್ಧ ಕ್ಷೌರಿಕ.

ಈ ಹಳೆಯ ಗಡಿಯಾರ ಚಿತ್ರದಲ್ಲೊಂದು ಪಾತ್ರವೇ ಆಗಿಬಿಡುತ್ತದೆ ಮತ್ತು ನೋಡುಗನ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ಎಲ್ಲವೂ ಡಿಜಿಟಲ್‌ ಆಗುತ್ತಿರುವ ಜಾಗತೀಕರಣದ ಹೊತ್ತಿನಲ್ಲಿ ದಿನವೂ ಐದು ನಿಮಿಷ ಹಿಂದುಳಿದುಬಿಡುವ, ಕ್ಷೌರಿಕನಷ್ಟೇ ಹಳೆಯದಾಗಿರಬಹುದಾದ ಈ ಗಡಿಯಾರ ಒಂದು ಸುಂದರ ರೂಪಕವಾಗುತ್ತದೆ. ಅದನ್ನು ಸರಿಪಡಿಸಲಾಗದೇ, ಬಿಡಲೂ ಆಗದೇ ದಿನವೂ ಕೈಯಿಂದಲೇ ಐದು ನಿಮಿಷ ಮುಂದಕ್ಕೆ ಹಾಕುವ ಕ್ಷೌರಿಕ ಆ ಮೂಲಕ ಜಾಗತೀಕರಣವನ್ನು ಸಾತ್ವಿಕವಾಗಿ ಪ್ರತಿಭಟಿಸುವ ಸಂಕೇತವೂ ಆಗುತ್ತಾನೆ. ಇದನ್ನು ಆತ ಗೊಣಗಾಡುತ್ತ ಮಾಡುವುದಿಲ್ಲ. ರಾತ್ರಿ ಕಾದು, ಗಡಿಯಾರ ಒಂಬತ್ತು ಗಂಟೆ ಬಾರಿಸಿಕೊಳ್ಳುತ್ತಲೇ ಐದು ನಿಮಿಷ ಮುಂದಕ್ಕೆ ಹಾಕಿ ಮಲಗಿಕೊಳ್ಳುವ ಆತ ಆ ಕೆಲಸವನ್ನೂ ಅಷ್ಟು ಪ್ರೀತಿ ಮತ್ತು ಶ್ರದ್ಧೆಯಿಂದ ಮಾಡುತ್ತ ಹೋಗುತ್ತಾನೆ.

ಇದರ ಜೊತೆಯಲ್ಲಿ ಆತನ ಇತರ ಆಸಕ್ತಿಗಳೂ ಕುತೂಹಲಕರವಾಗಿವೆ. ಆತ ಸ್ನೇಹಿತರಿಗೆ, ಗಿರಾಕಿಗಳಿಗೆ ಜೀವನ ಪ್ರೀತಿಯ ಪಾಠವನ್ನು ಸರಳವಾಗಿ ಹೇಳುತ್ತಾನೆ. ತನ್ನಿಂದ ಬೇರೆ ಇರುವ ಮಗನಿಗೆ ಬದುಕಲು ದುಡ್ಡು ಕೊಡುತ್ತಾನೆ. ಕಾರ್ಡ್‌ ಒಂದರ ನವೀಕರಣಕ್ಕೆ ಫೋಟೋ ತೆಗೆಸಿಕೊಳ್ಳಲು ಹೋಗಿ ಹತ್ತಾರು ಸಲ ತಲೆ ಬಾಚಿಕೊಂಡು ವಿಚಿತ್ರ ಸಂಭ್ರಮ ಅನುಭವಿಸುತ್ತಾನೆ. ಫೋಟೋ ಬಂದಾಗ ಹರೆಯದ ಹುಡುಗನಂತೆ ಸಂಭ್ರಮಿಸುತ್ತಾನೆ.

ಹೀಗೆ ವೃದ್ಧಕ್ಷೌರಿಕನ ಜೀವನ ಪ್ರೀತಿಯನ್ನು ಹೇಳುವ `ದಿ ಓಲ್ಡ್‌ ಬಾರ್ಬರ್‌’ನ ನಿರ್ಣಾಯಕ ಕ್ಷಣದಲ್ಲಿ ಗಡಿಯಾರದ ಲೋಲಕದ ಸದ್ದು ನಿಧಾನವಾಗಿ, ಇನ್ನೂ ನಿಧಾನವಾಗಿ, ಮತ್ತೂ ನಿಧಾನವಾಗಿ ಆಗಿ ಆಗಿ ಆಗಿ ಕೊನೆಗೆ ನಿಂತೇ ಹೋಗುತ್ತದೆ. ಗಡಿಯಾರದ ಲೋಲಕದ ಸದ್ದಿನೊಂದಿಗೆ ಕ್ಷೌರಿಕನ ಹೃದಯಬಡಿತವನ್ನು ಕಂಡುಕೊಂಡಿದ್ದ ನೋಡುಗರು ಮೂಕರಾಗುತ್ತಾರೆ. ಬೀಜಿಂಗ್‌ನ ಅನಾಮಿಕ ಬೀದಿಯಲ್ಲಿ ಏಕಾಂಗಿಯಾಗಿರುವ ಈ ಮುದುಕನನ್ನು ಹುಡುಕಿಕೊಂಡು ಮರುದಿನ ಆತನ ಮಗ ಬರುತ್ತಾನೆ. ಇಷ್ಟೊತ್ತಾದರೂ ಅಪ್ಪ ಇನ್ನೂ ಯಾಕೆ ಎದ್ದಿಲ್ಲ ಎಂದು ಮನೆಯೊಳಕ್ಕೆ ಆತ ಬರುತ್ತಿದ್ದರೆ ನೋಡುಗರ ಮನಸ್ಸಿನಲ್ಲಿ ವಿಷಾದ ಗೀತೆ ಅನುರಣಿಸತೊಡಗುತ್ತದೆ. ಆತ ಸತ್ತೇ ಹೋಗಿದ್ದಾನೆ ಎಂದು ಅಂದುಕೊಳ್ಳುವಷ್ಟರಲ್ಲಿ ಆತ `ಗಡಿಯಾರ ಹಾಳಾಗಿದೆ’ ಎನ್ನುತ್ತ ಎದ್ದು ಕುಳಿತುಕೊಳ್ಳುತ್ತಾನೆ. ಇಡೀ ಚಿತ್ರಮಂದಿರದಲ್ಲೊಂದು ಸಶಬ್ದ ನಿಟ್ಟುಸಿರು ಕೇಳಿಸುತ್ತದೆ.

ಈ ಚಿತ್ರದಲ್ಲಿ ಶಬ್ದವನ್ನು ನಿರ್ದೇಶಕ ಹಸಿ ಚಾಹುಲೊ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಗಡಿಯಾರದ ಲೋಲಕದ ಸದ್ದು ಮುದುಕನ ಹೃದಯಬಡಿತಕ್ಕೆ ಸಂವಾದಿಯಾಗಿಬಿಡುವುದು ಅದಕ್ಕೆ ಒಂದು ಉದಾಹರಣೆ. ಛಾಯಾಗ್ರಹಣ ಕತೆಯ ಲಹರಿಗೆ ಹೊಂದಿಕೊಂಡಿದೆ. ಕ್ಷೌರಿಕನ ಪಾತ್ರಧಾರಿ ಜಿಂಗ್‌ ಕು ನಟಿಸಿಯೇ ಇಲ್ಲ. ಫ್ರೇಮಿನೊಳಕ್ಕೆ ಸಹಜವಾಗಿ ನಡೆದಾಡಿಕೊಂಡಿದ್ದಾರೆ. ಏಕೆಂದರೆ ಜಿಂಗ್‌ ಕು ನಿಜ ಜೀವನದಲ್ಲೂ ಕ್ಷೌರಿಕ. ಈ ಚಿತ್ರದಲ್ಲಿ ಹಸಿ ಚಾಹುಲೋ ವೃತ್ತಿಪರ ಕಲಾವಿದರನ್ನು ಬಳಸಿಕೊಂಡೇ ಇಲ್ಲ ಎನ್ನುವುದೂ ಗಮನಾರ್ಹ. ಕ್ಷೌರಿಕನೊಬ್ಬನ ಸಚಿತ್ರ ಡೈರಿಯಂತೆ ಕಾಣಿಸಿಬಿಡಬಹುದಾಗಿದ್ದ ಈ ಚಿತ್ರವನ್ನು ತಮ್ಮ ತೆಳು ಹಾಸ್ಯದ ನಿರೂಪಣೆಯಿಂದ ಲವಲವಿಕೆ ಉಳಿಸಿಕೊಳ್ಳುವಂತೆ ನಿರ್ದೇಶಕರು ನೋಡಿಕೊಂಡಿದ್ದಾರೆ. ಕೊನೆಯಲ್ಲಿ ಈ ಚಿತ್ರಕ್ಕೆ ಸ್ವರ್ಣ ಮಯೂರ ಪ್ರಶಸ್ತಿ ಬಂತು. ಅದರಲ್ಲಿ ಆಶ್ಚರ್ಯವೇನಿಲ್ಲ.

`ದಿ ಓಲ್ಡ್‌ ಬಾರ್ಬರ್‌’ ನೋಡುವ ಅವಕಾಶ ಯಾವಾಗಾದರೂ ಸಿಕ್ಕಿದರೆ ತಪ್ಪಿಸಿಕೊಳ್ಳಬೇಡಿ. ಇಳಿ ಸಂಜೆಯಲ್ಲಿ ತೇಲಿಬರುವ ಭಾವಗೀತೆಯೊಂದನ್ನು ಮಿಸ್‌ ಮಾಡಿಕೊಂಡಂತಾಗುತ್ತದೆ.ಙ

Advertisements