ಡಾ. ಅ. ಶ್ರೀಧರ ಅವರು ಪಿ. ಶೇಷಾದ್ರಿಯವರ ರಾಷ್ಟ್ರೀಯ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪುರಸ್ಕೃತ “ವಿಮುಕ್ತಿ” ಚಿತ್ರ ಕುರಿತು ಬರೆದ ಒಂದು ಲೇಖನ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಇದನ್ನು ಸಾಕಷ್ಟು ಮಂದಿ ಸಿನಿಮಾಸಕ್ತರ ಓದಿಗೆ ಸಿಗಲೆಂದು ಇಲ್ಲಿ ಪ್ರಕಟಿಸಲಾಗಿದೆ.

ಪ್ರಶಸ್ತಿಗಳು ಸಾರ್ವತ್ರಿಕ ಮರೆವಿಗೊಂದು ತಾತ್ಕಾಲಿಕ ಮದ್ದು. ಉತ್ತಮ ವಿಷಯಗಳಾಗುವುದೇ ಜನಮನ್ನಣೆ ದೊರಕಿದಾಗ. ಕೃತಿಗಳು ಜನಮನದ ಆಕೃತಿಯಾಗುವುದಕ್ಕೆ ಪ್ರಶಸ್ತಿ, ಪುರಸ್ಕಾರಗಳೂ ಬೇಕು. ಇಂತಹ ವಿಷಯಗಳನ್ನು ವಿವರಿಸುವುದಕ್ಕಾಗಿ ಮನೋವಿಜ್ಞಾನಿಗಳಾದ ಲೋಟಕ್ ಮತ್ತು ಪ್ರೈಸ್ ತತ್ವವೊಂದನ್ನು ನಿರೂಪಿಸಿದ್ದಾರೆ. ಕೆಲವೇ ವಿಜ್ಞಾನಿಗಳ ಕೊಡುಗೆಯು ವಿಜ್ಞಾನದ ಸಾಮ್ರಾಜ್ಯವನ್ನು ಆಳುವುದಂತೆ. ಕೆಲವು ಪ್ರಬುದ್ಧರಿಂದಲೇ ವಿಜ್ಞಾನದ ಏಳಿಗೆ ಸಾಧ್ಯವಾಗಿರುವುದು ಎನ್ನುತ್ತಾರೆ. ನಿಜವಿದ್ದರೂ ಇರಬಹುದು. ಮಾನಸಿಕ ಪರಿಶ್ರಮಕ್ಕೂ ಸೃಜನಶೀಲತೆಗೂ ಹತ್ತಿರದ ನೆಂಟು.

ವ್ಯಕ್ತಿ ಚಿತ್ತದ ನಿರ್ಮಾಣದಲ್ಲಿ ಪರಿಸರ ಮತ್ತು ಪರಿಸ್ಥಿತಿಯ ಕೈವಾಡವೇ ಹೆಚ್ಚು. 20ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಮತ್ತು ವಿವಾದಾತ್ಮಕ ವರ್ತನಾ ಮನೋವಿeನಿ ಬಿ.ಎಫ್.ಸ್ಕಿನರ್ ಪ್ರತಿಪಾದನೆಯೂ ಇಂತಹದ್ದೇ; ವರ್ತನೆಗಳನ್ನು ಸೃಷ್ಟಿಸಿ ಬಲಪಡಿಸುವುದು ಒಂದು ಯುಕ್ತಿ. ಎಲ್ಲ ವರ್ತನೆಗಳನ್ನು ವ್ಯವಸ್ಥಿತ ನಿಯಂತ್ರಣಕ್ಕೆ ಒಳಪಡಿಸಬಹುದು, ಪಡಿಸಬೇಕು; ಸೃಜನಶೀಲತೆಯನ್ನು ಸಹ. ಇವೆರಡು ಸೂತ್ರಗಳನ್ನು ಅಲ್ಪಸ್ವಲ್ಪ ವ್ಯತ್ಯಾಸಮಾಡಿ ಕನ್ನಡ ಚಲನಚಿತ್ರರಂಗಕ್ಕೆ ಅನ್ವಯಿಸಿದಾಗ ಕೆಟ್ಟ ಚಿತ್ರಗಳು ಒಳ್ಳೆಯದನ್ನು ಅಟ್ಟಿಬಿಡುತ್ತವೆ ಎನ್ನುವ ಕಲ್ಪನೆ ಮೂಡುತ್ತದೆ. ಹೀಗಿದ್ದರೂ ಅಲ್ಲೊಂದು ಇಲ್ಲೊಂದು ಅರ್ಥಪೂರ್ಣ ಚಿತ್ರಗಳನ್ನು ತೆಗೆಯುವ ಸಾಹಸ ನಿಲ್ಲುವುದಿಲ್ಲ. ಇಂತಹ ಚಿತ್ರಗಳಿಗೆ ಪ್ರಶಸ್ತಿಯೇ ಪ್ರೇರಣೆ, ಅಂಕಣಗಳೇ ಚಲನಚಿತ್ರಮಂದಿರಗಳು. ಈ ಮಾತಿಗೇನು ಸಾಕ್ಷಿ ಪುರಾವೆಗಳ ಕೊರತೆ ಇರದು. ಕನ್ನಡದ ಕೆಟ್ಟ ಚಿತ್ರಗಳನ್ನು ನೋಡಿಯೇ ಕೇಂದ್ರ ಚಲನಚಿತ್ರ ಸಲಹಾ ಮಂಡಲಿ ಸದಸ್ಯರುಗಳೆಷ್ಟೋ ದೃಷ್ಟಿ ಕಳೆದುಕೊಂಡಿದ್ದಾರಂತೆ !

ಹೀಗಿರುವ ಸಂದರ್ಭದಲ್ಲಿ ಕೆಟ್ಟ ಚಲನಚಿತ್ರಗಳಿಗೆ ವಿಮುಕ್ತಿ ಇದೆ ಎನ್ನುವ ಸಂದೇಶವನ್ನು ಈ ಬಾರಿಯ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಸಾರುತ್ತದೆ.

ವಿಮುಕ್ತಿ ಚಲನಚಿತ್ರವು ಕೌಟುಂಬಿಕ ನೆಲೆಗಳನ್ನು ಗಟ್ಟಿಪಡಿಸುವ ವಾತ್ಸಲ್ಯದ ಚೌಕಟ್ಟಿನಲ್ಲಿ ಬರುವಂತೆ ತೋರಿದರೂ ‘ನನ್ನ ಮಗು ಹೀಗೆಕೆ’ ಎನ್ನುವ ಪ್ರಶ್ನೆಗೆ ಉತ್ತರ ಸೂಚಿಸುವ ಹಾದಿಯನ್ನು ಹಿಡಿಯುತ್ತದೆ. ಅಮ್ಮನ ವಾತ್ಸಲ್ಯವಿಲ್ಲವಾದರೇನಂತೆ, ಅಪ್ಪನದು ಹೇರಳವಾಗಿಯೇ ಇದೆಯಲ್ಲ ಎನ್ನುವುದನ್ನು ವರ್ಣಿಸುವ ಸನ್ನಿವೇಶಗಳಿಂದ ತುಂಬಿರುವ ಅಪ್ಪ-ಮಗಳ ಸಂಬಂಧಗಳು ಚಿತ್ರದುದ್ದಕ್ಕೂ ಗೋಚರಿಸುತ್ತದೆ. ಇಲ್ಲಿ ಅಪ್ಪ ಅಮ್ಮನಾಗಿ ಬಿಡುತ್ತಾನೆ, ಮಗಳು ? ಅಪ್ಪನ ವಾತ್ಸಲ್ಯವು ಮಗಳ ಮಾನಸಿಕ ವಿಕಾಸದ ಎಲ್ಲೆಗಳನ್ನು ಕುಗ್ಗಿಸಿ ಆದರ್ಶವೆಂಬ ಅವಲಂಬನೆಯ ರೀತಿಯನ್ನು ಉತ್ತೇಜಿಸುತ್ತಿದೆ ಎನ್ನುವುದು ಇಲ್ಲಿ ಸ್ಪಷ್ಟ.

ಮೋಹದ ಪಾಶಕ್ಕೆ ಅಪ್ಪ-ಮಗಳಿಬ್ಬರು ಸಿಕ್ಕಿಕೊಳ್ಳುತ್ತಾರೆ. ಮಗಳ ಅತಿಯಾದ ಭಾವಾಲಂಬನೆಯನ್ನು ಮನೋವಿಶ್ಲೇಷಣಾಕಾರರು ಅಹಂ ರಕ್ಷಣಾತಂತ್ರವೆಂದು ಗುರುತಿಸಬಹುದು. ಹಿಡಿತ ತಪ್ಪಿದ ಅತಿರೇಕದ ವರ್ತನೆಯೆಂಬುದಾಗಿಯೇ ನೋಡಲಪೇಕ್ಷಿಸುತ್ತಾರೆ. ವಯಸ್ಕತನದಲ್ಲೆದ್ದು ಗೋಚರಿಸುವ ಮಾನಸಿಕ ಸಮಸ್ಯೆಗಳು ಎಳೆತನದಲ್ಲಿನ ಭಾವಗೊಂದಲಗಳಿಂದಲೇ ಜನಿಸುತ್ತದೆ ಎನ್ನುತ್ತಾರೆ ಖ್ಯಾತ ಮನೋವಿಶ್ಲೇಷಣಾಕಾರ ಎರಿಕ್ ಎರಿಕ್ಸನ್.

ವಾತ್ಸಲ್ಯವು ಎಲ್ಲರಿಗೂ ಬೇಕು. ಅದರಲ್ಲಿಯೂ ಅಮ್ಮನ ವಾತ್ಸಲ್ಯವಂತೂ ಎಳೆತನದ ಬದುಕಿಗೆ ಬಹುಮುಖ್ಯ. ಅದು ಏಕಮುಖಿಯಾದಾಗ ಮಗುವಿನ ಮಾನಸಿಕ ಅಪೌಷ್ಟಿಕತೆಯ ದುಷ್ಪರಿಣಾಮ ಖಂಡಿತ. ಅಪೌಷ್ಟಿಕತೆ ಹಾಗೆಯೇ ಮಗುವಿನೊಳಗೆ ಇದ್ದುಬಿಟ್ಟರೆ ಅಪಾಯವಿಲ್ಲ. ಆದರೆ, ಹೊರಗಿನ ಪ್ರಚೋದನೆ, ಪ್ರೇರಣೆಗಳನ್ನು ತಡೆಯುವುದು ಯಾರು ?ಹೇಗೆ ? ಇವೆರಡು ಆತ್ಮೀಯ ವಯಸ್ಕರ ಸಾನಿಧ್ಯ ಮತ್ತು ಸಾಮಿಪ್ಯದಿಂದಲೇ ಬಲಗೊಳ್ಳುವುದು. ವ್ಯಕ್ತಿ ವಯಸ್ಕನಾಗದೆ ಬಾಲ್ಯದ ಭಾವಗಳತ್ತವೇ ಸುಳಿದಾಡಿ ನೆಮ್ಮದಿ ಪಡೆಯುವುದಕ್ಕೂ ಇದೇ ಸೂತ್ರ. ವಿಮುಕ್ತಿ ಚಿತ್ರದ ಉದ್ದಕ್ಕೂ ಇದನ್ನು ಕಾಣಬಹುದು. ಇದು ನಿಜವು ಎನ್ನುವುದನ್ನು ಪ್ರತಿಪಾದಿಸುವುದಕ್ಕೆ ಹೊಸದೊಂದು ವಯಸ್ಕ ಸಂಬಂಧ ಬೇರೆ. ಈ ಸಂಬಂಧವನ್ನು ಬೆಸೆಯುವ ಆಳವಾದ ಮಾನಸಿಕ ಭಾವಗಳೇ ಮಾಯ. ಹೀಗಾಗಿ, ಸಂಬಂಧದ ಉದ್ದಕ್ಕೂ ಭಾವಗಳ ಜಂಜಾಟ. ಪರಸ್ಪರತೆಯೇ ಇರದ ಸತಿ-ಪತಿಯರ ಗಂಟು. ಅವರಿಬ್ಬರ ನಡುವೆ ಎಲ್ಲವೂ ಸರಿ ಎನ್ನುವುದ್ನನು ಸೂಚಿಸುವುದಕ್ಕೆ ಅಂಕುರಿಸಿದ ಹೊಸದೊಂದು ಜೀವ.

ಬಯಸಿ ಮದುವೆಯಾಗಿದ್ದರೂ, ತನ್ನದೇ ಆದ ಕುಟುಂಬವನ್ನು ಬಯಸಿದ್ದರೂ, ಬಾಲ್ಯದ ಪಿತೃವಾತ್ಸಲ್ಯ ಮತ್ತು ಆಕರ್ಷಣೆಯ ಕವಚದೊಳಗೆ ಸಿಕ್ಕಿಕೊಂಡೇ ಎತ್ತರವಾಗಿ ಬೆಳೆದಿರುವ ಬಾಲಕಿ. ಮನಸ್ಸಿಗೂ ಬಾರದಂತಹ ಅನನ್ಯ ಪ್ರೇಮವೆನ್ನುವ ಭಾವ. ಅಪ್ಪನ ಭಾವ ಪ್ರೇರಿತ ವಾತಾವರಣದಲ್ಲಿ ಸೇರಿಕೊಂಡಾಗ ಉದ್ಬವಿಸುವ ಅಪಾಯವಿದು. ಇಂತಹ ಅರಿವು ಇಲ್ಲದಿರುವುದರಿಂದಲೇ ಮಕ್ಕಳ ಮನಸ್ಸಿನಲ್ಲಿ ಮಾನಸಿಕ ಗೊಂದಲಗಳ ಹುತ್ತ ಹಬ್ಬುವುದು. ಪೋಷಕರ ನಡೆ, ನುಡಿ, ವಿಚಾರ, ಸಾಧನೆಗಳು ಮಕ್ಕಳ ಮಾನಸಿಕ ಜಗತ್ತನ್ನು ನಿರೂಪಿಸುವಂತಹದ್ದು. ಅದರಲ್ಲಿಯೂ ಏಕ ಪೋಷಕತನವು ಮಗುವಿನ ಪೂರ್ಣ ವಿಕಾಸಕ್ಕೆ ತಡೆಯಾಗಬಲ್ಲದು. ಚಿತ್ರವು ಹೀಗೂ ಸಹ ಅರ್ಥ ಕಲ್ಪಿಸುತ್ತದೆ.

ಹಾಗೆಯೇ, ಪ್ರಬುದ್ಧತೆ ಪಡೆದ ವಯಸ್ಕನಿಗೆ ವಿಶ್ವಾಸ, ವಾತ್ಸಲ್ಯಗಳು ಹೊರೆಯಾದಾಗ ಸುಖ ಶಾಂತಿ ಅಸಾಧ್ಯ. ಕಳೆದು ಕಳೆತಾದ ಜೀವಕ್ಕೆ ಮತ್ತೊಮ್ಮೆ ಬಾಲ್ಯದ, ಯೌವನದ ಉತ್ಸಾಹ, ಒಲವುಗಳು ಮರುಕಳಿಸುವುದನ್ನು ದೇಹ ಮನಸ್ಸುಗಳೆರಡೂ ಒಪ್ಪಲಾರವು. ಇದನ್ನು ಪ್ರಕೃತಿಯೂ ಸಹ ಪೋಷಿಸಲು ಹಿಂಜರಿಯುವುದು. ಯಾವುದೇ ನಿರ್ಬಂಧ, ಅಪೇಕ್ಷೆಗಳಿರದಂತಹ ಬದುಕನ್ನು ಬಯಸುತ್ತಿರುವ ವ್ಯಕ್ತಿಗೆ ನೆಮ್ಮದಿಯ ವೃದ್ಧಾಪ್ಯವೇ ಗುರಿ. ಎಲ್ಲ ಹೊಣೆಗಾರಿಕೆಯನ್ನು ನಿಭಾಯಿಸಿದೆ ಎನ್ನುವುದೇ ನೆಮ್ಮದಿಯ ವಿಷಯ. ಇಂತಹ ಸ್ಥಿತಿಯಲ್ಲಿ ಹೊಸದೊಂದು ಅವಲಂಬನೆ ಬೇಡವೇ ಬೇಡ. ಅದರೇನು, ಎಳೆತನದ ಮುಚ್ಚಟೆ, ಮದ್ದುಗಳನ್ನು ಮರೆಯದೇ, ಬೆಳೆಯದೇ ಇದ್ದ ವಿಮುಕ್ತಿಯ ನಾಯಕಿ ಅಪ್ಪನಿಗೆ ಹೊರೆ. ಹೊರಲಾರದ ಈ ಹೊರೆಯಿಂದ ತಲೆಮರೆಸಿಕೊಂಡರೆ ಮಾತ್ರ ತಲೆಯುಳಿಯುವುದು. ತಲೆ ಉಳಿಸಿಕೊಳ್ಳುವುದರಿಂದ ವಿಮುಕ್ತಿ. ಹೀಗಾಗಿ, ಕಣ್ಮರೆಯಾಗುವುದಕ್ಕೆ ಕಾಶಿಯ ಕರೆ. ಇದೊಂದೆ ನಾಯಕನಿಗೆ ತೋಚುವ ಹಾದಿ.

ಆದರೆ, ನೆನಪಿನ ಶಕ್ತಿ ಬಲವಾಗಿದ್ದು, ಭಾವನೆಯ ರೂಪ ಸಹನೀಯವಾಗಿದ್ದರೆ ಕಳೆದ ವಸ್ತುವಿನ ಶೋಧನೆಗೆ ತಡೆ ಹೇಗೆ ಸಾಧ್ಯ ? ಕಳೆದುಹೋದ ಬಾಲ್ಯ; ನೋವೇ ಇಲ್ಲದಂತಹ ಬಾಲ್ಯ ! ಅದನ್ನು ಕಳೆದುಕೊಳ್ಳುವುದು ಉಚಿತವೇ ? ಹೀಗಾಗಿ ಕಾಶಿಯಾದರೇನು, ಕೈಲಾಸವಾದರೇನು ಬಚ್ಚಿಟ್ಟುಕೊಂಡಿರುವ ವ್ಯಕ್ತಿ ಗೋಚರಿಸಬೇಕು. ಇದೊಂದು ರೀತಿಯ ಬಾಲ್ಯದ ಹಟ, ನಾಯಕಿಯ ಒಳಮನಸ್ಸಿನ ಛಲ. ಇದಕ್ಕಾಗಿ ಶೋಧನೆ, ಶೋಧನೆಯ ಇಂಗಿತವೇ ಬೇರೆ, ಬೇರೆ. ಮಗಳಿಗೆ ಬಾಲ್ಯದಿಂದ ತಪ್ಪಿಸಿಕೊಳ್ಳುವುದು. ತಂದೆಗೆ ಮಗಳಿಂದ ತಪ್ಪಿಸಿಕೊಳ್ಳುವುದು. ಮಗಳಿಗೆ ಹೊಸದೊಂದು ಭಾವ ಜನಿಸಿಲಿ ಎನ್ನುವ ತಂದೆಯ ಬಯಕೆ. ಆದರೆ, ಇಲ್ಲಿಯೂ ಕೂಸೊಂದರೊಂದಿಗೆ ಆತ್ಮೀಯತೆ. ಈ ಆತ್ಮೀಯತೆಗೆ ಅದಾವುದೋ ಆಧಾರ. ಅವ್ಯಕ್ತ ಆಕರ್ಷಣೆ. ಬೆಳೆಯುತ್ತಿರುವ ಮಗುವಿನ ಪೂರ್ವಾಪರಗಳು ಪರಿಚಯವಾದ ತಕ್ಷಣ ಎಲ್ಲವೂ ಸ್ಪಷ್ಟ. ದೂರವಿರುವುದೇ ಒಳಿತು. ಅಪ್ಪ-ಮಗಳ ಸಂಬಂಧದ ಬುತ್ತಿಯನ್ನು ಇಲ್ಲೇ ಬಿಡಬೇಕು. ಆರಾಮಾಗಿ ಬಿಸಾಡಬಹುದಾದ ಜಾಗ. ಹೀಗೆ ದೂರವಿರುವುದರಿಂದಲೇ ವಿಮುಕ್ತಿ ಎನ್ನುವ ಅಂತಿಮ ನಿರ್ಧಾರ. ಇಬ್ಬರದ್ದೂ.

ಬದುಕಿನ ಕೊನೆಯ ದಿನಗಳನ್ನು ಹೀಗೆಯೇ ಕಳೆಯಬೇಕು, ಕಳೆಯಬಹುದು ಎನ್ನುವ ನಂಬಿಕೆಯನ್ನು ಈಡೇರಿಸುವ ‘ವಿಮುಕ್ತಿ’ ನಿಲಯವೇ ವಿಮುಕ್ತಿ ನಿರ್ದೇಶಕರಾಗಿ ಆತ್ಮದರ್ಶನ. ಚಲನಚಿತ್ರ ವ್ಯಕ್ತಿಯ ಒಳಗೂ ಚಲಿಸುವ ಚಿತ್ರ. ಪಾವಿತ್ರ್ಯ. ಅಪಾವಿತ್ರ್ಯತೆಗಳನ್ನು ಅನಾವರಣ ಮಾಡುವ ಮಾಧ್ಯಮ. ಇಂತಹ ಒಂದು ಯಶಸ್ವಿ ಪ್ರಯತ್ನವೇ ‘ವಿಮುಕ್ತಿ’. ಸುಮಾರು ನೂರು ವರ್ಷಗಳ ಹಿಂದೆ ಸಿಗ್ಮಂಡ್ ಫ್ರಾಯ್ಡ್‌ರ ಮನೋವಿಶ್ಲೇಷಣೆಯ ಭಿನ್ನಮತದವರಾದ ಕಾರ್ಲ್ ಗುಸ್ತಾಫ್ ಯೂಂಗ್ ಬಳಸಿದ್ದರೆನ್ನಲಾದ ‘ಎಲೆಕ್ಟ್ರಾಕಾಂಪೆಕ್ಲ್ಸ್’ (ಬಾಲ್ಯದ ಲೈಂಗಿಕ ಬೆಳವಣಿಗೆಯ ಹಂತದಲ್ಲಿ ಹೆಣ್ಣು ಮಗುವಿನ ಅತಿಯಾದ ತಂದೆಯತ್ತದ ಒಲವು/ಅವಲಂಬನೆ) ವರ್ತನೆಯ ನೈದಾನಿಕತೆ ಬಿಂಬಿಸುವ ಚಿತ್ರವಿದು ಎನ್ನುವ ಭಾವನೆ ನಿರ್ಮಾಪಕರದ್ದು.

ಒಟ್ಟಿನಲ್ಲಿ, ಮಾನವನ ಸಂಬಂಧಗಳು ವಿಕೃತಗೊಳ್ಳುವುದಕ್ಕೂ ಸಹ ಅತಿಯಾದ ಮೋಹ, ಒಲವುಗಳೇ ಕಾರಣವಾಗುವುದು ಎನ್ನುವ ಸಂದೇಶ ಈ ಮೂಲಕ ಸ್ಪಷ್ಟ. ಮಕ್ಕಳ ಉತ್ತಮ ಮಾನಸಿಕ ಬೆಳವಣಿಗೆಯಲ್ಲಿ ಅಪ್ಪ-ಅಮ್ಮ ಮತ್ತು ಮನೆಯ ವಾತಾವರಣ ಬೀರುವ ಪ್ರಭಾವಗಳು ಏನೆಲ್ಲಾ ಮಾಡಬಲ್ಲದು ಎನ್ನುವ ಸಾರಾಂಶವನ್ನು ಚಿತ್ರ ಸಾರುತ್ತದೆ. ಬದಲಾಗುತ್ತಿರುವ ಸಂಬಂಧಗಳನ್ನು ಗುರುತಿಸುತ್ತಿರುವ ಇಂದಿನ ಹೊಸ ಸಾಮಾಜಿಕತನದಲ್ಲಿ ಇಂತಹ ಸ್ಥಿತಿಗಳು ಅನಿವಾರ್ಯವಾಗುವುದೇ ? ಚಿಂತನೆ-ಚರ್ಚೆಗಳಿಗೆ ಹೇರಳವಾದ ಅವಕಾಶ ಕಲ್ಪಿಸುವ ಚಲನಚಿತ್ರವಿದು.