ಸಾಂಗತ್ಯ ಚಿತ್ರಶಿಬಿರದಲ್ಲಿ ನೋಡಿ, ಚರ್ಚಿಸಿದ ಮತ್ತೊಂದು ಚಿತ್ರ ಫ್ರೆಂಚ್ ನ ಪೊನೆಟ್. ಸಾವು ಎಂಬ ಪರಿಕಲ್ಪನೆಯನ್ನೇ ಅರ್ಥ ಮಾಡಿಕೊಳ್ಳಲು ಹೆಣಗುವ ಮಗುವಿನ ಸ್ಥಿತಿಯನ್ನು ಕಟ್ಟಿಕೊಟ್ಟು ನಮ್ಮೊಳಗೆಲ್ಲಾ ಒಂದು ಧರ್ಮಸಂಕಟದ ಸ್ಥಿತಿಯನ್ನು ಸೃಷ್ಟಿಸುತ್ತಾನೆ ನಿರ್ದೇಶಕ. ಈ ಚಿತ್ರದ ಕುರಿತು ದೀಪಾ ಹಿರೇಗುತ್ತಿ ಬರೆದಿದ್ದಾರೆ. ಓದಿ ಅಭಿಪ್ರಾಯ ಹೇಳಿ.

ನಾಲ್ಕರ ಹರೆಯದ ಪೊನೆಟ್ ಎಂಬ ಬಾಲೆಯ ತಾಯಿ ಅಪಘಾತದಲ್ಲಿ ಮೃತಪಟ್ಟಿರುತ್ತಾಳೆ. ತನ್ನ ತಾಯಿ ಸತ್ತುಹೋಗಿದ್ದಾಳೆ ಅಂದರೆ ಆಕೆ ಇನ್ನೆಂದೂ ಮರಳಿ ಬರಲಾರಳು ಎಂಬ ಸತ್ಯವನ್ನು ಪೊನೆಟ್ ನಂಬುವುದೇ ಇಲ್ಲ. ಇತರ ಎಲ್ಲ ಮಕ್ಕಳಂತೆ ಹಿರಿಯರು,ವಾರಿಗೆಯ ಮಕ್ಕಳು, ಶಿಕ್ಷಕರು, ಪುಸ್ತಕಗಳು, ಚರ್ಚ್‌ಗಳು, ಗಾಳಿಮಾತುಗಳು ಈ ಎಲ್ಲ ಮೂಲಗಳಿಂದ ತಿಳಿಸಲ್ಪಡುವ ಹಲವಾರು ಸತ್ಯಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಾಳೆ. ಕೊನೆಗೆ ತನ್ನದೇ ಆದ ದಾರಿಯಲ್ಲಿ ಗತಿಸಿದ ತಾಯಿಗೋಸ್ಕರ ಕಾಯಲು ನಿರ್ಧರಿಸುತ್ತಾಳೆ.

ಸತ್ತವರು ವಾಪಾಸು ಬರುವುದಿಲ್ಲ ಎಂದು ಸ್ನೇಹಿತ ಹೇಳಿದಾಗ ಜೀಸಸ್ ತನ್ನ ಸ್ನೇಹಿತರಿಗೋಸ್ಕರ ಮರಳಿ ಬಂದ. ನಾನು ಗೆಳತಿಗಿಂತಲೂ ಹೆಚ್ಚು, ನನ್ನಮ್ಮನಿಗೆ ನಾನು ಮಗಳು ಎನ್ನುವ ಅವಳ ಮುಗ್ಧತರ್ಕ ಇಷ್ಟವಾಗುತ್ತದೆ.ಈ ಕಾಯುವಿಕೆಯ ಪ್ರಕ್ರಿಯೆಯಲ್ಲಿ ಸುತ್ತಲಿನ ಜಗತ್ತಿನೊಂದಿಗಿನ ಆಕೆಯ ಸಂಪರ್ಕ ಮಿತಗೊಳ್ಳುತ್ತಾ ಹೋಗುತ್ತದೆ.

ಕಾದು ಕಾದು ಸುಸ್ತಾದರೂ ತಾಯಿ ಬರದಿದ್ದಾಗ ಯುಹೂದಿ ಹುಡುಗಿಯೊಬ್ಬಳ ಮಾಂತ್ರಿಕ ಮಂತ್ರಗಳು,ರಿಚ್ಯುವಲ್‌ಗಳ ಮೊರೆ ಹೋಗುತ್ತಾಳೆ.ಅದೂ ಫಲ ಕೊಡದಿದ್ದಾಗ ಕೊನೆಗೆ ಪೊನೆಟ್ ದೇವರ ಮಗುವಾಗಿ ತಾಯಿಯನ್ನು ಕೋರುತ್ತಾಳೆ. “ದೇವರೇ,ನನ್ನ ಅಮ್ಮ ಸತ್ತುಹೋಗಿದ್ದಾಳೆಂದು ನಿನಗೆ ಗೊತ್ತು. ಏಕೆಂದರೆ ಅವಳು ನಿನ್ನ ಹತ್ತಿರ ಇದ್ದಾಳಂತೆ. ನಾನು ನನ್ನಮ್ಮನ ಹತ್ತಿರ ಮಾತಾಡಬೇಕು” ಎಂದು ಬೇಡುತ್ತಾಳೆ. ತನ್ನ ತಾಯಿ ವಾಪಾಸಾಗುತ್ತಾಳೆಂಬ ಅವಳ ನಂಬಿಕೆ ಕಿಂಚತ್ತೂ ಅಲ್ಲಾಡುವುದಿಲ್ಲ. ಅಜ್ಜ ವಾಪಾಸು ಬರಲೇ ಇಲ್ಲ ಎಂದು ಮಾಟಿಯಾಜ್ ಹೇಳಿದ್ದಕ್ಕೆ ಪೊನೆಟ್, ಅಜ್ಜನಿಗೋಸ್ಕರ ಯಾರೂ ಕಾಯುತ್ತಿರಲೇ ಇಲ್ಲ ಎನ್ನುತ್ತಾಳೆ.ಅಮ್ಮಾ,ನನಗೆ ನೀನು ಬೇಕು ಬಾರಮ್ಮಾ ಎಂದು ಪದೇಪದೇ ಬಿಕ್ಕಳಿಸುತ್ತಾ ಅಳುವ ಪೊನೆಟ್ ಮನ ಕಲಕುತ್ತಾಳೆ.

ಅವಳು ಹೀಗೆ ಕೊರಗುವಾಗಲೇ ಅವಳ ತಾಯಿ ಬಂದೇ ಬಿಡುತ್ತಾಳೆ. ಪೊನೆಟ್‌ಳೊಂದಿಗೆ ಮಾತಾಡುತ್ತಾಳೆ,ಅಪ್ಪಿ ಮುದ್ದಿಸುತ್ತಾಳೆ.ತನ್ನ ಕೆಂಪು ಸ್ವೆಟರ್ ತೊಡಿಸಿ ನಗುತ್ತಿರಬೇಕೆಂದು ಹೇಳಿ ಹೋಗುತ್ತಾಳೆ.ಅಪ್ಪನ ಹತ್ತಿರ ಪೊನೆಟ್, “ಅಮ್ಮ ಖುಷಿಯಾಗಿರಲು ಕಲಿಯಬೇಕೆಂದು ಹೇಳಿದ್ದಾಳೆ” ಎನ್ನುವುದರೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.

ಅತ್ಯಂತ ಪುಟ್ಟ ಮಕ್ಕಳ ಬಗ್ಗೆ ಪ್ರಮುಖ ಚಿತ್ರಗಳು ಬರುವುದೇ ಅಪರೂಪ.ಹಾಗಿರುವಾಗ ನಿರ್ದೇಶಕ ಜಾಕಸ್ ಡೈಲನ್‌ರ ಈ ಪ್ರಯತ್ನ ಶ್ಲಾಘನಾರ್ಹ ಎಂದು ವಿಮರ್ಶಕರೊಬ್ಬರು ಹೇಳುತ್ತಾರೆ. ಸಾವು ಮತ್ತು ಧರ್ಮ ಇವು ವಯಸ್ಕರಿಗೂ ಕೂಡ ಕಷ್ಟಕರವಾದ concept ಗಳು.

ಅಂಥದ್ದರಲ್ಲಿ ನಾಲ್ಕರ ಮಗುವಿನ ಮೇಲೆ ಅವನ್ನು ಹೇರಿ, ಏಕೆ ತನ್ನ ತಾಯಿ ಮರಳಲಾರಳು ಎಂಬುದನ್ನು ಅರ್ಥಮಾಡಿಕೊಳ್ಳಲು ಆಕೆ ನಡೆಸುವ ಮಾನಸಿಕ ಹೋರಾಟವನ್ನು ಚಿತ್ರಿಸಿರುವ ರೀತಿ ನಿಜಕ್ಕೂ ಅನನ್ಯ ಎನ್ನುತ್ತಾರೆ ಇನ್ನೋರ್ವ ವಿಮರ್ಶಕರು.

ಪೊನೆಟ್‌ಳ ಪಾತ್ರ ವಹಿಸಿದ ನಾಲ್ಕರ ಮಗು ವಿಕ್ಟೋರಿಯಾ ಥಿವಿಸಾಲ್‌ಳ ಅಭಿನಯ(!) ಚಿತ್ರದ ಹೈಲೈಟ್.ನಿಜ ಹೇಳಬೇಕೆಂದರೆ ಅದನ್ನು ಅಭಿನಯ ಎನ್ನಲೇ ಸಾಧ್ಯವಿಲ್ಲ.” ಈ ನಿರ್ದೇಶಕ ಆ ಮಗು ಅತ್ಯುತ್ತಮ expression ನೀಡಬೇಕಾದರೇನೇ ಎಲ್ಲಾ ಸೀನ್‌ಗಳನ್ನು ಹೇಗೆ ಚಿತ್ರಿಸಿದ್ದಾನೋ” ಎಂದು ಒಬ್ಬ ಚಿತ್ರಪ್ರೇಮಿ ಅಚ್ಚರಿ ವ್ಯಕ್ತಪಡಿಸಿದ್ದ. ಈ ಚಿತ್ರ ಎಷ್ಟು ಸ್ವಾಭಾವಿಕವಾಗಿದೆಯೆಂದರೆ you’ll get the first hand experience of the pain and agony of the child.
ಈ ಚಿತ್ರದ ಅಭಿನಯಕ್ಕೆ 1996 ರ  ವೆನಿಸ್ ಚಿತ್ರೋತ್ಸವದಲ್ಲಿ  ವಿಕ್ಟೋರಿಯಾಗೆ ಅತ್ಯುತ್ತಮ ನಟಿ ಪ್ರಶಸ್ತಿ  ಬಂತು! ನಾಲ್ಕರ ಮಗುವಿಗೆ ಪ್ರಶಸ್ತಿ  ಬಂದುದಕ್ಕೆ ವಿವಾದಗಳೆದ್ದರೂ ಅವಳ  ಅಭಿನಯವೇ ಎಲ್ಲರ ಬಾಯಿ ಮುಚ್ಚಿಸಿತು!

ಪೊನೆಟ್ ಳ ತಳಮಳವಲ್ಲದೇ ಈ  ಚಿತ್ರದಲ್ಲಿ ಗಮನ ಸೆಳೆಯುವುದು ಮಕ್ಕಳ  ಲೋಕ.ಸಮಾಜದ ಪ್ರಭಾವದಿಂದ  ದೊಡ್ಡವರ ಥರವೇ ವರ್ತಿಸುವ ಮಕ್ಕಳು,ತಮ್ಮ ಪ್ರಪಂಚದಲ್ಲಿ ದೊಡ್ಡವರನ್ನೆಲ್ಲ ಮರೆತು ಮುಗ್ಧವಾಗಿರುವ ಮಕ್ಕಳು…. ಬಾಲ್ಯವನ್ನು ಇಷ್ಟು ಆಳವಾಗಿ ಅಧ್ಯಯನ ಮಾಡಿರುವ ನಿರ್ದೇಶಕನಿಗೆ ಅಭಿನಂದನೆ ಸಲ್ಲಿಸಲೇಬೇಕು.

ಈ ಚಿತ್ರ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. 97 ನಿಮಿಷದ ಈ ಸಿನಿಮಾ ನೋಡಿ ಮೌನವಾಗಿ ಪ್ಲೀಸ್!