ಗಿರೀಶ್ ಕಾಸರವಳ್ಳಿ ನೇತೃತ್ವದ ಚಿತ್ರ ಸಮೂಹ ಸಂಘಟನೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತರನ್ನು ಜ.31 ರಂದು ಅಂದರೆ ಇದೇ ಭಾನುವಾರ ಅಭಿನಂದಿಸಲಿದೆ. ಬಹಳ ಸಂತೋಷದ ಸಂಗತಿಯೆಂದರೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪುರಸ್ಕೃತರಾದ ಹಿರಿಯ ಸಿನೆ ಛಾಯಾಗ್ರಾಹಕ ವಿ. ಕೆ. ಮೂರ್ತಿಯವರನ್ನು ಅಭಿನಂದಿಸಲಾಗುತ್ತಿದೆ.

ಚಿತ್ರ ಸಮೂಹಕ್ಕೆ ಸಿಕ್ಕಾಪಟ್ಟೆ ಖುಷಿ. ಕಾರಣ, ಮೂರು ಚಿತ್ರಗಳು ಪ್ರಶಸ್ತಿ ಪಡೆದಿದ್ದಕ್ಕೆ, ಜತೆಗೆ ಅದರಲ್ಲಿ ಒಬ್ಬರು ತಮ್ಮದೇ ಕುಟುಂಬದ (ಚಿತ್ರ ಸಮೂಹ) ಸಕ್ರಿಯ ಸದಸ್ಯರಾಗಿರುವುದಕ್ಕೆ. ಪಿ. ಶೇಷಾದ್ರಿ ಚಿತ್ರಸಮೂಹದ ಸಕ್ರಿಯ ಸದಸ್ಯರು.

ಜ. 31 ರಂದು ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳ ಪ್ರದರ್ಶನ, ಸಂವಾದ, ಚರ್ಚೆ ಹಾಗೂ ಅಭಿನಂದನೆ.

ಅಂದು ಬೆಳಗ್ಗೆ 10 ಕ್ಕೆ ಅಭಯಸಿಂಹ ನಿರ್ದೇಶನದ “ಗುಬ್ಬಚ್ಚಿಗಳು” ಚಿತ್ರ ಪ್ರದರ್ಶನ ನಡೆಯಲಿದೆ. ಅನಂತರ 11. 45 ಕ್ಕೆ ಶಿವಧ್ವಜರ ನಿರ್ದೇಶನದ ತುಳು ಚಿತ್ರ ” ಗಗ್ಗರ” ದ ಪ್ರದರ್ಶನ. ಮಧ್ಯಾಹ್ನ 2. 30 ಕ್ಕೆ ಪಿ. ಶೇಷಾದ್ರಿ ನಿರ್ದೇಶನದ “ವಿಮುಕ್ತಿ” ಚಿತ್ರ ಪ್ರದರ್ಶನಗೊಳ್ಳಲಿದೆ.

ಎಲ್ಲ ಚಿತ್ರ ಪ್ರದರ್ಶನಗೊಂಡ ನಂತರ ಸಂಜೆ 4.45 ಕ್ಕೆ ಚಿತ್ರ ತಂಡದವರೊಂದಿಗೆ ಸಂವಾದವಿದೆ. 6 ರಕ್ಕೆ ಎಲ್ಲರನ್ನೂ ಅಭಿನಂದಿಸುವ ಹೊತ್ತು. ಎಲ್ಲರೂ ಪಾಲ್ಗೊಳ್ಳಿ. ಪಾಸ್ ಮತ್ತಿತರ ವಿವರಗಳಿಗೆ ಸುಚಿತ್ರಾ ಫಿಲಂ ಸೊಸೈಟಿ- ದೂರವಾಣಿ ಸಂಖ್ಯೆ 080-26711785.