ವಿನಾಯಕರಾಮ್ ಕಲಗಾರು ವಿಜಯ ಕರ್ನಾಟಕದಲ್ಲಿ ಬರೆದ ಲೇಖನವಿದು. ಪಿ. ಶೇಷಾದ್ರಿ ನಮ್ಮ ಮಧ್ಯೆ ಇರುವ ಒಬ್ಬ ಕ್ರಿಯಾಶೀಲ ನಿರ್ದೇಶಕ. ಅವರ “ವಿಮುಕ್ತಿ” ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಬಂದಿರುವ ಸಂದರ್ಭದಲ್ಲಿ ಬರೆದ ಈ ಲೇಖನ ಮತ್ತಷ್ಟು ಜನರ ಓದಿಗೆ ಲಭ್ಯವಾಗಲಿ ಎಂದು ಇಲ್ಲಿ ಪ್ರಕಟಿಸಲಾಗಿದೆ.

ಊರಲ್ಲಿ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಜಾತ್ರೆಗೆ ಟೆಂಟ್ ಸಿನಿಮಾ ಬರುತ್ತಿತ್ತು. ಅದರ ಟೆಂಟ್ ಕಟ್ಟಿ, ಮೊದಲ ಶೋಗೆ ಟಿಕೆಟ್ ಪಡೆದು, ಕಪ್ಪು ಬಿಳುಪಿನ ‘ಸತ್ಯ ಹರಿಶ್ಚಂದ್ರ’ ನೋಡುತ್ತಾ ಹುಡುಗ ಭಾವಪರವಶನಾಗುತ್ತಿದ್ದ. ಮನೆಯಲ್ಲಿ ‘ಅಪ್ಪಾಜೀ… ಬೈಲ್ ಕಡೆ ಹೋಗ್‌ಬರ‍್ತೀನಿ…’ ಅಂತ ಹೇಳಿ, ಮರುದಿನವೂ ಗುಟ್ಟಾಗಿ ಟೆಂಟ್ ಹಿಂಭಾಗದ ಕಿಂಡಿಯಲ್ಲಿ ಸಿನಿಮಾ ನೋಡುತ್ತಿದ್ದ !

ಆ ಊರಿನ ಹೆಸರು ದಂಡಿನ ಶಿವರ. ಬಟಾ ಬಯಲುಸೀಮೆ ತುಮಕೂರಿನ ಕುಗ್ರಾಮ. ಅಲ್ಲಿದ್ದದ್ದು ಕೇವಲ ಕಲ್ಲು ಬಂಡೆಗಳು, ಬೊಗಸೆ ನೀರಿಗೂ ಕಷ್ಟ. ಹಿಂದೆಂದೋ ಯಾವುದೋ ದಂಡು ಅಲ್ಲಿ ಶಿಬಿರ ಹೂಡಿತ್ತು ಎಂಬ ಪ್ರತೀತಿಯಿಂದ ಆ ಹೆಸರು. ಊರಿನಲ್ಲಿ ನಿಧಿಯಿದೆ ಎಂಬ ಊಹಾಪೋಹ.

ಆ ಹುಡುಗನಿಗೆ ಕುತೂಹಲ ಹೆಚ್ಚಾಯಿತು. ಅರ್ಧ ರಾತ್ರಿ ಹೊತ್ತಲ್ಲಿ ಕಸ ಗುಡಿಸುವ ಕಡ್ಡಿಯಿಂದ ನೆಲವನ್ನು ಅಗೆಯುತ್ತಿದ್ದ. ನಿಧಿ ಸಿಗಲಿಲ್ಲ.

*
ಅದೇ ಹುಡುಗನಿಗೆ ಈಗ ನಿಧಿಗಿಂತ ಬೆಲೆಬಾಳುವ ‘ಸ್ವರ್ಣಕಮಲ’ ಸಿಕ್ಕಿದೆ. ನಿರ್ದೇಶಿಸಿದ ಐದೂ ಚಿತ್ರಗಳಿಗೆ ಹೊನ್ನಿನ ಗರಿ. ಐದನೇ ಬಾರಿ ಪ್ರಶಸ್ತಿ ಗಳಿಸುವ ಮೂಲಕ ಅಂದಿನ ಹುಡುಗ, ಇಂದಿನ ನಿರ್ದೇಶಕ ಪಿ.ಶೇಷಾದ್ರಿ, ದೇಶಾದ್ರಿಯಾಗಿದ್ದಾರೆ !

*
ಅದು ಹೋಬಳಿ ಕೇಂದ್ರ. ಅಲ್ಲೊಬ್ಬ ಬಡ ಮೇಷ್ಟ್ರಿದ್ದರು. ‘ನಾಗರಹಾವಿ’ನ ಚಾಮಯ್ಯ ಮೇಷ್ಟ್ರ ಥರ. ಹೆಸರು ಪಟ್ಟಾಭಿರಾಮಯ್ಯ. ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರು. ಮಡದಿ ಕಮಲಮ್ಮ. ಹಾಲಿನಂಥ ಬಣ್ಣದ ಸ್ಫುರದ್ರೂಪಿ. ಮೂರು ಮಕ್ಕಳ ತಾಯಿಯಾಗಿದ್ದ ಆಕೆಯ ಕೊನೆಯ ಮಗ ಶೇಷಾದ್ರಿ. ಮೇಷ್ಟ್ರ ಮಕ್ಕಳು ದಡ್ಡರಾಗಿರುತ್ತಾರೆ ಎಂಬ ಮಾತಿನ ತಲೆ ಮೇಲೆ ಹೊಡೆದಂತಿದ್ದ ಆ ಹುಡುಗ. ಎಂಎ ಮಾಡುತ್ತಿದ್ದ ಶ್ರೀರಾಮಣ್ಣ ತರುತ್ತಿದ್ದ ಸಾಹಿತ್ಯ ಕೃತಿಗಳನ್ನು ಏಳನೇ ತರಗತಿಯಲ್ಲಿದ್ದಾಗಲೇ ಓದಿ ಮುಗಿಸುತ್ತಿದ್ದ.

*
ಊರಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿತ್ತು. ಅಲ್ಲಿಗೆ ಟೆಂಟ್ ಸಿನಿಮಾ ಬರುತ್ತಿತ್ತು. ಟೆಂಟ್ ಕಟ್ಟುವ ತಂಡಕ್ಕೆ ಈತನೂ ಸೇರಿಕೊಂಡ. ಅದಕ್ಕೆ ಪ್ರತಿಯಾಗಿ ಟೆಂಟ್ ಮ್ಯಾನೇಜರ್ ಮೊದಲ ಶೋಗೆ ಟಿಕೆಟ್ ಕೊಡುತ್ತಿದ್ದ. ಒಳಗೆ ಹೋಗುತ್ತಿದ್ದಂತೆ ಕಪ್ಪು ಬಿಳುಪಿನ ಸತ್ಯ ಹರಿಶ್ಚಂದ್ರ… ನೋಡುತ್ತಾ ನೋಡುತ್ತಾ ಹುಡುಗ ಭಾವಪರವಶನಾಗುತ್ತಿದ್ದ. ಮನೆಯಲ್ಲಿ ‘ಅಪ್ಪಾಜೀ… ಬೈಲ್ ಕಡೆ ಹೋಗ್‌ಬರ‍್ತೀನಿ…’ ಅಂತ ಹೇಳಿ, ಮರುದಿನವೂ ಗುಟ್ಟಾಗಿ ಟೆಂಟ್ ಹಿಂಭಾಗದ ಕಿಂಡಿಯಲ್ಲಿ ಸಿನಿಮಾ ನೋಡುತ್ತಿದ್ದ !
*
ಮೀಸೆ ಚಿಗುರಿತು, ಸಾಹಿತ್ಯದ ಒಲವು  ಹೆಚ್ಚಾಯಿತು. ಊರಲ್ಲಿ ಲೆಕ್ಕವಿಲ್ಲದಷ್ಟು  ಹೊಯ್ಸಳ ಶಿಲ್ಪಗಳು ಪಾಳು ಬಿದ್ದಿದ್ದವು.  ಶೇಷಾದ್ರಿ ಆ ಬಗ್ಗೆ ಲೇಖನ ಬರೆದು  ಪ್ರಜಾವಾಣಿಯ ವಾಚಕರ ವಾಣಿಗೆ  ಕಳುಹಿಸಿದ. ಪತ್ರಿಕೆ ಅದನ್ನು ಪ್ರಕಟಿಸಿತು.  ಅಂದಿನಿಂದ ಊರಲ್ಲಿ ಆತನಿಗೆ ಸ್ಟಾರ್  ವ್ಯಾಲ್ಯೂ ಕೂಡ ಬಂತು. ಅಲ್ಲಿಂದ  ಹುಡುಗನಿಗೆ ಏನನ್ನಾದರೂ  ಬರೆಯುತ್ತಿರಬೇಕು ಎಂಬ ಧೈರ್ಯ  ಬಂತು !

ಹೈಸ್ಕೂಲ್‌ಗೆ ಕಾಲಿಟ್ಟಾಗ ಶೇಷಾದ್ರಿ ಕಣ್ಣು ಕುಂಚದ ಕಡೆ ಹರಿಯಿತು. ಎಂ.ವಿ.ಆಚಾರ್ಯ ಆ ಕಾಲದಲ್ಲೇ ಅಂಚೆ ಮುಖೇನ ಪೇಂಟಿಂಗ್ ಕ್ಲಾಸ್ ಮಾಡುತ್ತಿದ್ದರು. ಬಣ್ಣ ಹಚ್ಚುವವರ ಬದುಕು ಕತ್ತಿಯಂಚಿನ ನಡಿಗೆ ಎಂದು ನಂಬಿದ್ದರು ಮೇಷ್ಟ್ರು. ಆ ಕಾರಣಕ್ಕೆ ಕದ್ದು ಮುಚ್ಚಿ ಚಿತ್ರ ಬರೆಯುವುದು ಅನಿವಾರ್ಯವಾಯಿತು. ಅದೇ ಹಾದಿಯಲ್ಲಿ ಹುಡುಗ ಪಿಯುಸಿ ಮುಗಿಸಿದ.

ಮುಂದೇನು ?
ಗೊತ್ತಿಲ್ಲ. ಬೆಂಗಳೂರು ಬಾ ಬಾ ಎನ್ನುತ್ತಿತ್ತು. 1985 ರ ಅದೊಂದು ದಿನ ಹುಡುಗ ಮನೆಯಿಂದ ರಾಜಧಾನಿಯತ್ತ ಮುಖ ಮಾಡಿದ. ಕೈಯಲ್ಲಿ ಒಂದು ಹಳೇ ಟ್ರಂಕು, ಕಿಸೆಯಲ್ಲಿ ಮೂವತ್ತು ರೂಪಾಯಿ… ಅಷ್ಟೇ. ಬೆಂಗಳೂರಿನಲ್ಲಿ ಅಕ್ಕನ ಮನೆ ಸೇರಿಕೊಂಡ. ಎರಡೇ ವರ್ಷದಲ್ಲಿ ನವಕರ್ನಾಟಕ ಪಬ್ಲಿಕೇಷನ್ ಸೇರಿದ. ಅಲ್ಲಿ ಒಂದಷ್ಟು ಬರೆದ. ನಂತರ ‘ಸುದ್ದಿ ಸಂಗಾತಿ’ ಪತ್ರಿಕೆಯಲ್ಲಿ ಅವಕಾಶ ಲಭಿಸಿತು. ಅಲ್ಲಿ ಸಿನಿಮಾ ಸುದ್ದಿ, ಲೇಖನ ಬರೆಯಲು ಶುರುಮಾಡಿದ. ಅಲ್ಲಿ ನಿರ್ದೇಶಕ ಹಾಗೂ ನಟ ಅಶೋಕ್ ಬಾದರದಿನ್ನಿ ಪರಿಚಯವಾದರು. ಅವರ ‘ಗೌರಿಶಂಕರ’ ಚಿತ್ರಕ್ಕೆ ಸಂಭಾಷಣೆ ಬರೆದರು, ಸಹ ನಿರ್ದೇಶಕರಾದದರು. ಆಗ ಸಿಕ್ಕರು ನಾಗಾಭರಣ. ಅವರ ಜತೆ ಆಕಸ್ಮಿಕ, ಚಿನ್ನಾರಿ ಮುತ್ತ, ಸಾಗರದೀಪ ಚಿತ್ರಗಳಿಗೆ ಕೆಲಸ ಮಾಡಿದರು. ಕಿರುತೆರೆಯಲ್ಲಿ ಆಫೀಸಾಯಣ, ತಿರುಗುಬಾಣ ಮೊದಲಾದ ಧಾರಾವಾಹಿಗಳಿಗೆ ಸಹ ನಿರ್ದೇಶಕರಾದರು. ಇಂಚರ ಹೆಸರಿನ ಧಾರಾವಾಹಿ ನಿರ್ದೇಶಿಸಿದರು. ಸೀತಾರಾಮ್ ಜತೆ ‘ಕಾಮನಬಿಲ್ಲು’, ‘ಮಾಯಾಮೃಗ’… ಹೀಗೆ ಬದುಕು ಪರಿಶ್ರಮಕ್ಕೆ ತಕ್ಕ ಅನುಭವ ಕೊಡತೊಡಗಿತು.

ಅಲೆದಲೆದು ದಣಿದು
2000 ನೇ ಇಸವಿ ಬರುವ ಹೊತ್ತಿಗೆ ಅವರು ಮಾಗಿದ್ದರು. ಸಿನಿಮಾ ಕನಸು ಒಂದು ಕಡೆ. ಜನಪ್ರಿಯ ಚಿತ್ರ ಮಾಡುವುದಾ ? ಜನಪರ ಚಿತ್ರಗಳಿಗೆ ಕನ್ನಡಿ ಹಿಡಿಯುವುದಾ ? ಗೊಂದಲದ ನಡುವೆ ಸಿಕ್ಕ ಹಾದಿ ‘ಮುನ್ನುಡಿ’ ! ಬೊಳುವಾರು ಮಹಮ್ಮದ್ ಕುಂಞಿ ಅವರ ‘ಮುತ್ತುಚ್ಚೇರ’ ಕತೆಯನ್ನು ಸಿನಿಮಾ ಮಾಡಲು ನಿರ್ಧರಿಸಿದರು. ಕೈಯಲ್ಲಿದ್ದ ಕತೆ ಹಿಡಿದು, ಗಾಂಧಿನಗರ ಸುತ್ತಿದರು. ಕತೆ ಕೇಳಿದ ಕೆಲ ‘ಘನ’ ನಿರ್ಮಾಪಕರು- ಯಾರ್ರೀ ನೋಡ್ತಾರೆ ಈ ಮುಸ್ಲಿಂ ಕತೆಯನ್ನ. ನಮ್ಮವರು ನೋಡಲ್ಲ, ಮುಸ್ಲಿಂ ಮಂದಿಯಂತೂ ನೋಡೋದೇ ಇಲ್ಲ… ಎಂದು ಕೈ ಎತ್ತಿದರು.

ಗಲ್ಲಿ ಗಲ್ಲಿ ಸುತ್ತಿ ಸುಸ್ತಾದ ಶೇಷಾದ್ರಿ, ಸ್ನೇಹಿತರೆಲ್ಲ ಸೇರಿ ಏಕೆ ನಿರ್ಮಾಣ ಕ್ಕಿಳಿಯಬಾರದು ಎಂದು ಯೋಚಿಸಿದರು. ತುಮಕೂರು, ಮಂಗಳೂರಿನ ಒಂದಷ್ಟು ಸ್ನೇಹಿತರು ಸಹಕರಿಸಿದರು. ಚಿತ್ರಕ್ಕೆ ಮುನ್ನುಡಿ ಎಂದು ಹೆಸರಿಡ ಲಾಯಿತು. ಚಿತ್ರಕ್ಕೆ ದುಡಿದ ಹೆಚ್ಚಿನ ತಂತ್ರಜ್ಞರು ಸಿನಿಮಾಗೆ ಪಾಲುದಾರ ರಾದರು. ಸಂಗೀತ ನಿರ್ದೇಶಕ ವಿ.ಮನೋಹರ್ ಒಂದಷ್ಟು ಬಂಡವಾಳ ಹೂಡಿದರು. ನಟ ದತ್ತಣ್ಣ, ಸಂಕಲನಕಾರ ಕೆಂಪರಾಜ್ ಸೇರಿದಂತೆ 9 ಮಂದಿ ಕೈ ಜೋಡಿಸಿದರು. ಹಾಗಾಗಿ ಅದಕ್ಕೆ ‘ನವ ಚಿತ್ರ ನಿರ್ಮಾಣ ಸಂಸ್ಥೆ’ ಎಂದು ಹೆಸರಿಡಲಾಯಿತು. ಕಡಿಮೆ ಬಜೆಟ್‌ನಲ್ಲೇ ಸಿನಿಮಾ ಆಯಿತು. ಪ್ರಥಮ ಯತ್ನದಲ್ಲೇ ರಾಷ್ಟ್ರಪ್ರಶಸ್ತಿ ಲಭಿಸಿತು. ಇತಿಹಾಸ ನಿರ್ಮಿಸಿತು.

ಸಹಕಾರಿ ತತ್ತ್ವ
ಮೊದಲ ಏಟಿಗೆ ಸಿಕ್ಸರ್ ಎತ್ತಿದ್ದು ಅವರಲ್ಲಿ ಹುಮ್ಮಸ್ಸು ಮೂಡಿಸಿತು. ಒಬ್ಬನೇ ಕೋಟ್ಯಂತರ ರೂ. ಸುರಿಯುವ ಬದಲು ಹತ್ತು ಮಂದಿ ಸೇರಿ ಹಬ್ಬ ಆಚರಿಸೋಣ ಎಂಬ ತೀರ್ಮಾನಕ್ಕೆ ಬಂದರು. ಕೂಡಿ ಸಿನಿಮಾ ನಿರ್ಮಿಸಿದರೆ ಸ್ವರ್ಗ ಸುಖ ಎಂಬ ಸಿದ್ಧಾಂತ ರೂಪಿಸಿಕೊಂಡರು. ‘ಅತಿಥಿ’ ಚಿತ್ರ ನಿರ್ಮಿಸಿ, ನಿರ್ದೇಶಿದರು. ಅದೂ ಕೂಡ ರಾಷ್ಟ್ರಮಟ್ಟದಲ್ಲಿ ಮಿಂಚಿತು. ಯಾವ ಪ್ರಕಾಶ್ ರೈ ಕೇವಲ ೧ ರೂ. ಸಂಭಾವನೆಗೆ ನಟಿಸಿದರೋ, ಅವರೇ ಶೇಷಾದ್ರಿ ಮುಂದೆ ನಿಂತು ‘ನಿಮ್ ಸಿನ್ಮಾದಲ್ಲಿ ನಟಿಸಿದ್ದು ಸಾರ್ಥಕವಾಯ್ತು ಕಣ್ರೀ’ ಎಂದು ಬೆನ್ನು ತಟ್ಟಿದರು. ತದನಂತರ ‘ಬೇರು’ ಚಿತ್ರಕ್ಕೆ ಕ್ಯಾಮೆರಾ ಹಿಡಿದರು. ಮತ್ತೆ ಪ್ರಶಸ್ತಿ, ಗೌರವ. ಈ ನಡುವೆ ನಟಿ ಜಯಮಾಲಾ ‘ತುತ್ತೂರಿ’ ಸಿನಿಮಾ ಮಾಡಿಕೊಡಲು ಕೇಳಿಕೊಂಡರು.

‘ಸ್ವರ್ಣಕಮಲ’ ಅರಳಿತು !
ಈಗ ಮತ್ತೊಮ್ಮೆ ‘ವಿಮುಕ್ತಿ’ ಚಿತ್ರ ಸುದ್ದಿ ಮಾಡಿದೆ. ಆ ಮೂಲಕ ಶೇಷಾದ್ರಿ ‘ಫೈವ್‌ಸ್ಟಾರ್’ ಆಗಿದ್ದಾರೆ. ಅದು ಅವರ ಸಾಧನೆಯ ಹಾದಿಯ ಮತ್ತೊಂದು ಮೈಲಿಗಲ್ಲು !

ವಿಮುಕ್ತಿ ಹುಟ್ಟಿದ್ದು ಹೇಗೆ ?
‘ವಿಮುಕ್ತಿ ಭವನ’ದ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಓದಿದ ಅವರು, ವಾರಾಣಸಿಯತ್ತ ಹೊರಟರು. ಅಲ್ಲಿನ ಜೀವನದ ಕೊನೆಯ ದಿನಗಳನ್ನು ಕಳೆಯಲು ಅನುವು ಮಾಡಿಕೊಡುವ ವಿಮುಕ್ತಿ ಭವನಕ್ಕೆ ಭೇಟಿಕೊಟ್ಟರು. ನಾವು ಸಾವನ್ನು ಕಣ್ಣೀರಿಟ್ಟು ಆಹ್ವಾನಿಸಿದರೆ, ಅಲ್ಲಿರುವ ಮುದಿ ಜೀವಗಳು ಆನಂದದಿಂದ ಸಾವಿಗೆ ರತ್ನಗಂಬಳಿ ಹಾಸುತ್ತಾರೆ. ಅಲ್ಲೇ ಹುಟ್ಟಿತು ವಿಮುಕ್ತಿ ಚಿತ್ರದ ಕತೆಯ ಎಳೆ. ಜತೆಗೆ ಮಾನವೀಯ ಮೌಲ್ಯಗಳು, ರಕ್ತಸಂಬಂಧಗಳು, ತಂದೆ ಮಗಳ ಪ್ರೀತಿ, ವ್ಯಾಮೋಹಕ್ಕೆ ತಿರುಗಿದಾಗ ಉಂಟಾಗುವ ಅನಾಹುತಗಳು… ಹೀಗೆ ಹತ್ತು ಹಲವು ಸಾಮಾಜಿಕ, ಕೌಟುಂಬಿಕ ವಿಷಯಗಳನ್ನು ಬೆಸೆದರು. ಅದೇ ವಿಮುಕ್ತಿ ಭವನದಲ್ಲಿ ಹೆಚ್ಚಿನ ಭಾಗ ಚಿತ್ರೀಕರಿಸಿದರು.

ಕಡಿಮೆ ಬಜೆಟ್‌ನ ಪ್ಯಾರಲಲ್ ಸಿನಿಮಾ ಮಾಡಿದರೆ ನಷ್ಟ ವಾಗುತ್ತದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ನಾವು ಹತ್ತು ವರ್ಷದಿಂದ ಇದನ್ನೇ ಮಾಡುತ್ತಿದ್ದೇವೆ, ಮಾಡಿ ಗೆಲ್ಲುತ್ತಿದ್ದೇವೆ. ಮತ್ತೆ ಸಿನಿಮಾ ಮಾಡುತ್ತೇವೆ. ಮಾಡುತ್ತಲೇ ಇರುತ್ತೇವೆ ಎನ್ನುತ್ತಾರೆ ಪಿ.ಶೇಷಾದ್ರಿ.