ವಿಷ್ಣುವರ್ಧನ್ ಕುರಿತು ಬಿ. ಸುರೇಶ್ ಬರೆದ ಲೇಖನ ಸ್ವಾನುಭವದ ನೆಲೆಯದ್ದು. ವಿಷ್ಣುವರ್ಧನ್ ಅವರ ಸ್ಕೂಲ್ ಮಾಸ್ಟರ್ ಚಲನಚಿತ್ರ ಬಿಡುಗಡೆಯಾಗಿರುವ ಸಂದರ್ಭದಲ್ಲಿ ಈ ಲೇಖನ ಹಾಕುತ್ತಿರುವುದು ಸುಮ್ಮನೆ. ಓದಿ ಹೇಳಿ.

ವಿಷ್ಣುವರ್ಧನ್ ಅವರನ್ನು ಹಾಗೆ ಕರೆದರೆ ಮಾತ್ರ ಸರಿ. ಅವರನ್ನ ನಾನು ಬಾಸ್ ಎನ್ನುತ್ತಾ ಇದ್ದೆ. ನನಗೆ ಅವರ ಪರಿಚಯ 1973 ರಿಂದ ಇತ್ತು. ಬಿ.ವಿ.ಕಾರಂತರು ನಿರ್ದೇಶಿಸಿದ್ದ ಈಡಿಪಸ್ ನಾಟಕದಲ್ಲಿ ನಾನು ಬಾಲನಟ. ಅವರೂ ಕಲಾವಿದರು. ಆಗ ನಾನು-ನಮ್ಮಣ್ಣ ಗುರುಮೂರ್ತಿ ಕೊಂಡೊಯ್ಯುತ್ತಿದ್ದ ನನ್ನ ತಾತನ ಸೈಕಲ್ ಅಲ್ಲಿದ್ದ ಎಲ್ಲರಿಗೂ ಬೇಕಿತ್ತು. ಕೋಕಿಲ ಮೋಹನ್, ಸುಂದರ್‌ರಾಜ್ ಅಲ್ಲದೆ ಆಗಿನ ಕುಮಾರ್ (ಆಗಿನ ಸಂಪತ್‌ಕುಮಾರ್ ನಂತರ ವಿಷ್ಣುವರ್ಧನ್ ಆದರು.)

ಎಲ್ಲರಿಗೂ ನಮ್ಮ ಸೈಕಲ್ ಮೇಲೆ ರವೀಂದ್ರ ಕಲಾಕ್ಷೇತ್ರದ ಸುತ್ತಲೂ ರೌಂಡ್ ಹಾಕಿ ಮಜಾ ತೆಗೆದುಕೊಳ್ಳುವ ಖುಷಿ ಇತ್ತು. ನಂತರ ಅವರು ಸಿನಿಮಾ ನಟರಾದರು. ಆಗಲೂ ಆತ ನಮ್ಮ ಮನೆಗೆ ಬಂದಿದ್ದರು. ನಮ್ಮಮ್ಮ ವಿಜಯಮ್ಮನ ಬಳಿ ಆಶೀರ್ವಾದ ತೆಗೆದುಕೊಳ್ಳಬೇಕು ಎಂದು ನಮ್ಮ ಮನೆಗೆ ಮೋಟಾರ್‌ಬೈಕೊಂದರಲ್ಲಿ ಬಂದಿದ್ದಾಗ ನಾನು ಶಾಲೆಗೆ ಹೋಗುವ ಅವಸರದಲ್ಲಿದ್ದೆ. ಅಮ್ಮನ ಬಳಿ ಮಾತಾಡಿದ ಅವರು, ನನ್ನನ್ನು ಶಾಲೆಯ ಬಾಗಿಲವರೆಗೂ ಬಿಟ್ಟು. ‘ಒಂದು ಐಸ್‌ಕ್ಯಾಂಡಿಯನ್ನು ಕೊಡಿಸಲೇ?’ ಎಂದದ್ದು ಈಗಲೂ ನೆನಪಿದೆ. ಅವರ ಮನೆ ನಮ್ಮ ಶಾಲೆಯ ಹತ್ತಿರವೇ ಇತ್ತು ಆಗ, ಬೆಂಗಳೂರಿನ ಶಂಕರಪುರದಲ್ಲಿ.

ಅದಾದ ನಂತರ ಹಲವು ಕಾಲ ಅವರನ್ನ ಚಿತ್ರ ನಟರಾಗಿಯೇ ನೋಡುತ್ತಾ ಇದ್ದೆ. ಶಾಲೆಯಲ್ಲಂತೂ ‘ಹಾವಿನದ್ವೇಷ…ಹನ್ನೆರಡು ವರುಷ’ ಎಂದು ಹಾಡುವುದೇ ದೊಡ್ಡ ಸಂಭ್ರಮ. ಶಾಲೆಯಲ್ಲಿ ಆಗ ರಾಜ್‌ಕುಮಾರ್ ಅಭಿಮಾನಿಗಳು ಮತ್ತು ವಿಷ್ಣು ಅಭಿಮಾನಿಗಳ ಗುಂಪು ಎರಡೂ ಇತ್ತು. ನಾನು ಎರಡೂ ಗುಂಪಿನ ಮಧ್ಯೆ ಓಡಾಡುತ್ತಾ ಇದ್ದೆ. ಅವರೆಲ್ಲರಿಗೂ ಅದಾಗಲೇ ನನಗೆ ವಿಷ್ಣು ಮತ್ತು ರಾಜ್ ಅವರ ನೇರ ಪರಿಚಯ ಇದೆ ಎಂಬುದೇ ದೊಡ್ಡ ವಿಷಯವಾಗಿತ್ತು. ಕಥೆ ಎಂದರೇನು? ಅದು ಹೇಗೆ ಸಿನಿಮಾ ಆಗುತ್ತದೆ? ಎಂದು ಅರಿವಾಗದ ವಯಸ್ಸಲ್ಲಿ ನಾವುಗಳೆಲ್ಲರೂ ಏನೇನೋ ಮಾತಾಡಿಕೊಂಡು ಹೊತ್ತು ಹಾಳು ಮಾಡುತ್ತಾ ಇದ್ದದ್ದು ಇಂದಿಗೂ ನೆನಪಾದರೆ ನಗು ಬರುತ್ತದೆ.

ನಾನು ರಂಗಭೂಮಿಯಲ್ಲಿಯೇ ಪೂರ್ಣಾವಧಿ ಬದುಕಬೇಕೆಂದು ಕನಸಿ, ನನ್ನ ಸರ್ಕಾರೀ ಕೆಲಸವನ್ನು ಬಿಟ್ಟಾಗ ನಮ್ಮಮ್ಮ ವಿಜಯಮ್ಮ ನನಗೆ ವಿಷ್ಣು ಮತ್ತು ಶಂಕರ್‌ನಾಗ್ ಅವರಿಂದ ಬುದ್ಧಿ ಹೇಳಿಸುವ ಪ್ರಯತ್ನ ಮಾಡಿದ್ದರು. ವಿಷ್ಣುವರ್ಧನ್ ಅವರು ಸೇಫಾಗಿ ಬದುಕಬೇಕು ಎಂದು ಲೆಕ್ಚರ್ ಕೊಟ್ಟಿದ್ದರು. ಶಂಕರ್ ನನ್ನನ್ನು ತಮ್ಮ ಸಿನಿಮಾಗೆ ಕರೆದು ಕೆಲಸ ಮಾಡು ಎಂದಿದ್ದರು. ಅದಾವುದು ಬೇಡ ನಾನು ರಂಗಭೂಮಿಯವನಾಗಿಯೇ ಇರುತ್ತೇನೆ ಎಂದು ನಾನು ಸಿನಿಮಾದಿಂದಲೇ ದೂರವಿದ್ದೆ. ಆದರೆ ರವೀ ಅವರ ಒತ್ತಾಯಕ್ಕೆ ‘ಮಿಥಿಲೆಯ ಸೀತೆಯರು’ ಸಿನಿಮಾಗೆ ಕೆಲಸ ಮಾಡಬೇಕಾಗಿ ಬಂತು. ಆ ಸಿನಿಮಾಗೆ ನಾನೇ ಮಾತು ಬರೆದಿದ್ದೆ. ಆಗ ಮತ್ತೆ ಸಿಕ್ಕಿದರು ವಿಷ್ಣುವರ್ಧನ್ ಅವರು. ನಾನು ಚಿತ್ರಕತೆ-ಸಂಭಾಷಣೆ ಬರೆದ ‘ಹರಕೆಯಕುರಿ’ ಮತ್ತು ‘ಕರುಳಿನ ಕುಡಿ’ ಸಿನಿಮಾಗಳಲ್ಲಿಯೂ ವಿಷ್ಣುವರ್ಧನ್ ಅವರ ಸಹಚರ್ಯದ ಆನಂದ ನನಗೆ ಸಿಕ್ಕಿತ್ತು.

ಅದೇ ಹಳೆಯ ಪ್ರೀತಿಯಿಂದ ನನ್ನ ಜೊತೆ ಮಾತಾಡಿದ್ದರು. ನಾನು ಬರೆದ ಮಾತುಗಳನ್ನ ಮೆಚ್ಚಿಕೊಳ್ಳುತ್ತಾ, ಅವರಿಗೆ ಇಷ್ಟವಾಗದ್ದಕ್ಕೆ ಜಗಳವಾಡುತ್ತಾ ನಾವಿಬ್ಬರು ಮತ್ತೆ ಹತ್ತಿರಾದೆವು. ಅಲ್ಲಿಂದ ಇಲ್ಲಿಯವರೆಗೆ ನಾನು ಅವರನ್ನು ಎಡತಾಕುತ್ತಲೇ ಬಂದಿದ್ದೇನೆ. ನನ್ನ ಏಳು ಬೀಳುಗಳಿಗೆ ಪ್ರತಿಕ್ರಿಯಿಸುತ್ತಾ, ನನ್ನನ್ನು ಹುರಿದುಂಬಿಸುತ್ತಾ ಬಂದಿದ್ದರು, ವಿಷ್ಣು ಅವರು. ನಾವು ಕೆಲವರು ಅವರನ್ನು ಡಾ.ವಿ. ಎಂದು ಕರೆಯುತ್ತಾ ಇದ್ದೆವು. ಅದು ಡಾ.ವಿಷ್ಣುವರ್ಧನ್‌ಗೆ ಚೋಟಾ ಪದವಾಗಿತ್ತು.

ನಾವು ಹಾಗೆ ಕರೆದಾಗೆಲ್ಲಾ ನಮ್ಮನ್ನು ರೇಗಿಸುತ್ತಾ ಇದ್ದರು. ನಮ್ಮೊಂದಿಗೆ ಕ್ರಿಕೆಟ್ ಆಡುತ್ತಾ ಕಾಲಕಳೆಯುತ್ತಿದ್ದರು. ಇನ್ನಿತರ ಅನೇಕ ನನ್ನ ಮಿತ್ರರು ವಿಷ್ಣು ಅವರು ಮಹಾ ಮೂಡಿ, ಸರಿಯಾಗಿ ಮಾತಾಡುವುದಿಲ್ಲ ಎಂದೆಲ್ಲಾ ಹೇಳಿದ್ದಿದೆ. ಆದರೆ ಎಂದೂ ನನಗಂತಹ ಅನುಭವ ಆಗಿರಲಿಲ್ಲ. ನನ್ನ ಅವರ ಭೇಟಿ ಅಂದರೆ ಅದು ಭಾರೀ ಗಂಭೀರ ಚರ್ಚೆ ಅಥವಾ ಮಹಾ ನಗುವಿನ ಉತ್ಸವ ಆಗಿರುತ್ತಿತ್ತು. ಅವರ ಮನೆಯ ಮುಂದಿನ ಸಣ್ಣ ಜಾಗದಲ್ಲಿಯೇ ಕ್ರಿಕೆಟ್ ಆಡುತ್ತಾ, ಗಾಜುಗಳನ್ನ ಮುರಿಯುತ್ತ ಭಾರತಿಯವರ ಕೈಯಲ್ಲಿ ಬಯ್ಯಿಸಿಕೊಳ್ಳುತ್ತಾ ನಾವು ಸಂಜೆಗಳನ್ನು ಕಳೆದದ್ದಿದೆ. ಅವುಗಳೆಲ್ಲವೂ ನಾನು ಎಂದಿಗೂ ಮರೆಯಲಾಗದ ಕ್ಷಣ.

ವಿಷ್ಣು ಅವರನ್ನು ನಾನು ಬಾಸ್ ಎಂದು ಕರೆಯುತ್ತಿದ್ದೆ. ಹಾಗೇ ಕರೆದಾಗೆಲ್ಲಾ ಅವರು ನನ್ನೊಂದಿಗೆ ಜಗಳಕ್ಕೆ ಇಳಿಯುತ್ತಾ ಇದ್ದರು. ಈ ಮಾತಿಗೊಂದು ಸಣ್ಣ ಹಿನ್ನೆಲೆಯಿದೆ. ವಿಷ್ಣು ಅವರು ಮೊದಲಿನಿಂದಲೂ ಬಲಪಂಥೀಯರು ಮತ್ತು ಶಿವಸೇನೆಯಂತಹ ಸಂಘಟನೆಗಳನ್ನು ಮೆಚ್ಚಿಕೊಳ್ಳುತ್ತಾ ಇದ್ದವರು. ನಾನು ಅವರ ನಿಲುವನ್ನು ಸದಾ ವಿರೋಧಿಸುತ್ತಿದ್ದೆ. ನನಗೆ ಇದ್ದದ್ದು ಎಡಪಂಥೀಯ ಹಿನ್ನೆಲೆ. ನಾನು ಎಡಪಂಥೀಯರನ್ನು ಮೆಚ್ಚಿ ಮಾತಾಡಿದಾಗೆಲ್ಲಾ ನನಗೂ ವಿಷ್ಣು ಅವರಿಗೂ ಸಣ್ಣ ವಾಗ್ಯುದ್ಧ ಆಗುತ್ತಿತ್ತು. ಇಂತಹ ಒಂದು ಸಂದರ್ಭದಲ್ಲಿ ವಿಷ್ಣು ಅವರು ತಾವೊಂದು ಬಾಸ್ ಎಂಬ ಸಂಘಟನೆ ಆರಂಭಿಸುವ ಹಾಗೂ ಹಿಟ್ಲರನ ರೀತಿಯಲ್ಲಿ ದೇಶವನ್ನು ಸರಿ ಮಾಡುವ ಮಾತಾಡಿದ್ದರು. ಆಗಿನಿಂದ ನಾನು ಅವರನ್ನು ಹಿಟ್ಲರ್ ಬಾಸ್ ಎನ್ನುತ್ತಿದ್ದೆ. ಅದೇ ಮಾತು ಕಾಲಾಂತರದಲ್ಲಿ ಬಾಸ್ ಎಂದಾಗಿತ್ತು. ಹಾಗಾಗಿ ನಾನು ಬಾಸ್ ಎಂದು ಕರೆದಾಗೆಲ್ಲಾ ವಿಷ್ಣು ಅವರಿಗೆ ಹಳೆಯ ಜಗಳಗಳು ನೆನಪಿಗೆ ಬಂದು ನನ್ನೊಡನೆ ಮತ್ತೆ ಜಗಳಕ್ಕೆ ಇಳಿಯುತ್ತಿದ್ದರು. ಈ ಜಗಳಗಳಲ್ಲಿ ದ್ವೇಷ ಇರಲಿಲ್ಲ. ನನ್ನ ಅಭಿಪ್ರಾಯವನ್ನು ಗೌರವಿಸುತ್ತಾ ತಮ್ಮ ಅಭಿಪ್ರಾಯವನ್ನು ತಿಳಿಸಿಕೊಡುವ ಹಿರಿತನವಿತ್ತು. ಹೀಗಾಗಿಯೇ ನನಗೆ ವಿಷ್ಣು ಪ್ರಿಯರಾಗಿದ್ದರು.

ನಾವು ಟೆಲಿವಿಷನ್ ಸಂಘಟನೆಯನ್ನು ಕಟ್ಟಿ ಕ್ರಿಕೆಟ್ ಆಟಗಳನ್ನು ಏರ್ಪಡಿಸಿದಾಗ ಸ್ವತಃ ಬಂದು ಬೆನ್ನು ತಟ್ಟಿದ್ದರು. ನಿಮ್ಮ ಹಾಗೇ ಸಿನಿಮಾದವರನ್ನೂ ಒಟ್ಟುಗೂಡಿಸಬೇಕು ಎಂದು ಹಂಬಲಿಸಿದ್ದರು. ಆ ಹಂಬಲದ ಫಲವಾಗಿಯೇ ಸ್ನೇಹಲೋಕ ಎಂಬ ತಂಡವೊಂದನ್ನು ಕಟ್ಟಿದರು. ಆ ತಂಡದ ಮೂಲಕ ಕೇವಲ ಕ್ರಿಕೆಟ್ ಆಟವಲ್ಲದೆ ಹಲವರಿಗೆ ಸಹಾಯವನ್ನು ಮಾಡುವ ಪ್ರಯತ್ನವನ್ನೂ ಮಾಡಿದರು. ಹೀಗೇ ಮತ್ತೊಬ್ಬರು ಮಾಡಿದ ಒಳ್ಳೆಯದನ್ನು ಗುರುತಿಸಿ ಗೌರವಿಸುವ ಅಭ್ಯಾಸವೂ ವಿಷ್ಣು ಅವರಿಗಿತ್ತು.

ನಟರಾಗಿ ನನ್ನೊಂದಿಗೆ

ವಿಷ್ಣು ಅವರನ್ನು ಆರಾಧಿಸುತ್ತಾ ಬೆಳೆದ ಅನೇಕರಂತೆಯೇ ನಾನೂ ಸಹ ಬೆಳೆದವನು. ನನಗೆ ವಿಷ್ಣು ಅಂದರೆ ಅದು ಅನ್ಯಾಯದ ವಿರುದ್ಧ ಸಿಡಿಯುವ ಮನಸ್ಸು ಎಂದಾಗಿತ್ತು. ಹಾಗಾಗಿಯೇ ವಿಷ್ಣು ಅವರ ಬಹುತೇಕ ಸಿನಿಮಾಗಳನ್ನು ನಾನು ನೋಡಿದ್ದೆ. ಬುದ್ಧಿ ಬೆಳೆದು, ರಂಗಭೂಮಿಯನ್ನ ಪಠ್ಯವಾಗಿ ಸ್ವೀಕರಿಸಿ, ಜಾಗತಿಕವಾಗಿ ನಟನೆಯ ಬಗ್ಗೆ ಬಂದಿರುವ ಸಿದ್ಧಾಂತಗಳನ್ನು ಒಂದಷ್ಟು ಕಲಿತ ನಂತರ ನನ್ನಲ್ಲಿದ್ದ ಆರಾಧನೆಯ ಗುಣ ಹೋಗಿ, ವಿಮರ್ಶೆಯ ಗುಣ ಬಂದಿತ್ತು. ಹೀಗಾಗಿ ಪ್ರತಿ ಸಿನಿಮಾದಲ್ಲಿಯ ಅವರ ಅಭಿನಯವನ್ನು ಕುರಿತು ನಾನು ವಿಷ್ಣು ಅವರೊಡನೆ ಮಾತಾಡುತ್ತಾ ಇದ್ದೆ. ಇಂಥಾ ದೃಶ್ಯದಲ್ಲಿನ ಹಾವ-ಭಾವ ಹೀಗಿರಬೇಕಿತ್ತು-ಹಾಗಿರಬೇಕಿತ್ತು ಎಂದು ವಾದ ಮಾಡುತ್ತಿದ್ದೆ.

ಇದರಿಂದಾಗಿಯೇ ನಾನೇ ಸಂಭಾಷನೆ ಬರೆದು ಸಹ ನಿರ್ದೇಶನ ಮಾಡುತ್ತಿದ್ದ ‘ಮಿಥಿಲೆಯ ಸೀತೆಯರು’ ಸಿನಿಮಾದಲ್ಲಿ ಅಭಿನಯಿಸುವಾಗ ವಿಷ್ಣು ಅವರು ನನ್ನನ್ನ ಪ್ರೀತಿಯಿಂದಲೇ ನೋಡುತ್ತಾ, ನಾನು ಬರೆದ ಪ್ರತೀ ಮಾತಿನ ಕುರಿತು ವಾದಕ್ಕೆ ಇಳಿಯುತ್ತಾ ಇದ್ದರು. ಒಮ್ಮೆಯಂತೂ ಒಂದು ಸಾಲನ್ನು ಬದಲಾಯಿಸು ಎಂದು ಹಠ ಹಿಡಿದಿದ್ದರು. ಆ ದಿನ ಅಂತಿಮವಾಗಿ ನಾನು ಗೆದ್ದೆ ಮತ್ತು ಸಿನಿಮಾದಲ್ಲಿ ನಾನು ಬರೆದ ಮಾತೇ ಉಳಿಯಿತು. ಆದರೆ, ಹೀಗೇ ನನ್ನೊಡನೆ ವಾದ-ಚರ್ಚೆ ಮಾಡುತ್ತಾ ನನ್ನನ್ನು ಕನ್ನಡ ಚಿತ್ರರಂಗದಲ್ಲಿನ ವಾಣಿಜ್ಯ ಪ್ರಧಾನ ಚಿತ್ರ ಜಗತ್ತಿಗೆ ಒಗ್ಗಿಸಿದರು. ಇದು ಹಿರಿಯ ನಟರೊಬ್ಬರು ಮಾಡಬೇಕಾದ ಬಹು ಮುಖ್ಯ ಕೆಲಸ. ಹೊಸಬನನ್ನು ಹೊಸ ಜಗತ್ತಿಗೆ ‘ಒಗ್ಗಿಸುವುದು’ ಮತ್ತು ಅಲ್ಲಿ ಹೊಸಬನೊಬ್ಬ ಬದುಕುವಂತೆ ಮಾಡುವುದು ಹಿರಿಯ ನಟರಿಗೆ ಮಾತ್ರ ಸಾಧ್ಯ. ವಿಷ್ಣು ಅವರ ಇಂತಹ ಪೋಷಕ ಗುಣದಿಂದಾಗಿಯೇ ನಾನು ‘ಸಾಮ್ರಾಟ್’ ಮತ್ತು ‘ಕರುಳಿನಕುಡಿ’ಯಂತಹ ಚಿತ್ರಗಳಿಗೆ ಸಂಭಾಷಣೆ ಬರೆಯುವುದು ಸಾಧ್ಯವಾಗಿತ್ತು.

ವೈಯಕ್ತಿಕವಾಗಿ ವಿಷ್ಣು ಅವರಿಗೆ ತಾವು ನಟನೆಯನ್ನು ಪೂರ್ಣ ಪ್ರಮಾಣದಲ್ಲಿ ಕಲಿತಿಲ್ಲ. ಅನುಭವದಿಂದ ದಕ್ಕಿದ್ದಷ್ಟೇ ನನ್ನ ಕೈಯಲ್ಲಿ ಸಾಧ್ಯವಾಗಿದೆ ಎಂಬ ಭಾವನೆ ಇತ್ತು. ಈ ಕಾರಣಕ್ಕಾಗಿಯೇ ‘ಹರಕೆಯಕುರಿ’ ಚಿತ್ರದಲ್ಲಿ ಬರೆದಿದ್ದ ಉದ್ದುದ್ದ ಮಾತುಗಳನ್ನಾಡುವಾಗ ಅವರು ಹಿಂಜರಿಯುತ್ತಿದ್ದರು. ಅನೇಕ ಬಾರಿ ತಾಲೀಮು ಮಾಡುತ್ತಿದ್ದರು. ‘ಮಾತುಗಳು ಬಾಯಿಗೆ ಸಿಗಬೇಕು’ ಎಂಬ ಜನಪ್ರಿಯ ನಂಬಿಕೆಗೆ ಬದಲಾಗಿ ಆ ಸಿನಿಮಾದಲ್ಲಿ ನಾನು ಬರೆದಿದ್ದ ಅಷ್ಟೂ ಮಾತುಗಳನ್ನ ಅಭ್ಯಾಸ ಮಾಡಿ ಹೇಳಿದ್ದರು. ಆ ಸಿನಿಮಾದ ಡಬ್ಬಿಂಗ್ (ಧ್ವನಿ ಮರುಲೇಪನ) ಆದ ಸಂದರ್ಭವಂತೂ ನನ್ನ ಮನಸ್ಸಲ್ಲಿನ್ನೂ ಹಸಿರಾಗಿದೆ.

ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಆ ಕೆಲಸ ಆಗುತ್ತಿತ್ತು. ಚಿತ್ರದ ನಿರ‍್ದೇಶಕರು ಎಲ್ಲಾ ಜವಾಬ್ದಾರಿಯನ್ನೂ ನನಗೆ ವಹಿಸಿ ಹೋಗಿದ್ದರು. ಹಾಗಾಗಿ ವಿಷ್ಣು ಅವರೊಂದಿಗೆ ಹೆಚ್ಚು ಮಾತಾಡುವ ಅವಕಾಶವೂ ನನಗೆ ಸಿಕ್ಕಿತ್ತು. ಸಾಮಾನ್ಯವಾಗಿ ತಮ್ಮ ಯಾವುದೇ ಸಿನಿಮಾದ ಡಬ್ಬಿಂಗ್ ಕೆಲಸವನ್ನು ಒಂದೇ ದಿನದಲ್ಲಿ ಮುಗಿಸುವ ಅಭ್ಯಾಸ ಇರುವ ವಿಷ್ಣು ಅವರು, ‘ಹರಕೆಯಕುರಿ’ಗಾಗಿ ಎರಡು ದಿನ ಡಬ್ಬಿಂಗ್ ಮಾಡಿದರು. ಎಲ್ಲಾ ಕೆಲಸ ಮುಗಿದ ನಂತರ ‘ನಾನು ನಿನ್ನಿಂದ ತುಂಬಾ ಕಲಿತೆ ಕಣೋ. ನಿನ್ನ ಜೊತೆ ಕೆಲಸ ಮಾಡುವುದೆಂದರೆ ಐಎಎಸ್‌ಗೆ ಕೂತ ಹಾಗೆ’ ಎಂದಿದ್ದರು. ನಾನು ಉಬ್ಬಿ ಹೋಗಿದ್ದೆ. ಆನಂತರ ಅನೇಕರ ಜೊತೆಯಲ್ಲಿ ನನ್ನನ್ನು ಹೆಸರಿಸಿ ‘ಕಲಾವಿದರ ಕೈಯಲ್ಲಿ ಮಾತಾಡಿಸುವುದನ್ನು ಅವನಿಂದ ಕಲಿಯಿರಿ’ ಎಂದಿದ್ದರು. ಆ ಸುದ್ದಿಯನ್ನು ಯಾರಾದರೂ ಹೇಳಿದಾಗ ನನಗೆ ಮತ್ತಷ್ಟು ಹುಮ್ಮಸ್ಸು ಹುಟ್ಟುತ್ತಿತ್ತು.

ಈ ಕ್ಷಣ ಈಗ, ಇಂದು ನಮ್ಮನ್ನು ನಮ್ಮ ಬಾಸ್ ಅಗಲಿರುವ ಸಂದರ್ಭದಲ್ಲಿ, ನನ್ನ ಕಣ್ಣು ತುಂಬಿ ಬರುತ್ತಿದೆ. ಅವರೊಡನೆ ಕಳೆದ ಪ್ರತೀಕ್ಷಣವೂ ಚಿತ್ರವಾಗಿ ಎದುರಿಗೆ ಮೂಡುತ್ತಿದೆ. ಈ ನಾಡಿಗೆಲ್ಲಾ ಈ ಅಗಲಿಕೆಯಿಂದ ಏನಾಗಿದೆಯೋ ನಾನರಿಯೇ… ನನಗಂತೂ ಒಬ್ಬ ಒಳ್ಳೆಯ ಗೆಳೆಯ, ಒಳ್ಳೆಯ ವಿಮರ್ಶಕ, ಒಳ್ಳೆಯ ಕಲಾವಿದ, ಒಳ್ಳೆಯ ಬಾಸ್‌ನ ಕಳಕೊಂಡಂತಾಗಿದೆ. ನಿಜ ಹೇಳುತ್ತೇನೆ ಗೆಳೆಯರೇ, ಎಷ್ಟೋ ಭಾರೀ ನಮಗನ್ನಿಸುವ ವಿಷಯಗಳನ್ನು ಎಲ್ಲಾ ಕಲಾವಿದರ ಬಳಿ ಮಾತಾಡಲು ಆಗುವುದಿಲ್ಲ. ಯಾಕೆಂದರೆ ನಮ್ಮ ಬಹುತೇಕ ಕಲಾವಿದರು ತಮ್ಮ ಸುತ್ತಾ ಗೋಡೆ ಕಟ್ಟಿಕೊಂಡಿರುತ್ತಾರೆ. ಆದರೆ ವಿಷ್ಣು ಅವರ ಬಳಿಯಲ್ಲಿ ಅಂತಹ ಕಷ್ಟಗಳಿರಲಿಲ್ಲ. ನಮಗನಿಸಿದ್ದನ್ನ ನಾವು ಯಾವ ಜಾಗ? ಅಕ್ಕಪಕ್ಕದಲ್ಲಿ ಯಾರಿದ್ದಾರೆ ಎಂದು ನೋಡದೆಯೇ ಹೇಳಬಹುದಾಗಿತ್ತು. ಅಂತಹ ಒಬ್ಬ ಕಲಾವಿದರನ್ನು ಕಳೆದುಕೊಂಡ ಸಂಕಟ ಒಂದೆಡೆಗೆ, ನಮ್ಮ ಮನೆಯ ಹಿರಿಯಣ್ಣ ಒಬ್ಬ ನಮ್ಮನ್ನಗಲಿದ ನೋವು ಒಂದು ಕಡೆಗೆ…

ಈ ಸಾವು ಮರೆಯುವಂಥಾದ್ದಲ್ಲ!

ಇದೂ ಸಹ ವಿಷ್ಣು ಅವರೇ ಹೇಳುತ್ತಿದ್ದ ಮಾತು. ಬದುಕಿನ ಬಗ್ಗೆ ಮಾತಾಡುವಾಗೆಲ್ಲಾ ‘ನಾವು ಗಳಿಸಬೇಕಾದ್ದು ನಾಲ್ಕು ಜನ ಗೆಳೆಯರನ್ನು, ನಮ್ಮ ಸಾವನ್ನು ಮರೆಯದಂತಹ ವಿಶ್ವಾಸಿಗಳನ್ನು.’ ಎನ್ನುತ್ತಿದ್ದರು ಅವರು. ಪ್ರಾಯಶಃ ಕನ್ನಡಿಗರು ಡಾಕ್ಟರ್ ವಿಷ್ಣುವರ್ಧನ್, ಅಭಿನವ ಭಾರ್ಗವ ವಿಷ್ಣುವರ್ಧನ್, ಸ್ನೇಹಲೋಕದ ಸ್ನೇಹಿತ ವಿಷ್ಣುವರ್ಧನ್ ಅವರನ್ನ ಸದಾ ಕಾಲ ನೆನೆಯುತ್ತಾ ಅವರ ನಂಬಿಕೆಯನ್ನು ಉಳಿಸುತ್ತಾರೆ ಎಂದುಕೊಂಡಿದ್ದೇನೆ.

Advertisements