ಫಣಿಯಮ್ಮ, ವಂಶವೃಕ್ಷಗಳಲ್ಲಿ ನಟಿಸಿ ಚಿತ್ರರಸಿಕರ ಗಮನ ಸೆಳೆದ ಎಲ್.ವಿ.ಶಾರದಾಗೆ ಈಗಲೂ ಸಿನೆಮಾ ಗಳಲ್ಲಿ ನಟಿಸುವ ಆಸೆಯಿದೆ. ಆದರೆ ಅವು ಕಲಾತ್ಮಕ ಚಿತ್ರಗಳಾಗಿರಬೇಕಂತೆ. ಕಲ್ಪನಾ ಪಿ. ಅವರು ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಬರೆದ ಲೇಖನವಿದು, ಫಣಿಯಮ್ಮನ ಕಥೆ. ಓದಿ ಹೇಳಿ…

‘ಫಣಿಯಮ್ಮ’ ಚಿತ್ರ ನೋಡಿದ್ದರೆ ನಿಮಗೆ ಈಕೆಯ ನೆನಪಿದ್ದೀತು. ಕಣ್ಣೀರಿನಲ್ಲಿ ಕೈತೊಳೆಯುವ ಬಾಲ ವಿಧವೆಯ ಪಾತ್ರವದು. ಅದರ ಜತೆಜತೆಗೇ ಬಂದ ವಂಶವೃಕ್ಷ, ಭೂತಯ್ಯನ ಮಗ ಅಯ್ಯು, ಶಂಕರಾಚಾರ್ಯ ಚಿತ್ರಗಳಲ್ಲೂ ವಿಧವೆಯಾಗಿಯೇ ಮನೋಜ್ಞ ಅಭಿನಯ ನೀಡಿದ ಈಕೆ ಆಮೇಲೆ ಎಲ್ಲಿ ಹೋದರು ?

ಮೂರು ದಶಕಗಳ ಹಿಂದಿನ ಕತೆಯದು. ಮರೆತವರಿಗೆ ನೆನಪಿಸೋಣ- ಇವರ ಹೆಸರು ಎಲ್.ವಿ.ಶಾರದಾ. ನಾಲ್ಕಾರು ಕಲಾತ್ಮಕ ಚಿತ್ರಗಳಲ್ಲಿ ಕಾಣಿಸಿಕೊಂಡ ಈಕೆ ಆಮೇಲೆ ಬೆಳ್ಳಿ ತೆರೆಯ ಮೇಲೆ ಬರಲೇ ಇಲ್ಲ. ಎಲ್ಲಿ ಕಳೆದುಹೋದರೆಂದು ಹುಡುಕುವುದೂ ಬೇಕಿಲ್ಲ. ಅವರಿಲ್ಲೇ ಇದ್ದಾರೆ. ಬೆಂಗಳೂರಿನ ಜಯನಗರದಲ್ಲಿ.

ಶಾರದಾ ಅವರ ಮನೆಯ ಪಡಸಾಲೆಯಲ್ಲಿ ಕುಳಿತು ಹಳೆಯ ದಿನಗಳ ನೆನಪು ಕೆದಕಬೇಕು. ಆಗ ಅವರು ಅಕ್ಕರೆ ಹಾಗೂ ತುಸು ಹಿಂಜರಿಕೆ ತುಂಬಿದ ದನಿಯಲ್ಲಿ ‘ಯಾಕೋ ಏನೋ ನಿಮ್ಮ ಜತೆ ನನ್ನ ಸುಖ ದುಃಖ ಹಂಚಿಕೊಳ್ಳೋಣ ಅಂತ ಅನಿಸುತ್ತಿದೆ’ ಅಂತ ಪಿಸುಗುಟ್ಟುತ್ತಾರೆ. ಆಮೇಲೆ ತಮ್ಮ ಕ್ಯಾನ್ಸರ್ ಪೀಡಿತ ದೇಹವನ್ನು ಸಾವರಿಸಿಕೊಂಡು ಮನೆ ತುಂಬ ಪುಟುಪುಟು ಓಡಾಡುತ್ತಾರೆ.

ಎಲ್.ಎಸ್.ವೆಂಕೋಜಿ ರಾವ್ ಮತ್ತು ಸರಸ್ವತಿ ಬಾಯಿ ದಂಪತಿಯ ನಾಲ್ವರು ಮಕ್ಕಳಲ್ಲಿ ಶಾರದಾ ಮೂರನೆಯವರು. ತಂದೆಗೆ ಸಂಗೀತ, ನೃತ್ಯ, ಕಲೆ, ಸಿನೆಮಾದಲ್ಲಿ ಬಹಳ ಆಸಕ್ತಿ. ಹೀಗಾಗಿ ಮನೆಯಲ್ಲಿ ಇದೇ ವಾತಾವರಣ. ಶಾರದಾ ಚಿತ್ರನಟಿಯಾಗಲು ಇದೂ ಒಂದು ಕಾರಣ. ಹನ್ನೊಂದನೆ ವಯಸ್ಸಿಗೇ ಕ್ಯಾಮೆರಾ ಮುಂದೆ ನಿಂತವರು ಅವರು. ಓದು ಮುಗಿಯುತ್ತಿದ್ದಂತೆ ಸಿನೆಮಾದಲ್ಲಿ ನಟಿಸಲು ಕರೆ ಬಂತು. ಮೊದಲ ಸಿನೆಮಾವೇ ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಆಧಾರಿತ ವಂಶವೃಕ್ಷ. ಅದಕ್ಕೆ ರಾಜ್ಯ ಪ್ರಶಸ್ತಿ ಕೂಡ ಬಂತು.
‘ಆ ಬಳಿಕ ಅದಕ್ಕಿಂತ ಸಾಧಾರಣ ಪಾತ್ರಗಳಲ್ಲಿ ನಟಿಸಲು ಇಷ್ಟವಾಗಲಿಲ್ಲ. ಅಲ್ಲದೆ ನನಗೆ ಕಮರ್ಷಿಯಲ್ ಚಿತ್ರಗಳು ಅಲರ್ಜಿ. ಕಲಾತ್ಮಕ ಚಿತ್ರಗಳಲ್ಲಿ ಮಾತ್ರ ನಟಿಸಲು ಇಷ್ಟ. ಇಲ್ಲಿ ಮಹಿಳೆಯರ ಶೋಷಣೆ ಇಲ್ಲ. ಚಿತ್ರೀಕರಣ ಬೇಗ ಮುಗಿಯುತ್ತದೆ. ನಟನೆಗೇ ಪ್ರಾಮುಖ್ಯತೆ. ಪ್ರತಿಭಾ ಪ್ರದರ್ಶನ, ಅಭಿವ್ಯಕ್ತಿಗೆ ವಿಪುಲ ಅವಕಾಶ’ ಎನ್ನುತ್ತಾರೆ ಶಾರದಾ.

ವಂಶವೃಕ್ಷದ ಬಳಿಕ ಭೂತಯ್ಯನ ಮಗ ಅಯ್ಯು, ಒಂದು ಪ್ರೇಮದ ಕಥೆ, ಮೈತ್ರಿ, ವಾತ್ಸಲ್ಯಪಥ, ಫಣಿಯಮ್ಮ, ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ, ಕೃಷ್ಣಾವತಾರ, ಕುದುರೆ ಮೊಟ್ಟೆ , ಸಾಕ್ಷಿ ಸಿನಿಮಾದಲ್ಲಿ ಅಭಿನಯಿಸಿದರು. ಆದರೆ ಶಾರದಾ ಅಂದರೆ ಹಿಂದಿನವರಿಗೆ ನೆನಪಾಗುವುದು ಫಣಿಯಮ್ಮ ಚಿತ್ರದ ಅವರ ಬಾಲ ವಿಧವೆಯ ಪಾತ್ರ. ಈ ಚಿತ್ರ ಹಾಗೂ ಅವರ ಪಾತ್ರಕ್ಕೆ ರಾಷ್ಟ್ರೀಯ ಪನೋರಮಾ ವಿಭಾಗದಲ್ಲಿ ಪ್ರಶಸ್ತಿ ಬಂದಿದೆ.

ಅಲ್ಲದೆ ಇವರು ನಟಿಸಿದ 11 ಚಿತ್ರಗಳ ಪೈಕಿ ಏಳಕ್ಕೆ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ಮನ್ನಣೆ ದೊರತಿದೆ. ಶ್ರುತಿ ಎಂಬ ಟಿವಿ ಧಾರವಾಹಿಯಲ್ಲೂ ನಟಿಸಿದ್ದಾರೆ.

ಸಾಕ್ಷ್ಯ ಚಿತ್ರದತ್ತ ಒಲವು
ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸುವುದು ಬಿಟ್ಟ ನಂತರ ಶಾರದಾ ಗಮನ ಸಾಕ್ಷ್ಯಚಿತ್ರಗಳತ್ತ ಹರಿಯಿತು. ಕಳೆದ ಕೆಲ ವರ್ಷಗಳಲ್ಲಿ ಸ್ವತಂತ್ರವಾಗಿ ಹಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಬೆಂಗಳೂರಿನ ಕೆರೆಗಳ ನಾಶದ ದುಷ್ಪರಿಣಾಮದ ಮೆಲೆ ಬೆಳಕು ಚೆಲ್ಲುವ ‘ಕೆರೆ ಹಾಡು’, ಬಿ.ಸರೋಜಾದೇವಿ, ನಿಟ್ಟೂರು ಶ್ರೀನಿವಾಸ ರಾವ್, ಬಿ.ಚಂದ್ರಶೇಖರ್, ಮಾಸ್ಟರ್ ಹಿರಣ್ಣಯ್ಯ, ಶಿವಮೊಗ್ಗ ಸುಬ್ಬಣ್ಣ ಅವರ ಕುರಿತು ಐದು ನಿಮಿಷಗಳ ವ್ಯಕ್ತಿಶ್ರೀ ಎಂಬ ಮಿನಿ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ದೂರದರ್ಶನದಲ್ಲಿ ಅವಲೋಕನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಇಂಥ ಪ್ರತಿಭಾನ್ವಿತ ಕಲಾವಿದೆ ಈಗಿನ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸುವ ಮನಸ್ಸಿಲ್ಲದೆ ಸ್ವಯಂಪ್ರೇರಿತರಾಗಿ ನೇಪಥ್ಯಕ್ಕೆ ಸರಿದು ತಮ್ಮ ಪಾಡಿಗೆ ತಾವಿದ್ದು ಬಿಟ್ಟಿದ್ದಾರೆ. ಅವಿವಾಹಿತೆಯಾಗಿರುವ ಅವರು ಜನರಿಂದ ದೂರವಾಗಿ ವಿಶ್ರಾಂತ ಬದುಕು ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಕ್ಯಾನ್ಸರ್ ಕಾಯಿಲೆಯಿಂದ ಕೊಂಚ ಬಸವಳಿದಿದ್ದಾರೆ. ಆದರೆ ಲವಲವಿಕೆಯಿಂದ ಬದುಕುವ ಮನೋಬಲ ಕುಂದಿಲ್ಲ.

ಈಗಲೂ ನಟಿಸುವ ಆಸೆ
ಸಿನಿಮಾವನ್ನು ನಾನು ಕಲೆ ಎಂದು ಸ್ವೀಕರಿಸಿದೆನೇ ಹೊರತು, ಹಣಕ್ಕಾಗಿ ಯಾವತ್ತೂ ಬಣ್ಣ ಹಚ್ಚಲಿಲ್ಲ. ನಾನು ಅಭಿನಯಿಸುವ ಕಾಲದಲ್ಲಿ ಕನ್ನಡ ಚಿತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಲಿಸುತ್ತಿದ್ದೆವು. ಈಗ ಕಲಾತ್ಮಕ ಸಿನಿಮಾಗಳೇ ವಿರಳ. ನಾನು ಕೆಲವೇ ಸಿನಿಮಾದಲ್ಲಿ ನಟಿಸಿರಬಹುದು. ಆದರೆ ಜನ ನನ್ನನ್ನು ಉತ್ತಮ ನಟಿ ಎಂದು ಗುರುತಿಸಿದ್ದಾರೆ. ಅಷ್ಟೇ ಸಾಕು. ಈಗಲೂ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಿದೆ. ಆದರೆ ನಟನೆಗೆ ಅವಕಾಶ ಇರುವ, ಪ್ರತಿಭೆಗೆ ಸವಾಲೊಡ್ಡುವ ಪಾತ್ರವಾಗಿರಬೇಕು. ನೃತ್ಯ ಅಥವಾ ಸಂಗೀತ ಪ್ರಧಾನವಾಗಿರಬೇಕು. ಕಮರ್ಷಿಯಲ್ ಸಿನಿಮಾದಲ್ಲಿ ನಟಿಸುವುದು ಸುತರಾಂ ಇಷ್ಟವಿಲ್ಲ. ನಾನು ನಟಿಸಿರುವ ೧೧ ಸಿನೆಮಾಗಳಲ್ಲಿ ನಾಲ್ಕರಲ್ಲಿ ವಿಧವೆಯ ಪಟ್ಟ. ಮತ್ತೆ ಅದೇ ಥರದ ಪಾತ್ರಗಳು ಬಂದಾಗ ನಿರಾಕರಿಸಿದೆ. ನನಗೆ ಸಂಗೀತ, ನಟನೆ, ನರ್ಸರಿ, ಡ್ಯಾನ್ಸ್, ಕ್ರೀಡೆ ಹೀಗೆ ಎಲ್ಲದರಲ್ಲೂ ಆಸಕ್ತಿ. ಒಂದೇ ಕ್ಷೇತ್ರಕ್ಕೆ ಸೀಮಿವಾಗಿರಲಿಲ್ಲ. ಹೀಗಾಗಿ ಸಿನೆಮಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಆಗಲಿಲ್ಲ ಎಂದು ಈಗ ಅನಿಸುತ್ತಿದೆ. ಸಿನೆಮಾ ಕ್ಷೇತ್ರದಲ್ಲೇ ಮುಂದುವರಿಯಲಿಲ್ಲ ಎಂಬ ಕೊರಗು ಈಗಲೂ ಇದೆ.

ಕ್ಯಾನ್ಸರ್ ಜತೆ ಬದುಕು
ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ನನಗೆ ಸ್ತನದ ಕ್ಯಾನ್ಸರ್ ಇದೆ ಎಂಬುದು ಗೊತ್ತಾಯಿತು. ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಬಂಧು ಮಿತ್ರರು ಹೊಸ ಜೀವನೋತ್ಸಾಹ ತುಂಬಿದರು. ಧೈರ್ಯದಿಂದ ಈ ಕಾಯಿಲೆ ಎದುರಿಸಬೇಕೆಂಬ ಛಲ ಮೂಡಿತು. ಈಗಲೂ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ನಮ್ಮ ತಂದೆಯ ಬಗ್ಗೆ ಪುಸ್ತಕ ತರಲು ಓಡಾಡುತ್ತಿದ್ದೇನೆ. ಕ್ಯಾನ್ಸರ್ ರೋಗಿಗಳಿಗೆ ಕಿವಿಮಾತೆಂದರೆ, ವರ್ಷ
ಕ್ಕೊಂದು ಬಾರಿ ದೇಹ ತಪಾಸಣೆಗೊಳಪಡಿಸಿ. ಕ್ಯಾನ್ಸರ್ ಇರುವುದು ಖಚಿತವಾದರೆ ನಿರ್ಲಕ್ಷ್ಯ ಮಾಡಬೇಡಿ. ತಕ್ಷಣ ಚಿಕಿತ್ಸೆ ಪಡೆದುಕೊಳ್ಳಿ. ಯಾವುದೇ ಕಾರಣಕ್ಕೂ ಎದೆಗುಂದಬೇಡಿ.