ಸಾಂಗತ್ಯ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ತನ್ನಷ್ಟಕ್ಕೆ ಅರಳಲು ಸಹಕರಿಸಿದ ಎಲ್ಲರಿಗೂ ಸಾಂಗತ್ಯ ಬಳಗ ಧನ್ಯವಾದ ಹೇಳಿದೆ.
ಸಾಂಗತ್ಯಕ್ಕೆ ಮೊನ್ನೆಗೆ ಒಂದು ವರ್ಷ ತುಂಬಿತು.
ಇದೇನು ಬಹಳ ಹೆಗ್ಗಳಿಕೆಯ ವಿಚಾರವಲ್ಲ. ಆದರೆ ಒಂದು ವರ್ಷದಲ್ಲಿ ಕ್ರಮಿಸಿದ ಹಾದಿ ಬಹಳಷ್ಟು ಖುಷಿ ನೀಡಿದೆ, ಹೊಸ ಹುರುಪು ತುಂಬಿರುವುದಂತೂ ಸತ್ಯ. ಬಹಳಷ್ಟು ಬಾರಿ ಖುಷಿ ಕೊಡುವುದೇಕೆಂದರೆ, ನಾವು ಸಾಂಗತ್ಯ ಎಂಬುದನ್ನು ಬಹಳ ಯೋಚಿಸಿ, ಯೋಜಿಸಿ ರಚಿಸಿಕೊಂಡದ್ದಲ್ಲ. ಅದು ಆಯಾಚಿತವಾಗಿಯೇ ಅರಳಿದ್ದು, ಗಿರಿಯಲ್ಲಿ ಅರಳುವ ಹೂವಿನ ಹಾಗೆಯೇ.
ಅತ್ಯಂತ ಕಾಕತಾಳೀಯವೆಂದರೆ, ಇಂಥದೊಂದು ಕಲ್ಪನೆ ಚಿಗುರಿದ್ದೂ ಗಿರಿಯ ಮೇಲೆಯೇ. ಕೊಡಚಾದ್ರಿಯಲ್ಲಿ ಶಿವರಾತ್ರಿ ಜಾಗರಣೆ ಮಾಡಲು ಹೋದ ನಮ್ಮ ಸಾಹಿತ್ಯ ಜೀವಿಗಳಿಗೆ ಒಂದು ಸಿನಿಮಾ ನೋಡುವ ಆಸೆಯಾಯಿತು. ಅಲ್ಲಿಯೇ ಇದ್ದ ಭಟ್ಟರ ಮನೆಯ ಟಿ ವಿಯಲ್ಲಿ ಡಿವಿಡಿ ಸಹಾಯ ಪಡೆದು ಇರಾನಿನ ಮಜಿದ್ ಮಜಿದಿಯ “ಚಿಲ್ಡ್ರನ್ ಆಫ್ ಹೆವನ್” ಚಿತ್ರ ನೋಡಿದೆವು. ಎಲ್ಲರಿಗೂ ಖುಷಿಯಾಯಿತು. ಈ ಚಿತ್ರ ತೋರಿಸಿದ್ದು ಸಾಹಿತ್ಯ ಚರ್ಚೆಯ “ಮಧ್ಯಂತರ” ಕ್ಕಾಗಿ (ಇಂಟರ್ ವಲ್).
ಆದರೆ, ಎಲ್ಲರಿಗೂ ಖುಷಿ ಕೊಟ್ಟಿತು ಫಿಲ್ಮ್. ಆಗಲೇ ಜಾಗರಣೆ ಆಯೋಜಿಸಿದ್ದ ಮಂಥನದ ಗೆಳೆಯರಿಗೆ “ಇಂಥದೊಂದು ಫೆಸ್ಟಿವಲ್ ” -ಅಂದರೆ ಸಾಹಿತ್ಯ ಚರ್ಚೆಯಂತೆಯೇ ಸುಮ್ಮನೆ ಸಿನಿಮಾ ನೋಡುವುದು, ಚರ್ಚೆ ಮಾಡುವುದು-ಇಷ್ಟೇ ಮಾಡಿ ಮುಗಿಸಿದರೆ ಹೇಗೆ ಎಂಬ ಪ್ರಶ್ನೆಗಳು ಹಲವರಿಂದ ವ್ಯಕ್ತವಾದವು. ಆಗಲೇ ಶುರುವಾಗಿದ್ದು ಸಾಂಗತ್ಯ.
ಆ ನೆಲೆಯಲ್ಲೇ ಆಲೋಚಿಸಿ ಕ್ರಿಯಾಶೀಲವಾಗಿದ್ದು ಸಾಂಗತ್ಯ ಬಳಗ. ಚೆಂದದೊಂದು ಹೆಸರು ಇಟ್ಟುಕೊಂಡಿದ್ದು ಗುಂಪಿಗ. ಮೊದಲು ಅದಕ್ಕೆ ಕೊಟ್ಟಿದ್ದ ಟ್ಯಾಗ್ ಲೈನ್ “ಜೊತೆಯಾಗಿ ನಾಲ್ಕು ಹೆಜ್ಜೆ”. ಇದಕ್ಕೂ ಕಾರಣವಿಷ್ಟೇ. ಒಂದಷ್ಟು ಗೆಳೆಯರು, ಒಂದಿಷ್ಟು ದೂರ ಕೂಡಿ ನಡೆಯೋಣ ಎಂಬ ಸದಾಶಯದಿಂದ. ಕೆಲವರು ನಮ್ಮ ಈ ಟ್ಯಾಗ್ ಲೈನ್ ನಿಂದ “ವಧುವರರ ವೇದಿಕೆ” ಎಂದೂ ಕನ್ ಫ್ಯೂಸ್ ಮಾಡಿಕೊಂಡಿದ್ದಿದೆಯಂತೆ. ಜೊತೆಯಾಗಿ ನಡೆಯೋದು ನಿಜವಾದರೂ, ಅದಕ್ಕಲ್ಲ ಎಂದು ನಂತರ ಅದನ್ನು “ಚಿತ್ರ ಭಾಷಾ ಕಾವ್ಯ” ವೆಂದು ಬದಲಾಯಿಸಿದೆವು.
ಎಲ್ಲ ಅಳೆದು, ಸುರಿದು 2009 ರ ಜನವರಿ 3, 4 ರಂದು ಎರಡು ದಿನಗಳ ಫೆಸ್ಟಿವಲ್ ಅನ್ನು ಕುಪ್ಪಳ್ಳಿಯಲ್ಲಿ ಸಂಘಟಿಸಿದೆವು. ಅಲ್ಲಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಬಹಳ ಸಹಕಾರ ನೀಡಿತು. ಚೆಂದದ ಏಳು ಚಿತ್ರಗಳನ್ನು ತೋರಿಸಿ, ಕವಿಶೈಲದ ಸೌಂದರ್ಯ ಸವಿದು, ಸಿನಿಮಾ ಬಗ್ಗೆ ಚರ್ಚಿಸಿ ಒಳ್ಳೆಯ ನೆನಪುಗಳೊಂದಿಗೆ ವಾಪಸ್ಸಾದೆವು.
ನಮಗೆ ಸಿನಿಮಾ ರಸಗ್ರಹಣ ಶಿಬಿರಗಳಂತೆ ದೊಡ್ಡ ದೊಡ್ಡ ಉಪನ್ಯಾಸ ಕೊಡಿಸುವುದು ಇಷ್ಟವಿರಲಿಲ್ಲ. ನಮ್ಮ ಉದ್ದೇಶವೇ, ಪರಸ್ಪರ ಚರ್ಚೆಯ ಮೂಲಕವೇ ಸಿನಿಮಾವನ್ನು ಅರ್ಥ ಮಾಡಿಕೊಳ್ಳಬೇಕೆಂಬುದು. ಆಗ ಮೊದಲ ಚಿತ್ರೋತ್ಸವಕ್ಕೆ ನಮಗೆ ಮಾರ್ಗದರ್ಶನ ನೀಡುವ ಹಿರಿಯರು, ತಂತ್ರಜ್ಞರು ಬೇಕಿತ್ತು. ಆಗ ನಮಗೆ ಸಿಕ್ಕಿದ್ದು ಪರಮೇಶ್ ಗುರುಸ್ವಾಮಿ. ಮ್ಯಾಜಿಕ್ ಕಾರ್ಪೆಟ್ ನಲ್ಲಿ ಸಿನಿಮಾಗಳನ್ನು ಹುಡುಕಿಕೊಡುತ್ತಿದ್ದ ಅವರನ್ನು ಸಂಪರ್ಕಿಸಿದಾಗ ನಮಗೆ ಸಿಕ್ಕರು, ನಮ್ಮವರೇ ಆದರು.
ಸಾಂಗತ್ಯ ಗುಂಪಿನಲ್ಲಿರುವ ಸಿನಿಮಾದ ಬಗೆಗಿನ ಹುಚ್ಚು, ಅಭಿಮಾನವೇ ಪರಮೇಶ್ ಗುರುಸ್ವಾಮಿಯಂಥ ಹಲವು ಹಿರಿಯರನ್ನು ಹತ್ತಿರವಾಗಿಸಿದೆ. ಅಂದು ಒಂದೆ ಒಂದು ಸಿನಿಮಾಕ್ಕಾಗಿ (ರಿತ್ವಿಕ್ ಘಟಕ್ ) ಗುರುಸ್ವಾಮಿಯವರು ನಮ್ಮತ್ತ ಒಲಿದು ಬಂದರು. ರಿತ್ವಿಕ್ ಘಟಕ್ ಗೆ ಧನ್ಯವಾದ ಹೇಳಬೇಕು.
ಚಿತ್ರೋತ್ಸವಕ್ಕೆ ಬಂದವರು ನಾಳೆ ತಾವು ನೋಡಿದ ಚಿತ್ರಗಳ ಬಗ್ಗೆ ಬರೆದು ಕಳುಹಿಸುವ ಹುಮ್ಮಸ್ಸು ಬಂದರೆ ಯಾರು ಪ್ರಕಟಿಸುತ್ತಾರೆ ? ಈ ಆಲೋಚನೆ ಹುಟ್ಟಿದಾಗ ಕೊಪ್ಪದಲ್ಲಿ ಸುಧೀರ್ ಕುಮಾರ್ ಮುರೊಳ್ಳಿಯವರ ಕಚೇರಿ ಪಕ್ಕದ ಇಂಟರ್ ನೆಟ್ ಕೆಫೆಯಲ್ಲಿ ಅದಕ್ಕೊಂದು ವೇದಿಕೆ ಸಿದ್ಧವಾಯಿತು. ಅದೇ ಸಾಂಗತ್ಯ ಗ್ರೂಪ್ ಬ್ಲಾಗ್.
ಆದರೆ ಆ ಬ್ಲಾಗ್ ಒಂದು ವರ್ಷದಲ್ಲಿ ಬೆಳೆದ ಬಗೆ ಕಂಡರೆ ಅಚ್ಚರಿಯಾಗುತ್ತದೆ. ಸುಮಾರು 260 ಲೇಖನಗಳು ಇಂದು ಬ್ಲಾಗಿನಲ್ಲಿವೆ. ಆ ಪೈಕಿ 200ಕ್ಕಿಂತಲೂ ಹೆಚ್ಚು ಮಾಹಿತಿಪೂರ್ಣ ಲೇಖನಗಳು. ಹಲವು ಒಳ್ಳೊಳ್ಳೆಯವರು ಲೇಖನ ಬರೆದಿದ್ದಾರೆ. ಕೆಲವು ಚಿತ್ರಗಳ ಕುರಿತು ಚರ್ಚೆಗಳೂ ನಡೆದಿವೆ. ಸುಮ್ಮನೆ ಆರಂಭವಾದ ಪ್ರಯತ್ನಕ್ಕೆ ಜನ ನೀಡಿದ ಪ್ರೋತ್ಸಾಹ ಹಾಗೂ ತುಂಬಿದ ಭರವಸೆ ಗಂಭೀರತೆಯನ್ನು ಒದಗಿಸಿದೆ.
ಬಹಳ ಖುಷಿಯ ಸಂಗತಿಯೆಂದರೆ ಡಿಸೆಂಬರ್ 19 ರಂದು ಸಾಂಗತ್ಯ ಟ್ರಸ್ಟ್ ಆಗಿಯೂ ರೂಪುಗೊಂಡಿತು. ಸಿನಿಮಾ ಮಾಧ್ಯಮ ಬಗೆಗಿನ ಪ್ರೀತಿ ಬೆಳೆಸಲೆಂದೇ ಹುಟ್ಟಿಕೊಂಡ ಈ ಟ್ರಸ್ಟ್ ನ ನೇತೃತ್ವ ಪರಮೇಶ್ ಗುರುಸ್ವಾಮಿಯವರದ್ದು. ಇಷ್ಟೇ ಸಾಂಗತ್ಯದ ಹೆಜ್ಜೆಗಳು ನಿಲ್ಲುವುದಿಲ್ಲ.
ಈಗ ಸಿನಿಮಾದ ಬಗೆಗೇ ಮೂರು ತಿಂಗಳಿಗೊಮ್ಮೆ ಪತ್ರಿಕೆ ತರಲು ಹೊರಟಿದೆ. ಸಿನಿಮಾದ ಬಗೆಗೆ ಒಂದು ಗಂಭೀರ ನೋಟ ಹರಿಸುವುದು ಈ ಪತ್ರಿಕೆಯ ಪ್ರಯತ್ನ. ವಾರ್ಷಿಕ 250 ರೂ. ಚಂದಾದಲ್ಲಿ ನಾಲ್ಕು ಸಂಚಿಕೆ ಕೊಡುವುದು ನಮ್ಮ ಉದ್ದೇಶ. ಬಹಳ ಸಂಗ್ರಾಹಯೋಗ್ಯ ಸಂಚಿಕೆಯಾಗಿಸಬೇಕೆಂಬುದು ನಮ್ಮ ಗುರಿ. ಅದಕ್ಕೆ ಎಲ್ಲರ ಸಹಕಾರ ಬೇಕು. ಇನ್ನು ಸಾಂಗತ್ಯ ವೆಬ್ ಸೈಟ್ ಆಗಿಯೂ ಹೊಸ ರೂಪ ತಳೆಯಲಿದೆ. ಆ ನಿಟ್ಟಿನಲ್ಲೂ ಕೆಲಸ ಸಾಗಿದೆ.
ವರ್ಷಕ್ಕೆ ಎರಡು ಚಿತ್ರೋತ್ಸವ ಅಥವಾ ಚಿತ್ರ ಶಿಬಿರ, ಒಂದೆರಡು ತಾಂತ್ರಿಕ ಶಿಬಿರ, ಸಂವಾದಗಳನ್ನು ಏರ್ಪಡಿಸುವ ಉದ್ದೇಶವೇನೋ ಸಾಂಗತ್ಯಕ್ಕಿದೆ. ಅದನ್ನು ಸಾಧ್ಯವಾಗಿಸುವುದು ನಿಮ್ಮೆಲ್ಲರದ್ದು. ವನಸುಮದೊಳಗೆನ್ನ ಜೀವವು ಪಸರಿಸುವಂತೆ…ಸಾಂಗತ್ಯ ಅರಳಿದೆ. ಗಿರಿಯ ಹೂವಿನ ಕಂಪು ನಗರಕ್ಕೆ ತಲುಪಿದೆ ಎನ್ನುವುದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವೇ ಸಾಕ್ಷಿ.
ಈ ಹಿನ್ನೆಲೆಯಲ್ಲಿ ಸಾಂಗತ್ಯ ಅಂದುಕೊಂಡಿದ್ದು ನೂರಾ ಎಂಟಿತ್ತು, ಆಗಿರುವುದು ಬರೇ ಎಂಟು. ಇನ್ನಷ್ಟು ಸಲಹೆ, ಸಹಕಾರ ನೀಡಿ. ಸಾಂಗತ್ಯ ಇನ್ನೂ ಹೇಗೆ ರೂಪುಗೊಳ್ಳಬೇಕು ? ವ್ಯಾಪಿಸಬೇಕು ? ಏನೇನು ಮಾಡಬೇಕು ? ಎಂಬುದರ ಬಗ್ಗೆ ಸಲಹೆಗಳಿಗೆ ಸದಾ ಸ್ವಾಗತ. ನಮ್ಮ ಹೆಜ್ಜೆ ದೃಢವಾಗಿಸುವುದು ನಿಮ್ಮೆಲ್ಲರ ಸಹಕಾರ, ಧನ್ಯವಾದಗಳು.
ಸಾಂಗತ್ಯ ಬಳಗ
ಅಭಿನ೦ದನೆಗಳು 🙂
ದೋಣಿ ಸಾಗಲಿ ಮು೦ದೆ ಹೋಗಲಿ ..
saangatya balagakke nanna abhinandanegalu, hattu halavu cinemagala bagegina maahitiyanna nammondige hanchikondidake dhanyavaada ……hosa varushadalli nimma ella aashayagalu sakaaragollali.
-amara
abhinanadenagaLu!!
all the best
🙂
malathi S
ಹೃದಯ ಪೂರ್ವಕ ಅಭಿನಂದನೆಗಳು..
ನಾನಂತೂ ಖಾಯಮ್ ಓದುಗ…
ಇನ್ನಷ್ಟು ವಸ್ತುನಿಷ್ಟ ವಿಮರ್ಶೆಗಳು ಬರಲಿ…
ಖುಷಿಯಾಗುತ್ತದೆ..
ಮೊದಲ ಹುಟ್ಟುಬ್ಬಕ್ಕೆ ಮತ್ತೊಮ್ಮೆ ಅಭಿನಂದನೆಗಳು…
ಅಭಿನಂದನೆಗಳು ಹಾಗು ಹೀಗೆಯೇ ಹೆಜ್ಜೆ ಮುಂದುವರಿಯಲಿ..
ಎಲ್ಲರಿಗೂ ಧನ್ಯವಾದ, ನಿಮ್ಮ ಸಹಕಾರ ಹೀಗೇ ಇರಲಿ
ಸಾಂಗತ್ಯ