ಜಿ.ಬಿ. ಹರೀಶರು ಈ ಬಾರಿ ಬರೆದಿರುವುದು ಡಿವಿಜಿ ಯವರ ಸಾಕ್ಷ್ಯಚಿತ್ರದ ಬಗ್ಗೆ. ಓದಿ ಹೇಳಿ.

ಡಿ.ವಿ. ಗುಂಡಪ್ಪನವರ ಬಗ್ಗೆ ವಾರ್ತಾ ಇಲಾಖೆ ರೂಪಿಸಿರುವ ಸಾಕ್ಷ್ಯಚಿತ್ರದ ಬಗ್ಗೆ ಪ್ರಸ್ತಾಪಿಸುತ್ತಿದ್ದೇನೆ. ಸುಮಾರು 30 ನಿಮಿಷಗಳ ಅವಧಿ. ಆರಂಭದಿಂದಲೂ ಕೊನೆವರೆಗೂ ನಮ್ಮನ್ನು ಹಿಡಿದಿಟ್ಟಿರುವುದು ಸಮಗ್ರ ವ್ಯಕ್ತಿತ್ವ. ಈ ನಿಟ್ಟಿನಲ್ಲೇ ನೋಡಬೇಕು ಡಿವಿಜಿಯವರನ್ನು.

ಅವರು ಹುಟ್ಟಿದ್ದು ಮುಳಬಾಗಿಲಿನಲ್ಲೇ. ಸಾಕ್ಷ್ಯಚಿತ್ರವೂ ಆರಂಭವಾಗುವುದು ಅಲ್ಲಿಯ ಒಂದು ಸನ್ನಿವೇಶದಿಂದಲೇ. ಸಾಮಾನ್ಯವಾಗಿ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದಂತೆಯೇ ಊರು ಆರಂಭವಾಗುವಾಗಲೇ ದೇವಸ್ಥಾನ. ಅದರಂತೆಯೇ ಈ ಊರಿನಲ್ಲೂ ಆಂಜನೇಯನ ಗುಡಿ. ಅಲ್ಲಿಂದಲೇ ಸಾಕ್ಷ್ಯಚಿತ್ರ ಆರಂಭ. ಅಂದರೆ, ಆ ಆಂಜನೇಯ ಊರನ್ನು ಕಾಯುವಂತೆ. ಡಿ. ವಿ. ಜಿ ಯವರ ಪ್ರಖರವಾದ ಜೀವನ ದರ್ಶನವೆಂದರೆ ಬಾಳಿಗೊಂದು ನಂಬಿಕೆ ಎಂಬುದು. ಊರನ್ನು ಕಾಯುವವನ ಮೇಲೂ ಅಂಥದ್ದೇ ನಂಬಿಕೆ. ಹಾಗಾಗಿ ಬಹುಶಃ ಮೊದಲ ಸನ್ನಿವೇಶವಾಗಿ ಚಿತ್ರಿಸುತ್ತಲೇ ಪರಸ್ಪರ ಸಂಬಂಧ ಕಲ್ಪಿಸುತ್ತಾರೆ ನಿರ್ದೇಶಕ ಕೃಷ್ಣ.

ನಂತರ ಡಿವಿಜಿ ಅವರನ್ನು ಬಹಳ ದೃಶ್ಯಕಲ್ಪನೆಯಲ್ಲಿ ಹೋಲಿಸುವುದು ಆಲದ ಮರಕ್ಕೆ. ಆಲದ ಮರ ಹಲವರಿಗೆ ಆಶ್ರಯ ನೀಡಿರುವಂಥದ್ದು, ಹಾಗೆಯೇ ವಿಸ್ತಾರ, ವಿಶಾಲಕ್ಕೂ ಅರ್ಥ. ಡಿವಿಜಿಯವರೂ ಹಾಗೆಯೇ. ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಲೋಕದಲ್ಲಿ ವಿಸ್ತಾರದ ನಡೆ ಅವರದ್ದು.

ರಾಜಕೀಯ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಪತ್ರಿಕೋದ್ಯಮ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಗಿಬಂದ ಅವರು, ಬಹಳಷ್ಟು ಮಂದಿಗೆ ಮಂಕುತಿಮ್ಮನ ಕಗ್ಗ ಬರೆದ ಗುಂಡಪ್ಪನವರಾಗಿ ಮಾತ್ರ ತೋರುತ್ತಾರೆ. ಆದರೆ ಈ ಸಾಕ್ಷ್ಯಚಿತ್ರದಲ್ಲಿ ಡಿವಿಜಿ ಯವರನ್ನು ಸಮಗ್ರವಾಗಿ ನೋಡುವ ಪ್ರಯತ್ನ ನಡೆದಿದೆ.

ಪ್ರತಿ ಚಿತ್ರಿಕೆಗಳಲ್ಲೂ ಎಲ್ಲೂ ವ್ಯಕ್ತಿತ್ವ ಸೋರಿ ಹೋಗದ ಹಾಗೆ ಎಚ್ಚರಿಕೆ ವಹಿಸಿಕೊಂಡಿರುವುದು ಸ್ಟಷ್ಟ. ಅವರೇ ಕಟ್ಟಿ ಬೆಳೆಸಿದ ಸಾರ್ವಜನಿಕ ಗೋಖಲೆ ಸಂಸ್ಥೆಯಲ್ಲಿ ಅವರಿಗೇ ಸನ್ಮಾನ. ದಢೂತಿ ದೇಹ, ಚೊಕ್ಕ ನಗೆಯ ಮುದುಕಪ್ಪ ಎಲ್ಲರನ್ನೂ ಆಹ್ವಾನಿಸುತ್ತಾ, ಎಲ್ಲರೊಂದಿಗೆ ಸಂಭಾಷಿಸುತ್ತಾ ಕಳೆಯುವ ಆ ಸನ್ನಿವೇಶ ಬಹಳ ಇಷ್ಟವಾಗುವಂಥದ್ದು. ಎಲ್ಲ ವರ್ಗದ ಮಂದಿ ಬಂದು ಅಭಿನಂದಿಸಿ ಹೋದದ್ದು ಕಂಡರೆ ಅವರ ಸಾರ್ವಜನಿಕ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ.

ಹಾಗೆಯೇ ಡಿವಿಜಿಯವರನ್ನು ಮಹತ್ವದ ಸ್ಥಾನದಲ್ಲಿ ನಿಲ್ಲಿಸಿದ ಅವರ ಅನ್ತಃಪುರ ಗೀತೆಗಳು ಇಲ್ಲಿಯೂ ಸ್ಥಾನ ಪಡೆದಿವೆ. ಬೇಲೂರು ಶಿಲಾಬಾಲಿಕೆಯನ್ನು ಕೇಂದ್ರೀಕರಿಸಿ ಪ್ರಸಾರವಾಗುವ ಎರಡು ಹಾಡುಗಳು ಅತ್ಯಂತ ಮಾಧುರ್ಯದಿಂದ ಕೂಡಿವೆ. ಗೋಖಲೆ ಸಂಸ್ಥೆಯಲ್ಲಿ ಅವರು ನಡೆಸುತ್ತಿದ್ದ ವ್ಯಾಸಂಗ ಗೋಷ್ಠಿ ಬಹಳ ಪ್ರಸಿದ್ಧವಾದುದು. ಅದರ ಸನ್ನಿವೇಶವೂ ಚೆನ್ನಾಗಿದೆ.

ಒಂದು ಕುರ್ಚಿಯ ಮೇಲೆ ಅವರು ಕುಳಿತಿದ್ದರೆ, ಗೋಷ್ಠಿ ಕೇಳುವವರು ಕೆಳಗೆ ಕುಳಿತು ಕೇಳುತ್ತಿರುತ್ತಾರೆ. ಒಳ್ಳೆ ವಿದ್ವಾಂಸನೆಂಬುವ ಅವರನ್ನೇ ಆಳುತ್ತಿರುವಂತಿದೆ, ಆ ಗತ್ತು ಸಹ.

ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯಲ್ಲಿ ಡಿವಿಜಿ ಯವರ ಪಾತ್ರವೂ ಇದೆ. ಹಿಂದಿನ (ಇತ್ತೀಚೆಗೆ ಕೆಡವಿ ಹಾಕಿದ) ಸಭಾಂಗಣದಲ್ಲಿ ಸುತ್ತಲೂ ಸಾಹಿತಿಗಳ ಫೋಟೋಗಳನ್ನು ತೂಗಿ ಹಾಕಲು ಡಿವಿಜಿ ಯವರೂ ಕಾರಣರಂತೆ.

ಇಡೀ ಸಾಕ್ಷ್ಯಚಿತ್ರ ಕಪ್ಪುಬಿಳುಪಿನದು. ಇದರ ಮತ್ತೊಂದು ವೈಶಿಷ್ಟ್ಯವೆಂದರೆ ಕವಿ ಜಿ. ಪಿ. ರಾಜರತ್ನಂ ಅವರು ಡಿವಿಜಿ ಯವರನ್ನು ಸಂದರ್ಶಿಸಿದ್ದು. ಅದರಲ್ಲಿ ಹೇಳುವ ಒಂದು ಮಾತೇ ಇಡೀ ಡಿವಿಜಿಯವರ ಸಮಗ್ರ ಸಾಹಿತ್ಯದ ಆಶಯವನ್ನು ಹಿಡಿದಿಡುವಂಥದದ್ದು ಜೀವನವನ್ನು ಆನಂದಿಸಬೇಕು.

ಇಡೀ ಸಾಕ್ಷ್ಯಚಿತ್ರ ಎಲ್ಲೂ ನಮಗೆ ಬಿಡಿ ಬಿಡಿಯಾದ ಚಿತ್ರದಂತೆ ತೋರುವುದಿಲ್ಲ. ಒಂದು ಸಮಗ್ರ ವ್ಯಕ್ತಿತ್ವವನ್ನು ಹಿಡಿದುಕೊಡಲು ಪಟ್ಟ ಪರಿಶ್ರಮ ಅದರಲ್ಲಿ ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ ಒಳ್ಳೆಯ ಸಾಕ್ಷ್ಯಚಿತ್ರ.