ಕನ್ನಡ ಚಿತ್ರರಂಗದ ಮತ್ತೊಬ್ಬ ಮೇರುನಟ ಡಾ. ವಿಷ್ಣುವರ್ಧನ್ (59) ನಿಧನರಾಗಿದ್ದಾರೆ.

ಬುಧವಾರ ಬೆಳಗಿನ ಜಾವ ಸುಮಾರು 3. 30 ರ ಷ್ಟೊತ್ತಿಗೆ ಮೈಸೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು. ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್ ನಲ್ಲಿ ಕೆಲ ದಿನಗಳಿಂದ ಉಳಿದುಕೊಂಡಿದ್ದರು. ಮೈಸೂರಿನ ಮೇಲಿನ ಅವರ ಪ್ರೇಮ ಕೊನೆಗೂ ಬಿಡಲಿಲ್ಲ. ಬೆಳಗಿನ ಜಾವ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು 2.55 ರಷ್ಟೊತ್ತಿಗೆ ವಿಕ್ರಂ ಆಸ್ಪತ್ರೆಯ ವೈದ್ಯರಿಗೆ ದೂರವಾಣಿ ಕರೆ ಮಾಡಲಾಯಿತು. ತಕ್ಷಣವೇ ಆಗಮಿಸಿದ ಡಾ. ಮುಕುಂದ್ ಮತ್ತು ಅವರ ತಂಡ, ತಕ್ಷಣವೇ ಆಸ್ಪತ್ರೆಗೆ ವಿಷ್ಣುವರ್ಧನ್ ಅವರನ್ನು ಸಾಗಿಸಿದರು. ಆದರೆ ಮಾರ್ಗ ಮಧ್ಯೆಯೇ ಇಹಲೋಕ ತ್ಯಜಿಸಿದ್ದರು. ಆಸ್ಪತ್ರೆಯಲ್ಲಿ ಸರಿಯಾಗಿ ಪರಿಶೀಲಿಸಿದ ನಂತರ ಸುಮಾರು 3. 30 ಸುಮಾರಿಗೆ ಅಧಿಕೃತ ಘೋಷಣೆ ಮಾಡಲಾಯಿತು.

ಮೈಸೂರಿನ ಚಾಮುಂಡಿಪುರಂನಲ್ಲಿ ಹುಟ್ಟಿದ ಅವರು, ತಮ್ಮ ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಮುಗಿಸಿದವರು. ಹಿರಿಯ ಚಿತ್ರ ನಿರ್ದೇಶಕ ಪುಟ್ಟಣ್ಣನವರೇ ಇವರನ್ನು ಗುರುತು ಹಚ್ಚಿದವರು. “ನಾಗರ ಹಾವು” ಚಿತ್ರದ ರಾಮಾಚಾರಿ ಪಾತ್ರದ ಮೂಲಕವೇ ಜನಮಾನಸಕ್ಕೆ ತಲುಪಿದ ವಿಷ್ಣುವರ್ಧನ್ ತಮ್ಮದೇ ಆದ ಹಲವು ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಹೊಸತನ್ನು ತುಂಬಿದವರು. ಬಂಧನ ಚಿತ್ರ ತಂದುಕೊಟ್ಟ ಖ್ಯಾತಿ ಹಾಗೂ ಇಮೇಜ್ ಅನನ್ಯ. ಹಾಗೆಯೇ ಸಾಹಸಸಿಂಹ ಚಿತ್ರದ ಮೂಲಕ ಅವರಿಗೊಂದು ಬಿರುದೂ ಪಾತ್ರವಾಯಿತು. 5 ಕ್ಕೂ ಹೆಚ್ಚು ಫಿಲಂಪೇರ್ ಪ್ರಶಸ್ತಿ ಗಳಿಸಿದ್ದ ಅವರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಿತ್ತು. ಮುತ್ತಿನಹಾರದಂಥ ಒಳ್ಳೆಯ ಚಿತ್ರಗಳನ್ನು ಕೊಟ್ಟವರು ಅವರು.

ರಾಜ್ಯ ಸರಕಾರ ರಾಜ್ಯಾದ್ಯಂತ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಪ್ರಕಟಿಸಿದೆ. ಈ ಮಧ್ಯೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗುತ್ತಿದೆ. ನಂತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.