ಪರಮೇಶ್ ಗುರುಸ್ವಾಮಿಯವರು ವಿಷ್ಣುವರ್ಧನ್ ಅವರ ಬಗೆಗಿನ ಒಂದು ಅನುಭವವನ್ನು ಸಾಂಗತ್ಯದೊಂದಿಗೆ ಹಂಚಿಕೊಂಡಿದ್ದಾರೆ. ಓದಿ, ನಿಮ್ಮ ಅನುಭವಗಳಿದ್ದರೂ ಹಂಚಿಕೊಳ್ಳಿ.

ಈ ಅನುಭವವನ್ನು ನನಗೆ ವಿವರಿಸಿದ್ದು ಪಿ.ವಿ. ನಂಜರಾಜ ಅರಸ್.
‘ಸಂಸ್ಕಾರ’ ವನ್ನು ಪಟ್ಟಾಭಿರಾಮರೆಡ್ಡಿ ನಿರ್ದೇಶಿಸುತ್ತಿದ್ದ ಸಂದರ್ಭ. ಗಿರೀಶ ಕಾರ್ನಾಡರು ಚಿತ್ರಕಥೆ ಬರೆದಿದ್ದರು. ಆದರೂ ಒಟ್ಟೂ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಉತ್ಸಾಹವನ್ನು ಕಂಡು ಜಿ.ವಿ. ಅಯ್ಯರ್ ಅವರು ಒಂದು ಅವಕಾಶ ಕೊಟ್ಟರು. ಅಯ್ಯರ್ ಬಗ್ಗೆ ಇಲ್ಲಿ ಒಂದು ಮಾತು ಉಲ್ಲೇಖಿಸಬೇಕು. ಚಿತ್ರರಂಗದ ಎಲ್ಲ ಹಂತಗಳಲ್ಲೂ ದುಡಿದವರು. ಚಿತ್ರಕಥೆಯಿಂದ ಹಿಡಿದು ಅಭಿನಯ, ನಿರ್ದೇಶನ, ನಿರ್ಮಾಣದವರೆಗೂ ಸಾಗಿದವರು. ಬೇರೆಯವರಿಗೆ, ಅದರಲ್ಲೂ ಹೊಸಬರಿಗೆ ಅವಕಾಶ ಕೊಟ್ಟವರು. ಕನ್ನಡ ಚಿತ್ರರಂಗದ ಅತ್ಯಂತ ಪ್ರಯೋಗಶಾಲಿ ನಿರ್ದೇಶಕರು. ಅತ್ಯುತ್ತಮ ಚಿತ್ರಗಳನ್ನು ಕೊಟ್ಟಷ್ಟೇ ಅತ್ಯಂತ ತೋಪಾದ ಚಿತ್ರವನ್ನು ಅವರೇ ಕೊಟ್ಟವರು.ಇದು ಅವರ ನಿರಂತರ ಪ್ರಯೋಗಶಾಲಿತನಕ್ಕೆ ಉದಾಹರಣೆಯಾಗುತ್ತದೆ. ಅಂದರೆ ಒಂದು ಚಿತ್ರ ಯಶಸ್ವಿಯಾದ ಮೇಲೆ, ಅದೇ ಸೂತ್ರಗಳನ್ನು ಆಧರಿಸಿ ಸಾಲು ಸಾಲಾಗಿ ಚಿತ್ರಗಳನ್ನು ನಿರ್ಮಿಸುವುದು ಸುಲಭವಾದ ಮಾರ್ಗವಾಗಿತ್ತು. ಆದರೆ ಅಯ್ಯರ್, ಸವಾಲುಗಳನ್ನು ಸ್ವೀಕರಿಸಿ ಹೊಸ ನಡೆ ಹಾಕುತ್ತಿದ್ದರು.

ಅದೇ ‘ವಂಶವೃಕ್ಷ’ ಚಿತ್ರದ ನಿರ್ದೇಶನ. ಬಿ.ವಿ. ಕಾರಂತ ಹಾಗೂ ಗಿರೀಶ್ ಕಾರ್ನಾಡರು ಜಂಟಿಯಾಗಿ ನಿರ್ದೇಶಿಸಿದ ಚಿತ್ರವಿದು. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಕೆಲವು ರೂಢಿಗತ ಕಲ್ಪನೆಗಳನ್ನು ಕಳೆದು ಹೊಸತನ ತುಂಬಲಾಯಿತು. ಚಿತ್ರ ತಯಾರಿಕೆಯ ವಿಧಾನ, ಖ್ಯಾತನಾಮರನ್ನು ಆಶ್ರಯಿಸಿರಲಿಲ್ಲ. ಹೀಗೆ ಹಲವು ಹೊಸತನವಿತ್ತು.

ಇದರಲ್ಲಿ ಒಂದು ಚಿಕ್ಕಪಾತ್ರ ಚಿಕ್ಕಗೌಡರದ್ದು. ಅದರಲ್ಲಿ ನಟಿಸಿದ್ದು ಕುಮಾರ್ ಎಂಬಾತ. ಅಂದರೆ ಅವನೇ ನಾಗರಹಾವಿನ ರಾಮಾಚಾರಿ, ಈಗಿನ ವಿಷ್ಣುವರ್ಧನ್.

ಇಡೀ ಪಾತ್ರದಲ್ಲಿ ಮಾತಿರಲಿಲ್ಲ. ತನ್ನ ತಂದೆಯ ರೂಢಿಗತ ನಿಲುವಿಗೆ ವಿರೋಧ ವ್ಯಕ್ತಪಡಿಸುವ, ಆತನ ಬಗ್ಗೆ ತಾತ್ಸಾರ ಹೊಂದಿರುವ, ಪ್ರತಿರೋಧ ವ್ಯಕ್ತಿತ್ವದ ಪಾತ್ರವದು. ಅದಕ್ಕೆ ಬಹಳ ಸಮರ್ಥನೀಯವಾಗಿ ಅಭಿನಯದ ಮೂಲಕವೇ ಜೀವ ತುಂಬಬೇಕಿತ್ತು. ಹುಡುಗ ನೋಡಲು ಚೆನ್ನಾಗಿದ್ದ, ಒಳ್ಳೆ ಕಟ್ಟುಮಸ್ತಾದ ದೇಹ. ಈ ಎಲ್ಲ ಕಾರಣಗಳಿಂದ ಪಾತ್ರಕ್ಕೆ ಆಯ್ಕೆಯಾಗಿದ್ದ ಕುಮಾರ್.

ಆದರೆ ಯಾಕೋ ಗೊತ್ತಿಲ್ಲ. ಕ್ಯಾಮೆರಾದ ಮುಂದೆ ಕಂಪಿಸುತ್ತಿದ್ದ. ಎಷ್ಟೇ ಆದರೂ ನಟಿಸಲು ಕಷ್ಟವಾಗುತ್ತಿತ್ತು. ಆಗ ಅವನ ಸಂಕಷ್ಟವನ್ನು ನೋಡಿದ ಅರಸ್, ತಮ್ಮ ಜೇಬಿನಲ್ಲಿದ್ದ ಚೂಯಿಂಗ್ ಗಮ್ ನ್ನು ಕೊಟ್ಟು ಇದನ್ನು ಜಗಿಯುತ್ತಾ ನಟನೆ ಮಾಡು. ನಿನ್ನ ಏಕಾಗ್ರತೆ ಅದರತ್ತ ಹೋಗುತ್ತದೆ. ನಟಿಸುವಾಗ ಬೆವರೋದಿಲ್ಲ, ನಿನ್ನಷ್ಟಕ್ಕೆ ನೀನು ನಟಿಸು ಅಂದ್ರಂತೆ. ಅದರಂತೆ ಕುಮಾರ್ ಮಾಡಿ ಗೆದ್ದ.

ಮಾತಿಲ್ಲದ ಪಾತ್ರಕ್ಕೆ ತನ್ನ ಆಂಗಿಕ ಅಭಿನಯದಿಂದಲೇ ಜೀವ ತುಂಬಿದ ಕುಮಾರ್, ನಂತರ ರಾಮಾಚಾರಿಯಾಗಿ ಗೆದ್ದರು. ಇಡೀ ದೇಹದ ಭಂಗಿಯಿಂದಲೇ ತನ್ನೆಲ್ಲಾ ಅಭಿನಯ ಸಾಮರ್ಥ್ಯವನ್ನು ಪ್ರದರ್ಶಿಸಿದ ಕುಮಾರ್ (ವಿಷ್ಣುವರ್ಧನ್) ಅವರನ್ನು, ಪುಟ್ಟಣ್ಣ ಕಣಗಾಲ್ ‘ನಾಗರಹಾವು’ ಚಿತ್ರಕ್ಕೆ ಆಯ್ಕೆ ಮಾಡಿದರು.

ಕಾರಣ, ನಾಗರಹಾವಿನಲ್ಲೂ ಅಂಥದೊಂದೇ ಪ್ರತಿರೋಧದ ಪಾತ್ರಕ್ಕೆ ನಟ ಬೇಕಿತ್ತು. ರಾಮಾಚಾರಿ ಪಾತ್ರವೂ ಅಂಥದ್ದೇ, ಸಂಪ್ರದಾಯ ಬದ್ಧ ವ್ಯವಸ್ಥೆಯ ವಿರೋಧದಂಥದ್ದು. ಹಾಗಾಗಿ ಪುಟ್ಟಣ್ಣ ಆಯ್ಕೆ ಮಾಡಿದರು, ಅಶ್ವತ್ಥರಂಥ ಚಾಮಯ್ಯ ಮೇಷ್ಟ್ರಿಗೆ ಜತೆಯಾಗಿ ನಟಿಸಿದರು ವಿಷ್ಣುವರ್ಧನ್. ಅಂಥ ರಾಮಾಚಾರಿ ಪಾತ್ರ ಜನಮಾನಸದಲ್ಲಿ ಉಳಿಯಿತು.