ಸಿನಿಮಾ ಬಗೆಗಿನ ಪುಸ್ತಕಗಳ ಬಗ್ಗೆ ಆರಂಭಿಸಿರುವ ಹೊಸ ಲೇಖನ ಸಂಚಯವಿದು. ಇದರಲ್ಲಿ ಮೊದಲಿಗೆ ಎನ್. ಮನುಚಕ್ರವರ್ತಿಯವರ “ಕಲ್ಚರಲ್ ರಿಯಲಿಸಂ” ಕೃತಿ ಕುರಿತು ವಿಜಯ ಕರ್ನಾಟಕದಲ್ಲಿ ಟಿ.ಪಿ. ಅಶೋಕರು ಬರೆದ ಬರಹವನ್ನು ಹಾಕಲಾಗಿದೆ. ನಿಮ್ಮಲ್ಲೂ ಇರುವ ಕೃತಿಗಳ ಬಗ್ಗೆ ಪುಟ್ಟದಾದ ವಿಮರ್ಶಾತ್ಮಕ ಬರಹ ಅಥವಾ ಪರಿಚಯಾತ್ಮಕ ಬರಹವನ್ನು ನಮ್ಮ ಇಮೇಲ್ ವಿಳಾಸಕ್ಕೆ ಕಳಿಸಬಹುದು.

ಎನ್.ಮನು ಚಕ್ರವರ್ತಿಯವರು ಸಂಪಾದಿಸಿರುವ ‘ಕಲ್ಚರಿಂಗ್ ರಿಯಲಿಸಂ’ ಹಲವು ಕಾರಣಗಳಿಗಾಗಿ ಒಂದು ಮಹತ್ವದ ಪ್ರಕಟಣೆ. ಗಿರೀಶ್ ಕಾಸರವಳ್ಳಿಯವರ ಚಲನಚಿತ್ರಗಳನ್ನು ಸೂಕ್ಷ್ಮವಾಗಿ, ಗಂಭೀರವಾಗಿ ಚರ್ಚಿಸುವ ಹತ್ತು ಲೇಖನಗಳ ಸಂಗ್ರಹ ಇದು. ಮನು ಚಕ್ರವರ್ತಿ ಮತ್ತು ರಶ್ಮಿದೊರೈಸ್ವಾಮಿಯವರು ಗಿರೀಶರೊಂದಿಗೆ ನಡೆಸಿರುವ ಎರಡು ಪ್ರತ್ಯೇಕ ಸಂದರ್ಶನಗಳೂ ಇಲ್ಲಿ ಸಂಕಲಿತವಾಗಿ ಈ ಸಂಪುಟದ ಮಹತ್ವವನ್ನು ಹೆಚ್ಚಿಸಿವೆ. ಸಮಕಾಲೀನ ಭಾರತೀಯ ಚಲನಚಿತ್ರ ನಿರ್ದೇಶಕರುಗಳಲ್ಲಿಯೇ ತುಂಬಾ ಪ್ರತಿಭಾವಂತರೆಂದೂ, ಪ್ರಯೋಗಶೀಲರೆಂದೂ ಪ್ರಸಿದ್ಧರಾಗಿರುವ ಗಿರೀಶ್ ಕಾಸರವಳ್ಳಿಯವರ ಚಿತ್ರಗಳನ್ನು ಕುರಿತ ಮೊದಲ ಪುಸ್ತಕ ಇದು.

ಮನು ಚಕ್ರವರ್ತಿಯವರು ದೊಡ್ಡ ಬಜೆಟ್ಟಿನ ಕಮರ್ಷಿಯಲ್ ಹಿಂದಿ ಚಿತ್ರಗಳನ್ನು ಭಾರತೀಯ ಚಲನ ಚಿತ್ರದ ಮುಖ್ಯ ಪ್ರವಾಹವೆಂದೂ, ಇತರ ಭಾರತೀಯ ಭಾಷಾ ಚಿತ್ರಗಳನ್ನು ಕೇವಲ ‘ಪ್ರಾದೇಶಿಕ’ ಚಿತ್ರಗಳೆಂದೂ ಗುರುತಿಸುವ ‘ಪ್ರತಿಷ್ಠಿತ’ ಸಂಕಥನ ಗಳನ್ನು ನಿರಾಕರಿಸುತ್ತಾರೆ. ಇಂಥ ಚಿಂತನೆಗಳು ಮಾರುಕಟ್ಟೆಯ ಒತ್ತಡದಿಂದ ಪ್ರಭಾವಿತವಾಗಿರುತ್ತವೆ.

ಇಂಥ ‘ಯಜಮಾನಿಕೆ’ಗೆ ಸಡ್ಡು ಹೊಡೆದು ತನ್ನ ಭಾಷೆ ಮತ್ತು ಸಂಸ್ಕೃತಿಗಳಲ್ಲಿ ಆಳವಾಗಿ ಬೇರುಬಿಟ್ಟಿರುವ ಮುಖ್ಯ ಕಾರಣ ಕ್ಕಾಗಿ ಅವರು ಗಿರೀಶರ ಚಿತ್ರಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಗಿರೀಶರ ಚಿತ್ರಗಳನ್ನು ಯಾವ ಸಂದರ್ಭದಲ್ಲಿ ಇಟ್ಟು ನೋಡಬೇಕೆಂಬ ಮತ್ತೂ ಒಂದು ಪ್ರಶ್ನೆಯನ್ನು ಮನು ಪರಿಶೀಲಿಸುತ್ತಾರೆ. ಸಾಮಾನ್ಯವಾಗಿ ಗಿರೀಶರ ಚಿತ್ರಗಳನ್ನು ವಾಸ್ತವವಾದೀ-ಅದರಲ್ಲೂ ನವವಾಸ್ತವವಾದೀ-ಚಿತ್ರಗಳೊಂದಿಗೆ ಸಮೀಕರಿಸಿ ನೋಡುವುದುಂಟು. ವಾಸ್ತವವಾದವು ಗಿರೀಶರ ಚಿತ್ರಗಳ ಒಂದು ಮುಖ್ಯ ನೆಲೆ ಎಂದೂ ನವವಾಸ್ತವ ಪಂಥದ ಪ್ರಭಾವ ಅವರ ಮೇಲಿದೆ ಎಂದೂ ಮನು ಒಪ್ಪಿಕೊಳ್ಳುತ್ತಾರೆ. ಆದರೆ ತನ್ನ ಸಂಸ್ಕೃತಿಯಲ್ಲಿ ಗಟ್ಟಿಯಾಗಿ ಬೇರುಬಿಟ್ಟ ಗಿರೀಶರ ಚಿತ್ರಗಳ ಮಹತ್ವವಿರುವುದು ಅವರು ವಾಸ್ತವವಾದವನ್ನು ಪರಿವರ್ತಿಸಿಕೊಂಡು ಅದಕ್ಕೆ ಒಂದು ರೂಪಕಾತ್ಮಕ ಆಯಾಮವನ್ನು ಧಾರಣ ಮಾಡಿರುವುದ ರಲ್ಲಿ ಎಂಬುದು ಲೇಖಕರ ಮುಖ್ಯ ವಾದವೆನ್ನಬಹುದು.

ತಮ್ಮ ಮೊದಲ ಘಟ್ಟದಲ್ಲಿ ‘ಬೈಸಿಕಲ್ ಥೀವ್ಸ್’ ಮತ್ತು ‘ಪಥೇರ್ ಪಾಂಚಾಲಿ’ ಗಳಂಥ ಚಿತ್ರಗಳಿಂದ ಪ್ರಭಾವಿತರಾಗಿರುವುದನ್ನು ಗಮನಿಸಿಯೂ ಅವರ ‘ಘಟಶ್ರಾದ್ಧ’ ಚಿತ್ರವು ಆ ಎರಡು ಚಿತ್ರಗಳಿಂದ ಹೇಗೆ ಭಿನ್ನವಾಗಿದೆ ಎಂಬುದನ್ನು ಗುರುತಿಸಿಕೊಂಡರೆ ಗಿರೀಶರು ತುಳಿಯಬಯಸಿದ ಹೊಸ ಮಾರ್ಗವು ನಮ್ಮ ಅರಿವಿಗೆ ಬರುತ್ತದೆ ಎಂಬುದು ಸ್ಥೂಲವಾಗಿ ಮನು ಅವರ ಅಭಿಪ್ರಾಯ. ಆದ್ದರಿಂದಲೇ ಅವರು ‘ಸಂಸ್ಕಾರ’ವು ಮೊದಲು ನಿರ್ಮಿತವಾದರೂ ಕನ್ನಡದಲ್ಲಿ ‘ಹೊಸ ಅಲೆ’ ನಿಜವಾಗಿ ಆರಂಭವಾದದ್ದು ‘ಘಟಶ್ರಾದ್ಧ’ ಚಿತ್ರದ ಮೂಲಕವೇ ಎಂದು ವಿಶ್ಲೇಷಿಸುತ್ತಾರೆ. ಮೂರನೆಯದಾಗಿ ಅವರು ಗಿರೀಶರ ಚಿತ್ರಗಳನ್ನು-ಮುಖ್ಯವಾಗಿ ‘ಘಟಶ್ರಾದ್ಧ’ ಮತ್ತು ‘ತಾಯಿಸಾಹೇಬ’ ಸ್ತ್ರೀವಾದೀ ಮೀಮಾಂಸೆಯ ಹಿನ್ನೆಲೆಯಲ್ಲಿವಿವರವಾದ ವಿಮರ್ಶೆಗೆ ಒಳಪಡಿಸುತ್ತಾರೆ.

ಅವರು ಚರ್ಚಿಸಿರುವ ಮತ್ತೊಂದು ಮುಖ್ಯ ಅಂಶವೆಂದರೆ ಕಳೆದ ಐವತ್ತು ವರುಷಗಳ ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ
ಮತ್ತು ರಾಜಕೀಯ ಚರಿತ್ರೆಗೂ ಗಿರೀಶರ ಚಿತ್ರಗಳಿಗೂ ಇರುವ ಸಂಬಂಧದ ಸ್ವರೂಪ. ಅದರಲ್ಲೂ ಈ ಅವಧಿಯ ಕನ್ನಡ ಸಾಹಿತ್ಯ
ಮತ್ತು ರಂಗಭೂಮಿಯ ಸೃಜನಶೀಲತೆ, ಪ್ರಯೋಗಶೀಲತೆ ಮತ್ತು ಸಿದ್ಧಿಯ ಜೊತೆಜೊತೆಗೇ ಗಿರೀಶರ ಪಯೋಗಗಳನ್ನೂ ಒಟ್ಟಾಗಿ ಇಟ್ಟು
ನೋಡಬೇಕೆನ್ನುವುದು.

ಎರಡು ಪ್ರತ್ಯೇಕ ಸಂದರ್ಶನಗಳಲ್ಲಿ ಗಿರೀಶರು ತಮ್ಮ ಚಿತ್ರಗಳು, ಚಿತ್ರನಿರ್ಮಿತಿ ಮತ್ತು ಒಟ್ಟಾರೆ ನಮ್ಮ ಸಮಕಾಲೀನ ಚಲನಚಿತ್ರ ಸಂದರ್ಭಗಳನ್ನು ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯ ಸಿನೆಮಾದಲ್ಲಿ ‘ಹೊಸ ಅಲೆ’ಯನ್ನು ಗಿರೀಶರು ಸತ್ಯಜಿತ್ ರಾಯ್ ಅವರ ಚಿತ್ರನಿರ್ಮಿತಿಯ ಸಂದರ್ಭದಲ್ಲಿ ಗುರುತಿಸುತ್ತಾರೆ. ಅವರ ಮುಂದಿನ ಪೀಳಿಗೆಯವರಾದ ಕುಮಾರ ಸಹಾನಿ ಮತ್ತು ಮಣಿಕೌಲ್ ಅವರು ಸತ್ಯಜಿತ್ತರ ಮಾರ್ಗವನ್ನು ಅನುಸರಿಸದೆ ಅದಕ್ಕೆ ವಿರೋಧವೆಂಬಂತೆ ತಮ್ಮದೇ ದಾರಿಗಳನ್ನು ಕಂಡುಕೊಂಡರು.

ರಾಯ್ ಮಾರ್ಗದ ವಿಸ್ತರಣೆಯನ್ನು ಕನ್ನಡದ ಹೊಸ ಅಲೆಯಲ್ಲಿ ಕಾಣಬಹುದು ಎಂಬುದು ಗಿರೀಶರ ಅಭಿಪ್ರಾಯ. ಆದರೆ ತಮ್ಮ ‘ಘಟಶ್ರಾದ್ಧ’ ನಿರ್ಮಾಣವಾಗುವುದಕ್ಕೆ ಮುಂಚೆ ‘ಸಂಸ್ಕಾರ’, ‘ಚೋಮನ ದುಡಿ’ ಚಿತ್ರಗಳು ಒಂದು ಹೊಸ ಭೂಮಿಕೆಯನ್ನು ಸಿದ್ಧಮಾಡಿದ್ದವು ಎಂಬುದನ್ನು ಅವರು ಮರೆಯುವುದಿಲ್ಲ. ಅಷ್ಟೇ ಅಲ್ಲ, ‘ಕಾಡು’, ‘ವಂಶವೃಕ್ಷ’, ‘ಸ್ಕೂಲ್ ಮಾಸ್ಟರ್’, ‘ಪ್ರೇಮದ ಪುತ್ರಿ’, ಎನ್.ಲಕ್ಷ್ಮೀನಾರಾಯಣ್ ಮತ್ತು ಎಮ್.ವಿ. ಕೃಷ್ಣಸ್ವಾಮಿ ಅವರ ಚಿತ್ರಗಳು ಕನ್ನಡ ಹೊಸ ಅಲೆಯು ಮೂಡಿಬರುವುದಕ್ಕೆ ಒಂದು ಸಣ್ಣ ಪರಂಪರೆಯನ್ನೇ ಸೃಷ್ಟಿಸಿದ್ದವು ಎಂದು ಅವರು ವ್ಯಾಖ್ಯಾನಿಸುತ್ತಾರೆ.