ಕನ್ನಡ ಚಿತ್ರರಂಗದ ಸದ್ಯದ ವಿವಾದದ ಕುರಿತು ವಸಂತ ಅವರು ಬರೆದ ಲೇಖನಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಬಂದದ್ದೆಲ್ಲವನ್ನೂ ಚರ್ಚೆ ಇನ್ನಷ್ಟು ಚರ್ಚೆಯಾಗಲೆಂಬ ದೃಷ್ಟಿಯಿಂದ ಇಲ್ಲಿ ಹಾಕಲಾಗಿದೆ. ದಯವಿಟ್ಟು ಚರ್ಚೆಯನ್ನು ಬೆಳೆಸಿ.

ಹಾಂಗಲ್ಲಾರೀ… ನೀವ್ಯಾಕೆ ಆ ಸಿನ್ಮಾ ತೋರ್ಸೋನ್ ಬಗ್ಗೆ ಮಾತಾಡ್ತೀರ್ರೀ? ಅವಂ ಮಾಡೋದು ಅವನ ಹೊಟ್ಟೇ ಪಾಡಲ್ಲೇನ್ರೀ? ಅವಂಗೆ ಹಿಂದೀ ಸಿನ್ಮಾ ತೋರ್ಸೇ ಹೊಟ್ಟೆ ತುಂಬೋದು ಅಂತಾದ್ಮ್ಯಾಲೆ ಅವಂ ಯಾಕ್ರೀ ಕನ್ನಡಾ ಸಿನ್ಮಾ ತೋರ್ಸ್ಯಾನು? ಇವತ್ತಾ ಕನ್ನಡ ಸಿನ್ಮಾ ನೋಡೂ ಜನ್ರೇ ಕಡ್ಮೆ ಆಗಿದಾರಾ ಅಂದ್ ಮ್ಯಾಗೆ ಅದಕ್ಕೇನೋ ಬೇರೆ ಕಾರಣ ಇರ್ಬೇಕಲ್ಲೇನ್ರೀ? ನಮ್ಮ ಸಿನ್ಮಾಗಳನ್ನ ಉಳ್ಸೋಕ್ಕಂತ ಅದ್ಯಾವನೋ ಗದಗ್ದೋನ್ ಹೊಟ್ಟೆಗೊಡ್ಯೋದು ಏನು ನ್ಯಾಯಾ ಕಣ್ರೀ? ಅದಕ್ಕೆ ಕಾನೂನು ಮಾಡಿದ್ರಾ… ಅದು ಅನ್ಯಾಯದ್ ಕಾನೂನಲ್ಲೇನ್ರೀ……………………………………………………………. ಬೇತಾಳ
*
ಎಲ್ರೂ ಮಾಡೋದೂ ಹೊಟ್ಟೆಪಾಡಿಗಾಗಿ ಸ್ವಾಮಿ. ಹಾಗಂತ ಉದಾಹರಣೆಗೆ, ಕಳ್ಲಭಟ್ಟಿ ಮಾಡೋರ್ನ, ಕಳ್ಳಸಾಗಾಣಿಕೆ ಮಾಡೋರ್ನ ಒಪ್ಪೋದಿಕ್ಕೆ ಸಾಧ್ಯಾನಾ? ಒಬ್ಬರು ಮಾಡೋ ಕೆಲಸ ಆ ನಾಡಿನ ಜನರ ಏಳಿಗೆಗೆ ಪೂರಕವಾಗಿರಬೇಕು ಅಲ್ಲವಾ? ಕಾನೂನು ಇರೋದೂ ಸಹಾ ಆಯಾ ನಾಡಿನ ಜನರ ಏಳಿಗೆಗಾಗಿಯೇ ಅಲ್ಲವಾ? ಕಾನೂನು ಮಾಡೋದು ಆಯಾ ನಾಡಿನ ಜನರ ರಕ್ಷಣೆಗಾಗಿ ಅಲ್ಲವಾ?-ವಿಕ್ರಮ್
*
ನೋಡಿ ಸರ್ ಇದು ವೆರಿ ಸಿಂಪಲ್, KFCC ಯಾವುದೇ ಕಾರಣಕ್ಕೆ ಪ್ರದರ್ಶಕರ ಮೇಲೆ ಯಾವುದೇ ರೀತಿಯ ಒತ್ತಡ ಹೇರಬಾರದು. ಯಾಕೆಂದರೆ ಅವನದು ಖಾಸಗಿ ಆಸ್ತಿ. ಒಮ್ಮ ಆತ ಸಿನೆಮಪ್ರದರ್ಶನ ಬಿಟ್ಟು ತಿಯೇಟರ್ ಒಡೆದು ಕಾಂಪ್ಲೆಕ್ಸ ಕಟ್ಟಿಸಿದರೆ ಏನ್ ಮಾಡ್ತಿರ. KFCC ಗೆ ಅಷ್ಟೊಂದು ಕಾಳಜಿ ಇದ್ರೆ ಕನ್ನಡದಲ್ಲಿ ದರಿದ್ರ ಸಿನೆಮ ನೀಡುತ್ತಿರೊ ಮಂದಿಗೆ ನಿರ್ಬಂದ ಹಾಕಲು ಹೇಳಿ. ಇಲ್ಲಾ ಅಂದ್ರೆ KFCC ಕರ್ನಾಟಕದಲ್ಲೆಲ್ಲ ತನ್ನ ಹಣದಿಂದ ಚಿತ್ರಮಂದಿರ ಕಟ್ಟಿ ಚಿತ್ರ ಪ್ರದರ್ಶಿಸಲು ಹೇಳಿ. ಅದು ಬಿಟ್ಟು ಈ ಡುಬಾಕ್ ಐಡಿಯ ಕೈಬಿಡಿ. ಒಳ್ಳೆ ಸಿನೆಮ ಕೊಟ್ಟರೆ ಜನ ನೋಡೇ ನೋಡ್ತಾರೆ………………………………….ರಾಜೇಶ್
*

1. ಭಾರತ ಒಕ್ಕೂಟ ವ್ಯವಸ್ಥೆಯ ದೇಶ. ಇಲ್ಲಿ ಬದುಕುವವರು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿ ನಡೆಯಬೇಕು. ಚಲನಚಿತ್ರ ವಾಣಿಜ್ಯ ಮಂಡಳಿ ಅನ್ನುವುದು ಇದೇ ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ರೂಪುಗೊಂಡಿರುವ ಸಂಸ್ಥೆ. ಇಲ್ಲಿ ಎಲ್ಲಾ ಭಾಷೆಯ ಸಿನಿಮಾದವರೂ ಸದಸ್ಯರಾಗಿದ್ದಾರೆ. ಇಂತಹ ವ್ಯವಸ್ಥೆಯೂ ರೂಪಿಸು ಕಟ್ಟುಪಾಡುಗಳನ್ನು ಕಾಪಾಡಿಕೊಂಡು ಸಾಗುವುದು ಸಿನಿಮಾ ಸಮಾಜದ / ಉದ್ಯಮದ ಏಳಿಗೆಗೆ ಅಗತ್ಯ. ಹಾಗಾಗಿ ಗದಗದ ಚಿತ್ರಮಂದಿರದವರು ನೀಡಿರುವ ಹೇಳಿಕೆಯನ್ನು ತಪ್ಪು ಎನ್ನಬೇಕಾಗುತ್ತದೆ.
3. ಒಂದು ಉದ್ಯಮದ ಒಟ್ಟಂದದಲ್ಲಿ ಯಾವುದೇ ಕಟ್ಟುಪಾಡು ಯಾರಿಗಾದರೂ ಸರಿ ಇಲ್ಲ ಎನಿಸಿದರೆ, ಆ ಒಕ್ಕೂಟ ವ್ಯವಸ್ಥೆಯ ಒಳಗಡೆಯೇ ಇದ್ದು ಪ್ರಶ್ನಿಸಬೇಕು ಹಾಗೂ ಅಗತ್ಯ ತಿದ್ದುಪಡಿಗಳನ್ನು ಸೂಚಿಸಬೇಕು. ಹಾಗೆ ಮಾಡದೆ ದೂರ ಉಳಿದರೆ ಅಂತಹವರು ಎಲ್ಲಿಗೂ ಸಲ್ಲದವರಾಗುತ್ತಾರೆ. ವ್ಯವಸ್ಥೆಯೇ ಅಂತಹವರನ್ನು ದೂರ ಇಟ್ಟರೆ ಒಂಟಿಯಾಗಿ ಬದುಕುವುದು ಯಾರಿಗಾದರೂ ಕಷ್ಟವಾಗುತ್ತದೆ.
3. ಎಲ್ಲರ ಸಹಕಾರದಿಂದ ಮಾತ್ರ ಆರೋಗ್ಯಕಾರಿಯಾದ ಸಮಾಜ ಕಟ್ಟುವುದು ಸಾಧ್ಯ.
4. ಒಮ್ಮೊಮ್ಮೆ ಒಕ್ಕೂಟ ವ್ಯವಸ್ಥೆಯಲ್ಲಿ ಬಲವುಳ್ಳವರ ಮಾತುಗಳಿಗೆ ಪುಷ್ಟಿ ದೊರಕುವ ಸಾಧ್ಯತೆ ಇದೆ. ಹಾಗಾಗಿ ಶಕ್ತಿಪ್ರದರ್ಶನ ಮಾಡಲಾಗದವರ ಅಭಿಪ್ರಾಯಗಳಿಗೆ ಬೆಲೆಯೇ ಸಿಗದೆ ಹೋಗಬಹುದು. ಅಂತಹ ಪರಿಸ್ಥಿಯನ್ನು ನಿಭಾಯಿಸುವುದಕ್ಕೆ ಮಾರ್ಗೋಪಾಯಗಳನ್ನ ಕಂಡುಕೊಳ್ಳಬೇಕು.
ಗದಗದ ಚಿತ್ರಮಂದಿರದ ಮಾಲೀಕರನ್ನೂ ಒಲಿಸಿ, ಒಳಗೊಳ್ಳಬೇಕು. ಯಾರನ್ನೂ ದೂರ ಇಟ್ಟರೂ ಅದು ಮಾರಕವೇ…ಬಿ. ಸುರೇಶ
*
ಸುರೇಶ್ ಅವರೇ ನಿಮ್ಮ ಮಾತು 100 ಕ್ಕೆ 100 ನಿಜ.
ಚಲನಚಿತ್ರ ಮಂಡಳಿ ಇರುವುದು ಈ ನೆಲದ ಭಾಷೆಯ ಚಿತ್ರರಂಗದ ಹಿತ ಕಾಪಾಡಲು. ನನ್ನ ಬರಹದಲ್ಲಿ ಹೇಳಿದ ಹಾಗೇ, ಶಾರ್ಕ್ ಮೀನು, ಸಣ್ಣ ಮೀನು ಎರಡು ಸಮುದ್ರದ್ದೇ, ಎರಡು ಸಮಾನವೇ,, ಹೀಗಾಗಿ ಯಾರು ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಇರಲಿ ಅಂತ ಬಿಟ್ರೆ, ಸಣ್ಣ ಮೀನಿನ ಗತಿ ಏನಾಗುತ್ತೆ ಅನ್ನುವುದು ನಮ್ಮಲ್ಲಿ ಎಲ್ಲರಿಗೂ ಗೊತ್ತು. ಅದಕ್ಕೆ ಅಂತಲೇ ಎಲ್ಲ ರಾಜ್ಯದಲ್ಲೂ, ಆಯಾ ಭಾಷೆಯ ಚಿತ್ರರಂಗದ ಉಳಿವು, ಬೆಳೆವಿಗೆ ಅಂತಲೇ ಚಿತ್ರ ಮಂಡಳಿ ಇರುವುದು.
ಒಳ್ಳೆಯ ಸಿನೆಮಾ ಮಾಡಿ, ಪ್ರೇಕ್ಷಕ ತಾನಾಗಿ ಬರುತ್ತಾನೆ ಅನ್ನುವುದು ಕೆಲ ಮಟ್ಟಿಗೆ ಮಾತ್ರ ನಿಜ. ಎಷ್ಟೋ ಒಳ್ಳೆಯ ಕನ್ನಡ ಚಿತ್ರ ಮಂದಿರಗಳಿಗೆ ಚಿತ್ರ ಮಂದಿರ ದೊರಕದೇ ಅವು ಫ್ಲಾಪ್ ಆದ ಉದಾಹರಣೆ ನಮ್ಮ ಮುಂದಿವೆ. ಉದಾ: ಕಳೆದ ವರ್ಷದ ಕಬಡ್ಡಿ, ನೀನ್ಯಾರೆ ಸಿನೆಮಾಗಳು.
ಯಾವ ಭಾಷೆಯ ಚಿತ್ರ ಪ್ರದರ್ಶಿಸಬೇಕು ಅನ್ನುವ ಎಲ್ಲ ನಿರ್ಧಾರವನ್ನ ಚಿತ್ರ ಮಂದಿರದ ಮಾಲಿಕರ ಪಾಲಿಗೆ ಬಿಟ್ಟು ಕೊಟ್ಟರೆ, ಆಮೇಲೆ ಕನ್ನಡ ನಿರ್ಮಾಪಕರು ಚಿತ್ರ ಮಾಡೋದು ಬಿಟ್ಟು, ರಿಟೈರ್ ಆಗೋ ಹಂತ ಬಂದೀತು. ಅದಕ್ಕೆ ಕಾರಣವೂ ಇದೆ. ನನ್ನ ಬರಹದಲ್ಲಿ ಹೇಳಿದಂತೆ, ತೆಲುಗು-ತಮಿಳು-ಹಿಂದಿಯವರಿಗೆ ಕರ್ನಾಟಕ ಅನ್ನೋದು core market ಅಲ್ಲ. ಇದೇನಿದ್ರೂ extra income. ಸಿಕ್ಕಷ್ಟು ಬಾಚಿಕೊಂಡ್ರಾಯ್ತು ಅನ್ನೋದು ಅವರ ಧೋರಣೆ. ಹಾಗಾಗಿ, ಪ್ರದರ್ಶಕರಿಗೆ ಹೆಚ್ಚು ಮಾರ್ಜಿನ್ ಕೊಡುವುದಕ್ಕೆ ಅವರಿಗೆ ಯಾವುದೇ ತೊಂದರೆ ಇಲ್ಲ. ಹುಬ್ಬಳ್ಳಿಯ ಶೃಂಗಾರ, ಪದ್ಮ, ರೂಪಂ ಚಿತ್ರ ಮಂದಿರಗಳಲ್ಲಿ ತೆಲುಗು ಚಿತ್ರಗಳು ಬರಲು ಶುರುವಾಗಿದ್ದೇ ಇಂತಹದೊಂದು “ಹೆಚ್ಚು ಮಾರ್ಜಿನ್” ಅನ್ನೋ ಫಾರ್ಮುಲಾದಿಂದ. ಹುಬ್ಬಳ್ಳಿಯಲ್ಲಿ ಹುಡುಕಿದರೂ ತೆಲುಗರು ಸಿಗಲ್ಲ, ಅಲ್ಲಿ 50% ಚಿತ್ರ ಮಂದಿರ ತುಂಬೋ ಕನ್ನಡ ಚಿತ್ರ ಕೊಡೋ ಮಾರ್ಜಿನ್ ಗಿಂತ, 12% ತುಂಬೋ ತೆಲುಗು ಸಿನೆಮಾದಿಂದ ಮಾರ್ಜಿನ್ ಹೆಚ್ಚು ಸಿಗುತ್ತೆ ಪ್ರದರ್ಶಕನಿಗೆ. ಪ್ರದರ್ಶಕರಿಗೆ ಎಲ್ಲ ನಿರ್ಧಾರ ಬಿಟ್ರೆ, ನಾಳೆ ಶಕೀಲಾ ಸಿನೆಮಾ ಹಾಕ್ತೀನಿ, ಕನ್ನಡ ಸಿನೆಮಾ ಹಾಕಲ್ಲ ಅಂತಾನೆ. ಒಂದು ಕಾನೂನು, ಒಂದು ಕಟ್ಟಳೆ ಅಂತ ಇರದಿದ್ರೆ,, ನಾಳೆ ಊರ ತುಂಬಾ, ನಾಡ ತುಂಬಾ ಪರ ಭಾಷಾ ಚಿತ್ರಗಳೇ ಮೆರೆದಾವು !

ಒಳ್ಳೆಯ ಗುಣಮಟ್ಟದ ಸಿನೆಮಾಗಳು ಹೆಚ್ಚು ಬರಬೇಕು ,, ಜೊತೆಗೆ, ಕನ್ನಡ ಚಿತ್ರರಂಗವನ್ನು ಉಳಿಸಲು, ಬೆಳೆಸಲು KFCC ಕಾನೂನಿನ ಸಹಾಯವು ತೆಗೆದುಕೊಳ್ಳಬೇಕು.. ಅಷ್ಟಕ್ಕೂ ಇದೇನು ಕರ್ನಾಟಕ ಒಂದೇ ಮಾಡುತ್ತಿರುವ ಕೆಲಸ ಏನಲ್ಲ. ಎಲ್ಲ ರಾಜ್ಯದಲ್ಲೂ ಇಂತಹದೊಂದು ಕಟ್ಟಳೆ ಇದೆ……………………………………ವಸಂತ