ಶಂಕರನಾಗ್‌ರ ಬೇರೆ ವಿಶೇಷತೆ ಬಗ್ಗೆ ನಾನು ಇಲ್ಲಿ ಉಲ್ಲೇಖಿಸುವುದಿಲ್ಲ. ಆದರೆ ಅವರೊಂದಿಗೆ ಕೆಲಸ ಮಾಡುವುದಿದೆಯಲ್ಲ, ಅದೇ ಒಂದು ಅದ್ಭುತವಾದ ಅನುಭವ.

ಯಾರನ್ನೂ ತನ್ನತ್ತ ಸೆಳೆದುಬಿಡುವ ಅವರ ಕತೃರ್ತ್ವ ಶಕ್ತಿಯನ್ನು ಮರೆಮಾಚಲಾರದು. ಬಹುಶಃ ಶಂಕರನಾಗ್ ಇಂದು ಇದ್ದಿದ್ದರೆ ಕನ್ನಡ ಚಿತ್ರರಂಗದಲ್ಲಿ ಇನ್ನೂ ಎಂಥೆಂಥ ಸಾಧ್ಯತೆಗಳು ಮೂರ್ತರೂಪ ಪಡೆಯುತ್ತಿದ್ದವೇನೋ ಗೊತ್ತಿಲ್ಲ. ಪ್ರತಿಯೊಬ್ಬರನ್ನೂ ಪ್ರೀತಿಸುವ ಮನೋಭಾವದ ಶಂಕರ್, ಸದಾ ಕಾರ‍್ಯ ತತ್ಪರರು.

ಸಾಕಷ್ಟು ವೀಡಿಯೊ ಸಂಕಲನಗಳಲ್ಲಿ ಅವರೊಂದಿಗೆ ತೊಡಗಿಸಿಕೊಂಡಿದ್ದೆ. 1986 ರ ಕಾಲ. ನಾನು ಕೆಲಸ ಮಾಡುತ್ತಿದ್ದ ಸ್ಟುಡಿಯೋವೊಂದೇ ಇಡೀ ಕರ್ನಾಟಕಕ್ಕೆ. ಎಲ್ಲ ಖಾಸಗಿಯವರು, ದೂರದರ್ಶನಕ್ಕೆ ಕಾರ್ಯಕ್ರಮ ರೂಪಿಸುವವರು, ಬಹುತೇಕ ಮಂದಿ ಇಲ್ಲಿಗೇ ಬರಬೇಕಿತ್ತು. ಅದರಂತೆಯೇ ಶಂಕರನಾಗ್ ಸಹ ಬರುತ್ತಿದ್ದರು.

ಅವರು ತಮ್ಮ ಅಣ್ಣ ಅನಂತನಾಗರಿಗೆ ಕೊಡುತ್ತಿದ್ದ ಗೌರವ ಕಂಡೇ ನಾನು ದಿಗಿಲಾಗಿದ್ದೆ. ಹಾಗೆಯೇ ಅನಂತನಾಗರಿಗೂ ತಮ್ಮನ ಬಗ್ಗೆ ಅತೀವ ಕಾಳಜಿ. ಒಮ್ಮೆ ನನ್ನೆದುರೇ ನಡೆದ ಘಟನೆಯದು. ಅಂದು ರಾತ್ರಿ ಎಷ್ಟೊತ್ತಾದರೂ ಸಂಕಲನದಲ್ಲಿ ಬ್ಯುಸಿಯಾಗಿದ್ದರು. ಅಷ್ಟೊತ್ತಿಗೆ ಫೋನ್ ಬಂದಿತು. ನಾನೇ ಹೋಗಿ ತೆಗೆದುಕೊಂಡೆ. ಅನಂತನಾಗ್ ಅವರ ಕಂಚಿನಕಂಠ, “ಶಂಕರ್ ಇದಾನಾ’ ಎಂದು ಕೇಳಿತು. “ನಾನು ಇದ್ದಾರೆ’ ಎಂದು ಹೇಳಿ ಶಂಕರನಾಗರಿಗೆ, “ಸಾರ್, ನಿಮ್ಮ ಅಣ್ಣನವರ ಫೋನ್’ ಎಂದೆ.

ಅವರು ಬಂದು ಫೋನ್ ಎತ್ತಿಕೊಂಡು ಮಾತನಾಡತೊಡಗಿದರು. ಅನಂತನಾಗರ ಕಂಚಿನಕಂಠ ಹೇಗಿತ್ತೆಂದರೆ ರಿಸೀವರ್ ಹೊರಗೂ ಸಂಭಾಷಣೆ ನಿಖರವಾಗಿ ಕೇಳುತ್ತಿತ್ತು. “ಏನು, ನೀನು ಇನ್ನೂ ಮಲಗೇ ಇಲ್ವಾ ? ನಾಳೆ ಬೆಳಗ್ಗೆ ಬೇರೆ ಕಡೆಗೆ ಹೋಗಬೇಕಲ್ಲ. ಕೂಡಲೇ ಮಲಕ್ಕೊ…ತಡ ಮಾಡಬೇಡ…ನಾಳೆಯ ಕೆಲಸಕ್ಕೆ ಸಮಸ್ಯೆಯಾಗಬಾರದು’ ಹೀಗೆಲ್ಲಾ ಕಿವಿಮಾತು ಹೇಳುತ್ತಲೇ ಇದ್ದರು. ಅದಕ್ಕೆ ಶಂಕರನಾಗರ ಉತ್ತರ ಒಂದೇ…”ಆಗಲಿ…ಹಾಗೇ ಮಾಡುತ್ತೇನೆ…ಸರಿ…’ಇಷ್ಟೇ. ಮೊದಲ ಬಾರಿಗೆ ಆ ಘಟನೆಯನ್ನು ನೋಡಿದವರಿಗೆ “ಅದೊಂದು ತೋರಿಕೆ ಎನಿಸಬಹುದಿತ್ತೇನೋ’? ಆದರೆ ದಿನವೂ ಅವರನ್ನು ನೋಡುತ್ತಿದ್ದ ನಮಗೆ ಬಹಳ ಆಪ್ತವೆನಿಸುತ್ತಿತ್ತು.

ಚಿತ್ರರಂಗದಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬನನ್ನು ನಡೆಸಿಕೊಳ್ಳುವ ಬಗ್ಗೆಯೇ ಹಲವು ಆರೋಪಗಳಿವೆ, ಮಾತುಗಳಿವೆ. ಈ ಮಧ್ಯೆ ಶಂಕರನಾಗರ ನಡವಳಿಕೆ ಎಲ್ಲರಿಗೂ ಮಾದರಿಯೇ, ಅದರಲ್ಲಿ ಎರಡು ಮಾತಿಲ್ಲ. ಉದಾಹರಣೆಗೆ, ನಮ್ಮಲ್ಲೇ ಬಂದಾಗ ಅವರೊಂದಿಗೆ ಒಂದು ತಂಡವೇ ಇರುತ್ತಿತ್ತು. ಊಟದ ಸಮಯವಾದಾಗ, ಆಫೀಸಿನ ಹುಡುಗನನ್ನು ಕರೆದು ದುಡ್ಡು ಕೊಟ್ಟು ಏನೇನು ತರಬೇಕೆಂದು ವಿವರಿಸುತ್ತಿದ್ದರು. ಇದರ ಮಧ್ಯೆ ಅವನ ಬಯಕೆಯನ್ನೂ ಕೇಳಿಸಿಕೊಳ್ಳುತ್ತಿದ್ದರು. ನಾವು ಸಾಮಾನ್ಯವಾಗಿ ನಮ್ಮದಷ್ಟನ್ನು ಹೇಳಿ ಮುಗಿಸುತ್ತೇವೆ. ಆದರೆ, ಅವರು ಹಾಗಲ್ಲ. “ಏನಪ್ಪಾ, ನಿನಗೆ ಏನು ಬೇಕು ಅದನ್ನು ತೆಗೆದುಕೊಳ್ಳು. ನಮಗೆ ಇದನ್ನು ತೆಗೆದುಕೊಂಡು ಬಾ ಎಂದು ಅವನ ಮುಂದೆ ಆಯ್ಕೆ ಇಡುತ್ತಿದ್ದರು. ಅದುವೇ ಅಚ್ಚರಿಯ ಅಂಶ’.

ಅವರ ಉತ್ಸಾಹ, ಉದ್ಯಮಶೀಲತೆ ಎಲ್ಲರನ್ನೂ ಬೆರಗುಗೊಳಿಸುವಂಥದ್ದು. ಆರಂಭದಲ್ಲಿ ಅವರು, ಆರುಂಧತಿ ನಾಗ್, ಡೊಡ್ಡಮನೆ ರಾಘವೇಂದ್ರ, ನಟ ಕಾಶಿ ಹೀಗೆ ಒಂದಷ್ಟು ಮಂದಿಯ ತಂಡ. ಒಟ್ಟೂ ಸೇರಿ ಮಲ್ಲೇಶ್ವರಂನಲ್ಲಿ ಮೊಬೈಲ್ ಕ್ಯಾಂಟೀನ್ ಇಟ್ಟಿದ್ದರು. ಮಧ್ಯಾಹ್ನ ೧೨ ಆಗುತ್ತಿದ್ದಂತೆ ಶಂಕರನಾಗ್ ಎಲ್ಲೆ ಇದ್ದರೂ ಅಲ್ಲಿಗೆ ಹಾಜರು. ಆ ಹೊತ್ತಿಗೆ ಬರುವ ಗಿರಾಕಿಗಳಿಗೆ ಊಟ ವಿತರಿಸುವುದು ಅವರ ಕೆಲಸ. ಅದಕ್ಕೆ ಅವರೇನು ಹಿಂದೆ, ಮುಂದೆ ನೋಡುತ್ತಿರಲಿಲ್ಲ.

ಹಾಗೆಯೇ, ಅವರು ಬಡವರಿಗೆಂದೇ ಮನೆ ಕಟ್ಟಲು ಒಂದು ತಂತ್ರಜ್ಞಾನವನ್ನು ರೂಪಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಒಂದು ಡಾಕ್ಯುಮೆಂಟರಿ ಮಾದರಿಯ ಕಿರುಚಿತ್ರವನ್ನೂ ಮಾಡಿದ್ದರು. ಅದನ್ನು ನಾನೂ ಸಂಕಲನ ಮಾಡಿದ್ದೆ. ಅವೆಲ್ಲಾ ಜಾರಿಗೊಳಿಸಲು ಅವರೇ ಇಲ್ಲ.

ಇಂದಿಗೂ ನನ್ನಲ್ಲಿ ಅವರದೊಂದು ಸೂಚನೆಯ ಪತ್ರವಿದೆ. ನಮಗೆ ಅನಂತನಾಗ್, ಶಂಕರನಾಗ್ ಮುಂಬಯಿಯಿಂದ ಬಂದವರೆಂದು ಕನ್ನಡ ಅಷ್ಟಾಗಿ ಬಾರದು ಎಂದು ತಪ್ಪಾಗಿ ತಿಳಿದಿದ್ದೆವು. ಆದರೆ ಶಂಕರರ ಅಕ್ಷರ ಬಹಳ ಮುದ್ದು. ಒಮ್ಮೆ ನಾನು ಹೊರಗೆ ಹೋಗಿದ್ದೆ. ಆಗ ಶಂಕರನಾಗರು ಬಂದು, ಯಾವುದೋ ಒಂದು ಸಂಕಲನದ ಸಂಬಂಧ ಸೂಚನೆಯನ್ನು ಟಿಶ್ಯೂ ಪೇಪರ್ ಮೇಲೆ ಬರೆದಿಟ್ಟು ಹೋಗಿದ್ದರು. ನಮ್ಮ ಕಚೇರಿಯ ನಿರ್ವಾಹಕನಿಗೆ ಅದು ಮಹತ್ವದ್ದೆನಿಸರಲಿಲ್ಲ. ಆ ಕಾಗದದ ತುಂಡನ್ನು ಮುದ್ದೆ ಮಾಡಿ ಕಸದಬುಟ್ಟಿಗೆ ಎಸೆದಿದ್ದ. ನಾನು ವಾಪಸ್ಸಾದಾಗ ಶಂಕರನಾಗರು ಪತ್ರ ನೀಡಿದ್ದು ತಿಳಿಯಿತು. ಆ ಬಗ್ಗೆ ಕೇಳಿದಾಗ “ಗೊತ್ತಿಲ್ಲ’ ಎಂಬ ಉತ್ತರ ಅವನಿಂದ ಸಿಕ್ಕಿದ್ದು. ಅಷ್ಟರಲ್ಲಿ ಮತ್ತೊಬ್ಬ ಹುಡುಗ ಕಸದ ಬುಟ್ಟಿಯ ಕಥೆ ಹೇಳಿದ.

ನಾನು ತೆಗೆದು ನೋಡಿ, ಅವರ ಅಕ್ಷರಗಳನ್ನು ಕಂಡು ದಂಗಾದೆ. ಅವರ ಸಂವಹನ ಸಾಮರ್ಥ್ಯ ಅಗಾಧ. ಒಂದು ಚಿಕ್ಕ ಪತ್ರದಲ್ಲಿ ನಾವು ಏನು ಮಾಡಬೇಕೆಂಬುದನ್ನು ಮನದಟ್ಟಾಗುವಂತೆ, ಗೊಂದಲವೇ ಬಾರದಂತೆ ಹೇಳುತ್ತಿದ್ದರು. ಅವರೊಂದಿಗೆ ಕೆಲಸ ಮಾಡಲು ಯಾವುದೇ ಸಮಸ್ಯೆಯೇ ಇರುತ್ತಿರಲಿಲ್ಲ. ಆ ಆತ್ಮೀಯ ನಡವಳಿಕೆಯಿಂದಲೇ ಅವರ ಸುತ್ತಲೂ ಬಹಳಷ್ಟು ಸಹಾಯಕರಿದ್ದರು. ಅವರೆಲ್ಲರಿಗೂ ಶಂಕರನಾಗರ ಕೆಲಸ ಮಾಡುವುದೆಂದರೆ ಒಂದು ಖುಷಿಯ ಸಂಗತಿ, ಉತ್ಸಾಹದ ವಿಚಾರ.