ವಸಂತರು ಬರೆದ ಲೇಖನಕ್ಕೆ ಖ್ಯಾತ ನಿರ್ದೇಶಕ ಬಿ. ಸುರೇಶ, ಚುಟುಕಾಗಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಇನ್ನಷ್ಟು ಮಂದಿ ಪ್ರತಿಕ್ರಿಯಿಸಬಹುದು. ಒಟ್ಟೂ ಆರೋಗ್ಯಕರ ಚರ್ಚೆ ನಡೆಸುವುದು ನಮ್ಮ ಉದ್ದೇಶ. saangatya@gmail.com ಗೆ ಪ್ರತಿಕ್ರಿಯಿಸಿ.

1. ಭಾರತ ಒಕ್ಕೂಟ ವ್ಯವಸ್ಥೆಯ ದೇಶ. ಇಲ್ಲಿ ಬದುಕುವವರು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿ ನಡೆಯಬೇಕು. ಚಲನಚಿತ್ರ ವಾಣಿಜ್ಯ ಮಂಡಳಿ ಅನ್ನುವುದು ಇದೇ ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ರೂಪುಗೊಂಡಿರುವ ಸಂಸ್ಥೆ. ಇಲ್ಲಿ ಎಲ್ಲಾ ಭಾಷೆಯ ಸಿನಿಮಾದವರೂ ಸದಸ್ಯರಾಗಿದ್ದಾರೆ. ಇಂತಹ ವ್ಯವಸ್ಥೆಯೂ ರೂಪಿಸುವ ಕಟ್ಟುಪಾಡುಗಳನ್ನು ಕಾಪಾಡಿಕೊಂಡು ಸಾಗುವುದು ಸಿನಿಮಾ ಸಮಾಜದ / ಉದ್ಯಮದ ಏಳಿಗೆಗೆ ಅಗತ್ಯ. ಹಾಗಾಗಿ ಗದಗದ ಚಿತ್ರಮಂದಿರದವರು ನೀಡಿರುವ ಹೇಳಿಕೆಯನ್ನು ತಪ್ಪು
ಎನ್ನಬೇಕಾಗುತ್ತದೆ.

2. ಒಂದು ಉದ್ಯಮದ ಒಟ್ಟಂದದಲ್ಲಿ ಯಾವುದೇ ಕಟ್ಟುಪಾಡು ಯಾರಿಗಾದರೂ ಸರಿ ಇಲ್ಲ ಎನಿಸಿದರೆ, ಆ ಒಕ್ಕೂಟ ವ್ಯವಸ್ಥೆಯ ಒಳಗಡೆಯೇ ಇದ್ದು ಪ್ರಶ್ನಿಸಬೇಕು ಹಾಗೂ ಅಗತ್ಯ ತಿದ್ದುಪಡಿಗಳನ್ನು ಸೂಚಿಸಬೇಕು. ಹಾಗೆ ಮಾಡದೆ ದೂರ ಉಳಿದರೆ ಅಂತಹವರು ಎಲ್ಲಿಗೂ ಸಲ್ಲದವರಾಗುತ್ತಾರೆ. ವ್ಯವಸ್ಥೆಯೇ ಅಂತಹವರನ್ನು ದೂರ ಇಟ್ಟರೆ ಒಂಟಿಯಾಗಿ ಬದುಕುವುದು ಯಾರಿಗಾದರೂ ಕಷ್ಟವಾಗುತ್ತದೆ.

3. ಎಲ್ಲರ ಸಹಕಾರದಿಂದ ಮಾತ್ರ ಆರೋಗ್ಯಕಾರಿಯಾದ ಸಮಾಜ ಕಟ್ಟುವುದು ಸಾಧ್ಯ.

4. ಒಮ್ಮೊಮ್ಮೆ ಒಕ್ಕೂಟ ವ್ಯವಸ್ಥೆಯಲ್ಲಿ ಬಲವುಳ್ಳವರ ಮಾತುಗಳಿಗೆ ಪುಷ್ಟಿ ದೊರಕುವ ಸಾಧ್ಯತೆ ಇದೆ. ಹಾಗಾಗಿ ಶಕ್ತಿಪ್ರದರ್ಶನ ಮಾಡಲಾಗದವರ ಅಭಿಪ್ರಾಯಗಳಿಗೆ ಬೆಲೆಯೇ ಸಿಗದೆ ಹೋಗಬಹುದು. ಅಂತಹ ಪರಿಸ್ಥಿಯನ್ನು ನಿಭಾಯಿಸುವುದಕ್ಕೆ ಮಾರ್ಗೋಪಾಯಗಳನ್ನ ಕಂಡುಕೊಳ್ಳಬೇಕು.
ಗದಗದ ಚಿತ್ರಮಂದಿರದ ಮಾಲೀಕರನ್ನೂ ಒಲಿಸಿ, ಒಳಗೊಳ್ಳಬೇಕು. ಯಾರನ್ನೂ ದೂರ ಇಟ್ಟರೂ ಅದು ಮಾರಕವೇ.