ವಸಂತ ಎನ್ನುವವರು ತಮ್ಮ ಬ್ಲಾಗ್ ನಲ್ಲಿ ಬರೆದ ಪುಟ್ಟ ಬರಹವಿದು. ಇಂದಿನ ಕನ್ನಡ ಚಿತ್ರರಂಗದ ಚರ್ಚಿತ ವಿಷಯವೇ ಇಲ್ಲಿಯ ಚರ್ಚೆಯ ಸಂಗತಿ. ಚರ್ಚೆ ಬೆಳೆಸುವವರು ತಮ್ಮ ಲೇಖನಗಳನ್ನು ಕಳಿಸಿ, ಚರ್ಚೆ ನಡೆಸಲೆಂದೇ ಇದನ್ನು ಇಲ್ಲಿ ಹಾಕುತ್ತಿದ್ದೇವೆ. ನೀವು ನಮ್ಮ ಇಮೇಲ್ ಗೆ ಕಳಿಸಿಕೊಡಿ.

ಇವತ್ತು ಡೆಕ್ಕನ್ ಹೆರಾಲ್ಡ್ ಓದ್ತಾ ಇದ್ದೆ. ಒಂದು ಚಿಕ್ಕ ಸುದ್ಧಿ ಕಣ್ಣಿಗೆ ಬಿತ್ತು. ಗದಗನಲ್ಲಿ ಒಬ್ಬ ಚಲನಚಿತ್ರ ಪ್ರದರ್ಶಕರು ಹೇಳಿಕೆ ಒಂದನ್ನು ನೀಡಿ, ಎಲ್ಲ ಪ್ರದರ್ಶಕರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ (KFCC) ಯ ಸದಸ್ಯರಾಗಬೇಕು ಅನ್ನುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾದುದು, ಇದನ್ನ ಈ ಕೂಡಲೇ ಹಿಂಪಡೆಯಬೇಕು ಅಂದರು. ಅದನ್ನ ನೋಡಿದಾಗ ಕರ್ನಾಟಕದ ಒಂದು ಭಾಗದ ಪ್ರದರ್ಶಕರೊಬ್ಬರು, ಕರ್ನಾಟಕದ ಚಿತ್ರಮಂಡಳಿಯ ಸದಸ್ಯತ್ವವೇ ಬೇಡ ಅಂತ ಯಾಕಂತಾರೆ ಅಂತಾ ವಿಚಾರ ಮಾಡ್ತಾ ಇದ್ದೆ. ಯೋಚನೆ ಮಾಡಿದಾಗ, ಚಿತ್ರ ರಂಗದ ಒಂದಿಬ್ಬರು ಗೆಳೆಯರನ್ನು ಮಾತನಾಡಿಸಿದಾಗ ಕಂಡದ್ದು:

ಈ ಎಲ್ಲ ಪ್ರದರ್ಶಕರು ಉತ್ತರ ಕರ್ನಾಟಕದಲ್ಲಿ ತೆಲುಗು/ಹಿಂದಿ ಚಿತ್ರಗಳ ಪ್ರದರ್ಶಕರಾಗಿದ್ದು, ಕರ್ನಾಟಕದಲ್ಲಿ ತೆಲುಗು/ಹಿಂದಿ ಚಿತ್ರಗಳ ಪ್ರದರ್ಶನದಿಂದ ಹಣ ಮಾಡುತ್ತಿರುವವರು. ಕನ್ನಡ ಚಿತ್ರರಂಗದ ಉಳಿವು, ಬೆಳೆವಿಗಾಗಿ KFCC ತೆಗೆದುಕೊಳ್ಳುವ ನೀತಿ ನಿಯಮಗಳು ( ಉದಾ: ಇಷ್ಟೇ ಪ್ರತಿ ಹಿಂದಿ / ತೆಲುಗು ಚಿತ್ರಗಳನ್ನು ಪ್ರದರ್ಶಿಸಬೇಕು ಅನ್ನೋದು ಇರಬಹುದು, ಇಲ್ಲವೇ ಪ್ರದರ್ಶಕರ ಮತ್ತು ನಿರ್ಮಾಪಕರ ಮಧ್ಯ ಆದಾಯ ಹಂಚಿಕೆಗೆ ಇಂತಹದು ಅಂತ ಒಂದು ನಿಯಮದನ್ವಯ ನಡೆಯಬೇಕು ಅನ್ನೋದು ಇರಬಹುದು) ಇವರ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸುವುದರಿಂದ ಇವರು ಈ ರೀತಿ ವರ್ತಿಸುತ್ತಿದ್ದಾರೆ ಅನ್ನಿಸುತ್ತೆ.

ಎರಡನೆಯದಾಗಿ, ತೆಲುಗು/ಹಿಂದಿ ಚಿತ್ರರಂಗಕ್ಕೆ ಕರ್ನಾಟಕ ಅನ್ನೋದು ತಮ್ಮ core ಮಾರ್ಕೆಟ್ ಅಲ್ಲ. ಅದೇನಿದ್ದರೂ extra income. ಬಂದಷ್ಟು ಬರಲಿ ಅನ್ನೋ ಭಾವನೆ ಅವರದ್ದು. ಹೀಗಾಗಿಯೇ ತಮ್ಮ ಚಿತ್ರಗಳ ಇಲ್ಲಿನ ಪ್ರದರ್ಶಕರಿಗೆ ಕನ್ನಡ ನಿರ್ಮಾಪಕರಿಗಿಂತ ಹೆಚ್ಚು ಮಾರ್ಜಿನ್ ಕೊಡುತ್ತಾರೆ. ಆ ದುಡ್ಡಿನ ಆಸೆಗೆ ಈ ಪ್ರದರ್ಶಕರು ಈ ರೀತಿ ಈ ನೆಲದ ಕಾನೂನು ತಮಗನ್ವಯವಾಗುವುದು ಬೇಡ ಅನ್ನೋದು.

ಇಂತಹ ವಿರೋಧಕ್ಕೆಲ್ಲ ಸರ್ಕಾರ ತಲೆ ಕೆಡಿಸಿಕೊಳ್ಳಬಾರದು. ಒಂದು ದೊಡ್ಡ ಸಮುದ್ರದಲ್ಲಿ ಒಂದು ಶಾರ್ಕ್ ಮೀನು, ಒಂದು ಚಿಕ್ಕ ಮೀನು ಒಟ್ಟಿಗೆ ಇದ್ದಾಗ, ಎರಡು ಒಂದೇ, ಎರಡು ಸಮುದ್ರದ ಪ್ರಾಣಿಗಳೇ ಅಂತ ಬಿಟ್ರೆ ಏನಾಗುತ್ತೆ? ಶಾರ್ಕ್ ಮೀನು ಚಿಕ್ಕ ಮೀನನ್ನ ತಿಂದೇ ತಿನ್ನುತ್ತೆ. ಇವತ್ತು ಕರ್ನಾಟಕದಲ್ಲೂ ಇದೇ ಸ್ಥಿತಿ ಇದೆ. ಕನ್ನಡ ಚಿತ್ರರಂಗಕ್ಕೆ ತೆಲುಗು/ಹಿಂದಿ/ತಮಿಳಿನಿಂದ ತೀವ್ರ ಮಟ್ಟದ ಸ್ಪರ್ಧೆ ಇದ್ದು, ಇಲ್ಲಿ ಕನ್ನಡ ಚಿತ್ರರಂಗ ಉಳಿದು ಬೆಳೆಯಲು, ಬೇರೆ ಚಿತ್ರಗಳ ಹಾವಳಿಯನ್ನು ಒಂದು ಮಟ್ಟಕ್ಕೆ ನಿಯಂತ್ರಿಸಲೇಬೇಕು.

ಹಾಗಾಗಿ, ಎಲ್ಲ ಪ್ರದರ್ಶಕರು KFCCಯ ವ್ಯಾಪ್ತಿಗೊಳಪಟ್ಟು, ಸರ್ಕಾರದ ನೀತಿ ನಿಯಮಗಳನ್ವಯ ನಡೆಯುವಂತೆ ಸರ್ಕಾರ/ಚಿತ್ರ ಮಂಡಳಿ ಮಾಡಬೇಕು. ಇದೇ ಸಮಯದಲ್ಲಿ KFCC ಕೂಡಾ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳದೇ, ಕನ್ನಡ ಚಿತ್ರರಂಗದಲ್ಲಿ ಹೊಸತನ ತುಂಬಲು, ತಾಂತ್ರಿಕವಾಗಿ ಇನ್ನಷ್ಟು ಮೇಲಕ್ಕೇರಲು, ಒಳ್ಳೆ ರೀತಿಯಲ್ಲಿ ಮಾರುಕಟ್ಟೆ ಕಲ್ಪಿಸಲು ಏನು ಮಾಡಬೇಕೋ ಅದನ್ನೆಲ್ಲ ಮಾಡಬೇಕು. ಚಿತ್ರ ರಂಗ ಶುರುವಾಗಿ 75 ವರ್ಷ ಆಯ್ತು..ಇನ್ನೂ ಅಳ್ತಾ ಕೂರೋದ್ರಲ್ಲೇ ಸಮಾಧಾನ ಪಟ್ಕೊಂಡ್ರೆ ಹೇಗೆ ? ಅಲ್ವಾ ಗೆಳೆಯರೇ?