ಪಿ.ಎನ್. ರಾಮಚಂದ್ರರ ಪುಟಾಣಿ ಪಾರ್ಟಿ ಚಲನಚಿತ್ರ ಬೆಂಗಳೂರು ಹಬ್ಬದಲ್ಲಿ ಪ್ರದರ್ಶಿತವಾಗುತ್ತಿದೆ. ಅದನ್ನು ನೋಡಿ, ಅವರಿಗೆ ಅಭಿನಂದಿಸಿ. ಆ ಕುರಿತು ಚಿಕ್ಕ ಮಾಹಿತಿ ಬರಹವಿದು.

ಪಿ.ಎನ್. ರಾಮಚಂದ್ರರ “ಪುಟಾಣಿ ಪಾರ್ಟಿ” ಮಕ್ಕಳ ಚಲನಚಿತ್ರ ಡಿ. 11 ರಿಂದ 17 ರವರೆಗೆ ನಡೆಯುವ “ಬೆಂಗಳೂರು ಹಬ್ಬ”ದಲ್ಲಿ ಪ್ರದರ್ಶನವಾಗಲಿದೆ.

ಬೆಂಗಳೂರಿನ ಗರುಡಾ ಇನೋಕ್ಸ್ ನಲ್ಲಿ ಪ್ರದರ್ಶನಗೊಳ್ಳುವ ಚಿತ್ರ ಈಗಾಗಲೇ ಸಾಕಷ್ಟು ಸುದ್ದಿ ಮಾಡಿರುವ ಚಿತ್ರ. “ಮಕ್ಕಳ ಹಕ್ಕುಗಳ’ ರಕ್ಷಣೆ ಕುರಿತಾದ ಕಥಾವಸ್ತುವನ್ನು ಒಳಗೊಂಡಿರುವ ಚಿತ್ರದಲ್ಲಿ ದೊಡ್ಡವರು ಹೇಗೆ ಮಕ್ಕಳ ಹಕ್ಕುಗಳನ್ನು ನಿರಾಯಾಸವಾಗಿ ಕಡೆಗಣಿಸುತ್ತಿದ್ದಾರೆ ಎಂಬುದನ್ನು ನಿರ್ದೇಶಕ ಕಟ್ಟಿಕೊಟ್ಟಿದ್ದಾರೆ.

ಇಡೀ ಚಲನಚಿತ್ರದ ಚಿತ್ರೀಕರಣ ಧಾರವಾಡದ ಬಳಿಯ ಹೊನ್ನಾಪುರ ಎಂಬಲ್ಲಿ ನಡೆದಿದೆ. ಇದರಲ್ಲಿ ನಟಿಸಿರುವ ಬಹುತೇಕರು ಹೊಸಬರೇ. ಆ ಊರಿನ ಗ್ರಾಮ ಪಂಚಾಯಿತಿ ಮಕ್ಕಳ ಸಮಿತಿಯನ್ನು ಸ್ಥಾಪಿಸುತ್ತದೆ. ಸಹಜವಾಗಿ ಅತ್ಯಂತ ಕ್ರಿಯಾಶೀಲವಾದ ಮಕ್ಕಳ ಸಮಿತಿ, ಊರಿನಲ್ಲಿ ತಲೆದೋರುವ ಹಲವು ಸಂಗತಿ-ಸಮಸ್ಯೆಗಳ ಸಂದರ್ಭದಲ್ಲಿ ತನ್ನ ಪ್ರಭಾವ, ಒತ್ತಡವನ್ನು ಆಡಳಿತಗಾರರ ಮೇಲೆ ಬೀರುತ್ತದೆ. ಇದು ಕೆಲವೊಮ್ಮೆ ದೊಡ್ಡವರಿಗೆ ತೀರಾ ಇರಿಸು ಮುರಿಸು ಉಂಟು ಮಾಡುವುದು ಉಂಟು. ಹಾಗೆಯೇ ಕೆಲವರು ಸಮಿತಿಯನ್ನೇ ತಮಗೆ ಬೇಕಂತೆ ಬಳಸುವ ಪ್ರಯತ್ನವೂ ನಡೆಯುತ್ತದೆ.

ಆದರೆ ಪ್ರಾಮಾಣಿಕ ಹಾಗೂ ಉತ್ಸಾಹಿ ಶಿಕ್ಷಕಿಯೊಬ್ಬಳ ನೇತೃತ್ವದಲ್ಲಿ ಮಕ್ಕಳು ಸಾಮಾನ್ಯವಾಗಿ ಬಗ್ಗುವುದಿಲ್ಲ. ಅಂತಿಮವಾಗಿ ತಮ್ಮ ದನಿಗೆ ಬೆಲೆಯನ್ನು ಪಡೆದೇ ತೀರುತ್ತಾರೆ. ಈ ಚಿತ್ರ ಪೋಷಕರಲ್ಲೂ ಮಕ್ಕಳ ಹಕ್ಕಿನ ಅಗತ್ಯದ ಕುರಿತು ಬೆಳಕು ಚೆಲ್ಲುವುದಲ್ಲದೇ, ಅದರ ಪತ್ರಿಪಾದನೆಯನ್ನೂ ಮಾಡುತ್ತದೆ.

p.n.ramachandra

ಪಿ.ಎನ್. ರಾಮಚಂದ್ರನ್ ಕನ್ನಡಿಗರು. ತುಳು ಭಾಷೆಯ “ಸುದ್ದ” ಅವರ ಮೊದಲ ಚಿತ್ರ. ದಿಲ್ಲಿಯಲ್ಲಿ 2007 ರಲ್ಲಿ ನಡೆದ ಓಸೀನ್ ಸಿನಿಫ್ಯಾನ್ ಫೆಸ್ಟಿವಲ್ ಆಫ್ ಏಷ್ಯನ್ ಫಿಲ್ಮ್ಸ್ ನ “ಉತ್ತಮ ಭಾರತೀಯ ಚಿತ್ರ” ಪ್ರಶಸ್ತಿಗೆ ‘ಸುದ್ದ’ ಆಯ್ಕೆಯಾಗಿತ್ತು. ಪುಣೆಯ ಫಿಲ್ಮ್ ಇನ್ ಸ್ಟಿಟ್ಯೂಟ್ ನಲ್ಲಿ ಕಲಿತಿರುವ ಅವರು, “ಪುಟಾಣಿ ಪಾರ್ಟಿ”ಯ ಚಿತ್ರಕಥೆ ಮತ್ತು ನಿರ್ದೇಶನ ಪೂರೈಸಿದ್ದಾರೆ.

ಭಾರತ ಸರಕಾರದ ಬಾಲಚಿತ್ರ ಸಮಿತಿ (ಚಿಲ್ಟ್ರನ್ಸ್ ಫಿಲ್ಮ್ ಸೊಸೈಟಿ) ಇದನ್ನು ನಿರ್ಮಿಸಿದೆ. ತಾರಾಗಣದಲ್ಲಿ ರಂಜಿತಾ ಜಾಧವ್, ಶರತ್ ಅಂಚತ್ ಗಿರಿ, ಗುರುದತ್ತ ಜೋಶಿ, ದೀಪಕ್ ಜೋಶಿ ಮತ್ತಿತರರಿದ್ದಾರೆ. ಇದರ ಛಾಯಾಗ್ರಹಣ : ಸಮೀರ್ ಮಹಾಜನ್, ಸಂಕಲನ : ಅರುಣಾಬ ಮುಖರ್ಜಿ.

ಇದರ ಆರಂಭದ ಸಾಲೇ “ಆಡಳಿತ ಮಕ್ಕಳಿಂದಲೇ ಮಕ್ಕಳಿಗಾಗಿ”. ಪಿ.ಎನ್. ರಾಮಚಂದ್ರನ್ ಅವರಿಗೆ ಶುಭ ಹೇಳಿ. ಹಾಗೆಯೇ ಈ ಚಿತ್ರದ ಟ್ರೈಲರ್ (ಕಿರುದೃಶ್ಯಚಿತ್ರ)ಕ್ಕಾಗಿ ನಮ್ಮ ವೀಡಿಯೋ ಕಲೆಕ್ಷನ್ ಕಡೆಗೆ ಕಣ್ಣು ಹಾಯಿಸಿ. ಒಟ್ಟು ಚಿತ್ರದ ಪ್ರದರ್ಶನ ಸಮಯ 75 ನಿಮಿಷ, ನಿರ್ಮಣಾ ವರ್ಷ : 2009.

Advertisements