ಕನ್ನಡದ ಹಿರಿಯ ನಿರ್ದೇಶಕ ಎನ್ನುವುದಕ್ಕಿಂತಲೂ “ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ” ಹಾಡಿನ ರಚನಾಕಾರ ಎಂದರೆ ಸಿ. ವಿ. ಶಿವಶಂಕರ್ ಜನಕ್ಕೆ ಥಟ್ಟನೆ ನೆನಪಾಗುತ್ತಾರೆ. ಅವರು ನಿರ್ಮಿಸಿದ ಕನ್ನಡದ್ದೇ ಚಿತ್ರ “ಕನ್ನಡ ಕುವರ” ಹದಿನಾಲ್ಕು ವರ್ಷಗಳ ಹಿಂದೆ ಸಿದ್ಧವಾಗಿ ಈಗ ಬಿಡುಗಡೆ ಕಾಣುತ್ತಿದೆ. ಇಂಥ ಸಂದರ್ಭದಲ್ಲಿ ಮುರಳೀಧರ ಖಜಾನೆ ಅವರು ಬರೆದ ಲೇಖನವಿದು.

ಕನ್ನಡ ಚಲನಚಿತ್ರ ಜಗತ್ತಿನಲ್ಲಿ ಒಂದು ಪರಿಪೂರ್ಣವಾದ ಕನ್ನಡ ಚಲನಚಿತ್ರವನ್ನು ಬಿಡುಗಡೆ ಮಾಡುವುದೆಂದರೆ ದೊಡ್ಡ ಸಾಹಸದ ಸಂಗತಿ. ಅದರಲ್ಲೂ ಈ ವರ್ತಮಾನದಲ್ಲಂತೂ ಅಸಾಧ್ಯದ ಸಂಗತಿಯೆಂದೇ ಹೇಳಬಹುದು. ಕಾರಣವೆಂದರೆ, ಈ ಹೊತ್ತು ರೀಮೇಕ್ ಚಿತ್ರಗಳನ್ನು ಮಾಡಿ ರಾಜ್ಯ ಸರಕಾರ ನೀಡುವ ಸಬ್ಸಿಡಿಗಾಗಿ ಹೊಡೆದಾಡುತ್ತಿರುವ ಕಾಲ. ನನ್ನ ಮಾತಿನ ಅರ್ಥವನ್ನು ಇನ್ನಷ್ಟು ಸ್ಪಷ್ಟಗೊಳಿಸಿಕೊಳ್ಳಬೇಕಾದರೆ ನೀವು “ಸಿ.ವಿ. ಶಿವಶಂಕರ್’ ಅವರನ್ನೇ ಕೇಳಬೇಕು. ಅಂಥದೊಂದು ಸಾಹಸಕ್ಕೆ ಕೈ ಹಾಕಿ “ಕನ್ನಡ ಕುವರ’ ವನ್ನು ನಿರ್ಮಿಸಿ ಈ ಸಂತೆಯ ಮಧ್ಯೆ ಬಿಡುಗಡೆಗೊಳಿಸಲು “ಹದಿನಾಲ್ಕು ವರ್ಷ’ ಯೋಚನೆ ಮಾಡಿದರು. ಒಂದು ಬಗೆಯಲ್ಲಿ ವನವಾಸದಂತೆಯೇ.

ಏನೇ ಆಗಲೀ, 75 ವರ್ಷದ ಶಿವಶಂಕರ್ (ನಮ್ಮ ಕನ್ನಡ ಚಿತ್ರ ಜಗತ್ತಿಗೂ ಅಷ್ಟೇ ವರ್ಷ) ಕನ್ನಡದ ಮೇಲಿನ ಅತೀವ ಪ್ರೀತಿ ಹೊಂದಿದಂಥ ಮನುಷ್ಯ. ಒಬ್ಬ ಕನ್ನಡ ಶಿಕ್ಷಕನ ಸಂಕಷ್ಟವನ್ನು ಹೇಳುವ ಅವರ “ಕುವರ’ ಡಿಸೆಂಬರ್‌ನಲ್ಲಿ ವೀಕ್ಷರಿಗೆ ಲಭ್ಯವಾಗುತ್ತಿದ್ದಾನೆ ಎಂಬುದು ಹರ್ಷದ ಸಂಗತಿ. ಮೈಸೂರಿನ ಹಂಚಿಕೆದಾರರಿಗೆ ನಿಜವಾಗಲೂ ಧನ್ಯವಾದ ಹೇಳಬೇಕು. ಯಾಕೆಂದರೆ ಮೈಸೂರು, ಮಂಡ್ಯ, ಹಾಸನ ಮತ್ತು ಕೊಡಗು ಭಾಗಗಳಲ್ಲಿ ಸಿನಿಮಾ ಬಿಡುಗಡೆಗೆ ಒಪ್ಪಿದ್ದಾರೆ.

ಐವತ್ತೈದು ವರ್ಷಗಳಲ್ಲಿ ಶಿವಶಂಕರ್, ಸುಮಾರು 15 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 60 ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ, ಹಾಡು, ಸಂಭಾಷಣೆ ನೀಡಿದ್ದಾರೆ. ಜತೆಗೆ ತಾವೇ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. “ಮನೆಕಟ್ಟಿ ನೋಡು’, “ಮಹಡಿಯ ಮನೆ’, “ಮಹಾತಪಸ್ವಿ’, “ನಮ್ ಊರು’ ಅವರ ಚಿತ್ರಗಳು. ನಂತರ ವರನಟ ಡಾ. ರಾಜ್ ಕುಮಾರ್ ರೊಂದಿಗೆ “ಭಕ್ತ ಕನಕದಾಸ’, “ಸಂತ ತುಕಾರಾಂ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ ಕೂಡ. ರಂಗಭೂಮಿಯ ದಿಗ್ಗಜ ಸುಬ್ಬಯ್ಯ ನಾಯ್ಡುರಂಥವರಲ್ಲಿ ತರಬೇತಿ ಪಡೆದ ಶಿವಶಂಕರ್, ಹುಣಸೂರು ಕೃಷ್ಣಮೂರ್ತಿಯವರಂಥ ಒಳ್ಳೆಯ ನಿರ್ದೇಶಕರಲ್ಲಿ ಸಹಾಯಕರಾಗಿ ದುಡಿದವರು. ಅದಲ್ಲದೇ, ನಮ್ಮ ಕನ್ನಡ ಜಗತ್ತಿಗೆ ಕೊಟ್ಟ ಅವರ ಕೊಡುಗೆಯೆಂದರೆ ದ್ವಾರಕೀಶ್, ಕಲ್ಪನಾ, ತೂಗುದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್, ರಾಜೇಶ್, ಮಂಜುಳಾ ಮುಂತಾದ ಹಲವರನ್ನು ನಟರಾಗಿ ಪರಿಚಯಿಸಿದ್ದು. ಚಿತ್ರಜಗತ್ತಿನಲ್ಲಿ ನೀಡುವ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಪ್ರಶಸ್ತಿಯೂ ಸೇರಿದಂತೆ ಹಲವುಗಳಿಗೆ ಕೀರ್ತಿ ಭಾಜನರಾಗಿದ್ದಾರೆ.

ಇಷ್ಟೆಲ್ಲಾ ಶ್ರೇಷ್ಠತೆ-ಅರ್ಹತೆಗಳಿದ್ದರೂ, ತಮ್ಮ ಕನ್ನಡ ಕುವರ ಚಿತ್ರವನ್ನು ಬಿಡಗುಡೆ ಮಾಡಲು ಪಟ್ಟದ್ದು ಮಾತ್ರ ಪರಿಶ್ರಮವೇ. ನನ್ನೊಂದಿಗೆ ಮಾತನಾಡುತ್ತಾ, “ಹೇಮಂತ್ ಕುಮಾರ್, ಬಾಲಕೃಷ್ಣ, ರಾಜಾನಂದರಂಥ ನಟರನ್ನು ಒಳಗೊಂಡ ಚಿತ್ರ 1993 ರಲ್ಲೇ ನಿರ್ಮಿಸಿದೆ. ಆದರೆ ಬಿಡುಗಡೆ ಮಾಡಲಾಗಲಿಲ್ಲ. ಈ ಚಿತ್ರವನ್ನು ಪ್ರದರ್ಶಿಸಲು ಯಾವುದೇ ಪ್ರದರ್ಶಕರಾಗಲೀ, ವಿತರಕರಾಗಲೀ ಮುಂದೆ ಬರಲಿಲ್ಲ. ಏನೋ, ಈಗ ಮೈಸೂರಿನ ದತ್ತಭೂಷಣ್ ಎಂಟರ್ ಪ್ರೈಸಸ್‌ನ ದೇವದತ್ತ ಅವರು ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ’ ಎಂದರು ಶಿವಶಂಕರ್.

1993 ರ ಸಂದರ್ಭವನ್ನು ನೆನೆಸಿಕೊಳ್ಳುತ್ತಾ ಶಿವಶಂಕರ್, ಆ ವರ್ಷವನ್ನು ಆಗಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕನ್ನಡ ಜಾಗೃತಿ ವರ್ಷ ಎಂದು ಘೋಷಿಸಿದ್ದರು. ಇಂಥದೊಂದು ಘೋಷಣೆ ಕೊಡುವ ಮುನ್ನವೇ, ಶಿವಶಂಕರ್, ಕನ್ನಡ ಕುವರದ ಕಥಾವಸ್ತವನ್ನು ತಮ್ಮೊಳಗೆ ರೂಪಿಸಿಕೊಂಡಿದ್ದರು. ಒಬ್ಬ ಕನ್ನಡ ಶಿಕ್ಷಕ ಹಳ್ಳಿಗಳಿಗೆ ಹೋಗಿ ಕನ್ನಡ ಕುರಿತ ಜಾಗೃತಿಯನ್ನು ಮೂಡಿಸುವ ಪ್ರಯತ್ನವೇ ಕಥಾಹೂರಣ. ಕನ್ನಡ ಚಿತ್ರರಂಗದಲ್ಲಿ ಬಾಲಣ್ಣನಾಗಿಯೇ ಪ್ರಸಿದ್ಧರಾದ ಬಾಲಕೃಷ್ಣ ಈ ಚಿತ್ರದಲ್ಲಿ ಇಂಗ್ಲಿಷ್ ಶಿಕ್ಷಕರ ಪಾತ್ರ ವಹಿಸಿದ್ದಾರೆ. ಇನ್ನೊಂದು ಸಂಗತಿಯೆಂದರೆ ಬಾಲಣ್ಣ ನಟಿಸಿದ ಕೊನೆಯ ಚಿತ್ರವೂ ಇದು.

ಆರು ತಿಂಗಳಲ್ಲಿ 45 ಲಕ್ಷ ರೂ. ವೆಚ್ಚ ಮಾಡಿ ಸಿನಿಮಾ ನಿರ್ಮಿಸಲಾಯಿತು. ಬಹುಶಃ ಚಿತ್ರ ಮಾಡಲೂ ನಡೆಸದ ಸರ್ಕಸ್ ಅನ್ನು ಕೇವಲ ವಿತರಕರನ್ನು ಹುಡುಕುವಲ್ಲಿ ಶಿವಶಂಕರ್ ಮಾಡಬೇಕಾಯಿತು. ಕಂಬದಿಂದ ಕಂಬ ಸುತ್ತಿದರೂ ಒಬ್ಬರೂ ಸಿಗಲಿಲ್ಲ. ಜತೆಗೆ ಸಬ್ಸಿಡಿ ಪಡೆಯಲೂ ಸಹ. ಕೊನೆಗೂ 1995 ರಲ್ಲಿ ಸರಕಾರದ ಸಬ್ಸಿಡಿ 3.5 ಲಕ್ಷವೇನೋ ಬಂದಿತು. ಆದರೆ ಚಿತ್ರ ನಿರ್ಮಾಣಕ್ಕೆ ಅಷ್ಟೊಂದು ಹಣವನ್ನು ಶಿವಶಂಕರ್ ತಮ್ಮ ಸಂಬಂಧಿಕರಿಂದ ಹಾಗೂ ತಮ್ಮ ಸ್ವಂತ ಹಣವನ್ನು ತೊಡಗಿಸಿದ್ದರು. ಪಡೆದ ಸಾಲವೆಲ್ಲವೂ ತೀರಿತು. ಆದರೆ ಚಿತ್ರ ಮಾತ್ರ ಪೆಟ್ಟಿಗೆಯಲ್ಲೇ ಉಳಿದಿತ್ತು.

ಕನ್ನಡದ ಬಗ್ಗೆ ಪ್ರಸ್ತಾಪಿಸಿದಾಗಲೆಲ್ಲಾ ಅವರ ರಕ್ತದ ವೇಗ ಹೆಚ್ಚಾಗುತ್ತದೆ. ಕಣ್ಣುಗಳು ಹೊಳೆಯುತ್ತವೆ. ಭಾಷೆಯ ಮೇಲಿನ ತಮ್ಮ ಅಸ್ಖಲಿತ ಪ್ರೀತಿಯನ್ನು ಹೇಳಲು ಉತ್ಸುಕರಾದಂತೆ ಭಾವುಕರಾಗುತ್ತಾರೆ. ನಿಜ, ಅವರು “ಚಲುವ ಕನ್ನಡ ನಾಡು’ಚಿತ್ರಕ್ಕೆ ಕೊಟ್ಟ ಅತ್ಯಂತ ಉತ್ತಮ ಹಾಡು ಎಂದೆಂದಿಗೂ ಜನಪ್ರಿಯತೆಯ ಉತ್ತುಂಗದಲ್ಲಿರುವಂಥದ್ದೇ. ಆ ಹಾಡಿನ ಭಾವ ಸುಮ್ಮನೆ ತುಂಬಿದ್ದಲ್ಲ, ತಮ್ಮೊಳಗಿನ ಭಾವದಿಂದ ತುಂಬಿದ್ದು. ಅದರಲ್ಲೂ ಇಂಥ ನಾಡಪ್ರೇಮ, ದೇಶಪ್ರೇಮದಂಥ ಹಾಡುಗಳಿಗೆ ಅವರು ಹೆಸರುವಾಸಿ. “ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ’ ಹಾಗೂ “ಬೆಳೆದಿದೆ ನೋಡಾ ಬೆಂಗಳೂರು ನಗರ’ ಇಂದಿಗೂ ಕನ್ನಡಿಗರ ಮನದಾಳದಲ್ಲಿ ಅಚ್ಚೊತ್ತಿರುವಂಥ ಹಾಡುಗಳು.

ಕನ್ನಡ ಚಿತ್ರರಂಗದಲ್ಲಿ ದ್ವಂದ್ವಾರ್ಥ ಸಂಭಾಷಣೆಗಳ ಚಿತ್ರಗಳಿಂದಲೇ ತುಂಬಿ ಹೋದ ಹೊತ್ತಲ್ಲಿ ಕನ್ನಡದ ಶ್ರೇಷ್ಠತೆ, ಪ್ರಸ್ತುತತೆ, ಭಾಷಾ ಪ್ರೇಮ ಹಾಗೂ ಕೌಟುಂಬಿಕ ಮೌಲ್ಯಗಳನ್ನು ಸಾರಲು ನಿರ್ಮಿಸಿದ ಚಿತ್ರ ಕನ್ನಡ ಕುವರ. “ಈ ಚಿತ್ರವನ್ನು ಕನ್ನಡಿಗರು ನೋಡದಿದ್ದರೆ ಚಿತ್ರ ನಿರ್ಮಿಸಿದವನಿಂಗಿತಲೂ ಅವರಿಗೇ ದೊಡ್ಡ ನಷ್ಟ. ಈ ಮಧ್ಯೆ ಡಾ. ರಾಜ್‌ಕುಮಾರ್ ಈ ಚಿತ್ರವನ್ನು ಮೂರು ಬಾರಿ ನೋಡಿ ಅದರೊಳಗಿನ ಕನ್ನಡ ಪ್ರೀತಿಯನ್ನು ಹಾಗೂ ಸಂಭಾಷಣೆಯನ್ನು ಬಹಳ ಮೆಚ್ಚಿದ್ದರಂತೆ’ ಎಂದು ಹುರುಪಿನಿಂದ ವಿವರಿಸುತ್ತಾರೆ ಶಿವಶಂಕರ್.

ಕನ್ನಡ ಚಿತ್ರರಂಗಕ್ಕೆ ತಾವು ಕೊಡಿದ ಕೊಡುಗೆಯನ್ನು ಚಿತ್ರರಂಗ ಉದ್ಯಮವೂ ಪರಿಗಣಿಸಲಿಲ್ಲ, ಕನ್ನಡಿಗರೂ ಗೌರವಿಸಲಿಲ್ಲ, ಸರಕಾರವೂ ಪುರಸ್ಕರಿಸಲಿಲ್ಲ ಎಂಬುದು ಅವರ ಕೊರಗು. ಇಂದಿನ ಚಿತ್ರರಂಗದ ಸ್ಥಿತಿಗತಿ ಬಗೆಗಿನ ಪ್ರಶ್ನೆಗೆ ವಿವರಿಸುತ್ತಾ, “ಕೆಲವೇ ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ. ಈಗ ನಿರ್ಮಾಪಕರು ಬೇರೆ ಭಾಷೆಗಳ ಚಿತ್ರಗಳ ರೀಮೇಕ್‌ಗಳಲ್ಲೇ ಮುಳುಗಿದ್ದಾರೆ. ನಮ್ಮ ನೆಲದ ಕಂಪಿನ ಚಿತ್ರಗಳನ್ನು ನಿರ್ಮಿಸುವ ಬದಲು ಇತರೆ ಭಾಷೆಯ ನಕಲಿನಲ್ಲೇ ನಿರತರಾಗಿದ್ದಾರೆ. ನಮ್ಮ ಚಿತ್ರರಂಗ ತಾಂತ್ರಿಕವಾಗಿ ಬಹಳಷ್ಟು ಬೆಳೆದಿದೆ, ಆದರೆ ತನ್ನತನ ಮತ್ತು ಹೂರಣದ ವಿಷಯದಲ್ಲಿ ಬಹಳಷ್ಟು ಸೊರಗಿದೆ’ ಎನ್ನುತ್ತಾರೆ.

“ನಿರ್ಮಾಪಕರು ಮತ್ತು ವಿತರಕರು, “ಚಿತ್ರ ಬಿಡುಗಡೆಗಾಗಿ ಅನಗತ್ಯ ಹೆಚ್ಚು ಹಣ ನೀಡಿ ಪ್ರದರ್ಶಕರಿಗೆ ಹಣದ ಹುಚ್ಚು ಹಿಡಿಸಿದ್ದಾರೆ. ಇದರಿಂದ ಇಡೀ ಚಿತ್ರರಂಗದ ಪರಿಸರವೇ ಹಾಳಾಗಿದೆ. ಈಗ ಸಿನಿಮಾ ಮಂದಿರಗಳ ಬಾಡಿಗೆ ವಿಧಿಸುವ ಹಳೆಯ ಪದ್ಧತಿ ಬದಲು, ಶೇಕಡಾವಾರು ಆಧರಿಸಿ ಬಾಡಿಗೆ ವಿಧಿಸುವ ಕ್ರಮದ ಬಗ್ಗೆ ವಿವಾದ ಭುಗಿಲೆದ್ದಿರುವಾಗ ಇದು ಆತ್ಮಾವಲೋಕನದ ಹೊತ್ತು. ಇದು ಸರಿಯಾಗಬೇಕು’ ಎನ್ನುತ್ತಾರೆ ಶಿವಶಂಕರ್.

Advertisements