ಕಾರ್ಯ ಒತ್ತಡದ ಮಧ್ಯೆ ಪರಮೇಶ್ ಗುರುಸ್ವಾಮಿಯವರು ಕೆಲ ದಿನಗಳು ಬರೆದಿರಲಿಲ್ಲ. ಈಗ ಮತ್ತೆ ಬರೆದಿದ್ದಾರೆ. ಅವರಲ್ಲಿ ಹುದುಗಿಸಿಕೊಂಡಿರುವ ಸರಕು ಕಂಡರೆ ಅಚ್ಚರಿಯಾಗುತ್ತದೆ. ಈ ಬಾರಿಯ ಲೇಖನವೂ ಒಂದು ಅಚ್ಚರಿಯೇ.

ಇಷ್ಟೆಲ್ಲಾ ವರ್ಷದ ಮಧ್ಯೆಯೂ ನನ್ನ ಕುತೂಹಲದ ಹಾಗೂ ಅಧ್ಯಯನದ ಸಂಗತಿಯೆಂದರೆ ನಾವು ನಮ್ಮ ಚಲನಚಿತ್ರಗಳಲ್ಲಿ ಎಷ್ಟರಮಟ್ಟಿಗೆ ಭಾರತೀಯತೆಯನ್ನು ದುಡಿಸಿಕೊಂಡಿದ್ದೇವೆ. ಅಂದರೆ ಇಂಡಿಯನೈಸ್ ಮಾಡಿದ್ದೇವೆ ಎಂಬುದು. ವಾಣಿಜ್ಯ ನೆಲೆಯ ಚಿತ್ರಗಳೆಲ್ಲಾ ಬರೀ ಪಾಶ್ಚಾತ್ಯರ ನಕಲು ಎನ್ನುವಂತೆ ಕೇಳಿಬರುವ ಟೀಕೆಯ ನಡುವೆಯೂ, ಹೊಸ ಅಲೆಯ ಚಿತ್ರಗಳೆಂದು “ಹೊಸ ಮಾರ್ಗ’ ವನ್ನು ಹುಟ್ಟು ಹಾಕಿದ ಸಂಭ್ರಮದಲ್ಲಿದ್ದ ಮಂದಿಯೂ ಎಷ್ಟರಮಟ್ಟಿಗೆ ಭಾರತೀಯ ನೆಲೆಯನ್ನು ಬಳಸಿಕೊಂಡಿದ್ದಾರೆ ಎಂಬುದೂ ಅಚ್ಚರಿಯ ಸಂಗತಿ.

ಕೇವಲ ಸಂಗೀತದ ವಿಷಯವೇ ತೆಗೆದುಕೊಳ್ಳಿ. ನನಗೆ ಅನ್ನಿಸುವುದೆಂದರೆ, ವಾಣಿಜ್ಯ ನೆಲೆಯ (ಜನಪ್ರಿಯ) ಚಿತ್ರಗಳೇ ಅಂಥದೊಂದು ಪ್ರಯತ್ನ ಎಸಗಿವೆಯೇ ಹೊರತು ಹೊಸ ಅಲೆಯ ಚಿತ್ರಗಳಲ್ಲ ಎಂದೆನಿಸುತ್ತದೆ. ಇಂಗ್ಲಿಷರಲ್ಲಿ ಊಟ,ತಿಂಡಿಯಿಂದ ಹಿಡಿದು ಎಲ್ಲದಕ್ಕೂ ತಮ್ಮದೇ ಆದ ಹೊಸ ಹೆಸರು ಕೊಟ್ಟಿರುತ್ತಾರೆ. ಅದು ಫ್ರೆಂಚ್ ಹೆಸರು ಏನಾಗಿರುತ್ತದೋ ಅದು ಇಂಗ್ಲಿಷರ ಟೇಬಲ್ಲಿನಲ್ಲಿ ಅದಾಗಿರದು. ಅಂದರೆ ಹೂರಣ ಅದೇ, ಹೆಸರು ಮಾತ್ರ ಬೇರೆ. ಆ ಮೂಲಕ ಹೊಸತು ಎಂದು ಬೆಚ್ಚಿಬೀಳಿಸುವ ಪ್ರಯತ್ನ. ಈ ಮಾತು ತಿಂಡಿ ತಿನಿಸುಗಳಿಂದ ಹಿಡಿದು ಬಹಳ ದೂರದವರೆಗೂ ನಡೆಯುತ್ತದೆ. ಆದರೆ ಭಾರತಕ್ಕೆ, ಭಾರತೀಯತೆಗೆ, ಭಾರತೀಯರಿಗೆ ಅಂಥ ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿಯಿದೆ. ನಮ್ಮ ಮೇಲೆ ಹೆಚ್ಚು ಆಕ್ರಮಣ ನಡೆಸಿದ್ದು ಪಾಶ್ಚಾತ್ಯ ಸಂಸ್ಕೃತಿ.

ಉರ್ದು ಎನ್ನುವುದು ಸಂಸ್ಕೃತ ಮತ್ತು ಅರೇಬಿಕ್ ಸಮ್ಮಿಶ್ರಗೊಂಡು ರೂಪುಗೊಂಡಿತು. ಹೀಗೇ ಹೊರಗಿನದನ್ನು ತನ್ನೊಳಗೆ ಬೆಳೆಸಿಕೊಂಡು ಹೊಸ ಚಿಗುರಾಗಿ ಸಂಭ್ರಮಿಸಿತು. ಆದರೆ ಬ್ರಿಟಿಷರು, ಭಾರತದಲ್ಲೆವನ್ನೂ ನಿಕೃಷ್ಟವಾಗಿ ಕಾಣುತ್ತಿದ್ದರು. ಅದಕ್ಕೆ ಮೆಕಾಲೆಯ ಪ್ರಸಿದ್ಧ ಹೇಳಿಕೆಯೇ ಸಾಕ್ಷಿ. ಇಂಥದ್ದಕ್ಕೆ ಬೃಹತ್ ನೆಲೆಯಲ್ಲಿ ಬಲಿಯಾದವರು ನಮ್ಮ ನವ್ಯ ಸಾಹಿತಿಗಳು. ಕಮು, ಕಾಪ್ಕಾ, ಸಾತ್ರೆ ಮುಂತಾದವರೆಲ್ಲಾ ಸಾಹಿತ್ಯದಲ್ಲಿ ಅಸ್ತಿತ್ವವಾದದ ಬಗ್ಗೆ ಸಾಕಷ್ಟು ಬರೆದರು. ಅದು ಅವರಿಗೆ ಸರಿಯಾಗಿತ್ತು. ಪ್ರಪಂಚದ ಮಹಾಯುದ್ಧ, ಕೈಗಾರಿಕೆ ಕ್ರಾಂತಿ, ಬಂಡವಾಳಶಾಹಿಯ ಔನ್ನತ್ಯ ಇತ್ಯಾದಿಗಳೆಲ್ಲಾ ಅನುಭವವನ್ನು ಕಟ್ಟಿಕೊಟ್ಟಿದ್ದವು. ಆದರೆ, ಅದ್ಯಾವುದೂ ನಮಗೆ ಪ್ರಸ್ತುತವಾಗಿರಲಿಲ್ಲ. ಶಂಕರಮೊಕಾಶಿ ಪುಣೇಕರರು ಇದನ್ನು ಅತ್ಯಂತ ಸಮರ್ಥವಾಗಿ ಹಿಡಿದುಕೊಟ್ಟಿದ್ದಾರೆ. ತೇಜಸ್ವಿ, ಲಂಕೇಶ್‌ರಂಥ ಹಲವರು ನವ್ಯದಿಂದ ಹೊರಬಂದು ತಮ್ಮ ಬೇರುಗಳನ್ನು ಹುಡುಕಿಕೊಂಡು ಹೊರಟರು.

ಉಳಿದಂತೆ ಬಹುಮಂದಿ ನವ್ಯದ ಭ್ರಮೆಯಲ್ಲೇ ಉಳಿದರು. ಹಾಗೆಯೇ ನಮ್ಮ ಸಂಗೀತಗಾರರು ಪಾಶ್ಚಾತ್ಯ ನೆಲೆಯ ಸಂಗೀತ ಉಪಕರಣಗಳನ್ನೆಲ್ಲಾ ಭಾರತೀಯಗೊಳಿಸಿದರು. ಹಾರ್ಮೋನಿಯಂ, ಪಿಟೀಲು ಹೀಗೆ ಹಲವು. ಇಂಥದೊಂದು ಸಾಧ್ಯವಾಗಿಸಿದುದು ಅಲ್ಲಿನ ಗುರುಪರಂಪರೆಯೇ ಅನ್ನುವುದು ನನ್ನ ಲೆಕ್ಕಾಚಾರ.

ಸಿನಿಮಾ ಕ್ಷೇತ್ರದ ಉಪಕರಣಗಳೆಲ್ಲಾ ಬಹುಪಾಲು ಆಮದಾದುದು. ಆದರೆ, ನಮ್ಮ ಅಭಿವ್ಯಕ್ತಿಗೆ, ನಮ್ಮ ದನಿಗೆ ಪಿಟೀಲು, ಹಾರ‍್ಮೋನಿಯಂ ಅನ್ನು ಒಗ್ಗಿಸಿದಂತೆಯೇ ಸಿನಿಮಾದ ಮಂದಿ ತಮ್ಮ ನೆಲೆಯ ಉಪಕರಣಗಳನ್ನು ದುಡಿಸಿಕೊಂಡಿದ್ದು ತೀರಾ ಕಡಿಮೆ. ರಿತ್ವಿಕ್ ಘಟಕ್ ಎಂಬ ನಿರ್ದೇಶಕ ಈ ನೆಲೆಯಲ್ಲಿ ನನಗೆ ಮುಖ್ಯವಾಗಿರುತ್ತಾರೆ. ಸತ್ಯಜಿತ್ ರೇಗಿಂತಲೂ ನನಗೆ ರಿತ್ವಿಕ್ ಬಹಳ ಇಷ್ಟವಾಗುವುದು ಅದಕ್ಕೇ. ಈ ನೆಲೆಯಲ್ಲಿ ರೇ ಅವರ, ಪಥೇರ್ ಪಾಂಚಾಲಿಗಿಂತ, ಶತರಂಜ್ ಕೆ ಕಿಲಾಡಿ ಹಾಗೂ ಘರೇ ಬಾಹಿರೇ ಹೆಚ್ಚು ಭಾರತೀಯ ನೆಲೆಯಿಂದ ಹೊರಟದ್ದು ಎನಿಸುತ್ತದೆ.

ಹಾಗಾಗಿ ಇವುಗಳೇ ನನಗೆ ರೇ ಅವರ ಭಾರತೀಯ ನೆಲೆಯ ಚಿತ್ರಗಳೆಂದು ಅನಿಸುತ್ತದೆ. ನೋಡಿ, ಇರಾನ್, ಜಪಾನ್ ಸೇರಿದಂತೆ ಹಲವು ತೃತೀಯ ಜಗತ್ತಿನ ರಾಷ್ಟ್ರಗಳ ಚಲನಚಿತ್ರಗಳೇಕೆ ಹಾಲಿವುಡ್, ಯುರೋಪಿಯನ್ ಮಾದರಿಯಲ್ಲಿಲ್ಲ. ಅವೇ ಉಪಕರಣಗಳು. ಕಾರಣ, ಅವರು ತಮ್ಮ ನೆಲೆಯ ಅಭಿವ್ಯಕ್ತಿಗೆ ಅವುಗಳನ್ನು ದುಡಿಸಿಕೊಳ್ಳುವುದನ್ನು ಕಲಿತರು. ನಾವು ಕಲಿತದ್ದು ಕಡಿಮೆ. ಇಲ್ಲೇ ಇರುವುದು ನನ್ನ ಆಕ್ಷೇಪಣೆ. ಹೊಸ ಅಲೆಯ ನೆಲೆಯಲ್ಲಿ ಬಂದವರಿಂಗಿಂತ ಜನಪ್ರಿಯ ಚಲನಚಿತ್ರಗಳನ್ನು ಮಾಡಿದವರೇ ಇಂಥ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಗುರುದತ್, ರಾಜ್ ಕಪೂರ್, ಕನ್ನಡದಲ್ಲಿ ಪುಟ್ಟಣ್ಣ, ಹುಣಸೂರು ಕೃಷ್ಣಮೂರ್ತಿ, ಎಂ.ಆರ್. ವಿಠ್ಠಲ್, ನಾಗೇಂದ್ರರಾಯರು, ಜಿ. ವಿ. ಅಯ್ಯರ್, ಎಂ.ಎಲ್. ಲಕ್ಷ್ಮೀನಾರಾಯಣ್ ಮತ್ತಿತರರನ್ನು ಈ ನೆಲೆಯಲ್ಲಿ ಕಾಣಬಹುದು. ನಮ್ಮ ಹಿಂದಿನ ಜನಪ್ರಿಯ ಸಿನಿಮಾಗಳಲ್ಲಿ ಒಂದು ದುಷ್ಟ ಪಾತ್ರ ಅಥವಾ ದುಷ್ಟತನದ ಸನ್ನಿವೇಶಗಳಿಗೆ ಎದ್ದು ಕಾಣುವಂತೆ ಪಾಶ್ಚಾತ್ಯ ವಾದ್ಯಗಳ ಹಿನ್ನೆಲೆ ಸಂಗೀತವನ್ನು ಬಳಸುತ್ತಿದ್ದರು. ಅದೇ ಒಳ್ಳೆ ಪಾತ್ರಗಳಿಗೆ, ಒಳ್ಳೆ ಸನ್ನಿವೇಶಕ್ಕೆ ಭಾರತೀಯ ಸಂಗೀತವನ್ನು ಬಳಸುತ್ತಿದ್ದರು. ನಮ್ಮ ಹೊಸ ಅಲೆಯ ಬಹುಪಾಲು ಚಿತ್ರಗಳು ಪಾಶ್ಚಾತ್ಯರ ನೆಲೆಯಲ್ಲೇ ಇರುವುದರಿಂದ ಅವು “ವಿಕ್ಟೋರಿಯಾ ಡಿಸಿಕಾ’ದ ಛಾಯೆಯಡಿಯೇ ರೂಪುಗೊಂಡಿರುವಂತೆ (ಹೊಸ ಚಳವಳಿಗೆ ನಾಂದಿ ಹಾಡಿದ ಚಿತ್ರ) ಕಾಣುತ್ತವೆ. ಜತೆಗೆ ಗುಣಮಟ್ಟದ ಲೆಕ್ಕದಲ್ಲಿ ನೋಡಿದರೆ ಅದಕ್ಕಿಂತಲೂ ಕಳಪೆ ಎನಿಸುತ್ತದೆ.

ಹೀಗೇ ಇತ್ತೀಚೆಗೆ ಚಲನಚಿತ್ರ ಅಕಾಡೆಮಿ ಕೋಲಾರದ ಕೈವಾರದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದ ಸಂದರ್ಭದಲ್ಲಿ ಹೊರಗೆ ನಿಂತು, ನಾನೂ, ಅಕಾಡೆಮಿ ಸದಸ್ಯ ಎಂ.ಎನ್.ವ್ಯಾಸರಾವ್ ಮತ್ತಿತರರು ಮಾತನಾಡುತ್ತಿದ್ದೆವು. ಆಗ ನಾನು ಇದೆಲ್ಲವನ್ನೂ ವಿವರಿಸಿ, ರಿತ್ವಿಕ್ ಘಟಕ್‌ರ ಒಂದು ಸಿನಿಮಾದ ಸನ್ನಿವೇಶವನ್ನು ವಿವರಿಸಿದೆ. ನನ್ನ ಮೇಲಿನ ಎಲ್ಲ ಮಾತುಗಳಿಗೆ ಈ ಸನ್ನಿವೇಶ ಸಾಕ್ಷ್ಯವನ್ನು ಒದಗಿಸುತ್ತದೆ.

ಘಟಕ್‌ರ “ಮೇಘೆ ಧಕ್ಕ ತಾರಾ’ಚಿತ್ರದ ಸನ್ನಿವೇಶ. ಮನೆಗೆ ಆಶ್ರಯವಾಗಿದ್ದ ಉದ್ಯೋಗಿ ಮಗಳ ಮದುವೆಯ ವಯಸ್ಸು ಮೀರಿ ಹೋಗಿರುತ್ತದೆ. ತನ್ನ ಕಚೇರಿಯ ಸಹೋದ್ಯೋಗಿಯೊಂದಿಗೆ ಪ್ರೇಮದ ವಿಷಯವನ್ನು ತಿಳಿಸಿ ಮದುವೆಗೆ ಒಪ್ಪಿಗೆ ಪಡೆಯುವ ಸನ್ನಾಹದಲ್ಲಿರುತ್ತಾಳೆ. ಇತ್ತ ಮಗಳಿಗೆ ಮದುವೆಯಾದೀತೆಂಬ ಖುಷಿ ತಾಯಿಗೆ, ಅತ್ತ ಇವಳು ಗಂಡನ ಮನೆಗೆ ಹೋದರೆ ತಮಗೆ ಉಪವಾಸವೇ ಗತಿ ಎಂಬ ಧರ್ಮ ಸಂಕಟ. ಇಬ್ಬರಿಗೂ ತೀರಾ ಇಕ್ಕಟ್ಟಿನಲ್ಲಿ ಸಿಲುಕಿದ ಸ್ಥಿತಿ. ಆಗ ಇಬ್ಬರ ತುಮುಲಗಳನ್ನು ಹೇಳಲು ರಿತ್ವಿಕ್ ಘಟಕ್ ಬಳಸಿಕೊಂಡಿದ್ದು ಅಡುಗೆ ಮನೆ ಮತ್ತು ಅಲ್ಲಿನ ಶಬ್ದ. ಒಲೆಯ ಮೇಲಿಟ್ಟ ಬಾಣಲಿಯ ಎಣ್ಣೆಯ ಮರಳುವಿಕೆ ಮತ್ತು ಅದಕ್ಕೆ ಬಿದ್ದ ಸಾಸಿವೆಗಳು ಸಿಡಿಯುವ ಶಬ್ದ ಈ ತುಮುಲಗಳಿಗೆ ಧ್ವನಿಯಾಗುತ್ತದೆ. ಇದು ಹೊಸತನ, ಆಮದಾದ ಉಪಕರಣಗಳನ್ನು ಬಳಸಿಕೊಂಡು ಕೊಟ್ಟ ಹೊಸ ಸಾಧ್ಯತೆ. ಇದನ್ನೇ ನಾವು ಅರಗಿಸಿಕೊಳ್ಳುವಿಕೆ ಎನ್ನುವುದು. ಇದೇ ಸಂದರ್ಭಕ್ಕೆ ವಿಷಾದವನ್ನು ಬಿಂಬಿಸಲು ಬಹಳಷ್ಟು ಉಪಕರಣಗಳಿದ್ದವು. ಅದರ ಮೊರೆಗೆ ಹೋಗಲಿಲ್ಲ.

ಈ ಘಟನೆ ಹೇಳಿದಾಗ ವ್ಯಾಸರಾವ್ ತಾವು ಕೇಳಿದ ಮತ್ತೊಂದು ಘಟನೆ ಹೇಳಿದರು. ನನಗೆ ಅತೀವ ಕುತೂಹಲವಾಯಿತು. ಶಂಕರನಾಗರ ಕಂಟ್ರಿಕ್ಲಬ್ ಮನೆಯಲ್ಲಿ ನಡೆದ ಘಟನೆಯಿದು. ಭೀಮ್‌ಸೇನ್ ಜೋಷಿ, ವ್ಯಾಸರಾವ್, ಅರುಂಧತಿನಾಗ್, ಶಂಕರ್ ನಾಗ್ ಕುಳಿತು ಚರ್ಚಿಸುತ್ತಿದ್ದ ಸಂದರ್ಭ. ಅರುಂಧತಿ ನಾಗ್ ಅಡುಗೆ ಮನೆಯಿಂದ ಕುರುಕಲು ತಿಂಡಿ ಮಾಡಿಕೊಂಡು ಬರಲು ಹೋದರು. ಜೋಷಿಯವರು ಸಂಗೀತ ಶಾಸ್ತ್ರಜ್ಞರು. ಪ್ರತಿ ಶಬ್ದದಲ್ಲೂ ಅರ್ಥ, ನಾದವನ್ನು ಹುಡುಕುವವರು. ಪ್ರತಿ ಶಬ್ದಕ್ಕೂ ಒಂದು ರಾಗದೊಂದಿಗೆ ಹೋಲಿಸಿ ನೋಡುವ ಪ್ರವೃತ್ತಿಯವರು. ಅಂಥವರು ಒಗ್ಗರಣೆಗೆ ಒಂದು ರಾಗ ಹುಡುಕಿಕೊಟ್ಟರಂತೆ. ಅರುಂಧತಿ ನಾಗ್, ಅಡುಗೆ ಮನೆಗೆ ಹೋಗಿ ಒಗ್ಗರಣೆ ಹಾಕುವಾಗ ಸಾಸಿವೆ ಸಿಡಿದ ಶಬ್ದ ಕೇಳಿಸಿಕೊಂಡ ಜೋಷಿಯವರು, “ಇದಕ್ಕೂ ಒಂದು ಲಯವಿದೆ’ ಎಂದು ಸುಮಾರು ಹೊತ್ತು ವಿವಿಧ ರಾಗಗಳಲ್ಲಿ ಆ ಲಯದ ಹೋಲಿಕೆಯನ್ನು ಹಾಡಿ ತೋರಿಸಿದರಂತೆ. ಅಲ್ಲಿಗೆ ನಮ್ಮೊಳಗೆ ಒಗ್ಗಿಸಿಕೊಳ್ಳವುದೆಂದರೆ ಎಂಥ ಮಧುರವಾದ ಅನುಭವವಲ್ಲವೇ ? ನನ್ನ ಅನಿಸಿಕೆಯಲ್ಲಿ ಹೀಗೆ, ಹೊರಗಿನದನ್ನು ನಮ್ಮ ಚಿತ್ರಭಾಷೆಗೆ ಒಗ್ಗಿಸಿ ಅರಳಿಸಿದವರು ಕೆಲವೇ ಮಂದಿ. ಅವರಲ್ಲಿ ರಿತ್ವಿಕ್ ಘಟಕ್ ಪ್ರಮುಖರು.

Advertisements