ಹೇಮಶ್ರೀ ಕಳಿಸಿಕೊಟ್ಟ “ದಿ ಸಾಂಗ್ ಆಫ್ ಸ್ಪ್ಯಾರೋ’ ಚಿತ್ರದ ಬಗೆಗಿನ ಬರಹದ ಕನ್ನಡ ಅನುವಾದವಿದು. ಈಗಾಗಲೇ “ಚಿಲ್ಡ್ರನ್ ಆಫ್ ಹೆವನ್’, “ಕಲರ್ ಆಫ್ ಪ್ಯಾರಡೈಸ್” ದಂಥ ಚಿತ್ರಗಳನ್ನು ಕೊಟ್ಟ ಮಜಿದ್ ಮಜಿದಿ ಮಾನವೀಯ ಅಂತಃಕರಣದ ಭಾಷೆಯನ್ನು ದುಡಿಸಿಕೊಳ್ಳುವಾತ ಎಂದೇ ಪ್ರಸಿದ್ಧಿ. ಲೇಖಕರ ಪ್ರಕಾರ ಆ ಮಾತು ಮತ್ತೊಮ್ಮೆ ಸಾಬೀತು.

ಮತ್ತೊಮ್ಮೆ ಸಾಬೀತಾಗಿರುವುದೆಂದರೆ ನಮ್ಮನ್ನು ತಟ್ಟುವಂಥ ಚಿತ್ರಗಳಿಗೆ ಕಾಲ-ದೇಶ ಯಾವುದೂ ಅನ್ವಯಿಸುವುದಿಲ್ಲ. ಮನುಷ್ಯನ ಜೀವನಪ್ರೀತಿ ಮತ್ತು ಬದುಕನ್ನು ಶೋಧಿಸುವ ನೆಲೆಯನ್ನು ಕುರಿತಾದ ಎಲ್ಲವೂ ಹಾಗೆ ಎನಿಸುತ್ತದೆ. ಹಾಗೆಯೇ ನಮ್ಮ ಅಂತರಂಗವನ್ನು ತಟ್ಟಿ ಆರ್ದ್ರಗೊಳಿಸಿದ ಮತ್ತೊಂದು ಚಿತ್ರದ ಬಗ್ಗೆ ಪ್ರಸ್ತಾಪಿಸುತ್ತಿದ್ದೇನೆ.

ಇತ್ತೀಚೆಗೆ ಇಲ್ಲಿಯ (ಸನ್ನಿವೇಲ್) ಥಿಯೇಟರ್‌ನಲ್ಲಿ “ದಿ ಸಾಂಗ್ ಆಫ್ ಸ್ಪ್ಯಾರೊ’ (the song of sparrow) ವನ್ನು ನೋಡಿದೆ. ಮಜಿದ್ ಮಜಿದಿ ಒಬ್ಬ ಅತ್ಯಂತ ಒಳ್ಳೆಯ ನಿರ್ದೇಶಕ. ಅದರಲ್ಲೂ ದೃಶ್ಯರೂಪಕಗಳ ಮೂಲಕವೇ ಕಟ್ಟಿಕೊಡುವ ಸಮರ್ಥ. ಜತೆಗೆ ನಿರೂಪಣೆಯಲ್ಲೂ ಒಂದು ಬಗೆಯ ಮಾಂತ್ರಿಕತೆ (ಇದನ್ನು ಕಾವ್ಯ ಮಾದರಿಯ ನಿರೂಪಣೆ ಎನ್ನಲೂಬಹುದು) ಹಾಗೂ ಪಾತ್ರದ ಚಿತ್ರಣದಲ್ಲಿ ಎತ್ತಿದ ಕೈ. ಅವನ ಕಥೆ ಹೇಳುವ ಮಾದರಿಯೇ ತೀರಾ ಸಮಕಾಲೀನವೆನಿಸುತ್ತಲೇ, ನಮ್ಮನ್ನು ಆವರಿಸಿಕೊಳ್ಳುತ್ತದೆ.
ಅದೆಲ್ಲವನ್ನೂ ತನ್ನ ಈ ಚಿತ್ರ “ದಿ ಸಾಂಗ್ ಆಫ್ ಸ್ಪ್ಯಾರೊ’ ದಲ್ಲಿ ಮಾಡಿದ್ದಾರೆ. ಒಂದು ಬಡ ಕುಟುಂಬ ತನ್ನ ನಿತ್ಯದ ಅಗತ್ಯವನ್ನು ಪೂರೈಸಿಕೊಳ್ಳಲು ಪಡುವ ಪ್ರಯತ್ನಗಳನ್ನು ಚೆಂದವಾಗಿ ಅನಾವರಣಗೊಳಿಸುವ ಚಿತ್ರ.

ಟೆಹರಾನ್‌ನ ನಗರ ಎನ್ನಬಹುದಾದಂಥ ಹಳ್ಳಿಯೊಂದರಲ್ಲಿ ಆಸ್ಟ್ರಿಚ್ ಪಕ್ಷಿಗಳ ಫಾರಂನಲ್ಲಿ ದುಡಿಯುತ್ತಿರುವವ ಕರೀಂ. ತನ್ನ ಪತ್ನಿ ಹಾಗೂ ಮೂರು ಮಕ್ಕಳ ಕುಟುಂಬವನ್ನು ನಿತ್ಯವೂ ನಿರ್ವಹಿಸಬೇಕು. ಇದರೊಂದಿಗೆ ಪ್ರತಿ ತಿಂಗಳೂ ಕುಸಿಯುತ್ತಿರುವ ತನ್ನ ಆದಾಯವನ್ನು ಸರಿಪಡಿಸುವಲ್ಲಿ ವಹಿಸಬೇಕಾದ ಆಸಕ್ತಿ ಹೆಚ್ಚಿನದು. ಇಲ್ಲದಿದ್ದರೆ ಕಷ್ಟ ಮತ್ತಷ್ಟೂ ಕಟುವಾದೀತೆಂಬ ಭಯ. ಅವನ ಮಗಳಿಗೆ ಹೊಸದೊಂದು ಶ್ರವಣ ಉಪಕರಣ ಬೇಕಿದೆ, ಮಗನಿಗೆ ಗೋಲ್ಡ್‌ಫಿಶ್ ಗಳನ್ನು ಕೊಳ್ಳುವ ಆಸೆ. ಕೊಂಡದ್ದನ್ನು ಮಾರಿ ಶ್ರೀಮಂತನಾಗುವ ಬಯಕೆ…ಹೀಗೆ ಇವಿಷ್ಟರೊಂದಿಗೆ ಕರೀಂ ಬದುಕುತ್ತಿದ್ದಾನೆ.

ಇಂಥ ಕರೀಂನಿಗೆ ನಿರಾಶೆ ಎಂಬುದು ಮತ್ತೆ ಆವರಿಸಿಕೊಳ್ಳುತ್ತದೆ. ಅವನ ಪಕ್ಷಿಯೊಂದು ಪರ್ವತ ಪ್ರದೇಶದಲ್ಲಿ ಹಾರುತ್ತಾ ಕಳೆದುಹೋಗುತ್ತದೆ. ಅದಕ್ಕಾಗಿ ಅವನು ಹುಡುಕುವ ಪಡಿಪಾಟಲು ಯಾವುದೇ ಪ್ರಯೋಜನ ತಂದುಕೊಡದು. ಇರುವ ಕೆಲಸವನ್ನೂ ಕಳೆದುಕೊಳ್ಳುತ್ತಾನೆ ಆತ.

ಟೆಹರಾನ್ ನಗರಕ್ಕೆ ಬರುವ ಆತ ಆಕಸ್ಮಾತ್ತಾಗಿ ಟ್ಯಾಕ್ಸಿ ಡ್ರೈವರ್ ಆಗುತ್ತಾನೆ. ಆದರೆ ಅದೇ ಮುಂದಿನ ಬದುಕಿನ ದಾರಿಯಾಗುತ್ತದೆ. ಹಾಗೆಯೇ ನಗರದ ಬದುಕು ಹೊಸದನ್ನು ಕಲಿಸುತ್ತದೆ, ನಮ್ಮದಷ್ಟೇ ಎಂಬ ಸ್ವ-ಕೇಂದ್ರಿತ ಮಾದರಿಯನ್ನೂ ಸಹ. ಹೀಗೇ ನಗರದ ಜೀವನದ ಬಗ್ಗೆ ಮೋಹಿತನಾಗುವ ಕರೀಂ, ತನ್ನ ಸರಳತೆ-ಮುಗ್ಧತೆಯನ್ನು ಕೊಂದುಕೊಳ್ಳುತ್ತಾನೆ.

ತನ್ನ ಬದುಕಿನ ಶೈಲಿಯನ್ನು ಬದಲಿಸಿಕೊಳ್ಳಲು ಹಪಹಪಿಸುವ ಆತ, ಹೊಸ ಆದಾಯದಲ್ಲಿ ಹೊಸ ಹೊಸ ಸರಕುಗಳನ್ನು ತರುತ್ತಾನೆ ಮನೆಗೆ. ನಗರ ಕೇಂದ್ರಿತವಾದ ಮನೆಯಾಗಿ ರೂಪುಗೊಳ್ಳುತ್ತದೆ. ಆದರೆ ವೈರುಧ್ಯ ಏರ್ಪಡುವುದು ಅವನ ಪ್ರಾಮಾಣಿಕತೆ ಮತ್ತು ಹೊಸ ಸಮೃದ್ಧಿಯ ಮಧ್ಯೆ. ಕರೀಂ ಒಬ್ಬ ಸ್ವಾರ್ಥ ನೆಲೆಯ (ತನ್ನ ಬಗ್ಗೆಯಷ್ಟೇ ಯೋಚಿಸುವ) ಮನುಷ್ಯನಾಗಿ ಬದಲಾಗಿರುತ್ತಾನೆ. ಒಂದು ಕಾಲದಲ್ಲಿ ನೆರೆಹೊರೆಯವರಿಗೆ, ಜನರಿಗೆ ತೀರಾ ಹತ್ತಿರವಾದ ಕರೀಂ ಇಲ್ಲಿ ಅಪರಿಚಿತನಂತಾಗುತ್ತಾನೆ. ಅವನಿಗೆ ಬಂದ ಹೊಸದಾದ ಹಣವೆಂಬುದು ಹಲವು “ಅವನತನ’ಗಳನ್ನು ಕೊಂದದ್ದು ತಿಳಿಯುವುದೇ ಇಲ್ಲ. ಅವನು ತೆತ್ತ ಬೆಲೆಯೂ ಅರ್ಥವಾಗುವುದಿಲ್ಲ.
ಇದಕ್ಕೆ ವಿರುದ್ಧವಾಗಿ ಕಥೆ ಸಾಗುವ ಮಾದರಿಯಲ್ಲಿ ಇವನ ಮಗ ಮಹಾತ್ವಾಕಾಂಕ್ಷಿ ಹುಸೇನ್, ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಗೆಳೆಯರೊಂದಿಗೆ ರೂಪುಗೊಳ್ಳುತ್ತಿರುತ್ತಾನೆ. ಅಕ್ಷರಶಃ ಕಷ್ಟಪಡುತ್ತಾ, ಹೂಳು ತುಂಬಿಕೊಂಡ ಪುಟ್ಟ ಹಳ್ಳವನ್ನು ತೊಳೆದು ಸ್ವಚ್ಛಗೊಳಿಸುತ್ತಾನೆ. ಜತೆಗೆ ಹೊಸ ನೀರನ್ನು ತುಂಬುತ್ತಾನೆ. ಪುಟ್ಟ ತಾಣ ಹೊಸ ಕಳೆಯಿಂದ ಬೀಗುತ್ತದೆ.

ಒಮ್ಮೆ ತನ್ನ ಕೆಲಸ ನಿರ್ವಹಣೆಯ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಕರೀಂ ಕಾಲು ಮುರಿದುಕೊಳ್ಳುತ್ತಾನೆ. ಮನೆಯಲ್ಲೇ ಇರಬೇಕಾದ ಅನಿವಾರ‍್ಯ ಸ್ಥಿತಿ. ಆಗ ನಗರವೆಂಬುದು ಗೊತ್ತೇ ಇರದಂತೆ ಸೃಷ್ಟಿಸಿದ ಪರಾವಲಂಬನೆ ಅರಿವಾಗುತ್ತದೆ. ತನ್ನ ಕುಟುಂಬ ಮತ್ತು ಅವರ ಪ್ರೀತಿ, ಆರೈಕೆಯ ಅಗತ್ಯ ಎಲ್ಲವೂ ಮನದಟ್ಟಾಗುತ್ತದೆ. ಅಷ್ಟೇ ಅಲ್ಲ, ಹಳ್ಳಿಯಲ್ಲಿದ್ದಾಗ ಅವನೊಳಗಿದ್ದ ಒಬ್ಬ ಅಕ್ಕರೆಯ ತಂದೆ, ಪ್ರೀತಿಯ ಗಂಡ ಹಾಗೂ ಬಹಳ ಮುಖ್ಯವಾಗಿ ಪ್ರಾಮಾಣಿಕ ಮನುಷ್ಯನೆಂಬವ ಕಾಣಸಿಗುವುದೇ ಇಲ್ಲ, ಕಣ್ಮರೆಯಾಗಿರುತ್ತಾನೆ. “ಅಭಿವೃದ್ಧಿ’ಯ ನೆಲೆಯಲ್ಲಿ ವ್ಯಕ್ತಿಯೊಳಗಿನ ಬದಲಾವಣೆಯನ್ನು ನಿರ್ದೇಶಕ ಕರೀಂನ ಪಾತ್ರದಲ್ಲಿ ಸಮರ್ಥವಾಗಿ ಕಟ್ಟಿಕೊಡುತ್ತಾನೆ. ಕೆಲ ದೃಶ್ಯಗಳಂತೂ ಹೆಣೆದ ಬಗೆಯೇ ಚೆಂದ.

ಮಜಿದಿ ಪ್ರಸಿದ್ಧವಾಗಿರುವುದೇ ತನ್ನ ದೃಶ್ಯ ರೂಪಕಗಳಿಂದ. ಅವನು ಕಟ್ಟಿಕೊಡುವ ಚಿತ್ರಿಕೆಗಳೆಲ್ಲಾ ಚಿತ್ರ ಕಲಾಕೃತಿಗಳೇ. ಅದರಲ್ಲೂ ದೃಶ್ಯ ಸಾಧ್ಯತೆಗಳಿಗೆ ಬಳಸುವ ಬಣ್ಣ ಮತ್ತು ಅದನ್ನು ದುಡಿಸಿಕೊಳ್ಳುವ ಶಕ್ತಿ ಅನನ್ಯ. ಅವನಿಗೆ ದೃಶ್ಯದ ಸಾಧ್ಯತೆ ಚೆನ್ನಾಗಿ ಗೊತ್ತು.
ಮಜಿದಿ, ದೂರಗಾಮಿ ಚಿತ್ರಿಕೆಗಳಿಗೆ ಹೇಳಿ ಮಾಡಿಸಿದವರು. ಅದೇ ಅವರ ಹೆಗ್ಗಳಿಕೆಯೂ ಸಹ. ಈ ಚಿತ್ರದಲ್ಲೂ ನಮ್ಮನ್ನು ಸದಾ ಹಿಡಿದಿಡುವಂಥ ಹಲವು ಚಿತ್ರಿಕೆಗಳಿವೆ. ಉದಾಹರಣೆಗೆ, ಆಸ್ಟ್ರಿಚ್ ಪಕ್ಷಿ ಹಾರಿ ದೂರ ಹೋದಾಗ ಕರೀಂನ ಮುಖದಲ್ಲಿನ ನಿರಾಶೆಯನ್ನು ಹಿಡಿದಿಡುವಂಥದ್ದು. ಹೆಲಿಕಾಪ್ಟರ್ ಬಳಸಿ ೩೬೦ ಕೋನದಲ್ಲಿ ಬಳಸಿ ತೆಗೆದ ಚಿತ್ರಿಕೆ.

ಹಾಗೆಯೇ ಆರಿಸಿಕೊಳ್ಳುವ ಬಣ್ಣದ ಬಗ್ಗೆ ಹೇಳುವುದಾದರೆ, ಕೆಸರು ತುಂಬಿದ ಅಂಗಳದ ಎದುರಿನ ನೀಲಿ ಬಣ್ಣದ ಬಾಗಿಲೂ ಸಹ, ಕರೀಂನ ಕಷ್ಟವನ್ನು ಹೇಳುವಂಥದ್ದು. ಕೆಲವು ಚಿತ್ರಿಕೆಗಳು (ಶಾಟ್ಸ್) ಬಹಳ ಸರಳವಾಗಿದ್ದರೂ ಹೆಚ್ಚು ಅರ್ಥಪೂರ್ಣವಾಗಿವೆ. ಮರಳಿನಲ್ಲಿ ಮೂಡಿದ ಮಕ್ಕಳ ಅಸ್ಪಷ್ಟ ಪಾದಗಳ ಗುರುತು ಮನೆಯ ನೀರಿನ ತೊಟ್ಟಿಗೆ ಗೋಲ್ಡ್ ಫಿಷ್ ತರುವ ಪ್ರಯತ್ನದತ್ತ ಅವರ ಕ್ರಮಿಸುವಿಕೆಯನ್ನು ಹೇಳುತ್ತದೆ ಎಂಬುದು ನನ್ನ ಅನಿಸಿಕೆ.

ಬಹಳ ಮನಸ್ಸಿಗೆ ತಟ್ಟುವ ದೃಶ್ಯವೆಂದರೆ ಸಾಯುತ್ತಿದ್ದ ಮೀನುಗಳನ್ನು ಬದುಕಿಸಲು ಪಡುವ ಪಾಡು. ಒಡೆದ ಪ್ಲಾಸ್ಟಿಕ್ ಬಕೀಟಿನಿಂದ ಹೊರಬಿದ್ದ ಮೀನುಗಳನ್ನು ರಕ್ಷಿಸಲು ಹೋಗುವ ಮಕ್ಕಳು, ಅವುಗಳನ್ನು ತೊರೆಗೆ ತಳ್ಳುತ್ತಾರೆ. ವಾಸ್ತವವಾಗಿ ಇದು ಅವರ ಬಯಕೆಯ ವಿರುದ್ಧದ ಕೆಲಸ. ಕಾರಣ, ಬಹಳ ಆಸೆಯಿಂದ ಆ ಮೀನುಗಳನ್ನು ತಂದಿರುತ್ತಾರೆ. ಆದರೆ, ಈ ಹೊತ್ತಿನಲ್ಲಿ ಅವರ ಆಸೆ ಈಡೇರಿಕೆ ಅಥವಾ ಆಸೆ ಇಂಗಿಹೋದದ್ದಕ್ಕೆ ನಿರಾಶೆ ಪಡುವುದಕ್ಕಿಂತಲೂ ಅವುಗಳು ಬದುಕುಳಿದರೆ ಸಾಕೆಂಬುದೇ ಮುಖ್ಯವಾಗುತ್ತದೆ, ಬದುಕಿನಂತೆಯೇ. ಅದು ಈ ದೃಶ್ಯದಲ್ಲಿ ಸ್ಪಷ್ಟ. ಅದಕ್ಕೆ ತಕ್ಕನಾಗಿ ಕರೀಂ ಹಾಡುತ್ತಾನೆ, “ಈ ಪ್ರಪಂಚ ಸುಳ್ಳು ; ಈ ಪ್ರಪಂಚ ಒಂದು ಕನಸು’. ಎಷ್ಟು ಅರ್ಥ ಪೂರ್ಣ. ಇದು ತನ್ನನ್ನು ತಾನು ಸಮಾಧಾನ ಪಡಿಸಿಕೊಳ್ಳುವ ಪ್ರಯತ್ನವೂ ಹೌದು ಹಾಗೂ ಆ ಮಕ್ಕಳ ಮನಸ್ಸನ್ನು ತಣಿಸುವುದೂ ಹೌದು. ಮತ್ತೆ ಹೊಸ ಕನಸು ಬಿತ್ತುವಂತೆ ನಿರ್ದೇಶಕ, ಆಸ್ಟ್ರಿಚ್ನ ನೃತ್ಯದ ದೃಶ್ಯವನ್ನು ಕಟ್ಟಿಕೊಡುತ್ತಾನೆ. ಇದು ಮತ್ತೆ ಜಗತ್ತನ್ನು, ಬದುಕನ್ನು ಪ್ರೀತಿಸು ಎನ್ನುವ ಪ್ರಯತ್ನ.

ಒಂದು ಸರಳ ಕಥೆ ಎಂಥೆಂಥ ತಿರುವುಗಳಿಂದ ಅತ್ಯಂತ ಮಾನವೀಯ ನೆಲೆಯ ದೃಶ್ಯಕಾವ್ಯವಾಗಿ ರೂಪುಗೊಳ್ಳುತ್ತದೆ ಎಂಬುದೇ ನನಗೆ ಅಚ್ಚರಿ ಎನಿಸುವ ಸಂಗತಿ.

ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂದು ಹೇಳುವುದು ಕ್ಲೀಷೆ ಎನಿಸಬಹುದು. ಕಾರಣ, ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಸರಿಯಾಗಿಯೇ ನಿರ್ವಹಿಸಿದ್ದಾರೆ, ಅದು ಸಹಜವೂ ಸಹ. ರೀಜಾ ನಾಜಿ ಕರೀಂನಾಗಿ, ಮಾರ‍್ಯಂ ಅಕ್ಬರಿಯಾಗಿ ನರ್ಗೀಸ್ ಹಾಗೂ ಚಿತ್ರಕ್ಕೆ ಜೀವತುಂಬುವಂತೆ ನಟಿಸಿರುವುದು ಮಕ್ಕಳು.

ನವವಾಸ್ತವವಾದದ ಕಾವ್ಯದಂಥ ಶೈಲಿಗೆ ಬಹಳ ಹೆಸರುವಾಸಿಯಾಗಿರುವ ಮಜಿದಿ, ಬದುಕು ಮತ್ತು ಬದುಕುವವರನ್ನು ಎಷ್ಟು ಸಾಧ್ಯವೋ ಅಷ್ಟು ಬಿಂಬಿಸಲು ಪ್ರಯತ್ನಿಸುವ ಅತ್ಯಂತ ವಿರಳ ನಿರ್ದೇಶಕರಲ್ಲಿ ಇವರೂ ಒಬ್ಬರು. ಈ ಮಾತನ್ನು ಮತ್ತೊಮ್ಮೆ ಈ ಚಿತ್ರ ಸಾಬೀತು ಪಡಿಸಿದೆ.

Advertisements