ಒಂದು ಚಿತ್ರ ನಿಮಗೆ ಇಂಥದ್ದರಿಂದ ಪ್ರೇರಣೆಗೊಂಡಿರಬಹುದು ಎಂದೆನಿಸುವುದು ಸಹಜ. ಆದರೆ ನಿರ್ದೇಶಕನಾದವನಿಗೆ ಅಂತದೊಂದು ಕಥಾವಸ್ತು (ಥೀಮ್) ಕೇವಲ ಒಂದರಿಂದಲೇ ಮೂಡಿರದು. ಬದಲಾಗಿ ಹತ್ತು ಹಲವು ಸಂಗತಿಗಳಿಂದ ಪ್ರಭಾವಕ್ಕೊಳಗಾಗಿರುತ್ತಾನೆ ಎಂದವರು “ಮನಸಾರೆ” ಚಲನಚಿತ್ರ ನಿರ್ದೇಶಕ ಯೋಗರಾಜ ಭಟ್.

ಸಂವಾದ.ಕಾಂ ಬೆಂಗಳೂರಿನಲ್ಲಿ ಏರ್ಪಡಿಸಿದ್ದ “ಮನಸಾರೆ” ಕುರಿತ ಸಂವಾದದಲ್ಲಿ ಮನಸಾರೆ ತಂಡ, ಸಂವಾದ. ಕಾಂನ ಶೇಖರ್ ಪೂರ್ಣ, ದಟ್ಸ್ ಕನ್ನಡ. ಕಾಂನ ಎಸ್ಕೆ ಶಾಂ ಸುಂದರ್, ಟೀನಾ ಶಶಿಕಾಂತ್, ಹೇಮಾ ಪವಾರ್ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು. ಸಂವಾದ ಚೆನ್ನಾಗಿ ನಡೆಯಿತು. ಈ ಹಿನ್ನೆಲೆಯಲ್ಲಿ ಯೋಗರಾಜ ಭಟ್ಟರ ಮಾತಿನ ಝಲಕ್ ಅನ್ನು ನೀಡಲಾಗಿದೆ.

“ಮನಸಾರೆ ಚಿತ್ರದ ಕುರಿತೇ ನೋಡಿ. ಸಿಗ್ಮಂಡ್ ಫ್ರಾಯಿಡ್ ನ ಯಾವುದೋ ಸಾಲು ಮೂಲ ಸೆಲೆಯಾಯಿತು. ಹಾಗೆಯೇ ಶಿವರಾಮ ಕಾರಂತರ ಯಾವುದೋ ಮಾತು ಸಹ ಸೆಲೆಯನ್ನು ಬೆಳೆಸಿತು. ಹೀಗೆ…ಹತ್ತು ಹಲವು ಸಂಗತಿಗಳಿಂದ ಪ್ರಭಾವಿತಕ್ಕೊಳಗಾಗಿ ಒಂದು ರೂಪ ಪಡೆಯುತ್ತದೆ. ಹಾಗಾಗಿ ಇಂಥದ್ದೇ ಸಿನಿಮಾದಿಂದ ಪ್ರಭಾವಿತ ಎಂಬುದಾಗಲೀ, ಇಂಥ ಸಿನಿಮಾವೇ ಇದಕ್ಕೆ ಕಾರಣ ಎಂಬುದಾಗಲೀ ಹೇಳಲಾಗದು. ಹಾಗೆ ಒಂದು ಥೀಮ್ ಸಿದ್ಧಗೊಳ್ಳುವುದಿಲ್ಲ’.

ಹಾಗೆಯೇ ಒಂದು ಸಿನಿಮಾ ರೂಪುಗೊಳ್ಳುವಲ್ಲಿ ಹಲವರು ಭಾಗಿಯಾಗಿರುತ್ತಾರೆ. ಅದು ಯಾರೊಬ್ಬರ ಯಶಸ್ಸಲ್ಲ. ಅದು ಎಲ್ಲರ ಯಶಸ್ಸು.

ಸಿನಿಮಾದ ಕ್ಲೈಮ್ಯಾಕ್ಸ್ ಕುರಿತಾದ ಪ್ರಶ್ನೆಗೆ, “ಸಿನಿಮಾ ಯಾವಾಗಲೂ ಓಪನ್ ಎಂಡೆಂಡ್ ಹೊರತೇ ಕ್ಲೋಸ್ ಎಂಡೆಂಡ್ ಅಲ್ಲ. ಅಂದರೆ ಸಿನಿಮಾ ಮುಗಿದ ಮೇಲೂ ಬೆಳೆಯುವಂಥ ಮಾಧ್ಯಮ. ಒಂದು ನಿರ್ದಿಷ್ಟತೆ ಕೊಟ್ಟು ಇದು ಹೀಗೇ…ಎಂದು ಇದಮಿತ್ಥಂ ಎಂದು ಹೇಳಲು ಬಾರದು. ಅದು ನನ್ನ ಆಲೋಚನೆಯೂ ಸಹ. ಈ ಚಿತ್ರದಲ್ಲೂ ನಾಯಕ,ನಾಯಕಿ ಕೊನೆಗೆ ಕೈ ಹಿಡಿದು ಹೋಗೋದು ಎಲ್ಲಿಗೆ ಎಂಬ ಪ್ರಶ್ನೆ ಇರಬಹುದು. ಅದಕ್ಕೆ ಹತ್ತಾರು ಉತ್ತರಗಳಿವೆ. ಅದರಲ್ಲಿ ಪ್ರೇಕ್ಷಕರು ತಮಗೆ ಅರ್ಥವಾದದ್ದನ್ನು, ಹೊಳೆದದ್ದನ್ನು ಆರಿಸಿಕೊಳ್ಳುತ್ತಾರೆ. ನನ್ನ ದೃಷ್ಟಿಯಲ್ಲಿ ಸಿನಿಮಾ ಎಂದರೆ ಹೀಗೇ ಇರಬೇಕು, ಎಲ್ಲವೂ ಮುಗಿದ ಮಾದರಿಯಲ್ಲಿ ಅಲ್ಲ’.

ನಿಮ್ಮ ಚಿತ್ರದಲ್ಲಿ ಪುರುಷ ಪಾತ್ರಗಳಿಗೆ ಪ್ರಾಮುಖ್ಯ ಇರುತ್ತೆ ಎಂಬ ಗ್ರಹಿಕೆಗೆ, “ಇರಬಹುದು. ಒಂದು ಪಾತ್ರದೊಳಗೆ ಇಳಿದು ಬರೆಯಬೇಕು. ಅದು ಹಾಡಿರಬಹುದು, ಸಾಹಿತ್ಯ ರಚನೆ ಇರಬಹುದು, ಪಾತ್ರದ ವಿಶ್ಲೇಷಣೆ ಇರಬಹುದು. ಅದೇ ನಿರ್ದೇಶಕಿಯರು ಇಂಥ ಕೆಲಸ ಕೈಗೆತ್ತಿಕೊಂಡರೆ ಅಲ್ಲೂ ಅಂಥದೇ (ಸ್ತ್ರೀ) ಪ್ರಾಮುಖ್ಯ ಸಿಗಬಹುದು. ಇಂಥ ಅಂಶ ನಿಮಗನ್ನಿಸಬಹುದು”.

ಪಾತ್ರ ಬೆಳೆಸುವ ಬಗೆ ವಿವರಿಸಿ, “ಯಾವ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇರಬೇಕು, ಎಷ್ಟು ಅವಕಾಶ ನೀಡಬೇಕು ಎಂಬುದು ಸ್ಪಷ್ಟವಾಗಿ ನಿರ್ಧಾರವಾಗಿರುವಂಥದ್ದು. ಉದಾಹರಣೆಗೆ ಸಿನಿಮಾವನ್ನು ಆರಂಭಿಸುವ ಪಾತ್ರವಿರಬಹುದು, ಅದು ವಿಶೇಷವೂ ಇರಬಹುದು. ಆದರೆ ಅಲ್ಲಿನ (ಸಿನಿಮಾದ ಕಥಾವಸ್ತು) ಔಚಿತ್ಯದ ನೆಲೆಯಲ್ಲಿ ಪಾತ್ರವನ್ನು ರೂಪಿಸಬೇಕು, ಬೆಳೆಸಬೇಕು. ವಿಶೇಷ ಎಂದೆನಿಸಿ ಸಿಕ್ಕಾಪಟ್ಟೆ ಬೆಳೆಸಲು ಸಾಧ್ಯವಾಗದು. ನನ್ನ ಚಿತ್ರದಲ್ಲಿ ನಾಯಕನಿಗೆ ಅಪ್ಪ ಇರದಿರಬಹುದು. ಆದರೆ ರಾಜು ತಾಳಿಕೋಟೆಯ ಪಾತ್ರ ಅಪ್ಪನ ಪಾತ್ರದಂತೆಯೇ ಪೋಷಣೆ ಪಡೆಯುತ್ತದೆ. ಅಲ್ಲಿ ಆ ಸಂಬಂಧದ ಕೊರತೆ ನಿವಾರಣೆಯಾಗುತ್ತದೆ. ಹಾಗಾಗಿ ಒಂದು ಪಾತ್ರವನ್ನು ಹೀಗೇ ಬೆಳೆಸಬೇಕೆಂದೇನೂ ಇಲ್ಲ. ಪೂರಕವಾಗಿರಬೇಕು ಅಷ್ಟೇ’.

“ಸಿನಿಮಾ ಎಲ್ಲವನ್ನೂ ಬದಲಿಸುತ್ತದೆ ಎಂದೇನೂ ಹೇಳಲಾರೆ. ಸುಮಾರು ಇಪ್ಪತ್ತು ವರ್ಷಗಳವರೆಗೂ ಅಪ್ಪ-ಅಮ್ಮನ ನೆರಳಲ್ಲಿ, ಸೂಚನೆಯಡಿ ಮನೆಯ ಪರಿಸರದಲ್ಲೇ ಬೆಳೆಯುವ ಮಕ್ಕಳೂ ಎಷ್ಟು ಕಲಿಯುತ್ತಾರೆ ಎಂದು ಹೇಳಲು ಯಾವ ಗ್ಯಾರಂಟಿ ಇದೆ. ಹಾಗೆಯೇ ಎರಡೂವರೆ ಗಂಟೆಯ ಸಿನಿಮಾಗಳಲ್ಲಿ ಬಹಳ ಕಲಿಯುತ್ತಾರೆ, ಸಾಮಾಜಿಕ ಬದಲಾವಣೆಗೆ ಪ್ರೇರಣೆಯಾಗುತ್ತದೆ ಎಂಬುದನ್ನು ಸಂಪೂರ್ಣವಾಗಿ ನಂಬಲಾರೆ’ ಎಂದವರು ಯೋಗರಾಜ್ ಭಟ್.

ಸಾಮಾನ್ಯವಾಗಿ ಸಿನಿಮಾದ ಹೀರೊಗಳು ಸಮಾಜದ ಮಾದರಿಗಳಂತೆಯೇ ಬಿಂಬಿತವಾಗಿದೆ. ಆದರೆ ನಿಮ್ಮ ಸಿನಿಮಾದಲ್ಲಿ “ಏಕಾಂಗಿ” ಯಂತೆ ತೋರುತ್ತಾರಲ್ಲ ಎಂಬ ಪ್ರಶ್ನೆಗೆ ವ್ಯಕ್ತವಾದ ಉತ್ತರವಿದು.

ಇದೆಲ್ಲದರ ಮಧ್ಯೆಯೇ ಸಾಂಗತ್ಯದ ಮುಂದಿರುವ ಪ್ರಶ್ನೆ “ಯೋಗರಾಜ ಭಟ್ ಅವರು ಅವರ ಸಿನಿಮಾಗಳನ್ನು ನೋಡುವ ಬಗೆ ಹೇಗೆ?- ಈ ಕುರಿತು ಮುಂದೆ ವ್ಯವಸ್ಥಿತವಾಗಿ ಚರ್ಚಿಸೋಣ.

Advertisements