ಡಾ.ಜಿ. ಬಿ. ಹರೀಶರು, ವಾರಕ್ಕೊಮ್ಮೆ ಬರೆಯುವ ಸಾಕ್ಷ್ಯಚಿತ್ರಗಳ ಸರಣಿ ಇಂದಿನಿಂದ ಆರಂಭ. ಮೊದಲನೆಯದಾಗಿ ಕಾವ್ಯ ಗಾರುಡಿಗ ದ. ರಾ. ಬೇಂದ್ರೆ ಅವರನ್ನು ಕುರಿತ ಸಾಕ್ಷ್ಯಚಿತ್ರದ ಬಗ್ಗೆ ಬರೆದಿದ್ದಾರೆ. ಹೀಗೇ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಒಳ್ಳೊಳ್ಳೆ ಸಾಕ್ಷ್ಯಚಿತ್ರಗಳ ಕುರಿತ ಮಾಹಿತಿ ಪ್ರತಿ ವಾರವೂ ಹರಿದು ಬರಲಿದೆ.
ಬೇಂದ್ರೆಯವರನ್ನು ಕುರಿತ ಸಾಕ್ಯಚಿತ್ರ ಅಪೂರ್ವ. ಗಿರೀಶ್ ಕಾರ್ನಾಡರ ನಿರ್ದೇಶನದ ಈ ಚಿತ್ರದಲ್ಲಿ ಧಾರವಾಡದ ಮತ್ತು ಬೇಂದ್ರೆ ಯವರ ವ್ಯಕ್ತಿತ್ವ ಎರಡು ಒಂದರೊಡನೆ ಇನ್ನೊಂದು ಸೇರಿಕೊಂಡಿವೆ. ಧಾರವಾಡದ ಬಯಲುಸೀಮೆ ಮಲೆ ನಾಡಿನ ಮಿಶ್ರಣದ ಹದ ಮೊದಲ ಹಂತದಲ್ಲಿ ಕಂಡು ಬರುತ್ತದೆ.
ಇದು ಕಪ್ಪು ಬಿಳುಪಿನ ಚಿತ್ರ. ಕರ್ನಾಟಕ ಸರಕಾರದ ವಾರ್ತಾ ಇಲಾಖೆ 1972 ರಲ್ಲಿ ನಿರ್ಮಿಸಿದ್ದು. ಬೇಂದ್ರೆಯವರ ವಿಚಿತ್ರವೆನಿಸುವ ಜೀವನ ಶೈಲಿ,ಕುತ್ತಿಗೆಗೆ ಧರಿಸಿದ ಉದ್ದನೆಯ ರುದ್ರಾಕ್ಷಿ ಮಾಲೆ, ಮನೆಯಲ್ಲಿರುವ ದೊಡ್ಡ ಗ್ರಂಥ ಭಂಡಾರ,ಪ್ರಯೋಗ ಶಾಲೆಯೆನಿಸುವಂತೆ ತೂರುವ ವಸ್ತುಗಳ ರಾಶಿ. ಅದರಲ್ಲಿ ಮಾಯ ಚೌಕ, ಅಂಕಿಗಳಿಗೆ ಸಂಬಂಧಿಸಿದ ಪಟಗಳು, ಅರವಿಂದ, ಶ್ರೀಮಾತೆಯವರ ಭವ್ಯ ಪಟಗಳನ್ನು ಕ್ಯಾಮೆರಾ ಕಣ್ಣು ಚೆನ್ನಾಗಿ ಸೆರೆ ಹಿದಿದಿದೆ. ಬೇಂದ್ರೆಯ ಚದುರಿರುವ ಅಪಾರ ಶಕ್ತಿಯನ್ನು ಪುಸ್ತಕ, ವಸ್ತು,ಅವರ ದೇಹದ ಚಟುವಟಿಕೆಗಳು ತೋರಿಸುತ್ತವೆ.
ಬೇಂದ್ರೆಯ ವ್ಯಕ್ತಿತ್ವ ಕವಿಯ ಆಚೆಗೂ ಚಾಚಿರುವುದನ್ನು ಒಂದು ಕಡೆ ಮಂಗನಿಗೆ ತಿನಿಸನ್ನು ನೀಡಲು ಚಾಚಿರುವ ಕೈ ಸೆರೆಹಿಡಿದರೆ, ಇನ್ನೊಂದು ಕಡೆ ಹಾವಾಡಿಗನೊಡನೆ ಮಾತನಾಡುತ್ತಿರುವ ಬೇಂದ್ರೆಯ ದೃಶ್ಯ ತೋರಿಸುತ್ತದೆ.ಅಲ್ಲಿ ಕ್ಯಾಮೆರಾ ಗಾರುಡಿಗ ಬೇಂದ್ರೆ ಮತ್ತು ಹಾವಾಡಿಗರಿಂದ ಕೆಳಸರಿದು ಬುಟ್ಟಿಯಲ್ಲಿ ಹೆಡೆ ಬಿಚ್ಚಿರುವ ನಾಗನತ್ತ ಚಲಿಸುವ ವೇಗ ಬೇಂದ್ರೆಯ ವಿವಿಧ ರೀತಿಯ ಜನರೊಡನೆ ಸಲೀಸಾಗಿ ಬೆರೆಯುತ್ತಿದ್ದ ರೀತಿಯ ಪ್ರತೀಕ.
ಅಂದ ತುಂಬಿತ್ತ ಹಾಲಗೇರಿ…., ಇನ್ನು ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ ಹಾಡುಗಳು ಸೊಗಸಾಗಿ ಧಾರವಾಡದ ಬದುಕನ್ನು, ಪ್ರಕೃತಿಯನ್ನು ಹೇಳಿವೆ. ಸೊಂಟದ ಮೇಲೆ ಕೈ ಇಟ್ ಕೊಂಡು…ಕವಿತೆಯ ದೃಶ್ಯದಲ್ಲಿ ಬರುವ ಹೆಣ್ಣು, ಆಕೆಯ ವಂಕಿ ಇರುವ ನವಿರಾದ ತೋಳು, ಕಣ್ಣಿನ ಮಾದಕತೆಗಳು ಬೇಂದ್ರೆಯ ಅನೇಕ ಕವಿತೆಯಲ್ಲಿನ ಶೃಂಗಾರವನ್ನು ಅಚ್ಚುಕಟ್ಟಾಗಿ ತಂದಿದೆ.
ಹಿನ್ನೆಲೆಯಲ್ಲಿ ತೂರಿ ಬರುವ ಗಿರೀಶ್ ಕಾರ್ನಾಡರ ಧ್ವನಿ ಇಡೀ ಸಾಕ್ಯಚಿತ್ರದ ಕಳೆ ಏರಿಸಿದೆ. ಬೇಂದ್ರೆ ಸೊಗಸಾಗಿ ಕಾವ್ಯ ವಾಚನ ಮಾಡುತ್ತಿದ್ದರೆಂದು ಅವರ ವಾಚನ ಕೇಳಿದ್ದವರು ಹೇಳಿದ್ದುಂಟು. ಅದನ್ನು ನೋಡಲು ಆಗದ ನಮ್ಮಂತ ಹೊಸಪೀಳಿಗೆಯವರಿಗೆ ಕೇವಲ ಕೇಳಿ ಮಾತ್ರ ಗೊತ್ತು.ಈ ಸಾಕ್ಯಚಿತ್ರ ಬೇಂದ್ರೆಯ ಧ್ವನಿಯನ್ನು ಸದಾ ಕಾಲಕ್ಕೆ ಉಳಿಸಿಕೊಟ್ಟಿದೆ.
ವಿಶ್ವಮಾತೆಯ ಕವನ ವಾಚನದಲ್ಲಿ ಬೇಂದ್ರೆ ನಂಬಿಕೊಂಡು ಬಂದಿದ್ದ ತಾಯಿ ತತ್ವವು-ಅವರ ತಾಯಿಯ ಫೊಟೋ ದ ಮೇಲೆ ಕ್ಯಾಮೆರಾ ಹರಿಯುವುದರಿಂದ ಮೊದಲಾಗಿ ಪಾಂಡಿಚೇರಿಯ ಶ್ರೀಮಾತೆಯರ ಫೋಟೋದ ತನಕವೂ ಹರಿಯುತ್ತದೆ. ಧಾರವಾಡದ ತಾಯಿಯ ಚಿತ್ರಣವಂತೂ ಬಯಲುಸೀಮೆ ಮಲೆ ನಾದಿನ ಮಿಶ್ರಣದ ಜೊತೆ ಅಲ್ಲಲ್ಲಿ ಬರುತ್ತಲೆ ಇರುತ್ತದೆ.
ಅತಿ ದೊಡ್ಡ ವಿಷಯವನ್ನೂ ಕೂಡ ಕ್ಯಾಮೆರಾ ಗಡಿಬಿಡಿ ಇಲ್ಲದೆ ಸೆರೆ ಹಿಡಿದುಕೊಟ್ಟದ್ದನ್ನು ಗಿರೀಶ್ ಕಾರ್ನಾಡರ ನಿರ್ದೇಶನದ ಈ ಚಿತ್ರ ಮಜಬೂತಾಗಿ ತೋರಿಸಿಕೊಟ್ಟಿದೆ.
ಸ್ಕ್ರಿಪ್ಟ್ ಬರವಣಿಗೆ ಮತ್ತು ದೃಶ್ಯೀಕರಣಕ್ಕಿಂತ ಮೊದಲು ಮಾಡಿಕೊಂಡಿರುವ ತಯಾರಿಯ ಫಲವಾಗಿ ಈ ಸಾಕ್ಯಚಿತ್ರ ಅರ್ಥಪೂರ್ಣವಾಗಿ ಬಂದಿದೆ. ಮುಂದೆ ವ್ಯಕ್ತಿಗಳನ್ನು ಕುರಿತು ಸಾಕ್ಯಚಿತ್ರ ತೆಗೆಯುವವರಿಗೆ ಕಲಿಯುವ ವಿಷಯಗಳು ಇದರಲ್ಲಿ ಬೇಕಾದಷ್ಟಿದೆ. ಇದು ದೃಶ್ಯ ಮಾಧ್ಯಮದಲ್ಲಿ ಬೇಂದ್ರೆಯವರನ್ನು ಹಿಡಿಯುವ ರೋಮಾಂಚನಕಾರಿ ಪ್ರಯತ್ನ.
ಖ್ಯಾತ ಚಿತ್ರ ನಿರ್ದೇಶಕ ಗೋವಿಂದ ನಿಹಲಾನಿ ಇದಕ್ಕೆ ಛಾಯಾಗ್ರಹಣ ಒದಗಿಸಿದವರು. ಒಬ್ಬ ಛಾಯಾಗ್ರಾಹಕನಾಗಿಯೂ ತನ್ನೊಳಗಿದ್ದ ಸಿನಿಮಾವನ್ನು ಚೆಂದಗೊಳಿಸುವ ಬಗೆಯನ್ನು ತನ್ನ ಸೀಮೆಯಲ್ಲೇ ತುಂಬಿದ್ದಾರೆ ನಿಹಲಾನಿ. ಅದರಲ್ಲೂ ಮಳೆಯ ದೃಶ್ಯದಲ್ಲಿ ಮೈದುಂಬಿದ ಬೇಂದ್ರೆಯನ್ನು ಹಿಡಿದ ಬಗೆ ನಮ್ಮನ್ನೇ ಮಳೆಯಲ್ಲಿ ನೆನೆಸಿಬಿಡುತ್ತದೆ. ಕೇವಲ 10 ನಿಮಿಷಗಳ
ಕೊನೆಯ ದೃಶ್ಯ: ಜೋರಾಗಿ ಮಳೆ ಸುರಿಯುತ್ತಿದೆ..ರಸ್ತೆ ಮೇಲೆ ಮೂವರು ಹುಚ್ಹರು ನಿಂತಿದ್ದಾರೆ.ಮೂವರು ಕಾವ್ಯದಲ್ಲಿ ಮುಳುಗಿದ್ದಾರೆ. ಒಂದು ಕಡೆ ಜಿ.ಬಿ.ಜೋಶಿ,ಇನ್ನೊಂದು ಕಡೆ ಕೀ.ಕುರ್ತಕೋಟಿ, ಮಧ್ಯದಲ್ಲಿ ನಿಂತ ಬೇಂದ್ರೆ ..ಮಳೆ ಸುರಿಯುತ್ತಿದೆ,ಹೊರಗಿನ ಮಳೆಯಲ್ಲಿ ಮೂವರು ಸ್ವಲ್ಪ ಸ್ವಲ್ಪ ನೆನೆಯುತ್ತಿದಾರೆ, ಕಾವ್ಯದ ಮಳೆಯಲ್ಲಿ ಪೂರಾ ನೆನೆದು ತೊಪ್ಪೆಯಾಗಿದ್ದಾರೆ. ಕೊಡೆಯಿಂದ ಹಣುಕುತ್ತಿರುವ ಮಳೆಹನಿ ಬೇಂದ್ರೆ ಹೆಗಲ ಮೇಲೆ ಇಳಿಯುತ್ತಿದೆ.ಹೊರಗೂ ಮಳೆ, ಒಳಗೂ ಮಳೆ, ನಿರಂತರ. ಧಾರವಾಡದ ಶ್ರಾವಣ,ಕಾವ್ಯದ ಶ್ರವಣಗಳನ್ನು ಈ ದೃಶ್ಯ ನೋಡುಗರ ಮನಸ್ಸು ನೆನೆಯುವಂತೆ ಮಾಡಿದೆ.
good one
ಸಾಕ್ಷ್ಯ ಚಿತ್ರದ ಬಗ್ಗೆ ಉತ್ತಮ ಬರಹವಾದರೂ ಮೂಲ ಓದದೇ ವಿಮರ್ಶೆ ಓದಿದ ಹಾಗಾಗುತ್ತೆ. ಸಂಬಂಧಪಟ್ಟವರ ಗಮನಕ್ಕೆ ತಂದು ಅಪರೂಪದ ಸಾಕ್ಷ್ಯ ಚಿತ್ರಗಳನ್ನು upload ಮಾಡಿದರೆ ಹಳ್ಳಿಗಳಲ್ಲಿರುವ ನನ್ನಂಥವರಿಗೂ ಉಪಯೋಗವಾಗುತ್ತೆ. ಹರೀಶ ನಮಸ್ಕಾರ.