ಉಜಿರೆ ಧರ್ಮಸ್ಥಳದ ರಾಕೇಶ್ ಎನ್. ಎಸ್. ಬರೆದಿರುವ ಲೇಖನ ಬಾಲ ಕಾರ್ಮಿಕರ ಕುರಿತಾದ ಸಾಕ್ಷ್ಯಚಿತ್ರ “ಕುಟ್ಟಿ ಜಪಾನಿನ್ ಕುಜಂದೈಗಲ್’ (Kutti Japanin Kuzhandhaigal). ಇದರ ನಿರ್ದೇಶಕ ಚಲಂ ಬೆಣ್ಣೂರ್ ಕರ್. ಈ ಬಗ್ಗೆ ನಿಮ್ಮ ದೃಷ್ಟಿಕೋನವಿದ್ದರೆ ಹಂಚಿಕೊಳ್ಳಿ.

ಅಲ್ಲಿ ದುಡಿಯಬೇಕಾದ ಜೀವಗಳು ಆಡುತ್ತವೆ, ಆಡಬೇಕಾದ ಜೀವಗಳು ದುಡಿಯುತ್ತವೆ… ಸಾವಿರ ಕನಸುಗಳಿರಬೇಕಾದ ಕಂಗಳಲ್ಲಿ ಇದ್ದದ್ದು, ಇರುವುದು ಬರೀ ಕಾಸು… ಕಾಸು… ಬರೇ ನೋವೇ ಜೀವನ… ದುಡಿಯುವುದೇ ಆನಂದ ಎಂದು ತಿಳಿದುಕೊಂಡು ಅದರಂತೆಯೇ ಬದುಕುವವರಿಗೆ ಜೀವನದ ಮತ್ತೊಂದು ಮುಖದ ಪರಿಚಯವಾಗುವುದಾದರು ಹೇಗೆ? ಅಥವಾ ಜೀವನಕ್ಕೆ ಮತ್ತೊಂದು ಮುಖವಿದೆ ಎಂದು ತಿಳಿಯುವುದಾದರೂ ಹೇಗೆ? ಕಾಡುತ್ತದೆ. ಕೆಲವರಿಗೆ ಜೀವನ ಅದೇಷ್ಟು ದುರ್ಭರ ಎಂದೆನಿಸಿಬಿಡುತ್ತದೆ. ಬರೀ ಹತ್ತು ರೂಪಾಯಿಗೆ 10 ರಿಂದ 14 ಗಂಟೆಗಳ ಕಾಲ ದುಡಿಯಬೇಕಾದ ಸ್ಥಿತಿ ತಲುಪಿರುವ ಪುಟಾಣಿಗಳು ಸರಳುಗಳೆಡೆಯಿಂದ ನಕ್ಕಾಗ, ಇಡೀ ಮಾನವಕುಲವನ್ನು ಹಂಗಿಸಿದಂತಾಗುತ್ತದೆ. ವೇಗವಾಗಿ ಟೈಪಿಂಗ್ ಮಾಡುವುದನ್ನೇ ನೈಪುಣ್ಯತೆ ಎಂದು ಭಾವಿಸಿರುವ ಅಧುನಿಕ ಮಾನವ ಆ ಹಸುಳೆಗಳು ಕ್ಷಣಾರ್ಧದಲ್ಲಿ ಬೆಂಕಿಪೊಟ್ಟಣ, ಪಟಾಕಿ ತಯಾರಿಸುವಾಗ ಅಬ್ಬೆಪಾರಿಯಾಗಿ ಬಿಡುತ್ತಾನೆ. ಒಂಚೂರು ಸೂಕ್ಷ್ಮ ಹೃದಯಿಯಾದರೆ ಆತನ ಕಣ್ಣಂಚಲ್ಲಿ ತುಂತುರು ಖಂಡಿತ.

‘ಕುಝಾನ್‌ದೈಗಲ್’ ಇಂತಹ ಚಿತ್ರಣವಿರುವ ಸಾಕ್ಷ್ಷಚಿತ್ರ. ಭಾರತದ ಪಟಾಕಿ ರಾಜಧಾನಿ ಎಂದು ಕರೆಸಿಕೊಳ್ಳುವ ಶಿವಕಾಶಿಯಲ್ಲಿನ ಪಟಾಕಿ ಮತ್ತು ಬೆಂಕಿ ಪೊಟ್ಟಣ ತಯಾರಿಸುವ ಕಾರ್ಖಾನೆಗಳಲ್ಲಿ ದುಡಿಯುವ ಮಕ್ಕಳ ಬವಣೆಯನ್ನು ನಮ್ಮೆದುರು ಬೆತ್ತಲುಗೊಳಿಸುವ ಪ್ರಯತ್ನ ಈ ಸಾಕ್ಷ್ಯಚಿತ್ರದ್ದು.

ಇಲ್ಲಿನ ಈ ಕಾರ್ಖಾನೆಗಳಲ್ಲಿ 5 ವರ್ಷದ ಮಕ್ಕಳಿಂದ ಹಿಡಿದು 19 ವರ್ಷದ ವರೆಗಿನ ಯುವಕರು ದುಡಿಯುತ್ತಾರೆ. ಅಷ್ಟರಲ್ಲೇ ಅವರ ಬಾಲ್ಯ ಮಡಿದಿರುತ್ತದೆ. ಅದಕ್ಕೆಯೇ ಇರಬೇಕು, ಅಲ್ಲಿ ಕಥೆ ಕೇಳುವ, ಅಂಗಣದಲ್ಲಿ ಆಡುವ, ಹಾದಿಬೀದಿಯಲ್ಲಿ ಓಡುವ ಮಕ್ಕಳು ಕಾಣಿಸುವುದೇ ಇಲ್ಲ. ಅವರೆಲ್ಲರು ಕಾರ್ಖಾನೆಯಲ್ಲಿ ದುಡಿಯುವುದರಲ್ಲಿ ಮಗ್ನರು. ಈ ಎಲ್ಲ ಸಂಗತಿಗಳನ್ನು ಈ ಸಾಕ್ಷ್ಯಚಿತ್ರ ಕಣ್ಣಿಗೆ ಕ(ಕು)ಟ್ಟುವಂತೆ ನಮ್ಮೆದುರೇ ತೆರೆದಿಡುತ್ತದೆ. ಇದರೊಂದಿಗೆ ಆ ಇಡೀ ಪರಿಸರದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕ್ರತಿಕ ಆಯಾಮಗಳನ್ನು ಕೂಡ.

ಕೆಲ ಸಂದರ್ಭಗಳಲ್ಲಿ ನಿರ್ದೇಶಕರು (ಚಲಂ ಬೆನ್ನುರ್ಕಾರ್) ಬಳಸಿಕೊಳ್ಳುವ ಸ್ಥಳೀಯ ಸೊಗಡಿನ ಹಾಡೊಂದು ಈ ಸಾಕ್ಷ್ಯಚಿತ್ರವನ್ನು ಮತ್ತಷ್ಟು ಹರಿತಗೊಳಿಸಿದೆ.

ಎಲ್ಲೂ ವೈಭವಿಕಸದೆ ನೈಜತೆಯನ್ನು ಸ್ಪಷ್ಟವಾಗಿ ಮತ್ತು ಸ್ಪುಟವಾಗಿ ತೋರಿಸುತ್ತ ಹೋಗುವುದು ಈ ಸಾಕ್ಷ್ಯಚಿತ್ರದ ಹೆಗ್ಗಳಿಕೆ. ಏನು ಹೇಳಬೇಕು ಎಂಬ ನಿರ್ದೇಶಕನ ಯೋಚನೆಯನ್ನು ಮಿರಿ ಎಲ್ಲವನ್ನೂ ತೋರಿಸಿದ್ದು ಆರ್. ವಿ. ರಮಣಿಯ ಛಾಯಗ್ರಹಣ. ಮಕ್ಕಳ ಹಾವಭಾವ, ನಗು, ದುಡಿಮೆ, ನೋವು, ಹತಾಶೆ, ಚಾಕಚಕ್ಯತೆ, ಅವಸರ ಎಲ್ಲವೂ ಇಲ್ಲಿ ಖುಲ್ಲಾಂ ಖುಲ್ಲಾ. ಆದರೆ ಕೆಲವು ಲಾಂಗ್ ಶಾಟ್‌ಗಳು ದೀರ್ಘವಾಗಿದೆ ಎಂದೆನಿಸಿದರೂ ಸಮಗ್ರವಾಗಿ ಅವಲೋಕಿಸಿದಾಗ ಅದರ ಉಪಯುಕ್ತತೆ ಗೊತ್ತಾಗುತ್ತದೆ.
ಸಾಕ್ಷ್ಯಚಿತ್ರದ ಹಿನ್ನೆಲೆ ಧ್ವನಿ ಮಾತ್ರ ಪೇಲವ.

ಗಟ್ಟಿಯಾದ ಸ್ಕ್ರಿಪ್ಟ್ ಎಲ್ಲೂ ಅನವಶ್ಯಕ ವಿಷಯಗಳು ಮೂಗು ತುರಿಸದಂತೆ ಮಾಡಿದೆ. ಸಾಕ್ಷ್ಯಚಿತ್ರದ ಆರಂಭ ಮತ್ತು ಕೊನೆಯಲ್ಲಿ ಮಕ್ಕಳು ಉರು ಹೊಡೆಯುವ ’ಕುಟ್ಟಿ ಜಪಾನ್’ನ ಭ್ರಮೆ ಪೊರೆ ಕಳಚಿ ಬೀಳಲು ಹೆಚ್ಚು ಸಮಯ ಬೇಕಾಗಿಲ್ಲ.

ಸುಮಾರು ಒಂದು ಘಂಟೆ ನೋಡುಗರನ್ನು ಯಾವುದೋ ಒಂದು ಕ್ರೂರ ಲೋಕಕ್ಕೆ ಕೊಂಡೊಯ್ಯುವಂತೆ ಮಾಡುವಲ್ಲಿ ಈ ಸಾಕ್ಷ್ಯಚಿತ್ರ ಯಶಸ್ವಿಯಾಗುತ್ತದೆ. ನಮ್ಮಲ್ಲೂ ಇಂತಹ ನರಕವಿದೆಯಾ? ಎಂಬ ಪ್ರಶ್ನೆ ಮೂಡಿಸಿ ಬಿಡುತ್ತದೆ. ಹಾಗೆಯೇ ಉತ್ತರವನ್ನೂ ಕೊಟ್ಟು ಬಿಡುತ್ತದೆ.

ಆದರೂ ಶಿವಕಾಶಿಯ ಕಾರ್ಖಾನೆಗಳ ಆ ಮಂದಬೆಳಕು ಬಿಚ್ಚಟ್ಟದ್ದಕ್ಕಿಂತ ಮುಚ್ಚಿಟ್ಟದ್ದೇ ಹೆಚ್ಚು ಅಂದೆನಿಸಿಬಿಡುತ್ತದೆ. ಕೊನೆಗೊಂದು ಭಾರವಾದ ನಿಟ್ಟುಸಿರು ನಮಗರಿವಿಲ್ಲದೆ ಹೊರಬಂದಿರುತ್ತದೆ. ಬಹುಶಃ ಅದು ನಿರ್ದೇಶಕರ ಶ್ರಮಕ್ಕೆ ನಮ್ಮ ಮೆಚ್ಚುಗೆ ಮತ್ತು ಮಕ್ಕಳು ಪಡುವ ಪಡಿಪಾಟಲಿಗೆ ನಮ್ಮ ಸ್ಪಂದನವಾಗಿರಬಹುದೇನೋ!